Sunday, April 3, 2016

ನಮ್ಮ ನಿಮ್ಮ ನಡುವೆ...
ಹಣೆ ಉಜ್ಜಿಕೊಳ್ಳುತ್ತಾ ಮಾರ್ಚುರಿಯಿಂದ ಹೊರಬಂದ ಇನಸ್ಪೆಕ್ಟರ್ ಕ್ಷಾತ್ರ. ಆತನ ಹೆಸರಿಗೂ, ಆತ ಬದುಕುವ ರೀತಿಗೂ ಬಹಳ ಸಾಮ್ಯವಿತ್ತು. ಆರಡಿ ಮನುಷ್ಯ, ಅಗಲವಾದ ಹಣೆ. ತೀಡಿದಂತಹ ಹುಬ್ಬು, ಉದ್ದ ಮುಖ, ಅದಕ್ಕೆ ಶೋಭೆ ತರುವ ಮೀಸೆ, ಕುರುಚಲು ಗಡ್ಡ, ಹರವಾದ ಮೈಕಟ್ಟು, ಜಿಮ್ ಮಾಡಿ ಹುರಿಗೊಳಿಸಿದ ಆಜಾನುಬಾಹು ಶರೀರ. ಪೋಲಿಸ್ ಡಿಪಾರ್ಟಮೆಂಟ್ ಗೆ ಸರಿ ಹೊಂದುವ ದೇಹ ಅವನದು. ಆತ ಸುಂದರನೇನೂ ಅಲ್ಲ. ಆದರೆ ಆತನ ಹೆಸರಿನಂತೆಯೇ ಮುಖದಲ್ಲಿರುವ ಕ್ಷಾತ್ರ ತೇಜಸ್ಸು ಅವನನ್ನು ಮತ್ತೆ ಮತ್ತೆ ನೋಡಲು ಪ್ರೇರೆಪಿಸುವಂತೆ ಮಾಡುತ್ತಿತ್ತು. ಆತನೂ ಹಾಗೆಯೇ ಬದುಕುತ್ತಿದ್ದ. ಆತನ ಐದು ವರ್ಷದ ಕೆರಿಯರಿನಲ್ಲಿ 38 ಬಾರಿ Transfer ಆಗಿದ್ದ. ಹತ್ತು ಬಾರಿ ಅವನು ಲೀವ್ ಗೆ ತೆರಳುವಂತೆ ಮೇಲಿನಿಂದ ಪತ್ರ ಬಂದಿತ್ತು. ಇದು ಹಿಂದೂಸ್ಥಾನದಲ್ಲಿ ನಿಷ್ಠೆಯಿಂದ ಕರ್ತವ್ಯವನ್ನು ನಿರ್ವಹಿಸುವವನೊಬ್ಬನಿಗೆ ಸಿಗುವ ಬಹುಮಾನ. ಈ ಕ್ರಿಯೆಗಳು ಆತನನ್ನು ಎಂದಿಗೂ ಬಳಲಿಸಿರಲಿಲ್ಲ, ಬದಲಾಗಿ ಪ್ರತಿಯೊಂದೂ ದಿನವೂ ಆತನ ಕಾರ್ಯವೈಖರಿಯನ್ನು ಗಟ್ಟಿಗೊಳಿಸುತ್ತಲೇ ಇತ್ತು. ಪೋಲಿ ಪುಂಡರಿಗೆ ಆತ ಸಿಂಹ ಸ್ವಪ್ನ.ಆತ ಬಂದು ನೆಲೆನಿಂತ ಎರಡು ವಾರಗಳಲ್ಲಿ ಹಪ್ತಾ ವಸೂಲಿ, ಮಟ್ಕಾ ದಂಧೆ, ಲೈಸೆನ್ಸ್ ಇಲ್ಲದ ಕ್ಲಬ್ಬುಗಳು, ಹನ್ನೊಂದರ ನಂತರವೂ ತೆರೆದಿರುವ ಪಬ್ಬುಗಳು, ಗಲ್ಲಿಯ ಮೂಲೆಯ ಹಸಿರು ಮನೆಯಲ್ಲಿ ನಡೆಯುವ ವೈಶ್ಯಾವಾಟಿಕೆ ಎಲ್ಲವೂ ಬಂದ್.
ತನ್ನ ಕೆಳಗಿನ ಆಫೀಸರ್ಸ್ ಗಳು, ಕಾನಸ್ಟೇಬಲ್ ಗಳೂ ಅಷ್ಟೆ. ಸಮಯಕ್ಕೆ ಸರಿಯಾಗಿ ಬಂದಿರಬೇಕು.ಆತನೂ ಹಾಗೆಯೇ ನಡೆದುಕೊಳ್ಳುತ್ತಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಕಿತ್ತು ತಿನ್ನುವ ಬುದ್ಧಿ ಆತನಿಗಿಲ್ಲ.
ಜನರ ರಕ್ಷೆಣೆಗೆ ಮೂರ್ತಿವೆತ್ತಂತ ಪೋಲಿಸ್ ಕ್ಷಾತ್ರ!!
ಆತ ಹೋಗಿ ನಿಂತು ಒಮ್ಮೆ "ಏಯ್" ಎಂದು ಕೂಗಿದರೆ ಎದುರಿಗಿದ್ದವರ ಎದೆ ಅದುರಿ ಬಿಡುತ್ತಿತ್ತು. ಅಂತಹ ಮನುಷ್ಯ ಕ್ಷಾತ್ರ.
ಕಳ್ಳರನ್ನು ಬಾಯಿಬಿಡಿಸುವುದು ಕೂಡಾ ನೀರು ಕುಡಿದಂತೆ. ಥರ್ಡ್ ಡಿಗ್ರಿ ಆತ ಎಂದೂ ಉಪಯೋಗಿಸುತ್ತಿರಲಿಲ್ಲ. ಅವರ ಹತ್ತಿರ ಸತ್ಯ ಬಿಡಿಸಲು ಅವನ ಡಿಗ್ರಿಗಳೇ ಬೇರೆ ಆಗಿದ್ದವು.
ಆದ್ದರಿಂದ ಐದು ವರ್ಷದಲ್ಲಿ ನೂರಕ್ಕೂ ಹೆಚ್ಚು Case Solve ಮಾಡಿದ ಮನುಷ್ಯನಾದರೂ Promotion ಸಿಗದೇ ಇನಸ್ಪೆಕ್ಟರ್ ಆಗಿಯೇ ಇದ್ದ, ಟ್ರಾನ್ಸಫರ್ ಆಗುತ್ತಲೇ ಇದ್ದ, ಕೆಲಸ ಮುಗಿಸುತ್ತಲೇ ಬಂದಿದ್ದ.
ಅಂತಹ ಕ್ಷಾತ್ರನಿಗೆ ಸರಿಯಾದ ಕೇಸ್ ಒಂದು ಸಿಕ್ಕಿತ್ತು. ಘಾಜಿಯಾಬಾದ್, ಉತ್ತರ ಪ್ರದೇಶದ ಮುಖ್ಯ ನಗರ. National Capital Region ಪಕ್ಕದಲ್ಲಿ ಇರುವ ಈ ಸಿಟಿಯಲ್ಲಿ ಪೋಲಿಸರಿಗಿಂತ ಹೆಚ್ಚು ಕಳ್ಳರಿದ್ದಾರೆ. ಹತ್ತು ಘಂಟೆ ರಾತ್ರಿಯಾಯಿತೆಂದರೆ ಕಪ್ಪು ಜಗತ್ತು ಕಣ್ಬಿಡುತ್ತದೆ. ಸಣ್ಣ ಸಣ್ಣ ಪುಂಡು ಪೋಕರಿಗಳು ರಾಜಕೀಯ ವ್ಯಕ್ತಿಗಳ ಬೆಂಬಲದಿಂದ ಪೊಗರು ತುಂಬಿದ ಹೋರಿಗಳಂತೆ ಗುಟುಕರಿಸುತ್ತಾ ಓಡಾಡುವ ಊರದು. ಅಲ್ಲಿಗೆ ಟ್ರಾನ್ಸಫರ್ ಆಗಿದ್ದ ಕ್ಷಾತ್ರ. ಕ್ಷಾತ್ರ ಬಂದು ಎರಡು ವಾರಗಳಿಗೆ ಕುದ್ದು ಆತನಿಗೆ ತಿಳಿದು ಹೋಗಿತ್ತು.
ತಾನು ಚಾಣಾಕ್ಷನಾಗಿ ಕೆಲಸ ಮಾಡಬೇಕಿಲ್ಲಿ ಇಲ್ಲದಿದ್ದರೆ ಪೋಲಿಸ್ ಎಂದೂ ಕೂಡ ನೋಡದೆ ಗುಂಡಿಟ್ಟು ಬಿಡುತ್ತಾರೆ. ಇಲ್ಲವೇ ಮರಳು ತುಂಬಿದ ಲಾರಿ ಗುದ್ದಿ ಬಿಡುತ್ತಾರೆ. ಕ್ಷಾತ್ರ ಎಂಬ ಆರಡಿಯ ಮನುಷ್ಯ ಇಲ್ಲದಂತೆ ಮಾಯವಾಗಿ ಬಿಡುತ್ತಾನೆ. ಸಿಕ್ಕಿಬಿದ್ದರೆ ಐದು ವರ್ಷದ ಜೈಲು. ಕಮಕಿಮ್ ಎನ್ನದೇ ಒಳಗೆ ಹೋಗಲು ಜನ ಸಿಗುತ್ತಾರೆ. ಹೊರಗೆ ಬಂದ ಮೇಲೆ ಬದುಕಲು ಆತನಿಗೆ ಬೇಕಾಗುವಷ್ಟು ದುಡ್ಡು ಆತನ ಮನೆ ಮುಟ್ಟಿರುತ್ತದೆ.
ಕ್ಷಾತ್ರ ತನ್ನ ಕಾರ್ಯ ಶೈಲಿ ಬದಲಾಯಿಸಿದ್ದ. ಹಾವು ಸಾಯಬಾರದು, ಕೋಲು ಮುರಿಯಬಾರದು. ಎಲ್ಲ ಫೈಲ್ ಗಳನ್ನು ತೆಗೆಸಿಕೊಂಡು ನೋಡುತ್ತಿದ್ದ, ವಿಷಯಗಳನ್ನು ಕಲೆ ಹಾಕುತ್ತಿದ್ದ. ಹಾವೂ ಹೆಡೆ ಬಿಚ್ಚುವುದರೊಳಗೆ ಬಡಿದು ಬಿಡಬೇಕು, ಮತ್ತೆ ಹೆಡೆ ಬಿಚ್ಚದಂತೆ ಬಡಿದುಬಿಡಬೇಕು,ಕಾಯತೊಡಗಿದ ಕ್ಷಾತ್ರ.
ಅಷ್ಟರಲ್ಲಿ ಇನ್ನೊಂದು ಕೊಲೆಯ ಕೇಸ್ ಬೆನ್ನು ಬಿಡದ ಬೇತಾಳದಂತೆ ಹಿಂದೆ ಬಿದ್ದಿತ್ತು. ಆ ಕೊಲೆಯಾದ ದಿನದಿಂದ, ಈಗ ಆತ ಮಾರ್ಚುರಿಯಿಂದ ನೋಡಿ ಹೊರಬರುತ್ತಿರುವುದು ಎಂಟನೆಯ ಕೊಲೆ. ಅದು ಆತನ ಜ್ಯುರಿಡಿಕ್ಷನಿನಲ್ಲಿ ನಡೆಯುತ್ತಿರುವ ಎರಡನೇ ಕೊಲೆ . ಮೇಲಿನಿಂದಲೇ ತಿಳಿಯುತ್ತಿದೆ ಈ ಕೊಲೆಗಳನ್ನೆಲ್ಲ ಮಾಡುತ್ತಿರುವುದು ಒಬ್ಬನೇ. ಸರಣಿ ಕೊಲೆಗಾರ. ಯಾಕೆ? ಯಾರು? ತಿಳಿಯದಾಗಿದೆ. ಮೇಲಿನ ಜನರಿಗಂತೂ ಕ್ಷಾತ್ರನನ್ನು ಹಣಿಯಲು ಒಂದು ನೆಪ ಸಿಕ್ಕಿದಂತಾಗಿತ್ತು. ಈಗ ತೋರಿಸು ನಿನ್ನ ಪೌರುಷ ಎಂದು ಗುಟುರು ಹಾಕುತ್ತಿದ್ದರು. ಎಷ್ಟೇ ತಡಕಾಡಿದರೂ ಒಂದು ಎಳೆಯೂ ಸಿಗುತ್ತಿಲ್ಲ. ಮೊದಲೆರಡು ಕೊಲೆಗಳು ನಡೆದಾಗ ಕ್ಷಾತ್ರನಿಗೆ ಗಮನಕ್ಕೆ ಬಂದಿರಲಿಲ್ಲ. ಆದರೀಗ ಒಂದರ ಹಿಂದೆ ಒಂದರಂತೆ ಎಂಟು ಕೊಲೆಗಳು. ಕ್ಷಾತ್ರನಿಗೆ ತಿಳಿದು ಹೋಗಿತ್ತು ಒಬ್ಬನೇ ಮಾಡುತ್ತಿರುವ ಕೊಲೆಯಿದು. ಆದರೆ ಯಾಕೆ? ಮತ್ತದೇ ಪ್ರಶ್ನೆ ಆತನ ಎದುರು ನಿಲ್ಲುತ್ತಿತ್ತು. ಕೊಲೆಯಾಗಿರುವ ವ್ಯಕ್ತಿಗಳ ಮಧ್ಯೆ ಏನಾದರೂ ಸಂಬಂಧವಿದೆಯಾ ಎಂದು ತಡಕಾಡಿದ್ದ. ಉಳಿದ ಪೋಲಿಸ್ ಸ್ಟೇಷನ್ಗಲಿಂದಲೂ ಫೈಲ್ ತರಿಸಿಕೊಂಡು ವಿವರ ಗಮನಿಸಿದ್ದ. ಉಹುಂ, ಸಿಗುತ್ತಿಲ್ಲ. Missing Link ಸಿಗುತ್ತಿಲ್ಲ. ಒಂದು ಕೊಂಡಿ ಸಿಕ್ಕರೆ ಸಾಕು, ಕ್ಷಾತ್ರ ಅದರ ತಾಯಿ ಬೇರಿನವರೆಗೆ ತಲುಪಿ ಬಿಡಬಲ್ಲ. ಆದರೆ ಮೊದಲ ಬಿಳಲೇ ಸಿಗುತ್ತಿಲ್ಲ ಅವನಿಗೆ.
ದೆಹಲಿಯ ಸುತ್ತಮುತ್ತ ಎರಡು ತಿಂಗಳಲ್ಲಿ ಇಪ್ಪತ್ತೊಂದು ಕೊಲೆಗಳು ನಡೆದಿವೆ. ಆ ಇಪ್ಪತ್ತೊಂದು ಕೊಲೆಗಳಲ್ಲಿ ಬಡವರು, ಶ್ರೀಮಂತರು ಎಲ್ಲರೂ ಇದ್ದಾರೆ. ಅದರಲ್ಲಿ ನಾಲ್ಕು ಕೊಲೆಗಳು ಹಳೆಯ ವೈಷಮ್ಯಕ್ಕಾಗಿಯೂ, ಎರಡು ಹಳೆಯ ಪ್ರೇಮಿಗಳ ಅಂದ ಪ್ರೀತಿಯಿಂದಲೂ, ಇನ್ನೆರಡು ರಿಯಲ್ ಎಸ್ಟೇಟ್, ಮತ್ತೆರಡು ಬೇಡದ ಸಂಬಂಧಗಳಿಗೂ ನಡೆದ ಕೊಲೆಗಳು. ಅದನ್ನೆಲ್ಲ ಪೋಲಿಸರು ಬೇಧಿಸಿದ್ದಾರೆ. ಇನ್ನು ಮೂರು ಕೊಲೆ ಪ್ರಕರಣ ವಿಚಾರಣೆಯಲ್ಲಿದೆ. ಆದರೆ ಉಳಿದ ಎಂಟು ಕೊಲೆಗಳು ಮಾತ್ರ ಪ್ರಶ್ನಾರ್ತಕ ಚಿಹ್ನೆಯಾಗಿಯೇ ಉಳಿದಿದೆ. ಕೊಲೆಯಾದ ವ್ಯಕ್ತಿಗಳಿಂದ ಯಾವುದೇ ವಸ್ತುಗಳು ಕಾಣೆಯಾಗುತ್ತಿಲ್ಲ. ಹಳೆ ವೈಷಮ್ಯ ಎಂದುಕೊಂಡರೆ ಒಬ್ಬನೇ ವ್ಯಕ್ತಿಗೆ ಇಷ್ಟೊಂದು ಜನಗಳ ಮೇಲೇಕೆ ವೈಷಮ್ಯ!? ಎಲ್ಲವೂ ಸಂದೇಹವಾಗೆ ಉಳಿದಿತ್ತು.
ಹಣೆಗೆ ಕೈ ಹಚ್ಚಿ ಕುಳಿತು ಬೇರೆ ಬೇರೆ ಕಡೆಯಿಂದ ತರಿಸಿಕೊಂಡ ಎಲ್ಲ ಫೈಲ್ ಗಳನ್ನು ಒಂದೊಂದಾಗಿ ಬಿಡಿಸಿ ನೋಡತೊಡಗಿದ ಕ್ಷಾತ್ರ.ಕೊಲೆಯಾಗಿ ಬಿದ್ದ ಜಾಗ, ಬಿದ್ದುಕೊಂಡಿದ್ದ ರೀತಿ, ಕೊಲೆಗೆ ಉಪಯೋಗಿಸಿರಬಹುದೆಂಬ ಹತ್ಯಾರಗಳು, ಫಿಂಗರ್ ಪ್ರಿಂಟ್ ಗಳು, ವ್ಯಕ್ತಿಯ ವಿವರ, ಮಾಡುತ್ತಿರುವ ಕೆಲಸ ಎಲ್ಲದರ ಬಗ್ಗೆಯೂ ವಿವರಗಳು, ಚಿತ್ರಗಳು ಇದ್ದವು.
ಕೊಲೆಯನ್ನು ಒಬ್ಬನೇ ಮಾಡುತ್ತಿರುವುದರಿಂದ ಆತ ಮಾನಸಿಕ ರೋಗಿಯೋ ಅಥವಾ ಸೈಕೋಪಾತ್ ಆಗಿರಬೇಕು ಎಂದುಕೊಂಡ ಕ್ಷಾತ್ರ. ಇನ್ಯಾವುದೇ ಕಾರಣ ಆತನಿಗೆ ಹೊಳೆಯುತ್ತಿಲ್ಲ.
ಪಕ್ಕದಲ್ಲಿದ್ದ ಫೋನ್ ಕೈಗೆತ್ತಿಕೊಂಡ. ಡೈರೆಕ್ಟರಿಯಿಂದ ನಂಬರ್ ತೆಗೆದು ದೆಹಲಿಯ ಮುಖ್ಯ ಮಾನಸಿಕ ಚಿಕಿತ್ಸಾಲಯಕ್ಕೆ ಫೋನ್ ಮಾಡಿದ.
"ದೀನದಯಾಳ್ ಮೆಂಟಲ್ ಎಜುಕೇಷನ್ ಎಂಡ್ ರಿಸರ್ಚ್ ಆಫ್ ಸೈಕಾಲಜಿ" ಮಧುರವಾದ ಧ್ವನಿಯೊಂದು ಉಲಿಯಿತು ಆ ಕಡೆಯಿಂದ.
"ಇನಸ್ಪೆಕ್ಟರ್ ಕ್ಷಾತ್ರ" ಎಂದ.
"ಹೇಳಿ, ನಮ್ಮಿಂದ ಏನಾಗಬೇಕು?" ಮಾತನಾಡುತ್ತಿರುವುದು ಇನಸ್ಪೆಕ್ಟರ್ ಎಂದು ತಿಳಿಯುತ್ತಲೇ ಧ್ವನಿಯಲ್ಲಿ ಮತ್ತೂ ನಮ್ರತೆ ತುಂಬಿದಂತೆ ಕಂಡಿತು.
"ಮಾನಸಿಕ ರೋಗಕ್ಕೆ, ಮನಸ್ಸಿಗೆ ಸಂಬಂಧಪಟ್ಟ ವಿಷಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಮಾಹಿತಿ ಬೇಕಿತ್ತು" ಎಂದ ಆತ.
ಇನಸ್ಪೆಕ್ಟರಗಳು ಕೂಡ ಡಾಕ್ಟರ್ ಗಳಾಗಲು ನಿಂತರೆ ನಮಗೆ ಕೆಲಸವೇನು ಉಳಿಯುತ್ತದೆ? ಎಂದು ಮನಸ್ಸಿನಲ್ಲೇ ಅಂದುಕೊಂಡಳೇ ಹೊರತೂ ಹೊರಗಡೆ ಹೇಳಲಿಲ್ಲ.
"ಏನಾಗಿತ್ತು?" ನಮ್ರತೆ ತುಂಬಿದ ಅದೇ ದ್ವನಿಯಲ್ಲಿ ಉಲಿದಳು ಆಕೆ. ಕ್ಷಾತ್ರ ಅಂತಹ ತಲೆ ಬಿಸಿಯ ಸಮಯದಲ್ಲೂ ಆ ದ್ವನಿಯ ಸಿಹಿಯನ್ನು ಸ್ವಾದಿಸುತ್ತಿದ್ದ.
"ಡಾಕ್ಟರ್ಸ್ ಇದ್ದರೆ ಕರೆಯಿರಿ. ಅವರ ಬಳಿಯೇ ಮಾತನಾಡಬೇಕಿತ್ತು" ಎಂದ ಕ್ಷಾತ್ರ.
"ಹೇಗೆ ಕಾಣಿಸ್ತೇನ್ರಿ ನಿಮ್ಗೆ!! ನಾನು ನೋಡೋಕೆ ಡಾಕ್ಟರ್ ಥರ ಕಾಣಲ್ವೇನ್ರಿ?"ಸಿಟ್ಟಿನಿಂದ ಹೇಳಿಬಿಟ್ಟಳು ಸ್ವಯಂವರಾ. ಆಗಷ್ಟೇ ಒಬ್ಬ ರೋಗಿಯನ್ನು ಅಟೆಂಡ್ ಮಾಡಿ ಬಂದಿದ್ದಳವಳು. ಗಂಡುಗಳು ಹೆಣ್ಣಾಗಿಯೂ, ಹೆಣ್ಣುಗಳು ಗಂಡಾಗಿಯೂ ಕಾಣುವ ಕಾಯಿಲೆ ಇತ್ತವನಿಗೆ. ಅನೇಕ ಹುಡುಗಿಯರನ್ನು ಗಂಡು ಹುಡುಗರಂತೆ ಮಾತನಾಡಿಸಿ ಏನೇನೋ ಹೇಳಿ ಹೊಡೆತ ತಿಂದಿದ್ದ. ನನಗೆ ಮದುವೆಯಾಗಬೇಕು ಎಂದು ಇನ್ನೊಂದು ಗಂಡನ್ನು ತೋರಿಸಿ "ಇವಳು ತುಂಬಾ ಚೆನ್ನಾಗಿದ್ದಾಳೆ, ನಾನು ಮದುವೆಯಾದರೆ ಇವಳನ್ನೇ" ಎಂದು ಹುಡುಗನ ಹಿಂದೆ ಬಿದ್ದಾಗ ಈತನ ಕಾಟ ತಾಳಲಾರದೆ ಮಾನಸಿಕ ಕೇಂದ್ರಕ್ಕೆ ತಂದು ಸೇರಿಸಿದ್ದರು.
ಸ್ವಯಂವರಾ ಆತನನ್ನು ನೋಡಲು ಒಳಹೋಗುತ್ತಲೇ ಅಲ್ಲಿರುವ ಗಂಡು ಜೀವಗಳೆಲ್ಲ ಅವನಿಂದ ದೂರ ಸರಿದು ನಿಂತಿದ್ದರು. ಏನಾಗಿದೆ ಎಂದು ಅವಳು ಊಹಿಸಿದ್ದಳು. ಅವಳು ಒಳಹೊಗುತ್ತಲೇ "ನೋಡಿ ಡಾಕ್ಟರ್.. ನನ್ನ ನೋಡಿ ಹುಡುಗಿಯರೆಲ್ಲ ಏಕೆ ಹೀಗೆ ಓಡುತ್ತಾರೆ? ನೀವಾದರೂ ಹೇಳಿ" ಎಂದ ಆತ.
ನೋಡಲು ಸುರದ್ರುಪಿ, ಗಟ್ಟಿಯಾಗಿ ಚೆನ್ನಾಗಿಯೇ ಇದ್ದಾನೆ. ಅದು ಅಲ್ಲದೆ ತಾನು ಹಿಂದೆ ಎಂದು ಕೇಳಿರದ ಕಾಯಿಲೆ ಬೇರೆ, ಏನಪ್ಪಾ ಸಮಸ್ಯೆ ಎಂದುಕೊಳ್ಳುತ್ತಾ "ನಾನು ಸರಿ ಮಾಡುತ್ತೇನೆ. ನೀವೇನು ವರಿ ಮಾಡಿಕೊಳ್ಳಬೇಡಿ" ಎಂದಿದ್ದೆ ತಡ "ನೀವು ನನ್ನ ಪಾಲಿನ ದೇವರು " ಎನ್ನುತ್ತಾ ಅವಳ ಹತ್ತಿರ ಬಂದು ಅವಳನ್ನು ಗಟ್ಟಿಯಾಗಿ ಅಪ್ಪಿಕೊಂಡುಬಿಟ್ಟ. ಕಕ್ಕಾಬಿಕ್ಕಿಯಾಗಿಬಿಟ್ಟಳು ಸ್ವಯಂವರಾ!!
ಆತ ಬೇಕಂತಲೇ ಮಾಡಿದನಾ? ಹುಚ್ಚನಂತೆ ನಟಿಸುತ್ತಿದ್ದನಾ. ಎಂದು ಅವನ ಮುಖ ನೋಡಿದಳು. ಯಾವ ಭಾವವೂ ಇಲ್ಲದೇ ಸರಿಯಾಗಿಯೇ ಇದ್ದ ಆತ. ಕೇವಲ ತನ್ನ ಕೃತಜ್ಞತೆ ವ್ಯಕ್ತಪಡಿಸಿದ್ದ. ಸ್ವಯಂವರಾಳ ಮುಖ ಕೆಂಪು ಕೆಂಪಾಗಿತ್ತು. ದೂರ ನಿಂತಿದ್ದ ಕಂಪೌಂಡರ್ ಗಳು ಒಬ್ಬರ ಮುಖ ಒಬ್ಬರು ನೋಡಿ ಹಲ್ಲು ಕಿಸಿಯುತ್ತಿದರು. ಕಾಲಿನ ಬುಡದಿಂದ ಸಿಟ್ಟು ಕಿತ್ತುಕೊಂಡು ಬಂದಿತ್ತವಳಿಗೆ. ಹುಚ್ಚರ ಸಹವಾಸವೇ ಅಲ್ಲ ಎಂದುಕೊಳ್ಳುತ್ತ ಹೊರಬಂದಿದ್ದಳು.
ಅದೇ ಗುಂಗಿನಲ್ಲಿರುವಾಗಲೇ ಕ್ಷಾತ್ರ ಫೋನ್ ಮಾಡಿದ್ದ. ಆ ಮಾನಸಿಕ ರೋಗಿಗೆ ಬಯ್ಯಬೇಕು ಎಂದುಕೊಳ್ಳುತ್ತಿದ್ದ ವಿಷಯವನ್ನೇ ಅವನಿಗೆ ಕಿರುಚಿದ್ದಳು ಫೋನಿನಲ್ಲಿ.
ಕ್ಷಾತ್ರ ನಕ್ಕು "ಸಾರಿ, ನಾನು ಅಟೆಂಡರ್ ಎತ್ತಿದ್ದಾರೆ ಎಂದುಕೊಂಡೆ, ಸಿಟ್ತಾಗ್ಬೇಡಿ. ಅದೂ ಅಲ್ದೇ ಲ್ಯಾಂಡ್ ಲೈನಿನಲ್ಲಿ ಎದುರಿಗಿರುವ ವ್ಯಕ್ತಿಯನ್ನು ನೋಡುವ ಸೌಭಾಗ್ಯವನ್ನು ಇನ್ನೂ ನಮಗೆ ಒದಗಿಸಿಲ್ಲ ಈ ಕ್ಷಣದಲ್ಲಿ ಎಂತ ದುರದ್ರಷ್ಟ ಎಂದು ನನಗು ಅನ್ನಿಸುತ್ತಿದೆ" ಎಂದ.
ಗಂಡುಗಳೇ ಹೀಗೆ. flirt ಮಾಡಲು ಕಾಯುತ್ತಿರುತ್ತಾರೆ. ಅಲ್ಲದೆ ನಾನು ಸುಮ್ಮನೆ ರೇಗಿದೆ ಎಂದನಿಸಿತವಳಿಗೆ. "ಅದು ಸರೀರಿ" ಎನ್ನುತ್ತಾ ನಕ್ಕು "ಯಾವ ವಿಷಯದ ಬಗ್ಗೆ ಮಾಹಿತಿ ಬೇಕು" ಎಂದು ಕೇಳಿದಳು.
"ವಿಷಯ ಸ್ವಲ್ಪ ದೊಡ್ಡದಿದೆ. ನೀವು ಯಾವಾಗ ಫ್ರೀ ಇದ್ದೀರಾ ಎಂದರೆ ಫೈಲಿನ ಜೊತೆ ನಾನೇ ಬರುತ್ತೇನೆ" ಎಂದ ಕ್ಷಾತ್ರ.
"ಸರಿ ಯಾವಾಗ ಬೇಕಾದರೂ ಬನ್ನಿ. ಬೆಳಿಗ್ಗೆ ಒಂಬತ್ತರಿಂದ ಸಂಜೆ ಆರರವರೆಗೂ ನನ್ನ ಡ್ಯೂಟಿ" ಎಂದಳು.
"ಓಕೆ ಹಾಗಾದರೆ ನಾಳೆ ಬರುತ್ತೇನೆ. ಅಂದ ಹಾಗೆ ನಿಮ್ಮ ಹೆಸರು?" ಎಂದ ಕ್ಷಾತ್ರ.
"ಸ್ವಯಂವರಾ" ಎಂದಳವಳು. ಬಂದ ನಗುವನ್ನು ಪ್ರಯತ್ನಪೂರ್ವಕವಾಗಿ ತಡೆಹಿಡಿದ ಕ್ಷಾತ್ರ. "ಸರಿ, ನಾಳೆ ಸಿಗುತ್ತೇನೆ" ಎಂದ.
ಓಕೆ ಎಂದೂ ಹೇಳದೆ ರಿಸಿವರ್ ಇಟ್ಟುಬಿಟ್ಟಳು ಸ್ವಯಂವರಾ. ತನ್ನ ಹೆಸರು ಕೇಳುತ್ತಲೇ ಆತ ಮನಸ್ಸಿನಲ್ಲಿಯೇ ನಕ್ಕ ಎಂಬುದು ಅವಳಿಗೆ ತಿಳಿದಿತ್ತು. ಸ್ವಯಂವರಾ ತನ್ನ ಜೊತೆ ಮಾತನಾಡಿದವರ ಮೆದುಳನ್ನು ಸಹ ಓದಬಲ್ಲಳೆಂಬ ವಿಷಯ ಕ್ಷಾತ್ರನಿಗೆ ಆಗ ತಿಳಿಯದೇ ಹೋಯಿತು. ಎಲ್ಲದಕ್ಕೂ ಸಹ ಒಂದು ಕಾಲವಿರುತ್ತದೆ.
"ಸ್ವಯಂವರಾ.. ಸ್ವಯಂವರಾ" ಎನ್ನುತ್ತಾ ದೊಡ್ಡದಾಗಿ ನಕ್ಕು ಫೈಲ್ ತೆಗೆದುಕೊಂಡು ಸ್ಟೇಷನ್ ಇಂದ ಹೊರಬಿದ್ದ ಕ್ಷಾತ್ರ. ಯಾರಿರಬಹುದು ಈ ಕೊಲೆಗಳ ಹಿಂದೆ? ಯಾರಿರಬಹುದು? ಎನ್ನುತ್ತಲೇ ಜೀಪ್ ಏರಿದ.
ಮರುದಿನ ಬೆಳಿಗ್ಗೆ ಒಂಬತ್ತಕ್ಕೆಲ್ಲಾ ಮನೆಯಿಂದ ಹೊರಟ ಕ್ಷಾತ್ರ. ಹಿಂದಿನ ದಿನ ಫೈಲ್ ಮನೆಗೆ ತಂದಿದ್ದರಿಂದ ಸ್ವಯಂವರಾಳನ್ನು ಕಂಡೆ ಸ್ಟೇಷನ್ ಗೆ ಹೋಗೋಣ ಎಂದುಕೊಂಡ. 'ಸ್ವಯಂವರಾ' ವಿಚಿತ್ರ ಹೆಸರು ಎಂದುಕೊಂಡ. ಬೆಳಗಿನ ಟ್ರಾಫಿಕ್ ನಲ್ಲಿ ತಪ್ಪಿಸಿಕೊಂಡು ದೀನ್ ದಯಾಳು ಮಾನಸಿಕ ಕೇಂದ್ರ ತಲುಪುವವರೆಗೆ ಹತ್ತೂವರೆಯಾಗಿತ್ತು. ಹಿಂದಿನ ದಿನ ರಾತ್ರಿ ಪೂರ್ತಿ ಕೊಲೆಯ ಬಗ್ಗೆಯೇ ಯೋಚಿಸುತ್ತಿದ್ದ. ಯಾವುದೇ ಕೋನದಿಂದ ಯೋಚಿಸಿದರೂ ಯಾವುದೋ ಮಾನಸಿಕ ರೋಗಿಯೇ ಇದನ್ನು ಮಾಡುತ್ತಿದ್ದಾನೆ ಎಂದು ಆತನ ಒಳ ಮನಸ್ಸಿಗೆ ಅನ್ನಿಸುತ್ತಿತ್ತು. ಬೇಗ ಇದನ್ನು ಕಂಡು ಹಿಡಿಯಬೇಕು. ಇಲ್ಲದಿದ್ದರೆ ಇನ್ನೆಷ್ಟು ಕೊಲೆಗಳೋ? ಕೊಲೆಗಾರನ ಮನಸ್ಥಿತಿ ಅರ್ಥವಾಗಿರಲಿಲ್ಲ ಆತನಿಗೆ. ಯಾವುದೇ ವಸ್ತುವನ್ನು ಕದಿಯುತ್ತಿರಲಿಲ್ಲ. ಕೊಲೆ ಕೂಡ ಒಂದೇ ರೀತಿ. ಕುತ್ತಿಗೆ ಹರಿದಿರುತ್ತದೆ. ಮತ್ತೆ...
"ಹಲೋ" ಹತ್ತಿರದಿಂದ ಬಂದ ಮೃದು ಧ್ವನಿಗೆ ತನ್ನ ಆಲೋಚನೆಯಿಂದ ಹೊರಬಂದ ಕ್ಷಾತ್ರ. ಆತ ಆಸ್ಪತ್ರೆಯ ವರಾಂಡದ ಮೆಟ್ಟಿಲೇರಿ ಉದ್ದದ ವರಾಂಡದಲ್ಲಿ ನಡೆಯುತ್ತಿದ್ದ.
"ಇನಸ್ಪೆಕ್ಟರ್ ಕ್ಷಾತ್ರ??" ಎಂದಳು. "ಹಾಂ" ಎಂದ.
"I am ಸ್ವಯಂವರಾ" ಎಂದಳು ಕೈ ಚಾಚುತ್ತ. ಆಗಷ್ಟೆ ಬಂದ ಅವಳು ಕೂಡ ರೌಂಡ್ಸ್ ಗೆ ಹೊರಟಿದ್ದಳು. ಪೋಲಿಸ್ ಜೀಪ್ ನಿಂತಿದ್ದು ಕಂಡು ಹಿಂದಿನ ದಿನ ಮಾತನಾಡಿದ್ದು ನೆನಪಾಗಿ ಅಲ್ಲಿಯೇ ನಿಂತಿದ್ದಳು. ಅವನದೇ ಯೋಚನೆಯಲ್ಲಿ ನಡೆದು ಬರುತ್ತಿದ್ದ ಕ್ಷಾತ್ರನನ್ನು ಅಡಿಯಿಂದ ಮುಡಿಯವರೆಗೆ ಗಮನಿಸುತ್ತಿದ್ದಳು.
ಕೈಚಾಚಿ "ಗುಡ್ ಮಾರ್ನಿಂಗ್ ಡಾಕ್ಟ್ರೆ" ಎಂದ. ಹಿಂದಿನ ದಿನದ ಸಂಭಾಷಣೆ ನೆನಪಾಗಿ ನಕ್ಕಳವಳು. ಆತ ತನ್ನ ಮುಖಚರ್ಯೆಯನ್ನು ತನ್ನ ಯೋಚನೆಗಳಿಗೆ ಅನುಗುಣವಾಗಿ ಬದಲಾಗದಂತೆ ತಡೆಯಲು ಪ್ರಯತ್ನಿಸುತ್ತಿದ್ದ.
ಅಷ್ಟು ಚಂದದ ಹುಡುಗಿ ಅವಳು. ನೋಡಿದರೆ ಮತ್ತೆ ಮತ್ತೆ ನೋಡಬೇಕು ಎಂಬ ಅಪೂರ್ವ ರೂಪ. ಅವಳ ಬಣ್ಣ, ಮುಖದ ಮೇಲಿನ ಪ್ರಶಾಂತತೆ, ಗಾಡ ಕಪ್ಪು ಬಣ್ಣದ ಅವಳ ಕಂಗಳು, ಆ ತುಟಿಗಳು. ಮೇಕ್ ಅಪ್ ಮಾಡುವ ಅವಶ್ಯಕತೆಯೇ ಇರಲಿಲ್ಲ ಅವಳು. ದೇವರು ಕೊಟ್ಟ ಸಹಜ ಸೌಂದರ್ಯ. ಕ್ಷಾತ್ರ ಏನನ್ನು ನೋಡಬೇಕು, ಏನನ್ನು ನೋಡಬಾರದು ಎಂಬ ಗೊಂದಲದಲ್ಲಿದ್ದ.
ಸ್ವಯಂವರಾಳಿಗೂ ಗೊತ್ತದು, ತನ್ನ ನೋಡಿದ ಹುಡುಗರ ಬಯಕೆ ಏನು ಇರುತ್ತದೆ ಎಂಬುದು. ಅವನ ಮುಖ ನೋಡಿ ತನ್ನ ಮನಸ್ಸಿನೊಳಗೆ ನಕ್ಕಳು ಸ್ವಯಂವರಾ. "ಬೆಳಿಗ್ಗೆ ಬೆಳಿಗ್ಗೆನೇ ಬಂದಿರುವಿರಲ್ಲ, ಬನ್ನಿ ಬನ್ನಿ" ಎಂದು ಮತ್ತೆ ತನ್ನ ಚೇಂಬರ್ ನ ಒಳನಡೆದಳು.
"ನಿಮ್ಮ ಸಹಾಯವಿಲ್ಲದೆ ಈ ಕೇಸ್ ಮುಂದೆ ಹೋಗದಂತೆ ಕಾಣದು. ಅದಕ್ಕೆ ಕೆಲವು ವಿಚಾರಗಳನ್ನು ಕೇಳಿ ಹೋಗಲು ಬಂದೆ"ಎಂದು ಅವಳನ್ನು ಹಿಂಬಾಲಿಸಿದ. ಹುಡುಗಿಯರನ್ನು ಹಿಂಬಾಲಿಸಿ ನಡೆಯುವುದು ಇಷ್ಟು ಥ್ರಿಲ್ ನೀಡುತ್ತದೆ ಎಂದು ಆಗೇ ತಿಳಿದಿದ್ದು ಕ್ಷಾತ್ರ ನಿಗೆ.
ಕುಳಿತುಕೊಳ್ಳುವಂತೆ ಕುರ್ಚಿ ತೋರಿಸಿ ತಾನು ಮೇಜಿನ ಆಕಡೆ ಕುಳಿತು "ಹೇಳಿ, ನನ್ನಿಂದೇನಾಗಬೇಕು?" ಎಂದಳು. ತುಂಬಾ ಪ್ರೊಫೆಶನಲ್ ವ್ಯಕ್ತಿಯಂತೆ ಕಂಡುಬಂದಳು ಅವಳು. ಇನಸ್ಪೆಕ್ಟರ್ ಎಂದರೆ ಎದುರಿಗಿನ ವ್ಯಕ್ತಿ ಯಾರಾದರೂ ಸರಿಯೇ ಸ್ವಲ್ಪ ಭಯ ಗೌರವದಿಂದ ಮಾತನಾಡುತ್ತಾರೆ. ಆದರೆ ಅವಳ ನಡೆಯಲ್ಲಿ ಆತರದ ಯಾವುದೇ ಭಾವನೆ ಕಾಣಲಿಲ್ಲ. 'ಡಾಕ್ಟರ್ ಗೆ ಎಲ್ಲರೂ ಪೇಶಂಟ್' ಗಳೇ ಎಂದುಕೊಳ್ಳುತ್ತ ತನ್ನೊಡನೆ ತಂದಿದ್ದ ಫೈಲ್ ಅವಳ ಮುಂದಿಡುತ್ತಾ ತನ್ನ ಶರ್ಟಿನ ಕಿಸೆಗೆ ಕೈ ಹಾಕಿದ.
"ಹಮ್, ನೋಡುತ್ತೇನೆ.. ಅಷ್ಟರಲ್ಲಿ ಬೇಕಾದರೆ ನೀವು ನಮ್ಮ ಆಸ್ಪತ್ರೆಯ ಹೊರಗಡೆ ಹೋಗಿ ಬರಬಹುದು" ಎನ್ನುತ್ತಾ ಫೈಲ್ ಬಳಿಗೆಳೆದುಕೊಂಡಳು.
ಕಿಸೆಯೊಳಗೆ ಹೋಗುತ್ತಿದ್ದ ಕೈ ತಡೆದು "ಯಾಕೆ?" ಎಂದ.
"ಸಿಗರೆಟ್ ಸೇದುವುದು ಮನ್ನಿಸಲಾಗಿದೆ ನಮ್ಮ ವರಾಂಡದಲ್ಲಿ" ಎಂದಳು ಬಗ್ಗಿಸಿದ ತಲೆಯನ್ನು ಮೇಲೆತ್ತದೆ. ಕಕ್ಕಾಬಿಕ್ಕಿಯಾದ ಕ್ಷಾತ್ರ. ಕೈ ತೆಗೆದು, ನೇರವಾಗಿ ಕುಳಿತ ಅವಳನ್ನೇ ನೋಡುತ್ತ. ಬರುತ್ತಿದ್ದ ನಗುವನ್ನು ಕಷ್ಟದಿಂದ ತಡೆದುಕೊಂಡು ಮುಖವನ್ನು ಗಂಟು ಹಾಕಿ ಫೈಲ್ ನೋಡುತ್ತಿದ್ದಳು.
ಹದಿನೈದು ನಿಮಿಷ ಫೈಲ್ ಅನ್ನು ಕೂಲಂಕುಷವಾಗಿ ನೋಡಿ ಭಾರವಾದ ನಿಟ್ಟುಸಿರು ಬಿಟ್ಟು ಮುಖ ಮೇಲೆತ್ತಿದಳು. ಅವಳ ಹಾವಭಾವವನ್ನೇ ನೋಡುತ್ತ ಕುಳಿತಿದ್ದ ಕ್ಷಾತ್ರ. ಅವಳು ಮುಖ ಮೇಲೇತ್ತುತ್ತಲೇ ಕಣ್ಣು ಬೇರೆಡೆಗೆ ಹೊರಳಿಸಿದ.
"ಈಗ ಹೇಳಿ, ಏನು ವಿವರ ಬೇಕು ಇದರ ಬಗ್ಗೆ?' ಎಂದು ಕೇಳಿದಳು.
"ಸ್ವಯಂವರಾ ಅವ್ರೆ, ನಿಮಗೂ ತಿಳಿದಿರಬಹುದು. ಈ ಕೊಲೆಗಳನ್ನೆಲ್ಲ ಗಮನಿಸಿದಲ್ಲಿ ಎಲ್ಲ ಕೊಲೆಗಳಲ್ಲಿ ಸಾಮ್ಯತೆಯಿದೆ. ಈ ಕೊಲೆಗಳನ್ನೆಲ್ಲ ಯಾರೋ ಒಬ್ಬನೇ ಮಾಡುತ್ತಿದ್ದಾನೆ ಎಂಬುದು ನನ್ನ ಅನುಮಾನ. ಈ ಸತ್ತ ವ್ಯಕ್ತಿಗಳಲ್ಲಿ ಯಾರಿಗೂ ಯಾರೂ ಸಂಬಂಧಪಟ್ಟವರಲ್ಲ. ಆದರೂ ಕೊಲೆ ಮಾಡಿದವನು ಮಾತ್ರ ಒಬ್ಬನೇ ಎಂದು ನನ್ನ ಅನುಮಾನ. ಆದ್ದರಿಂದ ಯಾವುದೋ ಒಬ್ಬ ಸೈಕೋಪಾತ್ ಈ ಕೊಲೆಗಳನ್ನು ತನ್ನ ಮನೋರಂಜನೆಗೆ ಮಾಡುತ್ತಿದ್ದಾನೆ ಎಂದೆನ್ನಿಸುತ್ತಿದೆ ನನಗೆ. ಈ ತರಹದ ಕೊಲೆಗಳು ಸಾಧ್ಯವಾ?" ಮಾತು ನಿಲ್ಲಿಸಿದ.
ಆತ ಹೇಳುವುದನ್ನೆಲ್ಲ ಕೇಳಿ "ಈ ಕೊಲೆಯನ್ನು ಮಾಡಿರುವುದು ಮಾನಸಿಕ ರೋಗಿಯಲ್ಲ." ಎಂದುಬಿಟ್ಟಳು.
"ಹೇಗೆ ಅಷ್ಟು ಖಡಾಖಂಡಿತವಾಗಿ ಹೇಳುತ್ತಿರಿ?"
"ಕ್ಷಾತ್ರ ಅವ್ರೆ, ಮಾನಸಿಕ ರೋಗಿಗಳು ಅಥವಾ ಸೈಕೋಪಾತ್ ಗಳು ಕೊಲೆಗಳನ್ನು ಮಾಡುತ್ತಾರೆ. ಅಮೇರಿಕಾದಲಿ ಒಬ್ಬ ಸೈಕೋಪಾತ್ ಹೀಗೆಯೇ 168 ಕೊಲೆಗಳನ್ನು ಮಾಡಿದ್ದ. ಆದರೆ ಆತನನ್ನು ಹಿಡಿಯುವುದು ಕಷ್ಟವಾಗಿತ್ತು. ಅವರು ಕೊಲೆಗಳನ್ನು ತಾವೇ ಮಾಡುತ್ತಿದ್ದೇವೆ ಎಂದು ತಿಳಿಯದಂತೆ ಮಾಡಲು ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ. ಹೀಗೆ ಸಿಕ್ಕಿಬೀಳುವಂತೆ ವರ್ತಿಸುವುದಿಲ್ಲ.
ಅದೂ ಅಲ್ಲದೇ ಪ್ರತೀ ಫೋಟೊಗಳನ್ನು ನೋಡಿ, ಕುತ್ತಿಗೆಯ ಒಂದೇ ಜಾಗದಲ್ಲಿ ಹರಿತವಾದ ಆಯುಧದಿಂದ ಹೊಡೆದ ಗುರುತುಗಳಿವೆ. ಇದನ್ನು ಮಾಡುತ್ತಿರುವವರು ತುಂಬ ಪ್ರೋಫೆಷನಲ್ ವ್ಯಕ್ತಿಗಳು. ಶ್ವಾಸನಾಳದ ಮತ್ತು ಕುತ್ತಿಗೆಯ ರಿಬನ್ ನಡುವೆ ಇರುವ ಜಾಗಕ್ಕೆ ಹೊಡೆದಿದ್ದಾರೆ. ಅಂದರೆ ಅದಕ್ಕೂ ಮೊದಲು ವ್ಯಕ್ತಿಯನ್ನು ಬಂಧಿಸಿದ್ದಾರೆ.
ಮಾನಸಿಕ ರೋಗಿಗಳು ಹೀಗೆ ಹೊಂಚಿ ಕೊಲ್ಲುವುದಿಲ್ಲ. ಅವರದ್ದು ಏನಿದ್ದರೂ ಆ ಕ್ಷಣ, ಆ ಗಳಿಗೆ ಅಷ್ಟೆ. ಅವರದ್ದು ತಮ್ಮ ಬೇಟೆಯನ್ನು ಹಿಂಸಿಸಿ ಆನಂದಿಸುವ ಮನಸ್ಥಿತಿ. ಆದರೆ ಇಲ್ಲಿ ಹಾಗೇನು ಕಾಣುವುದಿಲ್ಲ" ಎಂದಳು.
ಅವಳ ಅನಾಲಿಸೀಸ್ ನೋಡಿ ಇವಳು ಇಂಟಲಿಜನ್ಸ್ ವಿಂಗ್ ನಲ್ಲಿರಬೇಕಾಗಿತ್ತು ಎಂದುಕೊಂಡ ಕ್ಷಾತ್ರ . ಸಿಗರೇಟ್ ಸೇದಿದರೆ ಮಾತ್ರ ತನ್ನ ತಲೆ ಚುರುಕಾಗಿ ಯೋಚಿಸಬಲ್ಲದು ಎಂದು ಕ್ಷಾತ್ರ ಆಗಾಗ ಯೋಚಿಸುತ್ತಿದ್ದ. ಸಿಗರೇಟ್ ಸೇದಬೇಕು ಎಂದು ಬರುತ್ತಿದ್ದ ತನ್ನ ಮನದಾಸೆಯನ್ನು ಬಲವಂತವಾಗಿ ತಡೆದುಕೊಂಡು "ನೀವು ಕೊನೆಯಲ್ಲಿ ಹೇಳಿದಿರಲ್ಲ ಹಿಂಸೆ, ಪ್ರತೀ ಕೊಲೆಯಲ್ಲೂ ನಡೆಯುತ್ತಿದೆ. ಅದಕ್ಕೇ ನನಗೆ ಇದು ಮಾನಸಿಕ ರೋಗಿ ಮಾಡುತ್ತಿರುವ ಕೊಲೆ ಎಂದೆನ್ನಿಸುತ್ತಿದೆ." ಎಂದ.
"ಹಿಂಸೆಯಾ?" ಎಂದಳು ಆಶ್ಚರ್ಯದಿಂದ.
"ಹೌದು." ಆತ ಇನ್ನೊಂದು ಸಣ್ಣ ಕವರ್ ತೆಗೆದು ಅವಳ ಕೈಗಿತ್ತ. ಅದನ್ನು ನೋಡಿ ಅವಾಕ್ಕಾದಳು.
ಪೋಸ್ಟ್ ಮಾರ್ಟಂ ಮಾಡುವಾಗ ತೆಗೆದ ಚಿತ್ರಗಳವು. ಗಟ್ಟಿಮನಸ್ಸಿನ ಸ್ವಯಂವರಾ ಕೂಡ ಆ ಚಿತ್ರಗಳನ್ನು ನೋಡಿ ಅಧೀರಳಾದಳು. ಒಂದು ಶವಗಳಿಗೂ ಮರ್ಮಾಂಗವೇ ಇರಲಿಲ್ಲ. ಎಂಟು ಕೊಲೆಗಳಲ್ಲೂ ಇರುವ ಸಾಮ್ಯತೆ ಅದೇ. ಮರ್ಮಾಂಗವನ್ನು ಕಟ್ ಮಾಡಲಾಗಿದೆ. "ಮನುಷ್ಯನ ಮರ್ಮಾಂಗ ಕತ್ತರಿಸಿದರೆ ಎಂಥ ನೋವು, ಇದೇ ಹಿಂಸೆ" ಎಂದ ಕ್ಷಾತ್ರ.
ಯೋಚಿಸುತ್ತಿದ್ದಳು ಸ್ವಯಂವರಾ. ಎಲ್ಲೋ ಏನೋ ತಪ್ಪುತ್ತಿದೆ. ಇದು ಮಾನಸಿಕ ರೋಗಿ ಮಾಡುತ್ತಿರುವ ಕೊಲೆಗಳಂತೆ ಕಾಣುತ್ತಿಲ್ಲ. ಏನೋ ನಡೆಯುತ್ತಿದೆ ಎಂದುಕೊಳ್ಳುತ್ತಿದ್ದಳವಳು.
"ಇದೇ ಕಾರಣದಿಂದ ನಾನು ಹೀಗೆ ಹೇಳುತ್ತಿದ್ದೆ" ಮತ್ತೆ ಒತ್ತಿ ಹೇಳಿದ ಕ್ಷಾತ್ರ, ತನ್ನ ಅನಾಲಿಸೀಸ್ ತಪ್ಪಿಲ್ಲ ಎಂಬಂತೆ. ಅವಳೆದುರು ತಾನು ಚಿಕ್ಕವನಾದಂತೆ ಕಾಣುತ್ತಿತ್ತು ಅವನಿಗೆ. ಅದಕ್ಕೆ ತನ್ನ ಯೋಚನೆ ಸರಿಯೆಂದು ಅವಳಿಗೆ ಪ್ರೂವ್ ಮಾಡಬೇಕಿತ್ತು.
ತಲೆಯಾಡಿಸಿದಳು ಸ್ವಯಂವರಾ. "ಸರಿ, ನಾನು ಈ ಬಗ್ಗೆ ನಮ್ಮ ಎಲ್ಲ ಬ್ರಾಂಚನ್ನು ಸಂಪರ್ಕಿಸಿ ವಿಷಯ ಒಗ್ಗೂಡಿಸುತ್ತೇನೆ. ಈ ತರಹದ ಮನಸ್ಥಿತಿಗಳನ್ನು ಸುಲಭವಾಗಿ ಕಂಡು ಹಿಡಿಯಬಹುದು."
"ಆದಷ್ಟು ಬೇಗ" ಎಂದ ಕ್ಷಾತ್ರ.
"ಸರಿ ನನಗೂ ಕೂಡ ಒಂದು ಫೇವರ್ ಬೇಕು ನಿಮ್ಮಿಂದ" ಎಂದಳು ಸ್ವಯಂವರಾ.
ಈಗ ತನ್ನ ಪಾಳಿ ಎಂದುಕೊಂಡು "ಅದೇನು?" ಎಂದ ಪೋಲಿಸ್ ಗತ್ತಿನಲ್ಲಿ.
"ಈ ಪೋಲಿಸ್ ದರ್ಪ ಬೇಡ ನನ್ನ ಬಳಿ" ಎಂದಳು ಆತನ ಕಣ್ಣಲ್ಲಿ ಕಣ್ಣಿಟ್ಟು.
ಇವಳು ಹೇಗೆ ನನ್ನ ಮೈಂಡ್ ರೀಡ್ ಮಾಡುತ್ತಿರುವಳು ಎಂದುಕೊಳ್ಳ್ಳುತ್ತ "ಸರಿ, ಅದೇನು ಎಂದು ಹೇಳಿ" ಎಂದ.
"ನಮ್ಮ ಆಸ್ಪತ್ರೆಗೆ ಒಬ್ಬ ಸೇರಿದ್ದಾನೆ. ಆತ ಮತ್ತು ಆತನ ಕಡೆಯವರು ಹೇಳುವ ಪ್ರಕಾರ ಆತನಿಗೆ ಹುಚ್ಚು. ನನ್ನ ಪ್ರಕಾರ ಆತನಿಗೆ ಏನೂ ಆಗಿಲ್ಲ. ನಾಟಕ ಮಾಡುತ್ತಿದ್ದಾನೆ. ನೀವು ಹೇಗಾದರೂ ಮಾಡಿ ಆತನ ಬಾಯ್ಬಿಡಿಸಬೇಕು. ಅವನದು ನಾಟಕ ಎಂದು ಪ್ರೂವ್ ಮಾಡಬೇಕು" ಎಂದಳು.
"ನೀವು ಹೇಗೆ ಹೇಳುತ್ತಿರಿ ನಾಟಕ ಮಾಡುತ್ತಿದ್ದಾನೆ ಎಂದು?"
"ನೋಡ್ರಿ, ನೀವು ಹೇಗೆ? ಏನು? ಸಾಕ್ಷಿ ಎಂದು ಇಂಟರಾಗೇಟ್ ಮಾಡಿದರೆ ನನ್ನ ಬಳಿ ಏನೂ ಇಲ್ಲ. ಆತ ನಾಟಕ ಮಾಡುತ್ತಿದ್ದಾನೆ ಅಷ್ಟೆ" ಎಂದಳು.
"ಇದೊಳ್ಳೆ ಆಯ್ತಲ್ರಿ.. ಕೇವಲ ನಿಮ್ಮ ಮಾತಿನ ಮೇಲೆ ಹೇಗ್ರೀ ನಾನು ನಂಬೋದು?"
"ನನಗೆ ಮೈಂಡ್ ರೀಡಿಂಗ್ ಗೊತ್ರಿ.. ಆತ ಮಾಡುತ್ತಿರುವುದು ನಾಟಕ ಅಷ್ಟೆ. ಆತನ ನೋಟವೇ ಬೇರೆ ತರ ಇದೆ." ಎಂದಳು.
"ಮೈಂಡ್ ರೀಡಿಂಗ್ ಮಾಡುತ್ತಿರಾ? ಸರಿ ನಾನು ನಿನಗೆ ಹೆಲ್ಪ್ ಮಾಡಬಲ್ಲೆ, ಒಂದು ಕನ್ಫರ್ಮ್ ಆದ ಮೇಲೆ." ಎಂದ.
"ಅದೇನು?" ಎಂದಳು.
"ಈಗ ನನ್ನ ಮೈಂಡ್ ರೀಡ್ ಮಾಡಿ. ಅದು ಕರೆಕ್ಟ್ ಇದ್ದರೆ ನಿಮಗೆ ಸಹಾಯ ಮಾಡಬಲ್ಲೆ." ಎಂದ.
ಅವನನ್ನು ಅಡಿಯಿಂದ ಮುಡಿಯವರೆಗೆ ನೋಡಿ ಅವಳು ತುಂಬಿ ಹರಿಯುವ ಗಂಗೆಯಂತೆ ಪ್ರಾರಂಭಿಸಿದಳು. ಕ್ಷಾತ್ರ ಅವಳ ರಭಸದ ಸುಳಿಯಲ್ಲಿ ತರಗೆಲೆಯಂತೆ ಸಿಕ್ಕಿಬಿದ್ದ.
"ನೀವು ಮನೆಯಲ್ಲಿ ಒಂಟಿಯಾಗಿ ಇರುತ್ತೀರಿ. ನಿಮಗೆ ಮಾತನಾಡಿಕೊಳ್ಳಲು ಸ್ನೇಹಿತೆಯರಾಗಲಿ, ಒಳ್ಳೆಯ ಮಿತ್ರರಾಗಲೀ ಇಲ್ಲ. ದಿನಾಲೂ ಒಂದೆರಡು ಪ್ಯಾಕ್ ಸಿಗರೆಟ್ ಸೇದುವುದು ನಿಮ್ಮ ಹವ್ಯಾಸ. ಜೀಪ್ ಅನ್ನು ಓಡಿಸುವಾಗ ವಿಂಡೋ ತೆಗೆದು ಹೊರಗಿನ ಪ್ರಪಂಚವನ್ನು ಆನಂದಿಸುವುದಿಲ್ಲ. ಒಬ್ಬಂಟಿತನವೇ ನಿಮಗೆ ಇಷ್ಟ. ಎದುರಿಗಿರುವವರನ್ನು ತುಂಬ ಕೇವಲವಾಗಿ ನೋಡುವುದು ನಿಮ್ಮ ಬುದ್ಧಿ, ಪೋಲಿಸ್ ಡ್ರೆಸ್ ನಿಮಗೆ ಕೊಟ್ಟ ಬಳುವಳಿಯದು. ಎಂತಹದೇ ಕಠಿಣ ಕೆಲಸವಾದರೂ ಹಟ ಹಿಡಿದು ಪರಿಹರಿಸುವುದು ನಿಮ್ಮ ರೂಢಿ.
ಇದನ್ನೆಲ್ಲಾ ಬಿಟ್ಟು ನೀವು ಇಲ್ಲಿಗೆ ಬಂದು ನನ್ನ ಮುಖ ನೋಡುತ್ತಲೇ ...." ಎಂದು ಅವನ ಮುಖ ನೋಡಿದಳು. ಆತ ಆಕೆ ಹೇಳುವುದನ್ನೇ ಕೇಳುತ್ತಿದ್ದ.
"ನಾನೇನೋ ಮಾನಸಿಕ ಆಸ್ಪತ್ರೆಯ ಡಾಕ್ಟರ್ ಮೂವತ್ತೈದೋ ನಲವತ್ತೋ ಆಗಿರುವವಳಾಗಿರುತ್ತಾಳೆ ಎಂದುಕೊಂಡೆ. ಇವಳು ಇಪ್ಪತ್ನಾಲ್ಕರ ಚೆಲುವೆ ಎಂದುಕೊಂಡಿರಿ. ನನ್ನನ್ನು ನೋಡಿ ಈ ಎಳೆಬುದ್ಧಿಯ ಚೆಲುವೆ ನನಗೇನು ಸಹಾಯ ಮಾಡಬಲ್ಲಳು ಎಂದುಕೊಂಡಿರಿ. ನಾನು ಹಿಂದೆ ತಿರುಗುತ್ತಲೇ ನನ್ನನ್ನು ನೋಡಿ 36-24-36 ಎಂದು ಮೆಸರ್ ಮಾಡಿ ಮನಸ್ಸಿನಲ್ಲೇ ನಕ್ಕಿರಿ.
"ಸ್ವಯಂವರಾ ಏ ಬ್ಯೂಟಿ" ಎಂದು ಮನಸ್ಸಿನಲ್ಲೇ ಅಂದುಕೊಂಡಿದ್ದೀರಿ. ಫೈಲ್ ನೋಡುತ್ತಿರುವಾಗ ಹದಿನೈದು ನಿಮಿಷವೂ ನನ್ನನ್ನೇ ನೋಡುತ್ತ ಕಲ್ಪನೆಯಲ್ಲಿ ವಿವರಿಸಿದ್ದೀರಿ. ನಿಮ್ಮ ಫೈಲಿಗೆ ನಾ ಮಾಡಿದ ಅನಾಲಿಸೀಸ್ ಗೆ ಮನಸ್ಸಿನಲ್ಲೇ ಅಭಿನಂದಿಸಿದ್ದೀರಿ ಎನ್ನುವುದಕ್ಕಿಂತ ನನ್ನನ್ನು ಹೇಗೆ ಕಂಟ್ರೋಲಿನಲ್ಲಿ ಇಟ್ಟುಕೊಳ್ಳಬೇಕೆಂದು ಯೋಚಿಸಿದ್ದಿರಿ.
36-24-26 ಕ್ಕೂ 36-24-34 ಕ್ಕೂ ವ್ಯತ್ಯಾಸ ಗೊತ್ತಿಲ್ಲದ ನಿಮಗೆ ಹುಡುಗಿಯರ ಜೊತೆ ಬಳಕೆಯೂ ಅಷ್ಟಕಷ್ಟೆ. ನನಗೆ ಇಪ್ಪತ್ತಾರು ವರ್ಷ, ಇಪ್ಪತ್ನಾಲ್ಕು ಕೂಡ ಅಲ್ಲ. ಅಲ್ಲಿಗೆ ನೀವು ಎಷ್ಟು ತಪ್ಪು ಯೋಚಿಸಿದ್ದೀರಿ ಎಂದು ನೋಡಿ." ಎಂದು ಮುಂದುವರೆಸುವವಳಿದ್ದಳು.
ಅಷ್ಟರಲ್ಲಿ ಕಿಟಾರನೆ ಕಿರುಚಿಕೊಂಡದ್ದು ಕೇಳಿಸಿತು. ಸ್ವಯಂವರಾಳಿಗೆ ಅದು ಸಾಮಾನ್ಯ. ಯಾವುದೋ ಮಾನಸಿಕ ರೋಗಿ ಕೂಗಿಕೊಳ್ಳುತ್ತಿದ್ದಾನೆ ಎಂದುಕೊಂಡಳು. ಆದರೆ ಕ್ಷಾತ್ರ ಎಚ್ಚೆತ್ತಿದ್ದ. ಭಯದಿಂದ ಕೂಗುವುದಕ್ಕೂ, ಹಾಗೆ ಕೂಗುವುದಕ್ಕೂ ಡಿಫರೆನ್ಸ್ ಬಲ್ಲ ಆತ. ಎದ್ದು ಕೂಗು ಬಂದ ಕಡೆ ಓಡಿದ ಕ್ಷಾತ್ರ. ಅವನು ಓಡುವುದನ್ನು, ಆತನ ಆತುರವನ್ನು ಗಮನಿಸಿ ನಕ್ಕಳು ಸ್ವಯಂವರಾ.
ಕಿರುಚಿದ ಸ್ವರವನ್ನು, ಅದರಲ್ಲಿರುವ ಭಯವನ್ನು ಅವಳು ಗಮನಿಸಿದ್ದಳು. ಮಗುವಂತೆ ಅಳುವ ಮುದುಕರನ್ನು, ಗಂಡಸರಂತೆ ಎಗರಿ ಬೀಳುವ ಮಹಿಳಾ ರೋಗಿಗಳನ್ನು ನೋಡಿದ್ದ ಅವಳಿಗೆ ಯಾವುದೋ ರೋಗಿ ಭಯವಾದಂತೆ ಕೂಗುತ್ತಿದ್ದಾಳೆ ಎಂದುಕೊಂಡು, ತಾನು ಅವನ ಬಗ್ಗೆ ಹೇಳಿದ ನಂತರ ಅವನ ಮುಖಚರ್ಯೆ ಓದುವ ಅವಕಾಶ ತಪ್ಪಿ ಹೋಗಿದ್ದಕ್ಕೆ ಕೈ ಕೈ ಹೊಸೆದುಕೊಳ್ಳುತ್ತ ಆತನ ಹಿಂದೆಯೇ ಹೊರಬಂದಳು. ವಿರುದ್ಧ ದಿಕ್ಕಿನಿಂದ ನರ್ಸ್ ಒಬ್ಬಳು ಓಡಿ ಬರುತ್ತಿದ್ದಳು. ಕೊಲೆ, ಕೊಲೆ ಎಂದು ಚೀರುತ್ತ ಉದ್ದನೆಯ ವರಾಂಡದಲ್ಲಿ ಓಡುತ್ತ ಬರುತ್ತಿದ್ದಳು.
ಕ್ಷಾತ್ರ ನರ್ಸ್ ತೋರಿಸಿದ ದಿಕ್ಕಿನೆಡೆಗೆ ಸಾಗುತ್ತಿದ್ದ. ಸ್ವಯಂವರಾಳ ಮುಖದ ಮೇಲಿನ ನಗು ಮಾಯವಾಗಿ ಕಳವಳ ಮೂಡಿತು. ನರ್ಸ್ ತೋರಿಸಿದ ಬಾತ್ ರೂಮ್ ಕಡೆ ಅವಳು ಓಡುತ್ತಲೇ ಹೋದಳು. ಗರಬಡಿದವನಂತೆ ನಿಂತಿದ್ದ ಕ್ಷಾತ್ರ. ಆತ ಒಳಗೆ ಏನು ನೋಡುತ್ತಿದ್ದಾನೆ ಎಂದು ಅರೆ ತೆರೆದಿದ್ದ ಬಾಗಿಲಿನಿಂದ ಇಣುಕಿದಳು ಸ್ವಯಂವರಾ.
ಸಣ್ಣನೆ ಕೂಗಿದಳು. "ಮೈ ಗಾಡ್!! ಸೇವ್ ಮೀ..." ಎನ್ನುತ್ತಾ ಕ್ಷಾತ್ರನ ಮುಖ ನೋಡಿದಳು. ಕ್ಷಾತ್ರನ ಮುಖದಲ್ಲಿ ಆಶ್ಚರ್ಯ ಮತ್ತು ಅಸಮಾಧಾನ ಎರಡೂ ಕಾಣುತ್ತಿತ್ತು.
ಕುತ್ತಿಗೆಯ ನರ ತುಂಡಾಗಿರುವ ಶವ ಆತನನ್ನು ಕೆಣಕುತ್ತಿತ್ತು. ಮರ್ಮಾಂಗವೂ ಘಾಸಿಯಾಗಿದೆ ಎಂಬಂತೆ ಆತನ ಬಿಚ್ಚಿದ ಪ್ಯಾಂಟಿನ ಅರೆ ತೆರೆದ ಜಾಗದಿಂದ ರಕ್ತ ಇಳಿದು ಹೆಪ್ಪುಗಟ್ಟಿತ್ತು.
ಒಂಬತ್ತನೇ ಕೊಲೆ... ಮಾನಸಿಕ ರೋಗಿಯಿಂದ..
ಏನೂ ಮಾತನಾಡದೆ ಮೂಲೆಯಲ್ಲಿ ನಿಂತಿದ್ದಳು ಸ್ವಯಂವರಾ. ಎಂತಹ ಡಾಕ್ಟರ್ ಆದರೂ ತನ್ನ ಆಸ್ಪತ್ರೆಯಲ್ಲಿ ಕೊಲೆಯನ್ನು ನೋಡಿದರೆ ಹಾಗಾಗುವುದು ಸಹಜ. ಅದಲ್ಲದೇ ಈಗಷ್ಟೇ ನೋಡಿದ ಚಿತ್ರಗಳಂತೆ ನಡೆದ ಕೊಲೆಯಿದು. ಯಾರು ಮಾಡಿರಬಹುದು?
ಕ್ಷಾತ್ರ ಹತ್ತಿರ ಬಂದು " ಆಸ್ಪತ್ರೆಯಲ್ಲಿ ಒಟ್ಟು ಎಷ್ಟು ಜನರಿದ್ದಾರೆ??" ಎಂದು ಕೇಳಿದ.
"ರೋಗಿಗಳು, ಸಹ ಉದ್ಯೋಗಿಗಳು, ಡಾಕ್ಟರ್ ಗಳು ಎಲ್ಲರೂ ಸೇರಿ 69 ಜನ".
ಅವಳ ನಿಖರ ಉತ್ತರ ಖುಷಿ ತಂದಿತು ಕ್ಷಾತ್ರನಿಗೆ. "ಸರಿ ಎಲ್ಲರನ್ನೂ ಒಂದೆಡೆ ಸೇರಿಸಿ. ನಾನೀಗ ಬರುವೆ." ಎಂದ.
ಸ್ವಯಂವರಾ ನರ್ಸ್ ಗಳೊಡನೆ ಹೊರನಡೆದಳು. ಕ್ಷಾತ್ರ ಬಾತ್ ರೂಮ್ ಒಳಗೆ ಬಂದ. ಒಂದು ಕಡೆ ಶವರ್ ಬೀಳುತ್ತಿತ್ತು. ಅದನ್ನು ಆಫ್ ಮಾಡಿದ. ಶವ ಅಂಗಾತ ಬಿದ್ದಿತ್ತು. ಕುತ್ತಿಗೆ, ಮರ್ಮಾಂಗ ಎರಡನ್ನು ಬಿಟ್ಟು ದೇಹದ ಮೇಲೆ ಮತ್ತೆಲ್ಲೂ ಗಾಯದ ಗುರುತಿಲ್ಲ. ಹೇಗೆ ಸಾಧ್ಯ? ಇಷ್ಟು ಜನರ ಮಧ್ಯೆ ಉಳಿದವರಿಗೆ ಒಂದು ಚೂರೂ ತಿಳಿಯದಂತೆ ಒಬ್ಬನನ್ನು ಕೊಂದು ಹೋಗಲು ಹೇಗೆ ಸಾಧ್ಯ? ಕೊಲೆಗಾರ ಇಲ್ಲಿಯೇ ಇದ್ದಾನೆ ಕ್ಷಾತ್ರ. ರೋಗಿಗಳ ನಡುವೆಯೇ ಇದ್ದಾನೆ. ಬೇಗನೇ ಕಾರ್ಯಪ್ರವೃತ್ತನಾಗು ಎಂದು ಎಚ್ಚರಿಸಿತು ಅಂತರಾತ್ಮ. ಕ್ಷಾತ್ರನ ಪೋಲಿಸ್ ಮೆದುಳು ಒಮ್ಮೆಲೇ ಎಚ್ಚೆತ್ತುಕೊಂಡಿತು. ಅಲ್ಲಿಂದ ಹೊರಗೊಡಿದ. ಬೇಗನೆ ಆವರಣದ ಮೇನ್ ಗೇಟ್ ಗೆ ಬಂದು ಗಾರ್ಡ್ ನ ಬಳಿ ಬಾಗಿಲು ಹಾಕುವಂತೆ ಹೇಳಿ, ಯಾರಾದರು ಈಗಾಗಲೇ ಹೊರಗೆ ಹೋದರೆ ಎಂದು ಕೇಳಿದ. ಇಲ್ಲ ಎನ್ನುವಂತೆ ಅಡ್ಡಡ್ಡ ತಲೆಯಾಡಿಸಿದ ಗಾರ್ಡ್. ಯಾರನ್ನು ಕೂಡ ಹೊರಗೆ ಬಿಡದಂತೆ ಹೇಳಿ ತಾನು ಮತ್ತೆ ಕೊಲೆ ನಡೆದ ಜಾಗಕ್ಕೆ ಬಂದ. ಕೆಲಸ ಮಾಡುವವರೆಲ್ಲರೂ ಬಂದು ಇಣುಕಲು ಪ್ರಾರಂಭಿಸಿದ್ದರು. ಇದರಿಂದ ಏನಾದರು ಆಧಾರಗಳಿದ್ದರೆ ನಾಶವಾಗುವ ಸಂಬವವಿರುತ್ತದೆಯೆಂದು ಕ್ಷಾತ್ರ ಅವರನ್ನೆಲ್ಲ ಹೊರಗೆ ಕಳಿಸಿ ಸ್ಟೇಷನ್ ಗೆ ಕಾಲ್ ಮಾಡಿದ. ಆತನಿಗೆ ಗೊತ್ತು ಇದು ತನ್ನ ಸುಪರ್ದಿಗೆ ಬರುವ ಏರಿಯಾ ಅಲ್ಲ. ಆದರೆ ತಾನಿರುವ ಹೊತ್ತಿಗೆ ತನಗೆ ಸಂಭಂದಿಸಿದ ಕೇಸ್ ನ ಹಾಗೆ ನಡೆದ ಕೊಲೆ ಹಾಗಾಗಿ ಅತಿಯಾದ ಕಾಳಜಿ ತೆಗೆದುಕೊಂಡ ಆತ.
ಕೊಲೆ ನಡೆದ ಸ್ಥಳವನ್ನು ಆತ ಸೂಕ್ಷ್ಮವಾಗಿ ಗಮನಿಸಿದ. ಕೊಲೆ ನಡೆದು ಒಂದು ತಾಸಗಿರಬಹುದಷ್ಟೆ. ಕುತ್ತಿಗೆ ಕತ್ತರಿಸಿದ್ದರಿಂದ ಚಿಮ್ಮಿದ ರಕ್ತ ಬಾತ್ ರೂಂ ಗೋಡೆಯ ಮೇಲೆ ಬಿದ್ದು ಹೆಪ್ಪುಗಟ್ಟಿದೆ. ಕತ್ತರಿಸಿದ ಮರ್ಮಾಂಗದ ಅಲ್ಲಿ ಬಿದ್ದಿದೆಯಾ ಎಂದು ನೋಡಿದ. ಕಾಣಲಿಲ್ಲ. ಉಳಿದ ಕೆಸಿನಂತೆ ಇಲ್ಲಿಯೂ ಕೂಡ ಮಿಸ್ಸಿಂಗ್.
ತಾನಂದುಕೊಂಡಂತೆ ಯಾವುದೋ ವಿಕ್ರತ ಸೈಕೊಪಾಥ್ ಹೀಗೆ ಕೊಲೆ ಮಾಡುತ್ತಿದ್ದಾನೆ. ಅಲ್ಲದೆ ಈಗ ಆತ ಇ ಹುಚ್ಚರ ಮದ್ಯವೇ ಇದ್ದಾನೆ. ತಾನು ಹುಡುಕುತ್ತಿದ್ದ ಕೊಂಡಿ ಈಗ ತಾನಾಗಿಯೇ ಸಿಕ್ಕಿದೆ. ತಪ್ಪಿಸಿಕೊಳ್ಳಲು ಬಿಡಬಾರದು. ಪಂಜ ಬಿಚ್ಚಿದ ಚಿರತೆಯಂತೆ ಚುರುಕಾದ ಕ್ಷಾತ್ರ.
ಪ್ರಾರ್ಥನಾ ಮಂದಿರದೊಳಗೆ ಎಲ್ಲರನ್ನೂ ಸೇರಿಸಿದ್ದಳು ಸ್ವಯಂವರಾ. ಅಷ್ಟು ಜನ ಮಾನಸಿಕ ರೋಗಿಗಳನ್ನು ಒಂದೆಡೆ ಸೇರಿಸಿದರೆ ಕೇಳಬೇಕೆ? ಸಣ್ಣ ಮಾರ್ಕೆಟ್ ಆಗಿತ್ತದು. ತಮ್ಮದೇ ಭಾವ. ತಮ್ಮದೇ ಜಗತ್ತು.. ಗದ್ದಲದಲ್ಲಿ ಮುಳುಗಿದ್ದರು. ಅಲ್ಲಿನ ಸಹ ಉದ್ಯೋಗಿಗಳು ಅವರನ್ನು ಸಾಲಿನಲ್ಲಿ ನಿಲ್ಲಿಸಲು ಹರಸಾಹಸ ಪಡುತ್ತಿದ್ದರು. ಸ್ವಯಂವರಾ ಕೂಡ ಪ್ರತಿಯೊಬ್ಬರ ಮುಖವನ್ನು ಗಮನಿಸುತ್ತಿದ್ದಳು. ತಾನು ಎದುರಿಗಿದ್ದವರ ಮೈಂಡ್ ರೀಡ್ ಮಾಡಬಲ್ಲೆ ಎಂಬ ಅತಿಯಾದ ವಿಶ್ವಾಸ ಅವಳಿಗೆ.
ಕ್ಷಾತ್ರ ಒಳಗಡೆ ಬಂದ. ಅವನೂ ಒಬ್ಬೊಬ್ಬರನ್ನೇ ಪರೀಕ್ಷಿಸುತ್ತಾ ಬಂದ. ಯಾರ ಮುಖದಲ್ಲೂ ಕೊಲೆ ಮಾಡುವ ಕ್ರೂರತೆಯಾಗಲೀ,ಕೊಲೆ ಮಾಡಿ ಬಂದು ನಿಂತ ಉದ್ವೇಗವಾಗಲೀ ಕಂಡು ಬರಲಿಲ್ಲ. ಹೇಗೆ ಪತ್ತೆ ಹಚ್ಚಲಿ ಇಷ್ಟು ಜನರ ಮಧ್ಯೆ? ಎಂದುಕೊಂಡ. ಪ್ರತಿಯೊಬ್ಬರ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿದ ಕ್ಷಾತ್ರ. ಒಂದು ಸಣ್ಣ ಆಧಾರ ಸಾಕು, ಅದೇ ಸಿಗುತ್ತಿಲ್ಲ.
ಎಲ್ಲರನ್ನೂ ನೋಡಿ ಸ್ವಯಂವರಾಳ ಬಳಿ ಬಂದು "ಎಲ್ಲರೂ ಇರುವರಾ? ಇಲ್ಲಾ ಯಾರಾದರೂ ಮಿಸ್ಸಿಂಗ್??" ಎಂದ. ಗುಂಪಿನೆಡೆಗೆ ನೋಡಿ ಒಂದು ಕ್ಷಣ ಯೋಚಿಸಿ "ಓಹ್" ಎನ್ನುತ್ತಾ ಹೊರಗೋಡಿದಳು. ಅವಳ ಹಿಂದೆಯೇ ಓಡಿದ ಕ್ಷಾತ್ರ. ಹಿಂದಿನ ದಿನ ಗಂಡನ್ನು ಹೆಣ್ಣೆಂದು, ಹೆಣ್ಣನ್ನು ಗಂಡೆಂದು ತಿಳಿದುಕೊಳ್ಳುವ ವ್ಯಕ್ತಿ ಅಲ್ಲಿರಲಿಲ್ಲ. ಅವನಿಗೆ ಕೊಟ್ಟಿದ್ದ ರೂಮಿಗೆ ಬಂದಿದ್ದಳು ಸ್ವಯಂವರಾ. ರೂಮ್ ಖಾಲಿ ಹೊಡೆಯುತ್ತಿತ್ತು. ಆ ಕೊಠಡಿಯ ಮೇಲ್ವಿಚಾರಿಕೆಯ ಕಂಪೌಂಡರ್ ಬಂದ. "ಅವನನ್ನು ಕೊನೆಯ ಬಾರಿ ನೋಡಿದ್ದು ಯಾವಾಗ??" ಎಂದು ಕೇಳಿದಳು. "ಬೆಳಿಗ್ಗೆ ಇದ್ದ, ನೋಡಿದ್ದೇನೆ. ಯಾವಾಗ ತಪ್ಪಿಸಿಕೊಂಡಿದ್ದಾನೋ??" ಎಂದನವನು.
ಕ್ಷಾತ್ರ "ಯಾರವನು!?" ಎಂದು ಕೇಳಿದ.
ನಿನ್ನೆಯಷ್ಟೆ ಒಬ್ಬನು ಸೇರಿದ್ದ ಎಂದು ಆತ ನಡೆದುಕೊಂಡ ರೀತಿಯನ್ನೆಲ್ಲ ಹೇಳಿದಳು. "ಹಾಗಾದರೆ ನೋ ಡೌಟ್, ಅವನೇ. ಅವನು ಹೇಗಿದ್ದ ಎಂದು ವಿವರಿಸಬಲ್ಲಿರಾ!? ನಮ್ಮ ಚಿತ್ರ ಬಿಡಿಸುವ ಎಕ್ಸಪರ್ಟ್ ಗಳಿಂದ ಸ್ಕೆಚ್ ತೆಗೆಸೋಣ" ಎಂದ ಕ್ಷಾತ್ರ.
ಅಷ್ಟರಲ್ಲಿ ಇತರ ಸಿಬ್ಬಂದಿಗಳು, ರಿಪೋರ್ಟರ್ ಗಳು ಬಂದು ಸೇರಿದ್ದರು. ಅವರನ್ನು ಭೇಟಿಯಾಗಲು ಅತ್ತ ನಡೆದ ಕ್ಷಾತ್ರ. ಆತನ ಮುಖವನ್ನು ಕಣ್ಣೆದುರು ತಂದುಕೊಳ್ಳಲು ಪ್ರಯತ್ನಿಸಿದಳು. ಒಂದೂ ಸರಿಯಾದ ಚಿತ್ರ ಕಣ್ಣೆದುರು ನಿಲ್ಲುತ್ತಿಲ್ಲ. ಕಲ್ಪನೆ ಮೂಡುತ್ತಿಲ್ಲ. ನಾನೊಬ್ಬನೇ ಅಲ್ಲ, ಸಿಬ್ಬಂದಿಗಳೆಲ್ಲ ಅವನನ್ನು ನೋಡಿದ್ದಾರೆ. ಅವನ ಚಿತ್ರ ತೆಗೆಯ ಬಹುದು.
ಆದರೆ ಒಂದೇ ಪ್ರಶ್ನೆ.. ಆತ ನಿಜವಾಗಿಯೂ ಮಾನಸಿಕ ರೋಗಿಯಾ? ಅಥವಾ ಹಾಗೆ ನಾಟಕವಾಡಿದ್ದಾನಾ? ನಾನು ಅವನನ್ನು ಗ್ರಹಿಸಬೇಕಲ್ಲವೇ?ತನ್ನ ಮೈಂಡ್ ರೀಡಿಂಗ್ ಏನಾಯಿತು? ಕ್ಷಾತ್ರನೆದುರು ಅಷ್ಟೊಂದು ಸ್ಟಂಟ್ ಕೊಟ್ಟಿದ್ದೇನೆ. ಆತ ಮಾನಸಿಕ ರೋಗಿಯೇ ಕೊಲೆ ಮಾಡುತ್ತಿರುವುದು ಎಂದರೆ ತಾನು ಅಲ್ಲವೆಂದು ಅಲ್ಲಗಳೆದಿದ್ದೆ. ಆದರೆ ಈಗ ಕಣ್ಣೆದುರಲ್ಲೇ ಸಾಕ್ಷಿಯಿದೆ. ತಾನೆಲ್ಲಿ ಎಡವಿದೆ? ಅತಿಯಾದ ಆತ್ಮವಿಶ್ವಾಸವಿರಬೇಕು. ಅವರು ಅಷ್ಟೊಂದು ಕೈದಿಗಳ ಜೊತೆ ಹತ್ತಿರದಿಂದ ವ್ಯವಹರಿಸುತ್ತಾರೆ. ನಾನೇ ಅವನನ್ನು ತಪ್ಪು ದಾರಿಗೆ ಎಳೆಯುತ್ತಿದ್ದೆನೆನೋ? ಹಾಗೊಂದು ವೇಳೆ ಆತ ಮಾನಸಿಕ ರೋಗಿಯೇ ಅಲ್ಲದೆ ಕೊಲೆ ಮಾಡಲೇ ಇಲ್ಲಿಗೆ ಬಂದಿದ್ದರೆ ನನ್ನ ಸೂಕ್ಷ್ಮ ಕಣ್ಣಿಗೆ ಅವನ ನಾಟಕ ತಿಳಿದಿರುತ್ತಿತ್ತು. ಅಂದರೆ ಮಾನಸಿಕ ರೋಗಿಯೇ ಆತ. ಅವನಿಂದಲೇ ಸರಣಿ ಕೊಲೆಗಳು ನಡೆಯುತ್ತಿರುವುದು. ತನ್ನ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಅನ್ನಿಸಿತು ಸ್ವಯಂವರಾಳಿಗೆ. ತನ್ನನ್ನು ತಬ್ಬಿ, ಕಣ್ಣಲ್ಲಿ ಕಣ್ಣಿಟ್ಟರು ಆತನ ಮುಖದಲ್ಲಿ ತಾನು ಕಪಟತನ ಹೇಗೆ ಕಂಡು ಹಿಡಿಯದೆ ಹೋದೆ?
ತಲೆ ನೋವು ಪ್ರಾರಂಭವಾಯಿತವಳಿಗೆ. ತನ್ನ ರೂಮಿಗೆ ಬಂದು ಕುಳಿತುಬಿಟ್ಟಳು. ಆಸ್ಪತ್ರೆಯ ಆವರಣ ಗದ್ದಲದಿಂದ ತುಂಬಿತ್ತು. ರೋಗಿಗಳನ್ನೆಲ್ಲ ಒಂದೇ ರೂಮಿನಲ್ಲಿ ಕೂಡಿ ಅವರನ್ನು ನಿಯಂತ್ರಿಸುತ್ತಿದ್ದರು ಸಿಬ್ಬಂದಿಗಳು. ಪೋಲಿಸರು ಏನೇನು ಆಧಾರ ಸಿಗುತ್ತದೆ ಎಂದು ತಡಕಾಡಿದರು. ಶವದ ಫೋಟೊ, ಫಿಂಗರ್ ಪ್ರಿಂಟ್ಸ್, ಇನ್ನಿತರ ಎಲ್ಲ ಕೆಲಸಗಳನ್ನು ಮುಗಿಸಿ, ಶವವನ್ನು ಹೊರಗೆ ತಂದು ಅಂಬುಲೆನ್ಸ್ ಏರಿಸಿದರು. ಅವನ ಕಡೆಯವರಿಗೆ ವಿಷಯ ತಿಳಿಸಿದ್ದರಿಂದ ಸಂಬಂಧಿಕರು, ಬಂಧುಗಳು ಬಂದಿದ್ದರು. ಅವರ ಗೋಳು ಹೇಳ ತೀರದಾಗಿತ್ತು. ತೆಗೆದುಕೊಳ್ಳಬೇಕಾದ ಎಲ್ಲ ಹಂತಗಳೂ ಮುಗಿದ ಮೇಲೆ ಎಲ್ಲರೂ ಅಲ್ಲಿಂದ ನಿಷ್ಕ್ರಮಿಸಿದರು. ಒಬ್ಬ ಚಿತ್ರಕಾರನ ಜೊತೆ ಒಳ ಬಂದ ಕ್ಷಾತ್ರ. "ಈಗ ಅವನು ಹೇಗೆ ಇದ್ದ ಎಂದು ವಿವರಿಸಿ. ನಮ್ಮವನು ಹಾಗೆಯೇ ಚಿತ್ರಿಸುತ್ತಾನೆ" ಎಂದ.
ಅವಳಿಗೆ ಆತನ ಚಿತ್ರ ಸರಿಯಾಗಿ ಕಣ್ಮುಂದೆ ಬರುತ್ತಿಲ್ಲ. ನೋಡಿದ ಕೊಲೆಯ, ಶವದ ಚಿತ್ರವೇ ಕಣ್ಣೆದುರು ಮೂಡುತ್ತಿತ್ತು.
ಆತ ಲ್ಯಾಪಟಾಪ್ ತೆಗೆದು ಕುಳಿತ. ಅವಳು ಹೇಳುತ್ತಾ ಹೋದಳು. ತನ್ನ ಬಳಿ ಆಗದಿದ್ದಾಗ ಮತ್ತೆರಡು ಸಿಬ್ಬಂದಿಗಳನ್ನು ಕರೆತಂದು ಅವರು ತಮಗೆ ಕಂಡ ರೀತಿ ಹೇಳತೊಡಗಿದರು. ಪೂರ್ತಿ ಚಿತ್ರವಾದ ಮೇಲೆ ಸುಮಾರು ಆತನನ್ನೇ ಹೋಲುವ ಚಿತ್ರವೇ ಬಂದಿತ್ತು. ಎಲ್ಲರೂ ಸಹಮತಕ್ಕೆ ಬಂದ ನಂತರ ಆ ಚಿತ್ರವನ್ನು ಸೇವ್ ಮಾಡಿಕೊಂಡು ಹೊರಟುಹೋದ ಆತ.
ಕ್ಷಾತ್ರ, ಸ್ವಯಂವರಾ ಇಬ್ಬರೇ ಉಳಿದಿದ್ದರು ಅಲ್ಲಿ. "ಈಗ ಹೇಳಿ, ಮಾನಸಿಕ ರೋಗಿಯಿಂದನೇ ನಡೆಯುತ್ತಿದೆಯಲ್ಲವೇ ಈ ಕೊಲೆ?" ಎಂದ.
"ಇರಬಹುದು." ಎಂದಳು.
"ಆದಷ್ಟು ಬೇಗ ಅವನನ್ನು ಬಂಧಿಸುತ್ತೇವೆ. ನನ್ನ ನಂಬರ್ ತೆಗೆದುಕೊಳ್ಳಿ ಏನಾದರೂ ಅನುಮಾನ ಬರುವಂತಹ ಸನ್ನಿವೇಶ ಕಂಡರೆ ನನಗೆ ತಿಳಿಸಿ" ಎಂದು ತನ್ನ ನಂಬರ್ ಹೇಳಿದ. ತಾನು ಮೊದಲು ನೋಡಿದ ಸ್ವಯಂವರಾಳಂತೆ ಇರಲಿಲ್ಲ. ಆಕೆ ತುಂಬಾ ಕುಗ್ಗಿದ್ದಳು.
"ಅಂದಹಾಗೆ ನೀವು ನನ್ನ ಬಗ್ಗೆ ಹೇಳಿದ್ದು 99% ನಿಜ" ಎಂದ
"ಥ್ಯಾಂಕ್ಸ್" ಎಂದಳು ಅಷ್ಟೆ.
ಮಾತನಾಡುವ ಉತ್ಸಾಹ ತೋರದಿದ್ದಾಗ "ಯಾವಾಗ ಬೇಕಾದರೂ ಕಾಲ್ ಮಾಡಬಹುದು" ಎನ್ನುತ್ತಾ ಹೊರಟು ನಿಂತ ಕ್ಷಾತ್ರ.
ಅವಳು ಎದ್ದು ಬಾಗಿಲವರೆಗೆ ಬಂದು " ದಿನಾಲೂ ಎರಡಕ್ಕಿಂತ ಹೆಚ್ಚು ಸಿಗರೆಟ್ ಸೇದಬೇಡಿ, ಆರೋಗ್ಯಕ್ಕೆ ಒಳ್ಳೆಯದಲ್ಲ" ಎಂದಳು.
ತಿರುಗಿ ಮುಗುಳ್ನಕ್ಕ ಕ್ಷಾತ್ರ. ಮೆಟ್ಟಿಲು ಇಳಿದು ಹೊರಗೆ ಹೊರಟ. ಅವನನ್ನೇ ನೋಡುತ್ತ ನಿಂತಿದ್ದ ಸ್ವಯಂವರಾ, ಅವನು ಆಸ್ಪತ್ರೆಯ ವರಾಂಡ ದಾಟಿದ ಮೇಲೆ ರೋಗಿಗಳನ್ನು ಗಮನಿಸಲು ಒಳಗೆ ನಡೆದಳು.
ಹೊರಗೆ ಬಂದ ಕ್ಷಾತ್ರ ಅವಳ ರೂಮ್ ಕಡೆ ನೋಡಿದ. ಆದರೆ ಅವಳು ಅಲ್ಲಿರಲಿಲ್ಲ. ಕೈ ಸಿಗರೆಟ್ ಹೊರಗೆಳೆಯಿತು. ಅವಳು ಹೇಳಿದ್ದು ನೆನಪಾಯಿತು. "ದಿನಾಲೂ ಎರಡೇ ಸಿಗರೇಟ್.." ಈಗಾಗಲೇ ಅದು ಮುಗಿದಿದೆ. ನಗು ಮೂಡಿತು ಮುಖದಲ್ಲಿ. ತೆಗೆದ ಸಿಗರೆಟ್ ಮತ್ತೆ ಒಳ ಸೇರಿಸಿ ಜೀಪ್ ಹತ್ತಿದ. ವಿಂಡೋ ಕೆಳಗಿಳಿಸುತ್ತ ಹೊರಗೆ ನೋಡಿದ. ಮುಖದಲ್ಲಿ ನಗು ಹಾಯುತ್ತಿತ್ತು. ಸ್ವಯಂವರಾ.. ಸ್ವಯಂವರಾ.. ಎಂದುಕೊಂಡು ಜೀಪ್ ಸ್ಟಾರ್ಟ್ ಮಾಡಿದ. ಜೋರಾಗಿ ಒಳ ನುಗ್ಗಿದ ಗಾಳಿ ಆತನ ತಲೆ ಕೂದಲಿನ ಕ್ರಾಪನ್ನು ಹಾಳು ಮಾಡಿತು.
ಆದಷ್ಟು ಬೇಗ ಈ ಮಾನಸಿಕ ರೋಗಿಯ ಪತ್ತೆಯಾಗಬೇಕು, ಇಲ್ಲವಾದರೆ ಇನ್ನೆಷ್ಟು ಕೊಲೆಗಳೋ ಎನ್ನುತ್ತಾ ವೇಗ ಹೆಚ್ಚಿಸಿದ.
ಕೊಲೆಗಾರನ ಬಾವಚಿತ್ರ ಈಗ ಆತನ ಬಳಿ ಇದೆ. ಆಸ್ಪತ್ರೆಯ ರಿಜಿಸ್ಟರ್ ಅಲ್ಲಿ ಆತನ ಹೆಸರು ಸಿಕ್ಕಿದೆ. ಆದರೆ ಅದು ನಿಜವೋ ಅಲ್ಲವೋ ಗೊತ್ತಿಲ್ಲ.
ವಿಹಾರಿ ನಿನ್ನನ್ನು ಎಲ್ಲಿದ್ದರು ನಾ ಹಿಡಿಯದೆ ಇರಲಾರೆ ಎಂದುಕೊಂಡು ಮತ್ತು ಜೋರಾಗಿ ಆಕ್ಸಿಲರೇಟರ್ ಒತ್ತಿದ.
ಅದೇ ಸಮಯದಲ್ಲಿ ದೆಹಲಿಯಿಂದ ಮುಂಬೈ ಹೋಗುವ ಫ್ಲೈಟ್ ನಲ್ಲಿ ಕುಳಿತಿದ್ದ ವಿಹಾರಿ. ಸ್ವಯಂವರ ನೆನಪಾದಳು.. ಅನ್ವೇಷಣಾಳ ಮುಖದಂತೆ ಇದೆಯಲ್ಲವಾ ?
ಗಾಡವಾದ ನಿಟ್ಟಿಸಿರು ಬಿಟ್ಟು ಕಣ್ಣು ಮುಚ್ಚಿದ.
...............................ಮುಂದುವರೆಯುತ್ತದೆ..............................
https://www.facebook.com/katarnakkadamabri/
ನಮ್ಮ ನಿಮ್ಮ ನಡುವೆ...

ಶಾಸ್ತ್ರಿಯನ್ನು ಅನುಕರಿಸಿ ನಡೆಯುತ್ತಿದ್ದ ಗಾಳಿಗುಡ್ಡ. "ಷೇರ್ ಮಾರ್ಕೆಟ್ Online Account ಇದೆಯಾ ನಿಮ್ಮ ಬಳಿ?" ಕೇಳಿದ ಶಾಸ್ತ್ರಿ. "ಹಮ್. ಇದೆ, ಆದರೆ ಅದನ್ನು ನಾನೆಂದಿಗೂ ಬಳಸಿಲ್ಲ. ನನಗಷ್ಟೂ ತಿಳಿಯುವುದಿಲ್ಲ" ಎನ್ನುತ್ತಾ ಜೋರಾಗಿ ನಕ್ಕ ಗಾಳಿಗುಡ್ಡ.
"ಸರಿ, ನಡೆಯಿರಿ, ಇಂಟರ್ನೆಟ್ ಸೆಂಟರ್ ಗೆ ಹೋಗೋಣ" ಎನ್ನುತ್ತಾ ಮುನ್ನಡೆದ ಶಾಸ್ತ್ರಿ. ಅಲ್ಲಿಯೇ ಹತ್ತಿರದಲ್ಲಿದ್ದ ಇಂಟರ್ನೆಟ್ ಸೆಂಟರ್ ಗೆ ಹೋಗಿ ಅವನಿಂದ ಪಾಸವರ್ಡ್ ಹಾಕಿಸಿ Login ಆದ ಶಾಸ್ತ್ರಿ. ಕರ್ನಾಟಕದ ಅಕ್ಕಿ ಕಂಪನಿಯ ಹತ್ತು ಲಕ್ಷ ಷೇರುಗಳಿವೆ. ಅದನ್ನು ಬಿಟ್ಟುಲೆಕ್ಕಕ್ಕೆ ಸಿಗದಷ್ಟು ಬೇರೆ ಬೇರೆ ಕಂಪನಿಯ ಷೇರುಗಳು ಇವೆ. ಈತ ಸಣ್ಣ ಆಸಾಮಿಯಲ್ಲ, ಬಹಳ ವಹಿವಾಟು ಮಾಡುವ ಮನುಷ್ಯನೇ, ಆದರೆ ಕಳೆದುಕೊಂಡು ಗೊತ್ತಿಲ್ಲ ಎಂಬುದು ತಿಳಿಯಿತು ಶಾಸ್ತ್ರಿಗೆ.
ಪ್ರತೀ ಸೆಕೆಂಡಿನ ಏರಿಳಿತಗಳು ಪರದೆಯಲ್ಲಿ ಕಾಣುತ್ತಿದ್ದವು. Stock Trading ಎಂಬುದು ಒಂದು ಚಟವಿದ್ದಂತೆ. ಒಮ್ಮೆ ಅದರಲ್ಲಿ ನುಸುಳಿದವರು ಹೊರಬರುವುದು ಕಷ್ಟ. ಮಾರ್ಕೆಟ್ ನ ಸೂಚ್ಯಂಕ ಮೇಲೇ ಕೆಳಗೆ ಆದಂತೆಲ್ಲ ಅದರಲ್ಲಿ ಹಣ ತೊಡಗಿಸಿದವರ ಹೃದಯ ಬಡಿತ ಕೂಡ ಮೇಲೆ ಕೆಳಗೆ ಆಗುತ್ತದೆ. ಇದರಲ್ಲಿ ಪಡೆದುಕೊಳ್ಳುವವರಿಗಿಂತ ಕಳೆದುಕೊಳ್ಳುವವರೇ ಜಾಸ್ತಿ. ಸ್ಟಾಕ್ ಟ್ರೇಡಿಂಗ್ ನಲ್ಲಿ ಕೂಡ ಬೇರೆ ಬೇರೆ ವಿಧಗಳಿವೆ. Intra day, Short term trading, Long term trading, Range trading. ಹೀಗೆ..
Intra Day ಎಂಬುದು ಇಸ್ಪೀಟ್ ಆಟಕ್ಕಿಂತ ಹೆಚ್ಚು ಮೋಜು ಕೊಡುತ್ತದೆ. ಬೆಳಿಗ್ಗೆ 9.15 ರ ನಂತರ ಕೊಂಡ ಷೇರನ್ನು ಮಧ್ಯಾಹ್ನ 3.15 ರ ಒಳಗೆ ಕೈ ಬಿಡಬೇಕು. ಇದರಲ್ಲೂ ವಿಧಗಳಿವೆ. ಷೇರಿನ ಬೆಲೆ ಕಡಿಮೆಯಾಗುತ್ತದೆ ಎಂದೆನ್ನಿಸಿದರೆ ಹೆಚ್ಚಿಗೆ ಬೆಲೆಗೆ ಕೊಂಡು, ಬೆಲೆ ಇಳಿದ ಕೂಡಲೇ ಕೊಡಬಹುದು. ಇಲ್ಲವೇ ಷೇರಿನ ಬೆಲೆ ಏರುತ್ತದೆ ಎಂದೆನ್ನಿಸಿದರೆ ಕಡಿಮೆ ಬೆಲೆಗೆ ಕೊಂಡು ಬೆಲೆ ಹೆಚ್ಚಾದಾಗ ಮಾರಬಹುದು. ಆದರೆ ದಿನದ ಕೊನೆಯಲ್ಲಿ Buy ಮತ್ತು Sell ಎರಡೂ Transaction ಗಳೂ ಆಗಿರಬೇಕಷ್ಟೆ. ಇಲ್ಲವೆಂದರೆ Closing rate ಗೆ ಕೊಂಡ ಎಲ್ಲ ಷೇರ್ ಗಳು ಮಾರಾಟವಾಗಿ ಬಿಡುತ್ತದೆ. ಇದೊಂದು ಗೋಲ್ ಮಾಲ್. ದಿನಾಲೂ ಯಾರಾದರೂ ಕೊಳ್ಳುತ್ತಾರೆ, ಯಾರಾದರೂ ಮಾರುತ್ತಾರೆ. ಷೇರಿನ ಸಂಖ್ಯೆ ಹೆಚ್ಚುವುದಿಲ್ಲ. ಒಂದು ದಿನದಲ್ಲಿ ಕಂಪನಿಗಳ ಬೆಲೆ ಬದಲಾಗುವುದೂ ಇಲ್ಲ. ಇದರಿಂದ ಲಾಭ ಪಡೆಯುವುದು ಸರ್ಕಾರ ಮತ್ತು ಆನಲೈನ್ ಪೋರ್ಟಲ್ ಗಳು. ಪ್ರತಿ ಕೊಳ್ಳುಮತ್ತು ಕೊಡು ಪ್ರಕ್ರಿಯೆಗೆ ಸರ್ವೀಸ್ ಟ್ಯಾಕ್ಸ್ ಮತ್ತು Transaction Fee ಕಟ್ಟಬೇಕಾಗುತ್ತದೆ. ಹಣ ಬರಲಿ, ಬಿಡಲಿ ಇದನ್ನು ಕಟ್ಟಲೇ ಬೇಕು. ಅದರಲ್ಲೇ ಕೋಟಿ ಕೋಟಿ ದುಡಿಯುವುದು ಸರ್ಕಾರ ಮತ್ತು Demat ತೆಗೆಸಿದ ಬ್ಯಾಂಕ್ ಗಳು.
ಲಾಂಗ್ ಟರ್ಮ್ ಇನವೆಸ್ಟಮೆಂಟ್ ಗಳು ಒಳಿತು. ಬೇಕೆಂದಷ್ಟು ದಿನ ಇಟ್ಟು ನಂತರ ಮಾರಬಹುದು. ಒಳ್ಳೆಯ ಕಂಪನಿಗಳ ಷೇರಾದರೆ ಉತ್ತಮ ರಿಟರ್ನ್ ಕೊಡುತ್ತದೆ. ಬ್ರೋಕರ್ ಗಳ ಮಾತು ನಂಬಿ ಚಿಲ್ಲರೆ ಷೇರುಗಳಲ್ಲಿ ದುಡ್ಡು ತೊಡಗಿಸಿದರೆ ಮುಳುಗಿದಂತೆ ಸರಿ.
ವಾರನ್ ಬಫೆಟ್ ಷೇರು ಮಾರುಕಟ್ಟೆಯ ಒಡೆಯ. ತುಂಬ ಸುಂದರವಾಗಿ ಹೇಳುತ್ತಾನೆ ಆತ. "ಇಂದು ಒಂದು ಷೇರು ಖರೀದಿಸಿದರೆ ಇನ್ನು ಐದು ವರ್ಷದ ನಂತರವೇ ಶೇರು ಮಾರುಕಟ್ಟೆಯ ಬಾಗಿಲು ತೆರೆಯುತ್ತದೆ ಎಂದುಕೊಂಡು ಷೇರ್ ಖರೀದಿಸುತ್ತೇನೆ". ಇಂದುಕೊಂಡ ಷೇರಿನ ಬಗ್ಗೆ ಐದು ವರ್ಷ ತಲೆಬಿಸಿಯೇ ಮಾಡಿಕೊಳ್ಳುವುದಿಲ್ಲ ಎಂಬುದು ಅದರ ಅರ್ಥ. ಇದೇ ಅವನ ಏಳಿಗೆಯ ಗುಟ್ಟು. ಷೇರು ಮಾರ್ಕೆಟ್ ನ ಟಾಪ್ ಟೆನ್ ಜನರನ್ನು ಪಟ್ಟಿ ಮಾಡಿದರೆ ಅವರೆಲ್ಲರೂ ಲಾಂಗ್ ಟರ್ಮ್ ಇನವೆಸ್ಟರುಗಳೇ.
ಶಾಸ್ತ್ರಿ ಎರಡು ನಿಮಿಷ ಟ್ರೇಡಿಂಗ್ ಪರದೆಯನ್ನೇ ನೋಡಿದ. ಯಾವುದಾದರು ಕಂಪನಿ ಲಾಸ್ಲಿ ನಡೆಯುತ್ತಿದೆ ಎಂದರೆ ಬಹುಬೇಗ ತಿಳಿದುಬಿಡುತ್ತದೆ. ಅನ್ಯ ಜಾತಿಯ ಹುಡುಗನ ಜೊತೆ ಹುಡುಗಿಯೊಬ್ಬಳು ಓಡಿ ಹೋದರೆ ಎಷ್ಟು ಬೇಗ ಸುದ್ಧಿಯಾಗುತ್ತದೆಯೋ ಹಾಗೆ. ಲಾಸ್ ಲಿ ನಡೆಯುತ್ತಿರುವ ಗಾಳಿಗುಡ್ಡನ ಒಂದು ಲಕ್ಷ ಶೇರುಗಳನ್ನು ನೋಡಿದ ಶಾಸ್ತ್ರಿ. ಅದಾಗಲೇ ಎಂಬತ್ತೈದು ರೂಪಾಯಿಗೆ ಇಳಿದಿತ್ತು. ಪ್ರತೀ ಕ್ಷಣವೂ ಐದು ಪೈಸೆ ಕಡಿಮೆಯಾಗುತ್ತಿತ್ತು. ಶಾಸ್ತ್ರಿ ತಡಮಾಡಲಿಲ್ಲ. 86.50 ಕ್ಕೆ ಒಂದು ಲಕ್ಷ ಷೇರುಗಳನ್ನು ಲಾಕ್ ಮಾಡಿ ಸೆಲ್ ಮಾಡಿದ. ಒಂದು, ಎರಡು ನಿಮಿಷಗಳು ಭಾರವಾಗಿ ಕಳೆದುಹೋಯಿತು. ಯಾರೂ ಅದನ್ನು ತೆಗೆದುಕೊಳ್ಳಲಿಲ್ಲ. ಶೇರಿನ ಬೆಲೆ 86.40 ಕ್ಕೆ ಇಳಿಯಿತು. ಇನ್ನು ತಾನು 86.50 ಕ್ಕೆ ಲಾಕ್ ಮಾಡಿ ಪ್ರಯೋಜನವಿಲ್ಲವೆಂದು ಲಾಕ್ ರಿಲೀಸ್ ಮಾಡಿದ. ಹಿಂದೆ ಕುಳಿತಿದ್ದ ಗಾಳಿಗುಡ್ಡ ಅಂಕೆ ಸಂಖ್ಯೆಗಳ ಲೆಕ್ಕಾಚಾರ ಹಾಕುತ್ತಲೇ ಇದ್ದ. ಒಂದು ರೂಪಾಯಿ ಇಳಿಯಿತೆಂದರೆ ಆತನ ಒಂದು ಲಕ್ಷ ಕೈ ಬಿಡುತ್ತದೆ. ಆತನ ಚದಪಡಿಕೆಯನ್ನು ಗಮನಿಸಲಿಲ್ಲ ಶಾಸ್ತ್ರಿ. ತನ್ನ ಬಿಡ್ ಏಕೆ ಸೆಲ್ ಆಗಲಿಲ್ಲ ಎಂದೇ ಯೋಚಿಸುತ್ತಿದ್ದ. ಮತ್ತೊಂದು ನಿಮಿಷ ಭಾರವಾಗಿ ಕಳೆಯಿತು. ಶಾಸ್ತ್ರಿಯ ಮೆದುಳು ಬೆಳಕಿನ ವೇಗಕ್ಕಿಂತ ಜೋರಾಗಿ ಓಡುತ್ತಿತ್ತು. ಪ್ರತೀ ಸೆಕೆಂಡಿನ ಬೆಲೆ, Fast Decission ತೆಗೆದುಕೊಳ್ಳುವುದರ ಬೆಲೆ ಇಂಥ ಸಂದರ್ಭದಲ್ಲೇ ತಿಳಿಯುವುದು.
ದೊಡ್ಡ ದೊಡ್ಡ ಕಂಪನಿಗಳ CEO, ಮ್ಯಾನೇಜಿಂಗ್ ಡೈರೆಕ್ಟರ್ ಗಳಿಗೆ ಇರುವ ವಿಶೇಷ ಗುಣವೇ ಇದು. Decission making! ಕುಡಿವ ನೀರು ಗಂಟಲ ಮೂಲಕ ಕೆಳಗೆ ಇಳಿಯುವುದರೊಳಗೆ ಕೋಟಿಯ ಡೀಲ್ ಗೆ ಸೈನ್ ಮಾಡಿ ಮುಗಿಸಬೇಕಿರುತ್ತದೆ. ಅದೆಷ್ಟು ಮುಂದಾಲೋಚನೆ ಆ ಗಳಿಗೆಯಲ್ಲಿ ಹಾದುಹೋಗಬೇಕು.
ಶಾಸ್ತ್ರಿ ಸ್ಕ್ರೀನ್ ನೋಡುತ್ತಲೇ ಇದ್ದ. ಅವನ ಕಣ್ಣುಗಳು ಮಿನುಗಿದವು. ಕಾರಣವಿಷ್ಟೆ! ಅಷ್ಟು ದೊಡ್ಡ ಲಾಟ್ ಅನ್ನು ಯಾರೂ ಖರೀದಿಸುತ್ತಿಲ್ಲ. ಮತ್ತೊಂದು ಕ್ಷಣ ಆತ ಯೋಚಿಸಲಿಲ್ಲ. ಒಂದು ಲಕ್ಷ ಷೇರುಗಳನ್ನು ಐದು ಸಾವಿರದ 20 ಭಾಗವಾಗಿ ಸ್ಪ್ಲಿಟ್ ಮಾಡಿ ಸೆಲ್ ಲಾಕ್ ಮಾಡಿದ. ಅದರಲ್ಲೂ ಆತ ಒಂದು ಉಪಾಯ ಮಾಡಿದ್ದ. 86.20 ರಲ್ಲಿ ನಡೆಯುತ್ತಿರುವ್ವಾಗ 85.90 ಕ್ಕೆ ಲಾಕ್ ಮಾಡಿಟ್ಟಿದ್ದ. ಪೈಸೆಗಳ ಲೆಕ್ಕಾಚಾರ ಮಾಡುತ್ತ ಕುಳಿತರೆ ರೂಪಾಯಿಗಳು, ರೂಪಾಯಿಯಿಂದ ಲಕ್ಷಗಳು ಕೈ ಬಿಡುತ್ತವೆ. ಈತನ ನಡೆಯನ್ನು ಗಮನಿಸುತ್ತಿದ್ದ ಗಾಳಿಗುಡ್ಡ ದೇವರ ಮೇಲೆ ಭಾರ ಹಾಕಿ ಕುಳಿತಿದ್ದ. ನಿಮಿಷಕ್ಕೊಮ್ಮೆ ಲಕ್ಷ ರೂಪಾಯಿ ಕೈ ಬಿಡುತ್ತಿರುವುದು ಕಣ್ಣಿಗೆ ಕಾಣುತ್ತಲೇ ಇತ್ತು. ಆದರೂ ಏನೂ ಮಾಡುವಂತಿರಲಿಲ್ಲ. ಇಂದು ಪೂರ್ತಿ ಷೇರನ್ನು ಮಾರಾಟ ಮಾಡದಿದ್ದರೆ ನಾಳೆಯ ಕಥೆಯೇನು ಎಂಬುದು ಅವನಿಗೂ ಗೊತ್ತು. ಬಹುತೇಕ ಜನ ಅದೇ ಕಂಪನಿಯ ಷೇರನ್ನು ಕೊಡು ತೆಗೆದುಕೊಳ್ಳುವುದು ಮಾಡುತ್ತಿರುವುದರಿಂದ ಒಮ್ಮೆಲೇ ಬೆಲೆ ಬಿದ್ದಿರಲಿಲ್ಲ. ಆದರೆ ನಾಳೆ ಕೊಳ್ಳುವವರೇ ಇರುವುದಿಲ್ಲ, ಆದದ್ದಾಗಲಿ ಎಂದು ಸುಮ್ಮನೇ ಕುಳಿತಿದ್ದ.
ಶಾಸ್ತ್ರಿಯ ಗಮನ ಮಾತ್ರ ಟ್ರೇಡಿಂಗ್ ಮೇಲೆಯೇ ಇತ್ತು. ಮೊದಲ ಲಾಟ್ ಸೋಲ್ಡ್ ಎಂದು ತೋರಿಸಿತು. ಮುಂದಿನ ಎರಡು ನಿಮಿಷಗಳಲ್ಲಿ ಒಂದು ಲಕ್ಷ ಷೇರ್ ಸೋಲ್ಡ್ ಔಟ್ ಆಗಿದ್ದವು. ನೂರು ರೂಪಾಯಿ ಷೇರು ವಹಿವಾಟು ಮಾಡಿದ್ದಕ್ಕೆ ಶೇರಿನ ಮೇಲೆ 1.20 ರೂಪಾಯಿ Fee ಮತ್ತು ಸರ್ವಿಸ್ ಟ್ಯಾಕ್ಸ್ Cut ಆಯಿತು. ಓಂದು ಷೇರ್ ಅನ್ನು 84.70 ರಂತೆ ಮಾರಾಟ ಮಾಡಿದಂತೆ ಆಗಿತ್ತು.
ನೂರರಂತೆ ತೆಗೆದುಕೊಂಡ ಷೇರುಗಳು 84.70 ರಂತೆ ಮಾರಾಟವಾದರೆ 15,30,000 ಹಾನಿ. ಇನ್ನು ನಾಳೆ ಸಂಜೆಯವರೆಗೆ ಗಾಳಿಗುಡ್ಡನಿಗೆ 20,00,000 ಗಳಿಸಿಕೊಡಬೇಕೆಂದರೆ ಈ ಹಾನಿಯನ್ನು ಮೊದಲು ತುಂಬಬೇಕು .
ಅಲ್ಲಿಗೆ ನಾಳೆ ಸಂಜೆಯವರೆಗೆ ತಾನು 35,30,000 ಸಂಪಾದಿಸಬೇಕು. ಗಾಳಿಗುಡ್ಡನಿಗೆ ಪೂರ್ತಿ ಇಪ್ಪತ್ತು ಲಕ್ಷ ಲಾಭವಾಗಬೇಕೆಂದರೆ ತನಗೆ ಕೊಡುವ ಒಂದು ಲಕ್ಷ ಸೇರಿಸಬಾರದು. ಅಂದರೆ 36,30,000. ಈಗ ಷೇರು ಕೊಂಡುಕೊಳ್ಳಬೇಕು, ಅದರ ಟ್ಯಾಕ್ಸ್ ಮತ್ತು Online Transaction Fee. ಶಾಸ್ತ್ರಿ BUY ಎಂದು ಬರೆದಿದ್ದ ಬಟನ್ ಮೇಲೆ ಕ್ಲಿಕ್ ಮಾಡಿದ. ಈಗ ಶಾಸ್ತ್ರಿ ಯಾವ ಷೇರು ಖರೀದಿ ಮಾಡಬಹುದು ಎಂದು ಕುತೂಹಲದಿಂದ ನೋಡುತ್ತಿದ್ದ ಗಾಳಿಗುಡ್ಡ.
Search ಎಂದು ಬರೆದಿದ್ದ ಬಾಕ್ಸಿನಲ್ಲಿ BBKM Groups ಎಂದು ಬರೆದ. ಬಿಳಿ ಬಿಳಿ ಕೋಳಿ ಮೊಟ್ಟೆ ಗ್ರೂಪ್ಸ್ ಕಂಪನಿಯ ಷೇರು ಪರದೆಯ ಮೇಲೆ ಮೂಡಿತು. 20 ರೂಪಾಯಿ, ಯಾವುದೇ ವಹಿವಾಟು ಅಥವಾ ಬೆಲೆಯ ಏರುಪೇರು ಕೂಡ ಕಾಣಲಿಲ್ಲ. ಶಾಸ್ತ್ರಿಯ ನಡೆ ನೋಡುತ್ತಾ ಕುಳಿತಿದ್ದ ಗಾಳಿಗುಡ್ಡ ಒಮ್ಮೆಲೇ ಅವಕ್ಕಾದ . ಆತನಿಗೆ ಷೇರ್ ಮಾರ್ಕೆಟಿನ್ ಬಗ್ಗೆ ಚೆನ್ನಾಗಿಯೇ ಅರಿವಿದೆ. ಬಿಳಿ ಬಿಳಿ ಕೋಳಿ ಮೊಟ್ಟೆ ಗ್ರೂಪ್ಸ್ ದಿವಾಳಿಯಾಗಿ ನಿಂತಿರುವ ಕಂಪನಿ. ಅದರ Share Amount ಪೂರ್ತಿ ಇಳಿದಿದೆ. ಅದು ಹೆಚ್ಚಾಗುವ ಮಾತು ಸಧ್ಯಕ್ಕಂತೂ ಇಲ್ಲ. ಈತ ತನ್ನನ್ನು ಮುಳುಗಿಸಲೆಂದೇ ಬಂದಿದ್ದಾನೆ ಎಂದು ಅನ್ನಿಸಿ ಬಿಟ್ಟಿತವನಿಗೆ.
"ಏನು ಮಾಡುತ್ತಿರುವೆ ಶಾಸ್ತ್ರಿ?? ನಿನ್ನ ಬುದ್ಧಿವಂತಿಕೆಯ ಬಗ್ಗೆ ನನಗೆ ಗೌರವವಿದೆ. ಆದರೆ ಈ ಷೇರ್ ಮಾರ್ಕೆಟಿನಲ್ಲಿ ದುಡಿಯುತ್ತ, ಕಳೆಯುತ್ತ ನನ್ನ ಮಂಡೆ ಹಣ್ಣಾಗಿದೆ, ಹಾಗಾಗಿ ಹೇಳುತ್ತಿದ್ದೇನೆ. ನೀನು ಮಾಡಿದ ಇಷ್ಟು ಸಹಾಯಕ್ಕೆ ಧನ್ಯವಾದಗಳು. ಕಳೆದುಕೊಂಡ ಹದಿನೈದು ಲಕ್ಷದ ಜೊತೆ ನನಗೆ ಇನ್ನೊಂದು ಲಕ್ಷ ಹೆಚ್ಚಲ್ಲ. ನಿನ್ನ ಆತ್ಮವಿಶ್ವಾಸ, ಸ್ಪಿರಿಟ್ ಹಿಡಿಸಿತು. ಅದೊಂದು ಲಕ್ಷ ನಾ ನಿನಗೆ ಕೊಡುತ್ತೇನೆ. ಹದಿನಾರು ಲಕ್ಷ ಹೋಯಿತು ಎಂದುಕೊಳ್ಳುತ್ತೇನೆ. ಈ ಆಟ ಇಲ್ಲಿಗೆ ನಿಲ್ಲಿಸು" ಎಂದು ಬಿಟ್ಟ ಗಾಳಿಗುಡ್ಡ.
ಮನದೊಳಗೆ ನಕ್ಕ ಶಾಸ್ತ್ರೀ. ಶಾಸ್ತ್ರಿಗೆ ಬಿಕ್ಷೆಯಾ? ಸಂಯಮ ಕಳೆದುಕೊಳ್ಳಲಿಲ್ಲ ಆತ. ಶಾಸ್ತ್ರಿಗೆ ಗೊತ್ತು ಆತನ ಮನದಾಳದ ಇಂಗಿತ ಸರಿಯೆಂದು. ಎರಡು ತಾಸಿನ ಹಿಂದಷ್ಟೆ ಭೇಟಿಯಾದ ಅಪರಿಚಿತನನ್ನು ಯಾರಾದರೂ ಎಷ್ಟು ನಂಬಿಯಾರು!? ಶಾಸ್ತ್ರಿಯೆದುರು ಅಗ್ನಿ ಪರೀಕ್ಷೆ ಎದುರಾಗಿತ್ತು, ಗಾಳಿಗುಡ್ಡನ ಮನವೊಲಿಸಬೇಕು. ಸಮುದ್ರಕ್ಕೆ ಇಳಿದಾಗಿದೆ, ಇನ್ನು ನೀರಿಗೆ ಹೆದರುವ ಮಾತಿಲ್ಲ.
"ಗಾಳಿಗುಡ್ಡ ಅವರೇ, ನನ್ನ ಬಳಿ Demat Account ಇಲ್ಲ. ಇಲದಿದ್ದರೆ ನನ್ನ Account ಇಂದಲೇ ಷೇರ್ ಖರೀದಿಸುತ್ತಿದ್ದೆ. ನನಗೆ ಬಂದ ಸುದ್ಧಿಯ ಪ್ರಕಾರ BBKM Groups ಕಂಪನಿಯ ಚಿತ್ರಣ ನಾಳೆಯ ಒಳಗೆ ಬದಲಾಗುತ್ತದೆ. ನನಗೆ Insider Information ಇದೆ." ಒಂದು ಸಣ್ಣ ಸಂಶಯದ ಕಿಡಿ ಹೊತ್ತಿಸಿದ ಶಾಸ್ತ್ರಿ.
ಕಣ್ಣು ಕಿರಿದು ಮಾಡಿ ಶಾಸ್ತ್ರಿಯ ಮುಖ ನೋಡಿದ ಗಾಳಿಗುಡ್ಡ. ಅಷ್ಟು ಸಾಕು ಶಾಸ್ತ್ರಿಗೆ. ಗಾಳಿಗುಡ್ಡನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಶಾಸ್ತ್ರಿ.
"ಏನು Insider Information??" ಕುತೂಹಲದಿಂದ ಕೇಳಿದ ಗಾಳಿಗುಡ್ಡ.
"ಗಾಳಿಗುಡ್ಡ ಅವರೇ, ಅದೆಲ್ಲ ದೊಡ್ಡ ಕಥೆ. ಈಗ ಅದನ್ನೆಲ್ಲ ಹೇಳಲು ಸಮಯವಿಲ್ಲ. ಘಂಟೆ ಈಗಾಗಲೇ ಒಂದಾಗಿದೆ. ಎಷ್ಟು ಸಾಧ್ಯವೋ ಅಷ್ಟು BBKM ಷೇರು ಖರೀದಿಸಬೇಕು. ನಾಳೆ ನೀವು ಖರೀದಿಸಬೇಕು ಎಂದರೂ ಷೇರು ಸಿಗುವುದಿಲ್ಲ."
ಅನುಮಾನದಿಂದ ನೋಡಿದ ಶಾಸ್ತ್ರಿಯನ್ನು - ಗಾಳಿಗುಡ್ಡ. ಶಾಸ್ತ್ರಿಯ ಮುಖದಲ್ಲಿ ಕಪಟವನ್ನು ಕಂಡುಹಿಡಿಯಲು ಪ್ರಯತ್ನ ಮಾಡಿ ಸೋತ ಗಾಳಿಗುಡ್ಡ.
ಶಾಸ್ತ್ರಿ ಮುಂದುವರೆಸಿದ "ಗಾಳಿಗುಡ್ಡ ಅವರೇ, ನಿಮಗೆ ಮೋಸ ಮಾಡಿ ನಾನು ಏನು ಸಾಧಿಸುತ್ತೇನೆ? ನಿಮ್ಮನ್ನು ನಷ್ಟಕ್ಕೆ ತಳ್ಳಿ ನಾನು ಸಂಪಾದಿಸುವುದಾದರೂ ಏನು? ನಿಮಗೆ ಏನು ಲಾಭವಾದರೂ ಅದು ನಿಮ್ಮ Account ನಲ್ಲಿಯೇ ಇರುತ್ತದೆ. ಹಾಗಾಗಿ ನಿಮಗೆ ಲಾಭವಾದರೂ, ನಷ್ಟವಾದರೂ ನನಗೆ ಏನು ಸಿಗುತ್ತದೆ? ನನ್ನನ್ನು ನಿಮ್ಮ ಹಿತಚಿಂತಕ ಎಂದು ಯೋಚಿಸಿ, ಇವತ್ತು ನನ್ನನ್ನು ನಂಬಿ." ಎಂದ.
ಶಾಸ್ತ್ರಿಯ ಮಾತೆಲ್ಲವೂ ಸರಿಯೇ! ಆದರೆ ಈ Insider information ಏನೆಂದು ಶಾಸ್ತ್ರಿ ಹೇಳಲಿಲ್ಲ. ಅದು ಮುಖ್ಯ ಗಾಳಿಗುಡ್ಡನಿಗೆ.
"ನೀನು ಒಂದೇ ಮಾತಿನಲ್ಲಿ ಹೇಳಿಬಿಡು, Information ಏನೆಂದು. ನಾನು ಹಣ ಹೂಡಲು ರೆಡಿ" ಎಂದ ಗಾಳಿಗುಡ್ಡ.
ಮತ್ತೆ ಯೋಚಿಸಲಿಲ್ಲ ಶಾಸ್ತ್ರಿ. "BBKM ಕಂಪನಿಯನ್ನು KFC ಚಿಕನ್ ಕಂಪನಿ ಕೊಂಡುಕೊಳ್ಳುತ್ತಿದೆ. ಇಂದಷ್ಟೆ ಡೀಲ್ ಆಗಿದೆ" ಎಂದ. ಗಾಳಿಗುಡ್ಡನ ತಲೆ ತಿರುಗಿದಂತಾಯಿತು. ಖುರ್ಚಿಗೆ ಒರಗಿ ಕುಳಿತು ಬಿಟ್ಟ. ದೊಡ್ಡ ದೊಡ್ಡ ಸ್ಕಾಮ್ ಗಳು ನಡೆಯುವುದೇ ಹೀಗೆ. ದೊಡ್ಡ ದೊಡ್ಡ ಮಾತುಗಳನ್ನು ಜನರು ಬೇಗ ನಂಬಿ ಬಿಡುತ್ತಾರೆ. ಅದರ ಆಳಕ್ಕಿಳಿದು ವಿಷಯದ ಸಾಂದ್ರತೆಯನ್ನು ಅರಿಯುವ ಪ್ರಯತ್ನವನ್ನು ಮಾಡುವುದೇ ಇಲ್ಲ.
ಮುಂದಿನ ಕೆಲಸವನ್ನು ಶಾಸ್ತ್ರಿ ಬೇಗ ಬೇಗನೇ ಮಾಡಿ ಮುಗಿಸಿದ್ದ. BBKM Buy ಎಂದ ಕೂಡಲೇ ಷೇರ್ ಗಳು ದಂಡಿಯಾಗಿ ಬರತೊಡಗಿದವು. ಎಲ್ಲವೂ ಪುಟ್ಟ ಪುಟ್ಟ ಸ್ಲಾಟ್ ಗಳು.
ಶಾಸ್ತ್ರಿ 20 ರೂಪಾಯಿ ಇರುವ ಷೇರನ್ನು 30 ಕ್ಕೆ Buy ಮಾಡುತ್ತಿದ್ದ. ಆತನಿಗೆ ಗೊತ್ತು 29 ಕ್ಕೆ ತೆಗೆದುಕೊಂಡವರು ಕೂಡಾ ಷೇರುಗಳನ್ನು ಮಾರಿಬಿಡುತ್ತಾರೆ. ಷೇರ್ ಗಳನ್ನು ಖರೀದಿ ಮಾಡತೊಡಗಿದ ಶಾಸ್ತ್ರಿ. ಷೇರ್ ಮಾರ್ಕೆಟ್ ಮುಗಿಯುವ ಸಮಯಕ್ಕೆ ಸರಿಯಾಗಿ ಶಾಸ್ತ್ರಿಯ ಬಳಿ 222001 ಷೇರುಗಳಿದ್ದವು. ಸಂಖ್ಯಾ ಶಾಸ್ತ್ರದ ಪ್ರಕಾರ ೭ ಲಕ್ಕಿ ನಂಬರ್ ಎಂದುಕೊಂಡ. 66,60,030 ರೂಪಾಯಿ ಇನವೆಸ್ಟ್ ಮಾಡಿಸಿದ್ದ ಗಾಳಿಗುಡ್ಡನಿಂದ.
"ಗಾಳಿಗುಡ್ದ ಅವರೇ, ಮಾಡುವ ಕೆಲಸ ತುಂಬಾ ಇದೆ ನಡೆಯಿರಿ ನನ್ನೊಡನೆ" ಎನ್ನುತ್ತಾ ಮೇಲೆದ್ದ ಶಾಸ್ತ್ರಿ.ಇಂದಿಗೆ ಷೇರ್ ಮಾರ್ಕೆಟ್ ವ್ಯವಹಾರ ಮುಗಿದಿದೆ. KFC, BBKM ಕೊಂಡಿದ್ದರೆ ನಾಳೆ ಷೇರ್ ಬೆಲೆ ಏರುತ್ತದೆ. ಮಾರುವುದೋ, ಬಿಡುವುದೋ ಆಮೇಲೆ ನೋಡುವುದು. ಅಂತದ್ದರಲ್ಲಿ ಈ ಬಹಳ ಕೆಲಸಗಳೇನು ಅರ್ಥವಾಗಲಿಲ್ಲ ಗಾಳಿಗುಡ್ದನಿಗೆ. ಅದನ್ನೇ ಕೇಳುವುದರಲ್ಲಿದ್ದ.
ಶಾಸ್ತ್ರಿ ಅಷ್ಟರಲ್ಲಿ "ನನಗೊಂದು ಐವತ್ತು ಸಾವಿರ ಬೇಕು. ಈಗಲೇ ಕೊಡಿ." ಎಂದ. ಗಾಳಿಗುಡ್ಡ ಎಷ್ಟು ಮಂತ್ರಮುಗ್ಧನಾಗಿದ್ದ ಎಂದರೆ ತನ್ನ ಕೋಟಿನ ಕಿಸೆಯಿಂದ ಐವತ್ತು ಸಾವಿರದ ಕಟ್ಟೊಂದನ್ನು ತೆಗೆದು ಕೈಯಲ್ಲಿಟ್ಟ.
ಐವತ್ತು ಸಾವಿರವೆಂದರೆ ಐದು, ಹತ್ತರ ನೋಟಿನಂತೆ ಈತನ ಕಿಸೆಯಲ್ಲಿ ಬಿದ್ದಿರುತ್ತದೆ ಎಂದು ಯಾವಾಗಲೋ ಎಣಿಸಿದ್ದ ಶಾಸ್ತ್ರಿ. "ನೀವು ಹೊರಗಡೆ ಹೊಟೆಲಿನಲ್ಲಿ ಕುಳಿತು ಊಟ ಮಾಡುತ್ತಿರಿ, ನಾನೀಗಲೇ ಬಂದೆ. ನಾನು ಬರುವವರೆಗೆ ಕಾಯುತ್ತಿರಿ, ಹೋಗಬೇಡಿ." ಎಂದು ಹೇಳುತ್ತಾ ಸರಸರನೆ ಹೊರನಡೆದು ಬಿಟ್ಟ. ಏನೆಂದು ಅರ್ಥವಾಗದ ಗಾಳಿಗುಡ್ಡ "ಬುದ್ಧಿವಂತರ ಸಹವಾಸವಲ್ಲ" ಎಂದು ಗೊಣಗುತ್ತ ಹೊಟೆಲ್ ಕಡೆ ನಡೆದ.
ಶಾಸ್ತ್ರಿ ಬೇಗ ಬೇಗನೇ ಸಂಜೆವಾಣಿ ಎಂದು ಬೋರ್ಡ್ ಹಾಕಿದ್ದ ಪೇಪರ್ ಪ್ರಿಂಟಿಂಗ್ ಜಾಗಕ್ಕೆ ಹೋದ. ಸಂಜೆಯ ವೇಳೆಗೆ ಬರುವ ಪೇಪರ್ ಅದು. ಆಗಷ್ಟೆ ಪ್ರಿಂಟಿಗೆ ಹೊರಟಿತ್ತು ಅಂದಿನ ಸಂಚಿಕೆ.
ಸೀದಾ ಹೋಗಿ ಎಡಿಟರ್ ರೂಮ್ ನ ಒಳಹೊಕ್ಕ ಶಾಸ್ತ್ರಿ. ಇಪ್ಪತೈದು ಸಾವಿರ ಆತನ ಎದುರಲ್ಲಿಟ್ಟ. ಏನೆನ್ನುವಂತೆ ಆತನ ಮುಖ ನೋಡಿದ ಎಡಿಟರ್. "ನನ್ನದೊಂದು ನ್ಯೂಸ್ ಇದೆ, ಅದನ್ನು ಇಂದಿನ ಪೇಪರಿನಲ್ಲಿ ಪ್ರಿಂಟ್ ಮಾಡಿಸಬೇಕು" ಎಂದ.
ಎದುರಿಗಿದ್ದ ಇಪ್ಪತೈದು ಸಾವಿರ ನೋಡಿದ ಎಡಿಟರ್. ಅವರದು ಕಡಿಮೆ ಮಾರಾಟವಿರುವ ಪತ್ರಿಕೆ. ನ್ಯೂಸ್ ಏನೆಂದು ಕೇಳಿದ ಎಡಿಟರ್. "ಅದನ್ನು ನಾನು ಡಿಸೈನ್ ಮಾಡುತ್ತೇನೆ,ಹಾಕುವುದಷ್ಟೆ ನಿಮ್ಮ ಕೆಲಸ" ಎಂದು ಮತ್ತೆ ಹತ್ತು ಸಾವಿರ ಮುಂದೆ ತಳ್ಳಿದ. ಎಡಿಟರ್ ತನ್ನ ಎದುರಿನಲ್ಲಿದ್ದ ಕಂಪ್ಯೂಟರ್ ಬಿಟ್ಟುಕೊಟ್ಟ ಹತ್ತು ನಿಮಿಷದಲ್ಲಿ ಕಂಟೆಂಟ್ ರೆಡಿ ಮಾಡಿದ್ದ ಶಾಸ್ತ್ರಿ. ಕಂಟೆಂಟ್ ನೋಡಿದ ಎಡಿಟರ್ "ಇದು ಫ್ರಂಟ್ ಪೇಜ್ ನಲ್ಲಿ ಕಷ್ಟ" ಎಂದ.
ಅದರ ಕೆಳಗೆ ವಿಚಾರಣೆಗೆ ಮಾಹಿತಿ ಕೊಟ್ಟವರೇ ಜವಾಬ್ದಾರಿ ಎಂದು ಸೇರಿಸಿ ಬಲಗಡೆಯಲ್ಲಿ ಓದಲು ಬರದಷ್ಟು ಚಿಕ್ಕದಾಗಿ Advertise ಎಂದು ಸೇರಿಸಿದ. "ಯಾರಿದ್ದಾದರೂ ಫೋನ್ ಬಂದರೆ ನಮ್ಮ ಮೂಲಗಳಿಂದ ಬಂದ ಸುದ್ಧಿ ಎಂದು ಬಿಡಿ" ಎನ್ನುತ್ತಾ ಮತ್ತೆ ಐದು ಸಾವಿರ ಆತನ ಕೈಲಿಟ್ಟ. ಮತ್ತೆ ಮಾತನಾಡಲಿಲ್ಲ ಎಡಿಟರ್. ಅಂದಿನ ಪತ್ರಿಕೆಯ ಮುಖಪುಟವೇ ಬದಲಾಗಿತ್ತು. ದುಡ್ಡೊಂದಿದ್ದರೆ ಏನು ಮಾಡಲು ಸಾಧ್ಯ ಎಂಬುದು ಆತನಿಗೆ ಎಂದೊ ಅರಿವಾದ ಸತ್ಯ.
ಒಂದೈದು ಪತ್ರಿಕೆಗಳನ್ನು ತೆಗೆದುಕೊಂಡು ವಾಪಾಸ್ ಬಂದ ಶಾಸ್ತ್ರಿ, ಗಾಳಿಗುಡ್ಡ ಇದ್ದಲ್ಲಿಗೆ. ತನ್ನ ಕೈಲಿದ್ದ ಒಂದು ನ್ಯೂಸ್ ಪೇಪರ್ ಗಾಳಿಗುಡ್ಡನಿಗೆ ಕೊಟ್ಟು ಓದಲು ಹೇಳಿದ. ಅದನ್ನು ಓದುತ್ತಿದ್ದಂತೆ ಹಸನ್ಮುಖನಾದ ಗಾಳಿಗುಡ್ಡ "ನಿನ್ನ Information ನಿಜ ಎಂದಾಯಿತು" ಎಂದ. ಹೌದು ಎಂಬಂತೆ ತಲೆಯಾಡಿಸಿದ ಶಾಸ್ತ್ರಿ. ಶಾಸ್ತ್ರಿಗೆ ಅವನ ಕೆಲಸದ ಮೇಲೆ ಅವನಿಗೆ ನಂಬಿಕೆ ಬಂದಿತು. ಗಾಳಿಗುಡ್ಡ ಅದನ್ನು ನೋಡುತ್ತಿದ್ದಂತೆ ನಂಬಿ ಬಿಟ್ಟಿದ್ದ. ಜನರು ಹೆಡ್ ಲೈನ್ ಓದುತ್ತಾರೆ . ಅದರ ಕೆಳಗಿರುವ ಟರ್ಮ್ಸ್ ಅಂಡ್ ಕಂಡೀಶನ್ ಓದುವುದಿಲ್ಲ. ಅರಿತವರು ಜನರ ಮೂಡತೆಯ ಮೇಲೆ ಆಡಿಕೊಳ್ಳುತ್ತಾರೆ. ಶಾಸ್ತ್ರೀ ಅಂತವರಲ್ಲೊಬ್ಬ. ಎಂತಹ ಸಮಯದಲ್ಲೂ ಸ್ತಿಮಿತ ಕಳೆದುಕೊಳ್ಳುವ ಮನುಷ್ಯ ಅಲ್ಲ.
"ನಡೆಯಿರಿ, ಮತ್ತೊಂದು ಮುಖ್ಯವಾದ ಕೆಲಸ ಇದೆ" ಎನ್ನುತ್ತಾ ಷೇರು ವ್ಯವಹಾರ ನಡೆಯುತ್ತಿದ್ದ ಬೆಳಗಿನ ಕಟ್ಟಡದ ಎದುರು ಬಂದ ಶಾಸ್ತ್ರಿ. ಸುತ್ತಲೂ ಕಣ್ಣಾಡಿಸಿದ. ದೂರದಲ್ಲಿ ಎರಡು ಮಕ್ಕಳು ಚಿಂದಿ ಆಯುತ್ತ ಓಡಾಡುತ್ತಿದ್ದರು. ಅವರ ಬಳಿ ಹೋಗಿ "ನೀವು ಒಂದು ಕೆಲಸ ಮಾಡಬೇಕು, ನಿಮಗೆ ಐದು ಸಾವಿರ ಕೊಡುತ್ತೇನೆ" ಎಂದ. ಅವರು ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಐದು ಸಾವಿರ ಬಹಳ ದೊಡ್ಡ ಮೊತ್ತ ಅವರಿಗೆ.
"ಏನು ಮಾಡಬೇಕು ಸಾರ್??"
"ಏನಿಲ್ಲ ಈ ಪೇಪರ್ ಮಾರಬೇಕು"
ಸರಿ ಎಂದು ತಲೆಯಾಡಿಸಿದರು. ಅವರಿಗೆ ಏನು ಹೇಳಬೇಕು, ಹೇಗೆ ಹೇಳಬೇಕು ಎಂದು ಸರಿಯಾಗಿ ಹೇಳಿಕೊಟ್ಟು ತನ್ನ ಜೊತೆ ಬನ್ನಿ ಎಂದು ಗಾಳಿಗುಡ್ದ ಇರುವಲ್ಲಿಗೆ ಕರೆದುಕೊಂಡು ಹೋದ. ಗಾಳಿಗುಡ್ಡನಿಗೆ ಈತ ಏನು ಮಾಡುತ್ತಿದ್ದಾನೆ ಎಂಬುದೇ ಅರ್ಥವಾಗಿರಲಿಲ್ಲ.
"ಗಾಳಿಗುಡ್ಡ ಅವರೇ, ಇನ್ನುಳಿದಿರುವುದು ಕೊನೆಯ ಕೆಲಸ. ಇನ್ನೊಂದು ತಾಸಿನಲ್ಲಿ ಭವಿಷ್ಯ ನಿರ್ಧಾರವಾಗುತ್ತದೆ. ನಿಮಗೆ ಮೋಸ ಮಾಡಿದನಲ್ಲ ಆ ಬ್ರೋಕರ್ ಯಾರೆಂದು ಆತ ಹೊರಬರುತ್ತಲೇ ತೋರಿಸಿಬಿಡಿ." ಎಂದ.
ನಿಮಿಷಗಳು ಭಾರವಾಗಿ ಕಳೆಯುತ್ತಿದ್ದವು. ಅವನ ಜೊತೆ ಇವನಿಗೇನು ಕೆಲಸ ಎಂದು ಯೋಚಿಸುತ್ತಿದ್ದ ಗಾಳಿಗುಡ್ಡ. ಹತ್ತು ನಿಮಿಷದ ನಂತರ ಸೂಟ್ ಧರಿಸಿದ ವ್ಯಕ್ತಿಯೊಬ್ಬ ಹೊರಬಂದ. ನಡೆಯುವ ರೀತಿಯಿಂದಲೇ ಬಹಳ ಚಾಣಾಕ್ಷ, ದುಡ್ಡು ಮಾಡಿದ್ದಾನೆ ಎಂದುಕೊಂಡ ಶಾಸ್ತ್ರಿ. ಆತ ಮೆಟ್ಟಿಲಿಳಿದು ಕೇಳಬರುತ್ತಲೇ "ಕೋ" ಎಂದ ಶಾಸ್ತ್ರಿ. ಬದಿಗಿದ್ದ ಹುಡುಗರಿಬ್ಬರೂ "ಪೇಪರ್! ಪೇಪರ್! ಸಂಜೆವಾಣಿ ಪೇಪರ್! ಬಿಸಿ ಬಿಸಿ ಸುದ್ಧಿ!! ಕೋಳಿಮೊಟ್ಟೆ ಕಂಪನಿ ಖರೀದಿಸಿದ KFC ಚಿಕನ್ ಕಂಪನಿ. ಚಿಕನ್ ಜೊತೆ ಆಮ್ಲೆಟ್ ಮಾರಾಟ. ಬಿಸಿ ಬಿಸಿ ಸುದ್ಧಿ, ಪೇಪರ್! ಪೇಪರ್!" ಕೂಗುತ್ತ ಆತನ ಬಳಿ ಹೋದರು. "ಸರ್, ಒಂದು ರೂಪಾಯಿ ಅಷ್ಟೇ ಸರ್,ಬಿಸಿ ಬಿಸಿ ಸುದ್ಧಿ ಸರ್, BBKM ಖರೀದಿಸಿದ KFC ಸರ್. ಚಿಕನ್ ಜೊತೆ ಆಮ್ಲೆಟ್ ಫ್ರೀ ಸರ್."ಎಂದು ಕೂಗುತ್ತ ಸುತ್ತುವರೆದರು ಆತನನ್ನು. ಕಾರಿನ ಕಡೆ ಹೋಗುತ್ತಿದ್ದ ಅವನ ಕಾಲುಗಳು ಹೆಜ್ಜೆ ಕೀಳದೇ ಅಲ್ಲಿಯೇ ನಿಂತವು. "BBKM ಕೊಂಡ KFC." ಆತನ ಕಿವಿಗಳು ಚುರುಕಾದವು. ಆತ ಪೇಪರಿನತ್ತ ನೋಡಿದ. ಮುಖ್ಯ ಸುದ್ಧಿ ಕಾಣುವಂತೆ ಹಿಡಿದಿದ್ದರವರು.
ಹತ್ತು ರೂಪಾಯಿ ಅವರ ಕೈಲಿ ತುರುಕಿ ಒಂದು ಪೇಪರ್ ತೆಗೆದುಕೊಂಡು ನಡೆದ ಆತ. ಆತನ ಕಾರು ತಿರುವಿನಲ್ಲೂ ಮರೆಯಾಗುತ್ತಲೆ ಹುಡುಗರಿಬ್ಬರೂ ಮರಳಿ ಶಾಸ್ತ್ರಿಯ ಬಳಿ ಬಂದರು. ಅದನ್ನೆಲ್ಲ ದೂರದಲ್ಲಿ ನಿಂತು ನೋಡುತ್ತಿದ್ದ ಶಾಸ್ತ್ರಿ ಭೇಷ್ ಎನ್ನುವಂತೆ ಬೆನ್ನು ತಟ್ಟಿ ಐದು ಸಾವಿರ ಕೊಟ್ಟು ಕಳುಹಿಸಿದ.
"ಒಬ್ಬ Businessman ಸರಿಯಾದ ಜಾಗದಲ್ಲಿ ಇನವೆಸ್ಟ್ ಮಾಡಲು ಎಂದಿಗೂ ಹೆದರುವುದಿಲ್ಲ. ಗಾಳಿಗುಡ್ಡನಿಗೆ ಮಾತ್ರ ಏನು ನಡೆಯುತ್ತಿದೆ ಎಂಬ ಸಣ್ಣ ಕಲ್ಪನೆಯೂ ಬಂದಿರಲಿಲ್ಲ. ಗಾಳಿಗುಡ್ಡನಿಗೆ ಹಿಂಬಾಲಿಸುವಂತೆ ಹೇಳಿ ಮುಂದೆ ನಡೆಯತೊಡಗಿದ ಶಾಸ್ತ್ರಿ. ಫೋನ್ ರಿಪೇರಿ ಮತ್ತು STD ಬೂತ್ ಇರುವ ಒಂದು ಅಂಗಂಡಿಗೆ ಬಂದು ಅಂಗಡಿಯವನೆದುರು ಐದು ಸಾವಿರ ತಳ್ಳಿ ಒಂದು ಕೆಲಸವಾಗಬೇಕು ಎಂದ. ಗಾಳಿಗುಡ್ಡನಿಗೆ ತಲೆ ತಿರುಗುತ್ತಿತ್ತು ಶಾಸ್ತ್ರಿ ದುಡ್ಡು ಹರಿಸುವುದನ್ನು ನೋಡಿ. ಕಂಡೋರ ದುಡ್ಡಾದರೆ ಕೊಡದೆ ಏನು ಮಾಡುತ್ತಾನೆ ಎಂದುಕೊಂಡ.
ಶಾಸ್ತ್ರಿ ಅಂಗಡಿಯವನಿಗೆ ಒಂದು ಮೊಬೈಲ್ ನಂಬರ್ ಕೊಟ್ಟು ಇಂದು ರಾತ್ರಿ ಹನ್ನೊಂದೂವರೆಯವರೆಗೂ ಈ ನಂಬರಿಗೆ ಬೇರೆ ಬೇರೆ ನಂಬರಿನಿಂದ ಫೋನ್ ಮಾಡಿ BBKM Group ನ ಷೇರುಗಳು ಬೇಕು ಎಂದು ಹತ್ತು ನಿಮಿಷಕ್ಕೊಂದರಂತೆ ಕಾಲ್ ಮಾಡಬೇಕು ಎಂದ. ಅದರಲ್ಲೇನು ರಿಸ್ಕ್ ಇಲ್ಲದ್ದನ್ನು ಕಂಡು ಅವನೂ ಸರಿ ಎಂದು ಒಪ್ಪಿಕೊಂಡ. ನಿಶ್ಚಿಂತೆಯಿಂದ ಹೊರಗೆ ಬಂದ ಶಾಸ್ತ್ರಿ. "ಗಾಳಿಗುಡ್ಡ ಅವರೇ ನಾವು ಮಾಡಬೇಕಾದ ಕೆಲಸವೆಲ್ಲ ಮಾಡಿಯಾಯಿತು. ಇನ್ನು ಒಂದು ಫೋನ್ ಕಾಲ್ ಗೆ ಕಾಯಬೇಕಷ್ಟೆ."
ಫೋನ್ ಕಾಲ್ ಯಾರದ್ದು?" ಕೇಳಿದ ಗಾಳಿಗುಡ್ಡ.
"ನಿಮಗೆ ಮೋಸ ಮಾಡಿದನಲ್ಲ ಬ್ರೋಕರ್, ಆತನದು. ಆತ ನಿಮ್ಮ ಬಳಿಯಿರುವ BBKM ನ ಎಲ್ಲ ಷೇರುಗಳನ್ನು ಕೊಳ್ಳಲು ಫೋನ್ ಮಾಡುತ್ತಾನೆ." ಎಂದ ಶಾಸ್ತ್ರಿ.
ಗಾಳಿಗುಡ್ಡ ನಕ್ಕು ಬಿಟ್ಟ. "ಅವನಿಗೆ ಷೇರು ಕೊಡುವುದಾ!?" ಎನ್ನುತ್ತಾ ಮತ್ತೂ ಜೋರಾಗಿ ನಗತೊಡಗಿದ. ಶಾಸ್ತ್ರಿ ಗಾಳಿಗುಡ್ಡನ ಮನಸ್ಸನ್ನು ಅರಿಯದೆನೇ ಇಲ್ಲ.
"ಗಾಳಿಗುಡ್ಡ ಅವರೇ, ನಾನು ಹೇಳುವುದನ್ನು ಸರಿಯಾಗಿ ಕೇಳಿ. ಆತ ನಿಮಗೆ ಫೋನ್ ಮಾಡಿದಾಗ ನೀವು ಬಿಲ್ ಕುಲ್ ಸಿಟ್ಟು ಮಾಡುವಂತಿಲ್ಲ. ನಾನು ಹೇಳಿದಂತೆ ಮಾಡಿ " ಎಂದ ಶಾಸ್ತ್ರಿ.
ಕಣ್ಣುಹುಬ್ಬು ಮೇಲೇರಿಸಿದ ಗಾಳಿಗುಡ್ಡ ಏನು ಮಾಡಬೇಕು ಎನ್ನುತ್ತಾ.
"ಷೇರುಗಳನ್ನು ಆತನಿಗೆ ಮಾರಿಬಿಡಿ."
ಅವಕ್ಕಾದ ಗಾಳಿಗುಡ್ಡ. ಕೋಟಿ ಲಾಭ ಬರುವ ಷೇರು ಮಾರಿಬಿಡುವುದೇ?
"ಯಾಕೆ ಶಾಸ್ತ್ರಿ? ಏನು ಹೇಳುತ್ತಿರುವೆ ನೀನು? ಇಷ್ಟು ಲಾಬ ತರುವ ಷೇರ್ ಮಾರುವುದು ಅದು ಆತನಿಗೆ ಮಾರುವುದು". ತನಗೆ ಇದು ಸುತರಾಂ ಇಷ್ಟವಿಲ್ಲ ಎಂದು ತಲೆ ಅಡ್ಡಡ್ಡ ಆಡಿಸಿದ ಗಾಳಿಗುಡ್ಡ.
ಗಾಳಿಗುಡ್ಡ ಅವರೇ ನಾನು ಹೇಳಿದ್ದಕ್ಕೆ ಪದೆ ಪದೆ ಪ್ರಶ್ನೆ ಕೇಳಬೇಡಿ, 55 ರಿಂದ 60ಕ್ಕೆ, ಓಂದು ಷೇರ್ ಉಳಿಸಿಕೊಂಡು ಉಳಿದ ಷೇರ್ ಕೊಟ್ಟು ಬಿಡಿ ಮಾರಿಬಿಡಿ. ಮುಂದೆ ನಿಮಗೆಲ್ಲ ಅರ್ಥವಾಗುತ್ತದೆ."
ಮತ್ತೆ ತಲೆಕೆಡಿಸಿಕೊಂಡ ಗಾಳಿಗುಡ್ದ. KFC ಯವರು ಕಂಪನಿ ಕೊಂಡಿದ್ದರೆ ಒಂದು ವಾರದಲ್ಲಿ ನೂರನ್ನು ದಾಟುತ್ತದೆ ಷೇರಿನ ಬೆಲೆ. ಯಾಕೆ ಹೀಗೆ ಅರ್ಧದಲ್ಲಿ ಬಿಡಬೇಕು? ಅದೂ ಅಲ್ಲದೆ ನನಗೆ ಮೋಸ ಮಾಡಿದ ಪಾತಕಿಗೆ? ಓಂದು ಷೇರ್ ಉಳಿಸಿಕೊಳ್ಳುವುದೆಕೆ? ಯೋಚಿಸುತ್ತಿದ್ದ ಗಾಳಿಗುಡ್ಡ. ಆತ ಯೋಚಿಸುತ್ತಿರುವ ಹಾಗೆ ಇನ್ನೊಬ್ಬ ಮಹಾಶಯ ಯೋಚಿಸುತ್ತಿದ್ದ.
ಕಾರಿನಲ್ಲಿ ಕುಳಿತು ಪತ್ರಿಕೆ ಓದಿದ ಬ್ರೋಕರ್. ಚಡಪಡಿಕೆ ಶುರುವಾಗಿತ್ತು. ಇಪ್ಪತ್ತಕ್ಕೆ ಇಳಿದಿರುವ ಷೇರು ಒಮ್ಮೆಲೇ ಮತ್ತೆ ಕಳೆ ಪಡೆದು ನೂರಕ್ಕೇರುತ್ತದೆ. ಸತ್ಯಂ ಕಂಪನಿಯು ಹಗರಣಗಳಲ್ಲಿ ಸಿಲುಕಿದಾಗ ಷೇರಿನ ಬೆಲೆ ನೆಲ ಕಚ್ಚಿತ್ತು. ಆಗ ಬುದ್ಧಿವಂತರು ಲಕ್ಷಗಟ್ಟಲೆ ಷೇರುಗಳನ್ನು ಖರೀದಿ ಮಾಡಿ ಇಟ್ಟುಕೊಂಡಿದ್ದರು. ಸತ್ಯಂ ಕಂಪನಿಯನ್ನು ಮಹೀಂದ್ರಾ ತೆಗೆದುಕೊಂಡ ಮೇಲೆ ಅವರೆಲ್ಲ ದಿಢೀರ್ ಕೋಟ್ಯಾಧಿಪತಿಗಳಾಗಿದ್ದರು. ಈಗ ಮತ್ತೆ ಅಂತಹದೇ ಚಾನ್ಸ್. ಆದರೆ ಇಲ್ಲಿ ಬಹಳ ಷೇರುಗಳಿಲ್ಲ. ಸಣ್ಣ ಕಂಪನಿ. ಷೇರು ಯಾರ ಬಳಿ ಇದೆ ನೋಡಬೇಕು. ಅದಕ್ಕೂ ಮೊದಲು ಇದರ ಹಿಂದಿರುವ ಸತ್ಯ ತಿಳಿಯಬೇಕು. ಬ್ರೋಕರ್ ಪತ್ರಿಕೆಯ ಆಫೀಸ್ ಗೆ ಫೋನ್ ಮಾಡಿದ. ಪತ್ರಿಕೆಯ ಎಡಿಟರ್ Inside Information ಎಂದುಬಿಟ್ಟ. ಶಾಸ್ತ್ರಿ ಬಿಚ್ಚಿದ ದುಡ್ಡು ಕೆಲಸ ಮಾಡಿತ್ತು.
Internet ನಲ್ಲಿ Search ಮಾಡಿ BBKM ಕಂಪನಿಗೆ ಫೋನ್ ಮಾಡಿದ. ಕಂಪನಿ ಲಾಸಿನಲ್ಲಿರುವುದರಿಂದ ರಿಸೆಪ್ಷನ್ ಗೆ ಯಾರ ಫೋನ್ ಬಂದರೂ,ಏನೇ ಕೇಳಿದರೂ "ಸಧ್ಯಕ್ಕೆ ಏನೂ ಹೇಳಲಾಗುವುದಿಲ್ಲ, ಮುಂದೆ ನಿಮಗೇ ತಿಳಿಯುತ್ತದೆ". ಎಂದಷ್ಟೇ ಹೇಳಬೇಕೆಂದು ಹೇಳಿಬಿಟ್ಟಿದ್ದರು. ಅದು ಚಾಚೂ ತಪ್ಪದೆ ಫೋನಿನಲ್ಲಿ ವರದಿಯಾಯಿತು.
ಅಷ್ಟರಲ್ಲಿ ಬ್ರೋಕರ್ ನ ಫೋನ್ ರಿಂಗಾಯಿತು. "ಸರ್, ನಾನು ನಿಮ್ಮ ಷೇರು ಮಾರ್ಕೆಟಿನಲ್ಲಿ ವ್ಯವಹಾರ ಮಾಡುವವ. BBKM Group ನ ಷೇರು ಬೇಕಿತ್ತು. ಒಂದು ಐವತ್ತು ಸಾವಿರ ಷೇರಾದರೂ ಬೇಕು." ಚಡಪಡಿಕೆಯಿಂದ ಹೇಳಿತು ಆ ಕಡೆಯ ದ್ವನಿ.
"ಓಕೆ, ಈಗ ಟೈಮ್ ಆಗಿದೆ. ನಾಳೆ ಫೋನ್ ಮಾಡಿ" ಎಂದು call ಕಟ್ ಮಾಡಿದ ಬ್ರೋಕರ್.
ಶಾಸ್ತ್ರಿಯೆಂದರೆ ಹಾಗೆ, ಆತ ಮಾಡುವ ಕೆಲಸವೇ ಹಾಗೆ. loop Hole ಗಳೇ ಇರುವುದಿಲ್ಲ.
ಬ್ರೋಕರ್ ಲಾಪಟಾಪ್ ತೆಗೆದು ಬೇಗ ಬೇಗ ಷೇರು ಕನ್ಸೋಲ್ ಓಪನ್ ಮಾಡಿದ. ಯಾರ ಬಳಿ ಇದೆ ಷೇರು ಎಂದು ನೋಡಲು. ಅದನ್ನು ನೋಡುತ್ತಿದ್ದಂತೆಯೇ ಆತನ ಮುಖ ಪೆಚ್ಚಾಯಿತು. ಗಾಳಿಗುಡ್ಡ. ಕಂಪನಿಯ ಐದನೇ ಒಂದು ಭಾಗದಷ್ಟು ಷೇರು ಈತನ ಬಳಿ. ಬೆಳಿಗ್ಗೆಯಷ್ಟೇ ಈತನನ್ನು ಹೊರಗೆ ತಳ್ಳಿಸಿದ್ದೇನೆ. ಒಂದು ನಿಟ್ಟುಸಿರು ಬಿಟ್ಟು, ಎರಡು ನಿಮಿಷ ಯೋಚಿಸಿ ಗಾಳಿಗುಡ್ಡನ ನಂಬರ್ ಹುಡುಕತೊಡಗಿದ.
Business ಎಂದರೆ ಹಾಗೆ. ಇಲ್ಲಿ ಯಾರೂ ಸ್ನೇಹಿತರೂ ಇಲ್ಲ, ವೈರಿಗಳು ಅಲ್ಲ. ಬೆಳಿಗ್ಗೆ ನಡೆದಿದ್ದಕ್ಕೆ ಹೇಗೆ ತೇಪೆ ಹಚ್ಚಬೇಕು ಎಂದು ಯೋಚಿಸುತ್ತಿರುವಷ್ಟರಲ್ಲಿ ಮತ್ತೆ ರಿಂಗ್ ಆಯಿತು ಫೋನ್. ನಂಬರ್ ಡಿಸ್ಪ್ಲೇ ಆಗುತ್ತಿಲ್ಲ. Private Number ಎಂದು ಬರುತ್ತಿದೆ. ದೊಡ್ಡ ದೊಡ್ಡ ಜನ ತಮ್ಮ ನಂಬರ್ ಗಳು ಬೇರೆಯವರಿಗೆ ತಿಳಿಯದ ಹಾಗೆ ಮಾಡಲು ಈ ವಿಧಾನ ಬಳಸುತ್ತಾರೆ. ಅದು ಬ್ರೋಕರ್ ಗೆ ಗೊತ್ತು. ಮತ್ತದೇ ಪ್ರಶ್ನೆ. BBKM ಷೇರು ಸಿಗುತ್ತದೆಯಾ?? ಮೊದಲಿನದೇ ಉತ್ತರ ಹೇಳಿ ಕಾಲ್ ಕಟ್ ಮಾಡಿದ ಬ್ರೋಕರ್.
ಅಂದರೆ ಈ ಇನ್ಫಾರ್ಮೇಷನ್ ಸರಿಯಾಗಿಯೇ ಇದೆ. ಮತ್ತೆ ಯೋಚಿಸಲಿಲ್ಲ ಬ್ರೋಕರ್. ಕಾಲ್ ಕಟ್ ಮಾಡಿ ಗಾಳಿಗುಡ್ಡನಿಗೆ ಫೋನ್ ಮಾಡಿದ.
ಗಾಳಿಗುಡ್ಡನ ಪಕ್ಕದಲ್ಲಿಯೇ ಕುಳಿತಿದ್ದ ಶಾಸ್ತ್ರಿಯ ಮುಖದ ಮೇಲೆ ಗೆಲುವಿನ ನಗು ಇತ್ತು. ಶಾಸ್ತ್ರಿಯೇನು ಭವಿಷ್ಯವನ್ನು ನೋಡಬಲ್ಲನೆ ಎಂದು ಆಶ್ಚರ್ಯಗೊಳ್ಳುತ್ತಲೇ ಫೋನ್ ಎತ್ತಿದ ಗಾಳಿಗುಡ್ಡ.
ಅವರ ಮಾತುಕತೆ ಕೇಳಿಸಿಕೊಳ್ಳುತ್ತ ಕುಳಿತಿದ್ದ ಶಾಸ್ತ್ರಿ. ಅಂತೂ ಇಬ್ಬರೂ ಕೊನೆಗೊಂದು ನಿರ್ಧಾರಕ್ಕೆ ಬಂದಂತೆ ಕಂಡಿತು. ಐವತ್ತೆಂಟು ರೂಪಾಯಿಗೆ ತನ್ನಲ್ಲಿರುವ ಎಲ್ಲ ಷೇರುಗಳನ್ನು ಬೇಸರದಿಂದಲೇ ಕೈಬಿಟ್ಟ ಗಾಳಿಗುಡ್ಡ.
ನಾಳೆ ಬೆಳಿಗ್ಗೆ ಷೇರು ಮಾರ್ಕೆಟ್ ಪ್ರಾರಂಭವಾಗುವ ಮುನ್ನವೇ ಷೇರು ಬ್ರೋಕರ್ ಗಳಿಗೆ ಮಾತ್ರ ಸಾಧ್ಯವಿರುವ ಬ್ಯಾಕ್ ಚಾನಲ್ ಟ್ರಾನ್ಸಫರ್ ಮೋಡ್ ಇಂದ Transaction ನಡೆಯಬೇಕು. ಅದರಲ್ಲಿ ಒಬ್ಬರು ತಪ್ಪಿದರೂ ಡೀಲ್ ಕ್ಯಾನ್ಸಲ್ ಆಗುತ್ತದೆ.
ಓಕೆ. ಇಬ್ಬರೂ ಫೋನ್ ಇರಿಸಿದರು. ಗಾಳಿಗುಡ್ದ ಮತ್ತೆ ಕೇಳಿದ. "ಅರ್ಧ ದುಡ್ಡಿಗೆ ಯಾಕೆ ಷೇರು ಮಾರಿಸುತ್ತಿದ್ದೀಯಾ? ನಿನಗೆ ಒಂದು ಲಕ್ಷ ಈಗಲೇ ಕೊಡುತ್ತೇನೆ" ಎಂದ ಗಾಳಿಗುಡ್ಡ.
ನಕ್ಕ ಶಾಸ್ತ್ರಿ "ಗಾಳಿಗುಡ್ಡ ಅವರೇ, ನಾಳೆ ಬೆಳಿಗ್ಗೆ ಒಂಬತ್ತು ಗಂಟೆಗೆ ಸರಿಯಾಗಿ Transaction ಮಾಡಿಬಿಡಿ. ಆಮೇಲೆ ಹೇಳುತ್ತೇನೆ. ಯಾಕೆ ಮಾರಿಸಿದೆ ಎಂದು." ಹೇಳುತ್ತಾ ನಡೆದು ಬಿಟ್ಟ ಶಾಸ್ತ್ರಿ.
ಮರುದಿನ ಬೆಳಿಗ್ಗೆ ಒಂಬತ್ತು ಗಂಟೆ. ಗಾಳಿಗುಡ್ಡನಿಗೆ ಫೋನ್ ಬಂತು ಬ್ರೋಕರ್ ನಿಂದ. ಗಾಳಿಗುಡ್ಡ ರಾತ್ರಿ ಆರಾಮವಾಗಿ ನಿದ್ರಿಸಿದ್ದರೆ, ಬ್ರೋಕರ್ ಗೆ ಹನ್ನೊಂದುವರೆಯಾದರೂ ಪ್ರೈವೇಟ್ ನಂಬರ್ ಗಳಿಂದ ಫೋನ್ ಬರುತ್ತಲೇ ಇತ್ತು. ಅದರ ನಂತರ ಆತನ ಕನಸಿನಲ್ಲಿ ದುಡ್ಡೇ ದುಡ್ಡು. ನಿದ್ರೆ ಸರಿಯಾಗಿ ಬರಲೇ ಇಲ್ಲ ಆತನಿಗೆ.
ಒಂಬತ್ತು ಗಂಟೆಗೆ ಸರಿಯಾಗಿ ಇಬ್ಬರೂ Transaction Initiate ಮಾಡಿದ್ದರು. 222000 ಷೇರುಗಳು ಬ್ರೋಕರ್ ನ Account ಸೇರಿದರೆ 1,28,76,000 ರೂಪಾಯಿ ಗಾಳಿಗುಡ್ದನ Account ಗೆ ಹರಿದು ಬಂತು.
Transaction Completed. ಡೀಲ್ ಮುಗಿದಿತ್ತು. ಇವತ್ತಿನ ಎಲ್ಲ ಪೇಪರ್ ಗಳಲ್ಲೂ KFC BBKM ಕಂಪನಿಯನ್ನು ತೆಗೆದುಕೊಂಡ ಸುದ್ಧಿ ಬರುತ್ತದೆ. ಇಲ್ಲವೇ ಸುದ್ಧಿ ನಾಳೆ ಬಂದರೂ ಬರಬಹುದು. KFC Official Statement ಕೊಡಬಹುದು. "ಗುಗ್ಗು ಗಾಳಿಗುಡ್ಡ" ಎಂದು ತನ್ನಲ್ಲೇ ಖುಷಿಯಾದ ಬ್ರೋಕರ್. ಆತ ಇನ್ನೆಷ್ಟು ವರ್ಷ ಅದಕ್ಕಾಗಿ ಕಾಯಬೇಕು ಎಂಬ ಸತ್ಯ ಆ ಕ್ಷಣದಲ್ಲಿ ಆತನಿಗೆ ತಿಳಿಯದೆ ಹೋಯಿತು.
BBKM ಕಂಪನಿಯ ಶೇರ್ ಕೊಳ್ಳಲು ತನಗೆ ಬರುವ ಕಾಲ್ ಗೆ ಕಾಯುತ್ತ ಕುಳಿತ ಇದ್ದ ಬ್ರೋಕರ್.
ಬ್ರೋಕರ್ ಫೋನ್ ಇಡುತ್ತಲೇ ಶಾಸ್ತ್ರಿಗೆ ಫೋನಾಯಿಸಿದ ಗಾಳಿಗುಡ್ಡ. "ನಿನ್ನ ನಿರೀಕ್ಷೆಗೂ ಮೀರಿ ಲಾಭವಾಗಿದೆ ಶಾಸ್ತ್ರಿ, ಎಷ್ಟು ಧನ್ಯವಾದ ಹೇಳಿದರೂ ಸಾಲದು. ಲೆಕ್ಕ ಆಮೇಲೆ ನೀನು ಸಿಕ್ಕಾಗ ಮಾಡೋಣ. ಆದರೆ ಇನ್ನು ನನ್ನ ಬಳಿ ಕಾಯಲು ಸಾಧ್ಯವಿಲ್ಲ. ನನ್ನ ಬಳಿ ಅರ್ಧ ದುಡ್ಡಿಗೆ ಯಾಕೆ ಷೇರ್ ಮಾರಿಸಿದೆ? ಅದೂ ನನ್ನ ವೈರಿಗೆ ಯಾಕೆ ಸಹಾಯ ಮಾಡಿದೆ? ಹೇಳಿಬಿಡು." ಎಂದ.
ಒಂದು ಕ್ಷಣ ಮೌನ. "ಗಾಳಿಗುಡ್ಡ ಅವ್ರೆ, KFC BBKM ಕಂಪನಿಯನ್ನು ತೆಗೆದುಕೊಂಡೇ ಇಲ್ಲ. ನನಗೆ ಬಂದಿದ್ದು ಸುಳ್ಳು ಸುದ್ಧಿ. ನನಗೂ ಈಗಷ್ಟೆ ತಿಳಿಯಿತು, ಆಮೇಲೆ ಸಿಗುತ್ತೇನೆ." ಫೋನ್ ಇಟ್ಟುಬಿಟ್ಟ ಶಾಸ್ತ್ರಿ.
ಒಂದೆರಡು ನಿಮಿಷವೇ ಬೇಕಾಯಿತು ಗಾಳಿಗುಡ್ಡನಿಗೆ ಶಾಸ್ತ್ರಿ ಹೇಳಿದ್ದು ತಿಳಿಯಲು. ಜೋರಾಗಿ ಬಡಿಯುತ್ತಿದ್ದ ಎದೆಯನ್ನು ಸಂಯಮಕ್ಕೆ ತರಲು ಪ್ರಯತ್ನಿಸುತ್ತಾ ಖುರ್ಚಿಯ ಮೇಲೆ ದಢಕ್ಕನೆ ಕುಳಿತ ಗಾಳಿಗುಡ್ಡ.
ಶಾಸ್ತ್ರಿಯ Business ಎಂಬ ಪದದ ಅರ್ಥ, ಪೇಪರ್ ಮಾರುವ ಹುಡುಗನಿಗೆ ಕೊಟ್ಟ ಇನವೆಸ್ಟ್ ಮೆಂಟ್, ಎಲ್ಲವೂ ರೀಲಿನಂತೆ ಬಿಚ್ಚಿಕೊಂಡಿತು ಗಾಳಿಗುಡ್ಡನ ಎದುರು.
ಬ್ರೋಕರ್ ನ ಬಗ್ಗೆ ಯೋಚಿಸುತ್ತಲೇ ಗಾಳಿಗುಡ್ದನಿಗೂ ಪಾಪ ಎಂದೆನ್ನಿಸಿಬಿಟ್ಟಿತು.
ಶಾಸ್ತ್ರಿಯ ಲೆವೆಲ್ ಗೆ ತಿರುಗಿ ಹೊಡೆದರೆ ಹೇಗಿರುತ್ತದೆ ಎಂಬುದರ ಅರಿವಾಯಿತು ಗಾಳಿಗುಡ್ಡನಿಗೆ. ಕುಳಿತಿದ್ದ AC ಯಲ್ಲೂ ಸಣ್ಣಗೆ ಬೆವರಿದ ಗಾಳಿಗುಡ್ಡ.
https://www.facebook.com/katarnakkadamabri
...............................ಮುಂದುವರೆಯುತ್ತದೆ..............................
ನಮ್ಮ ನಿಮ್ಮ ನಡುವೆ...

ಭೂಗತ ಲೋಕದ ಸ್ನೈಪರ್ ಸಾಮ್ರಾಟ ಗರುಡ, ಪ್ರಿಯಂವದಾ ರಾಜ್ ಗಾಗಿ ಕಾದು ಕುಳಿತ ದಿನ ಬೆಳಿಗ್ಗೆ ೯ ಗಂಟೆ. ಯಾವುದೇ ಕೆಲಸವಿರಲಿ ಬೆಳಿಗ್ಗೆ ಒಂಬತ್ತು ಗಂಟೆಗೆ ಸಮ್ಮಿಶ್ರ ಅವಳ ಮನೆಯಲ್ಲಿರುತ್ತಾನೆ. ಹತ್ತು ವರ್ಷದಿಂದ ನಡೆದುಕೊಂಡು ಬಂದಿರುವ ರೂಟಿನ್ ಅದು. ದೆಹಲಿಯ ಮಧ್ಯದಲ್ಲಿ ಇಂಡಿಯಾ ಗೇಟಿನಿಂದ ಕೂಗಳತೆಯ ದೂರದಲ್ಲಿ ಜನರಿಂದ ಪ್ರತಿನಿಧಿಸಲ್ಪಡುವ ರಾಜಕಾರಣಿಗಳ ನಿವೇಶನಗಳಿವೆ. ರಾಷ್ಟ್ರಪತಿ ಭವನ, ಪ್ರಧಾನಮಂತ್ರಿಯವರು ಉಳಿಯುವ 7 RCR ಎಲ್ಲ ವ್ಯವಸ್ಥಿತ, ಸುಸಜ್ಜಿತ ಮನೆಗಳಿರುವುದು ಇಲ್ಲೇ. ಪೂರ್ತಿಯಾಗಿ ಪ್ಲಾನ್ ಮಾಡಿ ಕಟ್ಟಿದ ಮನೆಗಳು, ರಸ್ತೆಗಳು, ರಸ್ತೆ ಪಕ್ಕದ ಸಾಲು ಮರಗಳು ಎಲ್ಲವೂ ಸ್ವಚ್ಛ, ಶುಭ್ರ. ಸೆಕ್ಯೂರಿಟಿಯಂತೂ ಹೇಳಲಸಾಧ್ಯ. ಸಾಮಾನ್ಯ ಜನರಿಗಿಂತ ಹೆಚ್ಚು ಪೋಲಿಸರು ಮತ್ತು ಪೋಲಿಸ್ ವೆಹಿಕಲ್ ಗಳು ಕಾವಲು ನಿಲ್ಲುವ ಜಾಗ.
ಇಂಥ ಸುಸಜ್ಜಿತ ಕೋಟೆಯೊಳಗೆ ಪ್ರಿಯಂವದಾ ರಾಜ್ ಳ ಪ್ರೈವೇಟ್ ಎಸ್ಟೇಟ್ ಇದೆ. ಅದೊಂದು ಅಬೇಧ್ಯ ಕೋಟೆ. ಪ್ರಿಯಂವದಾ ರಾಜ್ ಳ ಒಪ್ಪಿಗೆಯಿಲ್ಲದೆ ಮನುಷ್ಯನಿಗಿರಲಿ, ಪ್ರಾಣಿಗಳಿಗೂ ಒಳನುಸುಳಲು ಸಾಧ್ಯವಿಲ್ಲ. ಕಂಪೌಂಡಿನ ಸುತ್ತಲೂ AK-47 ಹಿಡಿದು ನಿಂತಿರುವ ಬ್ಲಾಕ್ ಕಮಾಂಡೋಸ್. ಇರುವ ಎರಡೂ ಗೇಟ್ ಗಳಲ್ಲಿ ನಾಲ್ಕು ನಾಲ್ಕರಂತೆ ಎಂಟು ಜನ ಆರ್ಮಿಯವರು. ಬರುತ್ತಿರುವ ವಾಹನಗಳು, ಓಡಾಡುವ ಮನುಷ್ಯರು ಎಲ್ಲವೂ ಡಿಟೆಕ್ಟರ್ ಮೂಲಕವೇ ಹಾದು ಹೋಗಬೇಕು.
ಒಬ್ಬ ಪ್ರಧಾನಿಗಿದ್ದಷ್ಟೇ ಸುರಕ್ಷತೆ, ರಕ್ಷಣೆ ವ್ಯವಸ್ಥೆ ಪ್ರಿಯಂವದಾ ರಾಜ್ ಗಿತ್ತು. ಇದನ್ನೆಲ್ಲಾ ಸಮ್ಮಿಶ್ರ ನಿಯಂತ್ರಿಸುತ್ತಿದ್ದ. ಸೆಕ್ಯುರಿಟಿ ಟೀಮಿಗೆ ಸೇರುವ ಆರ್ಮಿಯವರ ಪ್ರೊಫೈಲ್ ಕೂಡ ಸಮ್ಮಿಶ್ರ ಪರೀಕ್ಷಿಸಿ ಸರಿ ಎಂದ ಮೇಲೆ ಅವರು ಕಾವಲು ಕಾಯಲು ಅರ್ಹರಾಗುತ್ತಿದ್ದರು.
ಬೆಳಿಗ್ಗೆ ಬಂದು ಒಮ್ಮೆ ಎಲ್ಲ ಸೆಕ್ಯೂರಿಟಿ ಗಮನಿಸಿ ಎಲ್ಲರನ್ನೂ ಸರಿಯಾದ ಜಾಗಕ್ಕೆ ನೇಮಿಸಿ, ಮೆಟಲ್ ಡಿಟೆಕ್ಟರ್ ಗಳು ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸಿಯಾದ ಮೇಲೆಯೇ ಆತ ತನಗಾಗಿ ಇರುವ ಕೊಠಡಿಗೆ ಹೋಗಿ ಟೀ ಕುಡಿಯುತ್ತಾನೆ. ಪ್ರಿಯಂವದಾಳ ಪೂರ್ತಿ ದಿನಚರಿ ಅವನ ಬಳಿ ಇರುತ್ತದೆ. ಆಕೆ ಹೊರಹೋಗಬೇಕಾದರೆ ಅವಳ ಡ್ರೈವರ್ ಆತನೇ.
ಇದೆಲ್ಲದಕ್ಕಿಂತ ಹೆಚ್ಚಾಗಿ ಪ್ರಿಯಂವದಾ ರಾಜ್ ಹೊರಹೋಗುವಾಗ ದಿನ ಆಕೆಯು ಬಳಸುತ್ತಿದ್ದ ಕಾರ್ ಗೆ ಸಮ್ಮಿಶ್ರ ಕುದ್ದು ಗುಂಡು ಹಾರಿಸಿ ಗ್ಲಾಸ್ ಟೆಸ್ಟ್ ಮಾಡುತ್ತಿದ್ದ. ಅವನಿಗೆ ಗೊತ್ತು ಗ್ಲಾಸ್ ಒಡೆಯಿತು ಎಂದರೆ ಮೈಯೊಳಗೆ ಬುಲೆಟ್ ಇಳಿಯಲು ಎಷ್ಟು ಹೊತ್ತು ಬೇಕು? ಕೋಟೆಯ ಬಾಗಿಲು ಗಟ್ಟಿಯಿರುವವರೆಗಷ್ಟೆ ಕೋಟೆ ಗಟ್ಟಿ.
ವೇಗದಿಂದ ಬಂದ ಬುಲೆಟ್ ಗೆ ಗ್ಲಾಸ್ ಒಡೆಯಲಿಲ್ಲ ಎಂದರೆ ಬದುಕಿದಂತೆಯೆ. ಅದೂ ಅಲ್ಲದೇ ಯಾರಾದರೂ ಸ್ನೈಪರ್ ಉಪಯೋಗಿಸಿ ಹೊಡೆದರೂ ಇಷ್ಟು ಗಟ್ಟಿ ಗ್ಲಾಸನ್ನು ಒಡೆದು ಒಳ ಬರುವ ಹೊತ್ತಿಗೆ ಬುಲೆಟ್ ನಲ್ಲಿ ಶಕ್ತಿ ಉಳಿದಿರುವುದಿಲ್ಲ. ಅಲ್ಲದೇ ಬುಲೆಟ್ ನ ಆಂಗಲ್ ಸರಿದು ಗುರಿ ತಪ್ಪಿ ಹೋಗುತ್ತದೆ. ಆದ್ದರಿಂದ ಯಾರಾದರೂ ಗ್ಲಾಸ್ ಗೆ ಹಾನಿ ಮಾಡಿದರೆ ಗೊತ್ತಾಗಲಿ ಎಂದು ಈ ಮುಂದಾಲೋಚನೆ ವಹಿಸುತ್ತಿದ್ದ ಸಮ್ಮಿಶ್ರ.
ಅಂದೂ ಸಹ ಪ್ರಿಯಂವದಾ ಒಂದು ಹೊಸ ಕಟ್ಟಡದ ಉದ್ಘಾಟನೆಗೆ ಹೋಗುವುದಿದ್ದರಿಂದ ಸಮ್ಮಿಶ್ರ ತನ್ನ ಮುಂದಾಲೋಚನಾ ಕ್ರಮವನ್ನೆಲ್ಲ ಮುಗಿಸಿ ಒಳಬಂದ.
ಹಾಲ್ ನಲ್ಲಿ ಕುಳಿತು ಮಾತನಾಡುತ್ತಿದ್ದರು ಪ್ರಿಯಂವದಾ ರಾಜ್ ಮತ್ತು ಹಿಮಾಂಶು ರಾಜ್. ಸಮ್ಮಿಶ್ರನಿಗೆ ಹಿಮಾಂಶು ಎಂದರೆ ಅಷ್ಟಕ್ಕಷ್ಟೆ. ಕ್ರಿಯೆಟಿವಿಟಿ ಇಲ್ಲದ ಮನುಷ್ಯ. ರಾಜಕೀಯದಲ್ಲಿ ಸಕ್ರಿಯನಾದರೂ ಜನರ ನಾಡಿಮಿಡಿತ ಅರಿಯುವ ಮನುಷ್ಯನಲ್ಲ. ಮೊದಲಿನಿಂದಲೂ ಪ್ರಿಯಂವದಾ ರಾಜ್ ಳಂಥ ಅಮ್ಮನ ಪಾಲನೆ, ಸಲಹೆ ಸಿಕ್ಕರೂ ರಾಜಕೀಯದ ಹಾಸುಹೊಕ್ಕು ಅರ್ಥವಾಗಿಲ್ಲ ಆತನಿಗೆ.
ಅದೇನಿದ್ದರೂ ಪ್ರಿಯಂವದಾ ರಾಜ್ ಗೆ ಪ್ರಿಯಂವದಾ ರಾಜ್ ಳೇ ಸಾಟಿ. ಅವಳ ಹತ್ತಿರ ಕೆಲಸ ಮಾಡುವುದೂ ಒಂದು ಚಾಲೆಂಜ್. ಚಾಣಾಕ್ಷೆ ಅವಳು, ನಿಂತ ನಿಲುವಿನಲ್ಲೇ ಎದುರಿಗಿರುವ ಮನುಷ್ಯನನ್ನು ಇದ್ದಂತೆ ಓದಿ ಬಿಡುವ ಚಾಣಕ್ಷೆ. ಕಪಟತನ, ನಾಟಕ ಅವಳೆದುರು ಬಹಳ ಕಾಲ ನಿಲ್ಲುವುದಿಲ್ಲ.
ಸಮ್ಮಿಶ್ರ ಒಳ ಬರುತ್ತಲೇ "ಬಾ, ಬಾ ಸಮ್ಮಿಶ್ರ, Have a tea" ಮುಗುಳ್ನಗುತ್ತ ತುಂಬ ಅಕ್ಕರೆಯಿಂದ ಕರೆದಳು ಪ್ರಿಯಂವದಾ.
ಅಷ್ಟೆ ಸಲುಗೆಯಿಂದ "ಗುಡ್ ಮಾರ್ನಿಂಗ್" ಹೇಳಿ ಎದುರಿಗಿರುವ ಖುರ್ಚಿಯಲ್ಲಿ ಕುಳಿತ ಸಮ್ಮಿಶ್ರ. ಹಿಮಾಂಶು ಕೂಡ "ಗುಡ್ ಮಾರ್ನಿಂಗ್" ಹೇಳಿ ಎದ್ದು ನಿಂತ.
ಸಮ್ಮಿಶ್ರ ಬಂದನೆಂದರೆ ಆತ ಅಲ್ಲಿ ನಿಲ್ಲುವುದಿಲ್ಲ. ತಾಯಿಗೆ ತನಗಿಂತ ಸಮ್ಮಿಶ್ರನ ಮೇಲೆಯೇ ಪ್ರೀತಿ ಜಾಸ್ತಿ ಎಂದು ಗೊತ್ತಿದೆ.
"ನನಗೆ ಮುಖ್ಯವಾದ ಕೆಲಸವಿದೆ, ನೀವು ಮಾತನಾಡಿ" ಎಂದು ಹೊರನಡೆದ ಹಿಮಾಂಶು.
ಆತ ಹೋಗುವುದನ್ನೇ ನೋಡುತ್ತ ನಿಟ್ಟುಸಿರು ಬಿಟ್ಟಳು ಪ್ರಿಯಂವದಾ. ಅವಳ ನಿಟ್ಟುಸಿರಿನ ಅರ್ಥವನ್ನು ಬಲ್ಲ ಸಮ್ಮಿಶ್ರ. ಆದರೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. "11 ಗಂಟೆಗೆ ಕಟ್ಟಡ ಉದ್ಘಾಟನೆ ಇದೆ. ಹೊರಡಲು ರೆಡಿಯಾ?" ಕೇಳಿದ ಸಮ್ಮಿಶ್ರ.
"ಹಾ, ರೆಡಿಯೆನೋ ಇದ್ದೇನೆ ಸಮ್ಮಿಶ್ರ. ಆದರೆ ಈ ಸೆಲೆಬ್ರಿಟಿಯ, ರಾಜಕಾರಣದ ಬದುಕು ಸಾಕೆನಿಸಿದೆ ಸಮ್ಮಿಶ್ರ... ನೆಮ್ಮದಿಯ ಬದುಕು ಬೇಕೆನ್ನಿಸುತ್ತಿದೆ. ಎಷ್ಟು ತಲೆಮಾರು ತಿಂದರೂ ಖಾಲಿಯಾಗದಷ್ಟು ಕೂಡಿಟ್ಟಿದ್ದಾಗಿದೆ. ಹಿಮಾಂಶು ರಾಜಕೀಯವನ್ನು ಸಂಬಾಳಿಸಬಲ್ಲ. ನನಗೂ ವಯಸ್ಸಾಯಿತು. ದಿನದ ಜಂಜಾಟ ಸಾಕೆನ್ನಿಸುತ್ತಿದೆ" ಬೇಸರವಿತ್ತು ಅವಳ ಮಾತಿನಲ್ಲಿ.
ಆಶ್ಚರ್ಯದಿಂದ ಅವಳನ್ನೇ ನೋಡಿದ ಸಮ್ಮಿಶ್ರ. ಹತ್ತು ವರ್ಷದಲ್ಲಿ ಮೊದಲ ಬಾರಿ ಹೀಗೆ ಮಾತನಾಡುತ್ತಿರುವುದು ಅವಳು.
ಯಾವಾಗಲೂ ಸಮ್ಮಿಶ್ರ ಆಕೆಯನ್ನು ಚೆಸ್ ಆಟಗಾರನಂತೆ ಕಂಡಿದ್ದಾನೆ. ಪ್ಲಾನ್.. ಪ್ಲಾನ್.. ಪ್ಲಾನ್.. ಅದು ದುಡ್ಡು ಮಾಡಲಾಗಲೀ, ಅಧಿಕಾರ ಸಂಪಾದಿಸಲಾಗಲೀ ಅಲ್ಲ. ಅದಾಗಲೇ ಅವಳ ಕೈಯಲ್ಲಿದೆ. ವಿರೋಧ ಪಡಿಸುವುದು, ವಿರೋಧಿಗಳನ್ನು ಸೃಷ್ಟಿಸಿಕೊಳ್ಳುವುದು, ಅವರನ್ನು ಆಡಿಸುವುದು.. ಅದೊಂದು ಚಟ ಅವಳಿಗೆ. ಖುಷಿ ಪಡುತ್ತಾಳೆ. ತನ್ನ ಒಂದೊಂದು ಸಣ್ಣ ಗೆಲುವನ್ನೂ, ವೈರಿಗಳ ಸಣ್ಣ ಸಣ್ಣ ಸೋಲುಗಳನ್ನೂ ಆಕೆ ಇಷ್ಟಪಡುತ್ತಾಳೆ. ಅದಕ್ಕಾಗಿಯೇ ದಿನದ ಇಪ್ಪತ್ನಾಲ್ಕು ಗಂಟೆಯೂ ಪ್ಲಾನ್! ಪ್ಲಾನ್!! ಪ್ಲಾನ್!!!
ಅಂಥವಳು ಹೀಗೆ ಮಾತನಾಡಿದ್ದನ್ನು ಕೇಳಿ ಆಶ್ಚರ್ಯಗೊಂಡ ಸಮ್ಮಿಶ್ರ.
"ಕೆಲಸದ ಒತ್ತಡ ನಿಮ್ಮನ್ನು ಹೀಗೆ ಮಾತನಾಡಿಸುತ್ತಿದೆ. ನೀವು ಎರಡು ದಿನ ಕೂಡ ನಿವೃತ್ತಿ ಬದುಕು ಬದುಕಲಾರಿರಿ, ನನಗೆ ಗೊತ್ತು. ಆದರೂ ನೀವು ಹೇಳಿದ್ದಕಾಗಿ ನಿಮ್ಮ ಶೆಡ್ಯೂಲ್ ನಲ್ಲಿ ಸ್ವಲ್ಪ ಬದಲಾವಣೆ ತಂದು ವಿಶ್ರಾಂತಿ ಸಮಯವನ್ನು ಸೇರಿಸುತ್ತೇನೆ ರಾಜ್" ಎಂದ ಸಮ್ಮಿಶ್ರ.
"ನೀನು ಹೇಳಿದ್ದು ಸರಿಯೇನೋ... ನಡೆ.. ಇಂದಿನ ಕಾರ್ಯಕ್ರಮವನ್ನು ಮುಗಿಸೋಣ.." ಎಂದು ನಗುತ್ತ ಮೇಲೆದ್ದಳು ಪ್ರಿಯಂವದಾ.
ಇಬ್ಬರೂ ಮನೆಯಿಂದ ಹೊರಬರುತ್ತಲೇ ಹಿಮಾಂಶು ಮತ್ತೊಬ್ಬ ವ್ಯಕ್ತಿಯೊಡನೆ ಏನನ್ನೋ ಗಹನವಾಗಿ ಚರ್ಚಿಸುತ್ತಿದ್ದ.
ಆಕಡೆ ನೋಡಿದ ಸಮ್ಮಿಶ್ರನಿಗೆ ಕಿರಿಕಿರಿಯಾಯಿತು. ಆತನ ಮುಖದ ಮೇಲೆ ಪ್ರಶಾಂತತೆ ಹೋಗಿ ಕಸಿವಿಸಿ ತುಂಬಿಕೊಂಡಿತು. ಅದನ್ನು ಗಮನಿಸಿದ ಪ್ರಿಯಂವದಾ "ನಡೆ ಹೋಗೋಣ" ಎಂದು ಭುಜ ತಟ್ಟಿ ಬಲವಂತವಾಗಿ ಎಳೆದುಕೊಂಡು ಹೋದಳು.
ಹಿಮಾಂಶುವಿನ ಜೊತೆ ಅಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯನ್ನು ಸಮ್ಮಿಶ್ರ ಚೆನ್ನಾಗಿ ಬಲ್ಲ. ಕೇವಲ ಸಮ್ಮಿಶ್ರನಲ್ಲ. ದೆಹಲಿ, ಹರ್ಯಾಣ, ಉತ್ತರ ಪ್ರದೇಶ ಮೂರು ರಾಜ್ಯಗಳಲ್ಲೂ ಆತ ಯಾರೆಂದು ಎಲ್ಲರಿಗೂ ಗೊತ್ತು.
"ಸನ್ನಿ ಚಡ್ಡಾ".ಆತನ ಮೇಲೆ ಇಪ್ಪತೈದಕ್ಕೂ ಹೆಚ್ಚು ಕೊಲೆಯ ಆಪಾದನೆ ಇದೆ. ಹಪ್ತಾ ವಸೂಲಿ. ಕಾರ್ಪರೇಟ್, ರಿಯಲ್ ಎಸ್ಟೇಟ್ ಉದ್ಯಮಿಗಳ ಸುಲಿಗೆ, ಕಿಡ್ನಾಪಿಂಗ್.. ಒಂದಾ!? ಎರಡಾ!?
ಬರೋಬ್ಬರಿ ಆರೂವರೆ ಅಡಿ ಎತ್ತರದ ದಡೂತಿ ವ್ಯಕ್ತಿ. ಬಾಂಬ್ ತಯಾರಿಸುವಾಗ ಅದು ಕೈಯಲ್ಲೇ ಸಿಡಿದು ಎಡಗೈಲಿ ಮೂರು ಬೆರಳುಗಳೇ ಇಲ್ಲ. ಸಿಡಿದ ಬಾಂಬ್ ಆತನ ಮುಖವನ್ನು ಕೂಡ ಸಿಡಿಸಿ ಛಿದ್ರ ಮಾಡಿದೆ. ಅದರ ಗುರುತಾಗಿ ಮುಖದ ಮೇಲೆಲ್ಲಾ ಹೊಲಿಗೆಯ ಚಿತ್ತಾರವಿದೆ. ಇನ್ನೂ ಆತನ ಸಾಹಸ ಕಡಿಮೆಯಾಗಿಲ್ಲ. ಹೀಗೆ ಒಮ್ಮೆ ನಡೆದ Street Fight ನಲ್ಲಿ ಎದುರಿಗೆ ಬಂದ ವ್ಯಕ್ತಿಯ ತಲೆಯನ್ನು ಒಂದೇ ಗುದ್ದಿಗೆ ಒಡೆದು ಕೊಂದ ಮನುಷ್ಯ ಸನ್ನಿ ಚಡ್ಡಾ. National capital region ನಲ್ಲಿ ಆತನಿಗೆ ತಲೆ ಬಾಗದ ಮನುಷ್ಯರೇ ಇಲ್ಲ. ಒಂದು ತಲೆ ಬಾಗಬೇಕು ಇಲ್ಲಾ ಆತ ತಲೆ ತೆಗೆಯುತ್ತಾನೆ.
ಇದೆಲ್ಲ ಹಳೆಯ ಮಾತು. ಈಗ ಆತನ ಬಳಿಯೂ 6 ಸಾವಿರ ಕೋಟಿಯ ಆಸ್ತಿಯಿದೆ. ದೆಹಲಿ NCR ನಲ್ಲಿ ಆತನಿಗೆ 20 ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರಗಳಿವೆ. ಆರು ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ ಗಳು ಅದರ ಜೊತೆ ದಂಡಿಯಾಗಿ ಬರುವ ಹಪ್ತಾ.
ಈಗೀಗ ರಿಬ್ಬನ್ ಕಟ್ ಮಾಡಲು ಆತನೂ ಹೋಗುತ್ತಾನೆ. ರಿಯಲ್ ಎಸ್ಟೇಟ್ ನ ಕೂದಲು ಎಳೆಗಳ ಲೆಕ್ಕವೂ ಗೊತ್ತು ಆತನಿಗೆ. ಒಂದು ಕೋಟಿಯ ಮನೆ ತೆಗೆದುಕೊಂಡರೆ ಅದರ ಹತ್ತು ಪರ್ಸೆಂಟ್ ಅವನ ಕೈ ಸೇರಬೇಕು.
ಒಂದು ಕಡೆ ಅಪಾರ್ಟ್ ಮೆಂಟ್ ಉದ್ಘಾಟನೆಗೆ ಆತನನ್ನು ಕರೆದಿದ್ದರು. ಅದರ ಮುಖ್ಯಸ್ಥ ಈತನನ್ನು ಖುಷಿಗೊಳಿಸಿ ಹಪ್ತಾ ಕಡಿಮೆ ಕೊಡಬೇಕೆಂದು ಯೋಚಿಸುತ್ತಿದ್ದ. ಉದ್ಘಾಟನೆಗೆ ಬಂದ ಚಡ್ಡಾ ಕಣ್ಣಲ್ಲೇ ಅದಕ್ಕೆ ತಗಲುವ ಖರ್ಚು ಎಣಿಸಿದ್ದ. ಕಾರ್ಯಕ್ರಮ ಮುಗಿಸಿ ಹೊರಡುವಾಗ ಮುಖ್ಯಸ್ಥನ ಹೆಗಲ ಮೇಲೆ ಕೈ ಹಾಕಿ "ಎಷ್ಟು ಖರ್ಚಾಗಿದೆ? ತುಂಬಾ ಚೆನ್ನಾಗಿ ಬಂದಿದೆ ಅಪಾರ್ಟ್ಮೆಂಟ್.." ಎಂದ.
ಮುಖ್ಯಸ್ಥನಿಗೆ ಗೊತ್ತು ತಾನು ಎಷ್ಟು ಹೇಳುತ್ತೇನೆ ಅದರ ಹತ್ತು ಪರ್ಸೆಂಟ್ ಹೋಗುತ್ತದೆ. ಆತ ಸಂಕೋಚದಿಂದಲೇ "ಏನೋ ಕಷ್ಟಪಟ್ಟು ಕಟ್ಟಿದ್ದೀನಿ. ಇನ್ನೂರು ಕೋಟಿ ಆಗಿದೆ" ಎಂದ.
ಗಹಗಹಿಸಿ ನಕ್ಕ ಚಡ್ಡಾ. ಆತನ ಅಂದಾಜಿಗೆ ಏನಿದ್ದರೂ ಐದು ನೂರು ಕೋಟಿಯ ಹತ್ತಿರದ ಆಸ್ತಿ. ಜಾಗ ಮತ್ತು ಅಪಾರ್ಟ್ಮೆಂಟ್ ಸೇರಿ.
"ಜೀ.. ಮುನ್ನೂರು ಕೋಟಿ ತಗೋ.ಇದು ನನಗೆ. ನೂರು ಕೋಟಿ ಲಾಭ ನಿನಗೆ. ಬೇರೆಯದು ನೋಡಿಕೋ". ಅಷ್ಟೆ! ಚಡ್ಡಾನ ಮಾತೆಂದರೆ ಮಾತು. ಸಾಲದ ಹೊರೆ ತಾಳಲಾರದ ಮುಖ್ಯಸ್ಥ ಆತ್ಮಹತ್ಯೆ ಮಾಡಿಕೊಂಡ. ಚಡ್ಡಾನ ಮಾತಿಗೆ ಎದುರಾಡಿದ್ದರೂ ಅವನು ಬದುಕಿರುತ್ತಿರಲಿಲ್ಲ. ನಿಜವಾಗಿಯೂ ಐದು ನೂರು ಕೋಟಿಯ ಆಸ್ತಿಯೇ ಅದು. ಅಂತಹ ಚಡ್ಡಾ ಬಿಳಿ ಪೈಜಾಮ ಖಾದಿ ಹಾಕಿ ಓಡಾಡುತ್ತಾನೆ. ಆತ ಹಿಮಾಂಶುಗೆ ರೈಟ್ ಹ್ಯಾಂಡ್. ಸತ್ಯವೆಂದರೆ ಚಡ್ಡಾ ಹಿಮಾಂಶುವನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದ. ಪ್ರಿಯಂವದಾ ಇಲ್ಲದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತೋ!? ಅವಳೆಂದರೆ ಸನ್ನಿ ಚಡ್ಡಾ ಕೂಡ ತಲೆ ಬಾಗುತ್ತಿದ್ದ.
ಸಮ್ಮಿಶ್ರ ಬರುವ ಮೊದಲು ಚಡ್ಡಾ ಮತ್ತು ಆತನ ಚೇಲಾಗಳು ಅವಳ ಮನೆಯಲ್ಲಿ ಹೇಗೆ ಬೇಕೋ ಹಾಗೆ ಅಲೆದುಕೊಂಡಿದ್ದರು. ಸನ್ನಿ ಚಡ್ಡಾನ ಕಾರಿನ ಡಿಕ್ಕಿಯಲ್ಲಿ ಒಂದೆರಡು ಊರು ಸುಡುವಷ್ಟು ಬಾಂಬು, ಗುಂಡುಗಳು ಇದ್ದೇ ಇರುತ್ತಿದ್ದವು.
ಡಿಟೆಕ್ಟರ್ ಎಷ್ಟು ಕೂಗಿಕೊಂಡರೂ ಆತನನ್ನು ತಡೆಯುವವರು ಯಾರೂ ಇರಲಿಲ್ಲ. ಮಗನಿಗೆ ಒಂದೆರಡು ಬಾರಿ ಹೇಳಿದರೂ ಆತ ಕಿವಿಗೆ ಹಾಕಿಕೊಂಡಿರಲಿಲ್ಲ. ಸಮ್ಮಿಶ್ರ ಬರುತ್ತಲೇ ಹಿಮಾಂಶುಗೆ ಖಡಕ್ ವಾರ್ನಿಂಗ್ ಹಾಕಿದ್ದ, ಜೊತೆಗೆ ಚಡ್ಡಾನಿಗೂ ಕೂಡ. ಅಂದಿನಿಂದ ಚಡ್ಡಾನ ಹಿಂದಿರುವ ಚೇಲಾಗಳು, ಆತನ ಶಸ್ತ್ರಾಸ್ತ್ರಗಳು ಎಲ್ಲ ಗೇಟಿನಿಂದ ಹೊರಗೆ ನಿಲ್ಲುತ್ತಿದ್ದವು. ಕೇವಲ ಚಡ್ಡಾ ಅದೂ ನಿರಾಯುಧನಾಗಿ ಒಳಬರಲು ಅನುಮತಿ ಇತ್ತಿದ್ದ ಸಮ್ಮಿಶ್ರ.
ಅದಾದ ನಂತರವೂ ಬಹಳ ಸಲ ಹಿಮಾಂಶುಗೆ ಚಡ್ಡಾನ ಸಹವಾಸ ನಿನ್ನ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದೂ ಹೇಳಿದ್ದ.
ತನ್ನ ಮತ್ತು ಹಿಮಾಂಶುವಿನ ಮದ್ಯೆ ಇರುವ ಸಮ್ಮಿಶ್ರ ಎಂದರೆ ಚಡ್ಡಾನಿಗೂ ಆಗದು. ಸಮ್ಮಿಶ್ರ ಬಂದಾಗಿನಿಂದ ಆತನ ಅರ್ಧ ಸ್ವಾತಂತ್ರ್ಯ ಹೋಗಿತ್ತು. ಅದೂ ಅಲ್ಲದೇ ಪ್ರಿಯಂವದಾ ರಾಜ್ ಬಳಿ ತಲುಪುವುದಂತೂ ಅಸಾಧ್ಯವೇ ಆಗಿತ್ತು. ಆದ್ದರಿಂದಲೇ ಎರಡೆರಡು ಬಾರಿ ಸಮ್ಮಿಶ್ರನನ್ನು ಮುಗಿಸಿಬಿಡಬೇಕು ಎಂಬ ಪ್ಲಾನ್ ಕೂಡ ಹಾಕಿ, ವಿಫಲನಾಗಿದ್ದ. ಅದು ಸಮ್ಮಿಶ್ರನಿಗೂ ತಿಳಿದಿರುವ ವಿಷಯವೇ.
ಸಮ್ಮಿಶ್ರ ತನ್ನ ಬುದ್ದಿ ಉಪಯೋಗಿಸಿ ಆತನ ದಂಧೆಗೆ ಬೇಕಾದಷ್ಟು ಹೊಡೆತ ಕೊಟ್ಟಿದ್ದ. ನೋಯ್ಡಾದ ಮೆಟ್ರೋ ಸ್ಟೇಶನ್ ಬಳಿ ಏಳುತ್ತಿರುವ ಒಂದು ಸಾವಿರ ಕೋಟಿಯ ಪ್ರಾಜೆಕ್ಟ್ ಸ್ಟೇ ಬಂದು ನಿಂತಿತ್ತು. ಅವ್ಯವಹಾರ ನಡೆಯುತ್ತಿದೆ ಎಂದು ಎರಡು ಪಬ್ ಗಳು ಮುಚ್ಚಿದ್ದವು. ಇದರ ಹಿಂದೆ ಇರುವುದು ತಾನೇ ಎಂದು ಗೊತ್ತಾಗುವಂತೆ ಮಾಡಿದ್ದ ಸಮ್ಮಿಶ್ರ.
ನನ್ನ ಸುದ್ಧಿಗೆ ಬಂದರೆ ನಿನ್ನ ಸುತ್ತಲೂ ದಿಗ್ಬಂಧನ ಹಾಕಿ ಸುಡುತ್ತೇನೆ ಎಂಬ ತಣ್ಣನೆಯ ಸಂದೇಶವನ್ನು ಸನ್ನಿ ಚಡ್ಡಾಗೆ ಮುಟ್ಟಿಸಿದ ದಿನದಿಂದ ,ಚಡ್ಡಾ ಸಮ್ಮಿಶ್ರನನ್ನು ಮುಗಿಸುವ ಪ್ರಯತ್ನ ಕೈಬಿಟ್ಟಿದ್ದ. ಅವರಿಬ್ಬರ ಮಧ್ಯೆ ಹಸಿ ಹುಲ್ಲು ಹಾಕಿದರೂ ಸಹ ಬೆಂಕಿ ಹತ್ತಿಕೊಳ್ಳುವ ಪರಿಸ್ಥಿತಿ ಮುಂದುವರೆದುಕೊಂಡೇ ಬಂದಿತ್ತು.
ಅದಕ್ಕಾಗಿಯೇ ಬೆಳಿಗ್ಗೆ ಬೆಳಿಗ್ಗೆ ಆತನನ್ನು ಅಲ್ಲಿ ನೋಡುತ್ತಲೇ ಕಸಿವಿಸಿಕೊಂಡ ಸಮ್ಮಿಶ್ರ.
ಹನ್ನೊಂದು ಗಂಟೆಗೆ ಸರಿಯಾಗಿ ಉದ್ಘಾಟನಾ ಸಮಾರಂಭದ ಜಾಗಕ್ಕೆ ತಲುಪಿದರು ಸಮ್ಮಿಶ್ರ ಮತ್ತು ಪ್ರಿಯಂವದಾ.
ಹೈವೆಯ ಪಕ್ಕದಲ್ಲಿಯೇ ದೊಡ್ಡ ಅಪಾರ್ಟ್ ಮೆಂಟ್ ಎದ್ದು ನಿಂತಿತ್ತು. ಕಾರ್ ಪಾರ್ಕ್ ಮಾಡಿ ಪ್ರಿಯಂವದಾ ರಾಜ್ ಜೊತೆಗೆ ನಡೆದ ಸಮ್ಮಿಶ್ರ. ಬೆಂಗಾವಲು ಪಡೆಗೆ ಆತ ಮೊದಲೇ Instruction ಕೊಟ್ಟಿರುವುದರಿಂದ ಎರಡುಜನ ಕಾರಿನ ಬಳಿ ನಿಂತರೆ ಉಳಿದವರು ಅವರಿಬ್ಬರನ್ನು ಹಿಂಬಾಲಿಸಿದರು. ಮೂರು ತಾಸಿನ ಕಾರ್ಯಕ್ರಮವಿದೆ ಅಲ್ಲಿ. ಅದರ ನಂತರ ಮತ್ತೊಂದು ಸಣ್ಣ ಪ್ರೋಗ್ರಾಮ್. ಅದೇ ಅಪಾರ್ಟ್ ಮೆಂಟ್ ಪಕ್ಕದಲ್ಲಿಯೇ ಶುರುವಾಗುತ್ತಿರುವ ಮತ್ತೊಂದು ಅಪಾರ್ಟ್ ಮೆಂಟ್ ನ ಗುದ್ದಲಿ ಪೂಜೆ. ಮೂರೂ ಗಂಟೆಯವರೆಗೆ ಪ್ರಿಯಂವದಾ ಅಲ್ಲಿಯೇ ಇರುತ್ತಾಳೆ. ನಂತರ ಹೊರಟರೆ ಐದಕ್ಕೆಲ್ಲ ಮನೆ ಸೇರಿರುತ್ತಾಳೆ. ಇದು ಅಂದಿನ ದಿನಚರಿ. ಅದು ಕೇವಲ ಸಮ್ಮಿಶ್ರನಿಗೆ ಮಾತ್ರ ತಿಳಿದಿರುವ ವಿಷಯ. ಈ ಬಾರಿ ಗರುಡನಿಗು ತಿಳಿದಿತ್ತು ಆಕೆಯ ಪ್ರತೀ ಚಲನವಲನ. ಸಮಯ ಹತ್ತಿರವಾದಂತೆಲ್ಲ ಬೇಟೆಯಾಡುವ ಚಿರತೆಯಂತೆ ಸನ್ನದ್ಧನಾಗಿ ಕುಳಿತಿದ್ದ ಗರುಡ. ಆದರೆ ಎಂತಹ ಗರುಡನೇ ಆದರೂ ಬುಲೆಟ್ ಪ್ರೂಫ್ ಗ್ಲಾಸ್ ಭೇದಿಸುವುದು ಕಷ್ಟವೇ! ಅದು ಗರುಡನಿಗು ಗೊತ್ತು. ಆತ ನಿಖರವಾಗಿ ಗುರಿಯಿಡಬಲ್ಲ. ಕೈ ಕೂದಲೆಳೆಯಷ್ಟೂ ಸರಿಯದಂತೆ ಟ್ರಿಗರ್ ಒತ್ತಬಲ್ಲ. ಆದರೆ ಆತನೂ ಮನುಷ್ಯನೇ. ಬುಲೆಟ್ ಪ್ರೂಫ್ ಭೇದಿಸಬಲ್ಲ ಜಾದೂ ಮಾಡಲು ಹೇಗೆ ಸಾಧ್ಯ?
ಕಪ್ಪು ಜಗತ್ತಿನಲ್ಲಿ ಎಲ್ಲದಕ್ಕೂ ಉತ್ತರವಿದೆ. ಎಲ್ಲವೂ ಪಕ್ಕಾ ಪ್ಲಾನ್ ಪ್ರಕಾರವೇ ನಡೆಯುತ್ತವೆ. ಆದ್ದರಿಂದಲೇ ಗರುಡ ನಿಶ್ಚಿಂತೆಯಿಂದ ತನ್ನ ಕೆಲಸದ ಬಗ್ಗೆ ಮಾತ್ರ ಯೋಚಿಸುತ್ತಿದ್ದ. ಆತ ಯಾವ ಸಮಯಕ್ಕೆ ಏನಾಗಬೇಕು ಎಂಬುದನ್ನು ಮೊದಲೇ ಸೂಚಿಸಿದ್ದ. ಆತನ ಟೀಮ್ ಅದನ್ನು ವ್ಯವಸ್ಥಿತವಾಗಿ ಮಾಡುತ್ತದೆ. ಅದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಪ್ಲಾನ್ ಬಿ ಆಕ್ಟಿವೇಟ್ ಆಗುತ್ತದೆ.
ಪ್ರಿಯಂವದಾ ರಾಜ್ ಒಳಹೋಗಿ ಒಂದು ಗಂಟೆ ಕಳೆದಿರಬಹುದು. ಬೆಂಗಾವಲು ಪಡೆಯ ಇಬ್ಬರು ಗಾರ್ಡ್ ಗಳು ಅಲ್ಲಿಯೇ ನಿಂತು ಮಾತಿನಲ್ಲಿ ತೊಡಗಿದ್ದರು. ಬೆಂಗಾವಲು ಪಡೆಯಲ್ಲೂ ಬೇರೆ ಬೇರೆ ದರ್ಜೆಯ ಅಧಿಕಾರಿಗಳಿರುತ್ತಾರೆ. ಇವರೂ ಅಷ್ಟೆ. ಕೊನೆಯ ದರ್ಜೆಯ ಆಫಿಸರ್ ಗಳು. ಕಾರಿನ ಬಳಿ ನಿಲ್ಲುವುದು, ಟೀ ತರುವುದು, ಉಳಿದವರಿಗೆ ಸಹಾಯ ಇಂತ ಕೆಲಸಗಳು. ಬುಲೆಟ್ ಬಂದರೆ ಎದೆ ಕೊಡುವ ಚಾತಿಯ ಮನುಷ್ಯರಲ್ಲ.
ಅವರು ತಮ್ಮದೇ ಮಾತುಕತೆಯಲ್ಲಿ ತೊಡಗಿರುವಾಗ ಬದಿಯಲ್ಲಿ ನಡೆಯುತ್ತಿರುವ Construction site ನಿಂದ ಬರುತ್ತಿರುವ ಮಣ್ಣು ತುಂಬಿದ ಲಾರಿಯೊಂದು ಪ್ರಿಯಂವದಾ ರಾಜ್ ಳ ಕಾರು ನಿಲ್ಲಿಸಿದ ಜಾಗದ ಬಳಿ ಬರುತ್ತಲೇ Unload ಆಗಿಹೋಯಿತು. ಕಾರಿನ ಬಳಿ ಕಾಯುತ್ತ ನಿಂತ ಸೆಕ್ಯೂರಿಟಿಯವರು ನೋಡು ನೋಡುತ್ತಲೇ ಹುಡಿ ಮಣ್ಣಿನ ಧೂಳು ಆ ಪ್ರದೇಶವನ್ನೆಲ್ಲ ತುಂಬಿ ಬಿಟ್ಟಿತು. ಲಾರಿ ಒಮ್ಮೆಲೇ Unload ಅದ ರಭಸಕ್ಕೆ ಹಾರಿದ ಮಣ್ಣು ಮಿರಿ ಮಿರಿ ಮಿಂಚುತ್ತಿದ್ದ ಕಪ್ಪು ಕಾರಿನ ಮೇಲೂ ಸಿಡಿದು ಬಿತ್ತು.
ಕಾಯಲು ನಿಂತ ಇಬ್ಬರು ಗಾರ್ಡ್ಸ್ ಓಡಿ ಬಂದು ಲಾರಿ ಡ್ರೈವರ್ ಗೆ ಬಯ್ಯತೊಡಗಿದರು. ಆತ ರೋಡಿನ ಬದಿಯಲ್ಲಿ ಸಿಕ್ಕಿ ಬಿದ್ದಿದ್ದ ಲಾರಿಯ ವೀಲ್ ತೋರಿಸಿ, ರಸ್ತೆಯಲ್ಲಿ ಗುಂಡಿ ಇದ್ದಿದ್ದರಿಂದ ಹೀಗಾಗಿದೆ. ತಪ್ಪಾಯಿತು ಎಂದು ಅಂಗಾಲಾಚಿದ. ನಡೆಯುವುದು ನಡೆದು ಹೋಗಿತ್ತು. ಕಾರು ಮಣ್ಣು ಮತ್ತು ಧೂಳಿನಿಂದ ತುಂಬಿ ಹೋಗಿತ್ತು. ಲಾರಿಯವನು ಈಗಲೇ ಎಲ್ಲ ಸರಿ ಪಡಿಸುತ್ತೇನೆ ಎನ್ನುತ್ತ ಲಾರಿಯನ್ನು ಗುಂಡಿಯಿಂದ ಮೇಲೆಬ್ಬಿಸಿ ಹಿಂದೆಯೇ ಬರುತ್ತಿದ್ದ JCB ಯವನಿಗೆ ಮಣ್ಣನ್ನು ಆದಷ್ಟು ಬೇಗ ಲೋಡ್ ಮಾಡಲು ಹೇಳಿದ.
ಅಷ್ಟರಲ್ಲಿ ಲಾರಿಯವನು ಬಕೆಟ್ ನೀರು ತಂದು ಪ್ರಿಯಂವದಾ ರಾಜ್ ಳ ಕಾರನ್ನು ಚೆನ್ನಾಗಿ ಒರೆಸತೊಡಗಿದ.
ಸೆಕ್ಯೂರಿಟಿಗಿದ್ದ ಇಬ್ಬರೂ ಸ್ವಲ್ಪ ತಣ್ಣಗಾದರು. ಸಮ್ಮಿಶ್ರ ಬಂದಾಗ ಈ ಪರಿಸ್ಥಿತಿಯಲ್ಲಿರುವ ಕಾರನ್ನು ಹೇಗೆ ತೋರಿಸುವುದು ಎಂದು ಚಿಂತೆಗೊಂಡು ಲಾರಿ ಡ್ರೈವರ್ ಗೆ ಹಿಗ್ಗಾಮುಗ್ಗಾ ಬೈದಿದ್ದರು. ಆದರೆ ಲಾರಿ ಡ್ರೈವರನೇ ಕುದ್ದಾಗಿ ಇಷ್ಟು ಕಾಳಜಿ ವಹಿಸಿ ಕಾರು ಸ್ವಚ್ಚಗೊಳಿಸುತ್ತಿರುವುದನ್ನು ಕಂಡು ಅವರು ಸುಮ್ಮನೆ ಆತ ಮಾಡುತ್ತಿರುವುದನ್ನು ನೋಡುತ್ತಾ ನಿಂತಿದ್ದರು. ಆತ ನಾಜೂಕಿನಿಂದ ಕಾರಿನ ಮೇಲಿದ್ದ ಧೂಳನ್ನೆಲ್ಲ ಕೊಡವಿ, ಕೆಡವಿ, ಬಕೆಟ್ ನಲ್ಲಿದ್ದ ನೀರಿನಿಂದ ಕಾರನ್ನು ಒರೆಸತೊಡಗಿದ. ಲಾರಿಯ ಡ್ರೈವರ್ ಕೈಗೆ ಏಕೆ Glouse ಹಾಕಿಕೊಂಡು ಕಾರ್ ಒರೆಸುತ್ತಿದ್ದಾನೆ? ಲಾರಿಯ ಮೇಲೆ ಏಕೆ ಬಕೆಟ್ ನೀರನ್ನು ಇಟ್ಟುಕೊಂಡು ಓಡಾಡುತ್ತಾನೆ? ಎಂಬ ಸಣ್ಣ ಸಂಶಯವೂ ಬರಲಿಲ್ಲ ಸೆಕ್ಯೂರಿಟಿ ಯವರಿಗೆ . ಕಪ್ಪು ಜಗತ್ತಿನ ನಡೆಯೇ ಅಂತಹದು. ಕಲ್ಲಾಗಿ ನಿಂತ ಹಿಮದ ಅಡಿಯಲ್ಲಿ ತುಂಬಿ ಹರಿಯುವ ನದಿಗಳಂತೆ. ಸಂಶಯವೇ ಬರಲು ಸಾಧ್ಯವಿಲ್ಲ.
ಲಾರಿ ಡ್ರೈವರ್ ತಂದ ಬಕೆಟ್ ನಲ್ಲಿ ಇರುವುದು ಕೇವಲ ನೀರಲ್ಲ. ಹೈಡ್ರೋಫ್ಲೂರಿಕ್ ಆಸಿಡ್. ಹೈಡ್ರೋಫ್ಲೂರಿಕ್ ಆಸಿಡ್ ಎಂತಹ ಕಬ್ಬಿಣವನ್ನಾದರೂ ಕರಗಿಸಬಲ್ಲದು. ಆದರೆ ಇಲ್ಲಿ ಗ್ಲಾಸನ್ನು ಕರಗಿಸುವಂತಿಲ್ಲ. ಆದರೆ ಬುಲೆಟ್ ಪ್ರೂಫ್ ಅಂಶವನ್ನು ಸುಡಬೇಕು.ಹೈಡ್ರೋಫ್ಲೂರಿಕ್ ಅನ್ನು ನೀರಿನ ಜೊತೆ ಸೇರಿಸಿ ಅದನ್ನು ಬೇಕಾದಷ್ಟೇ ಡೈಲ್ಯೂಟ್ ಮಾಡಿ ಹೈಡ್ರೋಜನ ಫ್ಲೂರೈಡ್ ಅಂಶವನ್ನಾಗಿ ಮಾಡಲಾಗಿದೆ. ಗ್ಲಾಸ್ ಇದ್ದಂತೆ ಇರುತ್ತದೆ. ಆದರೆ ಅದಕ್ಕೆ ಯಾರಾದರೂ ಮುಷ್ಠಿ ಕಟ್ಟಿ ಗುದ್ದಿದರೂ ಪುಡಿ ಪುಡಿಯಾಗಿ ಬಿಡುತ್ತದೆ. ಅಂತಹ ಆಸಿಡ್ ಬಳಸಿ ಲಾರಿಯ ಡ್ರೈವರ್ ಅವಳ ಕಾರನ್ನು ಅಂಗುಲವೂ ಬಿಡದಂತೆ ಒರೆಸಿ ಮುಗಿಸಿದ್ದ. ಅಷ್ಟರಲ್ಲಿ JCB ಯವನು ಲಾರಿಗೆ ಮತ್ತೆ ಮಣ್ಣು ತುಂಬಿ ಮುಗಿಸಿದ್ದ. ಲಾರಿ ಡ್ರೈವರ್ ಕಾರಿನ ಅಕ್ಕಪಕ್ಕದಲ್ಲಿ ಬಿದ್ದಿದ್ದ ಮಣ್ಣನ್ನು ತೆಗೆದು ರೋಡಿನಲ್ಲಿರುವ ಗುಂಡಿಗೆ ತುಂಬಿ "ಇನ್ನು ಮುಂದೆ ಯಾರಿಗೂ ಹೀಗಾಗುವುದಿಲ್ಲ, ಹಾಳದವರು" ಎಂದು ಗುಂಡಿ ತೋಡಿದವರಿಗೆ ಬೈಯುತ್ತ ಸೆಕ್ಯೂರಿಟಿ ಗಾರ್ಡ್ಸ್ ಗೆ ಎರಡೆರಡು ಸಲಾಂ ಹೊಡೆದು ಲಾರಿ ಹತ್ತಿ ಹೊರಟುಹೋದ. ಅದರ ಹಿಂದೆಯೇ ಸದ್ದು ಮಾಡುತ್ತ ಹೊರಟು ಹೋಯಿತು JCB. ಮೊದಲಿನಂತೆ ಹೊಳೆಯುತ್ತಿತ್ತು ಪ್ರಿಯಂವದಾಳ ಕಾರು. ಇಂಥದೊಂದು ನಡೆಯಿತೆಂದು ಯಾರಿಗೂ ಗೊತ್ತಾಗಲು ಸಾದ್ಯವಿಲ್ಲ. ಸೆಕ್ಯೂರಿಟಿಯವರು ಕಾರ್ ನ ಒಂದು ರೌಂಡ್ ಹೊಡೆದು ಮತ್ತೆ ಮರದ ನೆರಳಿನಲ್ಲಿ ಕುಳಿತು ಮಾತುಕತೆ ಮುಂದುವರೆಸಿದರು. ಆಗ ಮಧ್ಯಾಹ್ನ ಮೂರು ಗಂಟೆ. ದೆಹಲಿಯ ಹೊಟೆಲ್ ಒಂದರಲ್ಲಿ ಊಟ ಮಾಡುತ್ತಿದ್ದ ಗರುಡನ ಮೊಬೈಲಿಗೆ ಸಣ್ಣ ಸಂದೇಶವೊಂದು ಬಂದಿತು. "ಶಿವಾಜಿ ಅಫಜಲ್ ಖಾನನ ಪ್ರತಾಪಘಡ ಕೋಟೆಯನ್ನು ಭೇದಿಸಿದ್ದಾನೆ."
ಗರುಡನ ಮುಖದಲ್ಲಿ ಮುಗುಳ್ನಗು ಮೂಡಿತು. ಬಿಲ್ ಪೇ ಮಾಡಿ ಹೊಟೆಲ್ ನಿಂದ ಹೊರಬಿದ್ದ ಗರುಡ.
ತಮ್ಮ ಕಾರ್ಯಕಮದ ಕೆಲಸವನ್ನೆಲ್ಲಾ ಮುಗಿಸಿ ಬಂದರು ಪ್ರಿಯಂವದಾ ಮತ್ತು ಸಮ್ಮಿಶ್ರ. ಸಮ್ಮಿಶ್ರ ಡ್ರೈವರ್ ಸೀಟಿನಲ್ಲಿ ಕುಳಿತು ಕಾರ್ ರಿವರ್ಸ್ ತೆಗೆದುಕೊಂಡ. ದಣಿದ ದೇಹವನ್ನು ಸೀಟಿಗೋರಗಿಸಿ ಕಣ್ಣು ಮುಚ್ಚಿದಳು ಪ್ರಿಯಂವದಾ. ಬೆಂಗಾವಲು ಪಡೆ ವಾಹನಗಳು ಅವರನ್ನು ಹಿಂಬಾಲಿಸಿದವು.
ಟಿಕ್.. ಟಿಕ್.. ಟಿಕ್...
ನಮ್ಮ ನಿಮ್ಮ ನಡುವೆ...

"ಇಲ್ಲಿ ಷೇರ್ ವಹಿವಾಟು ಮಾಡಲಾಗುವುದು" ಎಂದು ಬೋರ್ಡ್ ತೂಗಿ ಹಾಕಿದ್ದ ಮೂರಂತಸ್ತಿನ ಕಟ್ಟಡದ ಎದುರು ನಿಂತಿದ್ದ ಶಾಸ್ತ್ರಿ. ಆತನ ಕಣ್ಣುಗಳು ತನಗೆ ಬೇಕಾದ ವ್ಯಕ್ತಿಯನ್ನೇ ಅರಸುತ್ತಿತ್ತು. ಇನ್ನು ತನಗೆ ಉಳಿದಿರುವುದು 36 ಗಂಟೆಗಳು ಮಾತ್ರ. ಒಂದು ಲಕ್ಷ ಸಂಪಾದಿಸಬೇಕು, Business ಮಾಡಬಹುದು ಆದರೆ ಯಾರಿಗೂ ಮೋಸ ಮಾಡದೆ ಒಂದು ಲಕ್ಷ ಸರೋವರಾಳ ಕೈಲಿಡಬೇಕು. ಅದಾಗಲೇ ಅವನ ಮನಸ್ಸಿನಲ್ಲಿ ಉಪಾಯವೊಂದು ಚಿಗುರಿ ನಿಂತಿತ್ತು. ಹಿಂದಿನ ದಿನ ಸಂಜೆ ಸರೋವರಾಳ ಬಳಿ ಪಂಥ ಕಟ್ಟಿ ಮನೆಗೆ ಬರುತ್ತಲೇ ಪೇರಿಸಿಟ್ಟ ಪೇಪರ್ ಗಳ ಗಂಟು ಬಿಚ್ಚಿದ್ದ ಶಾಸ್ತ್ರಿ.
ಷೇರ್ ಮಾರುಕಟ್ಟೆ ಎಂದರೆ ಹುಚ್ಚು ಆತನಿಗೆ. National Stock Exchange ಇಂದ ಹೊರಬರುವ ಪತ್ರಿಕೆಯನ್ನು ದಿನವೂ ಓದುವ ಹವ್ಯಾಸ ಅವನಿಗೆ. ಈ ದಂಧೆಗಿಳಿದರೆ ದುಡ್ಡು ಗಳಿಸುವುದು ದೊಡ್ಡ ವಿಷಯವಲ್ಲ ಎಂದು ಗೊತ್ತವನಿಗೆ. ಆತ ಮಾಡಿದ, ಮಾಡುವ Predection ಗಳು ಬಹುತೇಕ ಸರಿಯಾಗಿಯೇ ಇರುತ್ತಿದ್ದವು. ಶಾಸ್ತ್ರಿಯ ಪ್ರಕಾರ ಷೇರ್ ವ್ಯವಹಾರವು ಒಂದು ಅಕ್ರಮವೇ. ಅದಕ್ಕಾಗಿ ಆತ ಆ ದಂಧೆಗೂ ಕೈ ಹಾಕಿರಲಿಲ್ಲ. ಈಗ ಸಮಯ ಬಂದಿದೆ. Business ಮಾಡಬೇಕು. ಸರೋವರಾಳ ಕೈಯಲ್ಲಿ ಲಕ್ಷ ಇಡಬೇಕು. ಷೇರುಗಳನ್ನು ಕೊಳ್ಳಲು Bank Account, Demat Account ಎಲ್ಲ ಬೇಕು. ಅವುಗಳ ಪ್ರೋಸೆಸ್ಸಿಂಗ್ ನಡೆಯಲು ಏನೆಂದರೂ ಹದಿನೈದು ದಿನವಾದರೂ ಬೇಕು. ಅಷ್ಟು ಸಮಯವಿಲ್ಲ. ಶಾಸ್ತ್ರಿಯ ಬುದ್ಧಿಗೆ ಸವಾಲಾಗಿರುವ ವಿಷಯ.
ಶಾಸ್ತ್ರಿ ಹಳೆಯ ಪೇಪರ್ ಪುಟಗಳನ್ನು ತಿರುವಿ ಹಾಕತೊಡಗಿದ. ದಿನೇ ದಿನೇ ಏರುತ್ತಿರುವ ಡಾಲರ್ ಬೆಲೆ, ಕುಸಿಯುತಿರುವ ರೂಪಾಯಿ ಹಿನ್ನೆಲೆ, ಬದಲಾಗುತ್ತಿರುವ ಹಣದುಬ್ಬರದ ವೈಪರಿತ್ಯ. ಕಣ್ಣ ಮುಂದೆ ಹಾದುಹೋದವು ಒಂದೊಂದಾಗಿ.
ಆರ್ಥಿಕ ತಜ್ಞರು ಏನು ಮಾಡುತ್ತಿದ್ದಾರೆ? ತಮ್ಮ ಆರ್ಥಿಕ ಸ್ಥಿತಿಗೂ, ದೇಶದ ಆರ್ಥಿಕ ಪರಿಸ್ಥಿತಿಗೂ ವ್ಯತ್ಯಾಸ ಗೊತ್ತಿಲ್ಲದವರು ದೇಶದ ಹಣಕಾಸಿನ ವ್ಯವಸ್ಥೆಯನ್ನು ನಿಯಂತ್ರಿಸುತ್ತಾರೆ, ರೂಪಿಸುತ್ತಾರೆ. ಇವರೆಂದೂ Star Hotel ಬಿಟ್ಟು ಹೊರಗಡೆ ತಿಂದವರಲ್ಲ. Audi, Benz ಬಿಟ್ಟು ಬಿಸಿಲಲ್ಲಿ ಓಡಾಡಿದವರಲ್ಲ. ಇಂಥವರು ಮೂವತ್ತು ರೂಪಾಯಿಗಳಲ್ಲಿ ಮೂರು ಹೊತ್ತು ಊಟ ಮಾಡಬಹುದು, ಹದಿನೈದು ರೂಪಾಯಿಯಿದ್ದರೆ ಒಂದು ದಿನ ಕಳೆಯಬಹುದು ಎಂದು ವಿತಂಡವಾದ ಮಂಡಿಸುತ್ತಾರೆ. ಇದು ಅಜ್ಞಾನವಾ!? ಅಥವಾ ಅಧಿಕಾರದ ಹುಚ್ಚು ಏರಿಸಿದ ನಶೆಯಾ!? ಯೋಚಿಸುವವರು ಬಹಳ ಕಡಿಮೆ. ಅದಕ್ಕೇ ಇಂಥ ಹೇಳಿಕೆ ನೀಡುವವರೇ ಇನ್ನೂ ದೇಶ ಆಳುತ್ತಿದ್ದಾರೆ.
ಶಾಸ್ತ್ರಿ ಮಿಂಚಿಗಿಂತ ವೇಗವಾಗಿ ಯೋಚಿಸುತ್ತಿದ್ದ. ಪ್ರತೀ ಪೇಪರ್ ನ ಪ್ರತೀ ಪುಟವನ್ನೂ ಮಗುಚಿ ಹಾಕುತ್ತಿದ್ದ. ಒಂದು ಸಣ್ಣ ಕಿಡಿ ಸಾಕು ಊರನ್ನೇ ಸುಡಲು, ಅದು ಶಾಸ್ತ್ರಿಯಂತ ಬುದ್ಧಿವಂತನಿಗೆ ಒಂದು ಸ್ಪಾರ್ಕ್ ಸಾಕು. ಅದನ್ನೇ ಹುಡುಕುವುದರಲ್ಲಿ ಮಗ್ನನಾಗಿದ್ದ ಶಾಸ್ತ್ರಿ.
ಏಕ್ಸಾಮಗಳ ಹಿಂದಿನ ರಾತ್ರಿ ಪೂರ್ತಿ ಪುಸ್ತಕ ತಿರುವಿ ಹಾಕಿ ಮರುದಿನ ಎಕ್ಸಾಮ್ ಗೆ ಹೋಗದೇ ಮಲಗುವ ಮನುಷ್ಯ ಆತ. "ಯಾಕಪ್ಪ ಶಾಸ್ತ್ರಿ, ಎಕ್ಸಾಮ್ ಅಟೆಂಡ್ ಮಾಡಿಲ್ಲ??" ಕನ್ನಡಕ ಮೇಲೆ ಕೆಳಗೆ ಮಾಡುತ್ತಾ ಕೇಳಿದ್ದರು ಪ್ರೊಫೆಸರ್.
"ಎಲ್ಲ ಓದಿದ ಮೇಲೆ ನೀವೇನು ನನ್ನ ಟೆಸ್ಟ್ ಮಾಡುವುದು?" ದಿಟ್ಟವಾಗಿ ಹೇಳಿದ್ದ ಶಾಸ್ತ್ರಿ. ಇಂಟರ್ನಲ್ ಮಾರ್ಕ್ಸ್ ಗಾಗಲೀ, ಫೈನಲ್ ಎಕ್ಸಾಮ್ ಗಾಗಲೀ ಎಂದು ತಲೆಕೆಡಿಸಿಕೊಂಡ ಮನುಷ್ಯನಾಗಿರಲಿಲ್ಲ ಆತ. ಬದುಕಲು ಕಲಿಸುವುದೇ ವಿದ್ಯೆ ಅವನ ಪ್ರಕಾರ.
ಷೇರ್ ಬೆಲೆಗಳ ಏರಿಳಿತವನ್ನು ನೋಡಿಕೊಂಡಿದ್ದ ಶಾಸ್ತ್ರಿಯ ಕಣ್ಣುಗಳು ಒಮ್ಮೆಲೇ ಹೊಳೆದವು.
"ಬಿಳಿ ಬಿಳಿ ಕೋಳಿ ಮೊಟ್ಟೆ ಗ್ರೂಪ್ಸ್". "BBKM groups". ವರ್ಷಗಳ ಹಿಂದೆ ಪ್ರಾರಂಭವಾದ ಕೋಳಿ ಮೊಟ್ಟೆ ಮಾರಾಟ ಮಾಡುವ ಕಂಪನಿ. ಅದನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲು ಅದರ ಮ್ಯಾನೇಜಮೆಂಟ್ ಷೇರು ಬಿಡುಗಡೆ ಮಾಡಿತ್ತು. ಐವತ್ತು ರೂಪಾಯಿ ಮುಖಬೆಲೆಯ ಹತ್ತು ಲಕ್ಷ ಷೇರುಗಳನ್ನು ಮಾರುಕಟ್ಟೆಗೆ ಬಿಟ್ಟಿದ್ದರು.
ಅಂದಿನ ಆ ಕಂಪನಿಯ ಮ್ಯಾನೇಜಮೆಂಟ್ ಮತ್ತು ಕಂಪನಿಯ ವ್ಯಾಪಾರ ಚೆನ್ನಾಗಿಯೇ ಇದ್ದಿದ್ದರಿಂದ ಷೇರುಗಳು ಮಾರಾಟವಾಗಿದ್ದವು. ಅದರ ನಂತರ ಮೂರು ತಿಂಗಳು ಕಂಪನಿಯ ವ್ಯಾಪಾರ ಚೆನ್ನಾಗಿಯೇ ನಡೆದು ಷೇರಿನ ಬೆಲೆ ಐವತ್ತರಿಂದ ಎಂಬತ್ತಾಗಿತ್ತು. ಇದರಿಂದ ಆ ಕಂಪನಿಯ ಷೇರಿನ ವ್ಯಾಪಾರ ಜೋರಾಗಿಯೇ ಇತ್ತು. ಕೊಡು- ಕೊಳ್ಳುವಿಕೆಯು ಚೆನ್ನಾಗಿದ್ದ ಆ ದಿನದಲ್ಲಿಯೇ ಒಂದು ಅವಘಡ ನಡೆದಿತ್ತು.
ಮೊಟ್ಟೆಗಾಗಿ ಸಾಕಿದ ಕೋಳಿಗಳಿಗೆ ಭೀಕರ ರೋಗ ತಗುಲಿ ಒಂದು ವಾರದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಕೋಳಿಗಳು ಸತ್ತಿದ್ದವು. ರೋಗ ತಗುಲಿದ ಕೋಳಿಗಳ ಮೊಟ್ಟೆಗಳೆಂದು ಅದನ್ನು ತೆಗೆದುಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಒಂದು ವಾರದಲ್ಲಿ ಮೂವತ್ತು ಲಕ್ಷದಷ್ಟು ನಷ್ಟವಾಗಿತ್ತು. ಇದನ್ನು ತಾಳಲಾರದೆ ಅದರ ಮುಖ್ಯಸ್ಥ ಹೃದಯಾಘಾತವಾಗಿ ತೀರಿಕೊಂಡ. ಎಲ್ಲ ಪೇಪರ್ ಗಳ ಮುಖಪುಟದಲ್ಲಿ ಪ್ರಕಟಗೊಂಡಿತು. ತಕ್ಷಣವೇ BBKM Groups ನ ಷೇರು ದೊಡ್ಡ ಪ್ರಮಾಣದಲ್ಲಿ ಹೊಡೆತ ತಿಂದು ತೆಗೆದುಕೊಳ್ಳುವವರೇ ಇಲ್ಲದಂತಾಯಿತು. ಒಮ್ಮೆಲೇ ಇಷ್ಟು ದುರಂತಗಳನ್ನು ಎದುರಿಸುವ ಛಾತಿ ಇಲ್ಲದ ಮ್ಯಾನೇಜಮೆಂಟ್ ಕಾರಣದಿಂದಾಗಿ ವ್ಯಾಪಾರವು ದೊಡ್ಡ ಪ್ರಮಾಣದಲ್ಲಿ ಇಳಿಮುಖವಾಗತೊಡಗಿತು. ಹಾಗೆಯೇ ಷೇರಿನ ಬೆಲೆಯೂ ಕೂಡಾ. ಮತ್ತೆ ಅಷ್ಟೊಂದು ಕೋಳಿಗಳನ್ನು ಖರೀದಿಸುವುದು ಸುಲಭದ ಕೆಲಸವಾಗಿರಲಿಲ್ಲ. ಷೇರಿನ ಬೆಲೆ ಇಪ್ಪತ್ತು ರೂಪಾಯಿಗೆ ಇಳಿದಿತ್ತು. ಕೊಡುವವರಿದ್ದರೂ ತೆಗೆದುಕೊಳ್ಳುವವರಿರಲಿಲ್ಲ.
ಕಂಪನಿ ದಿವಾಳಿ ಎಂದು ಘೋಷಿಸಿ ಸರ್ಕಾರ ಅದನ್ನು ಮುಟ್ಟುಗೋಲು ಹಾಕದಂತೆ ನೋಡಿಕೊಳ್ಳಲು ಬಹಳವೇ ಪ್ರಯತ್ನಿಸುತ್ತಿದ್ದರು ಮ್ಯಾನೇಜಮೆಂಟ್ ನಲ್ಲಿ ಉಳಿದುಕೊಂಡವರು. ಹೇಗೂ ಮುಚ್ಚಿಹೋಗುವ ಕಂಪನಿಯೇ ಇದು ಎಂದು ಮ್ಯಾನೇಜಮೆಂಟ್ ನ ಸದಸ್ಯರು ತಮ್ಮಲ್ಲಿರುವ ಅಳಿದುಳಿದ ಷೇರುಗಳನ್ನು ಕೂಡಾ ಸಾಗಹಾಕಿ ಕೈ ತೊಳೆದುಕೊಳ್ಳಬೇಕೆಂದು ನೋಡುತ್ತಿದ್ದರು.
ನೋಡು ನೋಡುತ್ತಲೇ ನಾವಿಕನಿಲ್ಲದ ಹಡಗಿನಂತಾಗಿತ್ತು BBMK Groups ಈಗ ಅದರ ಷೇರಿನ ಬೆಲೆ ಹತ್ತು ರೂಪಾಯಿಗೆ ಇಳಿದಿತ್ತು. ಇಂದೋ, ನಾಳೆಯೋ ಕಂಪನಿ ಮುಚ್ಚುವುದು, ನಂತರ ಅದರ ಹರಾಜು ನಡೆದು, ಬಂದ ದುಡ್ಡು ಎಷ್ಟೇ ಆದರೂ ಅದನ್ನು ಎಲ್ಲ ಷೇರ್ ಹೋಲ್ಡರ್ ಗಳಿಗೆ ಸಮನಾಗಿ ಹಂಚಿ ಬಿಡುತ್ತದೆ ಸರ್ಕಾರ.
ಶಾಸ್ತ್ರಿಯ ಮುಖದಲ್ಲಿ ನಗು ಮೂಡಿತು. ಮುಚ್ಚಿ ಹೋಗುತ್ತಿರುವ ಈ ಕಂಪನಿಯೇ ತನಗೆ ಆಧಾರ ಎಂದುಕೊಂಡ ಶಾಸ್ತ್ರಿ. ಆ ಕಂಪನಿಯ ಎಲ್ಲ ವಿವರಗಳನ್ನೂ ಮತ್ತೊಮ್ಮೆ ಓದಿಕೊಂಡ ಶಾಸ್ತ್ರಿ ಮತ್ತೇನೋ ಯೋಚನೆ ಬಂದು ತನಗೆ ಅಗತ್ಯವಿರುವಷ್ಟೇ ವಿವರಗಳನ್ನು ಉಳಿಸಿಕೊಂಡು ಹಳೆಯ ಪೇಪರ್ ಗಳನ್ನು ಮತ್ತೆ ಅದರ ಜಾಗದಲ್ಲಿಯೇ ಇಟ್ಟು ಹಾಸಿಗೆ ಸೇರಿದ್ದ.
ಈಗ ಅದೇ ವಿವರಗಳಿರುವ ಪೇಪರ್ ಹಿಡಿದು ಷೇರ್ ವಹಿವಾಟು ನಡೆಯುವ ಆ ಕಟ್ಟಡದ ಎದುರು ನಿಂತಿದ್ದ. ಸಿಟ್ಟಿನಿಂದ ಉಸಿರು ಬಿಡುತ್ತಿರುವ ದೊಡ್ಡ ಗೂಳಿಯ ಪ್ರತಿಮೆಯೊಂದಿತ್ತು. ಬುಲ್!! ಇಂಡಿಯಾದ ಷೇರು ಮಾರುಕಟ್ಟೆಯ ಪ್ರತೀಕ. ಸಿಟ್ಟಿನಿಂದ ಗುಟುರು ಹಾಕುತ್ತಿರುವ ಗುಳಿಯ ಮೇಲೆ ಕುಳಿತು ಸವಾರಿ ಮಾಡಲು ಶಕ್ತಿ ಬೇಡ, ಯುಕ್ತಿ ಬೇಕೆಂದುಕೊಂಡ ಶಾಸ್ತ್ರಿ. ವಾರನ್ ಬಫೆಟ್!! ತನ್ನ ಎಂಟನೆಯ ವಯಸ್ಸಿನಲ್ಲಿ ಮೂರು ಷೇರು ಖರೀದಿಸಿ ಅದನ್ನು ಮೂರು ರೂಪಾಯಿ ಲಾಭದಲ್ಲಿ ಮಾರಿದಾತ. ಆಮೇಲೆ ಒಮ್ಮೆಯೂ ತಿರುಗಿ ನೋಡಿದವನಲ್ಲ. ಜಗತ್ತಿನ ದೊಡ್ಡ ದೊಡ್ಡ ಕಂಪನಿಗಳ ಬಹುತೇಕ ಪಾಲು ಷೇರುಗಳು ಆತನ ಬಳಿ ದಂಡಿಯಾಗಿ ಬಿದ್ದಿವೆ. ಆತ ಷೇರು ಮಾರುಕಟ್ಟೆಯನ್ನೇ ನಿಯಂತ್ರಿಸಬಲ್ಲ ವ್ಯಕ್ತಿ. ಯೋಚಿಸುತ್ತ ನಿಂತಿದ್ದ ಶಾಸ್ತ್ರಿ ಅಷ್ಟರಲ್ಲಿ ನಡೆಯಿತು ಆ ಘಟನೆ.
ಕಟ್ಟಡದ ಒಳಗಿನಿಂದ ಸೆಕ್ಯೂರಿಟಿಗಳು ಒಬ್ಬನನ್ನು ಎಳೆತಂದು ಹೊರಗೆ ಹಾಕಿದರು. "ಇನ್ನೊಮ್ಮೆ ಈಕಡೆ ಕಾಲಿಟ್ಟರೆ ಕಾಲು ಮುರಿದು ಬಿಡುತ್ತೇವೆ" ಎಂದು ಹೆದರಿಸುತ್ತಿದ್ದರು. ಆತ ಹಾಕಿದ ಡ್ರೆಸ್ ಕೋಡ್ ನೋಡಿದರೆ ಒಳ್ಳೆಯ ಸ್ಥಿತಿವಂತನೆಂದು ತೋರಿಸುತ್ತಿತ್ತು. ಆದರೆ ಆತನ ಮುಖ ನೋಡಿದರೆ ಹಾಗೆ ಕಾಣಲಿಲ್ಲ. ಬಿಕ್ಕುತ್ತಿದ್ದ ಆತ. ತನಗೆ ಬೇಕಾದ ಮನುಷ್ಯ ಇಷ್ಟು ಬೇಗ ಸಿಕ್ಕಿದ್ದಕ್ಕೆ ದೇವರಿಗೆ ಮನಸ್ಸಿನಲ್ಲೇ ಕೃತಜ್ಞತೆ ಹೇಳಿಕೊಂಡ ಶಾಸ್ತ್ರಿ.
ಬಿಕ್ಕುತ್ತಲೇ ಅವಾಚ್ಯ ಶಬ್ಧಗಳಿಂದ ಬಯ್ಯುತ್ತಿದ್ದವನ ಬಳಿ ಹೋಗಿ ಕುಳಿತ ಶಾಸ್ತ್ರಿ. ಅವನಿಗೂ ಹೇಳಿಕೊಳ್ಳಲು ಒಂದು ಮನಸ್ಸು ಬೇಕಾಗಿತ್ತು. "ಹೋಯ್ತು ಸಾರ್, ಎಲ್ಲ ಹೋಯ್ತು, ತಿಂದು ಬಿಟ್ರು ಸಾರ್ ನನ್ನ ದುಡ್ಡನ್ನ" ಬಿಕ್ಕುತ್ತಲೇ ಇದ್ದ.
"ಎಷ್ಟು ಹೋಯ್ತು??"
"ಹತ್ತು ಲಕ್ಷ"
ಅದೇನೂ ದೊಡ್ಡ ಮೊತ್ತವಲ್ಲ. ಕೋಟಿಗಟ್ಟಲೆ ಕಳೆದುಕೊಂಡವರು ಮೈ ಕೊಡವಿಕೊಂಡು ಹೋಗಿಬಿಡುತ್ತಾರೆ ಇಲ್ಲಿ. ಈತನ ಹತ್ತು ಲಕ್ಷ ಲಾಸ್ ಆಗಿದೆ. ಅದಕ್ಕೆ ಒಳಗಡೆ ಹೋಗಿ ರಂಪ ಮಾಡಿದ್ದಾನೆ. ಹೋಗುತ್ತಾ ಬರುತ್ತಾ ಸಲಾಂ ಹೊಡೆಯುವ ಗಾರ್ಡ್ ಗಳು ಹೊಡೆದು ಹೊರಹಾಕಿದ್ದಾರೆ. ಹಿಂದಿನಿಂದ ಬಲವಾಗಿ ನೂಕಿದ್ದರಿಂದ ನೆಲಕ್ಕೆ ಬಿದ್ದು ಕೈ ತರಚಿ ರಕ್ತ ಬರುತ್ತಿತ್ತು.
"ಏಳಿ, ಟೀ ಕುಡಿಯುತ್ತ ಮಾತನಾಡೋಣ" ಶಾಸ್ತ್ರಿ ಆತನನ್ನು ಹಿಡಿದೆಬ್ಬಿಸಿದ. ಅವನಿಗೆ ಪೂರ್ತಿಯಾಗಿ ತನ್ನ ಕಥೆಯನ್ನು ಹೇಳುವವರೆಗೆ ಸಮಾಧಾನವಿರಲಿಲ್ಲ. "ಸರಿ" ಎನ್ನುತ್ತಾ ಶಾಸ್ತ್ರಿಯನ್ನು ಹಿಂಬಾಲಿಸಿದ. ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಗೂಡಂಗಡಿಗೆ ಹೋಗಿ ಕುಳಿತರು.
"ಸಿಗರೇಟ್?" ಎಂದ ಶಾಸ್ತ್ರಿ.
"ಹಾ, ಅಣ್ಣಾ ಒಂದು ಸಿಗರೇಟ್" ಎಂದ.
ಸಣ್ಣ ಹುಡುಗನೊಬ್ಬ ಒಂದು ಸಿಗರೇಟ್, ಎರಡು ಟೀ ಕೊಟ್ಟು ಹೋದ.
ಒಂದು ಸಿಪ್ ಟೀ ಕುಡಿದು ಸಿಗರೇಟ್ ಬಾಯಲ್ಲಿಟ್ಟ ಆತ. ಶಾಸ್ತ್ರಿ ಕಡ್ಡಿ ಗೀರಿದ. ಒಂದು ಟೀ, ಒಂದು ಸಿಗರೇಟ್, ಮಧ್ಯ ಸ್ವಲ್ಪ ಮಾತುಕತೆ ಮನುಷ್ಯರನ್ನು ತುಂಬಾ ಹತ್ತಿರ ತರಬಲ್ಲದೆಂದು ಶಾಸ್ತ್ರಿಗೆ ಗೊತ್ತು. ಅದರಲ್ಲೂ ಒಬ್ಬ ವ್ಯಕ್ತಿ ದುಃಖದಲ್ಲಿದ್ದರೆ ಇನ್ನೊಬ್ಬನಿಗೆ ಕೇಳುವ ಕಿವಿಯಿರಬೇಕಷ್ಟೆ.
ಒಂದು ಟೀ ಅಂಗಡಿ, ಇನ್ನೊಂದು ಬಾರ್ ಎದುರಿಗಿರುವ ಮನುಷ್ಯರ ಜೊತೆ ಮನಸ್ಸು ಬಿಚ್ಚಿ ಮಾತನಾಡುವಂತೆ ಮಾಡುತ್ತದೆ.
ಆತ ಮಾತು ಪ್ರಾರಂಭಿಸುವುದನ್ನೇ ಕಾಯುತ್ತಿದ್ದ ಶಾಸ್ತ್ರಿ.
ಎರಡು ದಮ್ ಎಳೆದು ಸ್ವಲ್ಪ ನಿರಾಳವಾದ ಆತ ಮಾತಿಗೆ ಪ್ರಾರಂಭಿಸಿದ.
"ಹೆಸರು ಗಾಳಿಗುಡ್ಡ"
"ಹುಂ" ಎನ್ನುತ್ತಾ ನನಗೆ ಇದು ಅಪ್ರಸ್ತುತ ಮುಂದುವರೆಸು ಎಂದುಕೊಂಡ ಮನಸ್ಸಿನಲ್ಲಿಯೇ.
"ನಿನ್ನೆ ಇಲ್ಲಿಯ ಬ್ರೋಕರ್ ಗಳು ಒಂದು ಷೇರ್ ಗೆ ಬೆಲೆ ಬರುತ್ತದೆ ಎಂದು ದುಡ್ಡು ಹಾಕಿಸಿದರು. ಇಂದು ಬೆಳಿಗ್ಗೆಯೇ ಅದು ಪಾತಾಳಕ್ಕಿಳಿದಿದೆ. ಕೇಳಿದರೆ ನಾವು ಹೇಳಿದ್ದಷ್ಟೆ, ನೀವು ತೆಗೆದುಕೊಂಡವರು ಎಂಥವರು ಎನ್ನುತ್ತಿದ್ದಾರೆ. ಒಂದು ದಿನಕ್ಕೆ ಹತ್ತು ಲಕ್ಷ ತುಂಬಾ ದೊಡ್ಡ ಲಾಸ್".
ನಾಳೆ ಮತ್ತೆ ಅದಕ್ಕೆ ರೇಟ್ ಬರಬಹುದಲ್ಲ. ಅಷ್ಟು ಟೆನ್ಶನ್ ಯಾಕೆ?" ಎಂದ ಶಾಸ್ತ್ರಿ. "ಸ್ವಲ್ಪ ಹೇಳಿ, ಏನಾಯಿತು ಕೇಳೋಣ" ಮುಂದುವರೆಸಿದ ಮಾತನ್ನು.
"ನಾನು ಕರ್ನಾಟಕದ ಅಕ್ಕಿ ಮಾರಾಟ ಮಾಡುವ ಕಂಪನಿಯ ಷೇರ್ ತೆಗೆದುಕೊಂಡಿದ್ದೆ. ರಾಜ್ಯದ ತುಂಬ ಅಕ್ಕಿ ಸಪ್ಲೈಯರ್ ಆದ ಕಾರಣ ದಿನದಿಂದ ದಿನಕ್ಕೆ ಆ ಕಂಪನಿಯ ಷೇರ್ ಬೆಲೆ ಏರುತ್ತಿತ್ತು.ಒಬ್ಬ ಬ್ರೋಕರ್ ಬಳಿ ದಂಡಿಯಾಗಿ ಬಿದ್ದಿತ್ತದು. ಆತ ಅದನ್ನು ಬಹಳ ದಿನಗಳ ಹಿಂದೆಯೇ ಕೊಂಡಿದ್ದ. ಈಗ ಚೆನ್ನಾಗಿ ಬೆಲೆ ಬಂದಿದ್ದರಿಂದ ನನಗೆ ಹಿಂದಿನದೆಲ್ಲ ತೋರಿಸಿ ಇನ್ನು ಲಾಭ ಬರಲಿದೆ ಎಂದು ಹೇಳಿದ. ನಾನೂ ಹಿಂದೆ ಮುಂದೆ ಯೋಚಿಸದೇ ತೆಗೆದುಕೊಂಡು ಯಾಮಾರಿದೆ."
"ನಿನ್ನೆಯವರೆಗೂ ಅದರ ಬೆಲೆ ಚೆನ್ನಾಗಿದ್ದು ಒಂದೇ ದಿನ ಅದರ ಬೆಲೆ ಕುಸಿಯಲು ಹೇಗೆ ಸಾಧ್ಯ!? ಅದೂ ಅಲ್ಲದೇ ಆತ ನಿಮಗೆ ಮೋಸ ಮಾಡಿದ ಎಂದು ಏಕೆ ಹೇಳುತ್ತಿದ್ದೀರಿ?" ಎಂದ ಶಾಸ್ತ್ರಿ.
"ಒಂದು ವಿಷಯ ಹೇಳುತ್ತೇನೆ ಕೇಳಿ, ಷೇರ್ ಮಾರ್ಕೆಟ್, ಸಾಮಾನ್ಯ ಜನರು ಮತ್ತು ಕಂಪನಿಗಳ ಮಧ್ಯೆ ಈ ಬ್ರೋಕರ್ ಗಳಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇವರು ಬಹಳ ಕಂಪನಿಗಳ ಷೇರನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಂಡು ಲಾಭ ಬರುವ ಹೊತ್ತಿನಲ್ಲಿ ಇಟ್ಟುಕೊಳ್ಳುತ್ತಾರೆ. ನಷ್ಟ ಬರಬಹುದೆಂಬ ಅನುಮಾನವಿದ್ದರೆ ದಾಟಿಸಿಬಿಡುತ್ತಾರೆ. ನಷ್ಟವಾಗುವ ಸಂದರ್ಭವಿದ್ದರೆ ಮೊದಲೇ ತಿಳಿದುಬಿಡುತ್ತದೆ ಮೇಲಿನವರಿಂದ. ಒಂದು ನಿಮಿಷದ ಅಂತರದಲ್ಲಿ ಸಾಗಹಾಕಿ ಬಿಡುತ್ತಾರೆ.
ಈ ಷೇರಿನ ಬೆಲೆ ಕಡಿಮೆಯಾಗುತ್ತದೆ ಎಂದು ಅವನಿಗೆ ಮೊದಲೇ ತಿಳಿದಿದ್ದರಿಂದ ಹೀಗೆ ಮಾಡಿದ ನನಗೆ" ಎಂದ.
"ಆ ಷೇರಿನ ಬೆಲೆ ಇದ್ದಕ್ಕಿದ್ದಂತೆ ಕಡಿಮೆಯಾಗಲು ಕಾರಣವೇನು? ಅಕ್ಕಿಯ ಸಪ್ಲೈ ಎಂದಿನಂತೆ ಆಗಲೇ ಬೇಕಲ್ಲ..!" ಎಂದ ಶಾಸ್ತ್ರಿ.
" ಅದೇ ನಾನು ಕೂಡ ಯೋಚಿಸುತ್ತಿದ್ದೇನೆ, ತಿಳಿಯುತ್ತಿಲ್ಲ" ಎಂದ ಗಾಳಿಗುಡ್ಡ.
ಶಾಸ್ತ್ರಿ ಯೋಚಿಸುತ್ತಿದ್ದ ಒಂದೇ ದಿನದಲ್ಲಿ ಇಷ್ಟು ವ್ಯತ್ಯಾಸ ಕಾಣಬೇಕೆಂದರೆ ಏನೋ ದೊಡ್ಡ ಗೋಲ್ ಮಾಲ್ ನಡೆದಿದೆ. ಏನದು!?
"ಎಲ್ಲಿಯ ಷೇರ್ ತೆಗೆದುಕೊಂಡಿದ್ದೀರಿ? ಕಂಪನಿ ಎಲ್ಲಿಯದು?"
"ಕರ್ನಾಟಕದ ರೆಡ್ಡಿಗಳ ಅಕ್ಕಿ ಮಾರಾಟದ ಮಿಲ್" ಎಂದ ಗಾಳಿಗುಡ್ದ.
ಶಾಸ್ತ್ರಿಯ ಮೆದುಳಿನಲ್ಲಿ ಪೇಪರ್ ನ ಪುಟಗಳು ಒಂದೊಂದಾಗಿ ಮಗುಚಿಕೊಂಡವು. "ತಿಳಿಯಿತು, ಗಾಳಿಗುಡ್ಡ ಅವರೇ, ನಿಮ್ಮ ನಷ್ಟಕ್ಕೆ ಕಾರಣ ತಿಳಿಯಿತು" ಎಂದ.
ಶಾಸ್ತ್ರಿ ಹೇಳಲು ಪ್ರಾರಂಭಿಸಿದ. "ಹದಿನೈದು ದಿನದ ಹಿಂದೆ ಕರ್ನಾಟಕದಲ್ಲಿ ಎಲೆಕ್ಷನ್ ನಡೆದಿದೆ. ಮೊನ್ನೆಯಷ್ಟೆ ಅದರ ಫಲಿತಾಂಶ ಬಂದಿದೆ. ಆಡಳಿತದಲ್ಲಿದ್ದ ಪಕ್ಷ ಬಹುಪ್ರಮಾಣದ ಹಗರಣ ಮತ್ತು ಒಳಜಗಳಕ್ಕೆ ತುತ್ತಾಗಿದ್ದರಿಂದ ವಿರೋಧ ಪಕ್ಷವು ಈ ಚುನಾವಣೆಯಲ್ಲಿ ಗೆದ್ದಿದೆ. ಅವರ ಪ್ರಣಾಳಿಕೆಯಲ್ಲಿ ಒಂದು ರೂಪಾಯಿಗೆ ಅಕ್ಕಿ ನೀಡುವ ಒಂದು ಯೋಜನೆಯಿತ್ತು. ಅದನ್ನು ಜಾರಿಗೆ ತರುವಂತೆ ಹೊಸ ಮಂತ್ರಿಮಂಡಳ ತೀರ್ಮಾನಿಸಿದೆ. ಆದರೆ ನಡೆದದ್ದು ಇಷ್ಟು ದಿನ ಆಡಳಿತ ಪಕ್ಷಕ್ಕೆ ಹತ್ತಿರವಾಗಿ ಅಕ್ಕಿ ಸಪ್ಲೈ ಮಾಡುತ್ತಿದ್ದ ಸಪ್ಲೈಯರ್ ಅನ್ನು ಹೊಸ ಸರ್ಕಾರ ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ.
ಎರಡನೆಯದಾಗಿ ಕರ್ನಾಟಕದ ಅಪಕ್ಕದಲ್ಲೇ ಇರುವ ಆಂಧ್ರದಲ್ಲಿ ಅಕ್ಕಿಯನ್ನು ಜಾಸ್ತಿ ಬೆಳೆಯುತ್ತಾರೆ. ಕರ್ನಾಟಕಕ್ಕೆ ಹೋಲಿಸಿದರೆ ಆಂಧ್ರದಲ್ಲಿ ಅಕ್ಕಿಯ ಬೆಲೆ ಕಡಿಮೆ. ಅಲ್ಲಿಯೂ ಸಹ ಈಗ ಇಲ್ಲಿಯ ಸರ್ಕಾರವೇ ಇರುವುದರಿಂದ ಕರ್ನಾಟಕದ ಮುಖ್ಯಮಂತ್ರಿ ಆಂಧ್ರದಿಂದ ಅಕ್ಕಿ ತೆಗೆದುಕೊಳ್ಳುವ ವ್ಯವಸ್ಥೆ ಮಾಡುತ್ತಾನೆ.
ಇಲ್ಲಿ ಈ ಒಪ್ಪಂದವಾಗುತ್ತಲೇ ಕರ್ನಾಟಕದ ರೈತರ ಬಳಿ ಹೆಚ್ಚಿನ ಬೆಲೆಗೆ ಭತ್ತ ಕೊಂಡು ಹೇಗೂ ತನಗೆ ಸರ್ಕಾರ ಅಕ್ಕಿ ತೆಗೆದುಕೊಳ್ಳುವುದರಿಂದ ಲಾಭವಾಗುತ್ತದೆ ಎಂಬ ತಲೆಯಲ್ಲಿದ್ದ ಕಂಪನಿಯವರಿಗೆ ದೊಡ್ಡ ಶಾಕ್ ಇದು.
ಈಗ ಅಷ್ಟು ಹೆಚ್ಚಿನ ಬೆಲೆಗೆ ಅಕ್ಕಿ ಕೊಳ್ಳುವವರಿಲ್ಲ. ಮತ್ತೊಂದೆಡೆ ರೈತರು ತಮ್ಮ ದುಡ್ಡು ಎಲ್ಲಿ ಬರುವುದಿಲ್ಲವೋ ಎಂಬ ಭಯದಿಂದ ಹಾಕುವ ಒತ್ತಡ ಕಂಪನಿಯವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ಅಲ್ಲಿಗೆ ಷೇರಿನ ಬೆಲೆ ಇಳಿದಿರುತ್ತದೆ. ಸರ್ಕಾರ ಬದಲಾಗಿರುವುದನ್ನು ನೀವು ಗಮನಿಸಬೇಕಿತ್ತು" ಎಂದ.
ಅವಕ್ಕಾಗಿ ಕುಳಿತ ಗಾಳಿಗುಡ್ಡ. ಎದುರಿಗಿರುವವನು ಅಸಾಮಾನ್ಯ ಎಂದಷ್ಟೇ ತಿಳಿಯಿತು ಅವನಿಗೆ. ಅಲ್ಲೆಲ್ಲೋ ಮುಂಬೈನ ಬೀದಿಯಲ್ಲಿ ಕುಳಿತು ಇನ್ಯಾವುದೋ ರಾಜ್ಯದ ಅಕ್ಕಿ ಕಂಪನಿಯ ಷೇರ್ ಬಿದ್ದುಹೋಗಲು ಕಾರಣವೇನು ಎಂಬುದನ್ನು ಎರಡು ನಿಮಿಷದಲ್ಲಿ ಗ್ರಹಿಸುವುದು ಸಾಮಾನ್ಯ ಸಂಗತಿಯಲ್ಲ.
ಆತ ಸಿಗರೇಟ್ ಕೂಡ ಸೇದಿರಲಿಲ್ಲ. ಅದರಷ್ಟಕ್ಕೆ ಉರಿದು ಮುಗಿದು ಹೋಗಿತ್ತು. ಈತನೇ ತನ್ನ ಸಮಸ್ಯೆಗೆ ಉತ್ತರ ನೀಡಬಹುದೆಂದು ಅನ್ನಿಸಿತು"ಹಾಗಾದರೆ ನಾನೇನು ಮಾಡಬಹುದು ಎನ್ನುತ್ತೀರಿ ಮಿಸ್ಟರ್"
"ಮಿಸ್ಟರ್ ಶಾಸ್ತ್ರಿ" ಎಂದ.
ಶಾಸ್ತ್ರಿ ಯೋಚಿಸುತ್ತಿದ್ದ. ಟೀ ಖಾಲಿಯಾಗಿತ್ತು. ಗಾಳಿಗುಡ್ಡ ಅವನನ್ನು ಡಿಸ್ಟರ್ಬ್ ಮಾಡದೇ ಕುಳಿತ. ಎರಡು ನಿಮಿಷಗಳ ನಂತರ "ಒಂದು ಐಡಿಯಾ ಇದೆ, ನೀವು ಮಾಡುವುದಾದರೆ..." ಎಂದ.
"ಏನದು ಹೇಳಿ"
ನಿಮಗೆ ಲಾಭವಾದರೆ ಒಂದು ಲಕ್ಷ ಕೊಡಬೇಕು ನನಗೆ" ಒಂದು ಲಕ್ಷ ದುಡಿಯುವ ಶಾಸ್ತ್ರಿಯ ಪಣ ಕೈಗೆಟುಕಿದಂತಾಗಿತ್ತು.
ಎಷ್ಟು ದಿನದಲ್ಲಿ ಎಷ್ಟು ಲಾಭವಾದರೆ ಒಂದು ಲಕ್ಷ? ಎಂದು ಕೇಳಿದ ಗಾಳಿಗುಡ್ಡ.
"ನಾಳೆ ಸಂಜೆಯ ವೇಳೆಗೆ ನಿಮಗೆ ಇಪ್ಪತ್ತು ಲಕ್ಷ ಲಾಭವಾದರೆ ನನಗೆ ಒಂದು ಲಕ್ಷ".
ನಕ್ಕು ಬಿಟ್ಟ ಗಾಳಿಗುಡ್ಡ. "ಏನಯ್ಯಾ ಹುಡುಗಾಟ!? ನನ್ನ ವಯಸ್ಸಿಗಾದರೂ ಬೆಲೆ ಬೇಡವಾ? ತಮಾಷೆ ಮಾಡೋದಾ! ಈಗಷ್ಟೆ ಹತ್ತು ಲಕ್ಷ ಕಳಕೊಂಡಿದೀನಿ.."
"ನೀವು ಈ ಷೇರನ್ನು ಮಾರದೆ ಹಾಗೇ ಇಟ್ಟರೆ ನಾಳೆ ಇಷ್ಟೊತ್ತಿಗೆ ಮತ್ತೂ ಹತ್ತು ಲಕ್ಷ ಹೋಗಿರುತ್ತದೆ. ಇನ್ನು ಆಡಳಿತ ಪಕ್ಷ ಬದಲಾಗುವವರೆಗೆ ಆ ಷೇರಿನ ಬೆಲೆ ಇಳಿಯುತ್ತದೆಯೇ ಹೊರತು ಇರುವುದಿಲ್ಲ." ಎಂದ.
ಶಾಸ್ತ್ರಿ ಸೀರಿಯಸ್ ಆಗಿ ಹೇಳುತ್ತಿರುವುದನ್ನು ಕೇಳಿ ಮತ್ತು ಅದರಲ್ಲಿ ಲಾಜಿಕ್ ಇರುವುದರಿಂದ ಮತ್ತೇನು ಮಾಡಬೇಕೆಂದು ಪ್ರಶ್ನಿಸಿದ.
"ನಿಮ್ಮ ಬಳಿ ಎಷ್ಟು ಷೇರ್ ಗಳಿವೆ?"
"ಒಂದು ಲಕ್ಷ"
"ಪ್ರತಿಯೊಂದರ ಬೆಲೆ ಎಷ್ಟು?"
"ನೂರು ರೂಪಾಯಿ."
"ಅಂದರೆ ಈಗ ತೊಂಬತ್ತು ರೂಪಾಯಿ ಇದೆ. ಎಷ್ಟು ಮುಖ ಬೆಲೆ?"
"ಐವತ್ತು"
"ಅಲ್ಲಿಗೆ ತೊಂದರೆ ಇಲ್ಲ. ಈಗ ಎಷ್ಟಿದೆಯೋ ಅಷ್ಟಕ್ಕೆ ಮಾರಿಬಿಡಿ"
"ಯಾರು ತೆಗೆದುಕೊಳ್ಳದಿದ್ದರೆ?" ಪ್ರಶ್ನಿಸಿದ ಗಾಳಿಗುಡ್ಡ.
"ಮತ್ತೆ ಹತ್ತು ರೂಪಾಯಿ ಕಡಿಮೆಗೆ ಮಾರಿಬಿಡಿ" ಎಂದ ಶಾಸ್ತ್ರಿ.
"ಮತ್ತೂ ಹತ್ತು ಲಕ್ಷ ಲಾಸ್!?"
"ಇಂದಲ್ಲದಿದ್ದರೆ ನಾಳೆ ಅದು ಆಗೇ ಆಗುತ್ತದೆ. ನನ್ನ ನಂಬಿ ಮಾರಿಬಿಡಿ" ಎಂದ ಶಾಸ್ತ್ರಿ.
"ಮಾರಿ??" ಮತ್ತೆ ಪ್ರಶ್ನೆ ಹಾಕಿದ ಗಾಳಿಗುಡ್ಡ.
"ನಿಮ್ಮನ್ನು ಯಾಮಾರಿಸಿದ ಬ್ರೋಕರ್ ಯಾರು" ಕೇಳಿದ ಶಾಸ್ತ್ರಿ. "ಅಮನ್ ಪಾಂಡೆ ಇಲ್ಲೇ ಕೆಲಸ ಮಾಡುತ್ತಾನೆ" ಎಂದ ಗಾಳಿಗುಡ್ದ."ನನ್ನ ಜೊತೆ ಬನ್ನಿ, ಹೇಳುತ್ತೇನೆ" ಗಾಳಿಗುಡ್ಡನನ್ನು ಕರೆದುಕೊಂಡು ಮುಂದೆ ನಡೆದ ಶಾಸ್ತ್ರಿ.
...............................ಮುಂದುವರೆಯುತ್ತದೆ..............................
ನಮ್ಮ ನಿಮ್ಮ ನಡುವೆ...


ಪ್ರಿಯಂವದಾ ಎಚ್ಚರಗೊಳ್ಳುತ್ತಲೇ ಸುತ್ತಲೂ ನೋಡಿದಳು. ಎರಡು ನಿಮಿಷವೇ ಹಿಡಿಯಿತು ಅವಳಿಗೆ ವರ್ತಮಾನಕ್ಕೆ ಬರಲು. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರುವಾಗ ದಿಢೀರನೆ ಹತ್ತಿರ ಬಂದ ಗುಂಪು, ಅದರಲ್ಲಿದ್ದ ಆಗುಂತಕ ಹಾರಿಸಿದ ಗುಂಡು, ಅವಳಿಗೆ ಪ್ರಜ್ಞೆ ತಪ್ಪಿದ್ದು.. ಮೆದುಳು ಅವಳಿಗೆ ಸಹಕರಿಸಿದ್ದೇ ತಡ .. ಅವಳ ಯೋಚನೆಗಳು ಗರಿಗೆದರಿದವು. ಅವಳ ಪ್ರಕಾರ ಸುತ್ತಲೂ ಹತ್ತಾರು ಡಾಕ್ಟರ್ ಗಳಿರಬೇಕು. ರೂಮಿನ ಹೊರಗಡೆ ನೂರಾರು ಪತ್ರಕರ್ತರು, ನ್ಯೂಸ್ ಚಾನೆಲ್ ಗಳವರು ತನ್ನ ಆರೋಗ್ಯದ ಬಗ್ಗೆ, ತನ್ನ ಪರಿಸ್ಥಿತಿಯ ಬಗ್ಗೆ ಕ್ಷಣ ಕ್ಷಣದ ವಿವರಣೆ ನೀಡುತ್ತಿರಬೇಕು. ಅವಳ ಕಡೆಯವರು ಈಗಾಗಲೇ ಆಸ್ಪತ್ರೆಯ ಹೊರಗಡೆ ಸಾವಿರಾರು ಜನರನ್ನು ಸೇರಿಸಿ ಇದರಲ್ಲಿ ರಾಜಕೀಯ ವಿರೋಧಿಗಳ ಕೈವಾಡವಿದೆ ಎಂದು ಘೋಷಣೆ ಕೂಗುತ್ತಿರಬೇಕು. ನಗರದ ಹಲವು ಕಡೆ ಚಿಕ್ಕ ಪುಟ್ಟ ದೊಂಬಿಗಳು, ಪ್ರತಿಮೆ ಸುಡುವುದು, ಸರ್ಕಾರಿ ಬಸ್ಸುಗಳಿಗೆ ಕಲ್ಲು ತೂರಾಡುವುದು ನಡೆಯುತ್ತಿರಬೇಕು. ಒಟ್ಟಿನಲ್ಲ್ಲಿ ದೇಶ ಪೂರ್ತಿ ಪ್ರಿಯಂವದಾ ರಾಜ್ ಳ ಗುಂಗಿನಲ್ಲಿರಬೇಕು ಅಷ್ಟೆ!!
"ತನ್ನ ರಕ್ತ ದೇಶಕ್ಕಾಗಿಯೇ! ತನ್ನನ್ನು ಯಾರೇ ಕೊಂದರೂ, ತಾನಾಗಿಯೇ ಸತ್ತರೂ, ಬದುಕಿ ಜೀವಿಸಿದರೂ ಈ ದೇಶಕ್ಕಾಗಿಯೇ!!" ಅವಳು ಎಚ್ಚರಾದ ಮರುಘಳಿಗೆ ಶಾಂತಿ ಕಾಪಾಡಿಕೊಳ್ಳಿ ಎಂದು ಕೇಳುತ್ತ ಹೇಳುವ ಮಾತುಗಳಿವು.
ಜನರ ಸೆಂಟಿಮೆಂಟ್ ಗಳನ್ನು ಹೇಗೆ ಆಡಿಕೊಳ್ಳಬೇಕೆಂಬುದು ಪ್ರಿಯಂವದಾ ಬಲ್ಲಳು. ಅರವತ್ತು ವರ್ಷದ ಅವಳ ಬದುಕು ಅದೆಷ್ಟು ಏರಿಳಿತಗಳನ್ನು ಕಂಡಿಲ್ಲ. ಈಗ ಪ್ರಿಯಂವದಾ ಪಕ್ವವಾಗಿದ್ದಾಳೆ. ಆಕೆ ದುಡುಕುವುದೇ ಇಲ್ಲ. ಕಾಲಿಗೆ ಮುಳ್ಳು ಚುಚ್ಚಿದರೆ ಅದನ್ನು ನಿಧಾನವಾಗಿ ತೆಗೆಯಬೇಕು.
ಅವಳ ಕಣ್ಣುಗಳು ಆ ಕೊಠಡಿಯ ಬೆಳಕಿಗೆ ಹೊಂದಿಕೊಳ್ಳಲು ಒಂದೆರಡು ಕ್ಷಣ ಹಿಡಿಯಿತು. ಅವಳ ಎಡಭುಜಕ್ಕೆ ಬ್ಯಾಂಡೇಜ್ ಮಾಡಲಾಗಿತ್ತು. ರೂಮ್ ಪ್ರಶಾಂತವಾಗಿತ್ತು. ಸುತ್ತಲೂ ಕಣ್ಣಾಡಿಸಿದಳು. ಯಾರೂ ಇರಲಿಲ್ಲ. ಎದುರಿರುವ ಪರಿಸರ ಅರಿವಾಗತೊಡಗಿತು. ತನ್ನದೇ ಮನೆ, ದಿನವೂ ಮಲಗುವ ಕೊಠಡಿಯೇ. ಎಷ್ಟು ಹೊತ್ತಿನಿಂದ ಹೀಗೆಯೇ ಮಲಗಿದ್ದೇನೆ? ಎಷ್ಟು ಘಂಟೆ ಎಂದು ಗಡಿಯಾರವನ್ನು ದಿಟ್ಟಿಸಿದಳು.ಬೆಳಗಿನ ಹತ್ತು ಘಂಟೆ. ದಿನಾಂಕ ಕೂಡ ಬದಲಾಗಿತ್ತು. ಒಂದು ದಿನ.. ಅಂದರೆ ಇಪ್ಪತ್ನಾಲ್ಕು ಘಂಟೆಗಳ ಕಾಲ ಮೈ ಮರೆತು ಮಲಗಿದ್ದೆ. ತಾನು ರಾಜಕೀಯಕ್ಕೆ ಬಂದ ಮೇಲೆ ಇದೇ ಸುದೀರ್ಘ ಗಂಟೆಗಳು ತಾನು ಹೊರಪ್ರಪಂಚದ ಪರಿವೆಯಿಲ್ಲದೆ ಮಲಗಿದ್ದು. ಎಲ್ಲರೂ ರೂಮ್ ನ ಹೊರಗೆ ನಿಂತಿರಬೇಕು ಎಂದು ಮಲಗಿದಲ್ಲಿಮ್ದ ಮೇಲೇಳಲು ನೋಡಿದಳು. ಎಡಭುಜ ಚುರ್ ಎಂದಿತು. ತನಗೆ ಆದ ನೋವಿಗೆ ಹತ್ತರಷ್ಟು ವಾಪಸ್ ನೀಡುತ್ತೇನೆ ಎಂದು ಮನಸ್ಸಲ್ಲೇ ನಿರ್ಧರಿಸಿದಳು.
ಪಕ್ಕದಲ್ಲಿದ ಫೋನ್ ಎತ್ತಿ ಬಟನ್ ಒತ್ತಿದಳು. ಹೊರಗಡೆ ಸದಾಯಿತು. ಪ್ರಿಯಂವದಾಳಿಗೆ ಎಚ್ಚರವಾಯಿತೆಂದು ತಿಳಿದು ಇಬ್ಬರು ಡಾಕ್ಟರ್ ನರ್ಸ್ ಗಳೊಂದಿಗೆ ಒಳಗೆ ಬಂದರು. ಅವರ ಜೊತೆಯೇ ಒಳಗೆ ಬಂದವನು ಹಿಮಾಂಶು. ಮೂವತ್ತೈದರ ಆಸುಪಾಸು. ಎತ್ತರವಾಗಿ, ಬೆಳ್ಳಗೆ ಇದ್ದ. ಬಿಳಿಯ ಪೈಜಾಮದಲ್ಲಿ ತುಂಬ ಸರಳವಾಗಿದ್ದ. ಆತ ಪ್ರಿಯಂವದಾಳ ಸಾಕುಮಗ. ಪ್ರಿಯಂವದಾ ಮದುವೆಯಾಗಿರಲಿಲ್ಲ, ಹಿಮಾಂಶು ಕೂಡಾ. ತಮಗೆ ಸಂಸಾರವೇ ಇಲ್ಲ. ಬದುಕು ದೇಶಕ್ಕಾಗಿಯೇ ಎಂದು ಬಿಂಬಿಸುವುದು ಸುಲಭ.
ಹಿಮಾಂಶು ಪ್ರಿಯಂವದಾಳಷ್ಟು ಚಾಣಕ್ಯನಾಗಲೀ, ಚುರುಕಾಗಲೀ, ರಾಜಕೀಯದ ಒಳಗುಟ್ಟುಗಳನ್ನು ಗ್ರಹಿಸುವವನಾಗಲೀ ಆಗಿರಲಿಲ್ಲ. ಅದೊಂದು ನೋವು ಅವಳಿಗೆ ಕಾಡುತ್ತಿತ್ತು. ಹಾಗೆಂದು ಆತ ದಡ್ಡನೇನಲ್ಲ. ರಾಜಕೀಯ ವಲಯದಲ್ಲೇ ಬೆಳೆದು ಬಂದಿರುವುದರಿಂದ ಅದರ ಗಟ್ಟಿಗತನ ಅವನಿಗೂ ಬಂದಿದೆ. ಆದರೆ ತಾಯಿಯ ಕಮಾಂಡಿಂಗ್ ನೇಚರ್ ಬೆಳೆದು ಬಂದಿರಲಿಲ್ಲ. ಎಷ್ಟೆಂದರೂ ರಕ್ತ ಹಂಚಿಕೊಂಡು ಹುಟ್ಟುವುದೇ ಬೇರೆ.
"ಏನಮ್ಮಾ ಇದೆಲ್ಲಾ!? ಎಷ್ಟು ಸಲ ಹೇಳಿದ್ದೇನೆ, ಜನಗಳ ಮಧ್ಯೆ ಹೋಗುವಾಗ ಎಚ್ಚರದಿಂದಿರು ಎಂದು..." ಮಾತಿನಲ್ಲಿ ಮೃದುತ್ವ, ಮುಖದಲ್ಲಿ ಕಳವಳ ಸ್ಪಷ್ಟವಾಗಿತ್ತು. ಒಣನಗೆ ನಕ್ಕಳವಳು. ತುಂಬಾ ರಕ್ತ ಹೋಗಿದ್ದರಿಂದ ಮುಖ ಬಿಳಚಿಕೊಂಡಿತ್ತು, ಸುಸ್ತು ಎದ್ದು ಕಾಣುತ್ತಿತ್ತು.
ಡಾಕ್ಟರ್ ಗಳು ಅವಳ ನಾಡಿ ಬಡಿತ, ಹಾರ್ಟ್ ಬೀಟ್ಸ್, ಬ್ಲಡ್ ಪ್ರೆಶರ್ ಎಲ್ಲವನ್ನೂ ಚೆಕ್ ಮಾಡಿ "ನಾರ್ಮಲ್ ತೋರಿಸುತ್ತಿದೆ, ಎರಡು ದಿನ ರೆಸ್ಟ್ ಮಾಡಿದರೆ ಸರಿ ಹೋಗುತ್ತದೆ, Nothing to worry " ಎಂದು ಹೊರಗಡೆ ಹೋದರು ತಾಯಿ ಮಗನಿಗೆ ಪ್ರೈವಸಿ ಒದಗಿಸಲು.
"ನನ್ನನ್ನು ಹತ್ಯೆಗಯ್ಯಲು ಪ್ರಯತ್ನಿಸಿದವರು ಯಾರು ತಿಳಿಯಿತಾ?" ಪ್ರಿಯಂವದಾ ಉದ್ವೇಗಗೊಂಡಳು.
"ಒಬ್ಬ ಅಲ್ಲಿಯೇ ಪೋಲಿಸ್ Encounter ನಲ್ಲಿ ಬಲಿಯಾದ. ಪೋಲಿಸರು ಅವನ ಹಿನ್ನೆಲೆ ವಿಚಾರಿಸುತ್ತಿದ್ದಾರೆ. ಒಮ್ಮೆಲೇ ಗದ್ದಲವಾದ್ದರಿಂದ ಉಳಿದವರು ಸಿಗಲಿಲ್ಲ, ಪೋಲಿಸರು ಬಲೆ ಬೀಸಿದ್ದಾರೆ" ವರದಿ ಒಪ್ಪಿಸಿದ ಹಿಮಾಂಶು.
"ಹೊರಗಡೆ ಪತ್ರಿಕೆಯವರು, ಮಾಧ್ಯಮದವರು ಕಾಯುತ್ತಿದ್ದಾರಾ? ಎಲ್ಲ ವ್ಯವಸ್ಥೆಯಾಗಿದೆಯಾ?"
ಅಡ್ಡಡ್ಡ ತಲೆಯಾಡಿಸುತ್ತ ಇಲ್ಲ ಎಂದ ಹಿಮಾಂಶು.
"ವಾಟ್!?" ಆಶ್ಚರ್ಯವಾಗಿತ್ತವಳಿಗೆ. ಅವಳ ಮನಸ್ಸನ್ನು ಅರ್ಥ ಮಾಡಿಕೊಂಡ ಹಿಮಾಂಶು " ನಿಮ್ಮ ಮೇಲೆ ಹತ್ಯೆ ಪ್ರಯತ್ನ ನಡೆದಿದೆ ಎಂದು ಹೊರಜಗತ್ತಿಗೆ ತಿಳಿಯದಂತೆ ತಡೆಹಿಡಿಯಲಾಗಿದೆ. ಒಂದು ಪುಟ್ಟ ಸುದ್ಧಿಯೂ ಎಲ್ಲೂ ಹೊರಬರದಂತೆ ನೋಡಿಕೊಂಡಿದ್ದಾರೆ ಪೋಲಿಸರು."
"ಮೈ ಉರಿಯಿತವಳಿಗೆ, ಏನು ಹೇಳುತ್ತಿರುವೆ? ಇದು ಎಂಥ ಸೆನ್ಸೇಷನಲ್ ನ್ಯೂಸ್! ನಮಗೆ ಎಷ್ಟು ಉಪಯುಕ್ತವಾಗಿದೆ! ಮುಂದಿನ ವರ್ಷವೇ ಲೋಕಸಭಾ ಚುನಾವಣೆಯಿದೆ. ಇದನ್ನು ನಮ್ಮ ಫೇವರ್ ಆಗಿ ಮಾಡಿಕೊಳ್ಳಬಹುದಿತ್ತು. ಏಕೆ ಹಾಗೆ ತಡೆಹಿಡಿದರು ಪೋಲಿಸರು?
ವಿರೋಧ ಪಕ್ಷದವರೇ ಇರುತ್ತಾರೆ ಇದರ ಹಿಂದೆ. ನೀನೇನು ಮಾಡುತ್ತಿದ್ದೆ? ಎಲ್ಲವನ್ನೂ ನಾನೇ ಹೇಳಬೇಕಾ? ಯಾವಾಗ ತಿಳಿದುಕೊಳ್ಳುತ್ತೀಯೋ??" ನೋವಿತ್ತು ಅವಳ ಧ್ವನಿಯಲ್ಲಿ.
"ನನಗೆ ಅದೆಲ್ಲ ಗೊತ್ತಮ್ಮ. ಇದರಲ್ಲಿ ವಿರೋಧ ಪಕ್ಷದವರ ಕೈವಾಡವಿಲ್ಲ. ನಿನ್ನ ಒಳಿತಿಗಾಗಿಯೇ ಇದೆಲ್ಲ. ಒಬ್ಬ ಪೋಲಿಸ್ ಅಧಿಕಾರಿ ಹೇಳುವ ಮಾತುಗಳು ಸರಿಯೆನಿಸಿ ನಾನು ಹೀಗೆ ಮಾಡಲು ಒಪ್ಪಿಕೊಂಡೆ. ಅವನನ್ನೇ ಒಳಗೆ ಕಳಿಸುತ್ತೇನೆ, ಮಾತನಾಡು. ಆಯಾಸ ಮಾಡಿಕೊಳ್ಳಬೇಡ. ಸುಧಾರಿಸಿಕೋ ಎರಡು ದಿನ. ಉಳಿದದ್ದೆಲ್ಲ ನಾನು ನೋಡಿಕೊಳ್ಳುತ್ತೇನೆ." ಹೊರ ನಡೆದ ಹಿಮಾಂಶು.
"May I Come In?" ಬಾಗಿಲು ತೆರೆದು ನಿಂತ ಸಮ್ಮಿಶ್ರ. "Come in" ಒಳ ಬರುತ್ತಿರುವ ಸಮ್ಮಿಶ್ರನ ಮುಖವನ್ನೇ ನೋಡಿದಳು ಪ್ರಿಯಂವದಾ. ಮೊದಲ ಬಾರಿ ನೋಡಿದರೂ ಕೂಡ ಸಲುಗೆ ಮೂಡಿತು ಅವನಲ್ಲಿ. ಆತ ಅವಳ ಬಳಿ ಬಂದು ತಲೆಯಡಿ ಇದ್ದ ದಿಂಬನ್ನು ಸರಿ ಮಾಡಿ ಅವಳನ್ನು ನಿಧಾನವಾಗಿ ಎಬ್ಬಿಸಿ ಕೂರಿಸಿದ. ಪಕ್ಕದಲ್ಲಿಯೇ ಜ್ಯೂಸ್ ಇತ್ತು. ಬದಿಯಲ್ಲಿಯೇ ಇದ್ದ ಗ್ಲಾಸಿಗೆ ಹಾಕಿ ಕೊಟ್ಟ. ಎದುರಿಗಿರುವವಳು ಪ್ರಿಯಂವದಾ ಎಂಬ ಭಯವಾಗಲೀ, ದೇಶದ ಆಡಳಿತ ಪಕ್ಷದ ಕಿಂಗ್ ಪಿನ್ ಜೊತೆ ತಾನು ಇದ್ದೇನೆ ಎಂಬ ನಾಜುಕುತನವಾಗಲೀ, ಇದ್ದಂತಿರಲಿಲ್ಲ ಅವನಿಗೆ. ಸಹಜ ಮುಗುಳ್ನಗು ಲಾಸ್ಯವಾಡುತ್ತಿತ್ತು ಅವನ ಮುಖದಲ್ಲಿ.
ತನ್ನ ಮಗ ಕೂಡ ತನ್ನ ಜೊತೆ ಹೀಗಿರುವುದಿಲ್ಲ. ಅವನು ಜೊತೆಯಿದ್ದರೂ ಏಕತಾನತೆ ಕಾಡುತ್ತದೆ. ಆದರೆ ಸಮ್ಮಿಶ್ರ ಒಳಗೆ ಬರುತ್ತಲೇ ಏನೋ ಆತ್ಮ ವಿಶ್ವಾಸ ಮೂಡಿತು. ಆತ ತನ್ನನ್ನು ಹಿಡಿದೆತ್ತಿ ಕೂರಿಸಿದ ರೀತಿ, ಜ್ಯೂಸ್ ನೀಡಿದ್ದು.. ತನ್ನ ಹತ್ತಿರದ ಸಂಬಂಧಿಯಂತೆ ಅನ್ನಿಸಿತು ಅವಳಿಗೆ.
ಅದನ್ನೆಲ್ಲ ಮನಸ್ಸಿನಲ್ಲಿಯೇ ಅಡಗಿಸಿಕೊಳ್ಳುತ್ತಾ "ಯಾರು ನೀನು?" ಅಧಿಕಾರವಿತ್ತು ಧ್ವನಿಯಲ್ಲಿ.
"ನಿಮ್ಮ ಸೆಕ್ಯುರಿಟಿ ಟೀಂ ನಲ್ಲಿ ನಾನೂ ಒಬ್ಬನಾಗಿದ್ದೆ. ನಿಮಗೆ ಗುಂಡು ಹಾರಿಸಿದವನನ್ನು ಶೂಟ್ ಮಾಡಿದವನು ನಾನೇ."
ಆತನ ಮುಖವನ್ನೇ ನೋಡುತ್ತ ಸೀರಿಯಸ್ ಆಗಿ "ಅದಕ್ಕೇನೀಗ?" ಎಂದಳು. "ಆತನ ಹಣೆಗೆ ಶೂಟ್ ಮಾಡುವ ಬದಲು ಭುಜಕ್ಕೋ, ಕಾಲಿಗೋ ಶೂಟ್ ಮಾಡಿದ್ದರೆ ಈ ಸಂಚಿನ ಹಿಂದೆ ಯಾರಿದ್ದಾರೆ ಎನ್ನುವುದು ತಿಳಿಯುತ್ತಿತ್ತು. ನಿನ್ನ ಬುದ್ಧಿಗೇಡಿತನದಿಂದ ಅದು ತಪ್ಪಿಹೋಯಿತು" ಎಂದು ಕೆಂಡ ಕಾರಿದಳು.
ಸಮ್ಮಿಶ್ರ ಅವಳಿಂದ ಇದನ್ನು ನಿರೀಕ್ಷಿಸಿರಲಿಲ್ಲ. "ಅವನನ್ನಂತೂ ಹೊಡೆದು ಮುಗಿಸಿದೆ. ಇನ್ವೆಸ್ಟಿಗೇಶನ್ ನಡೆಸಿ ಇದರ ಹಿಂದೆ ಯಾರಿದ್ದಾರೆ ಎಂದು ಬಯಲಿಗೆಳೆಯುವುದು ಬಿಟ್ಟು ನನ್ನ ಮನೆಯಲ್ಲಿ ಏನು ಮಾಡುತ್ತಿರುವೆ!? ಈ ಸುದ್ಧಿ ಎಲ್ಲೂ ಲೀಕ್ ಆಗದಂತೆ ತಡೆಯಲು ವಿರೋಧ ಪಕ್ಷದವರು ನಿನಗೆಷ್ಟು ನೀಡಿದ್ದಾರೆ?"ಕೋಪ ತಣ್ಣಗಾಗಲೇ ಇಲ್ಲ.
ಇವಳು ನಿಜವಾಗಿಯೂ ಹೆಣ್ಣೇ?? ಎಂದುಕೊಂಡ. ಉತ್ತರ ನೀಡಬೇಕಾದ ಜವಾಬ್ದಾರಿ ಅವನ ಮೇಲಿತ್ತೀಗ. ಚೆಸ್ ನಲ್ಲಿ ಎದುರಾಳಿ ಚೆಕ್ ನೀಡಿದ್ದಾನೆ. ಕೇವಲ ತಪ್ಪಿಸಿಕೊಳ್ಳುವುದಲ್ಲ, ತಪ್ಪಿಸಿಕೊಂಡು ಎದುರಾಳಿಯನ್ನು ಸಂಕಷ್ಟಕ್ಕೆ ಗುರಿ ಮಾಡಬೇಕು. ಇಲ್ಲದಿದ್ದರೆ ಆತನ ಬೇಟೆ ಬಲೆಗೆ ಬೀಳುತ್ತದೆ.
ಸಮ್ಮಿಶ್ರ ಬಳಿಯಿದ್ದ ಚೇರ್ ಎಳೆದು ಅವಳ ಹತ್ತಿರವೇ ಕುಳಿತ. ಕುಡಿದಿಟ್ಟ ಗ್ಲಾಸ್ ತೆಗೆದು ಬದಿಯಲ್ಲಿಟ್ಟು ಮಾತು ಪ್ರಾರಂಭಿಸಿದ "ಪ್ರಿಯಂವದಾರವ್ರೇ, ನನಗೆ ವಿರೋಧ ಪಕ್ಷ ನೀವು ಎರಡು ಒಂದೇ. ನಾನೊಬ್ಬ ಪೋಲಿಸ್. ನನಗೆ ಪಕ್ಷವಾಗಲಿ, ಸಂಘಟನೆಗಳಾಗಲೀ, ಯಾರು ಯಾವ ಸ್ಥಾನದಲ್ಲಿ ಇರುವರು ಎಂಬುದಾಗಲೀ ಮುಖ್ಯವಲ್ಲ.ಖಾಕಿ ಬಟ್ಟೆ ನನ್ನ ಮೈ ಮೇಲೆ ಇರುವವರೆಗೂ ನನಗೆ ಮೊದಲಿಗೆ ನೆನಪಾಗುವುದು ಕರ್ತವ್ಯ ಮತ್ತು ದೇಶ."
ಚೆಕ್ ನೀಡಲು ಬಂದಿದ್ದ ಮಂತ್ರಿಯ ಎದುರು ಪೇದೆಯನ್ನು ನಿಲ್ಲಿಸಿದ್ದ ಸಮ್ಮಿಶ್ರ. ಎದುರು ನಿಂತಿರುವ ಮಂತ್ರಿಗೆ ಪೇದೆ ದೊಡ್ಡ ಸಮಸ್ಯೆಯಲ್ಲ. ಆದರೆ ಆ ಪೇದೆಗೆ ಹಿಂದಿನಿಂದ ಬೆಂಬಲವಾಗಿ ನಿಂತ ಆನೆ, ಮಂತ್ರಿ, ಒಂಟೆಯ ಸಮಸ್ಯೆ ದೊಡ್ದದು. ಒಂದು ಪೇದೆಯನ್ನು ಹೊಡೆಯಲು ಮಂತ್ರಿಯನ್ನು ಉಪಯೋಗಿಸುವುದು ದಡ್ಡತನ.
ಆತ ಮುಂದುವರೆಸಿದ. "ಆತ ನಿಮ್ಮ ಮೇಲೆ ಗುಂಡು ಹಾರಿಸಿದ ಎಂಬ ಒಂದೇ ಕಾರಣಕ್ಕೆ ನಾನವನನ್ನು ಶೂಟ್ ಮಾಡಬೇಕಾಗಿ ಬಂತು. ನೋಡಿದರೆ ಆತನೂ ಭಾರತ ದೇಶದ ಪ್ರಜೆಯೇ. ಕೇವಲ ನಿಮ್ಮ ಮೇಲೆ ಗುಂಡು ಹಾರಿಸಿದ್ದಕ್ಕೆ ಆತ ಸತ್ತನೆಂದರೆ ಅದು ನಿಮ್ಮ ಮೇಲಿನ ಗೌರವಕ್ಕಲ್ಲ, ದೇಶದ ಮೇಲಿನ ಗೌರವಕ್ಕೆ. ಒಬ್ಬ ದೇಶ ಆಳುವ ವ್ಯಕ್ತಿಯನ್ನು ಕಾಯ್ದುಕೊಳ್ಳುವುದು ಪೋಲಿಸರಾದ ನಮ್ಮ ಕರ್ತವ್ಯ.
ವಿಚಾರಣೆ, ವಿರೋಧ ಪಕ್ಷ, ಚುನಾವಣಾ, ಓಟು ಇವೆಲ್ಲ ನಮಗೆ ಸೆಕೆಂಡರಿ. ಜಗತ್ತಿನೆದುರು ದೇಶದ ಗೌರವ ಕುಂದಬಾರದು ಎಂಬುದಷ್ಟೇ ನನ್ನ ತಲೆಯಲ್ಲಿತ್ತು.
ಭಾರತದಲ್ಲಿ ದೇಶ ಆಳುವಂಥ ದೊಡ್ದ ವ್ಯಕ್ತಿಗಳಿಗೆ ಸರಿಯಾದ ಸೆಕ್ಯುರಿಟಿ ಇಲ್ಲವೆಂದರೆ ಪ್ರಜೆಗಳ ಕಥೆಯೇನು ಎಂಬ ಭಾವ ಉಳಿದವರಲ್ಲಿ ಮೂಡುತ್ತದೆ.
ಭಾರತದ ಮಿಲಿಟರಿಯಲ್ಲಾಗಲಿ, ಪೋಲಿಸರಲ್ಲಾಗಲೀ ಯಾರನ್ನೂ ರಕ್ಷಿಸುವ ಶಕ್ತಿ ಇಲ್ಲವೆಂದು ನಾವು ಪಾಕಿಸ್ತಾನಕ್ಕೆ ಹೇಳಿದಂತಾಗಬಹುದು.ಇಂಥವೆಲ್ಲ ಗಮನಿಸುತ್ತಲೇ ಇರುವ ಚೈನಾ ಟಿಬೆಟ್, ನಾಗಾಲ್ಯಾಂಡ್, ಲಡಾಕ್ ನಮ್ಮದು ಎಂದು ಯುದ್ಧ ಸಾರಬಹುದು. ನಮಗೆ, ನಮ್ಮ ಜೀವಕ್ಕೆ ರಕ್ಷೆ ಇಲ್ಲವೆಂದಾದರೆ ಬೆಳೆಯುತ್ತಿರುವ ಪ್ರವಾಸೋದ್ಯಮ ಕುಂಠಿತವಾಗಬಹುದು. ಇದನ್ನೆಲ್ಲಾ ಯೋಚಿಸಿದ್ದೀರಾ ನೀವು??"
ಒಂದು ನಿಮಿಷದ ಸಂಪೂರ್ಣ ಮೌನವೇರ್ಪಟ್ಟಿತು. ಯಾವುದೋ ಗಲ್ಲಿಯ ಆಟಗಾರನೊಂದಿಗೆ ಆಟವಾಡುತ್ತಿದ್ದೇನೆ ಎಂದುಕೊಂಡು ಪ್ರಾರಂಭವಾದ ಆಟ, ಎದುರಾಳಿ ವಿಶ್ವನಾಥನ್ ಆನಂದ್ ಆಗಿ ಬದಲಾಗಿದ್ದ. ಅವಳ ಒಂದೊಂದು ಕಾಯಿಗಳನ್ನು ಎಲ್ಲಿಯೂ ಸರಿಯದಂತೆ ಮಾಡಿ ತನ್ನ ಕಾಯಿಗಳನ್ನು ಮಾತ್ರ ಮುಂದೆ ನಡೆಸುತ್ತಿದ್ದ. ತಾನು ಆತುರಪಟ್ಟು ದುಡುಕಿದೆ ಎಂಬ ಸತ್ಯ ತಿಳಿಯತೊಡಗಿತು ಪ್ರಿಯಾಳಿಗೆ. ರಾಜನ ಎದುರು ಓಪನ್ ಮನೆಗಳನ್ನು ಬಿಟ್ಟು ಚೆಕ್ ಕೊಡುವಂತೆ ಹುರಿದುಂಬಿಸಿದಂತಾಯಿತು ಎಂದು ನೊಂದಳು. ಈಗ ಗೆಲ್ಲುತ್ತಿದ್ದಾನೆ. ಅವನ ಮುಖ ನೋಡಿದಳು, ಅದೇ ನಗು. ತನ್ನೆದುರು ರಿವಾಲ್ವರ್ ಹಿಡಿದು ನಿಂತಿದ್ದ ಆಗುಂತಕನ ಎದುರು ತಾನೂ ಹಾಗೆಯೇ ನಕ್ಕಿದ್ದಳು. ಸಮ್ಮಿಶ್ರ ಸಾಮಾನ್ಯನಲ್ಲ ಎಂದು ತಿಳಿಯಿತು.
ಇವನೇ ನನ್ನ ಮೇಲೆ ಹತ್ಯೆಯ ಸಂಚು ಮಾಡಿಸಿದ್ದನಾ? ಎಂಬ ಸಣ್ಣ ಸಂಶಯವೂ ಬಂತು. ಆದರೆ ಒಬ್ಬನನ್ನು ಕೊಂದಿದ್ದಾನೆ.ಇತನೇ ಸಂಚು ಮಾಡಿದ್ದರೆ ಜೀವ ತೆಗೆಯುವ ಉಪಾಯ ಮಾಡುತ್ತಿರಲಿಲ್ಲ.ಚತುರ ಇವನು ಎಂದುಕೊಂಡಳು.
ಈಗ ತನ್ನ ನಡೆ,ಉತ್ತರ ನೀಡಬೇಕು. ಎಲ್ಲ ಕಡೆಯಿಂದಲೂ ಬಂಧಿಯಾಗಿದ್ದೇನೆ. ಡ್ರಾ ಘೋಷಿಸಬೇಕು ಇಲ್ಲವೇ ಸೋಲಬೇಕು. ರಾಜಕೀಯದಲ್ಲಿ ಸೋಲಿಗಿಂತ ಡ್ರಾಗಳಿಗೆ ಹೆಚ್ಚು ಪ್ರಾಮುಖ್ಯತೆ. "ಭೇಷ್, ಭೇಷ್ " ಎಂದು ಸೋಲಿನ ನೋವನ್ನು ಮಾತಲ್ಲಿ ಮುಚ್ಚಿದಳು. ನಕ್ಕ ಸಮ್ಮಿಶ್ರ. ಅವಳಿಗೆ ಬೇರೆ ದಾರಿಯಿಲ್ಲ ಎಂದು ಗೊತ್ತವನಿಗೆ. ತಾನೂ ಡ್ರಾ ಮಾಡಿಕೊಳ್ಳಲು ಒಪ್ಪಿಕೊಂಡರೆ ಸಮಬಲರಾಗಿಬಿಡುತ್ತೇವೆ. ಡ್ರಾ ಮಾಡಿಕೊಳ್ಳುವುದಾದರೆ ನನಗೆ ನಿನ್ನನ್ನು ಸೋಲಿಸಲೂ ಗೊತ್ತು ಎಂದು ತೋರಿಸಬೇಕು. ಸಮ್ಮಿಶ್ರ ಅದಕ್ಕೆಂದೇ ಮತ್ತೊಂದು ಕಾಯಿ ಮುನ್ನಡೆಸಿದ.
"ನಾನು ತೆಗೆದುಕೊಂಡ ನಿರ್ಧಾರ ನಿಮಗೂ ಕೂಡ ಒಳ್ಳೆಯದೇ.."
ಆಶ್ಚರ್ಯಗೊಂಡಳು ಪ್ರಿಯಂವದಾ "ಅದು ಹೇಗೆ??"
"ಇಂತಹ ಒಂದು ಹತ್ಯೆಯ ಪ್ರಯತ್ನ ನಡೆಯಿತು ಎಂದು ಜಗತ್ತಿಗೆ ತಿಳಿದರೆ ಇವಳ ಹತ್ತಿರ ಹೋಗುವುದು ಇಷ್ಟು ಸುಲಭವಾ ಎಂದೆನ್ನಿಸಿಬಿಡುತ್ತದೆ. ಗಲ್ಲಿ ಗಲ್ಲಿಯಲ್ಲಿ ನಿಮ್ಮ ಮೇಲೆ ಇಂತಹ ಪ್ರಯತ್ನಗಳು ನಡೆಯಬಹುದು. ಎಲ್ಲ ಸಮಯದಲ್ಲೂ ವಿಧಿ ನಿಮ್ಮ ಕಡೆಯೇ ನಿಲ್ಲಬೇಕೆಂದಿಲ್ಲ. ಎಲ್ಲೋ ಒಂದು ಕಡೆ, ಯಾವುದೋ ಸಣ್ಣ ತಪ್ಪು ಎಂತಹ ಅಚಾತುರ್ಯವನ್ನು ಕೂಡ ಸೃಷ್ಟಿಸಬಹುದು. ನಿಮ್ಮ ಜೀವಕ್ಕೆ ಅದು ಒಳ್ಳೆಯದಲ್ಲ.
ಜೀವಿಗಳು ಭ್ರಮೆಯಲ್ಲಿ ಬದುಕುತ್ತವೆ. ಆನೆಯ ಮರಿಯನ್ನು ಸಣ್ಣದಿರುವಾಗಲೇ ಸರಪಳಿಯಲ್ಲಿ ಕಟ್ಟಿ ಬೆಳೆಸಿದರೆ ಮುಂದೆಂದು ಅದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಾರದು. ಯಾಕೆಂದರೆ ಸರಪಳಿಯಿಂದ ಬಂಧಿಸುವಾಗಲೇ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿರುತ್ತದೆ. ಅದು ಸಾಧ್ಯವಾಗದಾಗ ತನ್ನಿಂದ ಸಾಧ್ಯವಿಲ್ಲವೆಂಬ ಭ್ರಮೆಗೆ ಬೀಳುತ್ತದೆ. ಮತ್ತೆ ಯಾವತ್ತೂ ಅದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಾರದು. ಇದು ಕೂಡ ಹಾಗೆಯೇ. ನಿಮ್ಮಂತವರ ಸುತ್ತಲೂ ತುಂಬ ದೊಡ್ಡ ರಕ್ಷಣಾ ವಲಯ ಇರುತ್ತದೆ ಎಂಬ ಭ್ರಮೆಯಲ್ಲಿ ಜನರು ಬದುಕುತ್ತಿರುತ್ತಾರೆ. ಅದು ಸುಳ್ಳೆಂದು ತಿಳಿದು ಬಿಟ್ಟರೆ!?" ಮಾತು ನಿಲ್ಲಿಸಿದ ಸಮ್ಮಿಶ್ರ.
ನಿನ್ನನ್ನು ಹಾಗಲ್ಲದಿದ್ದರೆ ಹೀಗೆ ಮೀಟ್ ಮಾಡಬಹುದಿತ್ತು ಆದರೂ ತಾನು ಡ್ರಾ ಮಾಡಿಕೊಳ್ಳುತ್ತಿದ್ದೇನೆ ಎಂಬುದು ಆತನ ದೊಡ್ಡತನ ಎಂದು ಮಾತಿನಲ್ಲೇ ಹೇಳಿ ಮುಗಿಸಿದ್ದ.
ಮತ್ತೆ ಆತನೇ ಮುಂದುವರೆಸಿದ "ನೀವು ಹೇಳುವುದು ಸರಿಯೇ, ಹತ್ಯೆಗೆ ಪ್ರಯತ್ನ ಮಾಡಿದವರನ್ನು ಹಿಡಿಯುವುದು ಬಿಟ್ಟು ಇಲ್ಲೇನು ಮಾಡುತ್ತಿರುವೆ ಎಂದು? ನಿಮ್ಮನ್ನು ಬದುಕಿಸಿದ ನೆಪ ಹೂಡಿ ಪ್ರತಿಫಲ ಪಡೆಯಲು ಬಂದಿರುವೆ ಎಂದು ನೀವಂದುಕೊಂಡಿದ್ದೀರಿ. ಅದು ಸಹಜವೂ ಕೂಡ. ಯಾಕೆಂದರೆ ಮನುಷ್ಯನ ಮನಸ್ಸೇ ಹಾಗೆ. ಆದರೆ ನಾನು ಸಮ್ಮಿಶ್ರ, ಪ್ರಿಯಂವದಾ... " ಮಾತು ಏಕವಚನಕ್ಕೆ ಇಳಿದಿತ್ತು. ಇಂಚಿಂಚಾಗಿ ಕಬಳಿಸುತ್ತಿದ್ದ ಆಕೆಯನ್ನು.
"ಕಾರಣ ಹೇಳಿ ಹೋಗುವುದು ನನ್ನ ಕರ್ತವ್ಯ. ಅದಕ್ಕೆಂದೇ ಬಂದಿದ್ದೇನೆ. ಅದೀಗ ಮುಗಿಯಿತು. ಇಷ್ಟಾದ ನಂತರವೂ ನಿಮಗೆ ಇದನ್ನೇ ಸುದ್ಧಿ ಮಾಡಬೇಕೆಂದರೆ ಕಷ್ಟದ ಕೆಲಸವಲ್ಲ. ನಿಮ್ಮ ಪ್ರೈವೇಟ್ ಫೋಟೋಗ್ರಾಫರ್ಸ್ ಮಾಡಿದ ವಿಡಿಯೋದಲ್ಲಿ, ತೆಗೆದ ಫೋಟೋಗಳಲ್ಲಿ ಎಲ್ಲವನ್ನು ಸೆರೆ ಹಿಡಿದಿರುತ್ತಾರೆ. ಅದನ್ನು ಉಪಯೋಗಿಸಿ ಸುದ್ಧಿ ಮಾಡಿಕೊಳ್ಳಿ, ಅದಕ್ಕೇನು ಕಾಲ ಮಿಂಚಿಲ್ಲ."
ಈಗಲೂ ನಿನಗೆ ಹೇಗೆ ಗೆಲ್ಲಬೇಕು ಎಂಬ ನಡೆ ಸೂಚಿಸುತ್ತಿದ್ದೇನೆ, ಅದನ್ನು ಬಳಸಿ ಗೆಲ್ಲು. ಆದರೆ ನೀನು ಗೆದ್ದು ಸೋತಂತೆ ಎಂದು ನಿನಗೆ ತಿಳಿದಿರುತ್ತದಲ್ಲ ಎಂಬಂತಿತ್ತು ಅವನ ಮಾತಿನ ಧಾಟಿ.
ಒಂದು ನಿಮಿಷದ ಮೌನದ ನಂತರ ಆತ ಹೊರಡಲನುವಾಗಿ "ಬರ್ತೀನಿ.." ಎಂದ.
ಅವಳೇ ಮೌನ ಮುರಿದಳು. "ಇದ್ದು ಬಿಡು."
"ವ್ಹಾಟ್??" ತಿರುಗಿ ನೋಡಿದ ಸಮ್ಮಿಶ್ರ.
"ಹೌದು, ನನ್ನ ಪ್ರೈವೇಟ್ ಸೆಕ್ಯುರಿಟಿಯಾಗಿ ಇದ್ದುಬಿಡು.."
"ನಾನು ಪೋಲಿಸ್" ನಕ್ಕ ಸಮ್ಮಿಶ್ರ. ದೇಶ ಕಾಯುತ್ತೇನೆ ಹೊರತೂ ನಿನ್ನನ್ನಲ್ಲ ಎಂಬ ಸ್ಪಷ್ಟ ಸಂದೇಶವಿತ್ತು.
ಅವಳೂ ನಕ್ಕಳು. "ಗೊತ್ತು ನನಗೆ, ಆ ಕೆಲಸ ಬಿಡು. ನಾನೇ ನಿನ್ನನ್ನು ನೇಮಿಸಿಕೊಳ್ಳುತ್ತೇನೆ. ಅಲ್ಲಿಗಿಂತ ಚಾಲೆಂಜಿಂಗ್ ಜಾಬ್ ಇಲ್ಲಿ ಸಿಗುತ್ತದೆ.."
ಎರಡು ನಿಮಿಷ ಯೋಚಿಸಿ ಷರತ್ತಿನೊಂದಿಗೆ ಎಂದ.
"ಏನದು?" ಪ್ರಿಯಂವದಾ ಎಲ್ಲದಕೂ ಸಿದ್ಧಳಿದ್ದಳು.
"ನೀನು ನನ್ನ ಯಾವುದೇ ಮಾತಿಗೆ ಎದುರಾಡಬಾರದು ರಕ್ಷಣೆಯ ವಿಷಯದಲ್ಲಿ. ಮತ್ತೊಂದೆಂದರೆ ನನ್ನ ಹಿಂದೆ ಯಾವತ್ತೂ ಗೂಢಾಚಾರಿಗಳನ್ನು ನೇಮಿಸಬಾರದು.ಇವೆರಡರಲ್ಲಿ ಯಾವುದನ್ನು ಮುರಿದರೂ ಅದೇ ಕೊನೆ"
"ಡೀಲ್" ಎಂದಳು.
ಅಂದಿನಿಂದ ಹತ್ತು ವರ್ಷ ಕಳೆದು ಹೋಗಿತ್ತು. ಸಮ್ಮಿಶ್ರ ಅವಳನ್ನು ಕಣ್ರೆಪ್ಪೆಯಂತೆ ಕಾಯ್ದುಕೊಂಡಿದ್ದ.
ಪ್ರಿಯಂವದಾ ಎಂದಿಗೂ ತನ್ನ ಷರತ್ತುಗಳನ್ನು ಮುರಿಯುವ ಯೋಚನೆ ಕೂಡ ಮಾಡಿರಲಿಲ್ಲ. ಎದುರಿಗಿದ್ದ ವ್ಯಕ್ತಿ ತನಗಿಂತ ಬಲಶಾಲಿ ಎಂಬ ಕಲ್ಪನೆ ಒಮ್ಮೆ ಮೂಡಿದರೆ ತಲೆಯಿಂದ ಅದನ್ನು ತೆಗೆಯುವುದು ಬಹಳ ಕಷ್ಟ. ಅವರ ಮೊದಲ ಭೇಟಿಯಲ್ಲಿಯೇ ಸಮ್ಮಿಶ್ರ ಅವಳಿಗಿಂತ ಶಕ್ತಿವಂತ ಮತ್ತು ಬುದ್ಧಿವಂತ ಎಂಬುದನ್ನು ಸ್ಪಷ್ಟವಾಗಿ ತೋರಿಸಿದ್ದ. ಅದು ಅವಳ ತಲೆಯಲ್ಲಿ ಹಾಗೆಯೇ ಉಳಿದುಬಿಟ್ಟಿತ್ತು.
ಸಮ್ಮಿಶ್ರ ಅವಳ ರಕ್ಷಣಾವಲಯಕ್ಕೆ ಬಂದ ನಂತರ ಹಲವಾರು ಹುಳುಕುಗಳು ಅವನಿಗೆ ತಿಳಿದಿದ್ದವು. ಅದರ ಬಗ್ಗೆ ಆತ ತಲೆ ಕೆಡಿಸಿಕೊಂಡಿರಲಿಲ್ಲ. ರಾಜಕೀಯ ಎಂದ ಮೇಲೆ ಇದು ಸಾಮಾನ್ಯ ಎಂಬುದು ಗೊತ್ತಿತ್ತು. ಸಮ್ಮಿಶ್ರ ಒಂಟಿಯಾಗಿಯೇ ಇದ್ದ. ಪ್ರಿಯಂವದಾ ಕೂಡ ಮದುವೆಯಾಗುವಂತೆ ಸೂಚಿಸಿದ್ದಳು. ಮನೆಯವರ ಬಗ್ಗೆ ಕೇಳಿದರೆ ತನಗಾರು ಇಲ್ಲವೆಂದು ಹೇಳಿದ್ದ. ಮದುವೆಗೂ ಮನಸ್ಸು ಮಾಡಿರಲಿಲ್ಲ. ಹಾಗೆಯೇ ಕಳೆದಿತ್ತು ದಿನಗಳು.. ಪ್ರಿಯಂವದಾ ಸಮ್ಮಿಶ್ರನ ಭದ್ರ ಕೋಟೆಯಲ್ಲಿ ಸುರಕ್ಷಿತವಾಗಿದ್ದಳು.
ರಣಹದ್ದಿನ ಕಣ್ಣೊಂದು ಅವಳ ಮೇಲೆ ಬೀಳುವವರೆಗೆ...
ಗರುಡ ಭಾರತಕ್ಕೆ ಬಂದಿದ್ದ.. ಪ್ರಿಯಂವದಾಳ ಪೂರ್ತಿ ಡಿಟೇಲ್ಸ್ ಅವನ ಬಳಿಯಿತ್ತು... ಸಮ್ಮಿಶ್ರನದೂ ಸೇರಿಸಿ.....

...............................ಮುಂದುವರೆಯುತ್ತದೆ..............................
ನಮ್ಮ ನಿಮ್ಮ ನಡುವೆ...

"ಕ್ರಾಂತಿ, ದೊಡ್ಡ ಮಟ್ಟದ ಕ್ರಾಂತಿ ಆಗಬೇಕು" ಎಂದ ಶಾಸ್ತ್ರಿ.ಎದುರಿಗೆ ಕುಳಿತಿದ್ದ ಸರೋವರಾ ಕಕ್ಕಾಬಿಕ್ಕಿಯಾಗಿ ಶಾಸ್ತ್ರಿಯನ್ನೇ ನೋಡುತ್ತ ಕುಳಿತಿದ್ದಳು. ಸೂರ್ಯ ದಿಗಂತದಂಚಿನಲ್ಲಿ ಇಣುಕುತ್ತಿದ್ದ. ಸಮುದ್ರದಲೆಗಳು ದಡಕ್ಕೆ ಬಡಿದು, ಮರಳಿ ಮರೆಯಾಗಿ, ತೆರಳಿ ತೆರೆಯಾಗುತ್ತಿದ್ದವು. ಸರೋವರಾಳ ನೀಳ ಕೈಬೆರಳುಗಳು ಮರಳಿನಲ್ಲಿ ಚಿತ್ತಾರ ಬಿಡಿಸಿ, ಅಳಿಸಿ, ಪುನಃ ಬಿಡಿಸಿ ಅವಳ ಮನಸ್ಥಿತಿಯನ್ನು ಚಿತ್ರಿಸುತ್ತಿದ್ದವು.
ಶಾಸ್ತ್ರಿ ಅರ್ಧ ಘಂಟೆಯಿಂದ ಅವಳಿಗೆ ವಿವರಿಸುತ್ತಲೇ ಇದ್ದ. ಸರೋವರಾಳಿಗೆ ಅವೆಲ್ಲ ದೊಡ್ಡ ವಿಷಯಗಳು. ಸರೋವರಾ ಅವಳ ಹೆಸರಿನಂತೆಯೇ. ಸಮುದ್ರದಂತೆ ಆಕೆ ದಡಕ್ಕೆ ಬಡಿದು ಸದ್ದು ಮಾಡುವವಳಲ್ಲ.ತಾನಾಯಿತು, ತನ್ನ ಪ್ರಪಂಚವಾಯಿತು ಅಷ್ಟೆ. ದೇಶದಲ್ಲಿ ಏನಾಗಬೇಕು? ದೇಶವನ್ನು ಯಾರು ಆಳಬೇಕು? ಯಾರು ಆಳಿದ್ದರು? ಇದೆಲ್ಲ ಅವಳಿಗೆ ಬೇಡದ ವಿಷಯ. ಶಾಸ್ತ್ರಿಗೆ ಬೇಸರವಾಗದಿರಲೆಂದು ಆತ ಹೇಳುವುದನ್ನು ಕೇಳುತ್ತ ಕುಳಿತಿದ್ದಳು. ಶಾಸ್ತ್ರಿಯ ವಿವರಣೆ, ಆತನ ಉಪಾಯಗಳು ಒಮ್ಮೊಮ್ಮೆ ಅವಳಲ್ಲಿ ಭಯ ಹುಟ್ಟಿಸುತ್ತಿತ್ತು. ಹುಲಿ ಕಂಡ ಚಿಗರೆಯಂತೆ ಮುದ್ದೆಯಾಗಿ ಕುಳಿತು ಶಾಸ್ತ್ರಿಯ ಮಾತಿನ ಭರಾಟೆ ಸಹಿಸುತ್ತಿದ್ದಳು. ಮಾತನಾಡುತ್ತಿರುವ Topic ಬದಲಾದರೆ ಸಾಕಿತ್ತು ಅವಳಿಗೆ.
"ಈ ಕ್ರಾಂತಿ, ಹೋರಾಟ ಇವೆಲ್ಲ ನಮ್ಮಂಥ ಸಾಮಾನ್ಯ ಜನರಿಗಲ್ಲ ಶಾಸ್ತ್ರಿ." ಬಾಯ್ಬಿಟ್ಟಳು ಸರೋವರಾ.
ಏನೋ ಹೇಳುತ್ತಿದ್ದ ಶಾಸ್ತ್ರಿ ಅಲ್ಲಿಗೇ ನಿಲ್ಲಿಸಿ ಅವಳ ಮುಖ ನೋಡಿದ. ಅವನಿಗೆ ನಗು ಬಂತು. "ಅಯ್ಯೋ ಮಂಕೆ!! ಕ್ರಾಂತಿ, ಹೋರಾಟ, ಧರಣಿ ಇಂತವನ್ನೆಲ್ಲ ನನ್ನಂತ, ನಿನ್ನಂತ ಸಾಮಾನ್ಯರೇ ಮಾಡಬೇಕು!!
ಯಾಕೆ ಹೇಳು?? ನಾನೇ ಹೇಳುತ್ತೇನೆ ಕೇಳು. ನೀನು Business Man ಆಗಿರುವೆ ಎಂದುಕೋ, ನಿನ್ನ ಒಂದು ತಾಸಿನ ಬೆಲೆ ಸಾವಿರವೋ, ಹತ್ತು ಸಾವಿರವೋ, ಲಕ್ಷವೋ ಆಗಿರುತ್ತದೆ. ನಿನಗೇಕೆ ಬೇಕು ಕ್ರಾಂತಿ, ಧರಣಿ? Time Waste ಅಲ್ಲವಾ? ನಿನ್ನ ಒಂದು ತಾಸು ಹಾಳಾದರೆ ಅಷ್ಟು ದುಡ್ಡು ಕೈ ಬಿಡುತ್ತದೆ.
ಇನ್ನು ನೀನು Government Employee ಆಗಿದ್ದರೆ ಕೆಲಸ ಮಾಡುತ್ತಿರುವ ಸರ್ಕಾರದ ವಿರುದ್ಧವೇ ಧರಣಿ ಕೂರಲು, ಕ್ರಾಂತಿ ಏಳಲು ಸಾಧ್ಯವಾ!?
ಇದಲ್ಲದೇ ಯಾವುದೋ MNC ಯಲ್ಲಿ ಕೆಲಸ ಮಾಡುತ್ತಿರುವೆ ಎಂದುಕೋ. ಅಲ್ಲಿ ನಿನಗೆ ಕೊಡುವ ಸಂಬಳಕ್ಕೆ ನಿನಗೆ ಎಷ್ಟು ಕೆಲಸ ಕೊಡುತ್ತಾರೆ ಎಂದರೆ ನೀನು ಯಾವುದೇ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಯೋಚಿಸಲಾರೆ ಕೂಡಾ. ವಾರ್ತೆಯಲ್ಲಿ ನೋಡಿ ತಪ್ಪಿದ್ದವರಿಗೆ ಬಯ್ಯುವುದೇ ಅವರಿಗೆ ಸಿಗುವ ಅವಕಾಶ, ಅವರು ಮಾಡುವ ದೊಡ್ಡ ದೇಶ ಹಿತ.
ಇನ್ನು ದಿನಗೂಲಿ ಮಾಡುವವರು.. ಅವರಿಗೆ ದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿದು ಸಂಪಾದಿಸಿದರೆ ರಾತ್ರಿ ಊಟ, ನಿದ್ದೆ. ಇಷ್ಟೆ ಅವರ ಬದುಕು. ಧರಣಿ, ಕ್ರಾಂತಿಗೆಲ್ಲಿ ಸಮಯ?
ಮಕ್ಕಳು, ಮುದುಕರು ಸಮಾಜದಲ್ಲಿ ಗೌರವದಿಂದ, ನೆರೆಹೊರೆಯವರೊಂದಿಗೆ ಸ್ಪಂದಿಸಿ ಬದುಕುತ್ತಿರುವ ಜನಗಳು. ಅವರು ಧರಣಿ ಕ್ರಾಂತಿಯಿಂದ ದೂರವೇ.
ಆದರೂ ನಮ್ಮ ದೇಶದಲ್ಲಿ ರೋಡ್ ಬಂದ್ ಗಳು, ಬ್ಲ್ಯಾಕ್ ಡೇಗಳು, ದೊಂಬಿ, ಗಲಾಟೆ ದಿನಾಲೂ ನಡೆಯುತ್ತಲೇ ಇರುತ್ತದೆ, ಇದನ್ನು ಮಾಡುವವರು ನನ್ನ, ನಿನ್ನಂಥ ಸಾಮಾನ್ಯರೇ. ಕೆಲವೊಬ್ಬರಿಗೆ ನಿಜವಾಗಲೂ ಮಾಡುವ ಪರಿಸ್ಥಿತಿ ಇರುತ್ತದೆ. ಇಲ್ಲ್ಲವೇ ಏನೂ ಕೆಲಸವಿಲ್ಲದ ಸಾಮಾನ್ಯರಿಗೆ ದುಡ್ಡು ಕೊಟ್ಟು ದುಡ್ಡು ಕೊಟ್ಟು ತಲೆ ತಿರುಗಿಸಿ ಆಟವಾಡಿಸುವ ದೊಡ್ಡ ತಲೆಗಳು ಹಿಂದಿರುತ್ತವೆ.
ಹಾಗಾಗಿ ಸರೋವರಾ ನೀನು ನಾನು ಕ್ರಾಂತಿ ಪ್ರಾರಂಭಿಸಲು ಯೋಗ್ಯ ಜನ. ಈ ದೇಶಕ್ಕೆ ಒಂದು ದೊಡ್ಡ ಕ್ರಾಂತಿಯ ಅವಶ್ಯಕತೆಯಿದೆ. ಡೆಮಾಕ್ರಸಿಯನ್ನು ಕಿತ್ತೆಸೆದು ಕಮ್ಯುನಿಸಂ ತಂದು ಈ ಜನರನ್ನು ತುಳಿದರೆ ಮಾತ್ರ ಎಲ್ಲರಿಗೂ ತಿಳಿಯುತ್ತದೆ ಸ್ವಾತಂತ್ರ್ಯ ಎಂದರೆ ಏನು ಎಂದು...." ಬಡಬಡಿಸುತ್ತಿದ್ದ ಶಾಸ್ತ್ರಿ.
ಅದು ಶಾಸ್ತ್ರಿಯ ಸ್ವಭಾವವೋ? ಅಥವಾ ದೇಶದ ಮೇಲಿನ ಅಪ್ಪಟ ಪ್ರೀತಿ ಆತನನ್ನು ಅಷ್ಟು ಬಡಿದೆಬ್ಬಿಸುತ್ತದೋ ತಿಳಿಯದಾಗಿದ್ದಳು ಸರೋವರಾ. ಆದರೆ ತಿಂಗಳಲ್ಲಿ ಎರಡು ಬಾರಿಯಾದರೂ ಶಾಸ್ತ್ರಿಯ ಆ ಮುಖ ನೋಡುತ್ತಿದ್ದಳವಳು. ಕಾಲೇಜಿನ ದಿನಗಳಿಂದಲೂ ಶಾಸ್ತ್ರಿ ಅವಳಿಗೆ ಪರಿಚಯ. ಶಾಸ್ತ್ರಿಯನ್ನು ಯಾರಾದರೂ ಅರ್ಥ ಮಾಡಿಕೊಂಡಿದ್ದಾರೆ ಅದು ತಾನೇ ಎಂದುಕೊಳ್ಳುತ್ತಾಳೆ ಅವಳು. ತುಂಬ ಮಾತನಾಡುವ, ನಗಿಸುತ್ತಲೇ ಇರುವ ಶಾಸ್ತ್ರಿ ಮನಸ್ಸಿನಲ್ಲಿ ಯಾವಾಗಲೂ ಒಂಟಿಯಾಗಿಯೇ ಇರುತ್ತಾನೆ ಎಂದು ಗೊತ್ತು ಅವಳಿಗೆ. ಒಂಟಿತನವನ್ನು ಸರೋವರಾಳಿಗಿಂತ ಚೆನ್ನಾಗಿ ಯಾರು ಅರ್ಥ ಮಾಡಿಕೊಳ್ಳಬಲ್ಲರು!? ಅವಳು ಬೆಳೆದಿದ್ದೇ ಅನಾಥಾಶ್ರಮದಲ್ಲಿ. ಆದರೆ ಅವಳಿಗೆ ಅನಾಥ ಪ್ರಜ್ಞೆ ಯಾವತ್ತೂ ಕಾಡಿದ್ದಿಲ್ಲ. ಯಾಕೆಂದರೆ ಕುಟುಂಬ ಸುಖವೆಂದರೆ ಏನು ಎಂದು ಆಕೆ ಕಂಡವಳಲ್ಲ. ಆದರವಳಿಗೆ ಒಂಟಿತನವೆಂದರೇನು ಎಂಬುದು ಗೊತ್ತು.
ಹೀಗೆರಡು ಒಂಟಿ ಹೃದಯಗಳನ್ನು ಹತ್ತಿರವಾಗಿಸಿತ್ತು ಸಮಯ. ಅವರಿಬ್ಬರ ನಡುವೆ ಅದ್ಯಾವ ಸಂಬಂಧ ಬೆಸುಗೆಯು ಇಲ್ಲ. ಒಮ್ಮೆ ಸರೋವರಾ ಬಾಯ್ಬಿಟ್ಟು ಕೇಳಿದ್ದಳು ಕೂಡಾ. "ಶಾಸ್ತ್ರಿ ನಾವಿಷ್ಟು ಮಾತನಾಡುತ್ತೇವೆ, ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತೇವೆ, ಕಣ್ಣೀರಿಗೆ ಕಣ್ಣೀರು, ನಲಿವಿಗೆ ನಲಿವು, ಈ ಸಂಬಂಧಕ್ಕೊಂದು ಹೆಸರು ಬೇಡವಾ??" ಅಂದು ಶಾಸ್ತ್ರಿ ಹೇಳಿದ ಸಾಲೊಂದು ಇಂದಿಗೂ ನೆನಪಿದೆ ಅವಳಿಗೆ.
"ಕಣ್ಣೀರಾಗದ ದುಃಖದ ನಡುವಿನ ಸಂತೋಷಕ್ಕೆ ಹೆಸರೊಂದು ಬೇಕಾ ಹುಚ್ಚು ಹುಡುಗಿ??"
ಆತ ಹೇಳಿದ ಮಾತು ಅರ್ಥವಾದಲ್ಲಿಂದ ಅವಳು ಮತ್ತೆ ಆ ಸಂಬಂಧವನ್ನು ಪ್ರಶ್ನಿಸಿಕೊಂಡಿರಲಿಲ್ಲ. ಇಂದು ಮತ್ತೆ ಮತ್ತೆ ಶಾಸ್ತ್ರಿ ಕ್ರಾಂತಿ, ಹೋರಾಟದಲ್ಲಿ ಕಳೆದುಹೋಗುತ್ತಿದ್ದ. ಸರೋವರಾ ಹಟ ಬಿಡದ ತ್ರಿವಿಕ್ರಮನಂತೆ ವಿಷಯ ಬದಲಿಸಲು "ಶಾಸ್ತ್ರಿ! ದುಡ್ಡಿರುವವರು, ದುಡಿಯುತ್ತಿರುವವರಿಗೆ ಈ ಕ್ರಾಂತಿ, ಧರಣಿ ಬೇಡ ಎಂದಾದ ಮೇಲೆ ನೀನೇಕೆ ಕ್ರಾಂತಿ ಮಾಡಬೇಕು? ದುಡ್ಡೇ ಮಾಡು. ಅದಾಗದು ನಿನ್ನ ಕೈಯಲ್ಲಿ." ಎಂದು ಹಂಗಿಸಿದಳು.
"ಮೋಸ ಮಾಡಿ ಬದುಕಲು ನನಗೆ ಇಷ್ಟವಿಲ್ಲ" ಎಂದ ಗಂಭೀರವಾಗಿ.
"ನಿನಗೆ ಮೋಸ ಮಾಡಿ ದುಡ್ಡು ಸಂಪಾದಿಸು ಎಂದವರಾರು?? ಒಳ್ಳೆಯ ದಾರಿಯಿಂದಲೇ ಹಣ ಸಂಪಾದಿಸು, ಅದೇ ತಾನೇ ನಿಜವಾದ ಬುದ್ಧಿವಂತಿಕೆ." ಅಂತೂ ಕ್ರಾಂತಿಯಿಂದ ಹೊರತಂದೆನಲ್ಲ ಎಂದುಕೊಂಡು ಆತನನ್ನೇ ನೋಡುತ್ತ ಕುಳಿತುಕೊಂಡಿದ್ದಳು ಸರೋವರಾ.
ನಕ್ಕ ಶಾಸ್ತ್ರಿ!! "ಮೋಸ ಮಾಡದೆ ದುಡಿದರೆ ನನ್ನ ನಿನ್ನ ಜೀವನ ಇದಕ್ಕೂ ಚೆನ್ನಾಗೇನೂಇರಲು ಸಾಧ್ಯವಿಲ್ಲ ಸರೂ.. ಮಿಡಲ್ ಕ್ಲಾಸ್ ಜೀವನಕ್ಕಾಗಿ ಕೆಲಸವೇಕೆ ಮಾಡಬೇಕು? ಇದ್ದರೆ ಪೂರ್ತಿ ಮೇಲಿರಬೇಕು. ಇಲ್ಲದಿದ್ದರೆ ಹಾದಿಯ ಬದಿಯಲ್ಲಿ ಬಿದ್ದಿರಬೇಕು. ಪೂರ್ತಿಯಾಗಿ ನನ್ನ ಬಳಿ ಏನೂ ಇಲ್ಲ, ಆಲೋಚನೆಗಳೇ ಇಲ್ಲ. ಕೊಳಚೆ ನೀರಿಗೂ, ಬಿಸ್ಲೇರಿ ನೀರಿಗೂ ವ್ಯತ್ಯಾಸ ತಿಳಿಯುವುದು ಯಾವಾಗ ಗೊತ್ತಾ?? Compare ಮಾಡಿದಾಗ. Compare ಮಾಡದೆ ಬದುಕಿದೆವೆಂದುಕೋ ಸರೂ, ಆಗ ಎಲ್ಲವೂ ಒಂದೇ.
ಹಾಗಿಲ್ಲ, ಒಂದು ವೇಳೆ ನಿನಗೆ ಅವೆರಡರ ನಡುವಿನ ವ್ಯತ್ಯಾಸ ಗೊತ್ತಿದೆ ಎಂದಾದರೆ ಮತ್ತೆಂದೂ ಕೊಳಚೆ ನೀರಿನ ಬಗ್ಗೆ ಯೋಚಿಸಲೂಬಾರದು. ಬಿಸ್ಲೇರಿ ನೀರಿನಲ್ಲೆ ಸ್ನಾನ ಕೂಡಾ. ಆ Level ಬದುಕು ಬದುಕಬೇಕು. ಕನಸುಗಳು ಹುಟ್ಟಿದರೆ ಅದು ತೀರಲೇಬೇಕು.
ಬೆಳಿಗ್ಗೆ ಇಂಡಿಯಾದಲ್ಲಿ Coffee ಕುಡಿದು, ಮಧ್ಯಾನ್ನ ಲಂಡನ್ ನಲ್ಲಿ ಊಟ ಮಾಡಿ, ಸಂಜೆ ರೋಮ್ ನ ಬೀದಿಗಳಲ್ಲಿ ಶಾಪಿಂಗ್ ಮಾಡಿ, ರಾತ್ರಿ ಸ್ವಿಡ್ಜರ್ಲೆಂಡಿನ ತಂಪು ರಾತ್ರಿಯಲ್ಲಿ ಬೆಚ್ಚನೆಯ ಹಾಸಿಗೆಯಲ್ಲಿ ಬೆರೆಯುವಂತಿರಬೇಕು.
ಅದಕ್ಕೇ ಮೋಸ ಮಾಡಬೇಕು." ಶಾಸ್ತ್ರಿಯ ಮಾತಿನ ಭರಾಟೆ ಶಾಂತವಾಯಿತು.
ಸರೋವರಾ ಜಾಣೆ! ತರ್ಕಬದ್ಧವಾಗಿ ಯೋಚಿಸಬಲ್ಲಳು. ಎದುರಿಗಿರುವವನ ಕಣ್ಣಲ್ಲಿ ಕಣ್ಣಿಟ್ಟು ತಣ್ಣನೆಯ ಸ್ವರದಲ್ಲಿ ಪ್ರಶ್ನಿಸಬಲ್ಲಳು ಎದುರಿನವನ ಬುದ್ಧಿಗೆ ಸವಾಲೆಸೆಯುವಂತೆ.
"ಹಾಗಾದರೆ ಕಾರಿನಲ್ಲಿ ಓಡಾಡುವವರು, ವಿಮಾನದಲ್ಲಿ ಹಾರುವವರು ಎಲ್ಲರೂ ಮೋಸಗಾರರು ಎಂಬುದು ನಿನ್ನ ಅಭಿಪ್ರಾಯವಾ!?
ಕಂಪನಿಗಳನ್ನು ನಡೆಸುತ್ತಿರುವವರು, ಉದ್ಯಮಗಳನ್ನು ನಡೆಸುವವರು ಮೋಸ ಮಾಡುತ್ತಿರುವವರಾ!?"
"ಹೌದು" ಧೃಢತೆಯಿತ್ತು ಧ್ವನಿಯಲ್ಲಿ.
ಅವನಿಂದ ಈ ಉತ್ತರ ನಿರೀಕ್ಷಿಸಿರಲಿಲ್ಲ ಅವಳು. ಶಾಸ್ತ್ರಿ ಅಲ್ಲಿಗೇ ನಿಲ್ಲಿಸಲಿಲ್ಲ "ನಿನಗೇನು ಗೊತ್ತು ಸರೂ? ಮಲ್ಟಿ ನ್ಯಾಷನಲ್ ಕಂಪನಿಗಳು, ಉದ್ಯಮಗಳು ಮೇಲೇರಲು ಕಾರಣ ಅದರ ಮುಖ್ಯಸ್ಥರಲ್ಲ. ಹೊತ್ತು ಗೊತ್ತಿಲ್ಲದೇ, ಕೊಡುವ ಸ್ವಲ್ಪ ದುಡ್ಡಿಗೆ ನಿದ್ರೆಗೆಟ್ಟು ದುಡಿಯುವ ಮಿಡಲ್ ಕ್ಲಾಸ್ ಜನರು. ಅವರಿಂದ ತೆಗೆದುಕೊಳ್ಳುವ ಕೆಲಸಕ್ಕೂ, ಕೊಡುವ ದುಡ್ಡಿಗೂ ಸಂಬಂಧವೇ ಇರುವುದಿಲ್ಲ ಸರೂ. ಮೋಸವಲ್ಲವಾ ಅದು?? ಅದಕ್ಕಿಂತ ದೊಡ್ಡ ಮೋಸ ಏನು ಗೊತ್ತಾ? ನಮ್ಮ ಜೀವನದ ಉತ್ತಮ ಸಮಯ ಯಾವುದು ಗೊತ್ತಾ? 20 ರಿಂದ 40, ಹರೆಯ. ಮೆದುಳು ಮತ್ತು ದೇಹ ಎರಡು ಸ್ಪರ್ಧೆಗಿಳಿದಂತೆ ಕೆಲಸ ಮಾಡುವ ದಿನಗಳವು. ಇಂತಹ ವಯಸ್ಸನ್ನು ಇನ್ಯಾರೋ ದುಡ್ಡು ಕೊಡುತ್ತಾರೆ ಎಂದ ಕೂಡಲೇ ಜನರು ಮಾರಿಕೊಂಡು ಬಿಡುತ್ತಾರೆ.
ಒಬ್ಬ ಮಿಡಲ್ ಕ್ಲಾಸ್ ಮನುಷ್ಯನಿಗೆ ಇಪ್ಪತ್ತು ಸಾವಿರ ಎಂದರೆ ದೊಡ್ಡ ವಿಷಯವೇ. ಆದರೆ ಆತ ತನ್ನ ಯೌವ್ವನದಲ್ಲಿ ಬೇರೆಯವರಿಗಾಗಿ ದುಡಿಯುವ ಬದಲು ತನಗಾಗಿ ದುಡಿದರೆ ಬೇರೆಯವರಿಗೆ ಕೆಲಸ ಕೊಡುವಷ್ಟು ಬೆಳೆದುಬಿಡಬಹುದು ಸರೂ. ಮೋಸವಲ್ಲವಾ ಇದು?? ಜನ ತಿಳಿಯದೇ ಮೋಸ ಹೋಗುತ್ತಿದ್ದಾರೆ. ನನಗೆ ತಿಳಿಯಿತು ಅದಕ್ಕೆ ಬಿಟ್ಟುಬಂದುಬಿಟ್ಟೆ" ನಿರಾಳವಾದ ಒಮ್ಮೆ.
ಕೆಲಸಕ್ಕೆ ಸೇರಿ ಮೂರು ದಿನವಾಗಿತ್ತು ಅಷ್ಟೆ, ಬಿಟ್ಟು ಬಂದಿದ್ದ. ಹೀಗೆ ಕೆಲಸ ಬಿಟ್ಟು ಬಂದೆ ಎಂದು ಅವಳಿಗೆ ತಿಳಿಸಲು ಕರೆದಿದ್ದ. ಅವನಿಗೂ ಕೂಡ ಅವಳೊಬ್ಬಳೆ ಸ್ನೇಹಿತೆ. ಮನೆಯಿಂದ ದೂರಾಗಿದ್ದಾನಾ? ಮನೆಯೇ ಇರಲಿಲ್ಲವೋ? ಆತ ಯಾವತ್ತೂ ಹೇಳಿರಲಿಲ್ಲ, ಅವಳೂ ಕೇಳಿರಲಿಲ್ಲ.
"ಅದು ಮೋಸವಾ!?" ಅರ್ಥವಾಗಿರಲಿಲ್ಲ ಅವಳಿಗೆ.
"ಇನ್ನೂ ಸೂಕ್ಷ್ಮವನ್ನು ಹೇಳುತ್ತೇನೆ ಕೇಳು, ಈಗ ನಾನು ಸೇರಿದ ಕಂಪನಿಯನ್ನೇ ತಗೋ...."
"ಯಾರು ಕೊಡುತ್ತಾರೆ?" ಹುಸಿ ನಕ್ಕಳು.
"ಹಾಗಲ್ಲ, ನಾನು ಸೇರಿದ ಕಂಪನಿಯಲ್ಲಿ ಒಂದು ಸ್ಕೀಮ್ ಇದೆ. ಪ್ರತಿ ವರ್ಷ ಒಬ್ಬ ಕೆಲಸಗಾರನ ಪ್ಯಾಕೇಜ್ 325000 ಎಂದು ಸೇರಿಸಿಕೊಳ್ಳುವಾಗಲೇ ಹೇಳಿರುತ್ತಾರೆ. ನಂತರ ಪ್ರತಿ ತಿಂಗಳು ಆತನ ಕೈಗೆ ಬರುವ ಸಂಬಳ 20400. ಅಂದರೆ ವರ್ಷಕ್ಕೆ 244800. ಉಳಿದ ಹಣ ಏನಾಯಿತು?
ಪ್ರತೀ ಕಂಪನಿಯಲ್ಲೂ ಕೆಲಸ ಮಾಡುವವರಿಗೆ ಬೋನಸ್ ಕೊಡಬೇಕೆಂದು ಸರ್ಕಾರದ ನಿಯಮವಿದೆ. ಯಾವುದೇ ಕಂಪನಿ ತನ್ನ ಷೇರ್ ಮಾರಿಕೊಂಡಿದ್ದರೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕಂಪನಿ ಗಳಿಸಿದ ಲಾಭವನ್ನು ಜನರೆದುರು ಇಡಬೇಕು. ಲಾಭ ಹೆಚ್ಚಿದಂತೆಲ್ಲ ಷೇರಿನ ಬೆಲೆ ಹೆಚ್ಚುತ್ತದೆ.
ಹೀಗೆ ತೋರಿಸಿದ ಲಾಭಕ್ಕೆ ಅವರು ಸರ್ಕಾರಕ್ಕೆ ಸುಂಕ ಕಟ್ಟಬೇಕಲ್ಲವಾ?"
ಹೌದೆಂಬಂತೆ ತಲೆಯಾಡಿಸಿದಳು ಸರೋವರಾ.
"ಅವರು ತಲೆ ಉಪಯೋಗಿಸುವುದು ಇಲ್ಲೇ. ಬಂದ ಲಾಭದಲ್ಲಿ ತಮ್ಮ ಎಂಪ್ಲಾಯಿಗಳಿಗೆ ಬೋನಸ್ ಕೊಡುತ್ತೇವೆ ಎಂದು ತೋರಿಸುತ್ತಾರೆ. ಇದರಿಂದ ಬಹು ಪ್ರಮಾಣದ ಟ್ಯಾಕ್ಸ್ ಕಡಿಮೆಯಾಗುತ್ತದೆ. ಆದರೆ ಈ ಬೋನಸ್ ಎಂಬುದನ್ನು 325000 ಪ್ಯಾಕೇಜ್ ಹಣದಲ್ಲೇ ಹಿಡಿದಿಟ್ಟಿರುತ್ತಾರೆ. ಅದರ ಜೊತೆ ಮತ್ತೆ ಪರ್ಫಾರ್ಮೆನ್ಸ್ ಎಂದು ಹೇಳಿ ಕೆಲಸಗಾರರಿಗೆ ಗ್ರೇಡ್ ಕೊಟ್ಟು ಅವರ ಹಣದಲ್ಲಿಯೇ ಕಡಿತಗೊಳಿಸುತ್ತಾರೆ.
ಮೋಸವಲ್ಲವಾ!? ಅವನ ದುಡ್ಡನ್ನು ಅವನೂ ಕೇಳುವ ಸ್ವಾತಂತ್ರ ಇಲ್ಲದಂತೆ ಮಾಡಿಬಿಡುತ್ತಾರೆ."
ಹೌದು ಎನ್ನಬೇಕೋ, ಇಲ್ಲ ಎನ್ನಬೇಕೋ ಎಂಬ ಸಂದಿಗ್ಧದಲ್ಲಿದ್ದಳು ಸರೋವರಾ.
ಅಷ್ಟರಲ್ಲಿಯೇ ಶಾಸ್ತ್ರಿ "ಇನ್ನೂ ಹೇಳುತ್ತೇನೆ ಕೇಳು, ಪ್ರತೀ ಕಂಪನಿಯು ಪ್ರಾವಿಡೆಂಟ್ ಫಂಡ್ ಎಂಬ ಸ್ಕೀಮ್ ಹೊಂದಿರುತ್ತದೆ. ಕಂಪನಿಯನ್ನು ಬಿಡುವ ಸಮಯದಲ್ಲಿ ಅಂದರೆ ಜೀವನದ ಕೊನೆಯ ಅವಧಿಗೆ ಒಂದು ಮೊತ್ತದ ಹಣ ಕೈ ಸೇರುವ ಒಂದು ಪ್ಲಾನ್ ಅದು. ಒಬ್ಬ ಕೆಲಸಗಾರ ಒಂದುಸಾವಿರದಷ್ಟನ್ನು ಕಂಪನಿಗೆ ಬಿಟ್ಟರೆ, ಕಂಪನಿಯು ಅದಕ್ಕೆ ಇನ್ನೊಂದು ಸಾವಿರ ಸೇರಿಸಿ ಇಡುತ್ತ ಬರುತ್ತಾರೆ. ನಿವೃತ್ತಿಯ ವೇಳೆಯಲ್ಲಿ ಆ ಹಣ ಅವನ ಕೈ ಸೇರುತ್ತದೆ."
ಅಯ್ಯೋ, ಪಾಪಾತ್ಮ! ಇದರಲ್ಲಿ ಮೋಸವೆಲ್ಲಿ ಬಂತಯ್ಯಾ?? ಕೊನೆಗಾಲದಲ್ಲಿ ಒಳ್ಳೆಯದೇ ಆಗುತ್ತದೆ ತಾನೇ ಅದರಿಂದ.." ಎಂದಳು.
"ಅದೇ ನನಗೂ, ನಿನಗೂ ಇರುವ ವ್ಯತ್ಯಾಸ ಸರೂ."
"ಯಾವುದೋ?" ಅವನ ಮುಖ ನೋಡಿದಳು. ಅವಳ ಕಣ್ಣುಗಳಲ್ಲಿ ತುಂಟತನ ಕಂಡಿತು. ಅದನ್ನು ಗಮನಿಸಿದ ಆತ ಅವಳ ಕುತ್ತಿಗೆಯಿಂದ ಕೆಳಗೆ ದೃಷ್ಟಿ ಹರಿಸಿ ಕಣ್ಣಿನಲ್ಲೇ ನಗುತ್ತ "ನಾನು ತುಂಬ ಸೀರಿಯಸ್ ಆಗಿ ಮಾತನಾಡುತ್ತಿದ್ದೇನೆ" ಎಂದ. ಆತ ಇನ್ನೂ ಕೆಳಗೆ ದೃಷ್ಟಿ ಹರಿಸಿಬಿಡಬಹುದೆಂಬ ಯೋಚನೆಯಿಂದಲೇ ತಬ್ಬಿಬ್ಬಾದ ಅವಳು ಮುಂದುವರೆಸು ಎಂದಳು.
ಕಡೆದ ಕಲಾಕೃತಿಯಂತಿದ್ದಳು ಅವಳು. ಕಣ್ಣಲ್ಲಿ ಕಣ್ಣು ಸೇರಿದರೆ ಕೆಳಗೆ ದೃಷ್ಟಿ ಹರಿಸಲಾರದಷ್ಟು ಆಕರ್ಷಣೆ ಅವಳ ಕಂಗಳಲ್ಲಿತ್ತು.
"ಸರಿ, ನಾ ಎಲ್ಲಿದ್ದೆ??" ಎಂದು ಕಣ್ಣು ಪಕ್ಕ ಹೊರಳಿಸಿದ. ಅದು ನಿನಗೂ ಗೊತ್ತು ಎಂದು ಸಿಡಿದಳವಳು. ಅವಳ ಸಿಡಿಮಿಡಿಗೆ ತಲೆ ಕೆಡಿಸಿಕೊಳ್ಳದೆ ಸರಿ, ಸರಿ, ಮುಟ್ಟಿಕೊಂಡೆ ಎಂದ. ಮತ್ತೆ ಏನನ್ನು? ಎಂದು ಕೇಳಿದರೆ ಆಸಾಮಿ ಏನು ಹೇಳಿಯಾನೋ ಎಂದು ಸುಮ್ಮನೆ ಇದ್ದಳು.
"ಈಗ ನೋಡು...." ತುಂಟತನ ಮಾಡುತ್ತಲೇ ಪ್ರಾರಂಭಿಸಿದ ಆತ. ಮನಸ್ಸಿನಲ್ಲಿ ನಗುತ್ತಲೇ ಕೇಳಲನುವಾದಳು.
"ನನಗೀಗ ಇಪ್ಪತ್ತನಾಲ್ಕು. ನನ್ನ ನಿವೃತ್ತಿಯೆಂದರೆ 58. ಅಲ್ಲಿಗೆ ಇನ್ನೂ 34 ವರ್ಷಗಳು. ನಾನು ಪ್ರತೀ ತಿಂಗಳು ಕಂಪನಿಗೆ ಒಂದುಸಾವಿರ ಕಟ್ಟಿದೆ ಎಂದುಕೋ ಕಂಪನಿಯ ಕಡೆಯಿಂದ ಒಂದುಸಾವಿರ. ಮೂವತ್ನಾಲ್ಕು ವರ್ಷಕ್ಕೆ 408 ತಿಂಗಳುಗಳು. ತಿಂಗಳಿಗೆ ಎರಡು ಸಾವಿರವೆಂದರೆ 816000 ಖಾತೆಯಲ್ಲಿರುತ್ತದೆ. ಅದಕ್ಕೆ ಬಡ್ಡಿ ಹಿಡಿದರೂ ಹೆಚ್ಚೆಂದರೆ ಹನ್ನೆರಡರಿಂದ ಹದಿನೈದು ಲಕ್ಷ."
ಮಧ್ಯದಲ್ಲಿಯೇ "ಇದರಲ್ಲಿ ಮೋಸವೆಲ್ಲಿ?" ಎಂದು ಶುರುವಿಟ್ಟುಕೊಂಡಳು.
"ಅಯ್ಯೋ ಮಂಕೇ! ಮೂವತ್ತೈದು ವರ್ಷಗಳ ನಂತರ ನೀನು ಮೊದಲು ಕಟ್ಟಿದ ಸಾವಿರ ರೂಪಾಯಿಯ ಬೆಲೆ ಎಷ್ಟಿರಬಹುದು ಯೋಚಿಸು" ಎಂದ ಶಾಸ್ತ್ರಿ.
ಅರ್ಥವಾಗಲಿಲ್ಲ ಅವಳಿಗೆ.
"ನಾನು ಹುಟ್ಟಿದಾಗ ಅಂದರೆ ಇಪ್ಪತ್ತೈದು ವರ್ಷಗಳ ಮೊದಲ ನೂರು ರೂಪಾಯಿ ಈಗಿನ ಸಾವಿರ ಸಾವಿರ ರೂಪಾಯಿಗೆ ಸಮವಾಗಿತ್ತು. ಬಸ್ಸು, ಹಾಲಿನ ದರದಿಂದ ದಿನ ಉಪಯೋಗಿ ಎಲ್ಲ ವಸ್ತುಗಳ ಬೆಲೆ ಈಗ ಐದರಿಂದ ಆರು ಪಟ್ಟಾಗಿದೆ.
ಅಂದರೆ ಇಂದಿನಿಂದ 34 ವರ್ಷಗಳ ನಂತರದ 15 ಲಕ್ಷ /10= 1.5 ಲಕ್ಷ ಇರುವುದು. ಉಳಿದವುಗಳ ಬೆಲೆ ಐದು ಪಟ್ಟು ಜಾಸ್ತಿ, ಅಂದರೆ ಅಲ್ಲಿಗೆ 150000/5=30000. ದುಡಿದ ದಿನವೇ ಕಟ್ಟಿದ್ದರಿಂದ ಪ್ರತೀ ತಿಂಗಳು ಕಟ್ಟಿದ್ದು ಒಂದು ಸಾವಿರವೇ. ಕಟ್ಟಿದ ಹಣ 480000 ಆದರೆ ಕೊನೆಯಲ್ಲಿ ಸಿಕ್ಕಿದ್ದು 30000 ಅಷ್ಟೆ."
ಅವಳ ಮುಖದಲ್ಲಿ ಬೆವರಿನ ಹನಿಗಳು ಸಾಲಾಗಿ ನಿಂತಿದ್ದವು.
"ಲೈಫ್ ಇನ್ಸುರೆನ್ಸ್ ಪಾಲಿಸಿಗಳು, ಬ್ಯಾಂಕ್ ಗಳು ಅನುಸರಿಸುವುದು ಇದೇ ನೀತಿಯನ್ನು. ಎಲ್ಲ ಲಾಂಗ್ ಟರ್ಮ್ ಗಳ ಹರಿಯುವಿಕೆಯೂ ಇಷ್ಟೇ. ಆದದ್ದರಿಂದ ಇಂದು ದುಡಿದಿದ್ದನ್ನು ಇಂದೇ ತಿನ್ನಬೇಕು. ಅಂದರೆ ಮಾತ್ರ ಮೋಸ ಹೋಗದಿರಲು ಸಾಧ್ಯ. "
ಆತನ ಲೆಕ್ಕಾಚಾರಕ್ಕೆ ಅವಳು ವಿರೋಧ ಹೇಳಲು ಸಾಧ್ಯವಿರಲಿಲ್ಲ. ಅವಳ ಎದುರಿನಲ್ಲೇ ಸಾಕ್ಷಿಯಿತ್ತು. ಅವಳು ಹುಟ್ಟುವಾಗಿನ ದುಡ್ಡಿನ ಮೌಲ್ಯಕ್ಕು, ಈಗಿನ ಮೊಉಲ್ಯಕ್ಕೂಅಜಗಜಾಂತರ ವ್ಯತ್ಯಾಸವಿತ್ತು.
ಆತ "ಮೋಸವಲ್ಲವಾ!?" ಎನ್ನುತ್ತಾ ನಕ್ಕು, ಮತ್ತೆ" ಹೀಗೆ ಮೋಸ ಮಾಡೆನ್ನುತ್ತೀಯಾ? ಹೀಗೆ ಬದುಕುವುದಾದರೆ ಎರಡು ದಿನಗಳಲ್ಲಿ ನಿನಗೆ ಲಕ್ಷವನ್ನು ಸಂಪಾದಿಸಿಕೊಡುತ್ತೇನೆ" ಎಂದ.
ಇವನೆದುರು ತಾನು ಸೋತೆ ಎಂಬ ಅಹಂ ಕಾಡುವ ಮುನ್ನವೇ ಆ ಮಾತು ಬಂದಿತ್ತು.
ಸಿಕ್ಕಿ ಬಿದ್ದ ಈತ ಎಂದುಕೊಂಡು " ಬರೀ ಮಾತಿನಲ್ಲಿ ಹೇಳುವುದಲ್ಲ... ಮಾಡಿ ತೋರಿಸು ನೋಡೋಣ. ಆದರೆ ಒಂದು ಷರತ್ತು, ನೀನು ಮೋಸ ಮಾಡಬಾರದು. ಎಲ್ಲರಂತೆ ಬಿಸಿನೆಸ್ ಮಾಡಬೇಕು" ಎಂದಳು.
"ಮೋಸಕ್ಕೂ , ಬಿಸಿನೆಸ್ ಗೂ ವ್ಯತ್ಯಾಸವೆನಿಲ್ಲ" ಎಂದ ಶಾಸ್ತ್ರಿ.
"ಯಾಕಿಲ್ಲ? ಮೋಸ ಎಂಬುದು ತಿಳಿದರೆ ಪೊಲೀಸರು ಹಿಡಿದೊಯ್ಯುತ್ತಾರೆ. ಬಿಸಿನೆಸ್ ನಲ್ಲಿ ಅದಿಲ್ಲ" ಗೆಲ್ಲುವ ಹಟ ಅವಳಿಗೆ ಅವನೆದುರು.
ಆತ ಒಂದು ನಿಮಿಷ ಯೋಚಿಸಿ, "ಕೇವಲ ನಿನಗೆ ಇದು ಸಾಧ್ಯ ಎಂದು ತೋರಿಸಲು ಮಾಡುತ್ತಿದ್ದೇನೆ. ಇಂದು ಸೋಮವಾರ ಮುಗಿಯಿತು. ಬುಧವಾರ ಸಂಜೆಗೆ ನಿನ್ನ ಕೈಲಿ ಒಂದು ಲಕ್ಷ ಇಡುತ್ತೇನೆ" ಎಂದ.
"ಸೋತರೆ??" ಎಂದಳವಳು. "ಇನ್ಯಾವತ್ತೂ ಕ್ರಾಂತಿಯ ಬಗ್ಗೆ ನಿನ್ನೆದುರು ಮಾತನಾಡಲಾರೆ, ಇಲ್ಲವೇ ನಿನಗೆ ಮುಖ ತೋರಿಸದೆಯೇ ಬದುಕಿ ಬಿಡುತ್ತೇನೇನೋ!!" ಎಂದ.
ಬೇಡ, ಬೇಡ ಎಂದುಕೊಂಡಳು ಮನಸ್ಸಿನಲ್ಲಿಯೇ.
ಆತ ಸುಮ್ಮನಿರುವವನಲ್ಲ. "ಗೆದ್ದರೆ??" ಎಂದ.
"ನನ್ನ ಜೀವನದಲ್ಲಿ ಯಾರಿಗೂ ನೀಡದಿರುವುದನ್ನು ನಿನಗೆ ಕೊಡುತ್ತೇನೆ." ಎಂದಳವಳು.
ಮೆಲ್ಲನೆ ಸೀಟಿ ಹೊಡೆದ ಆತ. ಜೇಬು ಸವರಿಕೊಂಡರೆ ಒಂದು ರೂಪಾಯಿ ಇತ್ತು ಅಷ್ಟೆ. ಬ್ಯಾಂಕ್ ಖಾತೆ ಅವನ ಬಳಿಯಿರಲಿಲ್ಲ.
ಆತ ಆಕೆಯ ಕಡೆ ತಿರುಗಿ ಅವಳ ಕುತ್ತಿಗೆಯಲ್ಲಿದ್ದ ಬಂಗಾರದ ಚೈನಿನ ಎಳೆಯ ಕಡೆ ನೋಡಿ "ನಿನ್ನ ಕತ್ತಿನಲ್ಲಿರುವ ಸರವನ್ನು ಕೊಡು" ಎಂದ.
ಅದನ್ನು ತೆಗೆದು ಅವನ ಕೈಲಿಡುತ್ತ "ಅಡವಿಟ್ಟರೆ ಕೇವಲ ಮೂವತ್ತು ಸಾವಿರ ಬರುತ್ತದಷ್ಟೆ" ಎಂದು ನಕ್ಕಳು.
"ಇದರ ಇಂದಿನ ಬೆಲೆ 28400. ನನಗೆ ಸಿಗುವುದು ಕೇವಲ 22000 ಅಷ್ಟೆ. ಯಾಕೆಂದರೆ ಇದನ್ನು ತೆಗೆದುಕೊಳ್ಳುವವರು ಕೂಡ ಬಿಸಿನೆಸ್ ಮಾಡುವವರೇ. ಆದರೆ ನಾನು ನಿನ್ನ ಜೊತೆ ಹಾಗೆ ಮಾಡಲಾರೆ. ಬುಧವಾರ ಸಂಜೆ ನಿನ್ನ ಕೈಲಿ ಒಂದು ಲಕ್ಷದ ಇಪ್ಪತ್ತೆಂಟು ಸಾವಿರದ ನಾಲ್ಕು ನೂರು ಇಡುತ್ತೇನೆ." ಎಂದ.
ಅದು ಅಸಾಧ್ಯ ಎಂದುಕೊಂಡು "ಸರಿ ನೋಡೋಣ ಕತ್ತಲಾಯಿತು ನಡೆ" ಎನ್ನುತ್ತಾ ಎದ್ದಳು.
ಆಗಷ್ಟೆ ಹುಣ್ಣಿಮೆಯ ಚಂದ್ರ ಉದಯಿಸುತ್ತಿದ್ದ. ಇಬ್ಬರ ಮುಖದಲ್ಲೂ ಪ್ರಶಾಂತತೆ ಎದ್ದು ಕಾಣುತ್ತಿತ್ತು.
ಶಾಸ್ತ್ರಿಯ ಕಣ್ಣುಗಳಲ್ಲಿ ಛಲ ಎದ್ದು ತೋರುತ್ತಿತ್ತು. ಅವನ ಮೆದುಳು ಸಮುದ್ರದ ಅಲೆಗಳಿಗಿಂತಲೂ ಜೋರಾಗಿ ಸದ್ದು ಮಾಡುತ್ತಾ ಅವನಂತರಂಗವನ್ನು ಬಡಿಯುತ್ತಿತ್ತು.
ಕವಲು ದಾರಿಯು ಇಬ್ಬರನ್ನೂ ಬೇರಾಗಿಸಿತು.
...............................ಮುಂದುವರೆಯುತ್ತದೆ..............................
ನಮ್ಮ ನಿಮ್ಮ ನಡುವೆ...

ಅನ್ವೇಷಣಾ,
ಅನ್ವೇಷಣೆ ಎಂದರೆ ಏನು ಗೊತ್ತಾ ಹುಡುಗಿ? ಹಿಮಾಚ್ಛಾದಿತ ಪರ್ವತಗಳು ಮುಗಿಲಿನತ್ತ ಮೈ ಚಾಚಿ, ಮಂಜು ಕವಿದು, ಬಿಳುಪನ್ನು ಹೊರಸೂಸುವ ಮಂದ್ರ ಶಿಖರಗಳನ್ನು ಶರದ್ ಋತುವಿನ ಹುಣ್ಣಿಮೆಯ ರಾತ್ರಿಯಲ್ಲಿ ನೀನೆಂದಾದರೂ ಕಂಡಿದ್ದೀಯಾ? ಹಿಮಾಲಯವೆಂದರೆ ಹಾಗೆ.. ಸಹಸ್ರ ಶಿಖರಗಳು.. ಸಹಸ್ರ ಶಿಖರಗಳ ಮಡುವಿನಿಂದ ವಯ್ಯಾರವಾಗಿ ಹರಿಯುವ ಸಹಸ್ರ ನದಿಗಳು. ಪ್ರತಿಯೊಂದೂ ಶಿಖರವನ್ನು ಬಳಸಿ ಹರಿಯುವಾಗ ಗಂಗೆಯ ಮೆರಗು, ಯಮುನೆಯ ಮಿನುಗು, ಮೂಲ ಹುಡುಕಿ ಹೊರಟರೆ ಯಾವ ದಾರಿ, ಯಾವ ತಿರುವು.. ಅನ್ವೇಷಣೆ ಹುಡುಗಿ.
ಹುಣ್ಣಿಮೆಯ ಹಸನ್ಮುಖ ಚಂದ್ರ ಮೇಲೇರಿ ಬಂದಾಗ ಸ್ವಚ್ಛತೆಯ ಸೆರಗಾದ ನೀರು ಹೇಗೆ ಹೊಳೆಯುತ್ತದೆ ಗೊತ್ತಾ..!?
ನಾನು ನೋಡಿದ್ದೇನೆ ಹುಡುಗಿ ಅದರ ವೈಭವವನ್ನು. ಅದೆಂತಹ ಚಳಿ ಅಲ್ಲಿ!? ಮೈ ಕೊರೆಯುತ್ತದೆ. ಎಂತಹ ತಪಸ್ವಿಯ ಬೆನ್ನಿನಲ್ಲಿ ಕೂಡಾ ನಡುಕ ಹುಟ್ಟಿಸುವ ಮಾಯಾವಿ ನಗ್ನ ಸತ್ಯವದು.
ಅನ್ವೇಷಣೆ ಎನ್ನುವುದು ಒಂದು ಹುಚ್ಚು, ಹುಡುಗಿ. ಹಾಗೊಂದು ಹುಚ್ಚು ಹತ್ತಿಸಿಕೊಂಡ ನಾನು ಹಗಲು, ರಾತ್ರಿಯೆನ್ನದೆ ಹಿಮಾಲಯದ ಪುಟ್ಟ ಪುಟ್ಟ ದಾರಿಗಳಲ್ಲಿ ಅಲೆಯುತ್ತಾ, ದೊಡ್ಡ, ದೊಡ್ಡ ಏರುಗಳನ್ನು ಬಳಸಿ ನಡೆದಾಗ... ಏನು ಸಿಕ್ಕಿತ್ತು..!? ಅಥವಾ ಸಿಗುವುದಿತ್ತಾ? ಎಂದರೆ ಉತ್ತರ ಸಿಗುವುದಿಲ್ಲ ಗೆಳತಿ.
ಆದರೆ ಆ ಹುಚ್ಚು ಒಮ್ಮೆ ಹಿಡಿಯಿತೆಂದರೆ ಮುಗಿಯಿತು. ಮರಳುಗಾಡಿನ ಮರೀಚಿಕೆಗೂ, ಹಿಮಾಲಯದಲ್ಲಿ ಮೈದುಂಬಿ ಹರಿಯುವ ನದಿಗಳಿಗೂ, ಬಿಳುಪನ್ನೆ ಹೊದ್ದು ನಿಲ್ಲುವ ನೀರ್ಗಲ್ಲುಗಳೆಂಬ ಮಾಯಾಮೃಗಕ್ಕೂ ಬಹಳ ಸಾಮ್ಯತೆಯಿದೆ.
ಶರದ್ ಕಳೆದು ಹೇಮಂತ ಬಂತೆಂದರೆ ಆಗಸದಿಂದ ಬಿಳುಪಿನ ಮಲ್ಲಿಗೆಯ ಸರವೇ ಮಂಜಾಗಿ ಹಸಿರಿಲ್ಲದೆ ಬೋಳಾಗಿ ನಿಂತ ಕಣಿವೆಗಳನ್ನು, ಗಿರಿಗಳನ್ನೂ ಮುತ್ತಿಕ್ಕುವ ದೃಶ್ಯವಿದೆಯಲ್ಲ ಅದೆಂತಹ ಸಮ್ಮೋಹಿನಿ ಗೊತ್ತಾ? ಈ ಸುಂದರತೆಗೆ ಕೊನೆಯಿದೆಯಾ!? ಮುಂದೆ ಸಾಗಿದಂತೆಲ್ಲ ಸುಂದರತೆಯನ್ನು ತೆರೆದಿಡಲು ಹಿಮಾಲಯಕ್ಕೆ ಹಿಮಾಲಯವೇ ಸಾಟಿಯೇನೋ ಎಂದೆನ್ನಿಸಿಬಿಡುತ್ತದೆ ಗೆಳತಿ. ನನ್ನ ಭಾವನೆಗಳಿಗೆ ಭಾವುಕತೆಯ ಪಕ್ವ ಬಂದಿದ್ದು ಅಲ್ಲೇ ಏನೋ!! ಎಂತಹ ಕಲ್ಲೆದೆಯು ಕೂಡ ಕವಿಯಾಗಿ ಹೊರಬಂದು ಬಿಡುತ್ತವೇನೋ ಆ ಶ್ರೇಣಿಗಳಲ್ಲಿ.
ಶ್ವೇತ ತಪಸ್ವಿನಿಯ ಮಡಿಲಲ್ಲಿ ನಾನು ಮಗುವಾಗಿ ಓಡಾಡಿದ ದಿನಗಳು ಈಗ ಮತ್ತೆ ನೆನಪಾಗುತ್ತಿವೆ ಗೆಳತಿ. ಯಾಕೆ ಗೊತ್ತಾ..?? ನಿನ್ನ ಹೆಸರಿನಂತೆ, ನೀನು ಒಂದು "ಅನ್ವೇಷಣೆ" ನನಗೆ. ನಿನ್ನ ಮಡಿಲಿನಲ್ಲಿ ಮಗುವಾಗಿ ಬಿಡುತ್ತೇನೆ ನಾನು. ನೀ ಜೊತೆಗಿದ್ದರೆ ನಾ ಮತ್ತದೇ ಹಿಮದ ಮಡಿಲಿನ "ವಿಹಾರಿ".
ನಿನಗೂ, ಆ ಎತ್ತರದ ಹಿಮಾಲಯಕ್ಕೂ ಮತ್ತದೇ ಮರೀಚಿಕೆ ಮತ್ತು ಮಾಯಾಮೃಗದ ನಡುವಿನ ಸಾಮ್ಯತೆಯಿದೆ ಅನ್ವೇಷಣಾ. ಪ್ರೀತಿಯ ಅಮಲಿನಲ್ಲಿ ಬಡಬಡಿಸುತ್ತಿರುವೆನೆಂಬ ಭಾವ ಬೇಡ ನಿನಗೆ.
ಕೊಲ್ಲುವ ತಂಪು ಗಾಳಿ.. ಗೊತ್ತಿಲ್ಲದೇ ಸುಡುವ ಹಿಮದ ತಣ್ಣನೆಯ ಬಿಳುಪು.. ಅದರ ಮೇಲೆ ಬೆನ್ನು ತಾಗಿಸಿ ಮಲಗಿದಾಗ ಅದೆಂತಹ ಭಾವ ಗೊತ್ತಾ..!! ನಾ ನಿನ್ನ ಹಣೆಗೆ ಮುತ್ತಿಡುವಾಗ ಅದೇ ಭಾವ ನನ್ನಲ್ಲಿ ಮೂಡುತ್ತದೆ.
ಸ್ವಪ್ನ ತಾವರೆಯೊಂದು ಅರಳಿ, ಹೇಮಂತದ ಚಳಿಯನು ತಾಳದೆ ಸ್ವಲ್ಪ ನಲುಗಿ, ತನ್ನ ಮನಸ್ಸಿನ ಬೆಚ್ಚನೆಯ ಭಾವವನ್ನು ಹಂಚಿಕೊಳ್ಳಲು ಸಂಗಾತಿಯನ್ನು ಅರಸುತ್ತಿದ್ದಾಗ...
ಕಾಮನಬಿಲ್ಲೆಂಬ ಏಳು ಬಣ್ಣಗಳ ಚಿತ್ತಾರವೊಂದು ಮೂಡಿ ಮಳೆಯ ಚಳಿಗೂ, ಸೂರ್ಯ ಕಿರಣ ಬಿಸಿಗೂ ನಾ ಬೆಸುಗೆ ಎಂದು ಉತ್ತರಿಸಿದಾಗ...
ಸ್ವಪ್ನ ತಾವರೆಯೂ, ಕಾಮನಬಿಲ್ಲಿನ ಏಳು ಬಣ್ಣಗಳು ಸೇರಿದಾಗ ಮೂಡುವ ಒಂದು ಅದ್ಭುತ ಕಲಾಕೃತಿಯಿದೆಯಲ್ಲ ಅನ್ವೇಷಣಾ... ಅಂತಹ ಪರಿಪೂರ್ಣ ಕನಸು ನೀನು...
ಒಮ್ಮೊಮ್ಮೆ ಕಾವ್ಯವಾಗಿ ನಿಂತರೆ... ಮರುನಿಮಿಷ ಗಂಗೆಯಂತೆ ಕವನವಾಗಿ ಹರಿಯುವೆ...
ತಪ್ಪಿ ಹೋಗುವೆಯೆನೋ ಎಂದುಕೊಂಡರೆ ಕಣ್ಣಾಲಿಗಳ ಭಾವವಾಗಿ ಬತ್ತುತ್ತಿಯಾ... ಸಂಗಾತಿ ಎಂದುಕೊಂಡರೆ ಆನಂದ ಭಾಷ್ಪವಾಗಿ ಹರಿಯುತ್ತೀಯಾ...
ನೀನೊಂದು ಅನ್ವೇಷಣೆ ನನಗೆ. ಎಷ್ಟು ಹುಡುಕಿದರೂ ಮುಗಿಯದ ಮಹಾಶ್ವೇತೆ. ನಿನ್ನ ನೀಲ ಕಂಗಳಲ್ಲಿ ಸ್ವಚ್ಛವಾಗಿ ಹರಿಯುವ ಹಿಮ ನೀರಿನ ನಿರ್ಮಲತೆಯನ್ನು ಕಾಣುತ್ತೇನೆ ನಾನು... ನಿನ್ನ ಮೈ ಸ್ಪರ್ಶ ನನಗೆ ಬೇಸಿಗೆಯಲ್ಲಿ ಬೆಂದು ನಿಂತ ಭೂಮಿಗೆ ಮಳೆಯ ಹನಿ ತಾಗಿದಾಗ ಉಂಟಾಗುವ ಸಿಹಿಯ ಸುವಾಸನೆಯಂತೆ. ನೀನೊಂದು ಕಲಾಕೃತಿ ಹುಡುಗಿ.. ನಾನೆಂದೂ ಕಳೆದುಕೊಳ್ಳಲು ಇಷ್ಟಪಡದ ಕಲಾಕೃತಿ. ಭಾವ ಸಿಂಧುವಿನ ಸೆರಗಿನಲ್ಲಿ, ಸಹ್ಯ ಶ್ರೇಣಿಗಳ ಹಸಿರಿನ ಸೊಬಗಿನಲ್ಲಿ ಮನಸ್ಸು ಮೈ ತುಂಬಿ ನಲಿಯುವಾಗ ತೆಗೆದುಕೊಳ್ಳುವ, ತೆರೆದುಕೊಳ್ಳುವ ಉಸಿರಾಟದ ಶಕ್ತಿಯಿದೆಯಲ್ಲ ಹಾಗನ್ನಿಸಿಬಿಡುತ್ತೀಯಾ ನೀನು. ನಿನ್ನೊಂದಿಗೆ ಇರುವ ವರ್ಷಗಳು ನಿಮಿಷಗಳಾಗಿ ಕಳೆದು ಬಿಟ್ಟರೆ ಎಂಬುದೊಂದೇ ನನ್ನ ಭಯ.
ಅನ್ವೇಷಣಾ..
"ನಾಲ್ಕೈದು ವರ್ಷ ಜೈಲಿಗೆ ಹೋಗಿ ಬಂದರೆ ತಪ್ಪಾ!?" ದಿಢೀರನೆ ಬಂದ ಅಸಂಬದ್ಧ ಪ್ರಶ್ನೆಗೆ ಏನು ಹೇಳಬೇಕು ಎಂದು ತಿಳಿಯದೆ ವಿಹಾರಿಯ ಕಣ್ಣುಗಳನ್ನೇ ನೋಡಿದಳು ಅನ್ವೇಷಣಾ!! ಕೈಯಲ್ಲಿರುವುದು ಆತ ಬರೆದ ಪ್ರೇಮಪತ್ರವೋ? ಅಥವಾ ತಪ್ತ ವ್ಯಾಮೋಹಿಯೊಬ್ಬ ಹಿಮಾಲಯದ ಬಗ್ಗೆ ಬರೆದ ಅಖಂಡ ಪ್ರಬಂಧವೋ ಎಂದು ತಿಳಿಯದೇ ಮೊದಲೇ ಗೊಂದಲದಲ್ಲಿದ್ದಳು.
ವಿಹಾರಿ ಬರೆದ ಪ್ರತಿಯೊಂದೂ ವಾಕ್ಯದಲ್ಲೂ ಆತ ನನ್ನನ್ನು ಹಿಮಾಲಯಕ್ಕೆ ಹೋಲಿಸಿ ಬರೆದಿದ್ದಾನೆ ಎಂಬುದು ಅವಳಿಗೆ ಸ್ಪಷ್ಟವಿತ್ತು. ಆದರವಳು ಹಿಮಾಲಯವನ್ನು ಹೋಗಿ ನೋಡಿರದ ಕಾರಣ ಆತನ ವಿವರಣೆ ಅವಳಿಗೆ ವಿವರಣೆಯಾಗಿ ಉಳಿದಿತ್ತೇ ಹೊರತು ಭಾವಗಳಲ್ಲಿ ಅವಳು ಬಂಧಿಯಾಗಿರಲಿಲ್ಲ. ಅಷ್ಟರಲ್ಲಿ ಈ ಅಸಂಬಂದ್ಧ ಪ್ರಶ್ನೆ. ಉಗಿಸಿಕೊಳ್ಳಬೇಕಾಗುತ್ತದೆ ಎಂಬುದು ಮೊದಲು ಗೊತ್ತಿದ್ದವನಂತೆ ಅವಳನ್ನೇ ನೋಡುತ್ತಿದ್ದ ವಿಹಾರಿ.
"ಯಾವ ಪುಣ್ಯದ ಕಾರ್ಯ ಮಾಡಿ ಒಳ ಸೇರುವೆ ಎಂಬುದರ ಮೇಲೆ ತಪ್ಪು ಸರಿ ನಿರ್ಧಾರವಾಗುತ್ತದೆ. " ಅನ್ಯಮನಸ್ಕಳಾಗಿ ನುಡಿದಳವಳು.
ಮೂರು ಘಂಟೆಯ ಸುಡುಬಿಸಿಲು ಸುಡುತ್ತಿತ್ತು. ಭಾಗಶಃ ಪಾರ್ಕ್ ಖಾಲಿ ಹೊಡೆಯುತ್ತಿತ್ತು. ಮರದ ನೆರಳಿನಲ್ಲಿ ಹುಲ್ಲು ಹಾಸಿನ ಮೇಲೆ ಕುಳಿತಿದ್ದರು ವಿಹಾರಿ ಅನ್ವೇಷಣಾ.
ಯಾವಾಗಲೂ ಚೆಲ್ಲು ಚೆಲ್ಲು, ಮೌನ ಕಮ್ಮಿ, ಮಾತು ಜಾಸ್ತಿ ಹುಡುಗಿ ಅನ್ವೇಷಣಾ. ಇಂದೇಕೋ ಸುಮ್ಮನೆ ಇರುವುದನ್ನು ಕಂಡು ಅವಳನ್ನು ದಾರಿಗೆ ತರಲು ನಾನಾ ಚೇಷ್ಟೆ ಮಾಡಿ ಮುಗಿಸಿದ್ದ ವಿಹಾರಿ. ಹೆಣ್ಣನ್ನು ಅರಿತುಕೊಳ್ಳುವುದು ಕಷ್ಟ. ಕೆಲವೊಮ್ಮೆ ಅರಿತ ಹೆಣ್ಣೂ ಅರ್ಥವಾಗುವುದಿಲ್ಲ. ಸಂದಿಗ್ಧದಲ್ಲಿದ್ದ ವಿಹಾರಿ.
ಅನ್ವೆಷಣಾಳ ಮನದಲ್ಲಿ ಬೇರೆಯೇ ಯೋಚನೆ ಓಡುತ್ತಿತ್ತು. ವಿಹಾರಿಯ ಕುಚೇಷ್ಟೆಯಾಗಲಿ, ಆತನ ಪ್ರೇಮ ಪ್ರಬಂಧವಾಗಲೀ, ಅವಳ ಮೇಲೆ ಪ್ರಭಾವ ಬೀರಲಿಲ್ಲ.
office ನಲ್ಲಿ ನೆಪ ಹೇಳಿ ಬಂದು ಹೀಗೆ ಇವನ ಜೊತೆ ಕುಳಿತು ಪ್ರೇಮ ಪ್ರಣಯ ತನಗೆ ಬೇಕಿತ್ತಾ?? ವಿಹಾರಿಗಾಗಿ ನಾನು ಬಹು ದೊಡ್ಡ ತ್ಯಾಗ ಮಾಡುತ್ತೀದ್ದೀನಾ? ಹಿಂದೆ ಮುಂದೆ ಏನನ್ನೂ ಅರಿಯದೇ ರಾತ್ರಿ ಕಂಡ ಬಾವಿಗೆ ಹಗಲು ಬೀಳುತ್ತೀದ್ದೀನಾ?
ಪ್ರೇಮದ ಮುಂದೆ ಕಾಣದೇ ನಿಂತ ಎಷ್ಟೋ ಜೀವನದ ಮೆಟ್ಟಿಲುಗಳು ಸತ್ಯವಾಗಿ, ಪ್ರಶ್ನೆಯಾಗಿ ಅವಳೆದುರು ನಿಂತು ಕಾಡುತ್ತಿತ್ತು.
ಯೋಚನೆಗಳ ಸುಳಿಯೇ ಅಂತಹದು. ಈ ಕ್ಷಣವನ್ನು ಅಳಿಸಿ, ಭೂತವನ್ನು ನೆನಪಿಸಿ, ಭವಿಷ್ಯವನ್ನು ಚಿತ್ರಿಸಬಲ್ಲದು.
ಯಾಕೆಂದು ಇವನನ್ನು ಪ್ರೀತಿಸಿದೆ!? ನೋಡಲು ಸುಂದರ ಒಪ್ಪಿಕೊಳ್ಳೋಣ.! ನಾನೂ ಇದ್ದೇನೆ ಅಲ್ಲವೇ!? ಎಷ್ಟು ಓದಿಕೊಂಡಿದ್ದಾನೆ? ಆತ ಹೇಳುವ ಪ್ರಕಾರ ಅವನೆಂದು ಶಾಲೆಯ ಮೆಟ್ಟಿಲು ಹತ್ತಿದವನಲ್ಲ. ಹಾಗೆಂದು ದಡ್ಡನಾ?? ಖಂಡಿತಾ ಅಲ್ಲ. ಜಗತ್ತನ್ನೇ ಮೂರ್ಖ ಮಾಡಬಲ್ಲಂತ ಕಿಲಾಡಿ.
ಒಂದು ದಿನ ಪೇಪರ್ ಮಾರುವ ಹುಡುಗನಾಗಿ, ಇನ್ನೊಂದು ದಿನ ಯಾರನ್ನೋ ಎರಪೋರ್ಟ್ ನವರೆಗೆ ಡ್ರಾಪ್ ಮಾಡಿ ಬರುವ ಟ್ಯಾಕ್ಸಿ ಡ್ರೈವರ್ ಆಗಿ, ಒಂದು ದಿನ ಕಂಪ್ಯೂಟರ್ ರಿಪೇರಿ ಮಾಡುವ ಅಂಗಡಿಯಲ್ಲಿ ಟೆಕ್ನಿಷಿಯನ್ ಆಗಿ, ಮತ್ತೊಂದು ದಿನ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಪ್ರೋಗ್ರಾಮ್ ಹೇಳಿಕೊಡುವ ಕೋಚರ್ ಆಗಿ ಬದುಕಬಲ್ಲ ಪರಿಪೂರ್ಣ ಮನುಷ್ಯ.
ಉದರ ನಿಮಿತ್ತಂ ಬಹುಕೃತ ವೇಷಂ ಎಂಬ ಗಾದೆ ಇವನಿಗೆ ಮಾಡಿದ್ದೋ ಎಂಬಂತೆ ಬದುಕುತಿದ್ದ. ಕೇಳಿದರೆ ನಂಬಿಕೆಯಿದ್ದರೆ ಜೊತೆ ನಿಲ್ಲು ಎಂದು ಹೇಳಿ ಎದ್ದು ಹೊರಟು ಬಿಡುತ್ತಿದ್ದ. ನನ್ನ ಮೇಲೆ ಪ್ರೀತಿ ಇಲ್ಲವಾ ಎಂದುಕೊಂಡರೆ ಅದಕ್ಕೂ ತದ್ವಿರುದ್ಧ. ಯಾವತ್ತೂ ನನ್ನ ಆತ ನೋಯಿಸಿಲ್ಲ. ಏನಾದರೂ ಬೇಕೆಂದುಕೊಳ್ಳುವ ಮೊದಲೇ ತಂದುಕೊಡುತ್ತಾನೆ. ಮನಸ್ಸಿನಲ್ಲಿ ಇರುವುದನ್ನು ಓದಲು ಕಲಿತವನಂತೆ ಇದ್ದಾನೆ.
ಇದಾಗಿಯೂ ಏನೋ ಕೊರತೆ ಕಾಣುತ್ತಿದೆಯಲ್ಲ, ಏನಿರಬಹುದು.
ಯೋಚನೆ ಹಾಗೆ ಮುಂದೆ ಸಾಗಿಯೇ ಇತ್ತು. ಕಣ್ಣುಗಳು ಆತ ಬರೆದ ಪ್ರೇಮ ನಿವೇದನೆಯ ಸಾಲುಗಳನ್ನು ಅನುಸರಿಸುತ್ತಿತ್ತು. ಅದೇ ಸಮಯಕ್ಕೆ ವಿಹಾರಿ ಕೇಳಿದ್ದ "ನಾಲ್ಕೈದು ವರ್ಷ ಜೈಲಿಗೆ ಹೋಗಿ ಬಂದರೆ ತಪ್ಪಾ!?"
ಮತ್ತದೇ ಚೇಷ್ಟೆ ಈತನದು ಎಂದುಕೊಂಡು ಅವಳು ಕೊಂಕು ನುಡಿದಳು.
"ಯಾವ ಪುಣ್ಯ ಕಾರ್ಯ ಮಾಡಿ ಒಳ ಸೇರುವೆ ಎಂಬುದರ ಮೇಲೆ ತಪ್ಪು ಸರಿ ನಿರ್ಧಾರವಾಗುತ್ತದೆ."
ವಿಹರಿ ಮಾತಿಗಾರಂಭಿಸಿದ ಈಗ. ಆತನ ಮಾತೇ ಹಾಗೇ ನಿರರ್ಗಳ.. ಸ್ಪಷ್ಟ.ಸ್ಪಷ್ಟ..
"ಅನು, ನನಗೆ ಬರದ ಉದ್ಯೋಗವಿಲ್ಲ. ಮಾಡದ ಕೆಲಸಗಳಿಲ್ಲ ಎಂದು ನಿನಗೂ ಗೊತ್ತು. ನಿನ್ನ ಪುಟ್ಟ ಪುಟ್ಟ ಆಸೆಗಳನ್ನು, ಅವು ನನ್ನದೇ ಕನಸುಗಳೆಂಬಂತೆ ಕಾದುಕೊಂಡು ನಾನೆಲ್ಲವನ್ನು ಪೂರೈಸಬಲ್ಲೆ. ಬುದ್ಧಿಯಿದ್ದವನಿಗೆ ಬದುಕುವುದು ಕಷ್ಟವಲ್ಲ. ದುಡ್ಡು ಎಂಬುದು ಕೂಡ ಒಂದು ಸಮಸ್ಯೆಯಲ್ಲ. ಈ ಜಗತ್ತಿನಲ್ಲಿ ಎಲ್ಲರಿಗಿಂತ ಹೆಚ್ಚಾಗಿ ನಾನು ಇಷ್ತಪಡುತ್ತೇನೆ. ನೀನು ಬದುಕಲಾಗಿ ನಾನು ಸತ್ತು ನಿಲ್ಲುತ್ತೇನೆ ಎಂಬ ದೊಡ್ಡ ದೊಡ್ಡ ಬಂಡವಾಳವಿಲ್ಲದ ಮಾತುಗಳನ್ನು ಆಡಲಾರೆ. ಆದರೆ ಬದುಕಿರುವವರೆಗೆ ನಿನ್ನ ಕನಸುಗಳ ಜೊತೆ ನಿಲ್ಲಬಲ್ಲೆ ಎಂಬಂಥ ಮನುಷ್ಯ ನಾನು.
"ನಾನು ನಿನ್ನ ಮನಸ್ಸನ್ನು ಓದಬಲ್ಲೆ ಅನಾ, ನಿನಗೆ ನನ್ನ ಮೇಲೆ ದುರಾಭಿಪ್ರಾಯವಿಲ್ಲ, ಪ್ರೀತಿ ಇಲ್ಲದೆಯೂ ಇಲ್ಲ. ನಿನ್ನ ಕೊರಗೆಲ್ಲ ಈ ಸಮಾಜದಲ್ಲಿ ನನಗೆ ಒಳ್ಳೆಯ ಸ್ಥಾನಮಾನ ಇಲ್ಲ ಎಂಬುದಷ್ಟೆ. ತನ್ನನ್ನು, ತನ್ನವರನ್ನು ಈ ಸಮಾಜವು ಒಳ್ಳೆಯವರೆಂದು ಗುರುತಿಸಲಿ ಎಂಬ ಸಹಜ ವಾಂಛೆ ನಿನ್ನದು.
ಅದು ತಪ್ಪಲ್ಲ ಅನ್ವೇಷಣಾ, ಆದರೆ ನಿನಗೊಂದು ಗೊತ್ತಾ? ಈ ಸಮಾಜದ ಸ್ಥಾನಮಾನವೆಲ್ಲಾ ನೀನು ಏನು ಕಲಿತೆ ಅಥವಾ ನೀನೇನು ಮಾಡುತ್ತಿರುವೆ ಎಂಬುದರ ಮೇಲೆ ನಿರ್ಧಾರವಾಗುವುದಿಲ್ಲ. ಅದು ಕೇವಲ ದುಡ್ಡಿನ ಮೇಲೆ ಅವಲಂಭಿತವಾಗಿದೆ. ಸಣ್ಣ ಪುಟ್ಟ ಸುಲಿಗೆ, ಕಳ್ಳತನ ಮಾಡುವವರು ಮಾತ್ರ ನಮ್ಮ ಸಮಾಜದಲ್ಲಿ ಕಳ್ಳರು, ಮರ್ಯಾದಿ ಬಿಟ್ಟವರು.
ಅದೇ ಕೋಟಿಗಳಲ್ಲಿ ಲಂಚ ತಿನ್ನುವವರು, ದುಡ್ಡು ವಸೂಲಿ ಮಾಡುವವರು ರಾಜರಾಗಿ ಮೆರೆಯುತ್ತಿದ್ದಾರೆ. ಎಷ್ಟು ರಾಜಕಾರಣಿಗಳು ಸಾವಿರ ಸಾವಿರ ಕೋಟಿಗಳ ಕಳ್ಳದಂಧೆ ಮಾಡಿ ಅದರ ಮೇಲೆಯೇ ಕುಳಿತು ದೇಶ ನಡೆಸುತ್ತಿಲ್ಲ. ನಮ್ಮ ವ್ಯವಸ್ಥೆ ಅಂತವರಿಗೆ ಕೋಟಿಗಳನ್ನು ಕರ್ಚು ಮಾಡಿ ಸೆಕ್ಯುರಿಟಿ ಕೊಡುತ್ತಿಲ್ಲವಾ?
ಈ ದೇಶದಲ್ಲಿ ನನ್ನ ನಿನ್ನಂತ ಮಧ್ಯಮ ವರ್ಗದ ಜನರು ಮಾತ್ರ ಕೊಂಡಿದ್ದಕ್ಕೆ, ಉಂಡಿದ್ದಕ್ಕೆ, ಕೆಲಸ ಮಾಡಿದ್ದಕ್ಕೆ, ಬಂದ ದುಡ್ಡಿಗೆ, ಎಲ್ಲದಕ್ಕೂ ಕಂದಾಯ ತೆರುತ್ತಿದ್ದೇವೆ.
ಆದರೆ ದೊಡ್ಡ ತಿಮಿಂಗಲಗಳು ತಮಗೆ ಬೇಕಾದ ಹಾಗೆ ತಿರುಗಿಕೊಂಡಿಲ್ಲವೆ? ಸೆಲೆಬ್ರಿಟಿಗಳಾಗಿ ತಿರುಗುವ ಎಷ್ಟು ಜನ ನಿಜವಾದ ದಾಖಲೆ ತೋರಿಸಿ ಕಂದಾಯ ಕಟ್ಟುತ್ತಾರೆ? ಇವೆಲ್ಲವೂ ಗೊತ್ತಿದ್ದೂ ಕೂಡ ಜನರು ಅವರನ್ನು ತಲೆಯ ಮೇಲೆ ಹೊತ್ತು ತಿರುಗುತ್ತಾರಲ್ಲಾ ಮೂರ್ಖರಲ್ಲವಾ?? ನಮ್ಮ ವ್ಯವಸ್ಥೆಯೇ ಹಾಗಿದೆ ಅನಾ!!
ಇಲ್ಲಿ ದೊಡ್ಡ ಕಳ್ಳರಿಗೆ ರಕ್ಷಣೆಯಿದೆ. ಆದ್ದರಿಂದಲೇ ನಾನು ಯೋಚಿಸಿಯಾಗಿದೆ." ಮಾತು ನಿಲ್ಲಿಸಿ ಆಕೆಯ ಮುಖ ನೋಡಿದ.
ಆತ ಭಾವೋತ್ಕರ್ಷದಲ್ಲಿ ತೇಲುತ್ತಾ ಮಾತನಾಡುತ್ತಿದ್ದ. ಅವನ ಮಾತುಗಳು ನಿಜವೂ ಆಗಿದ್ದವು. ನಮ್ಮ ದೇಶದಲ್ಲಿ ದೊಡ್ಡ ತಿಮಿಂಗಲಗಳೆಲ್ಲ ಕಂದಾಯ ಕಟ್ಟಿದ್ದರೆ, ರಾಜಕಾರಣಿಗಳು ದುಡ್ಡು ತಿನ್ನದೇ ಕೆಲಸ ಮಾಡಿದ್ದರೆ ದೇಶ ಹೀಗಿರುತ್ತಿತ್ತಾ? ಸರಿ ಎನಿಸಿತು ಅವಳಿಗೆ.
ಇದಕ್ಕೆ ಆತ ಇಷ್ಟವಾಗುತ್ತಿದ್ದ ಆಕೆಗೆ. ತಾನು ತುಂಬ ದೊಡ್ಡದು ಎಂದುಕೊಂಡ ವಿಷಯವನ್ನು ಕಗ್ಗಂಟು ಬಿಚ್ಚುವಂತೆ ಬಿಚ್ಚಿ ಸರಳವಾಗಿಸುತ್ತಿದ್ದ. ಆತನ ಮಡಿಲಲ್ಲಿ ಮಲಗಿದರೆ ಅದೊಂದು ರೀತಿಯ Comfort. ತನ್ನ ಮೊದಲಿನ ಯೋಚನೆಗಳಿಗೆ ತನಗೇ ನಗು ಬಂದು ನಕ್ಕು ಬಿಟ್ಟಳು.
"ಈ ಹುಡುಗಿಯರೇ ಹೀಗೇ... ನಗಿಸಬೇಕೆಂದು ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಯಿತು. ಈಗ ನಾನೇನೋ ಸೀರಿಯಸ್ ಆಗಿ ಮಾತನಾಡಿದರೆ ಇವಳಿಗೆ ನಗು ಬರುತ್ತದೆ." ಎಂದು ಅವಳ ಸೊಂಟದತ್ತ ಕೈ ಜರುಗಿಸಿದ.
"ಹಸಿ ತೋ ಫಸೀ ಡೈಲಾಗ್ ನಾ ಕೂಡ ಕೇಳಿದ್ದೇನೆ. ನಕ್ಕೆನೆಂದು ಎಕ್ಸಟ್ರಾ ಉಪಯೋಗ ಮಾಡಿಕೊಳ್ಳಲು ನೋಡಬೇಡ" ಎನ್ನುತ್ತಾ ಆತನ ಕೈ ತಗೆದಳು ಅಲ್ಲಿಂದ.
"ಆದರೂ ಹುಡುಗಿಯರ ಸೊಂಟದಲ್ಲಿ ಏನೋ ಇದೆ" ಎಂದ ಮತ್ತೊಂದು ಕಡೆ ಕೈ ಇಡುತ್ತಾ.. ಆಕೆಯ ಮುಖ ಮಧ್ಯಾನ್ಹದ ಬಿಸಿಲಿಗೂ, ಈತನ ರಸಿಕತೆಗೂ ಎಂಬಂತೆ ಕೊಂಚವೇ ಗುಲಾಬಿ ಬಣ್ಣಕ್ಕೆ ತಿರುಗಿತು.
"ಯಾವಾಗ ನೋಡಿದರೂ ಈ ಹುಡುಗಿಯರು, ಹುಡುಗಿಯರಿಂದ ಎಂದು ಬಹುವಚನದಲ್ಲೇ ಮಾತನಾಡುತ್ತಿರುವೆಯಲ್ಲಾ?? ಎಷ್ಟು ಹುಡುಗಿಯರ ಜೊತೆ ಪ್ರಣಯ ಪ್ರಬಂಧವೋ!?" ಎಂದಳು.
ಮೊದಲು ಕೈ ಬೆರಳುಗಳನ್ನು ನೋಡಿದ. ನಂತರ ಅವಳ ಕೈ ಬೆರಳುಗಳನ್ನು ಕೈಲಿ ತೆಗೆದುಕೊಂಡ. "ಏನು ಮಾಡುತ್ತಿರುವೆ ಮಹಾನುಭಾವ' ಎಂದಳು.
"ಲೆಕ್ಕ ಕೇಳಿದೆಯಲ್ಲಾ, ಏಣಿಸುತ್ತಿರುವೆ.. "
ಮುನಿಸಿಕೊಂಡು "ಹಾಗಾದರೆ ಅವರ ಬಳಿಯೇ ಹೋಗು ನಾನೇಕೆ? " ಎಂದಳು.
"ನಿನಗೆ Fixed Deposit, Current Account ಎರಡರ ವ್ಯತ್ಯಾಸ ಗೊತ್ತಿರುವಂತೆ ಕಾಣುವುದಿಲ್ಲ" ಎಂದ.
"ಏನು?" ಎನ್ನುತ್ತಾ ಎದ್ದು ಕುಳಿತಳವಳು. "ಅದೇ ನಾನು ಜೈಲಿಗೆ ಹೋಗುವ ವಿಷಯ" ಮಾತು ಬದಲಾಯಿಸಿದ. ತಾನು ಹೇಳಿದ ಮಾತಿನ ಅರ್ಥ ಕಾಮರ್ಸ್ ಮಾಡಿದ ಅವಳಿಗೂ ತಿಳಿಯಲು ಇನ್ನೂ ನಾಲ್ಕು ದಿನ ಬೇಕೆಂದು ಗೊತ್ತವನಿಗೆ.
" ಹಾ.. ಹಾ.. ಹೌದು ಏನು ಮಾಡಿ ಜೈಲಿಗೆ ಹೋಗಬೆಕೆಂದಿರುವೆ? ಅಷ್ಟು ಹುಡುಗಿಯರ ಜೊತೆ ಫ್ಲರ್ಟ್ ಮಾಡಿದರೆ ಎಂದಾದರೊಂದು ದಿನ ಜೈಲೇ ಗತಿ ನಿನಗೆ" ಎಂದಿನ ಲಯಕ್ಕೆ ಬಂದಿದ್ದಳು.
"ಹಾಗೇನಿಲ್ಲಾ, ನಾ ಜೈಲು ಪಾಲಾದರೆ ಅವರಿಗೆಲ್ಲ ರಾತ್ರಿ ಹಾಡು ಹೇಳಿ ಮಲಗಿಸುವವರಾರು?"
ಓಹೋ! ಹಾಡಷ್ಟೇ ಹೇಳುತ್ತಿರೋ!! ಡಾನ್ಸ್ ಕೂಡಾ ಮಾಡುತ್ತಿರೋ??" ಒಳಗಡೆಯೇ ಕುದಿಯುತ್ತಿತ್ತು ಅವಳ ರಕ್ತ. ತಾನು ಏನಾದರೂ ಹೇಳಿದರೆ ನೀನು ಪೊಸೆಸ್ಸಿವ್ ಆಗಬಹುದು, ನಾನು ನಿನ್ನ ಬಾಸ್ ನಿಂದ ಸ್ವಲ್ಪ ದುರನಿಂತು ಮಾತನಾಡು, ಸಭ್ಯನಲ್ಲ ಎಂದರೆ ನಿನಗ್ಯಾವಾಗಲೂ ಅನುಮಾನ ಎನ್ನುತ್ತೀಯಾ ಎಂದು ಹೇಳುವನೆಂದು ಬಂದ ಕೋಪವನ್ನು ತಡೆದುಕೊಂಡಿಡ್ಡಳು. .
ಅವನಿಗದು ಗೊತ್ತು.. ಒಳಗಿಂದೊಳಗೆ ಜ್ವಾಲಾಮುಖಿಯಾಗಿರುವಳೆಂದು. ಆದರೂ ಮುಂದುವರೆಸಿದ.
"ಇಂಥವೇ ಹಾಡುಗಳೆಂದೇನೂ ಇಲ್ಲ. ಅದು ಮೂಡ್ ಗಳ ಮೇಲೆ ಡಿಪೆಂಡ್. For example ಕೆಲವರಿಗೆ ಲಾಲಿ ಲಾಲಿ ಸುಕುಮಾರ ಹಾಡಿ ಮಲಗಿಸಿದರೆ, ಇನ್ನು ಕೆಲವರಿಗೆ ಹೃದಯವು ಬಯಸಿದೆ ನಿನ್ನನೇ.. ಎನ್ನಬೇಕಾಗುತ್ತದೆ. ಇಂತಹ ಹಾಡಿನಲ್ಲಿ ಉತ್ಸಾಹ ಇರುವುದಿಲ್ಲವಾದರೂ ನಾಳೆ ಕೂಡ ಇದೇ ಹಾಡು ಬೇಕೆನ್ನುವುದಿಲ್ಲ ಅವರು.
ಕೆಲವೊಂದು ದಿನ ಅವರಾಗೇ ಬಾ ಬಾರೋ ರಸಿಕ.. ನೋಡೆನ್ನ ಈ ತಳುಕ.. ಈ ಬಳುಕ .. ಎನ್ನುತ್ತಾರೆ. ಇನ್ನು ಕೆಲವೊಮ್ಮೆ Until I Get Satisfaction.." ಆತ ಹೇಳುತ್ತಿದ್ದಂತೆಲ್ಲ ಅವಳ ತುಟಿಗಳು ಅದುರಲು ಪ್ರಾರಂಭಿಸಿದವು.
ಸಿಟ್ಟಿನ ಕೊನೆಯ ಹಂತದಲ್ಲಿದ್ದಳವಳು. ಕಣ್ಣೀನಿಂದ ನೀರು ಧಾರೆ ಧಾರೆಯಾಗಿ ಪ್ರವಹಿಸತೊಡಗಿತು. ತನ್ನದೇ ಸ್ವಲ್ಪ ಜಾಸ್ತಿಯಾಯಿತೇನೋ ಎಂದುಕೊಂಡು "ಅನ್ವೇಷಣಾ ಸಾರಿ ಕಣೋ, ನನ್ನ ಬಂಗಾರ ಅಲ್ವಾ.. ಮುದ್ದು ಅಲ್ವಾ.. ನೀರೂ.. ನೀರೂ.. "ಎನ್ನುತ್ತಾ ಸಂತೈಸತೊಡಗಿದ. ಆತ ಅವಳಿಗೆ ಹೇಳದ ಹೆಸರುಗಳಿಲ್ಲ.
"ನೀರಲ್ಲಾ.. ಕಣ್ಣೀರು.." ಎಂದಳು. ಎರಡು ಕಿವಿಗಳನ್ನು ಹಿಡಿದು ಎದ್ದು ನಿಂತು ಬಸ್ಕಿ ಹೊಡೆಯಲು ಆರಂಭಿಸಿದ. ಅಕ್ಕ ಪಕ್ಕ ನೋಡಿದಳವಳು. ಯಾರಾದರೂ ನೋಡಿದರೆ ಏನು ಗತಿ? ಈತನೋ, ಈತನ ಚೇಷ್ಟೇಯೋ? ಅಳುತ್ತಲೇ ನಕ್ಕಳು. ನಗುತ್ತಲೇ ಅಳುತ್ತಿದ್ದಳು. "ಸಾಕು.. ಸಾಕು ಬಾ.. ಇನ್ಯಾವತ್ತೂ ಇತರ ಮಾತನಾಡಬೇಡ" ಎಂದಳು.
"ಸರಿ.. ಸರಿ.. ಹಾಗಾದರೆ ನಿನಗೊಂದು ಮೊಬೈಲ್ ತೆಗೆದುಕೊಡುತ್ತೇನೆ.ನಿನಗೇ ಹಾಡು ಹೇಳುತ್ತೇನೆ ದಿನಾಲೂ.."
"ಏನೂ ಬೇಡ ನಾನೇ ತೆಗೆದುಕೊಳ್ಳುತ್ತೇನೆ.." ಎಂದಳು.
"ಓ ಸ್ವಾಭಿಮಾನದ ನಲ್ಲೆ... ಸಾಕು ಸಂಯಮ ಬಲ್ಲೆ... "
ಈ ಹಾಡುಗಳನ್ನೆಲ್ಲ ಎಲ್ಲಿಂದ ಕದಿಯುತ್ತೀಯಾ??" ಎಂದಳು.
ಮಾತನಾಡದೆ ಬಳಿ ಕುಳಿತ. " ಇನ್ನು ನನಗೆ ಹೊತ್ತಾಯಿತು. ನಾನು ಹೊರಡುತ್ತೇನೆ ಎಂದಳು. ಹೀಗೆ ತಪ್ಪಿಸಿಕೊಂಡು ಹೋಗುತ್ತಿರು.. ಆಮೇಲೆ ನಾನು ಜೈಲಿಗೆ ಹೋದ ಮೇಲೆ ಒಂಟಿ ಪಿಶಾಚಿಯಾಗುವೆ" ಎಂದ.
"ನನಗೇನು ಗ್ರಹಚಾರ! ಒಂದು ಚಿಟಿಕೆ ಹೊಡೆದರೆ ನಿನ್ನಂತವರು ಕ್ಯೂ ನಿಲ್ಲುತ್ತಾರೆ" ಎಂದಳು.
"ನಿಲ್ಲುತ್ತಾರೆ.. ನಿಲ್ಲುತ್ತಾರೆ.. ಬೀದಿಯಲ್ಲಿ ನೀರು ಬಂದರೆ ಎಲ್ಲರೂ ಹಿಡಿದುಕೊಳ್ಳುವವರೇ..ಅದೇ ಬಾವಿ ತೊಡಿಸಿ ಪಂಪ್ ಹಾಕಿಕೊಳ್ಳಬೇಕೆಂದರೆ?? ಯಾರೂ ಇರುವುದಿಲ್ಲ.
"ನಿನ್ನನ್ನು ಮುಂದಿನವಾರ ವಿಚಾರಿಸಿಕೊಳ್ಳುತ್ತೇನೆ. ಇಂದಿಗೆ ಬೈ ಕಣೋ ರಾಜ.." ಎನ್ನುತ್ತಾ ಹೊರಡಲನುವಾದಳು. ಆದರೂ ಸೊಂಟ, ಎನ್ನುತ್ತಾ ಅವಳ ಸೊಂಟ ಗಿಲ್ಲಿ, ಕಂಗಳ ಮೇಲೆ ಮುತ್ತಿಟ್ಟು, ನಡಿ ಅಲ್ಲಿಯವರೆಗೆ ನಾನೂ ಬರುತ್ತೇನೆ ಎನ್ನುತ್ತಾ ಅವಳ ಕೈಲಿ ಕೈ ಸೇರಿಸಿ ನಡೆಯತೊಡಗಿದ. ಅವನ ಅಭಯಹಸ್ತದಲ್ಲಿ ಮಾಡಿದ ಜಗಳ, ಹೊರಬಿದ್ದ ಕಣ್ಣೀರು, ಜೈಲಿನ ವಿಷಯ.. ಎಲ್ಲವೂ ಮರೆತು ಹೋಗಿತ್ತು ಆಕೆಗೆ.
ವಿಹಾರಿಯ ತಲೆಯಲ್ಲಿ ಮಾತ್ರ ಜೈಲಿನ ವಿಷಯವೇ ಕೊರೆಯುತ್ತಲೇ ಇತ್ತು. ಹಗರಣ.. ಪ್ರಪಂಚದ ಅತ್ಯಂತ ದೊಡ್ಡ ಹಗರಣ.. ಎಂದುಕೊಂಡ. ನಸುನಗು ಮುಖದಲ್ಲಿ ಹಾದುಹೋಯಿತು. ಓರೆಗಣ್ಣಿನಿಂದ ಆತನನ್ನೇ ನೋಡುತ್ತ ತನ್ನ ಸೊಂಟ ತಾನೇ ನೆನೆದು ಅವಳೂ ಮುಗುಳ್ನಗುತ್ತಿದ್ದಳು.
ಮತ್ತದೇ ಪ್ರಶ್ನೆ ಕೇಳಿದ ವಿಹಾರಿ "ಜೈಲು?" ಈ ಸಲ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು ಅನ್ವೇಷಣಾ. "ತಥಾಸ್ತು ದೇವತೆಗಳಿರುತ್ತಾರೆ. ಸುಮ್ಮನಿರೋ.."
"ನಿನ್ನ ಬಿಟ್ಟಿರುವ ದಿನಗಳು ಸಾಕು ಇನ್ನು, ಯಾವುದಾದರೂ ಒಳ್ಳೆಯ ಕೆಲಸ ಹಿಡಿ, ಮದುವೆಯಾಗೋಣ. ಈ ಒಂಟಿತನ, ಈ ಕೆಲಸ ಎಲ್ಲ ಬೇಸರವಾಗಿದೆ ನನಗೆ. ನೀನು ಜೈಲು ಸೇರೋದು ಬೇಡ, ಕಾಡು ಪಾಲಾಗೋದು ಬೇಡ." ಎಂದಳು ಸಿಟ್ಟಿನಿಂದ.
ವಿಹಾರಿ ಎರಡು ಬಾರಿ ತನ್ನ ಯೋಜನೆ ಹೇಳಬೇಕೆಂದಾಗಲೂ ವಿಷಯ ವಿಷಯಾಂತರವಾಗಿ ಹೋಗಿತ್ತು.
ತನಗೆ ಬಂದಿರುವ ಯೋಚನೆಯನ್ನು ಆತ ಹೇಳಬೇಕೆಂದೇ ಬಂದಿದ್ದ. ತನ್ನ ಯೋಜನೆ ಸರಿಯಾಗಿ ನಡೆದರೆ ಏನೆಂದರೂ ಲಕ್ಷ-ಕೋಟಿಗಳ ಒಡೆಯನಾಗುತ್ತಾನೆ ಅವನು. ಸಿಕ್ಕಿಬಿದ್ದರೆ ಜೈಲು ಆಗಬಹುದೇನೋ ಅದನ್ನೇ ಅವಳಲ್ಲಿ ಆತ ಹೇಳಲು ಬಯಸಿದ್ದ. ಪರಿಸ್ಥಿತಿ ಅದಕ್ಕೆ ಅನುವು ಮಾಡಿಕೊಡಲಿಲ್ಲ. ಮತ್ತೆ ತಾನು ಆ ಸುದ್ಧಿ ಎತ್ತಿದರೆ ಕಣ್ಣೀರಾಗುತ್ತಾಳೆ ಎಂದು ಆತನೂ ಹಮ್ ಎಂದು ಸುಮ್ಮನಾದ.
ಪಕ್ಕ ಪಕ್ಕವೇ ನಡೆಯುತ್ತಿದ್ದ ಆ ಎರಡು ಹೃದಯ, ಒಂದು ಭಾವ ಕವಲೊಡೆದು ತಮ್ಮ ತಮ್ಮ ರಸ್ತೆ ಸೇರಿದವು.
ಇದೇ ತಮ್ಮ ಕೊನೆಯ ಭೇಟಿ ಎಂಬುದು ಒಂದು ಕ್ಷಣ ವಿಹಾರಿಗೆ ಅನ್ನಿಸಿದರೂ ಆತ ಅನ್ವೇಷಣಾಳನ್ನು ಬಿಟ್ಟಿರುತ್ತಿದ್ದಾನಾ??
ಇಲ್ಲಿ ಸಮಯವೇ ಪಾತ್ರಗಳ ಸೂತ್ರಧಾರ!!
...............................ಮುಂದುವರೆಯುತ್ತದೆ..............................