Wednesday, August 17, 2016

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 30

                                          ಖತರ್ನಾಕ್ ಕಾದಂಬರಿ  ನಮ್ಮ ನಿಮ್ಮ ನಡುವೆ... ಅಧ್ಯಾಯ 30

ಬಾಷಾನ ಕಾರು ಮುಂದೆ ಹೊರಡಬೇಕು ಅಷ್ಟರಲ್ಲಿ ಎಲ್ಲಿಂದಲೋ ತೂರಿಕೊಂಡು ಬಂದ ಕಲ್ಲೊಂದು ಜೀಪಿಗೆ ಜೋರಾಗಿ ಬಡಿಯಿತು. ಕಲ್ಲು ಸ್ವಲ್ಪ ಮೇಲೆ ಬಿದ್ದಿದ್ದರೆ ಜೀಪಿನ ಗಾಜು ಒಡೆದು ಪುಡಿ ಪುಡಿ ಆಗಿರುತ್ತಿತ್ತು, ಹಾಗಾಗದೆ ಸ್ವಲ್ಪ ಕೆಳಗೆ ಬಡಿದಿದ್ದರಿಂದ ತಾಗಡು "ದಾಡ್" ಎಂದು ಸಡ್ಡು ಮಾಡಿತು. ಏನು ನಡೆಯಿತು ಎಂದು ಅರಿವಾಗುತ್ತಲೇ ಬಾಷಾನ ಕಣ್ಣುಗಳು ಕೆಂಪಾದವು. ಒಮ್ಮೆಲೇ ಹಿಂದೆ ತಿರುಗಿ ತನ್ನ ಚೇಲಾಗಳ ಮುಖ ನೋಡಿದ. "ಯಾರಾದರೂ ಹೋಗಿ ನೋಡಿ" ಎಂಬ ಸಂಜ್ಞೆ ಅದು. ಬಾಷಾನ ಜೀಪಿಗೆ ಕಲ್ಲು ಹೊಡೆದ ಮೇಲೂ ಸುಮ್ಮನೆ ಬಿಟ್ಟರೆ!!? No.. ಆ ಮಾತೇ ಇಲ್ಲ. ಜನರಲ್ಲಿ ಇರುವ ಭಯ ಮಾತ್ರ ಒಬ್ಬ ರೌಡಿಯನ್ನು ಜೀವಂತವಾಗಿ ಉಳಿಸಬಲ್ಲದು. ಭಯ ಹೋಗಿ ಬಿಟ್ಟರೆ ದಾರಿಯಲ್ಲಿ ಹೋಗಿ ಬರುವವರೆಲ್ಲ ಕಲ್ಲೆಸೆಯುವವರೇ. ಅದನ್ನು ಚೆನ್ನಾಗಿ ಬಲ್ಲ ಬಾಷಾ. ಈಗ ಬಾಷಾನ ಚೇಲಾಗಳು ಕಲ್ಲೆಸೆದವನ ಕೈಯೋ, ಕಾಲೋ ತೆಗೆದರೆ ಮುಂದೆ ಮತ್ಯಾರೂ ಹೀಗೆ ಕಲ್ಲೆಸೆಯುವ ಸಾಹಸ ಮಾಡಲಾರರು. ಜೀಪಿನಿಂದ ದುಡು ದುಡು ಕೆಳಗಿಳಿದರು ಹಿಂದಿದ್ದ ಇಬ್ಬರು. ಸ್ವಯಂವರಾಳಿಗೆ ಸ್ವಲ್ಪ ಸಮಾಧಾನವಾಯಿತು ತನ್ನನ್ನು ಕಾಪಾಡಲು ಯಾರೋ ಬಂದಿದ್ದಾರೆ ಎಂದು.
   ಕ್ಷಾತ್ರ ಆ ಕಡೆಯಿಂದ ಮಾಹಿತಿಗಾಗಿ  ಕಾಯುತ್ತಲೇ ಇದ್ದ. ಕ್ರೈಮ್ ಬ್ರಾಂಚ್ ನ ರಿಸೋರ್ಸ್ ಟೀಮ್ ಮೊಬೈಲ್ ಎಲ್ಲಿದೆ ಎಂದು ಟ್ರೇಸ್ ಮಾಡಿ ಕಾನಸ್ಟೆಬಲ್ಗೆ ಮಾಹಿತಿ ಕೊಟ್ಟರು. ಆತ  "ಸರ್, ಇಂದಿರಾಪುರಮ್ ನ ಸ್ವರ್ಣ ಜಯಂತಿ ಪಾರ್ಕ್ ನ ಬಳಿಯಿಂದ ಮೊಬೈಲ್ ಸಿಗ್ನಲ್ ಕ್ಯಾಚ್ ಆಗುತ್ತಿದೆ.." ಎಂದು ಗಡಿಬಿಡಿಯಲ್ಲಿ ನುಡಿದ. ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಫೋನ್ ಹಿಂದಿರುಗಿಸಿ ಜೀಪ್ ಹತ್ತಿದ ಕ್ಷಾತ್ರ. ತಕ್ಷಣವೇ ಆತನಿಗೆ ನೆನಪಾಯಿತು ತಾನು 26 ಕಿಮೀ ದೂರವಿದ್ದೇನೆ.. ಇದು ಎಲ್ಲರು ಕೆಲಸಕ್ಕೆ ಹೋಗುವ ವೇಳೆ.  ಏನೆಂದರೂ ಅಲ್ಲಿಗೆ ಹೋಗಲು ಒಂದು ತಾಸು ಬೇಕೇ ಬೇಕು. ಅಷ್ಟರಲ್ಲಿ ಆಕೆಯನ್ನು ಅಲ್ಲಿಯೇ ಬಿಡುತ್ತಾರೆ ಎಂದು ಏನು ಗ್ಯಾರೆಂಟಿ? ಅದು ಅಲ್ಲದೆ ಈಗಾಗಲೇ ಅವಳು ಮೊಬೈಲ್ ಬಳಿ ಇರುವಂತಿಲ್ಲ. ಏನು ಮಾಡುವುದು?? ತಕ್ಷಣ ಮತ್ತೆ ಜೀಪಿನಿಂದ ಇಳಿದು ಅದೇ ವ್ಯಕ್ತಿಯ ಬಳಿ ಮೊಬೈಲ್ ತೆಗೆದುಕೊಂಡು 100 ಡಯಲ್ ಮಾಡಿದ. ಹನ್ನೊಂದನೆಯ ರಿಂಗಿಗೆ ಫೋನ್ ಎತ್ತಿದ ಸದ್ದು. ಯಾರಾದರೂ ಎಮೆರ್ಜೆನ್ಸಿ ಎಂದು ಫೋನ್ ಮಾಡಿದರೆ ಗತಿಯೇನು? ಹನ್ನೊಂದನೆ ರಿಂಗಿಗೆ ಫೋನ್ ಎತ್ತಿಕೊಳ್ಳುತ್ತಿದ್ದಾರೆ ಬ್ಲಡಿ ಫೂಲ್ಸ್. ಒಂದೊಂದು ರಿಂಗಿಗೂ ಕ್ಷಾತ್ರನ ಮೈ ಉರಿದು ಸಹನೆ ಕಳೆದುಕೊಂಡಿತ್ತು. ರಿಸೀವರ್ ಎತ್ತುತ್ತಲೇ ಬಾಯಿಗೆ ಬಂದಂತೆ ಬಯ್ಯಬೇಕೆನಿಸಿದರೂ ಈಗ ಅದಕ್ಕೆ ಸಮಯವಲ್ಲ ಎಂದುಕೊಂಡು "ನಾನು ಕ್ಷಾತ್ರ ಮಾತಾಡ್ತಾ ಇರೋದು.. ಘಾಜಿಯಾಬಾದ್ ಇನಸ್ಪೆಕ್ಟರ್.. ಎಂದ" ಮಾತನಾಡುತ್ತಿರುವುದು ಇನಸ್ಪೆಕ್ಟರ್ ಎಂದು ತಿಳಿಯುತ್ತಲೇ "ಹಾಂ, ಹೇಳಿ ಸರ್.." ಎಂದು ಗಡಿಬಿಡಿಗೊಂಡ ಇತ್ತಕಡೆಯ ವ್ಯಕ್ತಿ.
   "ಹುಡುಗಿಯೊಬ್ಬಳನ್ನು ಕಿಡ್ನಾಪ್ ಮಾಡುತ್ತಿದ್ದಾರೆ. ಸ್ವರ್ಣ ಜಯಂತಿ ಪಾರ್ಕಿನ ಬಳಿ.. ಇಂದಿರಾಪುರಮ್.. ಈಗಲೇ ಹೋಗಿ ನೋಡಿ.."
   "ಸರಿ ಸರ್, ಈಗಲೇ ಹೊರಡುತ್ತೇವೆ.." ಎಂದು ಫೋನಿಟ್ಟ ಆತ.
    ಕ್ಷಾತ್ರನಿಗೂ ಗೊತ್ತು ತಮ್ಮ ಡಿಪಾರ್ಟಮೆಂಟಿನ ಕಾರ್ಯವೈಖರಿ. ತಡಮಾಡದೆ ಮತ್ತೆ ಸ್ಟೇಷನ್ ಗೆ ಕಾಲ್ ಮಾಡಿ ಎಲ್ಲ ಪೊಲೀಸ್ ಸ್ಟೇಷನ್ ಗೂ ತಿಳಿಸುವಂತೆ, ದಾರಿಯ ಮೇಲೆ ನಿಂತಿರುವ ಪೆಟ್ರೋ ಮೋಟಾರ್ಸ್ ಗಳಿಗೆ ಎಚ್ಚರಿಸುವಂತೆ ಹೇಳಿ ಮೊಬೈಲ್ ಹಿಂದಿರುಗಿಸಿ ಜೀಪ್ ಹತ್ತಿದ. ತನ್ನ ಮೊಬೈಲಿನಲ್ಲಿ ಏನಾದರೂ ಸದ್ದು ಕೇಳಿ ಬರುತ್ತಿದೆಯಾ ಎಂದು ಆಲಿಸುತ್ತಲೇ ಇದ್ದ.
    "ಅಮ್ಮಾ.." ಎಂದು ಯಾರೋ ದೊಡ್ಡದಾಗಿ ಕಿರುಚಿದ್ದು ಕೇಳಿಸಿತು ಕ್ಷಾತ್ರನಿಗೆ. ಅಂದರೆ ಅವರಿನ್ನೂ ಅಲ್ಲಿಯೇ ಇದ್ದಾರಾ? ಸ್ವಯಂವರಾ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಳಾ?? ಅಥವಾ ಯಾರಾದರೂ ಸಹಾಯಕ್ಕೆ ಬಂದಿರಬಹುದಾ? 100 ಕ್ಕೆ ಕಾಲ್ ಮಾಡಿದ ಎರಡೇ ನಿಮಿಷಗಳಲ್ಲಿ ಕಾರ್ಯ ಪ್ರವೃತ್ತರಾದರಾ? ಎಲ್ಲವೂ ಪ್ರಶ್ನೆಗಳಾಗೆ ಉಳಿದವು. ಪೊಲೀಸ್ ಸೈರನ್ ಹಾಕಿಕೊಂಡು ಎಕ್ಸಿಲೇಟರ್ ರೈಸ್ ಮಾಡಿದ ಕ್ಷಾತ್ರ. ತೆಗೆದುಕೊಂಡಿದ್ದ ಜೀಪಿನ ಕಿಡಕಿಯಿಂದ ಗಾಳಿ ಅವನ ಮುಖಕ್ಕೆ ರಾಚಿತು. ಸ್ವಯಂವರಾ ತಾನೇ ತನ್ನ ಜೀವನದಲ್ಲಿ ಇಷ್ಟೊಂದು ಬದಲಾವಣೆ ಆಗಲು ಕಾರಣ ಅನ್ನಿಸಿತು ಆತನಿಗೆ. ಸ್ವಯಂವರಾಳಿಗೆ ಏನು ಆಗದಿರಲಿ ದೇವರೇ ಎಂದುಕೊಂಡು ಜೀಪು ಮುನ್ನಡಿಸಿದ.
   "ಯಾವ್ ಬೊ.. ಮಗನೋ.. ಕಲ್ಲು ಒಗೆದದ್ದು..??" ಎಂದು ಅವಾಚ್ಯ ಶಬ್ದಗಳಿಂದ ಬಯ್ಯುತ್ತ ಜೀಪಿನಿಂದ ಕೆಳಗಿಳಿದರು ಬಾಷಾನ ಚೇಲಾಗಳು. ಹತ್ತಿರದಲ್ಲಿ ಯಾರು ಕಂಡು ಬರಲಿಲ್ಲ. ಎಲ್ಲರು ಸ್ವಲ್ಪ ದೂರದಲ್ಲಿಯೇ ನಿಂತು ತಮಾಷೆ ನೋಡುತ್ತಿದ್ದರು. ಅಷ್ಟರಲ್ಲಿ ರಸ್ತೆಯ ಮತ್ತೊಂದು ಕಡೆಯಿಂದ ತೂರಿ ಬಂದ ಕಲ್ಲು ಡ್ರೈವರ್ ಸೀಟಿನಲ್ಲಿದ್ದ ಧಡೂತಿಯ ಮುಖಕ್ಕೆ ಬಡಿಯಿತು. "ಅಮ್ಮಾ.." ಎಂದು ದೊಡ್ಡದಾಗಿ ಕೂಗಿಕೊಂಡ ಆತ. ಅದೇ ಸದ್ದು ಕ್ಷಾತ್ರನಿಗೂ ಕೇಳಿದ್ದು. ಊಹಿಸಿರದ ಘಟನೆಗೆ ಬಾಷಾನು ಒಮ್ಮೆ ಗಲಿಬಿಲಿಯಾದ. ಈಕೆಯನ್ನು ಬಿಟ್ಟು ತಾನು ಹೊರಬೀಳಲೇ?? ಅಥವಾ ಸ್ವಲ್ಪ ಸಮಯ ಇಲ್ಲೇ ಕುಳಿತು ಮುಂದೇನಾಗುವುದೆಂದು ನೋಡಲೇ? ಎಂದುಕೊಳ್ಳುವಷ್ಟರಲ್ಲಿ ಡ್ರೈವರ್ ಗೆ ಹಣೆ ಒಡೆದು ರಕ್ತ ಸುರಿಯತೊಡಗಿತು. ಆತ ದೊಡ್ಡದಾಗಿ ಕೂಗಲು ಆಗದೆ, ನೋವು ತಡೆದುಕೊಳ್ಳಲು ಆಗದೆ ನರಳುತ್ತಾ ಹಣೆ ಹಿಡಿದುಕೊಂಡು "ಥೇರಿ ಬೆಹನ್ ಕಿ..ಕೌನ್ ಹೇ.. ಬಾಹರ್ ಆಜಾ.." ಎನ್ನುತ್ತಾ ಸೀಟಿನ ಅಡಿಯಲ್ಲಿದ್ದ ಕತ್ತಿ
 ಹಿಡಿದು ಕೆಳಗಿಳಿದ.
   ತಮ್ಮ ಸಹಚಾರನಿಗಾದ ಗತಿ ನೋಡಿ ಮತ್ತು ಸಿಟ್ಟುಗೊಂಡರು ಉಳಿದವರಿಬ್ಬರು. ಕಲ್ಲು ತೂರಿಬಂದ ದಿಕ್ಕಿನತ್ತ ಓಡಿದರು. ಕೈಯಲ್ಲಿ ಕತ್ತಿ ಹಿಡಿದು ಸೋರುತ್ತಿದ್ದ ರಕ್ತವನ್ನೂ ಲೆಕ್ಕಿಸದೆ ಅವರ ಹಿಂದೆಯೇ ತಾನೂ ಓಡಿದ ಮತ್ತೊಬ್ಬ ಅನುಚರ.
   ಸ್ವಯಂವರಾ ಸುಮ್ಮನೆ ಕುಳಿತಿದ್ದಳು. ಯಾರೋ ತನ್ನ ಸಹಾಯಕ್ಕೆ ಬರುತ್ತಿದ್ದಾರೆ. ಸ್ವಲ್ಪ ಅವಕಾಶ ಸಿಕ್ಕರೂ ತಪ್ಪಿಸಿಕೊಳ್ಳಬಹುದು. ಬಾಷಾನಿಗೆ ಒಂದು ಕ್ಷಣ ಇರುಸುಮುರುಸಾಯಿತು. ದಡ್ಡ ಮುಂಡೆಗಳು.. ಎಲ್ಲರು ಎತ್ತ ಓಡಿದರು? ಅವರು ಅತ್ತ ಹೋಗುವಂತೆ ಮಾಡಿ ಇಲ್ಲಿ ಯಾರಾದರೂ ಬಂದರೆ..!? ತಾನೊಬ್ಬನೇ ಇರುವುದು ಇಲ್ಲಿ. ತನಗ್ಯಾರೋ ಹೊಡೆಯುತ್ತಾರೆ ಎಂಬ ಭಯವಲ್ಲ. ತಾನಿವಳನ್ನು ಬಿಟ್ಟು ಗುದ್ದಾಟಕ್ಕೆ ಹೋದಾಗ ಇವಳು ಓಡಿ ಹೋಗಿ ಬಿಟ್ಟರೆ ಎಂಬ ಅಂಜಿಕೆಯಷ್ಟೆ.
   ಅಷ್ಟರಲ್ಲಿ ಅವರೆಲ್ಲ ಹೋದ ದಿಕ್ಕಿನಿಂದ "ಅಮ್ಮಾ" ಎಂದು ಕಿರುಚಿಕೊಂಡ ಸದ್ದು. ಅದರ ಹಿಂದೆಯೇ ಬೈಕೊಂದು ಜೋರಾಗಿ ಹೋದ ಸದ್ದು. ರಸ್ತೆಯ ಮಧ್ಯೆ ಡಿವೈಡರ್ ಗಳಲ್ಲಿ ಬಣ್ಣದ ಗಿಡಗಳು ಪೊದೆಗಳಾಗಿ ಬೆಳೆದಿದ್ದರಿಂದ ಆ ಕಡೆ ಏನು ನಡೆಯುತ್ತಿದೆ ಎಂದು ಈ ಕಡೆ ಕಾಣಿಸುತ್ತಿರಲಿಲ್ಲ. ಕುಳಿತಲ್ಲಿ ಕುಳಿತುಕೊಳ್ಳಲಾಗದೆ ಚಡಪಡಿಸಿದ ಬಾಷಾ. ತಕ್ಷಣ ಹಿಂದಿನ ಸೀಟಿನ ಕೆಳಗೆ ಬಿದ್ದಿದ್ದ ಹಗ್ಗ ತೆಗೆದುಕೊಂಡು ಪಟಪಟನೆ ಸ್ವಯಂವರಾಳ ಕೈಗಳಿಗೆ ಕಟ್ಟಿ ಜೀಪಿನ ಹಿಂದಿನ ಬಾಗಿಲಿಗೆ ಬಂಧಿಸಿದ. "ಡಾಕ್ಟರ್, ನಿನ್ನ ಬಳಿ ನನಗೆ ಬೇಕಾಗಿರುವುದು ಸ್ವಲ್ಪವೇ ಇನಫಾರ್ಮೇಶನ್. ಅದನ್ನು ಕೊಟ್ಟಿದ್ದರೆ  ಈ ಯಾವ ರಗಳೆಗಳು ಇರುತ್ತಿರಲಿಲ್ಲ. ಈಗಲೂ ಅಷ್ಟೇ.. ಆ ಕೊಲೆ ಮಾಡಿದವನು ಯಾರೆಂದು ಹೇಳಿಬಿಡು. ಬಿಟ್ಟು ಹೋಗಿಬಿಡುತ್ತೇನೆ. ಅದ್ಯಾವುದೋ ಸುವರ್ ನಮಗೆ ಕಲ್ಲು ಹೊಡೆದಿದ್ದಾನೆ. ಬಾಷಾ ಯಾರೆಂದು ತೋರಿಸಿ ಬರುತ್ತೇನೆ. ಅಲ್ಲಿಯವರೆಗೆ ಯೋಚಿಸು. ಅದು ಬಿಟ್ಟು ತಪ್ಪಿಸಿಕೊಳ್ಳಲು ಯೋಚಿಸಿದೆಯೋ ನಿನ್ನನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ. ಬಾಷಾ.. ಬಾಷಾ ಭಾಯಿ.." ಎನ್ನುತ್ತಾ ಜೀಪಿನಿಂದ ಇಳಿದು ದಢಾರನೆ ಬಾಗಿಲು ಹಾಕಿಕೊಂಡು ಅವರೆಲ್ಲ ಓಡಿದ ಕಡೆಯೇ ಹೋದ ಬಾಷಾ.
   ಬಾಷಾ ಆಕಡೆ ಹೋಗುತ್ತಲೇ ಕೈಗೆ ಸುತ್ತಿದ ಹಗ್ಗವನ್ನು ಹಲ್ಲಿನಿಂದ ಜಗ್ಗಿ ಕಟ್ಟನ್ನು ಬಿಚ್ಚುವ ಸಾಹಸ ಶುರು ಮಾಡಿದಳು. ಒಮ್ಮೆ ಈ ಬಂಧನದಿಂದ ಹೊರಬಂದರೆ ಅಲ್ಲಿಯೇ ತನ್ನ ಮೊಬೈಲ್ ಬಿದ್ದಿರುವುದು ಕಾಣಿಸುತ್ತಿದೆ, ಕ್ಷಾತ್ರನಿಗೆ ಫೋನ್ ಮಾಡಿಕೊಂಡು ಇಲ್ಲಿಂದ ಓಡಬಹುದು ಎಂದು ಕನಸು ಕಾಣುತ್ತಲೇ ದಾರಿಯ ಕಡೆ ಒಂದು ಕಣ್ಣಿರಿಸಿಕೊಂಡು ಹಗ್ಗ ಬಿಚ್ಚುವ ಪ್ರಯತ್ನ ಮುಂದುವರೆಸಿದಳು.
   ಬಾಷಾ ಆಕಡೆಯ ರಸ್ತೆಗೆ ಹೋಗುತ್ತಲೇ ಮೊದಲು ಕಂಡ ದೃಶ್ಯ ನೋಡಿ ಅವಾಕ್ಕಾದ. ಅವನ ಒಬ್ಬ ಸಹಚರ ರಕ್ತದ ಮಡುವಿನಲ್ಲಿ ಬಿದ್ದಿದ್ದ. ತಲೆ ಒಡೆದು ರಸ್ತೆಯ ತುಂಬೆಲ್ಲ ರಕ್ತ ಹರಿದಿತ್ತು. ಯಾವುದೋ ಬಲವಾದ ಆಯುಧದಿಂದ ತಲೆಗೆ ಜೋರಾಗಿ ಹೊಡೆದಿದ್ದಾರೆ. ಅವನ ಬಳಿ ಹೋಗಿ ಹತ್ತಿರ ಕುಳಿತು ಅಲ್ಲಾಡಿಸಿದ.
ಜೀವ ಇನ್ನೂ ಹೋಗಿಲ್ಲ. ಆದರೆ ಬದುಕುವ ಸಾಧ್ಯತೆ ಕಡಿಮೆ. ಈಗ ಆತನ ಪರಿಸ್ಥಿತಿ ಯೋಚಿಸುತ್ತ ಕುಳಿತರೆ ಇನ್ನುಳಿದವರ ಗತಿ ಏನಾಗಬಹುದೋ?? ಯಾವನೋ ಅವನು ಹರಾಮ್ ಕೋರ್? ತನ್ನವರ ಮೇಲೆ ಕೈ ಮಾಡುತ್ತಿರುವವನು. ಬಾಷಾನ ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗಿದವು. ನನ್ನ ಚೇಲಾಗಳು ಇನ್ನೂ ನಿನ್ನನ್ನು ಕೊಂದಿರದಿದ್ದರೆ ನಿನ್ನ ಸಾವು ನನ್ನ ಕೈಯಲ್ಲಿಯೇ ಬರೆದಿದೆ ಎಂದುಕೊಳ್ಳುತ್ತ ಕಿರು ರಸ್ತೆಯಲ್ಲಿ ಅವರೆಲ್ಲ ಹೋದ ಕಡೆ ಓಡತೊಡಗಿದ. ಮೈಯಲ್ಲಿ ಆವೇಶ ಆವರಿಸಿಕೊಂಡಿತು.
   ಅಷ್ಟರಲ್ಲಿ ಆ ರಸ್ತೆಯ ತುದಿಯಲ್ಲಿ ತಮ್ಮ ಅನುಚರನಿಗೆ ಕಬ್ಬಿಣದ ರಾಡ್ ನಲ್ಲಿ ಹೊಡೆದು ಬೈಕ್ ಹತ್ತಿ ಹೋದವನನ್ನು ಬೆನ್ನಟ್ಟಿ ಓಡುತ್ತಿದ್ದರು ಉಳಿದಿಬ್ಬರು. ಬೈಕ್ ಸವಾರ ಬೇಕಂತಲೇ ಅವರು ಹತ್ತಿರ ಬರುವವರೆಗೆ ನಿಧಾನ ಮಾಡಿ ಅವರು ಬಳಿ ಬರುತ್ತಿದ್ದಂತೆ ಜೋರಾಗಿ ಎಕ್ಸಿಲೇಟರ್ ಕೊಡುತ್ತಿದ್ದ. ಓಡಿ, ಓಡಿಯೇ ಸುಸ್ತಾಗಿದ್ದರು ಇಬ್ಬರೂ. ಕೈಯಲ್ಲಿ ಕತ್ತಿ ಹಿಡಿದು, ಮೈ ಪೂರ್ತಿ ರಕ್ತ ಸಿಕ್ತವಾಗಿ ರೌಡಿಗಳಿಬ್ಬರು ರಸ್ತೆಯಲ್ಲಿ ಓಡುತ್ತಿದ್ದರೆ ಜನರು ದೂರದಲ್ಲಿಯೇ ನಿಂತು ಕುತೂಹಲಭರಿತರಾಗಿ ನೋಡುತ್ತಿದ್ದರು. ಅಷ್ಟು ಹೊತ್ತು ಕಣ್ಣಾಮುಚ್ಚಾಲೆ ಆಡುತ್ತಿದ್ದ ಬೈಕ್ ಸವಾರ ಈಗ ಒಮ್ಮೆಲೇ ಗಾಡಿಯನ್ನು ಎಂಬತ್ತರಲ್ಲಿ ಓಡಿಸಿ ರಸ್ತೆಯ ಮತ್ತೊಂದು ಪಕ್ಕಕ್ಕೆ ಗಾಡಿ ತಿರುಗಿಸಿ ಮಾಯವಾಗಿಬಿಟ್ಟ. ಅಷ್ಟು ಹೊತ್ತು ಆತನನ್ನು ಹಿಂಬಾಲಿಸುತ್ತಿದ್ದವರು ಏದುಸಿರು ಬಿಡುತ್ತಾ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಂಡರು. ತಪ್ಪಿಸಿಕೊಂಡು ಹೋಗಿಬಿಟ್ಟ ಎಂದರೆ ಬಾಷಾ ಕನಲಿ ಕೆಂಡವಾಗುತ್ತಾನೆ. ಸಿಟ್ಟು ಬಂದರೆ ಏನು ಮಾಡಲು ಹೇಸದ ಮನುಷ್ಯ ಆತ ಎಂದು ಇಬ್ಬರಿಗೂ ತಿಳಿದ ವಿಷಯವೇ. ಪಕ್ಕದಲ್ಲಿ ಓಡಾಡುತ್ತಿರುವ ಯಾವನಾದರೂ ಟೂ ವೀಲ್ಹರ್ ಸವಾರನನ್ನು ದೂಕಿ ಬೈಕ್ ತೆಗೆದುಕೊಂಡು ಚೇಸ್ ಮಾಡಿದರೆ ಎಂಬ ಉಪಾಯ ಮೂಡಿತು. ಅದನ್ನೇ ಕಣ್ಸನ್ನೆ ಮಾಡಿ ತೋರಿಸಿದ ಮತ್ತೊಬ್ಬನಿಗೂ. ಅಷ್ಟರಲಿ ಎದುರಿನಿಂದ ಒಂದು ಬೈಕ್ ಇವರ ಬಳಿ ಬರತೊಡಗಿತು. ಇವನ ಬಳಿಯೇ ಬೈಕ್ ತೆಗೆದುಕೊಂಡು ಓಡಬೇಕೆಂದು ಅವರು ತಯಾರಾದರು. ಹಿಂದೆ ಇನ್ನೂರು-ಮುನ್ನೂರು ಮೀಟರ್ ದೂರದಲ್ಲಿ ಬಾಷಾ ಓಡಿ ಬರುತ್ತಿರುವುದು ಕಂಡಿತು.ಆತ ಬರುವುದರೊಳಗೆ ತಾವು ಸಿದ್ಧರಾಗಬೇಕು. ಎದುರು ಬರುತ್ತಿದ್ದ ಬೈಕ್ ಹತ್ತಿರವಾಯಿತು. ಅವನನ್ನು ಹಿಡಿದು ನಿಲ್ಲಿಸಲು ಅವರಿಬ್ಬರೂ ತಯಾರಾದರು. ನಿಧಾನವಾಗಿ ಬರುತ್ತಿದ್ದ ಬೈಕ್ ಒಮ್ಮೆಲೇ ವೇಗ ಪಡೆದುಕೊಂಡಿತು. ಬರುತ್ತಿರುವ ಬೈಕ್ ಸವಾರ ತಾವು ಬೆನ್ನಟ್ಟಿ ಹೋದವನೇ ಎಂದು ತಿಳಿಯುವುದರೊಳಗೆ ಕಾಲ ಮಿಂಚಿ ಹೋಗಿತ್ತು. ವೇಗವಾಗಿ ಇವರೆಡೆಗೆ ಬಂದ ಬೈಕ್ ಕತ್ತಿ ಹಿಡಿದು ತನ್ನೆಡೆಗೆ ಬರುತ್ತಿದ್ದ ರೌಡಿಯೆಡೆಗೆ ನುಗ್ಗಿತು. ಒಮ್ಮೆಲೇ ನಡೆದ ಈ ಘಟನೆಯಿಂದ ಆತನಿಗೆ ಕತ್ತಿ ಬೀಸಬೇಕೋ ಅಥವಾ ತನ್ನನ್ನು ತಾನೇ ತಪ್ಪಿಸಿಕೊಳ್ಳಬೇಕೋ ತಿಳಿಯದಾಯಿತು. ಅದೇ ಒಂದು ಕ್ಷಣದಲ್ಲಿ ಬೈಕ್ ಸವಾರ ತನ್ನ ಕೈಯಲ್ಲಿರುವ ಕಬ್ಬಿಣದ ಸರಳಿನಿಂದ ಆತನ ಮಂಡಿಗೆ ಬಿರುಸಾಗಿ ಹೊಡೆದಿದ್ದ. ಹುಚ್ಚು ಹಿಡಿದವನಂತೆ ಕೂಗಿಕೊಂಡು ರಸ್ತೆಯ ಮೇಲೆ ಕುಸಿದು ಬಿದ್ದು ದೊಡ್ಡದಾಗಿ ಅರಚತೊಡಗಿದ. ಮೊಳಕಾಲಿನ ಚಿಪ್ಪು ಒಡೆದು ಪುಡಿಪುಡಿಯಾಗಿ ಹೋಗಿತ್ತು. ತನ್ನ ಸಹಚಾರನಿಗಾದ ಪರಿಸ್ಥಿತಿ ನೋಡಿ ಕಂಗೆಟ್ಟ ಮತ್ತೊಬ್ಬ ರೌಡಿ ಏನು ಮಾಡಬೇಕೆಂದು ಯೋಚಿಸುವುದರೊಳಗೆ ಕಬ್ಬಿಣದ ರಾಡ್ ಆತನ ಭುಜದೊಳಗೆ ಇಳಿದಿತ್ತು. "ಕಳಕ್." ಮೂಳೆ ಮುರಿದು ಕೊಂಡಿತ್ತು. ಅತಿ ಪ್ರೊಫೆಷನಲ್ ಗಳು ಮಾತ್ರ ಹೊಡೆಯುವಂಥ ಹೊಡೆತಗಳವು. ಸಾಯಬಾರದು, ಬದುಕಿರುವವರೆಗೆ ಇನ್ನೊಬ್ಬರ ತಂಟೆಗೆ ಹೋಗಬಾರದು. ನಡೆಯುತ್ತಿರುವ ಘಟನೆಗಳೆಲ್ಲ ಸಿನಿಮಾದ ರೀಲಿನಂತೆ ಬಾಷಾನ ಕಣ್ಣೆದುರೇ ಕಾಣಿಸುತ್ತಿತ್ತು. ಇಂತಹದ್ದನ್ನೆಲ್ಲ ನೋಡಿಯೇ ಆತ ಅಷ್ಟೆತ್ತರ ಬೆಳೆದಿದ್ದಾನೆ. ಅದಕ್ಕೆಲ್ಲ ಧೃತಿಗೆಡುವ ಮನುಷ್ಯನಲ್ಲ. ಮಯ್ಯಲಿದ್ದ ಕಸುವನ್ನೆಲ್ಲ ಒಗ್ಗೂಡಿಸಿಕೊಂಡು ಬೈಕಿನ ಕಡೆ ಓಡಿ ಬರತೊಡಗಿದ. ಕಿರುಗಣ್ಣಲ್ಲೇ ಅವನನ್ನು ಗಮನಿಸಿ "ಓಡಿ ಬಾ ಮಗನೆ" ಎನ್ನುವಂತೆ ಅವನ ಕಡೆ ಕೈ ತೋರಿಸಿ, ಬೈಕ್ ಮುನ್ನಡೆಸಿ ನಡೆದು ಬಿಟ್ಟ ಆ ವ್ಯಕ್ತಿ. ನೋವಿನಿಂದ ಹೊರಳಾಡುತ್ತಿದ್ದ ತನ್ನ ಸಹಚರನ ಬಳಿ ಬಂದು ಕ್ಯಾಕರಿಸಿ ಉಗಿದ. "ತಿಂದ ಅನ್ನಕ್ಕೆ ಉಪಯೋಗವಿಲ್ಲದವರು ನೀವು ಮೂವರು. ಯಾರೋ ಒಬ್ಬನಿಂದ ಹೊಡೆತ ತಿಂದಿರಿ" ಎಂದು ಗುರುಗುಡುತ್ತಾ ಅಲ್ಲಿಯೇ ಎರಡು ಕ್ಷಣ ನಿಂತ. ಈತ ಮತ್ತಿನ್ನೇನಾದರೂ ತಿರುಗಿ ಬರುವನೇ?? ಅಥವಾ ಓಡಿ ಬಿಡುತ್ತಾನೆಯೇ? ಯಾರೀತ? ಅವಳನ್ನು ಕಾಪಾಡಲು ಬಂದವನಾ?? ಅಥವಾ ನಮ್ಮ ಮೇಲೇನಾದರೂ ಹಳೆ ವೈಷಮ್ಯವಾ?? ಪದೇ ಪದೇ ಅಟ್ಯಾಕ್ ಮಾಡುತ್ತಿದ್ದಾನೆ ಅಂದರೆ ಮತ್ತೆ ಈಗ ತನ್ನ ಮೇಲೆ ಎರಗಲು ಬರುತ್ತಾನೆ. ಬಾಷಾನ ಮೈ ಕೈ ನರಗಳೆಲ್ಲ ಹೊಡೆದಾಟಕ್ಕೆ ಸಿದ್ಧ ಎಂಬಂತೆ ಉಬ್ಬಿ ನಿಂತವು. ಬಾ ಮಗನೇ.. ನಿನ್ನ ಕುತ್ತಿಗೆ ಮುರಿಯದಿದ್ದರೆ ಹೇಳು ಎನ್ನುತ್ತಾ ಪಕ್ಕದಲ್ಲೇ ಬಿದ್ದಿದ್ದ ಕತ್ತಿಯನ್ನು ಕೈಲಿ ಹಿಡಿದು ನಿಂತ.
   ಒಂದೆರಡು ನಿಮಿಷಗಳು ಹಾಗೆಯೇ ಕಳೆಯಿತು. ಬೈಕಿನ ಸದ್ದಿಲ್ಲ. ಮನದಲ್ಲಿ ಟೆನ್ಷನ್ ಶುರುವಾಯಿತು. ನೋವು ತಾಳಲಾರದೆ ಚೇಲಾಗಳು ರಾಗ ಹಾಡುವುದನ್ನು ಮುಂದುವರೆಸಿಯೇ ಇದ್ದರು. "ಥೇರಿ.. ಮುಚ್ರೋ ಬಾಯಿ" ಎಂದ.
  ಮತ್ತೆರಡು ನಿಮಿಷ.. ಹಾಗೆಯೇ ಕಳೆಯಿತು..
   ಈಗ ಬಾಷಾನ ಮನದಲ್ಲಿ ಸಂಶಯ ಮೂಡಿತು. ತಾವೆಲ್ಲ ಈ ಕಡೆ ಬಂದಾಗ ಆತನೇನಾದರೂ ಹೋಗಿ ಸ್ವಯಂವರಾಳನ್ನು ಬಿಡಿಸಿ ಬಿಟ್ಟರೆ? ಮೈ ಜುಮ್ ಎಂದಿತು ಆ ಯೋಚನೆಗೆ. ಕತ್ತಿ ಅಲ್ಲೇ ಬಿಸುಟಿ, ಹಿಂದಿರುಗಿ ಜೀಪಿನತ್ತ ಓಡತೊಡಗಿದ.
  ಬಾಷಾ ಜೀಪು ಬಿಟ್ಟು ಅತ್ತ ಸಾಗುತ್ತಲೇ ಕೈಗೆ ಸುತ್ತಿದ್ದ ಹಗ್ಗವನ್ನು ಹಲ್ಲಿನಿಂದ ಕಚ್ಚಿ ಬಿಡಿಸಲು ಪ್ರಯತ್ನಿಸುತ್ತಿದ್ದಳು ಸ್ವಯಂವರಾ. ಒಮ್ಮೆ ಕಟ್ಟು ಬಿಚ್ಚಿ ಪಾರಾಗಿ ಹೋದರೆ ಸಾಕು, ಕ್ಷಾತ್ರನಿಗೆ ಹೇಳಿ ಇವರಿಗೊಂದು ಗತಿ ಕಾಣಿಸಬಹುದು. ಹೀಗೆ ಕಲ್ಲೆಸೆದಿದ್ದು ಯಾರು? ತನ್ನನ್ನು ಕಾಪಾಡಲು ಬಂದವರು ಯಾರು? ಕ್ಷಾತ್ರನಿಗೆ ತನ್ನ ಪರಿಸ್ಥಿತಿಯ ಬಗ್ಗೆ ಅರಿವಾಗಿದೆಯಾ?? ಅರಿವಾಗಿದ್ದರೆ ಈ ಕಡೆ ಬರುತ್ತಿರಬಹುದಾ? ತಾನು ಆತನಿಗೆ ಕಾಲ್ ಮಾಡಿ ಮೊಬೈಲ್ ಹಿಡಿದುಕೊಂಡಿದ್ದೇನಲ್ಲ ಈಗಲೂ ಆತನಿಗೆ ಇಲ್ಲಿನ ಪರಿಸ್ಥಿತಿ ತಿಳಿಯುತ್ತಿರಬಹುದಾ? ಹತ್ತು ಹಲವು ಯೋಚನೆಗಳು ಅವಳ ಮನದಲ್ಲಿ ಸುಳಿಯುತ್ತಿರುವಾಗಲೇ ಆಕೆ ಹಗ್ಗವನ್ನು ಬಿಚ್ಚುವ ಪ್ರಯತ್ನ ಮುಂದುವರೆಸಿದ್ದಳು. ಬಾಷಾ ಬಂದುಬಿಟ್ಟರೆ ತನ್ನ ಕಥೆ ಮುಗಿಯಿತು ಎಂದವಳಿಗೆ ಗೊತ್ತು.
   ಅವಳು ತನ್ನ ಪ್ರಯತ್ನ ಕೈಬಿಡಲಿಲ. ಅಷ್ಟರಲ್ಲಿ ಜೀಪಿನ ಪಕ್ಕ ಬೈಕೊಂದು ಬಂದು ನಿಂತಿತು. ಅದರ ಮೇಲಿದ್ದ ಹೆಲ್ಮೆಟ್ ಧಾರಿ ಸ್ವಯಂವರಾಳ ಕಡೆ ನೋಡಿದ. ಅವನ ಕೈಲಿದ್ದ ರಕ್ತ ಸಿಕ್ತವಾಗಿದ್ದ ಕಬ್ಬಿಣದ ಸರಳನ್ನು ನೋಡಿ ಇವನೇನಾ ನನ್ನನ್ನು ತಪ್ಪಿಸಲು ಬಂದವನು? ಬಾಷಾನನ್ನು ಹೊಡೆದು ಕೆಡವಿದನಾ?? ಈಗ ನನ್ನನ್ನು ಬಿಡಿಸುತ್ತಾನಾ? ಆತ ಅಲ್ಲಿಗೆ ಬರುತ್ತಲೇ ಸ್ವಲ್ಪ ನಿರಾಳವೆನ್ನಿಸಿತು ಸ್ವಯಂವರಾಳಿಗೆ.
  ಆತ ಬೈಕ್ ನಿಲ್ಲಿಸಿ ಕೆಳಗಿಳಿದ. ಕಬ್ಬಿಣದ ಸರಳು ಬೈಕ್ನ ಹ್ಯಾಂಡಲ್ ಮೇಲೆ ಉಳಿಯಿತು. ಸ್ವಯಂವರಾಳ ಹೃದಯ ಜೋರಾಗಿ ಬಡಿದುಕೊಳ್ಳತೊಡಗಿತು. ಬೈಕಿನಿಂದ ಇಳಿದ ವ್ಯಕ್ತಿ ಅಲ್ಲಿಯೇ ಹತ್ತಿರದಲ್ಲಿ ಬಿದ್ದಿದ್ದ ಸ್ವಯಂವರಾಳ ಮೊಬೈಲ್ ಎತ್ತಿಕೊಂಡ. ಇಪ್ಪತ್ತು ನಿಮಿಷಗಳಿಂದ ಕಾಲ್ ಕನೆಕ್ಟ್ ಆಗಿಯೇ ಇತ್ತು. ಕಾಲ್ ಡಿಸ್ ಕನೆಕ್ಟ್ ಮಾಡಿ ಮೊಬೈಲ್ ಜೇಬಿಗಿಳಿಸಿ ಮತ್ತೆ ಸ್ವಯಂವರಾಳ ಕಡೆ ನೋಡಿದ. ಆತ ಹೆಲ್ಮೆಟ್ ಧರಿಸಿದ್ದರಿಂದ ಯಾರೆಂದು ಗುರುತಿಸುವುದು ಕಷ್ಟವಾಯಿತು ಸ್ವಯಂವರಾಳಿಗೆ.
   ಅದೇ ಸಮಯಕ್ಕೆ ಕ್ಷಾತ್ರ ಇಂದಿರಾಪುರಮ್ ಒಳಹೊಕ್ಕಿದ್ದ. ಇನ್ನೇನು ಸ್ವಲ್ಪ ದೂರ.. ಸ್ವಯಂವರಾ ಯಾವ ಕಡೆ ಹೋದಳೋ..!? ಕಾಲ್ ಬೇರೆ ಡಿಸ್ ಕನೆಕ್ಟ್ ಆಯಿತು. ಮತ್ತೆ 100 ಡಯಲ್ ಮಾಡಿ ಏನಾದರೂ ಇನಫಾರ್ಮೇಶನ್ ಸಿಕ್ಕಿತಾ ಎಂದು ಕೇಳಿದ. ಪೊಲೀಸರಿನ್ನು ಅಷ್ಟೇ ಕಾರ್ಯಪ್ರವೃತ್ತರಾಗುತ್ತಿದ್ದರು. ಮತ್ತಷ್ಟು ತಲೆಬಿಸಿಯಿಂದ ಜೀಪನ್ನು ಸಿಕ್ಕ ಸಿಕ್ಕ ಜಾಗದಲ್ಲಿ ನುಗ್ಗಿಸಿ ಮುನ್ನಡೆಯತೊಡಗಿದ ಕ್ಷಾತ್ರ.
  ಇತ್ತ ಮೊಬೈಲ್ ಜೇಬಿಗಿಳಿಸಿದ ವ್ಯಕ್ತಿ ಹೆಲ್ಮೆಟ್ ತೆಗೆದ. ಒಮ್ಮೆಲೇ ಸ್ವಯಂವರಾಳ ಮೇಲೆ ತಣ್ಣೀರು ಸುರಿದಂತಾಯಿತು. ಎದುರಿಗೆ ನಿಂತವನು ಬೇರೆ ಯಾರು ಅಲ್ಲ. ಅಂದು ಆಸ್ಪತ್ರೆಯಲ್ಲಿ ಕೊಲೆ ಮಾಡಿದ ವ್ಯಕ್ತಿ.. No doubt.. ಆತನೇ ಈತ.. ತನ್ನನ್ನು ಮತ್ತೆ ಭಯದ ಭೂತ ಆವರಿಸಿ ಎಲ್ಲರು ಅವನಂತೆ ಕಾಣುತ್ತಿರಬಹುದೇ ಎಂಬ ಅನುಮಾನ ಮೂಡಿತು. ಇನ್ನೊಂದು ಕಡೆ ನೋಡಿದಳು. ದೂರದಲ್ಲಿ ನಿಂತು ನೋಡುತ್ತಿದ್ದ ಜನರು ಯಾರು ಸಹ ವಿಹಾರಿಯಂತೆ ಕಾಣಲಿಲ್ಲ. ಅಂದರೆ ತಾನು ನೋಡುತ್ತಿರುವುದು ನಿಜ. ಈತ ತನ್ನನ್ನು ಕೊಲ್ಲಲು ಬಂದನಾ? ಈತ ಬಾಷಾನ ಕಡೆಯವನಾ? ತನ್ನನ್ನು ತಪ್ಪಿಸಲು ಬಂದವನನ್ನು ಹೊಡೆದು ಇಲ್ಲಿ ಬಂದನಾ? ಹಾಗಾದರೆ ಬಾಷಾ ಎತ್ತ ಹೋದ? ಕಣ್ಣಂಚು ತುಂಬಿಕೊಂಡಿತು. ತಕ್ಷಣ ತನ್ನ ಬಿಡಿಸಿಕೊಳ್ಳುವ ಪ್ರಯತ್ನ ಮುಂದುವರೆಸಿದಳು.
  ವಿಹಾರಿ ಸ್ವಯಂವರಾಳತ್ತ ಮುಗುಳ್ನಕ್ಕು ಅತ್ತ ಕಡೆಯೇ ಬರತೊಡಗಿದ. ಆತನ ಮುಖದ ಮೇಲಿನ ಮುಗುಳ್ನಗು ಕಂಡು ಸ್ವಲ್ಪ ಸಮಾಧಾನವಾದರೂ ಈತನೇನಾದರೂ ಸೈಕೋ ಕಿಲ್ಲರ್ ಆಗಿದ್ದರೆ ಎಂಬ ಸಣ್ಣ ಯೋಚನೆಯು ಬಂತು. ಆದರೆ ಬಂಧಿಯಾಗಿರುವುದರಿಂದ ಆಕೆ ಹೆಚ್ಚಿನದೇನನ್ನೂ ಮಾಡಲಾಗಲಿಲ್ಲ. ಕಿಡಕಿಯಿಂದ ದೂರ ಸರಿದು ಜೀಪಿನ ಮಧ್ಯ ಹೋಗಿ ಕುಳಿತು ವಿಹಾರಿಯನ್ನೇ ನೋಡತೊಡಗಿದಳು.
   ಜೀಪಿನ ಬಾಗಿಲ ಬಳಿ ಬಂದು ಅವಳ ಮುಖ ನೋಡಿ ಮುಗುಳ್ನಗುತ್ತ "ಸ್ವಯಂವರಾ ಅವ್ರೆ, ನಾನು ನಿಮ್ಮ ಹಿತೈಷಿ.. ಹೆದರುವ ಅಗತ್ಯವಿಲ್ಲ. ಬಾಷಾ ಬರುವುದರೊಳಗೆ ನಾವು ಇಲ್ಲಿಂದ ಪಾರಾಗಬೇಕು. ಈ ಕಡೆ ಬನ್ನಿ ನಿಮ್ಮ ಕೈ ಬಿಡಿಸುತ್ತೇನೆ.." ಎಂದ.
  ಸ್ವಯಂವರಾ ಆತನ ಮುಖದ ಭಾವನೆಗಳನ್ನು ಓದುವ ಪ್ರಯತ್ನ ಮಾಡಿದಳು. No chance. ಅಂದು ಆಸ್ಪತ್ರೆಯಲ್ಲಿ ಕಂಡ ವಿಹಾರಿಯ ಮುಖವೂ, ಇಂದು ಕಂಡ ವಿಹಾರಿಯ ಮುಖವೂ ಸೇಮ್ ಟು ಸೇಮ್. ಎಂತವರನ್ನು ಬೇಕಾದರೂ ಆಕೆ ಮುಖ ನೋಡಿ ಅರಿತುಕೊಳ್ಳಬಲ್ಲಳು. ಕ್ಷಾತ್ರನ ಮುಖದ ಭಾವನೆಗಳನ್ನು ಕೂಡ ಆಕೆ ಓದಬಲ್ಲಳು. ಆದರೆ ವಿಹಾರಿಯ ಮುಖ ಮಾತ್ರ ಶೂನ್ಯ. ಆತ ನಿಜ ಹೇಳುತ್ತಿದ್ದಾನಾ? ಅಥವಾ ಹತ್ತಿರ ಕರೆದು ತನ್ನನ್ನು ಕೊಲೆ ಮಾಡುವ ಪ್ರಯತ್ನವಾ??
  ಬಾಷಾನ ಕೈಲಿ ಸಿಗುವುದಕ್ಕಿಂತ ಒಂದು ಚಾನ್ಸ್ ತೆಗೆದುಕೊಳ್ಳಬಹುದೇನೋ ಎಂದೆನ್ನಿಸಿತು.
  "ಸ್ವಯಂವರಾ ಅವ್ರೆ, ನಮ್ಮ ಬಳಿ ಸಮಯವಿಲ್ಲ ಬನ್ನಿ.." ಎಂದ ಮತ್ತೆ ವಿಹಾರಿ. ಅವಳು ಸ್ವಲ್ಪ ಭಯದಿಂದಲೇ ಬಾಗಿಲ ಬಳಿ ಸರಿದಳು. ವಿಹಾರಿ ಬೇಗಬೇಗನೆ ಅವಳ ಕೈಗೆ ಕಟ್ಟಿದ್ದ ಹಗ್ಗ ಬಿಚ್ಚತೊಡಗಿದ.
  ಆಗ ನಡೆದಿತ್ತು ಆ ಅವ್ಯಾಹುತ ಘಟನೆ.
  ಜೀಪಿನ ಹಿಂದಿನಿಂದ ಬಂದ ಬಾಷಾ ಒಮ್ಮೆಯೇ ವಿಹಾರಿಯ ಕಡೆ ನುಗ್ಗಿ ಆತನ ಸೊಂಟ ಹಿಡಿದು ಅಲಾಕ್ಕಾಗಿ ಎತ್ತಿ ಎಸೆದು ಬಿಟ್ಟ. ಒಮ್ಮೆಲೇ ನಡೆದ ಈ ಘಟನೆಗೆ ವಿಹಾರಿಗೂ ಚೇತರಿಸಿಕೊಳ್ಳಲು ಒಂದು ಕ್ಷಣ ಹಿಡಿಯಿತು.
   ಸ್ವಯಂವರಾಳಿಗೆ ಈಗ ಸತ್ಯ ತಿಳಿಯಿತು. ನಿಜವಾಗಿಯೂ ವಿಹಾರಿ ಬಾಷಾನ ಕಡೆಯವನಲ್ಲ. ತನ್ನ ಹತ್ತಿರ ತಪ್ಪಿಸಿಕೊಳ್ಳಲು ಇರುವ ಕೊನೆಯ ಚಾನ್ಸ್ ಇದು. ವಿಹಾರಿಯೇನಾದರೂ ಬಾಷಾನ ಬಳಿ ಹೊಡೆತ ತಿಂದು ಮಲಗಿದರೆ ಮುಗಿಯಿತು.
  ವಿಹಾರಿಯೇ ಅಂದು ಆಸ್ಪತ್ರೆಯಲ್ಲಿ ಕೊಲೆ ಮಾಡಿದವ ಎಂದು ಬಾಷಾಗೆ ತಿಳಿಯಿತಾ?? ಅಥವಾ ನನ್ನನ್ನು ತಪ್ಪಿಸಲು ಬಂದಿದ್ದರಿಂದ ಬಾಷಾ ಅವನ ಮೈಮೇಲೆ ಬಿದ್ದಿದ್ದಾನಾ?? ಅರ್ಥವಾಗಲಿಲ್ಲ. ಏನಾದರಾಗಲಿ ಇಬ್ಬರು ಗುದ್ದಾಡಿಕೊಳ್ಳುವಾಗ ತಾನು ಓಡಿ ಬಿಡಾಬೇಕು ಎಂದುಕೊಂಡು ಅರ್ಧ ಬಿಚ್ಚಿದ್ದ ಹಗ್ಗವನ್ನು ಹಲ್ಲಿನಿಂದ ಪಟಪಟನೆ ಬಿಚ್ಚಿಕೊಳ್ಳತೊಡಗಿದಳು.
ವಿಹಾರಿಗೆ ಸ್ವಲ್ಪವೂ ಸಮಯ ಕೊಡದೆ ಗೂಳಿಯಂತೆ ಆತನ ಮೇಲೆ ಎರಗಿದ ಭಾಷಾ. ವಿಹಾರಿ ಒಮ್ಮೆ ಗಲಿ ಬಿಲಿಗೊಂಡರು ತನ್ನ ಮೇಲೆ ಎರಗಿ ಬರುತ್ತಿದ್ದ ಬಾಷಾನಿಗೆ ಮಲಗಿದ್ದಲ್ಲಿಯೇ ಸ್ವಲ್ಪ ಸರಿದು ಮೈ ಮೇಲೆ ಬೀಳಲು ಬರುತ್ತಿದ್ದ ಆತನ ಪಕ್ಕೆಗೆ ಬಿರುಸಾಗಿ ಒದ್ದ. ಅಜಾನುಬಾಹು ಬಾಷಾ ಕೂಡ ನೋವಿನಿಂದ ಒಮ್ಮೆ ಒರಲಿದ. ಹಾಗೆಂದು ಆತ ವಿಹಾರಿಯನ್ನು ಬಿಟ್ಟು ದೂರವೇನು ಸರಿಯಲಿಲ್ಲ. ಒದೆತದ ನೋವ್ವಿಗೆ ಅಷ್ಟೇನೂ ಗಮನ ಕೊಡದೆ ವಿಹಾರಿಯ ಹೊಟ್ಟೆಯ ಮೇಲೆ ಕುಳಿತು ಮುಷ್ಟಿ ಕಟ್ಟಿ ಆತನ ಎದೆಯ ಮೇಲೆ ಗುದ್ದಿದ. ಆ ಹೊಡೆತಕ್ಕೆ ವಿಹಾರಿ ಅದುರಿ ಹೋದ. ಆತನ ಕಣ್ಣು ಒಮ್ಮೆ ಕತ್ತಲು ಗಟ್ಟಿತು. ಅಷ್ಟಕ್ಕೇ ಸುಮ್ಮನಾಗದೆ ಬಾಷಾ ತನ್ನ ತಲೆಯಿಂದ ವಿಹಾರಿಯ ತಲೆ ಎತ್ತಿ ಒಮ್ಮೆ ಗಟ್ಟಿಸಿದ. ಭಾಷಾ ಇಷ್ಟು ಬಲವಾದ ವ್ಯಕ್ತಿ ಎಂದು ವಿಹಾರಿ ಗಮನಿಸಿರಲಿಲ್ಲ. ಅದೇ ಆತ ಮಾಡಿದ ತಪ್ಪು. ತಲೆ ಒಡೆದು ಹೋಯಿತೇನೋ ಎಂಬಷ್ಟು ನೋವಾಯಿತು ವಿಹಾರಿಗೆ. ಭಾಷಾ ಸುಮ್ಮನಾಗುವ ಉಮೇದಿಯಲ್ಲಿ ಇರಲಿಲ್ಲ. ತನ್ನ ಸಹಚರರಿಗೆ ಆದೋ ಗತಿ ತಂದ  ವಿಹಾರಿಯನ್ನು ಮುಗಿಸಿದರೆ ಸಮಾಧಾನ ಎಂದೆನ್ನಿಸಿತ್ತು ಆತನಿಗೆ. ವಿಹಾರಿ ತಪ್ಪಿಸಿಕೊಳ್ಳಲು ಆಕಡೆ ಈಕಡೆ ಹೊರಳಲು ಯತ್ನಿಸಿದ. ಸುಲಭವಾಗಿ ತಪ್ಪಿಸಿಕೊಳ್ಳುವುದಂತೂ ಸಾಧ್ಯವೇ ಇಲ್ಲ. ಆಜಾನುಬಾಹು ಬಾಷಾ ಆತನ ಮೈಮೇಲೆ ಕುಳಿತಿದ್ದರಿಂದ ಆತನನ್ನು ದೂಡಿ ಮೇಲೇಳುವುದು ಕಷ್ಟಸಾಧ್ಯವೇ ಆಗಿತ್ತು. ಬಾಷಾ ತನ್ನ ಬಲವಾದ ಹಸ್ತಗಳಿಂದ ವಿಹಾರಿಯ ಕುತ್ತಿಗೆ ಹಿಡಿದು ಹಿಸುಕತೊಡಗಿದ.
  ವಿಹಾರಿಯ ಕೈ ಮುಷ್ಠಿ ಕಟ್ಟಿ ಬಾಷಾಗೆ ಗುದ್ದಿದರೂ ಬಾಷಾ ತಲೆ ಕೆಡಿಸಿಕೊಳ್ಳದೆ ತನ್ನ ಹಿಡಿತವನ್ನು ಇನ್ನು ಬಲಗೊಳಿಸತೊಡಗಿದ.
   ವಿಹಾರಿ ಸ್ವಯಂವರಳ ಕೈ ಗಂಟನ್ನು ಅರ್ಧ ಬಿಚ್ಚಿದ್ದರಿಂದ ಅವಳು ಬಂಧನ ಬಿಡಿಸಿಕೊಳ್ಳುವಲ್ಲಿ ಸಫಲಳಾದಳು. ವಿಹಾರಿಯನ್ನು ಅಡಿಯಲ್ಲಿ ಹಾಕಿಕೊಂಡು ಕುತ್ತಿಗೆ ಹಿಸುಕುತ್ತಿದ್ದ ಬಾಷಾನನ್ನು ಕಂಡು ಏನು ಮಾಡಬೇಕೆಂದು ಅರಿವಾಗಲಿಲ್ಲ ಅವಳಿಗೆ. ತಾನು ಓಡಿ ಹೊರಟರೂ, ವಿಹಾರಿಯನ್ನು ಮುಗಿಸಿ ತನ್ನನ್ನು ಹಿಡಿಯುತ್ತಾನೆ ಬಾಷಾ. ಕೊಲೆಗಾರನಾದರೂ ತನ್ನನ್ನು ತಪ್ಪಿಸಲು ಬಂದ ವಿಹಾರಿಯನ್ನು ಹೀಗೆ ಸಾಯಲು ಬಿಟ್ಟು ಹೊರಡುವುದು ಸರಿಯೇ?? ಆದರೆ ಬಾಷಾನನ್ನು ಎದುರಿಸಲು ಸಾಧ್ಯವೇ ತಾನು!?  ಅವಳ ಮನಸ್ಸು ಸಂದಿಗ್ಧದಲ್ಲಿ ಸಿಲುಕಿತು.
  ಬಾಷಾನ ಬಲವಾದ ಹಿಡಿತದಿಂದ ವಿಹಾರಿಗೆ ಉಸಿರಾಡುವುದು ಕಷ್ಟವಾಯಿತು. ಆತ ನಿಧಾನವಾಗಿ ಪ್ರಜ್ಞೆ ಕಳೆದುಕೊಳ್ಳತೊಡಗಿದ. ಕೈಕಾಲುಗಳ ಬಡಿತದಲ್ಲಿ ಶಕ್ತಿ ಕಡಿಮೆಯಾಗಿ ತೇಲುಗಣ್ಣಾಗತೊಡಗಿತು. ಬಾಷಾ ತನ್ನ ಬಲಪ್ರಯೋಗ ಮುಂದುವರೆಸಿಯೇ ಇದ್ದ. ಸ್ವಯಂವರಾ ಸ್ವಲ್ಪ ಧೈರ್ಯ ತಂದುಕೊಂಡು ಜೀಪ್ ಇಳಿದು ಬಂದು ವಿಹಾರಿಯ ಮೈಮೇಲೆ ಕುಳಿತಿದ್ದ ಬಾಷಾನನ್ನು ಗಟ್ಟಿಯಾಗಿ ದೂಡಲು ನೋಡಿದಳು. ಆಕೆಯ ಕಡೆ ಒಂದು ಭೀಭತ್ಸ ನೋಟ ಬೀರಿ, ಒಂದು ಕೈಯಲ್ಲಿ ವಿಹಾರಿಯ ಕುತ್ತಿಗೆ ಹಿಡಿದು ಮತ್ತೊಂದು ಕೈಯಲ್ಲಿ ಆಕೆಯನ್ನು ದೂರ ತಳ್ಳಿದ ಬಾಷಾ. ಅದೆಷ್ಟು ಬಿರುಸಾಗಿತ್ತೆಂದರೆ ತನ್ನ ಕೈ ಭುಜವೇ ಇಳಿದು ಬಂತೇನೋ ಅನ್ನಿಸಿತು ಅವಳಿಗೆ. ಆತ ತಳ್ಳಿದ ಬಿರುಸಿಗೆ ಸ್ವಯಂವರಾ ತಿರುಗುತ್ತ ಹೋಗಿ ವಿಹಾರಿ ನಿಲ್ಲಿಸಿದ ಬೈಕಿಗೆ ಬಡಿದುಕೊಂಡಳು.
    ವಿಹಾರಿಯನ್ನು ಕೊಂದಂತು ಸಮಾಧಾನವಿಲ್ಲದಂತೆ ಕಂಡುಬಂತು ಬಾಷಾಗೆ. ಆತ ಮೇಲೆ ಏಳಲೇ ಇಲ್ಲ. ಸ್ವಯಂವರಾ ಎಲ್ಲಿಗೆ ತಾನೇ ತಪ್ಪಿಸಿಕೊಂಡು ಹೋಗಬಲ್ಲಳು ಎಂಬ ಭಾವ ಆತನಲ್ಲಿ ಕಾಣುತ್ತಿತ್ತು. ವಿಹಾರಿ ಈಗಲೋ ಆಗಲೋ ಎನ್ನುವಂತೆ ನಿಧಾನವಾಗಿ ಕೈಕಾಲು ಆಡಿಸತೊಡಗಿದ. ಬೈಕಿಗೆ ಗುದ್ದಿಕೊಂಡ ಸ್ವಯಂವರಾಳಿಗೆ ಅದರ ಮೇಲೆ ವಿಹಾರಿ ಇಟ್ಟಿದ್ದ ಕಬ್ಬಿಣದ ಸರಳು ಕಣ್ಣಿಗೆ ಬಿತ್ತು.
   ತನ್ನ ಕೆನ್ನೆಗೆ ಬಿರುಸಾಗಿ ಹೊಡೆದ ಬಾಷಾ, ಕೆನ್ನೆ ಕಚ್ಚಿದ ರೌಡಿ, ತನ್ನನ್ನು ತಪ್ಪಿಸಲು ಬಂದ ವ್ಯಕ್ತಿಯನ್ನು ಕೊಲ್ಲುತ್ತಿದ್ದಾನೆ. ಅದು ತನ್ನೆದುರಿನಲ್ಲಿಯೇ..
   ಅದೆಲ್ಲಿಂದ ಬಂತೋ ಅವಳಿಗೆ ಆವೇಶ?? ಅವಳ ಅಸಹಾಯಕತೆ, ನೋವೆಲ್ಲಾ ಸಿಟ್ಟಾಗಿ ಎದುರಿನಲ್ಲಿದ್ದ ಸರಳನ್ನು ತೆಗೆದುಕೊಂಡು ಬಾಷಾನ ಹಿಂದೆ ಹೋಗಿ ತನ್ನಲ್ಲಿದ್ದ ಬಲವನ್ನೆಲ್ಲ ತುಂಬಿಕೊಂಡು ಬಾಷಾನ ತಲೆಗೆ ಬೀಸಿದಳು. ಮೊದಲನೇ ಹೊಡೆತ ಬೀಳುತ್ತಲೇ ಹಿಂದೆ ತಿರುಗಬೇಕೆಂದುಕೊಂಡ ಬಾಷಾ ಅಷ್ಟರಲ್ಲಿಯೇ ಎರಡನೇ ಹೊಡೆತ ಬಿದ್ದಿತ್ತು. ತಲೆ ಬಿರಿದುಕೊಂಡು ರಕ್ತ ಸುರಿಯತೊಡಗಿತು. ಏನಾಯಿತು ಎಂದು ಅರಿಯುವುದರೊಳಗೆ ಮೂರನೇ ಹೊಡೆತ.. ಸ್ವಯಂವರಾ ನಿಲ್ಲಿಸಲೇ ಇಲ್ಲ. ಹೊಡೆಯುತ್ತಲೇ ಇದ್ದಳು. ಬಾಷಾ ತಲೆ ಒಡೆದು, ವಿಹಾರಿಯ ಕುತ್ತಿಗೆ ಬಿಟ್ಟು ಪಕ್ಕಕ್ಕೆ ಬಿದ್ದ ಮೇಲೂ ಸ್ವಯಂವರಾ ಹೊಡೆಯುತ್ತಲೇ ಇದ್ದಳು. ಬಾಷಾನ ರಕ್ತ ವಿಹಾರಿಯ ಬಟ್ಟೆಯನ್ನು ತೋಯಿಸಿತು. ವಿಹಾರಿಯ ಉಸಿರು ಅರ್ಧ ನಿಂತು ಹೋಗಿದ್ದರಿಂದ ಆತನಿಗೂ ಪ್ರಜ್ಞೆ ಬರಲು ಒಂದು ನಿಮಿಷವೇ ಹಿಡಿಯಿತು. ಆತನಿಗೆ ಸರಿಯಾದ ಪ್ರಜ್ಞೆ ಬರುತ್ತಲೇ ಮೊದಲ ದೃಶ್ಯ ನೋಡಿ ದಂಗಾಗಿ ಹೋದ. ಕಬ್ಬಿಣದ ಸರಳಿನಲ್ಲಿ ಸ್ವಯಂವರಾ ಬಾಷಾನಿಗೆ ಹೊಡೆಯುತ್ತಲೇ ಇದ್ದಾಳೆ ಹುಚ್ಚಿಯಂತೆ.. ಆತ ಸತ್ತು ಎಷ್ಟು ಹೊತ್ತಾಗಿದೆಯೋ.. ಆದರೂ ಹೊಡೆಯುತ್ತಿದ್ದಾಳೆ.. ಬಾಷಾನ ತಲೆ ಪುಡಿಪುಡಿಯಾಗಿ ಹೋಗಿತ್ತು. ಆದರೂ ಅವಳು ನಿಲ್ಲಿಸಿರಲಿಲ್ಲ. ಅಕ್ಕ ಪಕ್ಕ ನಿಂತು ನೋಡುತ್ತಿದ್ದವರು ಈಗ ಓಡಿಬಿಟ್ಟಿದ್ದರು.
   ತಟ್ಟನೆ ಎದ್ದು ನಿಂತ ವಿಹಾರಿ " ಸ್ವಯಂವರಾ ಅವ್ರೆ, ಏನು ಮಾಡುತ್ತಿದ್ದೀರಿ??" ಎನ್ನುತ್ತಾ ಅವಳ ಹತ್ತಿರ ಹೋಗಿ ಅವಳನ್ನು ಹಿಡಿದು ನಿಲ್ಲಿಸಿದ. ಅವಳಿಗೆ ಈ ಲೋಕದ ಪ್ರಜ್ಞೆ ಇದ್ದಂತಿರಲಿಲ್ಲ.
   ಏನು ಮಾಡಬೇಕೆಂದು ವಿಹಾರಿಗೂ ತಿಳಿಯಲಿಲ್ಲ. ಬಾಷಾನ ತಲೆಯಿಂದ ಚಿಮ್ಮಿದ ರಕ್ತ ಅವಳ ಬಿಳಿಯ ಸಲ್ವಾರ್ ಮೇಲೂ ಚೆಲ್ಲಿ ಕೆಂಪಾಗಿತ್ತು. ಕೈಲಿದ್ದ ಸರಳನ್ನು ಗಟ್ಟಿಯಾಗಿ ಹಿಡಿದೇ ನಿಂತಿದ್ದಳು ಆಕೆ. ಜೋರಾಗಿ ಆಕೆಯನ್ನು ಅಲ್ಲಾಡಿಸಿ ಅವಳ ಕೈಲಿರುವ ಸರಳನ್ನು ಆತ ತೆಗೆದುಕೊಂಡ. ದೇಹ ಜೋರಾಗಿ ಅಲುಗಾಡಿದ್ದರಿಂದ ಸಹಜ ಲೋಕಕ್ಕೆ ಬಂದಳು ಸ್ವಯಂವರಾ.ತಾನೇನು ಮಾಡಿದೆ ಎಂದು ಅರಿವಾಗುತ್ತಲೇ ಅಳುವೇ ಬಂತು ಅವಳಿಗೆ.
   "ಸ್ವಯಂವರಾ ಅವ್ರೆ, ನಡೆಯಿರಿ. ಇನ್ನು ಇಲ್ಲಿಯೇ ಇದ್ದರೆ ಅಪಾಯ.. ಮುಂದಿನದು ಆಮೇಲೆ.. ಬೈಕ್ ಹತ್ತಿ.. " ಎಂದು ಬೈಕ್ ಹತ್ತಿ ಸ್ಟಾರ್ಟ್ ಮಾಡಿದ. ವಿಹಾರಿಯ ಮುಖವನ್ನೇ ನೋಡಿದಳವಳು. ತಾನಿಗಷ್ಟೇ ಒಬ್ಬನನ್ನು ಕೊಂದಿದ್ದೇನೆ ಎಂಬುದನ್ನು ಆಕೆಯೇ ನಂಬದಾಗಿದ್ದಳು.
  "ಏನು?? ನನ್ನ ಜೊತೆ ಬರಲು ಭಯವಾ??" ಎಂದು ಕೇಳಿದ ವಿಹಾರಿ
   "ಭಯವಾ??" ನಕ್ಕಳವಳು. "ಈಗ ನಾನೂ ಕೊಲೆಗಾರನಲ್ಲವೇ.. ಕೊಲೆಗಾರರ ಮೇಲಿದ್ದ ಭಯ ಹೋಯಿತು.. ನಡೆಯಿರಿ.." ಎನ್ನುತ್ತಾ ಬೈಕ್ ಹತ್ತಿ ಕುಳಿತಳು. ವೇಗವಾಗಿ ಬೈಕ್ ಮುನ್ನಡೆಸಿದ ವಿಹಾರಿ.
  ಬಾಷಾನ ಶವ ಅನಾಥವಾಗಿ ಬಿದ್ದೇ ಇತ್ತು.
   ಸ್ವಯಂವರಾಳ ಕಣ್ಣಲ್ಲಿ ಮೂಡಿದ ಹನಿಗಳು ಅವಳ ಕೆನ್ನೆಯ ಮೇಲೆ ಜಾರಿ ಕರೆಗಟ್ಟಿದ್ದರೆ, ಸ್ವಯಂವರಾಳಿಗೇನಾಯಿತೋ ಎಂದು ಕ್ಷಾತ್ರನಂತಹ ಕ್ಷಾತ್ರನ ಕಣ್ಣುಗಳಲ್ಲಿ ಜಾರಿದ ಕಣ್ಣೀರಿಗೆ ಜೋಡಿಯಾಯ್ತು.
   ಕ್ಷಾತ್ರ ವೇಗವಾಗಿ ಜೀಪ್ ಓಡಿಸುತ್ತಿದ್ದವ ಒಮ್ಮೆಲೇ ಬ್ರೇಕ್ ಹಾಕಿದ. ದಾರಿಯ ಮಧ್ಯದಲ್ಲಿ ಬಿದ್ದಿದ್ದ ಬಾಷಾನ ಹೆಣ ಆತನನ್ನು ಕೈಬೀಸಿ ಕರೆಯಿತು..
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 29

                                         ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 29

"ನನ್ನ ಸುದ್ಧಿಗೆ ಬಂದರೆ ಸರಿ ಇರುವುದಿಲ್ಲ.. ಈಗಲೇ ಪೊಲೀಸರಿಗೆ ಫೋನ್ ಮಾಡುತ್ತೇನೆ.." ಎನ್ನುತ್ತಾ ವ್ಯಾನಿಟಿ ಬ್ಯಾಗಿನಿಂದ ಮೊಬೈಲ್ ಹೊರತೆಗೆದಳು ಸ್ವಯಂವರಾ. ಬಾಷಾ ಅದೆಷ್ಟು ವೇಗವಾಗಿ ಚಲಿಸಿದ್ದ ಎಂದು ಕಲ್ಪನೆಗೂ ಸಿಗಲಿಲ್ಲ ಸ್ವಯಂವರಾಳಿಗೆ. ಏನಾಯಿತು ಎಂದು ತಿಳಿಯುವುದರೊಳಗೆ ಬಾಷಾನ ಬಲವಾದ ಕೈ ಸ್ವಯಂವರಾಳ ಕೆನ್ನೆಗೆ ಗಟ್ಟಿಸಿತ್ತು. ಮೊಬೈಲ್ ತೆಗೆದು ಡಯಲ್ ಮಾಡಬೇಕು ಎಂಬ ಆಕೆಯ ಯೋಚನೆ ಯೋಚನೆಯಾಗೆ ಉಳಿಯಿತು. ಕೈಲಿದ್ದ ಮೊಬೈಲ್ ಎಗರಿ ದೂರ ಬಿತ್ತು. "ಅಮ್ಮಾ.." ಎಂದು ಕಿರುಚುತ್ತಾ ಕೈಯಿಂದ ಕೆನ್ನೆಯನ್ನು ಗಟ್ಟಿಯಾಗಿ ಒತ್ತಿ ಹಿಡಿದುಕೊಂಡಳು ಸ್ವಯಂವರಾ. 
ಇದೇನೋ ಸಣ್ಣದಾಗಿ ಮುಗಿಯುತ್ತದೆ ಎಂದುಕೊಂಡ ವಿಷಯ ಈಗ ರಾದ್ಧಾಂತವಾಗಿ ಪರಿವರ್ತಿತವಾಗಿತ್ತು. ಹೀಗೆ ಜನ ಓಡಾಡುತ್ತಿರುವ ಜಾಗದಲ್ಲಿ ದಡೂತಿ ವ್ಯಕ್ತಿಯೊಬ್ಬ ಹೆಣ್ಣಿನ ಮೇಲೆ ಕೈ ಮಾಡಬಲ್ಲ ಎಂಬ ಸಣ್ಣ ಯೋಚನೆಯು ಆಕೆಗೆ ಬಂದಿರಲಿಲ್ಲ. ಬಾಷಾನ ಚೇಲಾಗಳು ನೋಡಿ ನಗುತ್ತ ನಿಂತಿದ್ದರು. ಆತನ ಸುತ್ತಲೂ ನಿಂತ ಚೇಲಾಗಳು ತಮ್ಮ ಚಾನ್ಸ್ ಯಾವಾಗ ಬರುತ್ತದೆ ಎಂದು ಕಾಯುತ್ತಿರುವಂತೆ ಕಂಡು ಬಂತು ಆಕೆಗೆ. ದಾರಿಯಲ್ಲಿ ಹೋಗಿ ಬರುವ ಕೆಲವೊಬ್ಬರು ಈ ಘಟನೆಯನ್ನು ನೋಡಿದರೂ ತಮಗೆ ಸಂಬಂಧವಿಲ್ಲದ ವಿಷಯವೆಂಬಂತೆ ತಲೆ ತಗ್ಗಿಸಿ ನಡೆದು ಹೋಗುತ್ತಿದ್ದರು. ಇನ್ನು ಕೆಲವರು ಅಲ್ಲೇ ದೂರದಲ್ಲಿ ನಿಂತು ಮುಂದೇನು ನಡೆಯುತ್ತದೆ ಎಂದು ಕುತೂಹಲದಿಂದ ನೋಡುತ್ತಾ ನಿಂತಿದ್ದರು. 
ಬಾಷಾ!! ಯಾರಿಗೆ ತಾನೇ ಗೊತ್ತಿಲ್ಲ?. ರಕ್ತ ಪಿಪಾಸು..!? ಆತನನ್ನು ಎದುರು ಹಾಕಿಕೊಂಡು ಬದುಕಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಇದು ಈಗಿನ ಹಿಂದುಸ್ಥಾನದ ಪರಿಸ್ಥಿತಿ. ಷಂಡತನ ಕರಾಳವಾಗಿ ಆವರಿಸಿದೆ. ಎಲ್ಲಿಯವರೆಗೆ ತಮ್ಮ ಮನೆ ಹೊತ್ತಿ ಉರಿಯುವುದಿಲ್ಲವೋ ಅಲ್ಲಿಯವರೆಗೆ ಯಾರು ನೀರಿನ ಬಿಂದಿಗೆಗೆ ಕೈ ಹಾಕುವುದಿಲ್ಲ. ಓಡಿ ಬಿಟ್ಟರೆ ಹೇಗೆ ಎಂಬ ಆಲೋಚನೆ ಮೂಡಿತು ಸ್ವಯಂವರಾಳಿಗೆ ಆದರೆ ಅದಕ್ಕೆ ಆಸ್ಪದ ಕೊಡಲಿಲ್ಲ ಭಾಷಾ. ಹೊಡೆದು ಕೈ ಬಿಡದೆ, ಆಕೆಯ ಜಡೆಗೆ ಕೈ ಹಾಕಿ ಎಳೆದುಕೊಂಡು ಜೀಪ್ ಕಡೆ ನಡೆಯತೊಡಗಿದ. ಬಲವಾದ ಹಿಡಿತದಿಂದ ತಪ್ಪಿಸಿಕೊಳ್ಳಲು ಇಲ್ಲದ ಹರಸಾಹಸ ಮಾಡಿದಳು ಅವಳು. ಭಾಷನ ಬಲವಾದ ಕೈಗಳು ಅವಳ ಜಡೆಯನ್ನು ಎಳೆಯುತ್ತಿದ್ದರಿಂದ ಕೂದಲು ಕಿತ್ತು ಬಂದು ಕಣ್ಣುಗಳಿಂದ ನೀರು ದಳ ದಳ ಹರಿಯುತ್ತಿತ್ತು. ದುಃಖ ಉಕ್ಕಿ ಬಂದಿತು ಸರೋವರಾಳಿಗೆ. ಬಾಷಾ ಜೋರಾಗಿ ಹೊಡೆದ ಪರಿಣಾಮವಾಗಿ ಕೆನ್ನೆಯ ಮೇಲೆ ಕೈಗಳ ಅಚ್ಚು ಮೂಡಿ, ನಿಧಾನವಾಗಿ ಊದಿಕೊಳ್ಳತೊಡಗಿತು. ತುಟಿ ಒಡೆದು ರಕ್ತ ಒಸರುತ್ತಿತ್ತು.
ದರದರನೆ ಎಳೆದುಕೊಂಡು ಹೋಗಿ ಜೀಪಿನ ಮುಂದಿನ ಸೀಟಿನಲ್ಲಿ ತುರುಕಿದ ಸ್ವಯಂವರಾಳನ್ನು. ಹಿಂದೆಯೇ ತಾನೂ ಹತ್ತಿ ಕುಳಿತುಕೊಂಡು ಬಾಗಿಲು ಎಳೆದುಕೊಂಡ. ಇದನ್ನೆಲ್ಲಾ ನೋಡುತ್ತಾ, ಜನರನ್ನು ಬೆದರಿಸುತ್ತಿದ್ದ ಬಾಷಾನ ಚೇಲಾಗಳು ಜೀಪಿನ ಬಳಿ ಬಂದು ಇಬ್ಬರು ಹಿಂದೆ ಹತ್ತಿಕೊಂಡರೆ ಮತ್ತೊಬ್ಬ ಡ್ರೈವರ್ ಸೀಟಿಗೆ ಒರಗಿದ. 
ಇನ್ನು ನಿನ್ನ ಕಥೆ ಮುಗಿಯಿತು ಎಂದುಕೊಂಡಳು ಸ್ವಯಂವರಾ. ಒಂದು ತಾಸಿನ ಹಿಂದಷ್ಟೇ ಅದೆಷ್ಟು ಸುಂದರ ಕನಸುಗಳನ್ನು ಕಂಡಿದ್ದಳು!! ವಿಧಿಲಿಖಿತ ಎಂಬುದು ನಿಜವೇ ಏನೋ ಎನ್ನಿಸಿತು ಒಮ್ಮೆ. ಇಂದು ಕ್ಷಾತ್ರನಿಗೆ ತನ್ನ ಸಮ್ಮತಿ ಸೂಚಿಸಬೇಕೆಂದು ತುಂಬಾ ಸುಂದರವಾಗಿ ರೆಡಿಯಾಗಿ ಸ್ಕೂಟಿ ಹತ್ತಿದ್ದಳು. 
ಯಾವುದಾದರೊಂದು ಒಳ್ಳೆಯ ಜಾಗ ಆರಿಸಿಕೊಂಡು ಕ್ಷಾತ್ರನನ್ನು ಅಲ್ಲಿಗೆ ಬರಲು ಹೇಳಬೇಕು. ನೋಡೋಣ ಪ್ರಪೋಸ್ ಮಾಡು ಎಂದರೆ ಏನು ಮಾಡುತ್ತಾನೆ ಎಂದು.. ಸ್ವಲ್ಪ ಕಾಡಿಸದೆ ಒಪ್ಪಿಕೊಂಡರೆ ಏನು ತಾನೇ ಮಜಾ!? ಎಂದು ಮನಸ್ಸಲ್ಲೇ ಅಂದುಕೊಂಡಳು. 
ಕ್ಷಾತ್ರ ನೆನಪಾದ. ಗಟ್ಟಿ ಮನುಷ್ಯ. ಮುಖದ ಮೇಲಿನ ಪೊದರು ಮೀಸೆ, ಆತನ ಪೊಲಿಸ್ ಗತ್ತಿಗೆ ಹೇಳಿ ಮಾಡಿಸಿದಂತಿತ್ತು. ಆತ ನಗುವುದು ಅಪರೂಪ. ನಕ್ಕರೆ ತುಂಬಾ ಚಂದವಾಗಿ ಕಾಣುತ್ತಾನೆ. ನಗುವಿನಲ್ಲೂ ಗಂಭೀರತೆಯಿದೆ. ಎಲ್ಲ ಹುಡುಗರಂತೆ ಲಲ್ಲೆಗರೆಯಲಾರ. ಪೋಲಿ ಮಾತುಗಳಲ್ಲಿ ಮುಳುಗಿಸಿ ಹಿತ ನೀಡಲಾರ. ಆದರೂ ಕ್ಷಾತ್ರ ಕ್ಷಾತ್ರನೇ..!! ಆತನ ಹರವಾದ ಎದೆಯಲ್ಲಿ ಮಲಗಿ, ಬಲವಾದ ತೋಳುಗಳಲ್ಲಿ ಬಂಧಿಯಾಗುವುದೇ ಹಿತ ಎಂದುಕೊಂಡಳು. ಕಲ್ಪನೆಗಳು ಅವಳಿಗೆ ನಗು ತರಿಸಿದವು. ನಿನ್ನೆಯವರೆಗೆ ಇಲ್ಲದ ಕನಸುಗಳು ಅದೆಲ್ಲಿಂದ ಬಂದು ಆವರಿಸಿಕೊಂಡಿವೆ!? ಮನವೆಂಬ ಮರ್ಕಟವೇ.. ಎಂದುಕೊಳ್ಳುತ್ತಲೇ ಸ್ಕೂಟಿ ಓಡಿಸುತ್ತಿದ್ದಳು. 
ರಸ್ತೆಯ ಪಕ್ಕದಲ್ಲಿಯೇ ಹೂವಿನಂಗಡಿ ಕಂಡಿದ್ದರಿಂದ ಸ್ಕೂಟಿ ನಿಲ್ಲಿಸಿ ಕೆಂಗುಲಾಬಿ ಕೊಂಡು ಮುಡಿದುಕೊಂಡಳು. ಅದೆಷ್ಟು ದಿನಗಳ ಹಿಂದೆ ತಾನು ಹೂವಿನೆಡೆಗೆ ಆಕರ್ಷಿತವಾದದ್ದು?? ಮನಸ್ಸಿನ ಸರಪಣಿಗಳು ಒಂದಕ್ಕೊಂದು ಅದೆಷ್ಟು ಹೆಣೆದುಕೊಂಡಿವೆ.. ಒಬ್ಬ ಮನುಷ್ಯನ ಮೇಲೆ ಪ್ರೀತಿ ಹುಟ್ಟುತ್ತಲೇ ಹೂವಿನೆಡೆಗೆ ಆಕರ್ಷಣೆ. ಚಿಟ್ಟೆಯೊಂದು ತುಂಬಿದ ಬೃಂದಾವನದೆಡೆಗೆ ಮನ ನೀಡಿ ಸೆಳೆದು ಹೋದಂತೆ.. ತುಂಬಿ ಹರಿಯುವ ನದಿಗಳು ಕಾಣದ ಕಡಲೆಡೆಗೆ ಹರಿದು ಸಾಗಿದಂತೆ.. ತನ್ನಲ್ಲಿ ಬರುತ್ತಿದ್ದ ಭಾವನೆಗಳ ಮಹಾಪೂರವನ್ನು ತೆರೆಯಿಲ್ಲದಂತೆ ಶಾಂತವಾಗಿರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ ಆಕೆಗೆ. ಅವಳ ಪ್ರತಿಯೊಂದು ಹುಚ್ಚು ಯೋಚನೆಗಳು ಅವಳ ಮುಖದಲ್ಲಿ ಲಜ್ಜೆ ಭರಿತ ಮುಗುಳ್ನಗುವಿಗೆ ಮನೆ ಮಾಡಿಕೊಡುತ್ತಿತ್ತು. ಎಷ್ಟು ವೇಗದಲ್ಲಿ ಸ್ಕೂಟಿ ಓಡಿಸುತ್ತಿದ್ದೇನೆಂಬ ಕಲ್ಪನೆಯು ಅವಳಿಗಿರಲಿಲ್ಲ. ಮೊದಲು ಆಸ್ಪತ್ರೆಗೆ ಹೋಗಿ ಸಂಜೆಗೆಲ್ಲಾ ಕ್ಷಾತ್ರನನ್ನು ಭೇಟಿಯಾಗಬೇಕು ಎಂಬ ಅವಳ ಯೋಚನೆ ತಲೆಕೆಳಗಾಗಿತ್ತು. ಮೊದಲು ಕ್ಷಾತ್ರನ ಭೇಟಿ ನಂತರ ಆಸ್ಪತ್ರೆ ಎಂದು ಘಾಜಿಯಾಬಾದ್ ಕಡೆ ಸ್ಕೂಟಿ ತಿರುಗಿಸಿದ್ದಳು. ಇಂದಿರಾಪುರಂ ನಲ್ಲಿ ಸ್ವರ್ಣ ಜಯಂತಿ ಪಾರ್ಕ್ ಇದೆ. ಬೆಳಗಿನ ಸಮಯದಲ್ಲಿ, ವಾರದ ದಿನಗಳಲ್ಲಿ ಪ್ರೇಮಿಗಳಿಗೆ ಹೋಗಿ ಕುಳಿತುಕೊಳ್ಳಲು ಹೇಳಿ ಮಾಡಿಸಿದ ಜಾಗದಂತಿದೆ. ಕ್ಷಾತ್ರನ ಸ್ಟೇಷನ್ ಕೂಡ ಅತ್ತ ಕಡೆಯೇ ಇದೆ. ಅಲ್ಲಿ ಹೋಗಿ ಆತನಿಗೆ ಸರ್ಪ್ರೈಸ್ ಕೊಡೋಣ ಎಂದು ಘಾಜಿಯಾಬಾದ್ ದಾಟಿ ಸ್ವರ್ಣ ಜಯಂತಿ ಪಾರ್ಕ್ ಕಡೆ ಹೊರಟಿದ್ದಳು. ಅದೇಕೋ ಮಿರರ್ ಕಡೆ ನೋಡಿದವಳು ಸ್ಕೂಟಿಯ ವೇಗ ಕಡಿಮೆ ಮಾಡಿದಳು. 
ಸ್ವಲ್ಪ ಹೊತ್ತಿನ ಮೊದಲು ಕೂಡ ಇದೆ ಜೀಪ್ ತನ್ನ ಹಿಂದೆ ಬರುವುದನ್ನು ಗಮನಿಸಿದ್ದಳು. ಇವರೇನಾದರೂ ತನ್ನನ್ನು ಹಿಂಬಾಲಿಸುತ್ತಿದ್ದಾರಾ?? ಎಂಬ ಸಂಶಯ ಮೂಡಿತು ಆಕೆಗೆ. ಹಾಗಾಗಿಯೇ ಜೀಪು ಮುಂದೆ ಹೋಗಲಿ ಎಂದು ವೇಗ ಕಮ್ಮಿ ಮಾಡಿದ್ದಳು. ಆದರೆ ಜೀಪಿನವರು ಮುಂದೆ ಹೋಗುವವರಂತೆ ಕಾಣಲಿಲ್ಲ. ಅವರ ವೇಗವು ಕೂಡ ಕಡಿಮೆಯಾಗಿತ್ತು. ತನ್ನ ಅನುಮಾನ ನಿಜವಾಗುತ್ತಿದೆಯೇ ಎಂದೆನ್ನಿಸಿತು ಆಗ. 
ಆದರೆ ಯಾಕೆ!? ನನ್ನನ್ನೇಕೆ ಹಿಂಬಾಲಿಸುತ್ತಾರೆ? ನನ್ನ ಪರಿಚಯದವರಿರಬಹುದಾ? ಎಂದು ಮಿರರ್ ನಲ್ಲಿ ಮತ್ತೆ ನೋಡುತ್ತಲೇ ಗಾಡಿ ಮುಂದುವರೆಸಿದಳು. ಒಮ್ಮೆ ಗಾಡಿ ನಿಲ್ಲಿಸಿ ಕ್ಷಾತ್ರನಿಗೆ ಫೋನ್ ಮಾಡಿಬಿಡುವುದು ಒಳ್ಳೆಯದು ಎಂದೆನ್ನಿಸಿತು. 
ಒಂದೇ ಕ್ಷಣಕ್ಕೆ ಎಡಕ್ಕಿದ್ದ ರಸ್ತೆಗೆ ಇಳಿಸಿ ಜೀಪ್ ಕಾಣದ್ದರಿಂದ ಎಕ್ಸಿಲೇಟರ್ ತಿರುವಿ ರಸ್ತೆಯ ಕೊನೆ ತಲುಪಿ ಮತ್ತೆ ಎಡಕ್ಕೆ ಹೊರಳಿದಳು. ಅವರು ತನ್ನನ್ನು ಹಿಂಬಾಲಿಸುತ್ತಿದ್ದಾರೆ ಹೆಚ್ಚು ಸಮಯವಿಲ್ಲ. ಬೇಗ ಕ್ಷಾತ್ರನಿಗೆ ಫೋನಾಯಿಸಬೇಕು.
ಜೀಪ್ ಇನ್ನು ಬಂದಿರದ ಕಾರಣ ಕ್ಷಾತ್ರನಿಗೆ ಫೋನ್ ಮಾಡಿದಳು. ಅಷ್ಟರಲ್ಲಿ ಜೀಪ್ ಇದೆ ರಸ್ತೆಗೆ ಎಂಟ್ರಿ ಆಗುತ್ತಿರುವುದು ಕಂಡಿತು. ಸ್ಕೂಟಿ ಬಿಟ್ಟು ರಸ್ತೆಯ ಪಕ್ಕದಲ್ಲಿದ್ದ ಮರದ ಮರೆಗೆ ಸರಿದು ಕ್ಷಾತ್ರ ಕಾಲ್ ಎತ್ತಬಹುದೆಂದು ನೋಡತೊಡಗಿದಳು. ಜೀಪು ವೇಗವಾಗಿ ಸ್ಕೂಟಿ ಇರುವ ಕಡೆಯೇ ಬರುತ್ತಿತ್ತು. 
"ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ.." 
ಸ್ವಯಂವರಾಳ ಗಂಟಲ ಪಸೆಯೇ ಆರಿ ಹೋಯಿತು. ಮತ್ತೊಮ್ಮೆ ಫೋನ್ ಪ್ರಯತ್ನಿಸಬೇಕೆನ್ನುವಷ್ಟರಲ್ಲಿ ಜೀಪ್ ಬಂದು ಆಕೆಯ ಸ್ಕೂಟಿಯ ಬಳಿ ನಿಂತಿತು. ಅದರಿಂದ ಮೊದಲು ಹೊರಗಿಳಿದಿದ್ದು ಬಾಷಾ. ಅವನ ಎಡಬಲಕ್ಕೆ ಮೂವರು ಚೇಲಾಗಳು. 
ಏನು ಮಾಡಬೇಕು?? ಯಾರಿವರು?? ಅದಲ್ಲದೆ ಈ ರಸ್ತೆಯಲ್ಲಿ ಜನ ಸಂಚಾರವು ಕಡಿಮೆಯಿದೆ. ಕ್ಷಾತ್ರನಿಗೆ ಕಾಲ್ ಮಾಡಿ ಮೊಬೈಲ್ ಅನ್ನು ಹಾಗೆಯೇ ಬ್ಯಾಗಿಗೆ ಹಾಕಿಕೊಂಡಳು. 
ತಾನು ಸುಮ್ಮನೆ ಹೆದರುತ್ತಿರುವೆನಾ? ಏನೆಂದು ಕೇಳಿಬಿಡೋಣ.. ನಾನೊಬ್ಬ ಡಾಕ್ಟರ್. ಜನರನ್ನು ಕಂಡು ಹೀಗೆ ಹೆದರುವುದೇಕೆ?? ಅಥವಾ ಅವರ ಮುಖದ ಭಾವನೆಗಳನ್ನು ಅರಿತು ನಾನು ಹೆದರುತ್ತಿರುವೆನಾ? ಅವರ ಮುಖದಲ್ಲಿ ಅಡಗಿದ ಅಮಾನುಷ ಕ್ರೂರತೆ ಅವಳಿಗೆ ತಿಳಿದು ಹೋಗಿತ್ತು. 
ನಾಲ್ಕು ಜನರಲ್ಲಿ ಒಬ್ಬನನ್ನು ಎಲ್ಲಿಯೋ ನೋಡಿದ ನೆನಪು. ಆರೂವರೆ ಅಡಿ.. ಎರಡು ಮನುಷ್ಯರ ತೂಕ.. ಮೈಯಲ್ಲಿ ಬೊಜ್ಜಿಲ್ಲ. ಕೆತ್ತಿದ ಶಿಲೆಯಂತೆ ಗಟ್ಟಿಯಾಗಿದ್ದಾನೆ. ನಾನಿವನನ್ನು ಎಲ್ಲಿಯೋ ನೋಡಿದ್ದೇನೆ... ನೆನಪಾಗುತ್ತಿಲ್ಲ ಅವಳಿಗೆ. ಮಿಕ್ಕ ಮೂವರು ಅವನಷ್ಟು ಗಟ್ಟಿಯೇನಿಲ್ಲ. ಆದರೆ ಮುಖದ ಮೇಲಿನ ಕ್ರೂರತೆ ಕಡಿಮೆಯೇನೂ ಇಲ್ಲ. ಅವರ ಹಾವಭಾವ ನೋಡಿಯೇ ಒಳ್ಳೆಯ ಅಭಿಪ್ರಾಯ ಮೂಡಲಿಲ್ಲ ಅವಳಿಗೆ. 
ಬಾಷಾ ಮುಂದೆ ಬಂದು "ಡಾಕ್ಟರ್, ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆಯಿರಲಿ.." ಎನ್ನುತ್ತಲೇ ಹತ್ತಿರ ಬಂದ. ಆತನ ಪಕ್ಕದಲ್ಲಿದ್ದವರು ವಿವಿಧ ರೀತಿಯ ಎಕ್ಸಪ್ರೆಷನ್ ನೀಡುತ್ತಾ ನಿಂತಿದ್ದರು. ಬಾಷಾನ ಮಾತು ಕೇಳಿ ಸ್ವಲ್ಪ ಸಮಾಧಾನವಾಯಿತು ಅವಳಿಗೆ. ತಾನು ಡಾಕ್ಟರ್ ಎಂದು ತಿಳಿದು ಬಂದಿದ್ದಾರೆ. ಅಂದರೆ ತಾನೇ ಅವಸರಪಟ್ಟೆನೇನೋ.. ಪಟ್ಟನೆ ನೆನಪಾಯಿತು ಆಕೆಗೆ.. ಈತ ಬಾಷಾ..!! ಸನ್ನಿ ಚಡ್ಡಾನ ರೈಟ್ ಹ್ಯಾಂಡ್.. ಆಗಾಗ ಪೇಪರಿನಲ್ಲಿ ಬರುತ್ತಿರುತ್ತಾನೆ. ದೊಡ್ಡ ಗುಂಡಾ ಎಂಬುದರಲ್ಲಿ ಸಂಶಯವಿಲ್ಲ. ಆದಷ್ಟು ಬೇಗ ಹೇಗಾದರೂ ಇವರನ್ನು ಸಾಗಹಾಕಬೇಕು. ಮುಖದ ಮೇಲೆ ಯಾವ ಭಾವನೆಯನ್ನು ತೋರ್ಪಡಿಸದೆ "ಇರಲಿ.. ಹೇಳಿ.." ಎಂದಳು. 
"ಡಾಕ್ಟರ್, ನಿಮ್ಮ ಆಸ್ಪತ್ರೆಯಲ್ಲಿ ಕೊಲೆ ನಡೆಯಿತಲ್ಲಾ.. ಅದರ ಬಗ್ಗೆ ಸ್ವಲ್ಪ ಮಾಹಿತಿ ಬೇಕು.. ಆ ಕೊಲೆ ಮಾಡಿದವರು ಯಾರು ಎಂದು ನಿಮ್ಮ ಬಳಿ ವಿವರವಿದೆಯಂತಲ್ಲಾ.. ಅಷ್ಟು ಕೊಡಿ ಸಾಕು.." ನಾಟಕೀಯ ವಿನಮ್ರತೆ ಕಂಡಿತು ಮಾತಿನಲ್ಲಿ. 
ಒಹೋ..! ಆ ಕೊಲೆಗೂ, ಇವರಿಗೂ ಸಂಬಂಧವಿದೆ ಹಾಗಾದರೆ.. 
ಇದೆ ಸಮಯ ಕ್ಷಾತ್ರನಿಗೆ ಇವರನ್ನು ಹಿಡಿದುಕೊಡಲು.. ಆಗ ನೆನಪಾಯಿತು.. ಅವನಿಗೆ ಕಾಲ್ ಮಾಡಿ ಮೊಬೈಲ್ ಬ್ಯಾಗಿಗೆ ಹಾಕಿದ್ದು.
ಕ್ಷಾತ್ರನಿಗೆ ಕಾಲ್ ಹೋಗಿರಬಹುದಾ? ಈಗ ಕಾಲ್ ನಲ್ಲೆ ಇದ್ದರೆ ಅವನಿಗೆ ಇಲ್ಲಿ ನಡೆಯುತ್ತಿರುವುದೆಲ್ಲ ಕೇಳುತ್ತಿರುತ್ತದೆ. ತನ್ನ ಇನಿಯ ಪೊಲಿಸ್. ಪೊಲಿಸ್ ಎಂದರೆ ಯಾರಾದರೂ ಹೆದರುತ್ತಾರೆ. ಈಗ ಆತ ಕಾಲ್ ನಲ್ಲಿದ್ದರೆ ತಾನಿರುವ ಜಾಗ ಹೇಳಿಬಿಡಬೇಕು ಎಂಬ ಯೋಚನೆ ಬರುತ್ತಲೇ "ನನ್ನ ವಿಷಯಕ್ಕೆ ಬಂದರೆ ಪೊಲೀಸರಿಗೆ ಹೇಳುತ್ತೇನೆ.." ಎಂದು ಬ್ಯಾಗಿಗೆ ಕೈ ಹಾಕಿದಳು. ಶಾಂತಿಯಿಂದಲೇ ಬಳಿ ಬಂದಿದ್ದ ಬಾಷಾ ಅವಳ ಕೆನ್ನೆಗೆ ಬಾರಿಸಿದ್ದ. ಕೈಲಿದ್ದ ಮೊಬೈಲ್ ದೂರ ಹಾರಿ ಬಿತ್ತು. ಕ್ಷಾತ್ರ ಲೈನಿನಲ್ಲಿಯೇ ಇದ್ದ. ಇತ್ತ ನಡೆಯುತ್ತಿರುವ ಮಾತುಕತೆ ಅಸ್ಪಷ್ಟವಾಗಿ ಕೇಳುತ್ತಿತ್ತು. ಅತ್ತಲಿಂದ ಆತ ಹಲೋ.. ಹಲೋ.. ಎಂದು ಕೂಗುತ್ತಲೇ ಇದ್ದ. ಸ್ವಯಂವರಾ ಏನೋ ತೊಂದರೆಯಲ್ಲಿ ಸಿಲುಕಿದ್ದಾಳೆ ಎಂದು ತಿಳಿಯಿತಾಗಲಿ ಎಲ್ಲಿ? ಹೇಗೆ? ಎಂದು ತಿಳಿಯದೆ ಕಂಗಾಲಾದ. 
ತಾನಿರುವ ಜಾಗ ಹೇಳಿಬಿಡಬೇಕು ಎಂದುಕೊಂಡಿದ್ದ ಅವಳಿಗೆ ಹೀಗೆ ಆಕಸ್ಮಿಕವಾಗಿ ಹೊಡೆತ ಬಿದ್ದಿದ್ದರಿಂದ, ಏನಾಯಿತು? ಏನು ಮಾಡಬೇಕು? ಎಂದು ತಿಳಿಯಲಿಲ್ಲ. 
ಮರುಕ್ಷಣದಲ್ಲಿ ಬಾಷಾ ಆಕೆಯ ಕೂದಲಿಗೆ ಕೈ ಹಾಕಿ ದರದರನೆ ಎಳೆದುಕೊಂಡು ಹೊರಟಿದ್ದ. ಮುಡಿದುಕೊಂಡ ಕೆಂಪು ಗುಲಾಬಿ ಕೆಳಗೆ ಬಿದ್ದಿತು. ಅವಳು ನೋವಿನಿಂದ ಕಿರುಚಿದ್ದು, ಅಳುತ್ತಿರುವುದು ಕ್ಷಾತ್ರನಿಗೆ ಕೇಳುತ್ತಲೇ ಇತ್ತು. ಆತ ತನ್ನ ಸ್ಟೇಷನ್ ಗೆ ಹೋಗುವ ದಾರಿಯಲ್ಲಿದ್ದ. ಫೋನ್ ಕಟ್ ಮಾಡಿ ಆಕೆಯ ಮೊಬೈಲ್ ಟ್ರೇಸ್ ಮಾಡಲು ಹೇಳೋಣವೆಂದರೆ ಅದಕ್ಕೂ ಭಯ. ತಟ್ಟನೆ ಜೀಪ್ ಇಳಿದು ಪಕ್ಕದಲ್ಲಿ ಹೋಗುತ್ತಿದ್ದವನ ಬಳಿ ಮೊಬೈಲ್ ತೆಗೆದುಕೊಂಡು ಸ್ಟೇಷನ್ ಗೆ ಫೋನ್ ಮಾಡಿ ಅವಳ ನಂಬರ್ ಕೊಟ್ಟು "ಟ್ರೇಸ್ ಮಾಡಿಸು ತಾನು ಕಾಲ್ ನಲ್ಲಿಯೇ ಇರುತ್ತೇನೆ" ಎಂದು ಬಾಲ ತುಳಿಸಿಕೊಂಡ ಸರ್ಪದಂತೆ ಮಾಡತೊಡಗಿದ. 
ಕಾನಸ್ಟೆಬಲ್ ಕ್ರೈಮ್ ಡಿಪಾರ್ಟಮೆಂಟ್ ಗೆ ಫೋನ್ ಮಾಡಿ ನಂಬರ್ ತಿಳಿಸಿದ್ದ. 
ಕ್ಷಾತ್ರನಿಗೆ ಈಗ ಸ್ವಯಂವರಾ ಕೂಗುವುದು ಕೇಳುತ್ತಿಲ್ಲ. ದೂರದಲ್ಲಿ ಸಾಗುವ ವಾಹನಗಳ ಶಬ್ದ ಮಾತ್ರ ಕೇಳಿ ಬರುತ್ತಿತ್ತು. 
ಹತ್ತಿರದಲ್ಲಿಯೇ ಜೀಪೊಂದು ಸ್ಟಾರ್ಟ್ ಆದ ಶಬ್ದ. ಅಂದರೆ ಸ್ವಯಂವರಾಳನ್ನು ಜೀಪ್ ಹತ್ತಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಎಲ್ಲಿಂದ? ಎಲ್ಲಿಗೆ??
"ಕಾನಸ್ಟೆಬಲ್.. ಏನಾಯಿತು??" ಕೂಗಿದ ಕ್ಷಾತ್ರ.
"ಎರಡು ನಿಮಿಷವಂತೆ ಸಾರ್.." 
ಡ್ರೈವರ್ ಸೀಟಿನಲ್ಲಿ ಕುಳಿತ ಬಾಷಾನ ಚೇಲಾ ಜೀಪ್ ಸ್ಟಾರ್ಟ್ ಮಾಡಿದ. ಇನ್ನು ತನ್ನ ಕಥೆ ಮುಗಿಯಿತು, ಏನಾದರೂ ಮಾಡಬೇಕು ಎಂದು ಬಾಷಾನ ಕೈ ಗಟ್ಟಿಯಾಗಿ ಕಚ್ಚಿಬಿಟ್ಟಳು. ಒಮ್ಮೆಲೇ ನಡೆದ ಈ ಘಟನೆಗೆ ಬಾಷಾ ನೋವಿನಿಂದ ಮುಖ ಕಿವುಚಿದ. ಆದರೆ ಅವನ ಹಿಡಿತ ಮಾತ್ರ ಸಡಿಲವಾಗಿರಲಿಲ್ಲ. ಸಿಟ್ಟಿನಿಂದ ಅವಳ ಮುಖ ನೋಡಿ ಹತ್ತಿರ ಎಳೆದು ತಾನು ಹೊಡೆದು ಅಂಗೈ ಮೂಡಿದ ಕೆನ್ನೆಯನ್ನು ಗಟ್ಟಿಯಾಗಿ ಕಚ್ಚಿದ. 
ತಡೆಯಲಾರದ ನೋವಿಗೆ "ಅಮ್ಮಾ.." ಎಂದು ಕೂಗಿದಳು ಸ್ವಯಂವರಾ. ಆ ಕೂಗು ಕ್ಷಾತ್ರನಿಗೆ ಸ್ಪಷ್ಟವಾಗಿ ಕೇಳಿಸಿತು. ಸ್ವಯಂವರಾಳ ಕಣ್ಣಿನಿಂದ ನೀರು ಹರಿಯತೊಡಗಿತು. ಬಾಷಾ ಅವಳ ಅಂಗಸೌಷ್ಟವವನ್ನೇ ನೋಡುತ್ತಾ ಆಕೆಯನ್ನು ಮತ್ತೂ ಗಟ್ಟಿಯಾಗಿ ತಬ್ಬಿ "ಹುಂ.. ಹೊಡಿ ಜೀಪು.." ಎಂದ.
*.............................................................*................................................................*
ಹೊರಗೆ ಗಲಾಟೆ ಶುರುವಾದದ್ದೇ ತನ್ನ ನಡೆ ಚುರುಕಾಗಿಸಿದ ಶಾಸ್ತ್ರಿ. ಹೇಗಾದರೂ ಮಾಡಿ, ಯಾರಿಗೂ ತಿಳಿಯದಂತೆ ಮೇನ್ ಗೇಟ್ ಬಳಿ ತಲುಪಿ ಬಿಟ್ಟರೆ ಮುಂದೆ ಏನಾಗುತ್ತದೋ ನೋಡಬಹುದು. ಹೊರಗೆ ಅಷ್ಟು ಗಲಾಟೆ ಇದ್ದರು ಜೈಲಿನ ಆವರಣದೊಳಗೆ ಯಾವುದೇ ಚಲನವಲನ ಕಂಡು ಬರಲಿಲ್ಲ. ಬೆಳಿಗ್ಗಿನಿಂದಲೇ ಈ ಗಲಾಟೆ ಸಾಮಾನ್ಯವಾಗಿ ಹೋಗಿದ್ದರಿಂದ ಕಾವಲುಗಾರರು ಅದರ ಬಗ್ಗೆ ವಿಶೇಷ ಆಸಕ್ತಿ ತೋರಿಸಿರಲಿಲ್ಲ. 
ನಿಧಾನವಾಗಿ ಸಾಗುತ್ತ ಮೇನ್ ಗೇಟ್ ಬಳಿ ಬಂದುಬಿಟ್ಟಿದ್ದ ಶಾಸ್ತ್ರಿ. ಗೇಟಿನ ಬಳಿ ಇಬ್ಬರು ಗನ್ ಧಾರಿಗಳು ಕುಳಿತಿದ್ದರು. ಕತ್ತಲಿನಲ್ಲಿಯೇ ಸುತ್ತಲೂ ಗಮನಿಸಿದ ಶಾಸ್ತ್ರಿ. ದೂರದಲ್ಲಿ ಎತ್ತರದ ಗೋಡೆಯ ಮೇಲೆ ಪುಟ್ಟ ಮನೆಯಂತಿದ್ದ ಒಂದು ಚೌಕದಲ್ಲಿ ಗನ್ ಮ್ಯಾನ್ ನಿಂತಿದ್ದ. ಜೈಲಿನ ನಾಲ್ಕು ಮೂಲೆಯಲ್ಲಿ ಒಬ್ಬೊಬ್ಬರು ನಿಂತಿದ್ದಾರೆ. ಅವರ ಬಳಿ ಕತ್ತಲಲ್ಲೂ ಕಾಣುವ ಬೈನಾಕ್ಯುಲರ್ ಗಳಿರುತ್ತವೆ, ದೂರದವರೆಗೆ ರೇಂಜ್ ತೆಗೆದುಕೊಳ್ಳುವ ಗನ್ ಕೂಡ. ತನ್ನ ಸಣ್ಣ ತಪ್ಪು ಕೂಡ ತನ್ನನ್ನು ಪರಲೋಕಕ್ಕೆ ಕಳುಹಿಸಬಹುದು. ಗೇಟಿನ ಎದ ಪಕ್ಕದಲ್ಲಿ ಬೆಳೆಸಿದ್ದ ಪುಟ್ಟ ಗಾರ್ಡನ್ ನಲ್ಲಿ ಪೊದೆಗಳು ಬೆಳೆದುಕೊಂಡಿದ್ದವು. ವರಾಂಡದಲ್ಲಿ ಇರುವುದಕ್ಕಿಂತ ಅಲ್ಲೇಲ್ಲಾದರೂ ಅಡಗಿ ಕೂರುವುದು ಒಳಿತೆಂದು ಕಳ್ಳ ಹೆಜ್ಜೆ ಇಟ್ಟು ಆಕಡೆ ನಡೆದ. ಅಲ್ಲಿಯೇ ಇದ್ದ ನಾಗದಾಳಿ ಗಿಡಗಳ ಸಂದಿಯಲ್ಲಿ ಸುಮ್ಮನೆ ಹುದುಗಿ ಕುಳಿತ. ಅಲ್ಲಿಂದ ಹೊರ ಬಾಗಿಲು ಸರಿಯಾಗಿ ಕಾಣಿಸುತ್ತಿತ್ತು. ಅದಲ್ಲದೆ ಎರಡು ಮೂಲೆಯಲ್ಲಿ ಮೇಲೆ ನಿಂತು ಕಾವಲು ಕಾಯುವವರು ಸರಿಯಾಗಿ ಕಾಣುತ್ತಿದ್ದರು. 
ಮುಂದೇನು?? ಸರೋವರಾ ಏನು ವ್ಯವಸ್ಥೆ ಮಾಡಿದ್ದಾಳೆ?? ಇಲ್ಲಿಂದ ಹೊರಬೀಳಲು?? ಒಮ್ಮೆಲೇ ಶಾಸ್ತ್ರಿಗೆ ಮತ್ತೊಂದು ಯೋಚನೆ ಬಂದಿತು. ಸರೋವರಾ ಏನಾದರೂ ಪ್ರತಾಪ್ ಜೊತೆ ಸೇರಿ ನಾಟಕವಾಡುತ್ತಿದ್ದಾಳಾ?? ಆ ಯೋಚನೆಗೇಮೈ ಬೆವರಿ ಹೋಯಿತು ಶಾಸ್ತ್ರಿಗೆ. ತಾನು ಹೊರಗೆ ಕಾಲಿಡುತ್ತಲೇ ಎನಕೌಂಟರ್ ಮಾಡಿಬಿಟ್ಟರೆ? ಕುಳಿತಲ್ಲಿಯೇ ಮಿಸುಕಾಡಿದ ಶಾಸ್ತ್ರಿ. ಕೊನೆಯ ಕ್ಷಣದಲ್ಲಿ ಈ ಹಾಲು ಯೋಚನೆ ಏಕೇ ಬಂತು ಎಂದುಕೊಂಡ ಒಮ್ಮೆ. ತನ್ನ ಜೊತೆ ಸರೋವರಾ ನಡೆದುಕೊಂಡ ರೀತಿಯನ್ನು ಮತ್ತೊಮ್ಮೆ ಸ್ಮರಿಸಿಕೊಂಡ. ಯಾವುದೇ ಸಂದರ್ಭದಲ್ಲಿಯೂ ನಾಟಕವಾಡಿದಂತೆ ಅನ್ನಿಸಲಿಲ್ಲ. ಇಲ್ಲಿಯವರೆಗೆ ಬಂದಾಗಿದೆ. ಸಮುದ್ರಕ್ಕೆ ಇಳಿದಾಗಿದೆ. ಇನ್ನು ಚಳಿಯೇನು? ಮಳೆಯೇನು? ಏನಾಗುತ್ತದೆಯೋ ನೋಡಿಯೇ ಬಿಡೋಣ ಎಂದು ಹೊರಗಿನ ಗದ್ದಲವನ್ನೇ ಆಲಿಸುತ್ತ ಕುಳಿತ. 
ಅಷ್ಟರಲ್ಲಿ ಹೊರಗಡೆ ಗಲಾಟೆ ಹೆಚ್ಚಾಗುವಂತೆ ಜನರ ಕೇಕೆ ಜೋರಾಗತೊಡಗಿತು. ಯಾರೋ ಕಲ್ಲು ಒಗೆದದ್ದರಿಂದ ಜೈಲಿನ ಬಾಗಿಲು ಕಲ್ಲು ಬಡಿದು ಸದ್ದಾಯಿತು. ಜೈಲಿನ ಮುಖ್ಯ ದ್ವಾರದ ಬಳಿಯ ಲೈಟ್ ಹೊತ್ತಿಕೊಂಡಿದ್ದರಿಂದ ದೇಹವನ್ನು ಮತ್ತಷ್ಟು ಹಿಡಿ ಮಾಡಿಕೊಂಡು ಕುಳಿತುಕೊಂಡ. ಈಗೇನೋ ನಡೆಯಲಿದೆ ಎಂದು ಆತನ ಅಂತರಾತ್ಮ ಎಚ್ಚರಿಸಿತು. ಮತ್ತೆರಡು ಕಲ್ಲುಗಳು ತೂರಿಕೊಂಡು ಬಂದು ಜೈಲಿನ ಗೇಟಿಗೆ ಬಡಿಯಿತು. "ಜೈಲಿನ ಪ್ರಾಂಗಣದಿಂದ ದೂರ ಸರಿಯಿರಿ.. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.. " ಜೈಲಿನ ಮೂಲೆಯಲ್ಲಿದ್ದ ಮನೆಯಲ್ಲಿನ ಕಾವಲುಗಾರ ಮೈಕ್ ತೆಗೆದುಕೊಂಡು ಎಚ್ಚರಿಸತೊಡಗಿದ. ಬಾಗಿಲಿನ ಬಳಿ ನಿಂತಿದ್ದ ಕಾವಲುಗಾರರು ಗೇಟ್ ಭದ್ರವಾಗಿದೆಯೇ ಎಂದೊಮ್ಮೆ ಪರಿಶೀಲಿಸಿದರು. ಹೊರಗೆ ಹೀಗೆ ಗಲಾಟೆ ಆಗುತ್ತಿದ್ದರೆ ಒಮ್ಮೆ ಗೇಟ್ ಎಲ್ಲವನ್ನು ಪರೀಕ್ಷಿಸುವುದು ಕರ್ತವ್ಯ. 
ಶಾಸ್ತ್ರಿ ಇವೆಲ್ಲವನ್ನೂ ನೋಡುತ್ತಲೇ ಇದ್ದ. ಹೊರಗಡೆ ಗಲಾಟೆ ಮತ್ತೂ ಹೆಚ್ಚಾಯಿತು. ಸೇರಿದ್ದ ಜನರಲ್ಲಿ ಯಾರೋ ಒಬ್ಬ "ಇದೇನು ಸಿನೆಮಾವಯ್ಯಾ?? ಒಂದು ಸ್ವಲ್ಪವೂ ಸರಿಯಾಗಿಲ್ಲ. ಟ್ರೈಲರ್ ಅಷ್ಟೆ ಚೆನ್ನಾಗಿದೆ" ಎಂದು ಕೂಗಿದ. ಆಗ ಶುರುವಾಗಿತ್ತು ಅಭಿಮಾನಿಗಳ ದಾಂಧಲೆ. "ಯಾರು ಹಾಗೆ ಹೇಳಿದ್ದು?? ಯಾರು ಹಾಗೆ ಹೇಳಿದ್ದು?" ಎನ್ನುತ್ತಾ. 
ವಿರೋಧಿಗಳ ಗುಂಪೂ ದೊಡ್ಡದೇ ಇತ್ತು. ಅಲ್ಲಿಯೇ ಎರಡು ಗುಂಪುಗಳಾಗಿ ಹೊಡೆದಾಟ ಪ್ರಾರಂಭವಾಯಿತು. ಗೋಡೆಯ ಮೇಲೆ ಕಾವಲಿದ್ದವರಿಗೆ ಗುಂಪು ಘರ್ಷಣೆ ಕಣ್ಣಿಗೆ ಬಿದ್ದಿತು. "ಹೊರಗಡೆ ಗುಂಪು ಘರ್ಷಣೆ ಪ್ರಾರಂಭವಾಗಿದೆ. ಒಮ್ಮೆ ನೋಡಿ, ಇಲ್ಲದಿದ್ದರೆ ಪಜೀತಿ.. ನ್ಯೂಸ್ ಚಾನೆಲ್ ಗಳಿಗೆ ಹಬ್ಬ.. ಜೈಲಿನ ಬಳಿಯೇ ಹೊಡೆದಾಟ ಮುಖ ಪ್ರೇಕ್ಷಕ ಪೊಲೀಸರು.. ಎಂದು ಬಿಡುತ್ತಾರೆ.. ಬಾಗಿಲು ತೆಗೆದು ನೋಡಿ.. ಮೇಲಿನಿಂದ ನಾವು ನೋಡುತ್ತಿರುತ್ತೇವೆ ಯಾರು ಒಳ ಬರದಂತೆ.. " ಎಂದು ವಾಕಿಟಾಕಿಯಿಂದ ಬಾಗಿಲ ಬಳಿ ಇದ್ದವರಿಗೆ ಸೂಚನೆ ನೀಡಿದರು. 
ಕಾವಲು ಕುಳಿತಿದ್ದ ಇಬ್ಬರಿಗೂ ಅದು ಸರಿಯೆನ್ನಿಸಿ ಒಬ್ಬ ಗನ್ ತೆಗೆದುಕೊಂಡರೆ, ಇನ್ನೊಬ್ಬ ಲಾಠಿ ಹಿಡಿದು ಬಾಗಿಲು ತೆರೆದು ಹೊರ ಬಂದರು. ಹೊರಗಡೆ ನೂರಾರು ಸಂಖ್ಯೆಯಲ್ಲಿದ್ದರು ಜನರು. ಇವರು ಇಬ್ಬರೇ, ನೋಡಿದರೆ ತಿಳಿಯುತ್ತಿತ್ತು ಇಬ್ಬರಿಂದ ಏನು ಮಾಡಲು ಸಾಧ್ಯವಿಲ್ಲ ಎಂದು. ಆದರೂ ಪೊಲೀಸರಿಗೆ ಇವರೇನು ಮಾಡಿಯಾರು? ಎಂದು "ಸುಮ್ಮನಿರಿ.. ಯಾಕೆ ಹೊಡೆದಾಡುತ್ತಿರಿ.. ಒಳಗೆ ಹಾಕಿಬಿಡ್ತೀವಿ.." ಎಂದು ಬೆದರಿಸುತ್ತ ಗುಂಪಿನೆಡೆಗೆ ನಡೆದರು. 
ಬರುತ್ತಿರುವ ಪೊಲೀಸರು ಹಾಗು ಅವರ ಕೈಲಿರುವ ಗನ್ ನೋಡಿ ಅರ್ಧ ಜನ ಹೆದರಿ ದೂರ ಸರಿದರೆ, ಇನ್ನುಳಿದ ಪುಂಡರು ತಮಗೇನು ಗುಂಡು ಹೊಡೆದು ಸಾಯಿಸಲು ಸಾಧ್ಯವಾ? ಏನು ಮಾಡುತ್ತಾರೆ ನೋಡಿಯೇ ಬಿಡೋಣ.. ಎಂದು ಒಬ್ಬರನ್ನೊಬ್ಬರು ಎಳೆದಾಡುತ್ತಿದ್ದರು. 
ತಮ್ಮನ್ನು ಕಂಡೂ ಹೀಗೆ ಪೊಗರು ತೋರಿಸುತ್ತಿರುವುದಕ್ಕೆ ಮೈ ಉರಿದಿತ್ತು ಪೊಲೀಸರಿಗೆ. ಲಾಠಿ ಹಿಡಿದಿದ್ದ ಪೊಲಿಸ್ ಲಾಠಿ ಎತ್ತಿ ಎದುರಿಗಿದ್ದವನ ಕಾಲಿಗೆ ಪಟ್ ಎಂದು ಹೊಡೆದ ಅಷ್ಟೆ.. ಆಗ ನಡೆದಿತ್ತು ನಡೆಯಬಾರದ ಘಟನೆ..
"ಅಣ್ಣನ ಅಭಿಮಾನಿಗೆ ಹೊಡೆದುಬಿಟ್ಟ ಮಚ್ಚಿ.. ಹಿಡೀರಿ ಅವನನ್ನಾ..." ಗುಂಪಿನ ಮದ್ಯದಿಂದ ಯಾವಾಗ ಕೂಗು ಬಂತೋ ಹೊಡೆದಾಡುತ್ತಿದ್ದ ಎರಡು ಗುಂಪಿನವರು ತಮ್ಮ ತಮ್ಮಲ್ಲಿನ ಜಗಳ ಬಿಟ್ಟು ಪೊಲೀಸರನ್ನು ತಮ್ಮ ಮಧ್ಯೆ ಎಳೆದುಕೊಂಡರು. ಒಬ್ಬ ಲಾಠಿ ಕಸಿದರೆ, ಇನ್ನಿಬ್ಬರು ಸಿಂಗಲ್ ಬ್ಯಾರೆಲ್ ಗನ್ ಕಸಿದು ಬಿಟ್ಟರು. ಗನ್ ಕಸಿದವ ಅಷ್ಟಕ್ಕೇ ಸುಮ್ಮನಿರಲಿಲ್ಲ. ಲೋಡೆಡ್ ಗನ್ ಮೇಲೆತ್ತಿ ಗಾಳಿಯಲ್ಲಿ ಗುಂಡು ಹಾರಿಸಿದ. ಮಂಗಕ್ಕೆ ಹೆಂಡ ಕುಡಿಸಿ ಬಿಟ್ಟಂತಾಯಿತು ಅಲ್ಲಿದ್ದವರಿಗೆ. ಏನು ನಡೆಯುತ್ತಿದೆ? ಯಾರು ಗುಂಡು ಹಾರಿಸಿದರು? ಯಾರಿಗೆ ಗುಂಡು ಹಾರಿಸಿದರು? ಏನು ತಿಳಿಯದೆ ಜನ ಅಲ್ಲಿಂದ ಓಡತೊಡಗಿದರು. ಪರಿಸ್ಥಿತಿ ಕೈ ಮೀರಿದ್ದನ್ನು ಗಮನಿಸಿ ಗೋಡೆಯ ಮೇಲೆ ಕಾವಲು ನಿಂತವರು ಕೂಡ ಈ ಕಡೆ ಓಡಿ ಬರತೊಡಗಿದರು. 
ಮೇನ್ ಗೇಟ್ ತೆಗೆದಾಗಿಲಿನಿಂದ ನೋಡುತ್ತಲೇ ಇದ್ದ ಶಾಸ್ತ್ರಿ. ಯಾವ ಕ್ಷಣ ಹೊರಬೀಳಬೇಕು ಎಂದು ಯೋಚಿಸುತ್ತಲೇ ಇದ್ದ. ಆದರೆ ಗೋಡೆಯ ಮೇಲೆ ನಿಂತವರು ಗಮನಿಸುತ್ತಿರುತ್ತಾರೆ ಎಂದು ಸುಮ್ಮನೆ ಕುಳಿತಿದ್ದ. ಈಗ ಅವರು ಕೂಡ ಹೊರಗಡೆ ನೋಡುತ್ತಾ ಅತ್ತಲೇ ಸಾಗುತ್ತಿದ್ದಾರೆ. ಅವರಿಗೆ ಬಾಗಿಲ ಬಳಿ ಲಕ್ಷ ಇದ್ದಂತಿಲ್ಲ. ಇದಕ್ಕಿಂತ ಒಳ್ಳೆಯ ಸಮಯ ಸಿಗುವುದಿಲ್ಲ. ತಪ್ಪಿಸಿಕೋ.. ಎಂದಿತು ಮನಸ್ಸು. 
ಇಪ್ಪತ್ತು ಮೀಟರ್ ಅಷ್ಟೇ. ಮತ್ತೆ ಯೋಚಿಸಲಿಲ್ಲ ಶಾಸ್ತ್ರಿ. ಮನಸ್ಸು ಗಟ್ಟಿ ಮಾಡಿಕೊಂಡು ಬಾಗಿಲ ಕಡೆ ಓಡಿದ. ಎದೆ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಐದೇ ಸೆಕೆಂಡಿಗೆ ಆತ ಬಾಗಿಲ ಬಳಿ ಇದ್ದ. ಬಾಗಿಲು ತೆರೆದೇ ಇತ್ತು. ಹೊರಗೆ ಜನ ಚೆಲ್ಲಾಪಿಲ್ಲಿಯಾಗಿ ಓಡುತ್ತಿದ್ದರು. ಇನ್ನೊಂದು 25-30 ಮೀಟರ್ ಗಳು. ಹೊರಗೆ ಹೋದ ಪೊಲೀಸರು ಕಾಣಿಸುತ್ತಿದ್ದಾರಾ ನೋಡಿದ. ಅವರೆಲ್ಲೋ ಜನರ ಮಧ್ಯದಲ್ಲಿ ಕಳೆದುಹೋಗಿದ್ದಾರೆ, ಮತ್ತೆ ಯೋಚಿಸಲಿಲ್ಲ ಬಾಗಿಲಿನಿಂದ ತೂರಿಕೊಂಡು ಹೊರಬಂದ ಶಾಸ್ತ್ರಿ. 
ತಂಪನೆ ಹೊಸ ಉಸಿರು.. ಹೊಸ ಗಾಳಿ ಮುಖಕ್ಕೆ ರಾಚಿತು. ಬಾಗಿಲಿನಿಂದ ಸೀದಾ ಗುಂಪಿನೆಡೆಗೆ ಓಡಿದ ಶಾಸ್ತ್ರಿ. ಹೊರಗಡೆ ಗಮನಿಸುತ್ತಾ ಮೇಲಿನಿಂದ ಬರುತ್ತಿದ್ದ ಕಾವಲು ಪಡೆಯವನಿಗೆ ಶಾಸ್ತ್ರಿ ಓಡುತ್ತಿರುವುದು ಕಂಡಿತು. ಆದರೆ ಅವನು ಕೈದಿಯೊ, ಹೊರಗಿನವನೋ ಅರ್ಥವಾಗಲಿಲ್ಲ. ಆದರೂ "ತಪ್ಪಿಸಿಕೊಳ್ಳುತ್ತಿದ್ದಾನೆ ಹಿಡಿಯಿರಿ.. ಹಿಡಿಯಿರಿ.." ಎಂದು ಕೂಗಿಕೊಂಡ. ಜನರ ಕೂಗಿನಲ್ಲಿ ಆ ಕೂಗು ಅಸ್ಪಷ್ಟವಾಗಿ ಶಾಸ್ತ್ರಿಗೂ ಕೇಳಿಸಿತು. ಆದರೆ ಜನರ ಮಧ್ಯದಲ್ಲಿ ಸಿಕ್ಕಿಕೊಂಡ ಕಾವಲಿನವರಿಗೆ ಅರಿವಾಗಲಿಲ್ಲ. ಕಸಿದುಕೊಂಡ ಗನ್ ಎಲ್ಲಿದೆ ಎಂದು ಹುಡುಕುವುದರಲ್ಲಿದ್ದರು. ನಾಳೆ ಕೆಲಸ ಹೋಗುತ್ತದೆ ನಾವು ಮಾಡಿದ ತಪ್ಪಿಗೆ. ಜೈಲಿನ ಹೊರಗಡೆ ಏನೇ ನಡೆದರೂ, ಯಾವುದೇ ಪರಿಸ್ಥಿತಿಯಲ್ಲೂ ಗೇಟ್ ತೆಗೆದು ಹೊರ ಬರಬಾರದು ಎಂಬ ನಿಯಮ ಮೀರಿ ಹೊರಬಂದಿದ್ದಾರೆ. ಈಗ ಗನ್ ಕೂಡ ಎಳೆದುಕೊಂಡಿದ್ದಾರೆ ಎಂಬ ಚಿಂತೆ. ಅಷ್ಟರಲ್ಲಿ ಶಾಸ್ತ್ರಿ ಕೂಡ ಓಡುತ್ತಿದ್ದ ಗುಂಪಿನ ಮಧ್ಯ ಸೇರಿಕೊಂಡ. ಸುತ್ತಲೂ ನೋಡುತ್ತಲೇ ಓಡುತ್ತಿದ್ದ ಆತ. ತನ್ನನ್ನು ತಪ್ಪಿಸುವ ಹಿಂದಿರುವ ಮಾಸ್ಟರ್ ಮೈಂಡ್ ಸರೋವರಾ ಇಲ್ಲೆ ಎಲ್ಲಾದರೂ ಇರುವಳಾ ಎಂದು ಆತನ ಕಣ್ಣುಗಳು ಹುಡುಕುತ್ತಿದ್ದವು. ಓಡಿ ಬರುತ್ತಿದ್ದ ಕಾವಲಿನವನು ಶಾಸ್ತ್ರೀಯ ಮೇಲೆ ಒಂದು ಕಣ್ಣಿಟ್ಟುಕೊಂಡೇ ಬರುತ್ತಿದ್ದ. ಇಳಿಯುವ ಮೆಟ್ಟಿಲು ಜೈಲಿನ ಒಳಭಾಗಕ್ಕಿತ್ತು. ಆ ಕಡೆಯಿಂದ ಇಳಿದು ಬರುವ ವೇಳೆಗೆ ಶಾಸ್ತ್ರಿ ತಪ್ಪಿಸಿಕೊಂಡಿರುತ್ತಾನೆ. ಹಾಗಾಗಬಾರದು ಮುಂದೆ ಯೋಚಿಸದೆ ಅವನು ಹೊರಗಡೆ ಜಿಗಿದಿದ್ದ. ಕೈ ಕಾಲು ಮುರಿದರೆ ಎಂಬ ಯೋಚನೆಗಿಂತ, ತಪ್ಪಿಸಿಕೊಳ್ಳುತ್ತಿರುವ ಕೈದಿಯನ್ನು ಹಿಡಿಯಬೇಕೆಂಬ ಹಂಬಲ. ಗುಂಪು ಚದುರಿದ್ದರಿಂದ ಓಡುತ್ತಿರುವ ಶಾಸ್ತ್ರಿ ಸರಿಯಾಗಿ ಕಾಣಿಸುತ್ತಿದ್ದ. ಗೋಡೆಯಿಂದ ಜಿಗಿದು ಒಮ್ಮೆ ನೆಲಕ್ಕೆ ಕುಳಿತು ಮತ್ತೆ ಶಾಸ್ತ್ರಿಯನ್ನು ಹಿಂಬಾಲಿಸಲು ಓಡತೊಡಗಿದ. 
ಶಾಸ್ತ್ರಿ ಅದನ್ನು ಗಮನಿಸಲೇ ಇಲ್ಲ. ಅವನ ಗಮನವೆಲ್ಲ ಸರೋವರಳನ್ನು ಹುಡುಕುವುದರಲ್ಲೇ ಇತ್ತು. ಅಷ್ಟರಲ್ಲಿ ಮತ್ತೆ ಗುಂಡು ಸಿಡಿದ ಸದ್ದು. ಅದರ ಹಿಂದೆಯೇ ಮತ್ತೊಂದು.. ಈ ಬಾರಿ ಜನರು ಮತ್ತು ಜೋರಾಗಿ ಕೂಗಿಕೊಂಡರು. ಓಡುತ್ತಿದ್ದ ಶಾಸ್ತ್ರಿಯು ಒಮ್ಮೆಲೇ ನಿಂತು ಬಿಟ್ಟ. ಯಾರಾದರೂ ನನಗೆ ಗುಂಡು ಹಾರಿಸುತ್ತಿದ್ದಾರಾ?? 
ಬೆಳಕು ಬರುತ್ತಿದ್ದ ಸ್ಟ್ರೀಟ್ ಲೈಟ್ ಪುಡಿ ಪುಡಿಯಾಗಿ ಒಮ್ಮೆಲೇ ಕತ್ತಲಾವರಿಸಿತು. ಜೊತೆಗೆ ಜನರ ಹಾಹಾಕಾರವು ಹೆಚ್ಚಿತು. ಕಣ್ಣು ಕತ್ತಲೆಗೆ ಹೊಂದಿಕೊಳ್ಳುವವರೆಗೆ ಏನು ಮಾಡಲು ತಿಳಿಯದೆ ಹಾಗೆಯೇ ನಿಂತ ಶಾಸ್ತ್ರಿ. ಇವೆಲ್ಲ ಪ್ಲಾನ್ ಸರೋವರಳದಾ?? ಗಾಳಿಗುಡ್ಡ ಏನಾದರೂ ಸಹಾಯಕ್ಕೆ ಬಂದನಾ?? ಅಥವಾ ಇನ್ನೇನಾದರೂ ನಡೆಯುತ್ತಿದೆಯಾ? ಅರ್ಥವಾಗಲಿಲ್ಲ ಶಾಸ್ತ್ರಿಗೆ. 
ಕಣ್ಣು ಕತ್ತಲೆಗೆ ಹೊಂದಿಕೊಂಡಿತು ಮುಂದೆ ನಡೆಯಬೇಕು.. ಅಷ್ಟರಲ್ಲಿ ಆತನ ಭುಜದ ಮೇಲೆ ಬಲವಾದ ಕೈ ಬಿತ್ತು.
ತಪ್ಪಿಸಿಕೊಂಡು ಓಡಲು ನೋಡಿದ ಶಾಸ್ತ್ರಿ. ಭುಜದ ಮೇಲೆ ಬಿದ್ದ ಕೈ ಈಗ ಶಾಸ್ತ್ರೀಯ ಕಾಲರ್ ಗಟ್ಟಿಯಾಗಿ ಹಿಡಿದು ಒಂದು ಕಡೆ ಎಳೆದೊಯ್ಯತೊಡಗಿತು. 
ಒಮ್ಮೆಲೇ ನಡೆದ ಈ ಘಟನೆಗೆ ಅವಾಕ್ಕಾಗಿ ಶಾಸ್ತ್ರಿ ತನ್ನನ್ನು ಹಿಡಿದವರು ಯಾರು ಎಂದು ಕತ್ತಲಲ್ಲೇ ನೋಡಲು ಪ್ರಯತ್ನಿಸಿದ. ಸ್ವಲ್ಪ ದೂರ ಆತನನ್ನು ದರದರನೆ ಎಳೆದುಕೊಂಡು ಹೋಗಿ ಹಿಡಿತ ಸಡಿಲಿಸಿದ ಶಾಸ್ತ್ರಿಯನ್ನು ಹಿಡಿದ ವ್ಯಕ್ತಿ.
"ಓಡದಿರು ಶಾಸ್ತ್ರಿ.. ನೀನು ಸ್ವಲ್ಪ ತಪ್ಪು ಹೆಜ್ಜೆ ಇಟ್ಟರು ಉಳಿಯಲಾರೆ.."
ಶಾಸ್ತ್ರಿಗೆ ಒಮ್ಮೆಲೇ ಆಶ್ಚರ್ಯವಾಯಿತು ಧ್ವನಿ ಕೇಳಿ.. ತನ್ನ ಸಂಶಯ ಸರಿಯೋ ಅಲ್ಲವೋ ಎಂದು ನೋಡಲು ಕತ್ತಲೆಯಲ್ಲೇ ಕಣ್ಣು ಕಿರಿದಾಗಿಸಿದ. 
ನಿಜವಾಗಿಯೂ ತನ್ನ ಕಣ್ಣುಗಳನ್ನು ತಾನೇ ನಂಬದಾದ. ಸರೋವರಾ ಒಬ್ಬಳೇ ಇಷ್ಟು ಪಕಡ್ಬಂದಿ ವ್ಯವಸ್ಥೆ ಮಾಡಲು ಸಾಧ್ಯವೇ ಇಲ್ಲ ಎಂದು ಆತನಿಗೆ ಅನ್ನಿಸುತ್ತಲೇ ಇತ್ತು. ಇದರ ಹಿಂದೆ ಇರುವ ಮಾಸ್ಟರ್ ಮೈಂಡ್ ಯಾರು ಎಂದು ಈಗ ತಿಳಿಯಿತು ಅವನಿಗೆ.
ಆದರೆ ಏಕೆ? ಹೇಗೆ? ಅರ್ಥವಾಗಲಿಲ್ಲ ಶಾಸ್ತ್ರಿಗೆ. ಪಕ್ಕದಲ್ಲೇ ಇದ್ದ ಸಣ್ಣ ರಸ್ತೆಯಲ್ಲಿ ಜೀಪ್ ನಿಂತಿತ್ತು. ಇಬ್ಬರು ಅಲ್ಲಿ ಬರುತ್ತಲೇ ಜೀಪಿನಿಂದ ಇಳಿದು ಬಂದ ಸರೋವರಾ ಶಾಸ್ತ್ರಿಯನ್ನು ಗಟ್ಟಿಯಾಗಿ ತಬ್ಬಿಕೊಂಡು ಮುಖದ ತುಂಬಾ ಮುತ್ತನಿಟ್ಟಳು. ಶಾಸ್ತ್ರಿಯು ಕೂಡ ಅಷ್ಟೇ ಗಟ್ಟಿಯಾಗಿ ತಬ್ಬಿಕೊಂಡ. ಅವನಿಗೆ ಸ್ವಲ್ಪ ನಾಚಿಕೆಯಾಯಿತು ಸುಮ್ಮನೆ ಎನಕೌಂಟರ್ ಎಂದುಕೊಂಡು ಇವಳ ಮೇಲೆ ಅನುಮಾನ ಪಟ್ಟೆನಲ್ಲಾ ಎಂದು. 
ನಮಗೆ ಸಮಯವಿಲ್ಲ... ಪೊಲೀಸ್ ಅಲರ್ಟ್ ಆಗುವ ಮುನ್ನ ಇಲ್ಲಿಂದ ಹೊರಬೀಳಬೇಕು.. ನಡೆಯಿರಿ.." ಎನ್ನುತ್ತಾ ಡ್ರೈವಿಂಗ್ ಸೀಟ್ ಹತ್ತಿದ ಆ ವ್ಯಕ್ತಿ.
ಶಾಸ್ತ್ರಿ ಸರೋವರಾ ಇಬ್ಬರು ಹಿಂದೆ ಕುಳಿತರು. 
"ಥ್ಯಾಂಕ್ಸ್.." ಶಾಸ್ತ್ರಿಗೆ ತನ್ನನ್ನು ನಂಬಿ ಇಷ್ಟು ಸಹಕರಿಸಿದ್ದಾನೆ ಎಂಬ ಭಾವ ತುಂಬಿತ್ತು ಮನದಲ್ಲಿ. 
"ಶಾಸ್ತ್ರಿ, ಈಗ ನೀನು ಕೂಡ ನನಗೆ ಸಹಾಯ ಮಾಡುವುದಿದೆ. ಥ್ಯಾಂಕ್ಸ್ ಅಲ್ಲಿಂದ ಅಲ್ಲಿಗೆ ವಜಾ.. ಮುಂದಿನದು ನಂತರ ನೋಡೋಣ.. "
ಸರೋವರಾಳ ಕಣ್ಣಿನಲ್ಲೂ ಕೃತಜ್ಞತಾ ಭಾವವಿತ್ತು. 
ತನ್ನಿಂದ ಏನು ಹೆಲ್ಪ್ ಬೇಕಾಗಿರುವುದು ಈತನಿಗೆ ಎಂದು ಯೋಚಿಸತೊಡಗಿದ ಶಾಸ್ತ್ರಿ..
ಮುಗುಳ್ನಗುತ್ತ ಎಕ್ಸಿಲೇಟರ್ ಮೇಲೆ ಕಾಲಿಟ್ಟು ಜೀಪ್ ಮುನ್ನಡೆಸಿದ ಕ್ಷಾತ್ರ....
.............................................................................................................................................................................

ಖತರ್ನಾಕ್ ಕಾದಂಬರಿ ಅಧ್ಯಾಯ 28

                                                             ಖತರ್ನಾಕ್ ಕಾದಂಬರಿ ಅಧ್ಯಾಯ 28

"ಹೆಚ್ಚು ಮಾತನಾಡುವುದು, ಯಾರನ್ನಾದರೂ ಒಪ್ಪಿಸಲು ಕೈ ಕಾಲು ಹಿಡಿಯುವುದು ನಮ್ಮ ಜಗತ್ತಿನಲ್ಲಿ ತುಂಬಾ ಕಡಿಮೆ. ನಿನ್ನ ವಯಸ್ಸಿಗೆ ಮತ್ತು ವೃತ್ತಿಗೆ ಬೆಲೆ ಕೊಟ್ಟು ಇಷ್ಟು ಕೇಳಿದೆ. ನಿನಗೆ ಕೊಟ್ಟ ಒಂದು ದಿನದ ಅವಧಿ ಮುಗಿಯಿತು. ಏನು ಯೋಚಿಸಿದೆ?"ಡಾಕ್ಟರ್ ಶ್ರೀನಿವಾಸನ್ ಕೇಳಿದ ಗರುಡ. ಅತ್ತ ಕಡೆ ರಿಸೀವರ್ ಹಿಡಿದಿರುವುದು ಪ್ರಿಯಂವದಾ ರಾಜ್ ಳನ್ನು ನೋಡಿಕೊಳ್ಳುತ್ತಿದ್ದ ಮುಖ್ಯ ವೈದ್ಯ ಡಾಕ್ಟರ್ ಶ್ರೀನಿವಾಸನ್. 
ತಾಜ್ ಹೋಟೆಲ್ ನಿಂದ ತಪ್ಪಿಸಿಕೊಂಡು ಹೊರಬಿದ್ದ ಗರುಡ ಇಂಡಿಯಾ ಗೆಟ್ ಗೂ ಮೊದಲೇ ಇಳಿದು ಆಟೋ ಹಿಡಿದು ಗೋವಿಂದಪುರಿ ತಲುಪಿದ್ದ. ಗಲ್ಲಿಗಲ್ಲಿಯ ಮನೆಗಳು.. ಎಲ್ಲಿ ಬೇಕೆಂದರಲ್ಲಿ ಜೋತು ಬಿದ್ದಿರುವ ಟೆಲಿಫೋನ್ ಮತ್ತು ಕೇಬಲ್ ಲೈನ್ ಗಳು.. ಸೈಕಲ್ ಮಾತ್ರ ಓಡಾಡಬಹುದಾದಷ್ಟು ಕಿರಿದಾದ ರಸ್ತೆ.. ಅದರ ಎರಡು ಕಡೆ ತುರುಕಿದಂತೆ ಕಟ್ಟಲ್ಪಟ್ಟ ಮನೆಗಳು.. ನಿಜವಾದ ದಿಲ್ಲಿ ದರ್ಶನವಾಗಬೇಕೆಂದರೆ ಇಂತಹ ಗಲ್ಲಿಗಳಲ್ಲಿ ಓಡಾಡಬೇಕು. ಇಂದಿಗೂ ಜನ ನೀರಿಗಾಗಿ ಪರದಾಡುತ್ತಾರೆ. ಭೂ ಮಾಫಿಯಾದ ಜೊತೆಗೆ ವಾಟರ್ ಮಾಫಿಯಾ ಕೂಡ ಸೇರಿಕೊಂಡು ಜನರನ್ನು ಕಾಡಿಸುತ್ತಿರುವ ಜಾಗಗಳು. 
ಭೂಗತವಾಗಿ ತಲೆ ಮರೆಸಿಕೊಳ್ಳಲು ಇಂತಹ ಜಾಗಗಳು ಹೇಳಿ ಮಾಡಿಸಿದಂತವು. ಯಾರು ಬರುತ್ತಾರೆ? ಯಾರು ಇರುತ್ತಾರೆ? ಯಾರು ಹೋಗುತ್ತಾರೆ? ಅಕ್ಕಪಕ್ಕದವರು ತಲೆ ಕೆಡಿಸಿ ಕೊಳ್ಳುವುದೇ ಇಲ್ಲ. 
ತನಗೆ ಬೇಕಾದ ವ್ಯವಸ್ಥೆಯನ್ನು ಹೋಟೆಲ್ ನಿಂದಲೇ ಹೇಳಿಬಿಟ್ಟಿದ್ದ ಗರುಡ. ಅವನು ಬರುವುದರೊಳಗೆ ಅದಿಷ್ಟು ವ್ಯವಸ್ಥೆ ಆಗಿರುತ್ತದೆ. ಅವನಂತಹ ಭೂಗತ ಕಿಂಗ್ ಪಿನ್ ಗಳು ಬದುಕಿರುವವರೆಗೆ ಇಂತಹ ಐಷಾರಾಮಿಗೇನು ಕಡಿಮೆಯಾಗುವುದಿಲ್ಲ. ಕೈ ಬೆರಳು ತೋರಿಸಿದಲ್ಲಿ ಮಹಲು ಎದ್ದು ನಿಲ್ಲುತ್ತದೆ. ಗೋವಿಂದಪುರಿಯ 14 ನೇ ಗಲ್ಲಿಯ ಮನೆ ನಂ. 888 ರ ಮುಂದೆ ನಿಂತು ಬಾಗಿಲ ಮೇಲೆ ತಡಕಿದ. ಕೀ ಗೊಂಚಲು ಸಿಕ್ಕಿತು. ಕೀ ತೆಗೆದು ಒಳ ಸೇರಿಕೊಂಡ. ಹೊರಗಿನಿಂದ ಜೇಡ ಕಟ್ಟಿಕೊಂಡಂತ ಮನೆ. ಆದರೆ ಒಳಗೆ ಎಲ್ಲವು ನೀಟಾಗಿತ್ತು. ಸುತ್ತಲೂ ಮನೆ ಇದ್ದಿದ್ದರಿಂದ ಸ್ವಲ್ಪ ಕತ್ತಲೆ ಆವರಿಸಿತ್ತು ಮನೆಯೊಳಗೆ. ಮೊದಲಿನಿಂದಲೇ ಏಸಿ ಉರಿಯುತ್ತಿದ್ದುದರಿಂದ ಮನೆ ತಂಪಾಗಿತ್ತು. ಬಿಸಿಲಿನ ಝಳದಿಂದ ಒಳ ಬಂದ ಮೈ ಮನ ಒಮ್ಮೆ ಹಾಯ್ ಎಂಬಷ್ಟು ತಂಪೆನ್ನಿಸಿತು. 
ಮುಖದ ಮೇಲೆ ದಂಡಿಯಾಗಿ ಅಂಟಿಸಿಕೊಂಡಿದ್ದ ಸಿಖ್ ವೇಷದ ಗಡ್ಡ ಮೀಸೆ ಎಲ್ಲವು ಈಗ ಕಿರಿಕಿರಿಯೆನಿಸತೊಡಗಿತು. ಬೇಗ ಬೇಗ ತನ್ನ ಮೊದಲಿನ ವೇಷಕ್ಕೆ ಬಂದು ಸುಮ್ಮನೆ ಮನೆಯನ್ನು ಒಂದು ಸುತ್ತು ಹಾಕಿದ. ಯಾವ ಯಾವ ಜಾಗಗಳಲ್ಲಿ ಏನೇನಿವೆ? ಹೊರಗಿನಿಂದ ಯಾರಾದರೂ ಬಂದರೆ ಎಸ್ಕೇಪ್ ರೂಟ್ ಯಾವುದು ಎಲ್ಲವನ್ನು ಆತ ಮನ ಲೆಕ್ಕಾಚಾರ ಹಾಕುತ್ತಿತ್ತು. ಮನೆಯ ಹಿಂದಿನ ಬಾಗಿಲು ತೆಗೆದರೆ ಹಿಂದಿನ ಮನೆಯ ಬಾಲ್ಕನಿ ಇತ್ತು. ಎಸ್ಕೇಪ್ ರೂಟ್ ಆಗಿ ಇದನ್ನು ಬಳಸಿಕೊಳ್ಳಬಹುದು. ಕಾಲಿಗೆ ಸ್ವಲ್ಪ ಶಕ್ತಿ ತುಂಬಿಕೊಂಡರೆ ಆ ಕಡೆಯ ಬಾಲ್ಕನಿಯ ಕಂಬಿ ಹಿಡಿದು ಅಲ್ಲಿಂದ ಪಕ್ಕದ ಮನೆಯ ಬಾಲ್ಕನಿಯ ಜಾಡು ಹಿಡಿದು ಮುಂದೆ ಸಾಗ ಬಹುದು. 
ಎಲ್ಲಿಯೇ ಉಳಿಯುವುದಾದರೂ ಮೊದಲು ನಿನ್ನ ಎಸ್ಕೇಪ್ ರೂಟ್ ನೋಡಿಟ್ಟುಕೋ. ಇದು ಭೂಗತ ಲೋಕ ಗರುಡನಿಗೆ ಕಳಿಸಿದ ಪಾಠ. ಆದ್ದರಿಂದಲೇ ಇಂದಿಗೂ ಆತ ಯಾರ ಕೈಗೂ ಸಿಗದೇ ಅದೃಶ್ಯನಾಗಿ ಓಡಾಡಿಕೊಂಡಿರುವುದು.
ಆತನಿಗೆ ಬಹಳ ಹತ್ತಿರ ಬಂದಿರುವೆದೆಂದರೆ ಸಮ್ಮಿಶ್ರನ ಟೀಮ್. ತನ್ನ ಮನಸ್ಸಿಗೆ ಎಲ್ಲವು ಸರಿಯೆನ್ನಿಸಿದ ಮೇಲೆ ಒಂದು ಹಿತವಾದ ಸ್ನಾನ ಮಾಡಿ ಒಂದರೆಗಳಿಗೆ ನಿದ್ರೆ ಮಾಡಿದ್ದ ಗರುಡ ಶ್ರೀನಿವಾಸನ್ ಗೆ ಕಾಲ್ ಮಾಡಿದ್ದ. ಅಲ್ಲಿಂದ ಶುರುವಾಗಿತ್ತು ಡಾಕ್ಟರ್ ಗೆ ಪಜೀತಿ. 
ಒಂದು ದಿನದ ಟೈಮ್ ಕೊಟ್ಟಿದ್ದ ಗರುಡ ಡಾಕ್ಟರ್ ಗೆ. ಈಗ ಆ ಅವಧಿ ಮುಗಿದಿತ್ತು. ಅದಕ್ಕೆ ಮತ್ತೆ ಇಂದು ಫೋನ್ ಮಾಡಿದ್ದ. ಮುಖದ ಮೇಲೆ ಮೂಡಿದ್ದ ಬೆವರನ್ನು ಕರವಸ್ತ್ರದಿಂದ ಒರೆಸಿಕೊಳ್ಳುತ್ತ ಸುಮ್ಮನೆ ರಿಸೀವರ್ ಹಿಡಿದು ಗರುಡನ ಮಾತನ್ನು ಕೇಳುತ್ತಿದ್ದ ಡಾಕ್ಟರ್ ಶ್ರೀನಿವಾಸನ್. 
ಪ್ರಿಯಂವದಾಳ ಟ್ರೀಟಮೆಂಟ್ ಯಾರು ಮಾಡುತ್ತಿದ್ದಾರೆ ಎಂದು ತಿಳಿದಿರುವುದು ಬೆರಳೆಣಿಕೆಯ ಜನರಿಗೆ ಮಾತ್ರ. ಅದಲ್ಲದೆ ಅವಳ ಹತ್ಯಾ ಪ್ರಯತ್ನ ನಡೆದಿದೆ ಎಂದು ತಿಳಿದಿರುವುದೂ ಅದೇ ಬೆರಳೆಣಿಕೆಯ ಜನರಿಗೆ ಮಾತ್ರ. ಅಂತಹದ್ದರಲ್ಲಿ ಇವನು ಯಾರು!? ಹೇಗೆ ನನ್ನ ಹಿಂದೆ ಬಿದ್ದಿದ್ದಾನೆ? ಎಂದು ನಿನ್ನೆಯಿಂದಲೂ ಯೋಚಿಸಿದ್ದಾರೆ ಶ್ರೀನಿವಾಸನ್. ಹೇಗಾದರೂ ಮಾಡಿ ಈ ಉರುಳಿನಿಂದ ಹೊರಬೀಳಬೇಕು. ಟ್ರೀಟಮೆಂಟ್ ನಿಂದಲೇ ದೂರ ಸರಿದು ಬಿಟ್ಟರೆ!!? ಫೋನ್ ಮಾಡಿದವ ನಿನ್ನೆಯೇ ಹೇಳಿದ್ದಾನೆ ನಿನ್ನ ಪ್ರತಿ ಚಲನವಲನಗಳನ್ನು ನಾವು ಗಮನಿಸುತ್ತಿದ್ದೇವೆ ಎಂದು. ನಮ್ಮ ವಿಷಯ ಬೇರೆ ಕಡೆ ತಿಳಿದರೆ ನೀನು ಇರುವುದಿಲ್ಲ ಎಂದು ಸೂಕ್ಷ್ಮವಾಗಿ ಎಚ್ಚರಿಸಿತ್ತು ನಿನ್ನೆಯ ಫೋನ್ ಕಾಲ್.
ಏನು ಮಾಡಬೇಕು? ಹೀಗೆ ಬೆದರಿಸುತ್ತಿರುವವರು ಯಾರು? ಅವರ ಉದ್ದೇಶವೇನಿರಬಹುದು? ಸಮ್ಮಿಶ್ರನಿಗೆ ಇದರ ಬಗ್ಗೆ ತಿಳಿಸಿದರೆ ಏನಾಗಬಹುದು? ಹೀಗೆ ಹತ್ತು ಹಲವು ಯೋಚನೆಗಳನ್ನು ಮಾಡುವುದರೊಳಗೆ ಒಂದು ದಿನ ಕಳೆದು ಹೋಗಿತ್ತು. ಹೇಳಿದ ಟೈಮ್ ಗೆ ಸರಿಯಾಗಿ ಮತ್ತೆ ಫೋನ್ ರಿಂಗಣಿಸಿತ್ತು. 
ಶ್ರೀನಿವಾಸನ್ ಇರುವುದರಲ್ಲಿಯೇ ಸ್ವಲ್ಪ ಧೈರ್ಯ ತಂದುಕೊಂಡು "ನೋಡು, ನೀನು ಯಾರೇ ಆಗಿರು.ನಿನ್ನನ್ನು ಡಾಕ್ಟರ್ ವೇಷದಲ್ಲಿ ಪ್ರಿಯಂವದಾಳ ಬಳಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಸೆಕ್ಯೂರಿಟಿ ಟೈಟ್ ಇರುತ್ತದೆ. ಹಾಗೊಂದು ವೇಳೆ ನೀವು ಒಳಹೋದರು ಮತ್ತೆ ಹೊರಬರಲಾರಿರಿ. ನಾನು ನನ್ನ ಕೆಲಸಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಇನ್ನೇನಿದ್ದರೂ ನೀವುಂಟು.. ಪ್ರಿಯಂವದಾ ರಾಜ್ ಉಂಟು.. ನನ್ನನ್ನು ಬಿಟ್ಟುಬಿಡಿ.." ಎದುರಾದ ಸಂಕಟದಿಂದ ತಪ್ಪಿಸಿಕೊಂಡ ಭಾವ ಶ್ರೀನಿವಾಸನ್ ಗೆ. 
ಗರುಡ ಒಮ್ಮೆ ಮೆಲುವಾಗಿ ನಕ್ಕ. "ಡಾಕ್ಟರ್ ಶ್ರೀನಿವಾಸನ್, ಇದೇನು ಮಕ್ಕಳಾಟ ಎಂದುಕೊಂಡೆಯಾ?? ಅಥವಾ ನೀನೇನಾದರೂ ರಾಜಕೀಯ ಪಕ್ಷದಲ್ಲಿರುವೆ ಎಂದುಕೊಂಡೆಯಾ?? ರಾಜೀನಾಮೆ ಕೊಡಲು..!! 
ನಾಳೆ ನಾನು ಹೇಳಿದ ಕೆಲಸವಾಗಬೇಕು. ನಿನ್ನೊಂದಿಗೆ ನೀನು ಮತ್ತೊಬ್ಬ ಡಾಕ್ಟರ್ ನನ್ನು ಒಳಕರೆದುಕೊಂಡು ಹೋಗುತ್ತೀಯಾ ಅಷ್ಟೇ.."
ಶ್ರೀನಿವಾಸನ್ ಗೆ ಸಿಟ್ಟು ಉಕ್ಕುತ್ತಿತ್ತು. "ಇಲ್ಲದಿದ್ದರೆ ಏನು?? ಕೊಲ್ಲುತ್ತೀಯಾ ತಾನೇ!? ಕೊಂದುಬಿಡಿ.. ನನ್ನ ಜೀವಕ್ಕೆ ಹೆದರಿ ಇನ್ನೊಬ್ಬರ ಜೀವ ತೆಗೆಯಲಾರೆ.." 
"ಡಾಕ್ಟರ್, ನಾನು ಮೊದಲೇ ಹೇಳಿದ್ದೇನೆ. ಮಾತು ಜಾಸ್ತಿ ಆದಷ್ಟೂ ತೊಂದರೆ ಜಾಸ್ತಿ. ನಾನು ಮೊದಲೇ ಹೇಳಿದ್ದೇನೆ AIIMS ನಲ್ಲಿ HOD ಆಗಿರುವ ನಿಮ್ಮ ಮಗ, DPS ನಲ್ಲಿ ಓದುತ್ತಿರುವ ನಿಮ್ಮ ಮೊಮ್ಮಗಳು, ಲಂಡನ್ ನಲ್ಲಿ MS ಮಾಡುತ್ತಿರುವ ನಿಮ್ಮ ಮೊಮ್ಮಗ.. ಇವರೆಲ್ಲ ನಿನಗಿಂತ ಮೊದಲು ಸಾಯುತ್ತಾರೆ."
ಮತ್ತೆ ಮಾತನಾಡಲಿಲ್ಲ ಶ್ರೀನಿವಾಸನ್. "ನಾಳೆ ಎಷ್ಟು ಹೊತ್ತಿಗೆ ಯಾರು? ಎಲ್ಲಿ ಬರುತ್ತಾರೆ?" ಎಂದಷ್ಟೇ ಕೇಳಿದ.
"ಅದೆಲ್ಲ ಈಗ ಬೇಡ. ನಾಳೆ ರಾಜ್ ಳನ್ನು ಭೇಟಿ ಮಾಡಲು ಹೊರಡು. ನಮ್ಮವನು ಬಂದು ಸೇರಿಕೊಳ್ಳುತ್ತಾನೆ. ಇವನು ಹೊಸ ಡಾಕ್ಟರ್ ಎಂದು ಪರಿಚಯಿಸಿ ಒಳ ಕರೆದುಕೊಂಡು ಹೋಗುವುದಷ್ಟೇ ನಿನ್ನ ಕೆಲಸ.." 
ಏನು ಪ್ರತಿಕ್ರಿಯಿಸದ ಶ್ರೀನಿವಾಸನ್ ಕಾಲ್ ಕಟ್ ಮಾಡಿದ. ಗರುಡನ ಮುಖದ ಮೇಲೆ ನಸು ನಗು ಮೂಡಿತು.
*............................................................*................................................................*
1000..
999..
998..
ಸೆಕೆಂಡುಗಳನ್ನು ಎಣಿಸುತ್ತ ಕುಳಿತಿದ್ದ ಶಾಸ್ತ್ರಿ. ನಾನು ಸರಿಯಾಗಿ ಎಣಿಸುತ್ತಿದ್ದೇನಾ!? ಮನಸ್ಸು ಸ್ಥಿಮಿತದಲ್ಲಿಲ್ಲದೆ ಎಣಿಕೆಯಲ್ಲಿ ಅಂತರವಿದ್ದರೆ ಸಮಯ ಹೆಚ್ಚು ಕಡಿಮೆಯಾಗುವ ಅಪಾಯವೂ ಇದೆ. ಅಷ್ಟರಲ್ಲಿ ಮತ್ತೊಂದು ಯೋಚನೆಯೂ ಬಂತು ಆತನ ಮನಸ್ಸಿನಲ್ಲಿ. ಸರೋವರಾ ಒಳಗೆ ಬಂದು ನನ್ನನ್ನು ಬಿಡಿಸುತ್ತಾಳೆ ಎಂದುಕೊಂಡರೆ ಹೀಗೆ ಲಾಕ್ ಏಕೆ ತೆಗೆದಿಡುತ್ತಿದ್ದಳು? ಏನಾದರೂ ಆಯುಧ ಉಪಯೋಗಿಸಿದರೆ ಪಟ್ ಎಂದು ತೆರೆದುಕೊಂಡು ಬಿಡುತ್ತದೆ ಈ ಬಿಗ. ಹಾಗಿದ್ದಲ್ಲಿ ಏಕೆ?? ಅಂದರೆ ಈ ಹೊತ್ತಿಗಾಗಲೇ ನಾನು ಹೊರಗಿರಬೇಕು ಎಂದು ಸೂಚಿಸಿದ್ದಾಳಾ?? ಆದರೆ ಹೊರಗೆ ಹೋಗಲು ಹೇಗೆ ಸಾಧ್ಯ?? ಕೊಠಡಿಯ ಬಾಗಿಲೇನೋ ತೆರೆದಿದೆ. ಆದರೆ ಮೇನ್ ಗೇಟ್ ಹೇಗೆ ತೆಗೆದಿರಲು ಸಾಧ್ಯ? 
ಮತ್ತೆ ದುಗುಡ ಆವರಿಸಿಕೊಂಡಿತು ಮನದಲ್ಲಿ. ಇನ್ನೆರಡು ಗಂಟೆಯಲ್ಲಿ ತನ್ನ ಜೀವನದಲ್ಲಿ ಏನೇನು ನಡೆಯುತ್ತದೆಯೋ..!? ಅದಾಗಲೇ ಕೌಂಟ್ 950 ರ ಬಳಿ ಇದೆ. ಅಂದರೆ ಇನ್ನೊಂದು ಹದಿನೈದು ನಿಮಿಷದಲ್ಲಿ ಕಬಾಲಿ ಸೆಕೆಂಡ್ ಷೋ ಮುಗಿಯಲಿದೆ. ನಾನೇನು ಮಾಡಬೇಕು?? ಇಲ್ಲೇ ಕೂತಿರಲಾ?? ಅಥವಾ ಕತ್ತಲೆಯಲ್ಲಿ ಯಾರಿಗೂ ಕಾಣದಂತೆ ಹೊರ ಬೀಳಲಾ?? ಸಿಸಿಟಿವಿ ಕ್ಯಾಮೆರಾಗಳನ್ನು ಕೂಡ ಎಲ್ಲೆಲ್ಲಿ ಅಳವಡಿಸಿದ್ದಾರೋ ಗೊತ್ತಿಲ್ಲ. ನಾನೇನಾದರೂ ಅದರಲ್ಲಿ ಸಿಕ್ಕಿಬಿದ್ದರೆ!? 
ಶಾಸ್ತ್ರಿ ತನ್ನ ಎಣಿಕೆಯನ್ನು ಅರ್ಧಕ್ಕೆ ನಿಲ್ಲಿಸಿ ಬಾಗಿಲಿನ ಬಳಿ ಬಂದು ನಿಂತ. ಹೊರಗೇನಾದರೂ ಸದ್ದು ಕೇಳುತ್ತಿದೆಯಾ ಎಂದು ಸೂಕ್ಷ್ಮವಾಗಿ ಆಲಿಸಿದ. 
ಪ್ರಶಾಂತವಾಗಿತ್ತು ಜೈಲಿನ ವಾತಾವರಣ. ಸುನಾಮಿಯ ಮುಂಚಿನ ನಿಶ್ಯಬ್ದತೆಯಂತಿತ್ತು ಆ ಹೊತ್ತು. ಆದದ್ದಾಗಲಿ ಹೊರಗೆ ಹೋಗಿ ಬಿಡೋಣ. ಮುಂದಿನದು ಮುಂದೆ ಎಂದು ಜೈಲಿನ ಕೊಠಡಿಯಿಂದ ಹೊರಬಂದ. ಪಕ್ಕದ ಸೆಲ್ ನ ಕೈದಿ ಮಾತನಾಡಿದ ಸದ್ದು.. ಕೇವಲ ಪೋಲೀಸರ ಮತ್ತು ಸಿಸಿಟಿವಿಯ ಕಣ್ತಪ್ಪಿಸುವುದು ಮಾತ್ರವಲ್ಲ ಅಕ್ಕಪಕ್ಕದ ಸೆಲ್ಲಿನಲ್ಲಿರುವ ಕೈದಿಗಳಿಗೆ ಕೂಡ ತಿಳಿಯಬಾರದೆಂದು ಆಗ ಅರಿವಾಯಿತು. ಯಾವನಾದರೂ ಒಬ್ಬ ನೋಡಿಕೊಂಡು ಕೇಕೆ ಹಾಕಿದರು ಮುಗಿದುಹೋಯಿತು. ಸೈರನ್ ಸೀಟಿಗಳು ಶುರುವಾಯಿತೆಂದರೆ ಹೊರ ಬೀಳುವುದು ಅಸಾಧ್ಯ. ಎಷ್ಟು ಮೆತ್ತಗೆ ಬಾಗಿಲು ತೆಗೆದು ಹೊರಬಂದಿದ್ದನೋ ಅಷ್ಟೇ ಮೆತ್ತಗೆ ಬಾಗಿಲು ಭದ್ರ ಪಡಿಸಿದ. ಒಮ್ಮೆ ಗಾಢವಾದ ಉಸಿರೆಳೆದು ಎದೆಯಲ್ಲಿ ತುಂಬಿಕೊಂಡು ಕಣ್ಮುಚ್ಚಿ ನಿಂತ. ಯಾವುದೇ ಸಣ್ಣ ಸದ್ದೂ ಕೇಳುವಂತೆ ಕಿವಿಯನ್ನು ಶೃತಿ ಮಾಡಿಕೊಂಡ. ಎರಡು ಮೂರು ರೂಮಿನಿಂದ ಗೊರಕೆಯ ಸದ್ದು ಕೇಳಿಸುತ್ತಿತ್ತು. ದೂರದ ಇನ್ಯಾವುದೋ ರೂಮಿನಿಂದ ಕೈದಿಯೊಬ್ಬ ಕೆಮ್ಮಿದ ಸದ್ದು. ಅಷ್ಟು ಬಿಟ್ಟರೆ ಮತ್ತೆಲ್ಲ ನಿಶ್ಯಬ್ಧ. ಕಣ್ಣು ಬಿಟ್ಟು ವರಾಂಡದ ಉದ್ದಕ್ಕೂ ನೋಡಿದ. ಸಿಸಿಟಿವಿಯ ಯಾವುದೇ ಕುರುಹುಗಳು ಕಾಣಬಹುದೇ ಎಂದು. ಅಂತಹದ್ಯಾವುದೂ ಕಾಣಿಸಲಿಲ್ಲ. ಅವನನ್ನು ಒಳ ಕರೆದುಕೊಂಡು ಬರುವಾಗಿನ ಚಿತ್ರಣ ಕಣ್ಮುಂದೆ ಬಂತು. ಯಾವ ದಾರಿಯಲ್ಲಿ ನಡೆದರೆ ಮೇನ್ ಗೇಟ್ ಬಳಿ ಹೋಗಬಹುದು ಎಂಬ ಸ್ಪಷ್ಟ ಕಲ್ಪನೆ ಮೂಡಿದ ಮೇಲೆ ಗೋಡೆಗೆ ಕಚ್ಚಿಕೊಂಡ ಹಲ್ಲಿಯಂತೆ ಇಂಚಿಮಚಾಗಿ ಮುಂದೆ ಹೋಗತೊಡಗಿದ. ಹೊರಗಡೆ ಸೆಕೆಂಡ್ ಷೋ ಬಿಟ್ಟ ಸುಳಿವೆಂಬಂತೆ ಸಣ್ಣ ಗಲಾಟೆ ಶುರುವಾಯಿತು. 
ನಾನಂದುಕೊಂಡ ಘಳಿಗೆ ಬಂದು ಬಿಟ್ಟಿತು ಎಂದು ಹೊರಬೀಳುವ ಪ್ರಯತ್ನವನ್ನು ಮತ್ತಷ್ಟು ಜೋರಾಗಿಸಿದ ಶಾಸ್ತ್ರಿ..

Saturday, July 23, 2016

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 27

                                    ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 27

ಶಾಸ್ತ್ರಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟು ಅದಾಗಲೇ ಎರಡು ದಿನ ಕಳೆದು ಹೋಗಿತ್ತು. ಮೂರನೆಯ ದಿನ ಮಧ್ಯಾಹ್ನ ಶಾಸ್ತ್ರಿ ಕುಳಿತು ಯೋಚಿಸುತ್ತಿದ್ದ. "ನಾಳೆ ಮತ್ತೆ ತಾನು ಕೋರ್ಟಿಗೆ ಹೋಗಬೇಕು. ಈ ಬಾರಿ ಪ್ರಸಾದ್ ಸುಮ್ಮನಿರುವುದಿಲ್ಲ. ಸರೋವರಾ ನೀಡಿದ ಹೊಡೆತ ಸಣ್ಣದಲ್ಲ ಆತನಿಗೆ. ಅದಕ್ಕೆ ಸರಿಯಾದ ಪ್ರತ್ಯುತ್ತರಕ್ಕೆ ಆತ ಕಾಯುತ್ತಿರುತ್ತಾನೆ. ಮತ್ತೆ ಪೊಲೀಸರ ಅತಿಥಿ ಆಗುವುದು ಖಂಡಿತ.
ತಾನು ಒಮ್ಮೆ ಪ್ರತಾಪ್ ನ ಕೈಗೆ ಸಿಕ್ಕಿದರೆ ಮುಗಿಯಿತು, ಮತ್ತೆ ಮೇಲೇಳದಂತೆ ಮಾಡಿಬಿಡುತ್ತಾನೆ. ಪ್ರತಾಪ್ ನೀನು ಶಾಸ್ತ್ರಿಯೊಡನೆ ಸರಸವಾಡಬಾರದಿತ್ತು ಎಂದುಕೊಂಡ. ಸರೋವರಳ ಕೈ ಹಿಡಿಯುವಷ್ಟು ಧೈರ್ಯ ಬಂದಿದೆ ಎಂದರೆ..!? ಶಾಸ್ತ್ರಿ ಯಾರೆಂದು ನಿನಗೆ ತೋರಿಸುವ ಅಗತ್ಯವಿದೆ. ಸಮಯ ಸಂದರ್ಭ ತನಗೆ ಅವಕಾಶ ಕಲ್ಪಿಸಿಕೊಡುತ್ತಿಲ್ಲ. ಇನ್ನೊಂದು ಇಪ್ಪತ್ತು ತಾಸು.. ತಾನು ಮತ್ತೆ ಕೋರ್ಟಿನಲ್ಲಿ...
ಹಾಗಾಬಾರದು...!! ಹಾಗಾಗಬಾರದೆಂದರೆ ತಪ್ಪಿಸಿಕೊಳ್ಳಬೇಕು.. ಜೈಲಿನಿಂದ ತಪ್ಪಿಸಿಕೊಳ್ಳಬೇಕು. ತಾನು ಇದುವರೆಗೆ ಯಾವುದೇ ತಪ್ಪು ಮಾಡಿಲ್ಲ. ಅದನ್ನು ಕೋರ್ಟಿನಲ್ಲಿ ಸಾಬೀತು ಪಡಿಸಲಾದರೂ ತಾನು ತಪ್ಪಿಸಿಕೊಳ್ಳಬೇಕು. ಸಾಕ್ಷಿಗಳು ತನಗೆ ವಿರುದ್ಧವಾಗಿದೆ, ಪೊಲೀಸರೂ ತನ್ನ ಪರವಾಗಿಲ್ಲ. ಅದರ ಮೇಲಿಂದ ಘಟಾನುಘಟಿ ಲಾಯರ್. ಹೊರಬರುವುದು ಕಷ್ಟ. ಅದೇನು ಮಾಡಬೇಕೋ ಇಂದೇ ಮಾಡಬೇಕು. ತಪ್ಪಿಸಿಕೊಳ್ಳುವುದೇ ದಾರಿ ಎಂದಾದರೆ ಇದೆ ತನಗೆ ಸಿಗುವ ಕೊನೆಯ ರಾತ್ರಿ. ಎದ್ದು ಆಕಡೆ ಈಕಡೆ ಓಡಾಡ ತೊಡಗಿದ ಶಾಸ್ತ್ರಿ. ತಪ್ಪಿಸಿಕೊಳ್ಳುವ ಯೋಚನೆ ಇಂದು ಮೂಡಿದ್ದಲ್ಲ ಶಾಸ್ತ್ರಿಗೆ!!
ಮೊದಲ ದಿನ ಸರೋವರಾ ಬಂದಾಗ ಅವರಿಬ್ಬರೂ ಸೇರಿ ಕೋರ್ಟಿನಲ್ಲಿ ಹೇಗೆ ವಾದ ಮಾಡಬೇಕೆಂದು ಚರ್ಚಿಸಿದ್ದರು. ಎರಡು ತಾಸಿನ ಮೇಲೂ ಅವರಿಬ್ಬರಿಗೆ ಯಾವುದೇ ದಾರಿ ಕಾಣದ್ದರಿಂದ ಶಾಸ್ತ್ರಿಗೆ ತಿಳಿದುಹೋಗಿತ್ತು ತಾನು ಹೊರಬೀಳದೆ ತನ್ನ ಹಿಂದೆ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಸಾಧ್ಯವಿಲ್ಲ. ಹೇಗಾದರೂ ಹೊರಹೋಗಬೇಕು. ತಪ್ಪು ಮಾಡಿಲ್ಲ ಎಂದು ತೋರಿಸಲಾದರೂ ಹೊರಬೀಳಬೇಕು. ನಿಜವಾದ ಸಂಚನ್ನು ಕಂಡುಹಿಡಿದರೆ ತಾನು ಜೈಲಿನಿಂದ ತಪ್ಪಿಸಿಕೊಂಡಿದ್ದಕ್ಕೆ ಶಿಕ್ಷೆಯಾಗುವುದಿಲ್ಲವೇನೋ? ಆದರೂ ಅದರ ಪ್ರಮಾಣ ಕಡಿಮೆ. ಹಾಗಾಗಿ ಇನ್ನೆರಡು ದಿನದಲ್ಲಿ ಮತ್ತೇನಾದರೂ ಯೋಚನೆ ಬಂದರೆ ಅದನ್ನು ಆಲೋಚಿಸಬಹುದು. ಅದಾಗದೆ ಹೋದಲ್ಲಿ ಮೂರನೇ ದಿನ ತಪ್ಪಿಸಿಕೊಳ್ಳಬೇಕು. ಆ ಯೋಚನೆ ಬರುತ್ತಲೇ ಹೊರಟು ನಿಂತ ಸರೋವರಳನ್ನು ನಾಳೆ ಒಮ್ಮೆ ಗಾಳಿಗುಡ್ಡನ ಭೇಟಿ ಮಾಡಿಸು ಎಂದಷ್ಟೇ ಹೇಳಿದ. ಅವನ ಮನಸ್ಸಿನಲ್ಲಿ ಬಂದ ಯೋಚನೆ ಹೇಳಿದ್ದರೆ ಅವಳು ಖಂಡಿತ ಒಪ್ಪಲಾರಳು. ಅವಳದೇನಿದ್ದರೂ ಸಾತ್ವಿಕ ಮಾರ್ಗ. ನನ್ನದು ಅದೇ ಮಾರ್ಗವೇ.. ಆದರೆ ಸಮಯ ಈಗ ಅದಕ್ಕೆ ಬೆಲೆ ನೀಡುತ್ತಿಲ್ಲ. ನೋಡೋಣ ಏನಾಗುತ್ತದೆ ಎಂದುಕೊಂಡಿದ್ದ.
ಮರುದಿನ ಗಾಳಿಗುಡ್ಡ ಶಾಸ್ತ್ರಿಯನ್ನು ಭೇಟಿ ಮಾಡಿದ್ದ. "ಏನು ಶಾಸ್ತ್ರಿ, ಹೀಗೆ ಮಾಡಿಕೊಂಡೆ? ಅಂದು ನಿನಗೆ ಬೇಲ್ ಸಿಕ್ಕಿತ್ತು. ಸುಮ್ಮನೆ ನಮ್ಮನ್ನು ವಾಪಸ್ ಕಳುಹಿಸಿ ಸಿಕ್ಕಿಹಾಕಿಕೊಂಡೆಯಲ್ಲ.."
"ತಲೆಯಾಡಿಸಿದ ಶಾಸ್ತ್ರಿ, "ಹೌದು, ಗಾಳಿಗುಡ್ಡ ಅವ್ರೇ, ಇದು ಹೀಗಾಗುತ್ತದೆ ಎಂದು ನನಗೂ ತಿಳಿದಿರಲಿಲ್ಲ. ಇದರಲ್ಲಿ ಏನೋ ಷಡ್ಯಂತ್ರ ಇದೆ. ನನಗೊಂದು ಕೆಲಸವಾಗಬೇಕಿದೆ. ಇದರಲ್ಲಿ ಸ್ವಲ್ಪ ರಿಸ್ಕ್ ಇದೆ. ನಿಮ್ಮನ್ನು ತೊಂದರೆಯಲ್ಲಿ ದೂಡಿದಂತೆ ಆಗುತ್ತದೆ. ಇದೊಂದು ಬಾರಿ ನನ್ನ ಜೊತೆ ನೀಡಿ. ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ" ಎಂದ ಶಾಸ್ತ್ರಿ.
"ಅದೇನು ಹೇಳು ಶಾಸ್ತ್ರಿ, ನನ್ನ ಕೈಲಾಗುವಂತದ್ದಾಗಿದ್ದರೆ ಖಂಡಿತ ಮಾಡುತ್ತೇನೆ."
ಸ್ವಲ್ಪ ಹತ್ತಿರ ಬನ್ನಿ ಎನ್ನುವಂತೆ ಸನ್ನೆ ಮಾಡಿದ ಶಾಸ್ತ್ರಿ, ಗಾಳಿಗುಡ್ಡನ ಕಿವಿಯಲ್ಲಿ ತನಗೆ ಬಂದ ಉಪಾಯ ಹೇಳಿ ಮುಗಿಸಿದ. ಅದನ್ನು ಕೇಳಿದ ಕೆಲವು ಕ್ಷಣ ಸುಮ್ಮನೆ ನಿಂತೆ ಇದ್ದ ಗಾಳಿಗುಡ್ಡ.
"ಶಾಸ್ತ್ರಿ, ನೀನು ಮಾಡಿರುವ ಉಪಾಯದಲ್ಲಿ ಅಪಾಯವೇ ಹೆಚ್ಚಿದೆ. ಜೈಲಿನಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಅದೂ ಎರಡೇ ದಿನದಲ್ಲಿ ಜೈಲಿನ ಬಗ್ಗೆ ತಿಳಿದುಕೊಂಡು ಎಸ್ಕೇಪ್ ಪ್ಲಾನ್ ಮಾಡುವುದು ಇನ್ನು ಕಷ್ಟ. ಇನ್ನೊಮ್ಮೆ ಯೋಚಿಸು. ಅದೂ ಅಲ್ಲದೆ ರಾತ್ರಿ ಯಾರಾದರೂ ತಪ್ಪಿಸಿಕೊಳ್ಳಲು ನೋಡಿ ಸಿಕ್ಕಿಬಿದ್ದರೆ Shoot at site order ಇರುತ್ತದೆ. ನೀನ್ಯಾರು ಎಂದು ಯಾರೂ ಕೇಳುವುದಿಲ್ಲ. ಗುಂಡು ಹಾರಿಸಿ ಬಿಡುತ್ತಾರೆ. ಅದಕ್ಕೆ ಇದು ಪೀಕಲಾಟ ತರುವ ಕೆಲಸದಂತೆ ತೋರುತ್ತದೆ ನನಗೆ.." ಎಂದು ತಲೆ ಕೆರೆದುಕೊಂಡ ಗಾಳಿಗುಡ್ಡ.
"ನೀವು ಹೇಳುವುದು ಸರಿಯೇ ಗಾಳಿಗುಡ್ಡ ಅವ್ರೇ, ಅದು ಪ್ಲಾನ್ ಬಿ ಅಷ್ಟೇ. ಇನ್ನೆರಡು ದಿನದಲ್ಲಿ ನಮಗೆ ಇನ್ನೇನಾದರೂ ಉಪಾಯ ಸಿಗಬಹುದು. ಅದಾಗದಿದ್ದರೆ ಕಷ್ಟ. ಒಮ್ಮೆ ವಿಚಾರಿಸಿ ನೋಡಿ. ಯಾರಿದ್ದಾದರೂ ಕೈ ಬಿಸಿ ಮಾಡಿದರೆ ಏನಾದರೂ ಕೆಲಸ ಆಗುತ್ತದೆಯಾ ಎಂದು.."
ಇಲ್ಲದ ಮನಸ್ಸಿನಿಂದಲೇ ತಲೆಯಾಡಿಸುತ್ತಾ ಹೊರನಡೆದ ಗಾಳಿಗುಡ್ಡ.
ಶಾಸ್ತ್ರಿಗೂ ಗೊತ್ತು ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವಕ್ಕೇ ಅಪಾಯ. ಗಾಳಿಗುಡ್ಡನನ್ನು ಜೈಲಿಗೆ ಹಾಕಲೂಬಹುದು. ಖೈದಿಯೊಬ್ಬ ತಪ್ಪಿಸಿಕೊಳ್ಳಲು ಸಹಾಯ ಕೇಳುತ್ತಿದ್ದಾನೆ ಎಂದು. ಸಹಾಯ ಮಾಡಿ ಎಂದು ಪೊಲೀಸರನ್ನು ಕೇಳುವುದು ಮೂರ್ಖತನ. ಆದರೂ ರಿಸ್ಕ್ ತೆಗೆದುಕೊಳ್ಳಲೇಬೇಕು.
ಮರುದಿನ ಗಾಳಿಗುಡ್ಡ ಸಪ್ಪೆ ಮೊರೆ ಹಾಕಿಕೊಂಡು ಬಂದಿದ್ದ. "ಶಾಸ್ತ್ರಿ, ನನ್ನ ಪ್ರಯತ್ನ ನಾನು ಮಾಡಿದೆ ಅದು ಸಫಲವಾಗಲಿಲ್ಲ. ರಾತ್ರಿ ಕಾವಲಿರುವವರು ದಿನವೂ ಬದಲಾಗುತ್ತಾರೆ. ರಾತ್ರಿ ಪಾಳಿ ಯಾರದೆಂದು ಪೊಲೀಸರಿಗೆ ತಿಳಿಯುವುದು ಎರಡು ಘಂಟೆ ಮೊದಲು ಮಾತ್ರ. ರಾತ್ರಿ ಕೂಡ ಸಾಲಾಗಿ ನಾಲ್ಕು ಪಾಳಿ. ಮೂರು ಘಂಟೆಗೊಮ್ಮೆ ಬದಲಾಗುತ್ತಾರೆ. ಅದಲ್ಲದೆ ಜೈಲಿನಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದು ಇಡೀ ಜೈಲಿನ ಚಲನವಲನಗಳನ್ನು ಗಮನಿಸುತ್ತಿರಲು ಒಬ್ಬ 24*7 ಕುಳಿತುಕೊಂಡಿರುತ್ತಾನೆ. ತಪ್ಪಿಸಿಕೊಳ್ಳುವ ಯೋಚನೆ ಬಿಟ್ಟು ಬಿಡು ಶಾಸ್ತ್ರಿ. ಇನ್ನೇನಾದರೂ ನೋಡು.." ಎಂದು ಹೊರ ನಡೆದಿದ್ದ ಗಾಳಿಗುಡ್ಡ.
ಶಾಸ್ತ್ರಿಗೆ ತಾನೇಕೋ ಸೋತು ಹೋದೆ ಎನ್ನಿಸಿತು ಆ ಕ್ಷಣದಲ್ಲಿ.
ಶಾಸ್ತ್ರಿ ಶತಪಥ ಹಾಕುವುದನ್ನು ಮುಂದುವರೆಸಿಯೇ ಇದ್ದ. ಸರೋವರಾ ಇನ್ನೂ ಬಂದಿರಲಿಲ್ಲ. ಬಂದರೂ ಅವಳೇನು ತಾನೇ ಮಾಡಬಲ್ಲಳು? ಸಮಾಧಾನದ ಮಾತುಗಳಷ್ಟೇ. ಅವಳ ಕೈಲಾದ ಸಹಾಯ ಈಗಾಗಲೇ ಮಾಡಿದ್ದಾಳೆ. ನಾಳೆಯು ಕೂಡ ಕೋರ್ಟಿನಲ್ಲಿ ಏನಾದರೂ ಪವಾಡ ನಡೆಯಬೇಕಷ್ಟೆ!! ಎಂದುಕೊಂಡ ಶಾಸ್ತ್ರಿ.
ಮಧ್ಯಾಹ್ನವಾದರೂ ಸರೋವರಾಳ ಸುಳಿವಿಲ್ಲ. ಜೈಲಿನ ಊಟ ಬಂತು. ಮಹಾರಾಷ್ಟ್ರ ಸ್ಪೆಷಲ್ ಪಾವ್ ವಡಾ. ಹೊಟ್ಟೆ ಹಸಿದಿತ್ತು. ಪ್ಲೇಟ್ ಕೈಗೆತ್ತಿಕೊಂಡ. ತಣಿದ ಪಾವ್. ಗಟ್ಟಿಯಾದ ವಡಾ. ಗಂಟಲಲ್ಲಿ ಇಳಿಯಲಿಲ್ಲ. ಹಸಿವು ಕೂಗುತ್ತಿದ್ದರೆ ಇಳಿಸಬೇಕಾಗುತ್ತದೆ. ಮೂಲೆಯಲ್ಲಿದ್ದ ಚೊಂಬಿನಿಂದ ನೀರು ಕುಡಿಯುತ್ತಾ ಆವಿಷ್ಟನ್ನು ತಿಂದು ಮುಗಿಸಿದ. ಏಕೋ ಏನೋ ಎಲ್ಲವೂ ಮುಗಿಯಿತು ಎಂದೆನ್ನಿಸಿಬಿಟ್ಟಿತು. ಪಕ್ಕದಲ್ಲಿದ್ದ ಮರದ ಬೆಂಚಿನ ಮೇಲೆ ಮಲಗಿ ನಿದ್ರೆ ಹೋದ.
ಶಾಸ್ತ್ರಿ.. ಶಾಸ್ತ್ರಿ.. ಸರೋವರಾಳ ಧ್ವನಿ. ಕನಸಿನಲ್ಲಿ ಕರೆದಂತಿತ್ತು ಆತನಿಗೆ. ಮತ್ತೆರಡು ಬಾರಿ ಶಾಸ್ತ್ರೀ.. ಶಾಸ್ತ್ರಿ.. ಎನ್ನುತ್ತಲೇ ನಿದ್ರೆಯ ಅಮಲಿನಿಂದ ಹೊರಬಂದ. ಹೊರಗೆ ಸರೋವರಾ ನಿಂತಿರುವುದು ಕಂಡಿತು. ಗಂಟೆ ಎಷ್ಟಾಗಿದೆಯೋ ತಿಳಿಯಲಿಲ್ಲ. ಇಂತಹ ಸಂಕಟದಲ್ಲಿಯೂ ಅದ್ಹೇಗೆ ಇಷ್ಟು ಸುಖ ನಿದ್ರೆ ಬಂದಿತೆಂದು ಅರ್ಥವಾಗಲಿಲ್ಲ. ಬಾಗಿಲ ಬಳಿ ಬಂದು ನಿಂತ ಸರೋವರಾಳ ಬಳಿ ಕೋಣೆಯ ಬೀಗದ ಕೈ ಇತ್ತು. ತೆಗೆದು ಒಳ ಬಂದಳು. ದಿನವೂ ಅವಳ ಜೊತೆ ಇನ್ಯಾರಾದರೂ ಬಂದು ಬಾಗಿಲು ತೆಗೆದು ಕೊಟ್ಟು ಹೊರಗಿನಿಂದ ಲಾಕ್ ಮಾಡಿ ಹೋಗುತ್ತಿದ್ದರು. ಇಂದು ಅವಳೊಬ್ಬಳೆ ಬಂದಿದ್ದಳು. ಅಷ್ಟು ಸ್ನೇಹ ಸಂಪಾದಿಸಿದ್ದಳು ಹೊರಗಿನ ಜೈಲರ್ ಜೊತೆ ಅವಳು.
"ಶಾಸ್ತ್ರಿ, ಏನಾದರೂ ಹೊಳೆಯಿತಾ? ನನಗಂತೂ ಏನು ಮಾಡಬೇಕೆಂದು ತೋಚುತ್ತಿಲ್ಲ. ನಾಳೆ ಮತ್ತೆ ಕೋರ್ಟಿಗೆ ಹಾಜರಾಗಬೇಕು. ಈ ಮೂರು ದಿನದಲ್ಲಿ ನಾವು ಸಂಪಾದಿಸಿದ್ದಾದರೂ ಏನು?"
ಅಡ್ಡಡ್ಡ ತಲೆಯಾಡಿಸಿದ ಶಾಸ್ತ್ರಿ. "ಈ ಜೈಲೆಂಬ ಕೋಟೆಯಲ್ಲಿ ಕುಳಿತು ಏನು ಯೋಚನೆ ಮಾಡಲಿ ನಾನು? ಇನ್ನೇನಾದರೂ ನಾ ನಿನ್ನನ್ನೇ ನಂಬಿದ್ದೇನೆ. ನಾಳೆ ನಿನ್ನ ವಾದದ ಮೇಲೆ ನನ್ನ ಬದುಕು." ಎಂದು ನಿಡುಸುಯ್ದು ಆಕೆಯ ಮುಖ ನೋಡಿದ. ಅದೇನೋ ಇಬ್ಬರಿಗೂ ಒಮ್ಮೆಲೇ ನಗು ಬಂತು. ಇಬ್ಬರು ಮನಸಾರೆ ನಕ್ಕರು.
"ಮುಂದೆ??" ಎಂದ ಶಾಸ್ತ್ರಿ.
"ಮದುವೆ.. ಮಕ್ಕಳು.."
ಮಗನಿಗೆ ನನ್ನ ಹೆಸರಿಡಲು ಮರೆಯಬೇಡ.."
ಮತ್ತಿಬ್ಬರು ಒಟ್ಟಿಗೆ ನಕ್ಕರು. ಹತಾಶೆಯ ಕೊನೆಯ ಹಂತವದು. ಅಳಲಾರದೆ ಹೀಗೆ ನಗುತ್ತಿದ್ದೇವೆ ಎಂಬುದು ಇಬ್ಬರಿಗೂ ಗೊತ್ತು.
ಅದೆಷ್ಟೋ ನಗೆ ಚಟಾಕಿಗಳು ಹಾದು ಹೋದವು ಇಬ್ಬರ ನಡುವೆ. ಇದೇ ಅವರಿಗೆ ಸಿಗುವ ಕೊನೆಯ ಕ್ಷಣಗಳೇನೋ ಎಂಬಂತೆ ಮಾತನಾಡುತ್ತಲೇ ಉಳಿದರು. ಸಮಯ ಅವರ ಮಾತಿಗಿಂತಲೂ ವೇಗವಾಗಿ ಕಳೆದಿತ್ತು.
ಜೈಲರ್ ಬಂದು ಟೈಮಾಯಿತೆಂದು ಸೂಚನೆ ಕೊಡುವ ಮುನ್ನವೇ ಅವಳು ಹೊರಟು ನಿಂತಿದ್ದಳು.
"ಶಾಸ್ತ್ರಿ, ಮುಂದೇನಾಗುತ್ತದೋ ನಾ ಕಾಣೆ. ನಿನ್ನನ್ನು ನಾನು ನಂಬುತ್ತೇನೆ ಮತ್ತು ನಿನ್ನ ಜೊತೆ ಯಾವಾಗಲೂ ನಾನಿರುತ್ತೇನೆ ಎಂಬುದನ್ನು ಮರೆಯಬೇಡ." ಗಟ್ಟಿಯಾಗಿ ತಬ್ಬಿಕೊಂಡಳು. ಅವಳ ಕೈಲಿದ್ದ ಕರವಸ್ತ್ರವನ್ನು ಶಾಸ್ತ್ರೀಯ ಕೈಲಿ ತುರುಕಿದಳು. ಆಕೆ ಹಾಗೇಕೆ ಮಾಡುತ್ತಿದ್ದಾಳೆ ಎಂದು ತಿಳಿಯದಿದ್ದರೂ ಕರವಸ್ತ್ರವನ್ನು ಸುಮ್ಮನೆ ಕೈಗಳಲ್ಲಿ ಅಡಗಿಸಿಕೊಂಡ ಶಾಸ್ತ್ರಿ. ಹಣೆಗೆ ಒಂದು ಮುತ್ತಿಟ್ಟು ಅವನಿಂದ ದೂರ ಸರಿದಳು ಸರೋವರಾ.
ಅವಳ ಕಣ್ಣಿನಲ್ಲಿ ನೀರು ತುಂಬಿದ್ದನ್ನು ಶಾಸ್ತ್ರಿ ಗಮನಿಸದೆ ಇರಲಿಲ್ಲ. "ಅತ್ತು ಸಾಧಿಸುವುದಾದರೂ ಏನು"? ಎಂದು ಕೇಳಬೇಕೆಂದುಕೊಂಡ. ಅವನ ಮಾತು ಅವನೊಳಗೆ ಉಳಿದುಹೋಯಿತು.
ಹಿಂದೆ ತಿರುಗಿ ನೋಡದೆ ಹೊರನಡೆದು ಬಿಟ್ಟಳು ಸರೋವರಾ.
ಶಾಸ್ತ್ರೀಯ ಮನಸ್ಸು ಭಾರವಾಗಿತ್ತು. ಕರವಸ್ತ್ರ ತನ್ನ ಕೈಲಿರುವುದು ನೆನಪಾಯಿತು. ಮೂಲೆಗೆ ಹೋಗಿ ಗೋಡೆಯ ಬದಿ ಮುಖ ಮಾಡಿಕೊಂಡು ಕರವಸ್ತ್ರ ಬಿಚ್ಚಿ ನೋಡಿದ. ಅಚ್ಚ ಬಿಳಿಯ ಕರವಸ್ತ್ರ. ಎರಡು ಕಡೆ ತಿರುಗಿಸಿ ನೋಡಿದ. ಹೇಳಿಕೊಳ್ಳುವಂತದ್ದು ಏನು ಕಂಡು ಬರಲಿಲ್ಲ. ಏನಾದರೂ ಬರೆದಿರುವುದಾ ಎಂದು ಸೂಕ್ಷ್ಮವಾಗಿ ಗಮನಿಸಿದ. ನೋ! Nothing. ಬಿಳಿಯ ಕರವಸ್ತ್ರವಷ್ಟೇ. ಇದನ್ನು ತನಗೇತಕ್ಕೆ ಕೊಟ್ಟು ಹೋದಳು ಎಂಬುದರ ಅರಿವಾಗಲಿಲ್ಲ. ಹುಡುಗಿಯರು ಮೂಡಿಯಾದರೆ ಏನನ್ನು ಬೇಕಾದರೂ ಮಾಡಬಲ್ಲರು ಎಂದು ಖರ್ಚಿಫನ್ನು ಚಾದರದ ಒಳಗೆ ಇಟ್ಟು ದಿಕ್ಕು ನೋಡುತ್ತಾ ಕುಳಿತ ಶಾಸ್ತ್ರಿ.
*...................................................*...................................................*
ಸ್ವಯಂವರಾ ಬೆಳಿಗ್ಗೆ ಬೇಗನೆ ಎದ್ದು ಬೆಚ್ಚನೆಯ ನೀರಿನಲ್ಲಿ ಅರ್ಧ ಘಂಟೆ ಬಾತ್ ಟಬ್ ನಲ್ಲಿ ಮುಳುಗಿ ಕುಳಿತಳು. ಹಳದಿ ಮಿಶ್ರಿತ ಬಿಳುಪು ಮೈ ಬಣ್ಣ ಅವಳದು. ನೀಳ ಕಾಲುಗಳು.. ಅಷ್ಟೇ ನೀಳ ಕೈಗಳು.. ಉದ್ದನೆಯ ಮೆತ್ತನೆಯ ಕೈ ಬೆರಳುಗಳು.. ತನ್ನ ಸೌಂದರ್ಯವನ್ನು ತಾನೇ ಮೆಚ್ಚಿಕೊಂಡಳು ಸ್ವಯಂವರಾ. ನೀರಿನ ಜೊತೆ ಚೆಲ್ಲಾಟ ಅವಳ ಮನಸ್ಸಿಗೆ ಅದೆಷ್ಟೋ ಸಮಾಧಾನ ನೀಡಿತು.
ನೀರಿನಿಂದ ಮೇಲೆದ್ದು ಬೆಡ್ ರೂಮ್ ಹೋಗಿ ಕನ್ನಡಿಯೆದುರು ನಿಂತಳು. ತಾನೇ ನಾಚಿ ನೀರಾದಳು ಒಮ್ಮೆ. ಒಂದು ಕಣ್ಣನ್ನು ತನ್ನ ಕೈಯಿಂದ ಮುಚ್ಚಿ ಇನ್ನೊಂದು ಕಣ್ಣಿನಿಂದ ತನ್ನ ದೇಹ ನೋಡಿಕೊಂಡಳು. ಲಜ್ಜೆ ಅವಳ ಮುಖದಲ್ಲಿ ಕೆಂಪನ್ನು ಮೂಡಿಸಿತು. ನೀರಿನ ಹನಿಗಳು ಅವಳ ಮೈಯಲ್ಲಿ ಎಲ್ಲಿ ಬೇಕೆಂದರಲ್ಲಿ ತಬ್ಬಿ ನಿಂತಿದ್ದವು. ಅವಳ ಮುಂಗುರುಳಿನಿಂದ ಇಳಿದ ಮುತ್ತಿನ ಹನಿಯೊಂದು ಅವಳ ಕೊರಳನ್ನು ಬಳಸಿ ಎದೆಯ ಗುಳಿಯಲ್ಲಿ ಇಳಿದು ಆಟವಾಡಿ ಮಾಯವಾಯಿತು.
ಇನ್ನು ಸಾಕೆಂಬಂತೆ ಕನ್ನಡಿಯಿಂದ ದೂರವಾಗಿ ಮೈ ಒರೆಸಿಕೊಂಡು ಕಪಾಟಿನಲ್ಲಿದ್ದ ಡ್ರೆಸ್ ಬಳಿ ನಡೆದಳು. ಇವತ್ತು ಕ್ಷಾತ್ರನನ್ನು ಭೇಟಿಯಾಗಿ ತನ್ನ ಒಪ್ಪಿಗೆ ಸೂಚಿಸಬೇಕು ಎಂದು ಅವಳು ನಿರ್ಧರಿಸಿದ್ದಳು. ಮೊದಲು ಆಸ್ಪತ್ರೆಗೆ ಹೋಗಿ ನಂತರ ಕ್ಷಾತ್ರನನ್ನು ಭೇಟಿಯಾಗಲೇ ಅಥವಾ ಕ್ಷಾತ್ರನನ್ನು ಭೇಟಿಯಾಗಿ ನಂತರ ಆಸ್ಪತ್ರೆಗೆ ಹೋಗಲೇ? ಎಂದು ಯೋಚಿಸುತ್ತಿತ್ತು ಅವಳ ಮನ.
ಯಾವುದೇ ಡ್ರೆಸ್ ಕೈಯಲ್ಲಿ ಹಿಡಿದರೂ ಯಾಕೋ ಸರಿ ಎನ್ನಿಸುತ್ತಿಲ್ಲ. ನಿನ್ನೆ ರಾತ್ರಿಗೂ ಇಂದಿಗೂ ಅದೆಷ್ಟು ಬದಲಾವಣೆ ತನ್ನಲ್ಲಿ ಎಂದೆನ್ನಿಸಿತು. ತಂದು ಹಾಕದೆ ಹಾಗೆಯೇ ಇಟ್ಟಿದ್ದ White ಸಲ್ವಾರ್ ಕಮೀಜ್ ಕಣ್ಣಿಗೆ ಬಿತ್ತವಳಿಗೆ. ಅದನ್ನು ತಂದು ಕನ್ನಡಿಯ ಮುಂದೆ ತನ್ನೆದುರು ಹಿಡಿದು ನೋಡಿಕೊಂಡಳು. ಇದನ್ನು ತೊಟ್ಟರೆ ಹೂವಿನ ಬುಟ್ಟಿಯಲ್ಲಿರುವ ಲಿಲ್ಲಿ ಹೂಗಳಂತೆ ಕಾಣುತ್ತೇನೆ ಎಂದೆನ್ನಿಸಿತು.
ತಡ ಮಾಡದೆ ಅದನ್ನು ಧರಿಸಿಕೊಂಡಳು. ಸಲ್ವಾರ್ ನ ಕುತ್ತಿಗೆಯ ಕೆಳ ಭಾಗದಲ್ಲಿಆಕಾಶನೀಲಿ ಬಣ್ಣದ ಎರಡು ಹೂವುಗಳು.. ಅದರ ಸುತ್ತಲೂ ಅಲಂಕರಿಸಲ್ಪಟ್ಟ ಪುಟ್ಟ ಪುಟ್ಟ ಕನ್ನಡಿಗಳ ಸಾಲು.. ಮುಗುಳ್ನಗೆ ಮೂಡಿತು.
ಬಟ್ಟೆಗೆ ಒಪ್ಪುವಂಥ ಎರಡು ನೀಲಿ ಬಣ್ಣದ ಬಳೆಗಳನ್ನು ಹಾಕಿಕೊಂಡು ಮತ್ತೊಂದು ಕೈಗೆ ಬಿಳಿ ಬಣ್ಣದ ಬೆಲ್ಟ್ ಇರುವ ವಾಚ್ ಕಟ್ಟಿಕೊಂಡಳು. ತಾನು ಯಾವತ್ತೂ ಹಾಕದಿರುವ ಇಯರ್ ರಿಂಗ್ ಹಾಕಿಕೊಂಡಳು. ಪುಟ್ಟ ಪುಟ್ಟ ವಜ್ರದ ಹರಳುಗಳಿದ್ದ ಇಯರ್ ರಿಂಗ್ ಅವಳ ಮುಖದಂತೆ ಹೊಳೆಯುತ್ತಿತ್ತು. ತುಂಬಿದ ಕೆನ್ನೆಗಳಿಗೆ ಹೌದೋ ಅಲ್ಲವೋ ಎಂಬಷ್ಟು ತೆಳ್ಳಗೆ ರೋಸ್ ಹಚ್ಚಿಕೊಂಡಳು. ಕಪ್ಪನೆಯ ಕಣ್ಣುಗಳಿಗೆ ಕಾಡಿಗೆ ಹಚ್ಚುವ ಅವಶ್ಯಕತೆಯೇ ಇರಲಿಲ್ಲ.
ತುಟಿಯ ಮೇಲೆ ಸುಮ್ಮನೆ ಒಮ್ಮೆ ನಾಲಿಗೆ ಆಡಿಸಿಕೊಂಡಳು. ಲಿಪ್ ಸ್ಟಿಕ್ ತನಗೆ ಶೋಭೆಯಲ್ಲ ಸಾಕಿಷ್ಟು ಎಂದು ಫೋನ್ ಎತ್ತಿಕೊಂಡು ಕ್ಷಾತ್ರನಿಗೆ ಫೋನ್ ಮಾಡಿದಳು.
"ಕ್ಷಾತ್ರ ನಾನಿಂದು ನಿನಗೆ ಸಿಗಬೇಕು. ಮಾತನಾಡುವುದಿದೆ. ಎಷ್ಟು ಹೊತ್ತಿಗೆ ಫ್ರಿ ಇರುವೆ??"
"Is something special!? ನಿಮಗಾಗಿ ನಾನು ಯಾವಾಗಲೂ Free ನೇ ಮೇಡಂ..!" ಎಂದ ಕ್ಷಾತ್ರ.
ನಗು ಬಂತು ಸ್ವಯಂವರಾಳಿಗೂ. "ಸರಿ ಹಾಗಾದರೆ ನಾ ನಿನಗೆ ಮೆಸೇಜ್ ಮಾಡುತ್ತೇನೆ. ಎಲ್ಲಿ ಸಿಗಬೇಕೆಂದು ಹೇಳು ಸಿಗೋಣ ಬೈ.." ಎಂದಳು.
ಕ್ಷಾತ್ರನು ಬೈ ಎಂದು ಕಾಲ್ ಕಟ್ ಮಾಡಿದ.
ವ್ಯಾನಿಟಿ ಬ್ಯಾಗ್ ಹಿಡಿದು ಹೊರ ಹೊರಟಳು ಸ್ವಯಂವರಾ.
ಅವಳಿಗಾಗಿ ಹೊರಗೆ ಬಾಷಾ ಕಾಯುತ್ತಿದ್ದ್ದಾನೆ ಎಂಬ ಸಣ್ಣ ಸುಳಿವೂ ಸಹ ಆಕೆಗಿರಲಿಲ್ಲ. ಕ್ಷಾತ್ರನಿಗೂ ಕೂಡ..
*...............................................*........................................*
ರಾತ್ರಿ ಹತ್ತು ಗಂಟೆಯಾಗಿತ್ತು. ಅಷ್ಟು ಹೊತ್ತಿಗೆಲ್ಲ ಜೈಲಿನಲ್ಲಿ ಊಟ ಮುಗಿದು ಪೇದೆಯೊಬ್ಬ ಎಲ್ಲ ಸೆಲ್ ನಲ್ಲಿರುವ ಕೈದಿಗಳನ್ನು ನೋಡಿಕೊಂಡು ಹೋದ ಮೇಲೆ ಲೈಟ್ ಆರಿಸಿಬಿಡುತ್ತಾರೆ. ಅಲ್ಲಲ್ಲಿ ಕೆಲವು ಟ್ಯೂಬ್ ಲೈಟ್ ಗಳು ಮಾತ್ರ ಉರಿಯುತ್ತಿರುತ್ತವೆ. ಅದು ಬಿಟ್ಟರೆ ರಸ್ತೆಗಳಲ್ಲಿನ ಬೀದಿ ದೀಪಗಳು. ಮೇನ್ ಗೇಟ್ ಹಾಗೂ ಎತ್ತರದ ಕಾಂಪೌಂಡ್ ನ ನಾಲ್ಕು ಮೂಲೆಗಳಲ್ಲೇ ಪಹರೆಗೆ ನಿಲ್ಲುವವರ ಬಳಿ ಒಂದೊಂದು ಲೈಟ್ ಉರಿಯುತ್ತಿರುತ್ತದೆ. ದೊಡ್ಡದಾದ ಸರ್ಚ್ ಲೈಟ್ ಒಂದು ಸುತ್ತಲೂ ಓಡಾಡಿಕೊಂಡಿತ್ತು. ಹತ್ತು ಗಂಟೆ ಆಯಿತೆಂಬಂತೆ ಪೇದೆ ಶಾಸ್ತ್ರೀಯ ಸೆಲ್ ನ ಎದುರು ಹಾದು ಹೋದ. ಇನ್ನು ನಾಳೆ ಬೆಳಿಗ್ಗೆ ಸೂರ್ಯೋದಯ ತನ್ನ ಬದುಕಿನಲ್ಲಿ ಎಂತಹ ಆಟವಾಡುತ್ತದೆಯೋ ಎಂದುಕೊಂಡು ಮಲಗಲು ತಯಾರಾದ ಶಾಸ್ತ್ರಿ. ಅಷ್ಟರಲ್ಲಿ ಲೈಟ್ ಆಫ್ ಆಯಿತು. ಬೆಳಕಿಗೆ ಹೊಂದಿಕೊಂಡಿದ್ದ ಶಾಸ್ತ್ರಿಯ ಕಣ್ಣುಗಳು ಒಮ್ಮೆಲೇ ಕತ್ತಲಾವರಿಸಿದ್ದರಿಂದ ಏನು ಕಾಣದಂತೆ ಗಾಡಾಂಧಕಾರವಾಯಿತು. ಆ ಹೊತ್ತಿನಲ್ಲಿ ಆತ ಚಾದರ ಕೊಡವಿ ಹೊದೆಯಲು ರೆಡಿಯಾಗುತ್ತಿದ್ದ. ಅಷ್ಟರಲ್ಲಿ ನೆಲದ ಮೇಲೆ ಏನೋ ಹೊಳೆದಂತಾಯಿತು. ಸ್ವಯಂವರಾ ಕೊಟ್ಟ ಕರ್ಚಿಫ್ ಮರೆತು ಹೋಗಿತ್ತು ಅವನಿಗೆ. ಏನೆಂದು ನೋಡಿದಾಗ ಅದೇ ಕರವಸ್ತ್ರ.
ಪಟ್ಟನೆ ಕರವಸ್ತ್ರ ತೆಗೆದುಕೊಂಡು ಏನೆಂದು ನೋಡಿದ. ಹಗಲಿನಲ್ಲಿ ಎಷ್ಟು ನೋಡಿದರೂ ಏನೂ ಕಾಣದ ಕರವಸ್ತ್ರದ ಮೇಲೆ ಈಗ ಸ್ಪಷ್ಟವಾಗಿ ಹೊಳೆಯುವ ಅಕ್ಷರಗಳು. ಸರೋವರಾ ರೇಡಿಯಂ ಪೆನ್ ಉಪಯೋಗಿಸಿ ಬರೆದಿದ್ದಾಳೆ..!!
"ಇಂದು ರಾತ್ರಿ.. ಕಬಾಲಿ.. ಸೆಕೆಂಡ್ ಶೋ.."
ಒಮ್ಮೆಲೇ ಏನೂ ಅರ್ಥವಾಗಲಿಲ್ಲ ಶಾಸ್ತ್ರಿಗೆ. ಇದನ್ನೇಕೆ ನನಗೆ ಬರೆದುಕೊಟ್ಟಳು ಸರೋವರಾ.ಇದರ ಅರ್ಥವೇನು?? ಕರವಸ್ತ್ರ ಮಡಚಿ ಚಾದರದೊಳಗಿಟ್ಟು ಅದರ ಅರ್ಥವೇನೆಂದು ಯೋಚಿಸತೊಡಗಿದ. ಒಮ್ಮೆ ಸಮಾಧಾನದಿಂದ ಯೋಚಿಸಿದಾಗ ನೆನಪಾಯಿತು. ಸೂಪರ್ ಸ್ಟಾರ್ ರಜನಿಯ ಕಬಾಲಿ ಚಿತ್ರದ ಬಿಡುಗಡೆಯಿದೆ. ಎಂದು!? ಎಂದು!? ಪಟಕ್ಕನೆ ಹೊಳೆಯಲಿಲ್ಲ. ತಾನು ಓದಿದ ಪತ್ರಿಕೆಗಳ ಸಾಲುಗಳನ್ನು ನೆನಪು ಮಾಡಿಕೊಳ್ಳತೊಡಗಿದ ಶಾಸ್ತ್ರಿ. ಎಂದೋ ಓದಿದ್ದು ನೆನಪಾಯಿತು.
22nd Friday..
ಅಂದರೆ ಇವತ್ತೇ.. ರಜನಿಯ ಫಿಲ್ಮ್ ಎಂದರೆ ಮುಗಿಯಿತು. ಜನರ ದಂಡೇ ಸೇರುತ್ತದೆ. ಅದು ಮೊದಲ ದಿನ!! ಕೇಳಬೇಕೆ!? ಆದರೆ ಸರೋವರಾ ತನಗೇಕೆ ಇದನ್ನು ಕೊಟ್ಟಳು?? ಅಥವಾ ಕಬಾಲಿ ಸೆಕೆಂಡ್ ಶೋಗೆ ಬಾ ಎಂದು ಪ್ರತಾಪ್ ಅವಳನ್ನು ಕರೆದನೇ??
ಅಷ್ಟರಲ್ಲಿ ತಟಕ್ಕನೆ ಒಂದು ವಿಚಾರ ಅರಿವಾಯಿತು.ಅವನಿರುವ ಜೈಲಿನ ಪಕ್ಕದಲ್ಲೇ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರವಿದೆ. ಬೆಳಿಗ್ಗಿನಿಂದ ಅದರ ಕೇಕೆ ಆಗಾಗ ಕೇಳಿ ಬರುತ್ತಿರುತ್ತದೆ. ಒಂದು ಶೋ ಮುಗಿದು ಜನ ಹೊರಬಿದ್ದರಂತೂ ದೊಡ್ಡ ಜಾತ್ರೆಯೇ ಸೇರಿದಷ್ಟು ಗದ್ದಲ ಕೇಳಿ ಬರುತ್ತಿದೆ.
ಶಾಸ್ತ್ರಿ ಯೋಚಿಸುತ್ತ ಕುಳಿತ.. ಯಾಕೆ?? ಯಾಕೆ?? ಸರೋವರಳ ಉದ್ಧೇಶವೇನು?? ಸೆಕೆಂಡ್ ಶೋ ಶುರುವಾಗುವುದು 11.30 ಕ್ಕೆ. ಒಂದೂವರೆ ಎರಡು ಗಂಟೆಗೆಲ್ಲ ಸಿನಿಮಾ ಮುಗಿಯುತ್ತದೆ. ಅದನ್ನೇಕೆ ಬರೆದಿದ್ದಾಳೆ?? ನನ್ನನ್ನು ಜೈಲಿನಿಂದ ತಪ್ಪಿಸುವ ಆಲೋಚನೆಯೇನಾದರೂ ಇದೆಯಾ!? ಆದರೆ ಅವಳು ಅಂತಹ ಯೋಚನೆ ಮಾಡಲಾರಳು.
ರಾತ್ರಿ ಜೈಲಿನಿಂದ ಕದ್ದೋಡುವುದೂ, ಜೀವವನ್ನು ಗಂಗೆಯಲ್ಲಿ ತೇಲಿ ಬಿಡುವುದೂ ಎರಡು ಒಂದೇ. ಬದುಕಿ ಹೊರಬೀಳುವುದು ಕಷ್ಟ. ನನ್ನ ಜೀವವನ್ನು ಪಣಕ್ಕಿಡುವ ಹಂತಕ್ಕೆ ಹೋಗಲಾರಳು ಅವಳು.
ಮತ್ತೇಕೆ?? ಮತ್ತೇಕೆ ಹೀಗೆ ಬರೆದಿದ್ದಾಳೆ?? ಇನ್ನೊಂದು ಸ್ವಲ್ಪ ವಿವರಣೆ ಏನಾದರೂ ಬರೆಯಬಾರದಿತ್ತೇ.. ಎಂದುಕೊಂಡ. ಒಂದೆರಡು ನಿಮಿಷ ಹಾಗೆಯೇ ಕಣ್ಮುಚ್ಚಿ ಕುಳಿತುಕೊಂಡ. ಮಧ್ಯಾಹ್ನ ಸರೋವರಾ ಬಂದಾಗಿಲಿನಿಂದ ಇಬ್ಬರ ಮಾತುಕತೆಯನ್ನು ಮತ್ತೊಮ್ಮೆ ಮೆಲುಕು ಹಾಕಿದ. ಏನಾದರೂ ಕ್ಲ್ಯೂ ಕೊಟ್ಟಿರುವಳಾ ಮಾತಿನಲ್ಲಿ ಎಂದು. ಅಂತಹ ಯಾವುದೇ ಸೂಚನೆ ಆಕೆಯ ಕಡೆಯಿಂದ ಬಂದಿಲ್ಲ. ಅಂದರೆ!!?
ತಲೆ ಕೆಟ್ಟಂತಾಯಿತು ಶಾಸ್ತ್ರಿಗೆ. ತನ್ನ ಬುದ್ಧಿಗೇನಾಯಿತು?? ಹೀಗಿರಲಿಲ್ಲ ನಾನು!! ಸರೋವರಾಳೆ ನನಗೆ ಸವಾಲಾಗುವ ಚಾಣಾಕ್ಷೆಯಾದಳಲ್ಲ!? ನಾನವಳನ್ನು ಬಹಳ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೆನಾ?? ಯಾವಾಗಲೂ ಅವಳು ಅಳುವ ಗೊಂಬೆಯಾಗಿಯೇ ಕಂಡಿದ್ದಳು. ಕೋರ್ಟಿನಲ್ಲೂ ಲಾಯರ್ ವೇಷ ಧರಿಸಿ ಬಂದಾಗಲೇ ತಾನೇ ಅವಳಷ್ಟು ಡೈನಾಮಿಕ್ ಎಂದು ನನಗೆ ಗೊತ್ತಾಗಿದ್ದು. ಏನೋ ಪ್ಲಾನ್ ಮಾಡಿರುತ್ತಾಳೆ. ಇಲ್ಲದಿದ್ದರೆ ಹೀಗೆ ರೇಡಿಯಂ ಲಿ ಬರೆದ ಕರ್ಚಿಫ್ ಕೊಡುತ್ತಿರಲಿಲ್ಲ. ಬೇರೆ ಯಾರೋ ಸ್ವಯಂವರಳನ್ನು ಫಿಲ್ಮಿಗೆ ಬಾ ಎಂದು ಕರೆಯಲು ಹೀಗೆ ಬರೆದು ಕೊಡುವ ಹರಸಾಹಸ ಮಾಡಬೇಕಿಲ್ಲ. ಅದು ಅಲ್ಲದೆ ಮೊನ್ನೆ ಕೋರ್ಟಿನಲ್ಲಿ ಅಷ್ಟು ನಡೆದ ಮೇಲೆ ಪ್ರತಾಪ್ ಇಷ್ಟು ಬೇಗ ಸರೋವರಳ ಸುದ್ದಿಗೆ ಬರಲಾರ. Something is missing.. think shaastri.. think..
ಅವನ ಮನಸ್ಸಿನಲ್ಲಿ ಸಾವಿರ ಅಶ್ವದ ಕುದುರೆ ಗಾಡಿಯೊಂದು ಓಡತೊಡಗಿತು. ತಟ್ಟನೆ ಆತನಿಗೊಂದು ನೆನಪಾಯಿತು. ಇವತ್ತು ಸರೋವರಾಳಿಗೆ ಪೇದೆ ಬಂದು ಬಾಗಿಲು ತೆಗೆದು ಕೊಟ್ಟಿಲ್ಲ. ಅವಳೇ ಕೀ ತೆಗೆದು ಒಳಗೆ ಬಂದಿದ್ದಾಳೆ. ನನ್ನನ್ನು ತಪ್ಪಿಸುವ ಉಪಾಯ ಮಾಡಿ ಬೀಗ ಸರಿಯಾಗಿ ಹಾಕದೇ ಹೋಗಿರಬಹುದೇ?
ಅದೊಂದು ಯೋಚನೆ ತಲೆಯಲ್ಲಿ ಬರುತ್ತಲೇ ಕುಳಿತಲ್ಲಿಂದ ದಿಢೀರನೆ ಮೇಲೆದ್ದ ಶಾಸ್ತ್ರಿ. ಬಹುತೇಕ ಕತ್ತಲಾವರಿಸಿತ್ತು ಆ ಜಾಗದಲ್ಲಿ. ಮಂದ ಬೆಳಕಿನಲ್ಲೂ ಎದುರಿನ ಸೆಲ್ ನಲ್ಲಿ ಮಲಗಿರುವ ವ್ಯಕ್ತಿ ಕಾಣುತ್ತಿದ್ದ. ಸದ್ದಾಗದಂತೆ ಬಾಗಿಲ ಬಳಿ ಹೋಗಿ ಹೊರಗೆ ಎಲ್ಲಾದರೂ ಪೇದೆ ಬರುತ್ತಿರುವನೇ ಎಂದು ಕಣ್ಣಿಗೆ ಕಾಣುವಷ್ಟು ದೂರ ಎರಡೂ ಕಡೆ ನೋಡಿದ. ಯಾವುದೇ ಸದ್ದು ಕೇಳದ ಕಾರಣ ನಿಧಾನ ಕೈ ಹೊರಗೆ ಹಾಕಿ ಬಾಗಿಲಿಗೆ ಹಾಕಿದ್ದ ಬೀಗ ತಡಕಿದ. ಹಾಕಿಕೊಂಡೇ ಇತ್ತು ಬೀಗ. ಸುಮ್ಮನೆ ಇಲ್ಲದ್ದನ್ನು ಯೋಚಿಸಿ ಮನಸ್ಸಿನಲ್ಲೇ ಮಂಡಿಗೆ ತಿಂದೆ ಎಂದು ಬೇಸರವಾಯಿತು. ಬಾಗಿಲು ಬಿಟ್ಟು ಹಿಂದೆ ಸರಿದು ಶತ ಪಥ ಹಾಕತೊಡಗಿದ.
ಹಾಗಾದರೆ.. ಕಬಾಲಿ ಸೆಕೆಂಡ್ ಷೋ ನ ಅರ್ಥವೇನು? ಹಣೆ ಉಜ್ಜಿಕೊಂಡ. ಏನಾದರೂ ಈ ಹೊತ್ತಿನಲ್ಲಿ ಸರೋವರಾ ಜೈಲಿನ ಗೋಡೆ ಒಡೆದು ಬಂದು ನನ್ನನ್ನು ಹಾರಿಸಿಕೊಂಡು ಹೋಗುವಳೇ??
ಅವನ ಯೋಚನೆಗೆ ಅವನಿಗೆ ನಗು ಬಂತು. ನಾನೇನಾದರೂ ಇಂಗ್ಲೀಷ್ ಸಿನೆಮಾ ನೋಡಿದ್ದು ಜಾಸ್ತಿಯಾಯಿತಾ? ಎಂದುಕೊಂಡ. ಯಾವ ಯೋಚನೆಗೂ ನಿರಾಳವಾಗದ ಮನಸ್ಸು ಹತಾಶೆಗೊಂಡಿತು. ಹತಾಶೆ ನೋವಾಗಿ, ನೋವು ಸಿಟ್ಟಾಗಿ ಪರಿವರ್ತನೆಯಾಗಲು ಬಹಳ ಸಮಯ ಹಿಡಿಯಲಿಲ್ಲ. ಓಡಾಡುತ್ತಿದ್ದ ಶಾಸ್ತ್ರಿ ಬಾಗಿಲ ಬಳಿ ಬಂದು "ಬ್ಲಡಿ ಸೆಕೆಂಡ್ ಶೋ.." ಎನ್ನುತ್ತಾ ಜೋರಾಗಿ ಜಾಡಿಸಿ ಒದ್ದ ಬಾಗಿಲಿಗೆ. ಕಬ್ಬಿಣದ ಬಾಗಿಲು ಸಡಿಲವಾಗಿದ್ದರಿಂದ ಗೋಡೆಯ ಮಧ್ಯೆ ಸಿಕ್ಕಿಸಿದ್ದ ಲಾಕ್ ನ ಸರಳು ಗಲಗಲ ಸಡ್ಡು ಮಾಡಿತು. ಅದು ಅಲ್ಲದೆ ಅದಕ್ಕೆ ಸಿಕ್ಕಿಸಿದ್ದ ಲಾಕ್ ಸಹ ಕಳಚಿ ಎಗರಿ ಬಾಗಿಲಿನಿಂದ ಹೊರಗೆ ದೂರ ಬಿತ್ತು.
ಆ ಸದ್ದಿಗೆ ಎದುರಿನ ರೂಮಿನ ಕೈದಿ ಎದ್ದು ಕುಳಿತುಕೊಂಡದ್ದು ಶಾಸ್ತ್ರಿಗೆ ಕಂಡಿತು. ಪಕ್ಕದ ಸೆಲ್ ಗಳಿಂದ ದೊಡ್ಡ ಕೇಕೆ ಕೇಳಿ ಬಂತು. ಶಾಸ್ತ್ರಿಗೆ ತಾನು ಮಾಡಿದ ತಪ್ಪಿನ ಅರಿವಾಗಿತ್ತು. ಬಾಗಿಲಿಗೆ ಲಾಕ್ ಸುಮ್ಮನೆ ಹಾಕಿಕೊಂಡಿತ್ತು. ಅವನು ಗಟ್ಟಿಯಾಗಿ ಅದನ್ನು ಎಳೆದರೆ ತೆರೆದುಕೊಳ್ಳುತ್ತಿತ್ತು. ಆದರೆ ಅವನು ಬೀಗ ತಡವಿ ಬಂದಿದ್ದ. ಈಗ ಬೀಗ ಎಗರಿ ಬಿದ್ದಿದೆ. ಬಾಗಿಲಿನಿಂದ ಮಾರು ದೂರವೇ ಬಿದ್ದಿದೆ. ಸರಳುಗಳ ಮಧ್ಯದಿಂದ ಕೈ ಹೊರಹಾಕಿ ಬೀಗ ಎಟುಕುತ್ತದೆಯೇ ನೋಡಿದ. ಕೈಯಿಂದ ಒಂದಿಂಚು ದೂರದಲ್ಲಿದೆ. ಅವನಿಗಾದಷ್ಟು ಬಾಗಿಲ ಬಳಿ ಸರಿದು ಬೀಗ ಒಳಗೆ ತೆಗದುಕೊಂಡ. ಗಲಾಟೆ ಕೇಳಿದ್ದರಿಂದ ಅಷ್ಟರಲ್ಲಿ ಲೈಟ್ ಆನ್ ಮಾಡಿದ್ದರು. ದೂರದಲ್ಲೆಲ್ಲೋ ಪೇದೆಯ ಸೀಟಿ ಸದ್ದು ಕೇಳಿಸಿತು. ಅವನು ಈಕಡೆ ಬರುವುದರೊಳಗೆ ಬೀಗವನ್ನು ಮೊದಲಿನಂತೆಯೇ ಹಾಕಿಡಬೇಕು. ಸಿಕ್ಕಿಬಿದ್ದರೆ ಕಥೆ ಮುಗಿಯಿತು. ಕೇವಲ ತನ್ನ ಕಥೆಯಲ್ಲ ಸರೋವರಳದು ಕೂಡ. ಅವಳೇನು ಪ್ಲಾನ್ ಮಾಡಿರುವಳೋ ಅದೆಲ್ಲ ಇಲ್ಲಿಗೆ ಮುಗಿದು ಹೋಗುತ್ತದೆ. ಲೈಟ್ ಹತ್ತಿಕೊಳ್ಳುತ್ತಿದ್ದಂತೆ ಸಿಸಿಟಿವಿಯವ ಈಕಡೆಯೇ ಗಮನ ಹರಿಸುತ್ತಾನೆ. ಕೊಠಡಿಗಳಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುವುದಿಲ್ಲವಾದರೂ ವರಾಂಡ ಮೇಲೆ ನಡೆಯುವ ಘಟನೆಗಳು ಕಾಣಿಸುತ್ತವೆ. ಹಾಗಾಗಿ ಆದಷ್ಟು ಅನುಮಾನ ಬರದಂತೆ ಬಾಗಿಲ ಬಳಿ ನಿಂತ ಹಾಗೆ ಮಾಡುತ್ತಾ ಬೀಗವನ್ನು ಮತ್ತೆ ಸ್ವಸ್ಥಾನಕ್ಕೆ ಸೇರಿಸಿದ.
ಬೀಗ ಹಳೆಯದಾಗಿದ್ದಕ್ಕೋ ಏನೋ ಸುಮ್ಮನೆ ಸಿಗಿಸಿದರೆ ಗಟ್ಟಿಯಾಗಿ ಕುಳಿತುಕೊಳ್ಳುತ್ತಿತ್ತು. ಕತ್ತಲೆಯಲ್ಲಿ ಯಾವ ಕೊಠಡಿಯಿಂದ, ಯಾವ ಕಡೆಯಿಂದ ಸದ್ದು ಬಂತು ಎಂದು ತಿಳಿಯದ್ದರಿಂದ ಎರಡೂ ಕಡೆಗೂ ಬ್ಯಾಟರಿ ಹೊಡೆಯುತ್ತ ರೂಮಿನೊಳಗೆ ನೋಡುತ್ತಾ ಬರುತ್ತಿದ್ದರು. ಶಾಸ್ತ್ರಿ ಸುಮ್ಮನೆ ಹೋಗಿ ಬೆಂಚಿನ ಮೇಲೆ ಕುಳಿತ. ಆತನ ಹೃದಯ ಬಡಿತದ ಸದ್ದು ಆತನಿಗೆ ಕೇಳುವಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು. ಶಾಸ್ತ್ರಿ ಗೋಡೆಯ ಕಡೆ ಮುಖ ಮಾಡಿಕೊಂಡು ಕುಳಿತುಕೊಂಡಿದ್ದ. ಪೇದೆಗಳು ಬರುತ್ತಿದ್ದಾರೆ ಎಂಬಂತೆ ಬೂಟು ಕಾಲಿನ ಸದ್ದು ಹತ್ತಿರದಲ್ಲಿಯೇ ಕೇಳತೊಡಗಿತು. ಶಾಸ್ತ್ರಿಯ ಕೈ ಬೆವರತೊಡಗಿತು. ಪಕ್ಕದ ರೂಮಿನ ಸರಳುಗಳ ಮೇಲೆ ಲಾಠಿಯಿಂದ ಹೊಡೆದ ಸದ್ದು. ಶಾಸ್ತ್ರಿಯ ಸೆಲ್ ನ ಬಾಗಿಲಿಗೆ ಅಷ್ಟು ತಟ್ಟಿದರೆ ಸಾಕು ಬೀಗದ ಕೊಂಡಿ ಮತ್ತೆ ಕಳಚಿ ಬಿಡುತ್ತದೆ.
ಏನು ಮಾಡಬೇಕೋ ತಿಳಿಯಲಿಲ್ಲ. ಅಷ್ಟರಲ್ಲಿ ಎದುರು ರೂಮಿನ ಕೈದಿ ಎದ್ದು ಬಾಗಿಲ ಬಳಿ ಬಂದ. ಈತನೇನಾದರೂ ನಾನು ಕೀ ಎತ್ತಿಕೊಂಡಿರುವುದನ್ನು ನೋಡಿಬಿಟ್ಟಿದ್ದಾನಾ?? ಪೇದೆಯ ಬಳಿ ಹೇಳಿ ಬಿಡುತ್ತಾನಾ?? ಆತಂಕ ಮತ್ತಷ್ಟು ಹೆಚ್ಚಾಯಿತು. ಮುಖದ ಮೇಲೆ ಚಾದರ ಎಳೆದುಕೊಂಡು ಮಲಗಿದ ಶಾಸ್ತ್ರಿ.
ಪೇದೆ ಅವನ ರೂಮಿನೆದುರು ಬಂದಿದ್ದು ತಿಳಿಯಿತು. ಬ್ಯಾಟರಿಯ ಬೆಳಕು ಶಾಸ್ತ್ರಿಯ ರೂಮಿನ ಸರಳುಗಳನ್ನು ದಾಟಿ ಆತನ ಮೇಲೆ ಆಚೀಚೆ ಸರಿಯುತ್ತಿರುವುದು ಚಾದರದೊಳಗಿಂದ ಮಸುಬು ಮಸುಬಾಗಿ ಕಂಡುಬಂತು. ಲಾಠಿ ತೆಗೆದುಕೊಂಡು ಬಾಗಿಲಿಗೆ ಗಟ್ಟಿಸಿದನೋ ಮುಗಿಯಿತು ಕಥೆ ಎಂದುಕೊಂಡ.
"ಏಯ್ ಮಗನೇ, ದೂರ ಸರಿಯೋ ಬಾಗಿಲಿನಿಂದ. ಎನ್ನುತ್ತಾ ಲಾಠಿ ಎದುರು ರೂಮಿನ ಸರಳಿಗೆ ಗಟ್ಟಿಸಿದ ಸದ್ದಾಯಿತು. ಎರಡು ಕ್ಷಣ ಭಾರವಾಗಿ ಕಳೆಯಿತು. ಎದುರು ರೂಮಿನ ಕೈದಿ ದೊಡ್ಡದಾಗಿ ಆಕಳಿಸುತ್ತ ಬಾಗಿಲಿನಿಂದ ದೂರ ಸರಿದ. "ತಿಂದ ಕೊಬ್ಬು ಮಕ್ಕಳಾ ನಿಮಗೆ.. ಉಪವಾಸ ಸಾಯಿಸುತ್ತೀನಿ.." ಎನ್ನುತ್ತಾ ಪೇದೆ ಮುಂದೆ ಸಾಗಿದ.
ಶಾಸ್ತ್ರಿ ಹಾಗೆ ಮಲಗಿಯೇ ಇದ್ದ. ಬರುತ್ತಿರುವ ಚಂಡಮಾರುತವೊಂದು ದಿಕ್ಕು ತಪ್ಪಿ ಬೇರೆಡೆಗೆ ಹೋದ ಅನುಭವವಾಯಿತು. ಐದು ನಿಮಿಷ ಕಳೆದ ನಂತರ ಲೈಟ್ ಆಫ್ ಆಗಿ ಮತ್ತೆ ಕತ್ತಲಾಯಿತು.
ಎದ್ದು ಕುಳಿತ ಶಾಸ್ತ್ರಿ. ಈಗ ಅವನಿಗೆ ಯಾವುದೇ ಅನುಮಾನ ಉಳಿದಿರಲಿಲ್ಲ. ಸರೋವರಾ ತನ್ನನ್ನು ಜೈಲಿನಿಂದ ತಪ್ಪಿಸಲು ಸಂಚು ಮಾಡಿದ್ದಾಳೆ. ಕಬಾಲಿ ಸೆಕೆಂಡ್ ಷೋ ಮುಗಿಯುವ ಗಲಾಟೆಯಲ್ಲಿ ಏನೋ ಮಾಡುವವಳಿದ್ದಾಳೆ.
ಆದರೆ ಏನು? ನಾನು ಮೊದಲೇ ಇಲ್ಲಿಂದ ಹೊರಬೀಳಬೇಕಾ? ಹೊರ ಹೋದರು ಮೆನ್ ಗೇಟಿನಿಂದ ಹೊರಹೋಗುವುದು ಹೇಗೆ? ಅಲ್ಲಿಂದ ಹೊರ ಬಿದ್ದರು ಪೊಲೀಸರು ನನ್ನನ್ನು ಬೇಟೆಯಾಡಿಬಿಡುವುದಿಲ್ಲವೇ?? ಅದೆಷ್ಟೋ ಪ್ರಶ್ನೆಗಳು ಅಸಂಬದ್ಧವಾಗಿ ಅವನ ಸುತ್ತಲೂ ಗಿರಕಿ ಹೊಡೆಯತೊಡಗಿದವು.
ಹತ್ತು ಗಂಟೆಗೆ ಕರೆಂಟ್ ತೆಗೆದಿದ್ದಾರೆ. ಇಷ್ಟೆಲ್ಲ ನಡೆಯುವುದರೊಳಗೆ ಒಂದರ್ಧ ಗಂಟೆ ಕಳೆದಿರಬಹುದು. ಸೆಕೆಂಡ್ ಷೋ ಮುಗಿಯುವುದು ಎರಡು ಗಂಟೆಗೆ. ತಾನು ಹೊರಬೀಳಬೇಕೋ ಬೇಡವೋ ನೋಡೋಣ. ಆದರೆ ಸಮಯವನ್ನು ಕೂಡ ನೆನಪಿಡಬೇಕು. ಈಗ 10.30 ಎಂದುಕೊಂಡರೆ ಇನ್ನು ಮೂರುವರೆ ಗಂಟೆ ಸಮಯವಿದೆ. ಅಂದರೆ 210 ನಿಮಿಷಗಳು. 12600 ಸೆಕೆಂಡ್ ಗಳು.. 12599.... 12598... ಮನಸ್ಸಿನಲ್ಲಿಯೇ ಕೌಂಟ್ ಡೌನ್ ಶುರು ಮಾಡಿದ ಪದ್ಮಾಸನ ಹಾಕಿ ಕುಳಿತು.
ಸರೋವರಾ ನೀನು ಕೇವಲ ಡೈನಾಮಿಕ್ ಅಲ್ಲ. ಡೈನಾಮೈಟ್ ಎಂದುಕೊಂಡ ಮನಸ್ಸು 12500... 12499... 12498...ಎಂದು ಮುಂದೆ ಎಣಿಸಿತು.
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 26

                                     ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 26

ಸ್ವಯಂವರಾ ಯೋಚಿಸುತ್ತ ಮಲಗಿದ್ದಳು. ಮುಂಬೈಯಿಂದ ದೆಹಲಿಗೆ ಬಂದು ಎರಡು ದಿನಗಳೇ ಕಳೆದು ಹೋಗಿತ್ತು. ಆದರೂ ಆಸ್ಪತ್ರೆಯ ಕಡೆ ಹೋಗಬೇಕು ಎಂಬ ಆಲೋಚನೆಯೇ ಬರಲಿಲ್ಲ. ಬಂದರೂ ಏನೋ ಆಲಸಿತನ ಅವಳನ್ನು ಆವರಿಸಿತ್ತು. ಅದಕ್ಕಿಂತಲೂ ಹೆಚ್ಚಾಗಿ ಶಾಸ್ತ್ರಿಯ ಕಥೆ ಏನಾಗಿರಬಹುದು ಎಂಬ ಯೋಚನೆಯೇ ಬಹಳ ಕಾಡುತ್ತಿತ್ತು. ನಾನಿಷ್ಟು ಅಂಜುಬುರುಕಿಯಾ!? ಕೇವಲ ಒಂದು ಕೊಲೆ ನೋಡಿದ್ದಕ್ಕೆ ಸ್ಕಿಜೋಫ್ರೆನಿಯಾ ಆವರಿಸಿಕೊಳ್ಳುವಷ್ಟು ಹೆದರು ಪುಕ್ಕಲು ಮನಸ್ಸಾ ನನ್ನದು!? ಹಾಸಿಗೆಯಲ್ಲಿ ಮಲಗಿದ್ದ ಅವಳು ಮಗ್ಗುಲಾದಳು.
ಜಗತ್ತಿನಲ್ಲಿ ಅದೆಷ್ಟೋ ಕೊಲೆ ಸುಲಿಗೆಗಳು ದಿನಾಲು ನಡೆಯುತ್ತಿರುತ್ತವೆ. ಅದನ್ನು ನೋಡಿದವರೆಲ್ಲ ನನ್ನಂತೆಯೇ ಆಗಿಬಿಡುತ್ತಾರಾ?? ಅದೆಷ್ಟೋ ಜನರು ಕೊಲೆ ಮಾಡಿಯೂ ಏನು ಮಾಡಿರದಂತೆ ಬದುಕುತ್ತಿರುವಾಗ ಕೊಲೆ ನೋಡಿದ ನಾನು ಇಷ್ಟು ಹೆದರುವುದೇಕೆ?? ಮನಸ್ಸು ಸ್ವಲ್ಪ ಸ್ಥಿಮಿತಕ್ಕೆ ಬಂದಿತು. ಕ್ಷಾತ್ರ ನೆನಪಿಗೆ ಬಂದ. ನನ್ನನ್ನು ತುಂಬಾ ಹಚ್ಚಿಕೊಂಡಿದ್ದಾನೆ. ಸೂಕ್ಷ್ಮಗಳನ್ನು ಗಮನಿಸುವ ಮನಸ್ಥಿತಿ ಆತನದಲ್ಲ.. ಅಥವಾ ಪರಿಸ್ಥಿತಿಯ ಒತ್ತಡಗಳು ಆತನನ್ನು ಹಾಗೆ ಮಾಡಿರಬಹುದು. ಒಳ್ಳೆಯ ಮನುಷ್ಯನೇ. ಬಾಯ್ಬಿಟ್ಟು ಮದೆವೆಯಾಗುತ್ತೀಯಾ? ಎಂದು ಕೇಳಿದ್ದಾನೆ. ಆದರೆ ತಪ್ಪೇನು!? ಇನ್ನೆಷ್ಟು ದಿನ ಈ ಒಂಟಿ ಬದುಕು? ಒಂದಲ್ಲ ಒಂದು ದಿನ ಒಬ್ಬನಿಗೆ ಜೋತುಬೀಳಲೇಬೇಕು. ಕ್ಷಾತ್ರ ಯಾಕಾಗಬಾರದು ಎಂದು ಆತನ ಜೊತೆ ನಿಲ್ಲಬೇಕಾ?? ಇಷ್ಟ ಕಷ್ಟಗಳನ್ನು ಯೋಚಿಸಬೇಕಾ??
ಅಂದು ಹುಚ್ಚಾಸ್ಪತ್ರೆಯಲ್ಲಿ ಗಂಡು, ಹೆಣ್ಣು ಎಂದು ಎಲ್ಲರ ತಲೆ ಕೆಡಿಸಿ ಕೊಲೆ ಮಾಡಿ ಹೊರ ನಡೆದ ವ್ಯಕ್ತಿ ನೆನಪಾದ. ಯಾರು ಆತ!!? ಖಂಡಿತ ಶಾಸ್ತ್ರಿಯಂತೂ ಅಲ್ಲ. ಆತನ ಕಣ್ಣುಗಳನ್ನು ನಾ ಮರೆಯಲಾರೆ. ಆ ಕಣ್ಣುಗಳಲ್ಲಿ ಭಾವವೇ ಇಲ್ಲ. ಇಲ್ಲವೇ ಅವನ ಕಣ್ಣುಗಳಲ್ಲಿ ತುಂಬಿದ ಭಾವನೆಗಳು ನಾ ಅರ್ಥಮಾಡಿಕೊಳ್ಳುವುದಕ್ಕಿಂತ ಹೆಚ್ಚಿನದು.
ಯಾರು ಆತ?? ಯಾಕೆ ಕೊಲೆ ಮಾಡಿದ?? ಕ್ಷಾತ್ರ ಹೇಳುವಂತೆ ಮಾನಸಿಕ ರೋಗಿಯಿರಬಹುದೇ? ನಾನೇ ಅರ್ಥ ಮಾಡಿಕೊಳ್ಳದಷ್ಟು ಅರ್ಥಗರ್ಭಿತ ಕಣ್ಣುಗಳು.. ಇಂಥವನೊಬ್ಬ ನನ್ನ ಜೊತೆಗಾರನಾಗಿದ್ದರೆ!! ಮತ್ತೆ ಮಗ್ಗಲು ಬದಲಾಯಿಸಿದಳು. ಹೋಗಿ, ಹೋಗಿ ಒಬ್ಬ ಕೊಲೆಗಾರನನ್ನು ಜೊತೆಗಾರನನ್ನಾಗಿ ಯಾಕೆ ಕಲ್ಪಿಸಿಕೊಳ್ಳುತ್ತಿದ್ದೇನೆ? ಕ್ಷಾತ್ರನಿಗೂ ಅವನಿಗೂ ಎಲ್ಲಿಂದ ಎಲ್ಲಿಯ ಹೋಲಿಕೆ!?
ಇನ್ನು ಯೋಚಿಸುವುದು ಬೇಡ. ಕ್ಷಾತ್ರನಿಗೆ ಓಕೆ ಎಂದು ಬಿಡುತ್ತೇನೆ ಎಂದುಕೊಂಡಳು. ಜೀವನದಲ್ಲಿ ಒಂದು ಬಹುಮುಖ್ಯ ನಿರ್ಧಾರ ಮಾಡಿದಾಗ ಖುಷಿಯಾಗಬೇಕು ಇಲ್ಲವೇ ದುಃಖವಾಗಬೇಕು. ಎರಡು ಇಲ್ಲವಾದರೆ ಅದು ಮುಖ್ಯ ನಿರ್ಧಾರವಾಗಿರಲು ಸಾಧ್ಯವಿಲ್ಲ.
ನನಗೆ ಖುಷಿಯಾಯಿತಾ?? No.. ದುಃಖ..!! ಯೋಚಿಸುತ್ತ ಮತ್ತೆ ಮಗ್ಗಲು ಬದಲಾಯಿಸುವ ಮುನ್ನ ನಿದ್ರೆ ಅವಳನ್ನು ಆವರಿಸಿತ್ತು.
ನಿದ್ರೆಯಲ್ಲಿ ಅವಳ ಮುಗ್ಧ ಹಾಗೂ ಮುದ್ದು ಮುಖ ತುಂಬಾ ಸುಂದರವಾಗಿ ಮೂಡಿತು. ಆ ಮುದ್ದು ಮುಖ ಕ್ಷಾತ್ರನ ಕನಸಿನಲ್ಲಿ ಕಾಣಿಸಿಕೊಂಡಿತು...
*................................................*......................................................*
WIH.. Wallet Investment Holdings.. ವಿಹಾರಿಯ ಬೆರಳುಗಳು ಕಂಪ್ಯೂಟರ್ ಕೀ ಮೇಲೆ ಸರಸರನೆ ಓಡಾಡಿಕೊಂಡಿದ್ದವು. WIH ಸರ್ವರ್ ಮಷಿನ್ ಒಳಗೆ ಸೇರಿಕೊಂಡಿದ್ದ ಆತ. ಜಗತ್ತಿನ ಅತ್ಯಂತ ಸೆಕ್ಯೂರ್ಡ್ ಸರ್ವರ್ ಗಳಲ್ಲಿ ಒಂದು. ಆದರೆ ವಿಹಾರಿಗೆ ಸವಾಲಾಗುವ ಸೆಕ್ಯೂರಿಟಿ ಫೈರ್ ವಾಲ್ ಗಳಿಲ್ಲ ಎಂದೇ ಹೇಳಬಹುದು. ಒಮ್ಮೆ ಅದರ ಫೈರ್ ವಾಲ್ ಭೇದಿಸಿ ಒಳಸೇರಿಕೊಂಡ ವಿಹಾರಿ ಪ್ರಿಯಂವದಾ ರಾಜ್ ಎಂದು ಸರ್ಚ್ ಮಾಡಿದ್ದ. ಯಾವುದೇ ಮಾಹಿತಿ ಕಂಡು ಬರಲಿಲ್ಲ. ಮತ್ತೆ ತಲೆ ಬಿಸಿ ಶುರುವಾಗಿತ್ತು ವಿಹಾರಿಗೆ ಯಾವ ಹೆಸರಿನಲ್ಲಿ ಹಣ ಇಟ್ಟಿರಬಹುದು ಪ್ರಿಯಂವದಾ ರಾಜ್? ದುಟ್ಟಿರಬಹುದಾ ಅಥವಾ ಇನ್ಯಾವುದೋ ಮುಖ್ಯ ಮಾಹಿತಿಯನ್ನು ಇಟ್ಟಿರಬಹುದಾ?? ಇಲ್ಲವೇ ನನ್ನ ತಲೆಯಲ್ಲಿ ಹುಟ್ಟಿಕೊಂಡ ಸಂಶಯಗಳೆಲ್ಲಾ ಸುಳ್ಳಿರಬಹುದಾ?? ಯೋಚನೆ ಮಾಡುತ್ತಲೇ HIM ಎಂದು ಹುಡುಕಿದ. "One record found".
ಕುಳಿತಿದ್ದಲ್ಲಿಂದ ಎದ್ದು ಕುಣಿಯಬೇಕು ಎನ್ನುವಂತಾಯಿತು. ನಿಜವಾದ HIM ಇಲ್ಲಿದೆ. ಗುಡ್.. ಅಂದರೆ ಹಿಮಾಂಶುವಿಗೆ ಏನಾದರೂ ಮಾಹಿತಿ ನೀಡಲು HIM ಎಂದು ಬರೆದಿದ್ದಾಳೆಯೇ?? ಆತನಿಗೆ WIH ನಲ್ಲಿ ತಾಯಿಯ ಖಾತೆ ಇರುವುದು ಗೊತ್ತಿರಬಹುದು. ಅದಕ್ಕೆ ಉಳಿದ ಮಾಹಿತಿ ನೀಡಲು HIM ಎಂದು ಬರೆದಿದ್ದಾಳೆ. ಇದನ್ನು ಸಮ್ಮಿಶ್ರ ನೋಡಿದ್ದಾನೆ. ನಾನೀಗ ಸಮ್ಮಿಶ್ರನಿಗೆ ಹೇಳಿದರೆ ಆತ ಏನು ಮಾಡಬಹುದು? ಹಿಮಾಂಶುವಿಗೆ ಇದರ ಬಗ್ಗೆ ಹೇಳಬಹುದಾ? ಅಥವಾ ತಾನು ದುರುಪಯೋಗಪಡಿಸಿಕೊಂಡು ಕೈಎತ್ತಿಬಿಡಬಹುದಾ?? ಸಮ್ಮಿಶ್ರನನ್ನು ನಾನೆಷ್ಟು ನಂಬಬಹುದು? ಯೋಚನೆ ಮುಂದೆ ಸಾಗಿಕೊಂಡೆ ಇತ್ತು. ಅದೇನೇ ಇರಲಿ, ಇದರಲ್ಲಿ ನಿಜವಾಗಿಯೂ ಇರುವುದು ಏನು ಎಂದು ನೋಡಲು HIM ಅಕೌಂಟ್ ಒಳಗೆ ಏನಿದೆ ತಿಳಿದು ಕೊಳ್ಳಬೇಕು. ಆತ ಮತ್ತೆ WIH ನ ಎಡ್ಮಿನ್ ಸ್ಕ್ರೀನ್ ತೆಗೆದು ಅದರಲ್ಲಿ HIM ಎಂದು ಬರೆದು ಸರ್ಚ್ ಹೊಡೆದ. ಪರದೆಯ ಮೇಲೆ ಪಟಪಟನೆ ಅಕ್ಷರಗಳು ಮೂಡಿದವು.
Welcome raj, Please enter your password to continue..
ಇದೇನು ನಾನು ಎಡ್ಮಿನ್ ಸ್ಕ್ರೀನ್ ನಲ್ಲಿದ್ದರೂ ಪಾಸ್ ವರ್ಡ್ ಕೇಳುತ್ತಿದೆ. ಕೇವಲ ರಾಜ್ ಮಾತ್ರ ಡಿಟೇಲ್ಸ್ ನೋಡಬಹುದು. ಸಾಧಾರಣವಾಗಿ ಬ್ಯಾಂಕ್ ಗಳಲ್ಲಿ ಖಾತೆದಾರನ ಹೆಸರೊಂದಿದ್ದರೆ ಮ್ಯಾನೇಜರ್ ಗಳು ಅಥವಾ ಎಡ್ಮಿನ್ ಗಳು ಖಾತೆಯ ಮಾಹಿತಿಗಳನ್ನು ನೋಡಬಹುದು. ಕಪ್ಪುಧಂಧೆಯ ಈ ಬ್ಯಾಂಕ್ ಗಳಲ್ಲಿ ಎಡ್ಮಿನ್ ಗಳು ಕೂಡ ಎಕೌಂಟ್ ಗಳ ಮಾಹಿತಿಗಳನ್ನು ನೋಡುವಂತಿಲ್ಲ.
ಇದಪ್ಪಾ ಮಾತಂದ್ರೆ.. ಮತ್ತೆ ತಲೆಬಿಸಿ ವ್ಯವಹಾರ.. ಈಗ ಮತ್ತೆ ಪಾಸ್ ವರ್ಡ್ ಕ್ರ್ಯಾಕ್ ಮಾಡಬೇಕು. ಒಟ್ಟಿನಲ್ಲಿ ಈ ಸಮ್ಮಿಶ್ರ ನನಗೆ ಒಳ್ಳೆಯ ತಲೆಬಿಸಿ ತಂದಿಟ್ಟ ಎಂದುಕೊಂಡು ಮತ್ತೆ ಕೆಲಸ ಮುಂದುವರೆಸಿದ ವಿಹಾರಿ.
*...................................................*.....................................................*
ಪ್ರತಾಪ್ ಕಡೆ ಕೆಂಗಣ್ಣು ಬೀರುತ್ತಲೇ ಎದ್ದು ನಿಂತ ಜಾನಕಿರಾಮ್ "ಆಬ್ಜೆಕ್ಷನ್ ಯುವರ್ ಆನರ್."
ಆತ ಇಷ್ಟು ಹೇಳುತ್ತಲೇ ಪ್ರತಾಪ್ ಹಸನ್ಮುಖನಾದ. ಜಾನಕಿರಾಮ್ ರ ಕೆಂಗಣ್ಣು ಆತನನ್ನು ಬಿಡಲಿಲ್ಲ. ತನ್ನಿಂದ ತಪ್ಪಾಯಿತು ಎಂದುಕೊಂಡು ಸುಮ್ಮನೆ ಕುಳಿತ ಪ್ರತಾಪ್. ಜಾನಕಿರಾಮ್ ಒಂದು ಗಾಢವಾದ ನಿಟ್ಟುಸಿರು ಬಿಟ್ಟು ಪ್ರಾರಂಭಿಸಿದರು. ಜಾನಕಿರಾಮ್ ಆಬ್ಜೆಕ್ಷನ್ ಎನ್ನುತ್ತಲೇ ಸರೋವರಲ್ಲಿಗೆ ಬೆವರು ಕಿತ್ತು ಬಂದಿತ್ತು. ತಾನಿಷ್ಟು ಹೊತ್ತು ಮಾಡಿದ ಪ್ರಯತ್ನವೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ಕರಡಿದಂತಾಯಿತೇ ? ಎಂದುಕೊಂಡಳು. ಅದೇ ಯೋಚನೆ ಶಾಸ್ತ್ರಿಯ ಅಂತರಂಗದಲ್ಲೂ ಹಾದು ಹೋಯಿತು.
"ಯುವರ್ ಆನರ್.. ಸರೋವರಾ ಹೇಳುತ್ತಿರುವುದೆಲ್ಲ ಸರಿ. ನ್ಯಾಯಾಂಗದ ಮೇಲೆ ಅವಳಿಗಿರುವ ಅಭಿಮಾನ ಹಾಗೂ ಪ್ರೀತಿಯೂ ಅನುಕರಣೀಯ. ಆದರೆ ಹದಿನೈದು ದಿನ ಎಂಬುದು ತುಂಬಾ ಹೆಚ್ಚಿನ ಸಮಯ. ಅವಳಿಗೆ ಅಷ್ಟು ವಿಚಾರಿಸಿಕೊಳ್ಳುವ ವಿಷಯವಿದ್ದರೆ ಮೂರು ದಿನದ ಸಮಯ ನನಗೆ ಒಪ್ಪಿಗೆಯಿದೆ."
ಸರೋವರಾಳಿಗೆ ಸ್ವಲ್ಪ ಸಮಾಧಾನವಾಯಿತು. ಹೇಗಾದರೂ ಮಾಡಿ ಒಂದು ವಾರದ ಸಮಯ ಪಡೆಯಬೇಕು. ಅಷ್ಟರಲ್ಲಿ ಮತ್ತೇನನ್ನಾದರೂ ಯೋಚಿಸಬಹುದು ಎಂದುಕೊಳ್ಳುತ್ತ ಎದ್ದು ನಿಲ್ಲಬೇಕು.. ಅದರ ಮೊದಲು ಶಾಸ್ತ್ರಿಯ ಮುಖ ನೋಡಿದಳು. ಶಾಸ್ತ್ರಿ Thumbs up ಮಾಡಿದ. ಅಂದರೆ ಮೂರು ದಿನ ಸಾಕೆಂದೇ?? ಯಾಕೆ ಹಾಗೆ ಹೇಳುತ್ತಿದ್ದಾನೆ ಎಂದು ಅರ್ಥವಾಗಲಿಲ್ಲ ಅವಳಿಗೆ.
ಜಾನಕಿರಾಮ್ ಹಾಗೇಕೆ ಹೇಳಿದ್ದಾರೆಂದು ಶಾಸ್ತ್ರಿ ಗ್ರಹಿಸಿ ಬಿಟ್ಟಿದ್ದ. ಏನಾದರೂ ಪ್ರತಾಪ್ ಎದ್ದು ನಿಲ್ಲದಿದ್ದರೆ ನ್ಯಾಯಾಂಗ ಬಂಧನ ಸಾಧ್ಯವೇ ಇಲ್ಲ ಎಂದು ಹೇಳುವವರಿದ್ದರು ಜಾನಕಿರಾಮ್. ಅಷ್ಟರಲ್ಲಿ ಪ್ರತಾಪ್ ಮಾಡಿದ ತಪ್ಪಿನಿಂದ ಸಿಟ್ಟುಗೊಂಡು ಸರೋವರಾಳಿಗೆ ಮೂರು ದಿನ ಸಮಯ ಕೊಡಲು ನಿರ್ಧರಿಸಿದ್ದರು. ಈಗೇನಾದರೂ ಸರೋವರಾ ಮತ್ತೆ ವಿರೋಧಿಸಿ ಮಾತನಾಡಿದರೆ ಆ ಮೂರು ದಿನ ಸಮಯವು ಕೈತಪ್ಪಿ ಹೋಗುತ್ತದೆ. ಆ ಮೂರು ದಿನದಲ್ಲಿ ತಾನೇನು ಮಾಡಬಲ್ಲೆ ಎಂಬ ಯೋಚನೆ ಆತನಿಗೆ ಬಂದರೂ ಸಿಕ್ಕಷ್ಟಾದರೂ ಸಿಕ್ಕಿತಲ್ಲ ಎಂದು ಶಾಸ್ತ್ರಿ ಸರೋವರಾಳಿಗೆ ಆ ರೀತಿ ಸನ್ನೆ ಮಾಡಿದ್ದ.
ಸರೋವರಾಳಿಗೆ ಶಾಸ್ತ್ರಿ ಏಕೆ ಹಾಗೆ ಸನ್ನೆ ನೀಡಿದ ಎಂದು ತಿಳಿಯಲಿಲ್ಲವಾದರೂ ಅವನ ಮಾತನ್ನು ಮೀರುವ ಸಾಹಸಕ್ಕೆ ಹೋಗಲಿಲ್ಲ ಅವಳು.
"ಯುವರ್ ಆನರ್, ಜಾನಕಿರಾಮ್ ರಂಥ ಹಿರಿಯರು ನನ್ನ ಮೇಲೆ ಇಷ್ಟಾದರೂ ಅಭಿಮಾನ ತೋರಿಸಿ ಮೂರು ದಿನದ ಸಮಯ ಕೊಡುತ್ತಿರುವುದಕ್ಕೆ ಧನ್ಯವಾದಗಳು. ಮೂರು ದಿನದಲ್ಲಿ ನಾನು ಪೂರ್ತಿ ವಿವರ ಸಂಗ್ರಹಿಸಿ ಮತ್ತೆ ಕೋರ್ಟ್ ಗೆ ನನ್ನ ಕಕ್ಷಿದಾರನನ್ನು ಹಾಜರು ಪಡಿಸುತ್ತೇನೆ. ಇದಕ್ಕೆ ನನ್ನ ಒಪ್ಪಿಗೆಯಿದೆ.." ಎಂದಳು.
ಪ್ರತಾಪ್ ಕುಳಿತಲ್ಲಿಯೇ ಮಿಸುಕಾಡಿದ. ಆದರೆ ಮತ್ತೆ ಮರುಮಾತನಾಡಿದರೆ ಜಾನಕಿರಾಮ್ ಏನೆನ್ನುತ್ತಾರೋ? ಮೂರು ದಿನದಲ್ಲಿ ಶಾಸ್ತ್ರಿ ತಾನೇ ಏನು ಮಾಡಬಲ್ಲ? ಮೂರು ದಿನ ತಾನೇ? ನೋಡೋಣ.. ಎಂದುಕೊಂಡು ಸುಮ್ಮನೆ ಕುಳಿತ.
ಇಬ್ಬರು ಲಾಯರ್ ಗಳ ಒಪ್ಪಿಗೆ ಇರುವುದರಿಂದ ಜಡ್ಜ್ ಮುಂದೆ ಯೋಚಿಸದೆ "ಸರಿ ಹಾಗಿದ್ದರೆ ಈ ಕೇಸ್ ಅನ್ನು ಮೂರು ದಿನಗಳ ನಂತರ ಮತ್ತೆ ಕೇಳಲಾಗುವುದು " ಎಂದು ಷರಾ ಹಾಕಿ ಮೇಲೆದ್ದರು. ಸಧ್ಯಕ್ಕೆ ಬೀಸುವ ದೊಣ್ಣೆ ತಪ್ಪಿತು ಎಂದುಕೊಂಡ ಶಾಸ್ತ್ರಿ. ಸರೋವರಾ ಯಾವುದಕ್ಕೂ ಇರಲಿ ಎಂದು ಜಾನಕಿರಾಮ್ ಬಳಿ ಹೋಗಿ ಮತ್ತೆ ನಮಸ್ಕರಿಸಿ ಥ್ಯಾಂಕ್ಸ್ ಎಂದಳು.
ಸುಮ್ಮನೆ ಒಂದು ನಗು ನಕ್ಕು ಅವಳ ಬೆನ್ನು ತಟ್ಟಿ ಹೊರನಡೆದ ಜಾನಕಿರಾಮ್. ಅಲ್ಲಿಯೇ ಪಕ್ಕದಲ್ಲಿ ಅವರ ಜೊತೆ ಮಾತನಾಡಬೇಕು ಎಂದು ಬಂದು ನಿಂತ ಪ್ರತಾಪ್ ನನ್ನು ನಿರ್ಲಕ್ಷಿಸಿ ದುಡುದುಡು ಹೊರನಡೆದಿದ್ದರು. ಸರೋವರಾ ಆತನ ಮುಖ ನೋಡಿದಳು. ಆತ ತಲೆ ತಗ್ಗಿಸಿ ಜಾನಕಿರಾಮ್ ರ ಹಿಂದೆ ನಡೆದ.
ಇಬ್ಬರು ಕಾನಸ್ಟೆಬಲ್ ಗಳು ಬಂದು ಶಾಸ್ತ್ರಿಯನ್ನು ಕರೆದುಕೊಂಡು ಹೊರಟರು. ಹತ್ತಿರದಲ್ಲಿಯೇ ಇದ್ದ ಡೊಂಗ್ರಿ ಜೈಲಿಗೆ ಒಯ್ಯುತ್ತಾರೆ ಶಾಸ್ತ್ರಿಯನ್ನು. ಮೂರು ದಿನವೂ ಸರೋವರಾ ಎರಡು ಘಂಟೆ ಸಮಯ ಕಳೆಯಬಹುದು ಆತನ ಜೊತೆ. ಸರೋವರಾ ಆತನ ಬಳಿ ಬಂದು ನಾಳೆ ಸಿಗುತ್ತೇನೆ ಶಾಸ್ತ್ರಿ. ನೋಡೋಣ.. ನಮ್ಮಿಂದ ಏನು ಮಾಡಲು ಸಾಧ್ಯವೆಂದು.. ಎಂದಳು. ಶಾಸ್ತ್ರಿ ತಲೆಯಾಡಿಸಿದ.
"ಸರೋವರಾ, ನಾಳೆ ಬರುವಾಗ ಒಂದು ತಿಂಗಳ ನ್ಯೂಸ್ ಪೇಪರ್ ತರಬಲ್ಲೆಯಾ?? ಇಲ್ಲವೇ ಒಂದು ಲ್ಯಾಪ್ ಟಾಪ್ ಮತ್ತು Dongle ವ್ಯವಸ್ಥೆ ಮಾಡಿದರೆ ಇನ್ನು ಒಳ್ಳೆಯದು.." ಎಂದ ಶಾಸ್ತ್ರಿ.
ಸರೋವರಾ ಮುಗುಳ್ನಕ್ಕಳು. "ಅದೇನು ನಿನ್ನ ಮಾವನ ಮನೆ ನೋಡು ಅದೆಲ್ಲವನ್ನು ಬಿಡಲು. ನೀನು ನಡೆದದ್ದೆಲ್ಲವನ್ನು ಹೇಳು ನಾವೇನಾದರೂ ಮಾಡಲಾಗುತ್ತದೋ ಯೋಚಿಸೋಣ."
ಕಾನಸ್ಟೆಬಲ್ ಶಾಸ್ತ್ರಿಯ ಕೈಗೆ ಕೋಳ ಹಾಕಿ ಮುಂದಕ್ಕೆ ಕರೆದೊಯ್ದ. ಸರೋವರಾ ನೋಡುತ್ತಲೇ ನಿಂತಳು. ಶಾಸ್ತ್ರಿ ಪೊಲೀಸ್ ವ್ಯಾನ್ ಹತ್ತಿದ. ವ್ಯಾನ್ ಮುಂದೆ ಸಾಗುತ್ತಿದ್ದರೆ ಕಂಬನಿ ತುಂಬಿದ ಅವಳ ಕಣ್ಣುಗಳು ಹೋಗುತ್ತಿರುವ ವ್ಯಾನನ್ನೇ ಹಿಂಬಾಲಿಸಿತು. ಚಿತ್ರ ಮಸುಬು ಮಸುಬಾಗಿ ಕಂಡಿತು.
ಜಾನಕಿರಾಮ್ ಹಿಂದೆಯೇ ನಡೆದು ಬಂದ ಪ್ರತಾಪ್ ಸರ್, ಒಂದು ಮಾತು.. ಎಂದ. ಆಗಷ್ಟೇ ಜಾನಕಿರಾಮ್ ತಮ್ಮ ಮೊಬೈಲ್ ತೆಗೆದು ಪ್ರತಾಪ್ ನ ಮೆಸೇಜ್ ನೋಡಿದರು.
ಮೆಸೇಜ್ ಓದದೇ "ಏನು ಪ್ರತಾಪ್?? ಕೋರ್ಟಿನಲ್ಲಿ ಹೇಗೆ ವಾದಿಸಬೇಕೆಂದು ನೀವು ನನಗೆ ಹೇಳಿಕೊಡಬೇಕಾಗಿಲ್ಲ. ನನ್ನ ತಲೆ ನೆರೆತದ್ದು ಕೋರ್ಟಿನಲ್ಲಿಯೇ.. " ಎಂದು ಸಿಡುಕಿದರು.
"ಸರ್, ಅದು ಹಾಗಲ್ಲ. ನಾನು ಒಂದು ವಿಷಯ ನಿಮಗೆ ಹೇಳಬೇಕೆಂದಿದ್ದೆ. ಲಾಯರ್ ಆಗಿ ಬಂದಿದ್ದಾಳಲ್ಲಾ ಸರೋವರಾ, ಅವಳು.. ಶಾಸ್ತ್ರಿಯ ಪ್ರೇಯಸಿ. ಅವನ ಮೇಲೆ ಮೊದಲು ಕಂಪ್ಲೇಂಟ್ ಕೊಟ್ಟವಳು ಅವಳೇ" ಎಂದು ಅವರ ಮುಖ ನೋಡಿದ.
ಅಷ್ಟರಲ್ಲಿ ಜಾನಕಿರಾಮ್ ಪ್ರತಾಪ್ ಕಳಿಸಿದ್ದ ಮೆಸೇಜ್ ಕೂಡ ಓದಿದ್ದರು. ತನ್ನನ್ನು ಹೇಗೆ ಖೆಡ್ಡಾಕ್ಕೆ ಕೆಡವಿದಳು ಎಂದುಕೊಂಡಾಗ ಅವರಿಗೆ ತಕ್ಷಣ ಏನು ಹೇಳಬೇಕು ತಿಳಿಯಲಿಲ್ಲ. ಸುಮ್ಮನೆ ತಲೆಯಾಡಿಸಿದರು ಜಾನಕಿರಾಮ್. "ಓಹೋ.. ಹೀಗೂ ಇತ್ತೇ?? ಸರಿ ತೊಂದರೆಯೇನಿಲ್ಲ. ಅವನಿಗೆ ಬೇಲ್ ಸಿಗಲು ಸಾಧ್ಯವೇ ಇಲ್ಲ. ಮೂರು ದಿನದ ನಂತರ ನೀನೇ ಕರೆದೊಯ್ಯುವಂತೆ." ಎಂದು ಸಮಾಧಾನದ ಉತ್ತರವನ್ನೇ ನೀಡಿದರು. ಆದರೆ ಅವರ ಅಂತರಂಗ ಕುದಿಯುತ್ತಿತ್ತು. ಟ್ರಿಕ್ ಮಾಡಿ ತನ್ನಿಂದ ಸಮಯ ತೆಗೆದುಕೊಂಡರು. ತನ್ನ ಸರ್ವಿಸ್ ನಲ್ಲಿಯೇ ಹೀಗೊಂದು ಘಟನೆ ನಡೆದಿರಲಿಲ್ಲ. ಸರೋವರಾ.. ಶಾಸ್ತ್ರಿ.. You guys will pay for it.. ಎಂದುಕೊಂಡರು. ಅಷ್ಟರಲ್ಲಿ ಸರೋವರಾ ಅವರ ಎದುರಿನಲ್ಲಿಯೇ ಬಂದಳು. ಮತ್ತದೇ ನಗು ನಕ್ಕಳವಳು. ಈ ಬಾರಿ ಜಾನಕಿರಾಮ್ ನಗಲಿಲ್ಲ. ಅವರ ಮುಖದ ಕೆಂಪನ್ನು ನೋಡಿಯೇ ವಿಷಯ ಇವರಿಗೆ ತಿಳಿಯಿತು ಎಂಬುದರ ಅರಿವಾಯಿತು ಅವಳಿಗೆ. ತಲೆ ತಗ್ಗಿಸಿ ಆಕೆ ಸುಮ್ಮನೆ ಮುಂದೆ ನಡೆದಳು. ಜಾನಕಿರಾಮ್ "ಸಿಗು ನೀನು ಇನ್ನೊಮ್ಮೆ ಕೋರ್ಟಿನಲ್ಲಿ" ಎನ್ನುವಂತೆ ಅವಳನ್ನೇ ನೋಡುತ್ತಾ ಉಳಿದ. ದೂರ ದೂರ ನಡೆದ ಸರೋವರಾ ಮಸುಬು ಮಸುಬಾಗಿ ಕಂಡಳು ಜಾನಕಿ ರಾಮ್ ರಿಗೆ.
ಇನ್ನು ಅವರಿಬ್ಬರು ಕೋರ್ಟಿನಲ್ಲಿ ಸಿಗಲು ಬಹಳಷ್ಟು ದಿನವೇ ಕಾಯಬೇಕು ಎಂದು ಜಾನಕಿ ರಾಮ್ ರಿಗೆ ಆ ಕ್ಷಣದಲ್ಲಿ ತಿಳಿದಿರಲಿಲ್ಲ. ಅವರಿಗೇ ಏನು?? ಶಾಸ್ತ್ರಿ ಮತ್ತು ಸರೋವರಾಳಿಗೂ ಆ ವಿಷಯದ ಅರಿವಿರಲಿಲ್ಲ.
*.................................................*............................................................*
ಪಾಸ್ ವರ್ಡ್ ಹ್ಯಾಕ್ ಮಾಡಲು ಮತ್ತೆ ಸರ್ವರ್ ಮಷಿನ್ ಗಳನ್ನು ಉಪಯೋಗಿಸುವುದೇ ಎಂದು ಯೋಚಿಸಿದ ವಿಹಾರಿ. ಯಾಕೋ ಅವನ ಮನಸ್ಸು ಈ HIM ಒಳಗೇ ಈ ಪಾಸ್ ವರ್ಡ್ ಕೂಡ ಅಡಕವಾಗಿದೆ ಎಂದು ಹೇಳಲು ಪ್ರಾರಂಭಿಸಿತ್ತು. ಯಾಕೆಂದರೆ ಇದೇ 'HIM' 'WIH' ಆಗಿ ಆತನಿಗೆ ಬ್ಯಾಂಕ್ ಹೆಸರು ನೀಡಿತ್ತು. ಎರಡನೆಯದಾಗಿ ಎಕೌಂಟ್ ಹೆಸರು HIM. ಮಗನ ಹೆಸರಿನ ಮೊದಲ ಮೂರು ಇನ್ಷಿಯಲ್ ಸ್ಪೆಲ್ ಇಟ್ಟಿದ್ದಾಳೆ. ಆದರೆ HIM ನಲ್ಲೇ ಏನೋ ಇದೆ. ಈ ಎಕೌಂಟ್ ಒಳಗೆ ಏನಿರಬಹುದು? ಕೇವಲ ದುಡ್ಡು ಮಾತ್ರ ಅಲ್ಲ. ಇತರ ಸೀಕ್ರೆಟ್ ಗಳನ್ನು ಕೂಡ ಕಾಯುತ್ತವೆ ಇಂತಹ ಬ್ಯಾಂಕ್ ಗಳು. ಹಾಗಾಗಿ ಒಳಗೆ ಏನಿದೆ ಎಂದು ಹೇಳಲಾಗದು. ಆದರೆ ಊಹಾಪೋಹಗಳ ಪ್ರಕಾರ ಪ್ರಿಯಂವದಾ ರಾಜ್ ಅದೆಷ್ಟೋ ಕಪ್ಪು ಹಣವನ್ನು ಕೂಡಿಟ್ಟಿದ್ದಾಳೆ. ಕಪ್ಪು ಧಂಧೆಯೊಂದು ಇರದಿದ್ದರೆ ಭಾರತದ ಪರಿಸ್ಥಿತಿ ಹೇಗಿರುತ್ತಿತ್ತೋ?? ಎಲ್ಲರೂ ಕಳ್ಳರೇ. Money.. Black money.. ಕುಳಿತಿದ್ದ ಖುರ್ಚಿಯಲ್ಲಿ ಸುಮ್ಮನೆ ಹಿಂದೆ ಮುಂದೆ ಜೋಲಿ ಹೊಡೆಯತೊಡಗಿದ. Money.. Black money..
ಒಮ್ಮೆಲೇ ಶಾಕ್ ತಗುಲಿದಂತಾಯಿತು. HIM.. M for money.. HI Money..
ತಟಕ್ಕನೆ ಎದ್ದು ಕುಳಿತು ಪಾಸ್ ವರ್ಡ್ HI Money ಎಂದು ಹೊಡೆದ.
ಮುಂದಿನ ಕ್ಷಣ ಆತನ ಪರದೆಯ ಮೇಲೆ ಮೂಡಿದ ಅಕ್ಷರಗಳನ್ನು ಆತನೇ ನಂಬದಾದ. ಆತನಿಗೆ ತಾನು ನೋಡುತ್ತಿರುವುದು ಸುಳ್ಳಾ?? ನಿಜವಾ?? ಏನೆಂದು ಅರ್ಥವಾಗದಾಗಿತ್ತು.
ಪ್ರಿಯಂವದಾ ರಾಜ್, ಇಂಡಿಯಾ. ಎಮೌಂಟ್- 25,00,00,00,00,00,00,00,00,000. ಅದನ್ನು ಹೇಗೆ ಓದಬೇಕೆಂದು ತಿಳಿಯಲಿಲ್ಲ ಆತನಿಗೆ.
ಸುಧಾರಿಸಿಕೊಂಡು ಓದತೊಡಗಿದ. ಅಲ್ಲಲಿ ಕಾಮಾ ಹಾಕಿಕೊಂಡು ಕೊನೆಯಲ್ಲಿ ಬಂದ ಮೊತ್ತ ಇಪ್ಪತೈದು ಲಕ್ಷ ಸಾವಿರ ಕೋಟಿ ಡಾಲರ್. ಆತನ ತಲೆ ಸಂವೇದನೆ ನೀಡುವುದನ್ನೇ ನಿಲ್ಲಿಸುವುದರಲ್ಲಿತ್ತು. ಒಂದು HIM ನ ಹಿಂದೆ ಇಷ್ಟು ದುಡ್ಡು. ಈಗ ಪ್ರಿಯಂವದಾ ರಾಜ್ ಸತ್ತರೆ ಇದರ ನಾಮಿನಿ ಯಾರಿರಬಹುದು? ಪಟಪಟನೆ ಇನ್ನುಳಿದ ಡಿಟೇಲ್ ನೋಡತೊಡಗಿದ.
ಇಷ್ಟು ದುಡ್ಡನ್ನು ಹೇಗೆ ಕಸ್ಟಮ್ ಕಣ್ಣು ತಪ್ಪಿಸಿ ಹೊರಗೆ ಒಯ್ದಿರಬಹುದು? ಇದರಲ್ಲಿ ಒಂದು ಪೈಸೆ ಕೂಡ Online transaction ಮಾಡಿದ ಹಣವಲ್ಲ. ಇದೆಲ್ಲವೂ ಇಂಡಿಯಾ ಗವರ್ನ್ ಮೆಂಟ್ ಗೆ ತಿಳಿಯದಂತೆ ಹೊರಗೆ ಹಾರಿದ ಹಣ. ಹೇಗೆ ಸಾಧ್ಯ??
ವಿಹಾರಿಗೆ ನಗು ಬಂತು. ಪ್ರಿಯಂವದಾ ರಾಜ್ ತಾನೇ ಒಂದು ಗವರ್ನ್ ಮೆಂಟ್ ಇದ್ದಂತೆ. ಪ್ರತಿ ಸಲ ತನ್ನ ಪ್ರೈವೇಟ್ ಫ್ಲೈಟ್ನಲ್ಲಿ ಹೊರಹಾರಿದಾಗ ಫ್ಲೈಟ್ ತುಂಬ ದುಡ್ಡೇ ಹೊತ್ತು ತಂದಿರಬೇಕು. ಅವಳ ಫ್ಲೈಟ್ ಚೆಕ್ ಮಾಡುವ ಯೋಗ್ಯತೆ ಯಾರಿಗೆ ತಾನೇ ಇದೆ? ಇವಿಷ್ಟು ಹಣವನ್ನು ಯಾಕಾದರೂ ಕೂಡಿಟ್ಟಿದ್ದಾಳೆ. ಈಗ ಸಾಯಲು ಬಿದ್ದಿದ್ದಾಳೆ.
ಕಂಪ್ಯೂಟರ್ ನಲ್ಲಿ ಉಳಿದ ವಿಚಾರಗಳನ್ನು ಓದುತ್ತಿದ್ದ ವಿಹಾರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ನಾಮಿನಿಯ ಹೆಸರೇ ಇಲ್ಲ. ಪ್ರಿಯಂವದಾ ಸತ್ತರೆ ಹಣ ಬರುವುದು ಹಿಮಾಂಶುವಿಗೆ. ಆದರೆ ಇಂತಹ ಕಪ್ಪು ದಂಧೆ ಯಾರನ್ನು ನಂಬುವುದಿಲ್ಲ. ನಾಮಿನಿ ಇಲ್ಲದಿದ್ದರೆ ಅವೆಷ್ಟು ದುಡ್ಡು ಕೊಳೆತರು, ಲಡ್ಡಾಗಿ ಮಣ್ಣಾದರೂ ಯಾರೂ ಮುಟ್ಟಲಾರರು. ಹಾಗಾಗಿದ್ದಲ್ಲಿ ಯಾಕೆ ಪ್ರಿಯಂವದಾ ಹಿಮಾಂಶುವಿನ ಹೆಸರು ಬರೆದಿಲ್ಲ? ಇದೊಳ್ಳೆ ಕಗ್ಗಂಟು ಆಯಿತಲ್ಲ ಎಂದುಕೊಂಡ ವಿಹಾರಿ.
ನನಗೆ ಸಮ್ಮಿಶ್ರ ಕೊಟ್ಟ ಕೆಲಸವನ್ನಂತೂ ಮಾಡಿ ಮುಗಿಸಿದ್ದೇನೆ. ಮುಂದೇನು ಮಾಡುವುದು? ಇದರ ಬಗ್ಗೆ ಸಮ್ಮಿಶ್ರನಿಗೆ ಹೇಳಿದರು ಕೂಡ ಆತ ಏನು ಮಾಡಬಲ್ಲ? ಇದರ ಒಂದು ಪೈಸೆ ಕೂಡ ಆತ ಉಪಯೋಗಿಸಿಕೊಳ್ಳಲಾರ. ಆದರೆ ಮೊದಲು ಈ ಬ್ಲ್ಯಾಕ್ ಮನಿಯನ್ನೆಲ್ಲ ವೈಟ್ ಮಾಡಬೇಕು. ಅದು ಅಷ್ಟು ಸುಲಭದಲ್ಲಿ ಸಾಧ್ಯವಿಲ್ಲ.
ಹವಾಲಾ ದಂಧೆ ಎಷ್ಟು ಮುಂದುವರೆದರೂ ಒಂದು ಸಾವಿರ ಕೋಟಿಗಳನ್ನು ಬ್ಲ್ಯಾಕ್ ಟು ವೈಟ್ ಮಾಡುವುದೇ ಹೊರತೂ ಹೀಗೆ ಓದಲು ಬಾರದ ಸಂಖ್ಯೆಗಳನ್ನಲ್ಲ. ಅಷ್ಟರಲ್ಲಿ ಒಂದು ಯೋಚನೆ ಹೊಳೆಯಿತು. ಇವಿಷ್ಟು ದುಡ್ಡನ್ನು ತಾನು ಲಪಟಾಯಿಸಿ ಬಿಟ್ಟರೆ ಹೇಗೆ? ಒಮ್ಮೆಲೇ ಮನಸ್ಸು ಖುಷಿಗೊಂಡಿತು. ಜಗತ್ತಿನ ಅತ್ಯಂತ ದೊಡ್ಡ ಹಗರಣ ಮಾಡುವ ತನ್ನ ಯೋಚನೆ ಹೀಗೆ ಫಲಪ್ರದವಾಗುತ್ತದೆ ಎಂದುಕೊಂಡಿರಲಿಲ್ಲ. ಅನ್ವೇಷಣಾ ತನ್ನ ಜೊತೆ ಇದ್ದರೆ ಏನೆಂದುಕೊಳ್ಳುತ್ತಿದ್ದಳೋ!?
ನಾನೀ ಹಣವನ್ನು ಲಪಟಾಯಿಸುವುದಾದರೂ ಹೇಗೆ? ಏಕೆಂದರೆ ತನ್ನೆದುರು ಕಾಣುವ ಸಂಖ್ಯೆ ಚಿಕ್ಕ ಪುಟ್ಟ ಬ್ಯಾಂಕ್ ಗಳಂತೆ ಟ್ರಾನ್ಸ್ ಫರ್ ಮಾಡಲು ಬರುವ ಹಣವಲ್ಲ. ಇದು ಕೇವಲ ಇನ್ ಫಾರ್ಮೇಶನ್. ಒಂದು ರೂಪಾಯಿ ತೆಗೆದುಕೊಳ್ಳುವುದಾದರೂ ಹಾರ್ಡ್ ಕ್ಯಾಶ್ ತೆಗೆದುಕೊಳ್ಳಬೇಕಾಗುತ್ತದೆ ಹೊರತೂ Online transfer ಆಗುವುದಿಲ್ಲ. ಹೇಗೆ!? ಹೇಗೆ ತೆಗೆದುಕೊಳ್ಳುವುದು?
ಒಂದು ಯೋಚನೆ ಹೊಳೆಯಿತು ವಿಹಾರಿಗೆ. ನಾಮಿನಿಯ ಜಾಗದಲ್ಲಿ ತನ್ನ ಡಿಟೇಲ್ ಸೃಷ್ಟಿ ಮಾಡಿ ಲಿಂಕ್ ಕೊಟ್ಟುಬಿಟ್ಟ. ಏನಾದರೂ ಪ್ರಿಯಂವದಾ ರಾಜ್ ಸತ್ತು ಬಿಟ್ಟರೆ ಇವಿಷ್ಟು ಹಣ ತನ್ನ ಹೆಸರಿಗೆ. ಸಾಯದೆ ಏನಾದರೂ ಆಕೆ ಮತ್ತೆ ಈ ಡಿಟೇಲ್ಸ್ ನೋಡಿದರೆ ಏನಾಗಬಹುದು?
ಪೊಲೀಸರಿಗಂತೂ ಹೇಳಲು ಸಾಧ್ಯವಿಲ್ಲ. ಹೆಚ್ಚೆಂದರೆ ತನ್ನ ಜೊತೆ ಸಂಧಾನ. ಇಲ್ಲದಿದ್ದರೆ ಕೊಲ್ಲಿಸುತ್ತಾಳೆ. ಅದನ್ನು ಆ ಕಾಲಕ್ಕೆ ನೋಡಿದರಾಯಿತು.
ಪಟಪಟನೆ ಆವಿಷ್ಟನ್ನು ಮಾಡಿ ಸೆಟ್ ಮಾಡಿಬಿಟ್ಟ. ನೂರಾರು ಪೇಜ್ ಇದ್ದ ಒಂದು PDF Document ಇತ್ತು. ಅದರ ಮೇಲೆ ಸುಮ್ಮನೆ ಕಣ್ಣಾಡಿಸಿದ. ದುಡ್ಡನ್ನು ಹೇಗೆ ತೆಗೆಯಬೇಕು ಎಂಬ ವಿವರಗಳೆಲ್ಲ ವಿಹಾರಿಯ ಮನದಲ್ಲಿ ಅಚ್ಚಾಯಿತು.
ತನ್ನ ಕೆಲಸದ ಮೇಲೆ ಪೂರ್ತಿ ನಂಬಿಕೆ ಬಂದ ಮೇಲೆ ಎಲ್ಲವನ್ನು ಸೇವ್ ಮಾಡಿ ಫೈರ್ ವಾಲ್ ನಿಂದ ಹೊರಬಿದ್ದ ವಿಹಾರಿ.
ಎರಡು ದಿನದಿಂದ ಎಡಬಿಡದೆ ಕಂಪ್ಯೂಟರ್ ನೋಡುತ್ತ ಕುಳಿತಿದ್ದರಿಂದ ಆತನ ಕಣ್ಣುಗಳು ಕೆಂಪಾಗಿ ಉರಿಯುತ್ತಿತ್ತು. ಅಸಾಧ್ಯವನ್ನೇ ಬೇಧಿಸಿದಂತೆ ಅನ್ನಿಸಿತವನಿಗೆ.
ಒಂದರ್ಥದಲ್ಲಿ ಇದೇ ಪ್ರಪಂಚದ ದೊಡ್ಡ ಗೋಲ್ ಮಾಲ್ ಇರಬಹುದೇನೋ!! ಪ್ರಿಯಂವದಾ ರಾಜ್ ಸತ್ತರೆ ತನಗೆ ಬರುವ ಹಣದ ಬಗ್ಗೆ ಯೋಚನೆ ಮಾಡಿದರೆ ತಲೆ ಕೆಡುತ್ತಿತ್ತು ಆತನಿಗೆ.
ಇನ್ನುಳಿದಿರುವುದು ಸಮ್ಮಿಶ್ರನಿಗೆ ಇರುವ ವಿಷಯ ಹೇಳುವುದು... ಆತನ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳುವುದು...
ಒಂದು ಗಾಢವಾದ ಉಸಿರೆಳೆದುಕೊಂಡು ಸಮ್ಮಿಶ್ರನಿಗೆ ಫೋನಾಯಿಸಿದ ವಿಹಾರಿ. ಆ ಕಡೆಯಿಂದ ಕಾಲ್ ಕಟ್ ಆಯಿತು. ಇನ್ನು ಸಮ್ಮಿಶ್ರ ಬರುವವರೆಗೆ ಕಾಯುವುದಷ್ಟೇ ಕೆಲಸ. ಕಣ್ಣು ಮುಚ್ಚಿದ ವಿಹಾರಿ.
ನಿದ್ರೆ ಆತನನ್ನು ತನ್ನ ತೆಕ್ಕೆಗೆ ಎಳೆದುಕೊಂಡಿತು.. ಜೈಲು ಆತನನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಯ್ದಿದೆ ಎಂದು ಆತನಿಗೆ ಆ ನಿಮಿಷದಲ್ಲಿ ಗೊತ್ತಿರಲಿಲ್ಲ
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/