Saturday, July 23, 2016

ಖತರ್ನಾಕ್ ಕಾದಂಬರಿ.. ಅಧ್ಯಾಯ 13

                                               ಖತರ್ನಾಕ್ ಕಾದಂಬರಿ.. ಅಧ್ಯಾಯ 13

ಪ್ರಿಯಂವದಾ ರಾಜ್ ಳ ಕಾರು ಕಾರ್ಯಕ್ರಮ ಮುಗಿಸಿ ಮನೆಯ ಕಡೆ ಹೊರಟಿತ್ತು. ದಣಿವಿನಿಂದ ಸೀಟಿಗೆ ಒರಗಿ ಕಣ್ಣು ಮುಚ್ಚಿಕೊಂಡಿದ್ದಳು ಪ್ರಿಯಂವದಾ. ಸಮ್ಮಿಶ್ರ ಅವಳ ಜೊತೆ ಸೇರಿದಾಗಿನಿಂದ ಆಕೆ ಮೈ ಮರೆಯುತ್ತಾಳೆ. ಸಮ್ಮಿಶ್ರ ಎಂಥ ವ್ಯಕ್ತಿ ಎಂದು ಆಕೆ ಹತ್ತು ವರ್ಷದಿಂದ ನೋಡಿದ್ದಾಳೆ, ನೋಡುತ್ತಿದ್ದಾಳೆ. ಹಾವಿನಷ್ಟು ಸೂಕ್ಷ್ಮ ಆತ. ಹದ್ದಿನ ಕಣ್ಣಿನಷ್ಟು ಚುರುಕು. ಮೈ ಎಲ್ಲಾ ಕಣ್ಣಾಗಿರುತ್ತಾನೆ. ಅವಳ ಸುರಕ್ಷತೆಗಾಗಿ ಆತ ತನ್ನದೇ ಆದ ವಿಧಾನಗಳನ್ನು ಕೂಡ ಮೈಗೂಡಿಸಿಕೊಂಡಿದ್ದಾನೆ. ಅದು ಬೇರೆಯವರಿಗೆ ತಿಳಿಯದಂತೆ ಕೂಡ ಎಚ್ಚರಿಕೆ ವಹಿಸುತ್ತಾನೆ. ಅಂತಹ ಸೂಕ್ಷ್ಮ ವಿಚಾರಗಳೇ ಅವಳನ್ನು ಬಹಳಷ್ಟು ಸಲ ಉಳಿಸಿದ್ದು. ಹಾಗಾಗಿಯೇ ಸಮ್ಮಿಶ್ರ ಜೊತೆಯಿರುವನೆಂದರೆ ಪ್ರಿಯಂವದಾ ಮೈ ಮರೆತು ನಿದ್ರಿಸುತ್ತಿದ್ದಳು.
ಸಮ್ಮಿಶ್ರನೂ ಅಷ್ಟೆ. ಪ್ರಿಯಂವದಾಳ ರಕ್ಷಣೆಯೇ ಮೊದಲ ಆದ್ಯತೆ, ಉಳಿದದ್ದೆಲ್ಲವೂ ಆಮೇಲೆ. ಆತ ಮಲಗಿದಾಗ ಕೂಡ ಅವಳ ರಕ್ಷಣೆಯ ಬಗ್ಗೆಯೇ ಯೋಚಿಸುತ್ತಿದ್ದ. ನಿರಂತರ ಯೋಚನೆಗಳು ಆತನ ಕೆಲಸದಲ್ಲಿ ಹಲವು ಬದಲಾವಣೆಗಳನ್ನು ತಂದಿತ್ತು, ಕಾರು ಓಡಿಸುವುದರಲ್ಲಿಯೂ ಕೂಡಾ. ಆತ ಯಾವಾಗಲೂ ಒಂದೇ ಸ್ಪೀಡ್ ನಲ್ಲಿ ಕಾರು ಓಡಿಸುತ್ತಿರಲಿಲ್ಲ. ಸ್ವಲ್ಪ ಅಂಕು ಡೊಂಕಾಗಿ ಕಾರು ಓಡಿಸುವುದು, ಅವನು ತೆಗೆದುಕೊಳ್ಳುತ್ತಿದ್ದ ಇನ್ನೊಂದು ಮುನ್ನೆಚ್ಚರಿಕೆ. ಅವನಿಗೂ ಗೊತ್ತು ಈ ಕಪ್ಪು ದುನಿಯಾದಲ್ಲಿ ದೂರ ಕುಳಿತು ಗುಂಡು ಹಾರಿಸುವವರು ಕಡಿಮೆಯೇ, ಏನಿದ್ದರೂ ಖುಲ್ಲಂ ಖುಲ್ಲಾ. ಎದುರಿನಿಂದ ಬಂದು ಉಡಾಯಿಸಿ ಬಿಡುತ್ತಾರೆ. ಇಂಥವರಿಗೆ ಶಾರ್ಪ್ ಶೂಟರ್ಸ್ ಎನ್ನುತ್ತಾರೆ. ಸ್ನೈಪರ್ ಬದಲಾಗಿ kalashnikov ಬಳಸುವ ಕಾಲವಿದು. ಒಮ್ಮೆ ಟ್ರಿಗರ್ ಒತ್ತಿದರೆ ಎಷ್ಟು ಬುಲೆಟ್ ಚಿಮ್ಮಿತು ಎಂದು ಲೆಕ್ಕ ಹಾಕುವುದು ಕಷ್ಟ. ಒಂದು ನಿಮಿಷಕ್ಕೆ ೬೦೦ ರೌಂಡ್ rotate ಆಗುವ ಸಾಮರ್ತ್ಯವಿದೆ ಕಲಾಶ್ನಿಕೋವ್ ಗೆ. ಕಣ್ಣು ಮುಚ್ಚಿ ತೆರೆಯುವುದರಲ್ಲಿ ಎದುರು ನಿಂತವರು ಪುಡಿ ಪುಡಿ ಆಗಿ ಬಿಡುತ್ತಾರೆ. ದೂರ ಕುಳಿತು ಗುರಿ ಹಿಡಿಯುವುದು, ಗುರಿ ತಾಗಿತೋ ಇಲ್ಲವೋ ಎಂದು ಅನುಮಾನ ಪಡುವುದು. ನೋ, ಇವ್ಯಾವುದು ಇಲ್ಲ ಈಗ. ಹತ್ತಿರ ಬಂದು ಟ್ರಿಗರ್ ಒತ್ತಿ ಕ್ಷಣದಲ್ಲಿ ಮಾಯವಾಗಿ ಬಿಡುತ್ತಾರೆ.
ಆದರೂ ಸಮ್ಮಿಶ್ರನಿಗೆ ಅದೊಂದು ಮುಂಜಾಗ್ರತೆ. ಓಲ್ಡ್ ಇಸ್ ಗೋಲ್ಡ್. ಸೆಕ್ಯೂರಿಟಿಗೆ ಹೆದರಿ, ಹತ್ತಿರ ಬರಲು ಅಂಜಿ ಯಾರಾದರೂ ದೂರ ಕುಳಿತು ಗುರಿ ಹಿಡಿದರೆ ಎಂಬುದೊಂದೇ ಕಾರಣಕ್ಕೆ ಆತ ಕಾರನ್ನು ವಕ್ರ ವಕ್ರವಾಗಿ ಚಲಾಯಿಸುತ್ತಾನೆ. ವೇಗದಲ್ಲಿ ಕೂಡ ಏರಿಳಿತವಿರುತ್ತದೆ. ಹೋಗುವ ದಾರಿ ತೆರೆದೇ ಇರುವುದರಿಂದ ಆತನಿಗೆ ಹಾಗೆ ಕಾರು ಚಲಾಯಿಸುವುದು ಕಷ್ಟವೇನಲ್ಲ.
ಆದರೆ ಅಂದು ಸಮ್ಮಿಶ್ರ ಬೇರೆಯದೇ ಲಹರಿಯಲ್ಲಿದ್ದ. ಬೆಳಿಗ್ಗೆ ಬೆಳಿಗ್ಗೆ ಹಿಮಾಂಶುವಿನ ಜೊತೆ ಸನ್ನಿ ಚಡ್ಡಾನನ್ನು ನೋಡಿದ್ದು ಅವನ ಅನ್ಯಮನಸ್ಕತೆಗೆ ಕಾರಣವಾಗಿತ್ತು. ಆತ ಹಿಮಾಂಶುವಿಗೆ ಅದೆಷ್ಟೋ ಬಾರಿ ಹೇಳಿದ್ದಾನೆ ಸನ್ನಿ ಚಡ್ಡಾನ ಸಹವಾಸ ಬೇಡವೆಂದು. ರಾಜಕೀಯದಲ್ಲಿ ಇರುವವರು ನಿಜವಾದ ಜನಸೇವೆ ಮಾಡಿದರೆ ಗೆಲ್ಲುವುದು ಕಷ್ಟವಿಲ್ಲ. ಹಣ ಹಂಚುವ ಅಗತ್ಯವೂ ಇಲ್ಲ. ಸನ್ನಿ ಚಡ್ಡಾನಂತಹ ರೌಡಿಗಳ ಸಹಾಯಗಳು ಕೂಡ ಬೇಡ. ಅದನ್ನೇ ಸಾರಿ ಸಾರಿ ಹೇಳಿದ್ದ ಹಿಮಾಂಶುವಿಗೆ. ಹಿಮಾಂಶುವಿನ ಮೇಲೆ ಯಾವುದೇ ಪ್ರೀತಿಯಾಗಲೀ, ಸಲುಗೆಯಾಗಲೀ ಇಲ್ಲ ಸಮ್ಮಿಶ್ರನಿಗೆ. ಪ್ರಿಯಂವದಾ ರಾಜ್ ಳ ಮೇಲಿರುವ ಗೌರವವೊಂದೇ ಹಿಮಾಂಶುವಿಗೆ ಶ್ರೀರಕ್ಷೆ. ಬೆಳಗ್ಗಿನಿಂದ ಅದೇ ಗುಂಗಿನಲ್ಲಿದ್ದ ಸಮ್ಮಿಶ್ರ , ಕಾರಿನ ಒಳಗೆ ಸಣ್ಣಗೆ ಹರಡಿರುವ ಗಾಟು ವಾಸನೆಯನ್ನು ಗಮನಿಸಲಿಲ್ಲ. ಹಾಗೊಂದು ವೇಳೆ ಆತನ ಗಮನಕ್ಕೆ ಬಂದಿದ್ದರೆ ಪ್ರಿಯಂವದಾ ರಾಜ್ ಅಂದು ಆ ದಾರಿಯಲ್ಲಿ, ಆ ಕಾರಿನಲ್ಲಿ ಹೋಗುತ್ತಲೇ ಇರಲಿಲ್ಲ. ಹೈಡ್ರೋ ಫ್ಲೋರಿಕ್ ಆಸಿಡ್ ತನ್ನ ಪಾಡಿಗೆ ತಾನು ಗಾಜಿನ ಬುಲೆಟ್ ಪ್ರೂಫ್ ಗಟ್ಟಿತನವನ್ನೆಲ್ಲಾ ನಾಶ ಮಾಡಿ ಕುಳಿತಿತ್ತು.
ಸಮ್ಮಿಶ್ರ ತನ್ನದೇ ಗುಂಗಿನಲ್ಲಿ ಕಾರು ಓಡಿಸುತ್ತಿದ್ದ. ಬೆಂಗಾವಲು ಪಡೆಯ ವಾಹನಗಳು ಹಿಂದೆರಡು ಮುಂದೆರಡು ಹೋಗುತ್ತಿದ್ದವು. ಫ್ಲಾಶಿಂಗ್ ಲೈಟ್ ಉರಿಯುತ್ತಿತ್ತು. ಅದರ ಜೊತೆಯಲ್ಲಿಯೇ ಸೈರನ್ ಸದ್ದು.
ಕಾರಿನ ಒಳಗೆ ಮಾತ್ರ ನಿಶ್ಯಬ್ದತೆ ತುಂಬಿತ್ತು. ಮಲಗಿದ್ದ ಪ್ರಿಯಂವದಾ ಒಮ್ಮೆಲೇ ವಿಕೃತವಾಗಿ ಚೀರಿಕೊಂಡಳು "ಅಮ್ಮಾ...." ಏನಾಯಿತೆಂದು ಅವಳಿಗೂ ತಿಳಿಯಲಿಲ್ಲ. ಕಾದ ಸಲಾಕೆಯೊಂದು ಅವಳ ದೇಹವನ್ನು ಇಬ್ಬಾಗವಾಗಿಸಿದಂತೆ ಅನ್ನಿಸಿತು. ಆಕೆಯ ಎಡ ಹೊಟ್ಟೆಯ ಬದಿಯಿಂದ ಹೊಕ್ಕ ಕಬ್ಬಿಣದ ಸಲಾಕೆ ಹೊಟ್ಟೆಯನ್ನು ಛಿದ್ರಗೊಳಿಸಿ ಬಲ ಪಕ್ಕದಿಂದ ಹಾದು ಹೋಗಿ ಬಿಟ್ಟಿತು. ರಕ್ತ ಬುಗ್ಗೆ ಬುಗ್ಗೆಯಾಗಿ ಹೊರಬರತೊಡಗಿತು. ಎರಡೂ ಕೈಯಿಂದಲೂ ಹೊರಗೆ ಬರುತ್ತಿರುವ ರಕ್ತವನ್ನು ತಡೆಯಲು ಪ್ರಯತ್ನಿಸುತ್ತ "ಸಮ್ಮಿಶ್ರ..." ಎಂದು ಕೂಗಿದಳು. ಸಮ್ಮಿಶ್ರ ಹಾಗು ಪ್ರಿಯಂವದಾ ನಡುವೆ ಒಂದು ಗಾಜಿನ ಪರದೆಯಿತ್ತು. ಹಿಂದೆ ನಡೆಯುವುದು, ಮಾತನಾಡುವುದು ಇದ್ಯಾವುದು ಎದುರು ಕುಳಿತವರಿಗೆ ಕೇಳದಿರಲಿ, ಕಾಣದಿರಲಿ ಎಂಬಂತಹ ವ್ಯವಸ್ಥೆಯದು. ಅದರಿಂದ ಏನು ನಡೆದಿದೆ ಎಂಬ ಸಣ್ಣ ಕಲ್ಪನೆಯೂ ಸಮ್ಮಿಶ್ರನಿಗೆ ಇರಲಿಲ್ಲ.
ಯಾವುದೇ ವಸ್ತು ಜೋರಾಗಿ ಗಾಜಿಗೆ ಬಡಿದಾಗ ಅಲಾರಾಂ ನೀಡುವ ಶಕ್ತಿಯನ್ನು ಗಾಜು ಕಳೆದುಕೊಂಡಾಗಿತ್ತು. ಸೆಕೆಂಡಿಗೆ ಕಿಲೋ ಮೀಟರ್ ವೇಗದಲ್ಲಿ ಕ್ರಮಿಸುವ ಬುಲೆಟ್ ಬಂದು ನಿಷ್ಪ್ರಯೋಜಕ ಗಾಜಿನೊಳಗೆ ಅದೇ ವೇಗದಲ್ಲಿ ಹೋಗಿ ಪ್ರಿಯಂವದಾಳ ಪಕ್ಕೆಯನ್ನು ಭೇದಿಸಿ ಹೊಟ್ಟೆಯನ್ನು ಇರಿದು ಬಲ ಪಕ್ಕದಿಂದ ಹೊರ ಚಿಮ್ಮಿ ಕಾರಿನ ಬಲ ಬದಿಯ ಬಾಡಿಗೆ ಸಿಕ್ಕಿಕೊಂಡಿತು.
ಅಷ್ಟು ವೇಗದಲ್ಲಿ ಬಂದ ಬುಲೆಟ್ ರಿವ್ಯೂ ಮಿರರ್ ನಲ್ಲಿ ಸಮ್ಮಿಶ್ರನಿಗಾಗಲಿ, ಹಿಂದೆ ಬರುತ್ತಿರುವ ಬೆಂಗಾವಲು ಪಡೆಯವರಿಗಾಗಲೀ ಕಾಣಿಸಲು ಸಾಧ್ಯವೇ ಇಲ್ಲವಾಗಿತ್ತು.
ಮತ್ತೆರಡು ಬಾರಿ "ಸಮ್ಮಿಶ್ರ.. ಸಮ್ಮಿಶ್ರ..." ಎಂದು ಕೂಗಿಕೊಂಡಳು ಪ್ರಿಯಂವದಾ. ಅವಳಿಗೆ ಅರಿವಾಯಿತು ತಾನು ಸೌಂಡ್ ಪ್ರೂಫ್ ಜಾಗದಲ್ಲಿ ಕುಳಿತಿದ್ದೇನೆ, ಎಷ್ಟು ಕೂಗಿದರೂ ಸಮ್ಮಿಶ್ರನಿಗೆ ಕೇಳಲಾರದು ಎಂದು. ಎದುರಲ್ಲಿ ಸಮ್ಮಿಶ್ರ ಕುಳಿತು ಡ್ರೈವಿಂಗ್ ಮಾಡುತ್ತಿರುವುದು ಅವಳಿಗೆ ಕಾಣುತ್ತಿದೆ. ಆದರೆ ಆ ಕಡೆಯವರಿಗೆ ಈ ಕಡೆ ಏನು ನಡೆಯುತ್ತಿದೆ ಎಂದು ಕಾಣಿಸುವುದಿಲ್ಲ.ಬುಲೆಟ್ ಕೇವಲ ಒಂದು ರಂಧ್ರ ಮಾಡಿ ಒಳಬಂದಿದೆ. ತಾನು ಕೂಗುವುದು ಸಣ್ಣದಾಗಿ ಹೊರಗೆ ಕೇಳುತ್ತಿರಬಹುದು. ಆದರೆ ಬೆಂಗಾವಲು ಪಡೆಯವರಿಗಾಗಲಿ, ಸಮ್ಮಿಶ್ರನಿಗಾಗಲೀ ಕೇಳಲು ಸಾಧ್ಯವಿಲ್ಲ. ಅತಿಯಾದ ನೋವು ಹಾಗೂ ರಕ್ತನಾಳಗಳ ಸಿಡಿಯುವಿಕೆಯಿಂದ ಅವಳ ಮೂಗು ಬಾಯಿಯಿಂದ ರಕ್ತ ಸುರಿಯತೊಡಗಿತು. ಅವಳಿಗೆ ತಿಳಿಯಿತು ತನ್ನ ಬಳಿ ಬಹಳ ಸಮಯವಿಲ್ಲ ಇನ್ನು, ತನ್ನ ಕೊನೆಯ ಆಸೆಯನ್ನು ಬರೆದುಬಿಡಬೇಕು ಇಲ್ಲವೇ ಹೇಳಿ ಬಿಡಬೇಕು. ಇನ್ನು ಪ್ರಿಯಂವದಾ ರಾಜ್ ಬದುಕಿರುವುದಿಲ್ಲ.
ಇದೆಲ್ಲವೂ ಸೆಕೆಂಡಿನ ಒಳಗೆ ನಡೆದುಹೋಗಿದೆ. ಪ್ರಿಯಂವದಾ ಮತ್ತೆ ಯೋಚಿಸಲಿಲ್ಲ. ತನ್ನ ಎದುರಿನಲ್ಲಿಯೇ ಇರುವ ಬಟನ್ ಅದುಮಿದರೆ ಪರದೆ ತೆರೆದುಕೊಳ್ಳುತ್ತದೆ. ರಕ್ತದಿಂದ ಪೂರ್ತಿ ಕೈ, ದೇಹದ ಬಣ್ಣವೇ ಬದಲಾಗಿತ್ತು. ತನ್ನ ತೋರು ಬೆರಳಿನಿಂದ ಎದುರಿನ ಗಾಜಿನ ಮೇಲೆ ತುಂಬ ಕಷ್ಟವಾಗಿ ಏನನ್ನೋ ಬರೆಯತೊಡಗಿದಳು. "HIM". ಕೈ ಮೇಲೆತ್ತಿರುವ ಕಾರಣ ರಕ್ತದ ಹರಿವು ಜೋರಾಗಿ ಕೆಳಗೆ ಕುಸಿಯುತ್ತಿತ್ತು ಕೈ. ಇನ್ನು ತಾನು ಸಾಯುತ್ತೇನೆ ಎಂದು ತಿಳಿಯಿತವಳಿಗೆ. ಎದುರಿಗಿದ್ದ ಬಟನ್ ಅದುಮಿದಳು. ಏನೋ ಬರೆಯಲು ಹೋಗಿ "HIM ಎಂದು ಅರ್ಧ ಬರೆದಿದ್ದ ಗಾಜು ಪಕ್ಕ ಸರಿಯಿತು. ಅದರ ಜೊತೆ ಅವಳು ಬರೆಯ ಹೊರಟಿದ್ದ ಸತ್ಯ, ಕೊನೆಯ ಆಸೆ ಕೂಡ ಅರ್ಧದಲ್ಲಿಯೇ ನಿಂತಿತು. ಗಾಜು ಸರಿಯುತ್ತಿದ್ದಂತೆಯೇ "ಸಮ್ಮಿಶ್ರ.." ಎಂದಳು. ಅದೇ ಅವಳು ಉಸುರಿದ ಕೊನೆಯ ಶಬ್ದ.
ಪ್ರಿಯಂವದಾಳ ಧ್ವನಿ ಕೇಳುತ್ತಲೇ ತಿಳಿದು ಹೋಯಿತು ಸಂಮಿಶ್ರನಿಗೆ ಏನೋ ನಡೆದಿದೆಯೆಂದು. ತಿರುಗಿ ನೋಡಿದ ಸಮ್ಮಿಶ್ರನ ಮೆದುಳು ಒಂದು ಕ್ಷಣ ಏನು ಮಾಡಬೇಕೆಂದು ತಿಳಿಯದೇ ನಿಯಂತ್ರಣ ಕಳೆದುಕೊಂಡಿತು. ಎರಡನೇ ಕ್ಷಣ ಬ್ರೇಕನ್ನು ತುಳಿದು ಸೈರನ್ ಜೋರಾಗಿಸಿ ಕಾರು ನಿಲ್ಲಿಸಿ ಹಿಂದಿನ ಸೀಟಿಗೆ ಜಿಗಿದ.
ಏನು ನಡೆದಿದೆ ಎಂದು ತಿಳಿದುಕೊಳ್ಳಬೇಕೋ? ಪ್ರಿಯಂವದಾಳನ್ನು ಬದುಕಿಸುವ ಪ್ರಯತ್ನ ಮಾಡಬೇಕೋ? ಏನೂ ತಿಳಿಯುತ್ತಿಲ್ಲ. ಪ್ರಿಯಂವದಾ ರಾಜ್ ಮಿಸುಕಾಡದೆ ಮಲಗಿದ್ದಾಳೆ. ಮೈ, ಕೈ, ಕಾರಿನ ಸೀಟುಗಳೆಲ್ಲ ರಕ್ತ ರಕ್ತ. ಚಿರತೆಯ ವೇಗದಲ್ಲಿ ಕಾರ್ಯ ನಿರ್ವಹಿಸತೊಡಗಿದ ಸಮ್ಮಿಶ್ರ. ಕಾರಿನ ಗಾಜನ್ನು ನೋಡಿದ. ಬುಲೆಟ್ ಪಾಸಾಗಿ ಬಂದ ರಂಧ್ರ ಕಂಡಿತು. ಮುಷ್ಠಿ ಕಟ್ಟಿ ಗಾಜಿನ ಮೇಲೊಂದು ಗುದ್ದಿದ. ಫಳ್ ಎಂದು ಒಡೆದು ಪುಡಿ ಪುಡಿಯಾಗಿ ಹೊರಗೆ ಬಿದ್ದಿತು ಗಾಜು.
ಅಷ್ಟರಲ್ಲಿ ಬೆಂಗಾವಲು ಪಡೆಯ ಕಾರು, ಜೀಪುಗಳು ರಾಜ್ ಳ ಕಾರನ್ನು ಸುತ್ತುವರೆದಿದ್ದವು. ಎಮರ್ಜೆನ್ಸಿ ಕಂಡೀಷನ್ ಗಳಲ್ಲಿ ಹೇಗೆ ಆಕ್ಟ್ ಮತ್ತು ರಿಯಾಕ್ಟ್ ಆಗಬೇಕೆಂದು ಅವರಿಗೆಲ್ಲ ತರಬೇತಿ ಇರುತ್ತದೆ. ಸಮ್ಮಿಶ್ರನ Order ಗೆ ಯಾರೂ ಕಾಯಲಿಲ್ಲ. ಕಾರು ಜೀಪುಗಳಿಂದ ದುಡು ದುಡು ಇಳಿದ ಅವರು ಗನ್ ನೊಂದಿಗೆ ಕಾರನ್ನು ಸುತ್ತುವರೆದು ನಿಂತರು. ಈ ಎಮರ್ಜೆನ್ಸಿ situation ಏಕೆ ಎಂಬುದು ಅವರಿಗೆ ತಿಲಿಯುತ್ತಿಲ್ಲವಾದರು ಒಮ್ಮೆಲೇ ಕಾರ್ಯ ಪ್ರವ್ರತ್ತರಾಗಿದ್ದರು. ಅದಕ್ಕಾಗಿಯೇ ಟ್ರೈನ್ ಆಗಿದ್ದಾರೆ ಅವರೆಲ್ಲ.
ಅದರಲ್ಲಿ ಒಬ್ಬ ಮೆಡಿಕಲ್ ತುರ್ತು ಚಿಕಿತ್ಸಕ ಕೂಡ ಇರುತ್ತಾನೆ. ಆತ ತನ್ನ ವೈದ್ಯಕೀಯ ತುರ್ತು ಚಿಕಿತ್ಸೆಯ ಸಲಕರಣೆಗಳೊಂದಿಗೆ ಕಾರಿನತ್ತ ಧಾವಿಸಿದ. ಅದೇ ಸಮಯಕ್ಕೆ ಸರಿಯಾಗಿ ಕಾರಿನ ಗಾಜು ಪುಡಿ ಪುಡಿಯಾಗಿ ಬಿದ್ದಿತ್ತು. ಒಳಗಿನ ದ್ರಶ್ಯ ನೋಡಿ ಅಂತಹ ಪಳಗಿದ ಯೋಧ ಕೂಡ ಅವಾಕ್ಕಾಗಿ ಹೋದ. ಏನಾಯಿತು ಎಂದು ತಿಳಿಯಲಿಲ್ಲ; ಅದನ್ನು ತಿಳಿದುಕೊಳ್ಳುವ ಸಮಯವೂ ಅಲ್ಲ. She is in critical condition. ಅದೊಂದೇ ವಿಷಯ ಮುಖ್ಯ ಈಗ. ಹೇಗೆ? ಏಕೆ? ಏನು? ಎಂಬುದೆಲ್ಲ ಕಡೆಗೆ.
ಮರುಕ್ಷಣದಲ್ಲಿ ಶಾಕ್ ನಿಂದ ಹೊರಬಂದು ಕಾರಿನ ಒಳಗೆ ನುಗ್ಗಿದ ಆತ. ಆಕೆಯ ತಲೆಯನ್ನು ತನ್ನ ಮಡಿಲಲ್ಲಿಟ್ಟು ಹರಿಯುತ್ತಿರುವ ರಕ್ತವನ್ನು ಹೊರಗೆ ಬಾರದಂತೆ ತಡೆಯಲು ಪ್ರಯತ್ನಿಸುತ್ತಿದ್ದ ಸಮ್ಮಿಶ್ರ. ಅವನ ಕಣ್ಣುಗಳು ಕೆಂಪಾಗಿದ್ದವು. ಕಣ್ಣೀರು ಧಾರೆಯಾಗಿ ಹರಿದು ಬರುತ್ತಿತ್ತು. ಮುಖದಲ್ಲಿ ಅದೊಂದು ಹೇಳಲಾರದ ದುಃಖ ಆವರಿಸಿಕೊಂಡಿತ್ತು. ಅಂತಹ ಸ್ಥಿತಿಯಲ್ಲಿ ಸಮ್ಮಿಶ್ರನನ್ನು ಯಾವತ್ತೂ ನೋಡಿರಲಿಲ್ಲ ಡಾಕ್ಟರ್. ಆತ ತನ್ನ ಕೆಲಸ ಶುರುಮಾಡಿದ್ದ. ಮೊದಲು ರಕ್ತ ನಿಲ್ಲಿಸಬೇಕು, ಅದಕ್ಕೂ ಮೊದಲು ಆಕೆಯ ನಾಡಿ ನೋಡಿದ. ಈಗಲೋ, ಆಗಲೋ ನಿಲ್ಲಲು ಸಿದ್ಧವಾದಂತೆ ನಿಧಾನವಾಗಿ ಬಡಿದುಕೊಳ್ಳುತ್ತಿತ್ತು. ಮೆಡಿಕಲ್ ಕಿಟ್ ನಿಂದ ಬ್ಯಾಂಡೇಜ್ ಬಟ್ಟೆ, ಹತ್ತಿಯನ್ನು ತೆಗೆದು ಅದಕ್ಕೆ ಪೇನ್ ಕಿಲ್ಲರ್ ಆಯಿಂಟಮೆಂಟ್ ಹಾಗೂ ನಂಜಾಗದಂತೆ ಔಷಧಿ ಹಾಕಿ ಗಾಯಗೊಂಡ ಜಾಗದಲ್ಲೆಲ್ಲ ಮುದ್ದೆ ಮಾಡಿ ಇಡತೊಡಗಿದ. ಹತ್ತಿಯನ್ನೆಲ್ಲ ಕ್ಷಣದಲ್ಲಿ ಕೆಂಪು ಬಣ್ಣಕ್ಕೆ ತಿರುಗಿಸಿ ಹೊರಬರಲು ಹವಣಿಸುತ್ತಿತ್ತು ರಕ್ತ. ಒಂದರ ಹಿಂದೆ ಒಂದು, ಎರಡು ಪೇನ್ ಕಿಲ್ಲರ್ ಚುಚ್ಚಿ, ಕಿಟ್ ನಲ್ಲಿದ್ದ ಬ್ಲಡ್ ಬಾಟಲ್ ತೆಗೆದು ಪಕ್ಕದಲ್ಲಿದ್ದ ಹುಕ್ ಗೆ ಸಿಕ್ಕಿಸಿ ಆಕೆಯ ಎಡಗೈಗೆ ಅದರ ನಾಳ ಚುಚ್ಚಿ ರಕ್ತ ನೀಡತೊಡಗಿದ. ಒಂದು ಆಪರೇಶನ್ ಗೆ ಏನೇನು ಬೇಕೋ ಎಲ್ಲವೂ ಸಿದ್ಧವಿರುತ್ತದೆ ಅವರ ಬಳಿ, ಎಂತಹ ಎಮರ್ಜೆನ್ಸಿ ಸಂದರ್ಭ ಕೂಡ ನಿಭಾಯಿಸುವಷ್ಟು. ಮತ್ತೊಂದು ಕೈಗೆ ಗ್ಲೂಕೋಸ್ ನ ಇಂಜೆಕ್ಷನ್ ನಳಿಗೆಯ ತುದಿ ಚುಚ್ಚಿದ. "ಹೀಗಿದ್ದರೆ ಕಷ್ಟ ಸಮ್ಮಿಶ್ರ, ನಾವೀಗಲೇ ಆಸ್ಪತ್ರೆಗೆ ಹೋಗಬೇಕು, ಕ್ವಿಕ್". ಎಂದ.
ಆಗಲೇ ಡ್ರೈವರ್ ಸೀಟಿನಲ್ಲಿ ಮತ್ತೊಬ್ಬ ಬಂದು ಕುಳಿತಿದ್ದ. ದಾರಿ ಮಧ್ಯ ಮುಖ್ಯ ಡ್ರೈವರ್ ಗೆ ಏನಾದರೂ ಆದರೆ ಇರುವ ಬದಲಿ ಡ್ರೈವರ್. ಅವನಷ್ಟೇ ಪಳಗಿದವ ಇವನೂ. ಅಷ್ಟು ಹೇಳಿದ್ದೇ ತಡ ಆತ ಎಕ್ಸಿಲೇಟರ್ ಮೇಲೆ ಕಾಲಿಟ್ಟ. ಬೆಂಗಾವಲು ಪಡೆಯ ಒಂದು ಕಾರು ಮೊದಲೇ ಮುಂದೆ ಹೋಗಿತ್ತು. ದಾರಿಯಲ್ಲಿ ಅಲ್ಪ ಸ್ವಲ್ಪ ಟ್ರಾಫಿಕ್ ಇದ್ದರೂ ಅದನ್ನು ಕ್ಲಿಯರ್ ಮಾಡಿಬಿಡಬೇಕು. ಎಮರ್ಜನ್ಸಿಯಲ್ಲಿ ಏನು ಮಾಡಬೇಕು ಎಂಬ ಸ್ಪಷ್ಟ ಮಾಹಿತಿ ಎಲ್ಲರ ಬಳಿ ಇರುತ್ತದೆ. ಅವರವರ ಕೆಲಸ ಅವರು ಮಾಡುತ್ತಾರೆ. ಮತ್ತೊಬ್ಬರ ಆದೇಶಕ್ಕೆ ಕಾಯುವುದು.. ಬೇರೊಬ್ಬರ ಸಲಹೆ ಕೇಳುವುದು .. No.. ಆ ಕ್ಷಣದಲ್ಲಿ ನೀನು, ನಿನ್ನ ಕೆಲಸ ಅಷ್ಟೆ.
ಸಮ್ಮಿಶ್ರ ಕಾರಿನಿಂದ ಹೊರಗೆ ಸುತ್ತಲೂ ಕಣ್ಹಾಯಿಸಿದ. ಒಂದೂವರೆ, ಎರಡು ಕಿಲೋಮೀಟರ್ ದೂರದಲ್ಲಿ ಒಂದು ಬಿಲ್ಡಿಂಗ್ ಇದೆ. ಅದನ್ನು ಬಿಟ್ಟರೆ ಹತ್ತಿರದಲ್ಲಿ ಮತ್ತೇನೂ ಕಾಣುತ್ತಿಲ್ಲ. ಅಷ್ಟು ದೂರ ಕುಳಿತು ಹಂತಕ ಬಲೆ ಬೀಸಿದ್ದಾನೆ. ಅಸಾಧ್ಯ ಎನ್ನಿಸಿತು ಒಮ್ಮೆ.
ತಾನು ಬೆಳಿಗ್ಗೆ ಗುಂಡು ಹಾರಿಸಿ ಗ್ಲಾಸ್ ಪರೀಕ್ಷೆ ಮಾಡಿದ್ದೇನೆ. ಅಷ್ಟರ ಮೇಲೆ ಕಾರಿಗೆ ಈ ಪರಿಸ್ಥಿತಿ ತಂದಿದ್ದಾರೆ ಎಂದರೆ? ಅದು ನಮ್ಮವರಿಗೆ ತಿಳಿಯದೆ!? ಅಥವಾ ಈ ಸಂಚಿನಲ್ಲಿ ನಮ್ಮ ಜೊತೆಯವರು ಸೇರಿಕೊಂಡಿದ್ದಾರಾ? ನಾನೀಗ ಒಂದೆರಡು ಕಿಲೋಮೀಟರ್ ಗಳನ್ನು ಐದು ನಿಮಿಷದಲ್ಲಿ ಹೋಗಿ ನೋಡಿದರೂ ಅಲ್ಲಿ ಅವನು ಕುಳಿತಿರುತ್ತಾನೆ ಎಂದು ನಂಬಲು ಹೇಗೆ ಸಾದ್ಯ. ಪ್ರಿಯಂವದಾಳನ್ನು ಇವರ ಜೊತೆ ಬಿಟ್ಟು ತಾನು ಹೋಗುವುದು ಸರಿಯಾ? ಇವರನ್ನು ಹೇಗೆ ನಂಬಲಿ? ಮೊದಲು ರಾಜ್ ಳನ್ನು ಉಳಿಸಿಕೊಳ್ಳಬೇಕು. ನಂತರ ಈ ಸಂಚಿಗೆ ಕಾರಣರಾದವರು ಯಾರೇ ಆದರೂ ಹುಡುಕಿಯೇ ಸಿದ್ಧ ಎಂದು ನಿಶ್ಚಯಿಸಿದ.
ಆತನ ಭಾವನೆಗಳಿಗೆ ಸರಿಯಾಗಿ ಆತನ ಮುಖದ ಚರ್ಯೆಯೂ ಬದಲಾಗುತ್ತಿತ್ತು. ಇಂತಹ ಬುಲೆಟ್ ಪ್ರೂಫ್ ಗ್ಲಾಸನ್ನು ಕೈಲಿ ಗುದ್ದಿದರೂ ಪುಡಿ ಪುಡಿಯಾಗುವಂತೆ ಹೇಗೆ ಮಾಡಿದರು ಎಂದೆ ಯೋಚಿಸುತ್ತಿದ್ದ. ಪ್ರಿಯಂವದಾ ರಾಜ್ ಸತ್ತು ಹೋದರೆ ರಾಜಕೀಯದಲ್ಲಿ ಅದೆಂತಹ ದೊಡ್ಡ ಬಿರುಗಾಳಿ ಬೀಸಬಹುದು.. ಹಿಮಾಂಶುವಿಗೆ ತಾನೇನು ಉತ್ತರಿಸಬಲ್ಲ? ಪ್ರಿಯಂವದಾ ರಾಜ್ ಸೆಕ್ಯುರಿಟಿ ಇನ್ ಚಾರ್ಜ್! ಎಲ್ಲದಕ್ಕೂ ತಾನು ಉತ್ತರಿಸಬೇಕು. ಹತ್ತು ವರ್ಷದಿಂದ ಕಟ್ಟಿಕೊಂಡ ಸುಂದರ ಮನೆ ಒಂದು ನಿಮಿಷದಲ್ಲಿ ಹೇಗೆ ಓಲಾಡುತ್ತಿದೆ? ಇದರ ಹಿಂದೆ ಯಾರ ಕೈವಾಡವಿದೆ?? ತಲೆ ಸಿಡಿಯುವಂತಾಯಿತು ಆತನಿಗೆ.
ಪ್ರಿಯಂವದಾಳ ಮುಖ ನೋಡಿದ. ಗುಂಡೇಟಿನ ನೋವು ಆಕೆಯ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ರಕ್ತದಲ್ಲಿ ಸ್ನಾನವನ್ನೇ ಮಾಡಿದಂತೆ ಕಾಣುತ್ತಿದ್ದಾಳೆ. ಇಡೀ ದೇಶವನ್ನೇ ತನ್ನ ಕೈಗೊಂಬೆಯಾಗಿಸಿ ಆಡಿಸಿದ, ಆಡಿಸುತ್ತಿದ್ದ ಪ್ರಿಯಂವದಾ ರಾಜ್ ಈಗ ಕೀಲು ಕಿತ್ತ ಗೊಂಬೆಯಂತೆ ಮಲಗಿದ್ದಾಳೆ ಸಾವಿಗೆ ಹತ್ತಿರವಾಗುತ್ತ. ಬದುಕುತ್ತಾಳಾ?? ಯೋಚಿಸಿದ ಸಮ್ಮಿಶ್ರ. ಎಡಗಣ್ಣು ಅದುರಿತು. ಗುಂಡು ಹೊಕ್ಕಿದ ಜಾಗ ನೋಡಿದ. ಒಂದು ಅಂಗುಲದಷ್ಟು ಮೇಲೆ ಬಿದ್ದಿದ್ದರು ಹೃದಯ ಚೂರಾಗಿ ಹೋಗುತ್ತಿತ್ತು. ಕಮ್ ಕಿಮ್ ಕೂಡ ಅನ್ನದೇ ಸತ್ತು ಬಿಡುತ್ತಿದ್ದಳು. ಒಂದಂಗುಲ ಕೆಳಗೆ ಬಿದ್ದಿದ್ದರಿಂದ ಇನ್ನೂ ಬದುಕಿದ್ದಾಳೆ. ಬುಲೆಟ್ ಎನ್ನುವ ನೆನಪು ಬರುತ್ತಲೇ ಆಕಡೆ, ಈಕಡೆ ನೋಡಿದ. ಎಂಟು ಇಂಚು ಉದ್ದದ ಮಿರಿ ಮಿರಿ ಮಿಂಚುವ ಬುಲೆಟ್ ಒಂದು ಕಾರಿನ ಬಾಡಿಗೆ ಅರ್ಧ ಹೊಕ್ಕಿ ನಿಂತಿತ್ತು. ಡೌಟ್ ಇಲ್ಲ, ಅದೇ ಬಿಲ್ಡಿಂಗ್ ಇಂದ ಗುರಿಯಿಟ್ಟಿದ್ದಾರೆ. ವೈರಿಯಾದರೇನು? ಮೆಚ್ಚಿಕೊಂಡ ಸಮ್ಮಿಶ್ರ. ಹತ್ತಿರ ಹತ್ತಿರ ಎರಡು ಕಿಲೋಮೀಟರ್ ದೂರದಿಂದ ಹೊಡೆದಿದ್ದಾನೆ. ಶಭಾಷ್!! ಅದೆಷ್ಟು ನಿಖರತೆ ಇರಬೇಕು!?
ತಾನೀಗ ಅಲ್ಲಿ ಹೋದರೂ ಆತ ಸಿಗಲಾರ. ಆತನಿಗೆ ಭೂಗತ ಲೋಕದ ಪರಿಚಯ, ಕಲ್ಪನೆ ಎರಡೂ ಇದೆ. ಅದೆಷ್ಟು ನಿಖರವಾಗಿ ಕೆಲಸ ಮುಗಿಸುತ್ತಾರೆ ಎಂದು ಗೊತ್ತು. ಅವರ Escape root ಬಗ್ಗೆ ಕೂಡ ತಿಳಿಯದೇ ಇಲ್ಲ. ಇಷ್ಟೊತ್ತಿಗೆ ಈ ಕೆಲಸ ಮಾಡಿದವ ದೇಶ ಬಿಟ್ಟು ಹೊರಟಿರುತ್ತಾನೆ. ಹಾಗೆ ಒಮ್ಮೆ ಹೊರಗೆ ಹೋಗಲು ಬಿಟ್ಟರೆ ಮತ್ತೆ ಸಿಗಲು ಸಾಧ್ಯವಾ ಆತ!? ಹಾಗೆಂದು ತಾನೀಗ ಹೊರಗೆ ಹೋದರೆ ಒಳಗಡೆಯೇನಾದರೂ ಶತ್ರುವಿದ್ದರೆ ಮತ್ತೆ ಈಕೆಗೆ ಹಾನಿ ಮಾಡಬಹುದಲ್ಲವೇ?? No.. ತಾನೀಗ ಪ್ರಿಯಂವದಾಳನ್ನು ಬಿಟ್ಟು ಹೋಗುವಂತಿಲ್ಲ. ತನ್ನ ಫೋನ್ ತೆಗೆದುಕೊಂಡು ಒಂದು ನಂಬರ್ ಡಯಲ್ ಮಾಡಿದ. ಹತ್ತು ವರ್ಷದಲ್ಲಿ ತನ್ನದೇ ನೆಟ್ ವರ್ಕ್ ಬೆಳೆಸಿಕೊಂಡಿದ್ದಾನೆ ಆತ.ಇಂಥ ಮುಖ್ಯ ಕೆಲಸದಲ್ಲಿರುವವರಿಗೆ ತಮ್ಮ ಮಾತಿಗೆ ಏಕೆ? ಏನು? ಕೇಳದೆ, ಹೇಳಿದ್ದನ್ನು ಮಾಡುವವರು ಬೇಕು. ತನ್ನ ಸಂದೇಶ ಪಾಸ್ ಮಾಡಿದ ಸಮ್ಮಿಶ್ರ.
Indhira gandi International Airport, Railway Station, Bus Stand.. ದೆಹಲಿಯಿಂದ ಹೊರ ಹೋಗುವ ಎಲ್ಲ ವೆಹಿಕಲ್ ಗಳು ಕೂಡ ತಪಾಸಣೆಯಾಗಬೆಕು. ಅನುಮಾನಾಸ್ಪದವಾಗಿ ಯಾರೇ ಕಂಡರೂ ಹೊರಹೋಗಲು ಬಿಡಬಾರದು. ಯಾವ ರೀತಿಯ ಅನುಮಾನ, ಏನು, ಎತ್ತ ಎಂಬುದು ಎದುರಿಗಿರುವ ವ್ಯಕ್ತಿಗೆ ಗೊತ್ತು. ಅದೊಂದು ಸಂದೇಶ ಸಾವಿರಕ್ಕೂ ಹೆಚ್ಚು ಜನರನ್ನು ರಂಗಕ್ಕಿಳಿಸುತ್ತದೆ. ಪ್ರತಿಯೊಂದು ಸಿಸಿ ಟಿವಿ ಕ್ಯಾಮರಾಗಳು, ಓಡಾಡುತ್ತಿರುವ ವಾಹನಗಳು, ಎಲ್ಲವನ್ನೂ ಹದ್ದಿನ ಕಣ್ಣಿನಲ್ಲಿ ಗಮನಿಸತೊಡಗುತ್ತಾರೆ.
ಸಾಮಾನ್ಯ ಜನರಿಗೆ ಇದನ್ನೆಲ್ಲಾ ಊಹಿಸುವುದೂ ಕಷ್ಟ. ಆದರೆ High Profile ಜನರ, ಡಿಟೆಕ್ಟಿವ್ ಏಜೆನ್ಸಿಗಳ, ರೆಡ್ ಫೈಲ್ ಗಳ ಕೆಲಸ ನಡೆಯುವುದು ಹೀಗೆಯೇ. ಗುಂಡು ಹೊಡೆದವನಿಗಾಗಿ ಶೋಧ ಕಾರ್ಯ ಶುರುವಾಯಿತು.
ಆಸ್ಪತ್ರೆಯೆದುರು ಬಂದು ನಿಂತಿತು ಕಾರು. ಡಾಕ್ಟರ್ ಗಳ ಗುಂಪೇ ಸೇರಿತ್ತು ಅಲ್ಲಿ. ಒಂದು ಇಡೀ ಫ್ಲೋರ್ ಖಾಲಿ ಇಡಲಾಗಿತ್ತು. ಅದು ಇಂತಹ ಕೇಸ್ ಗಳಿಗೆ ಜಾಗ ಬಿಟ್ಟಿರುವುದು. ಪ್ರತೀ ತಿಂಗಳು ಅದಕ್ಕೆ ಹಣ ನೀಡುತ್ತಿರುತ್ತಾರೆ.
ಅವಳ ಉಸಿರು ಮತ್ತೂ ಭಾರವಾಗುತ್ತಿತ್ತು. ಆಪರೇಶನ್ ಥಿಯೇಟರ್ ಒಳಗೆ ಕರೆದೊಯ್ದರು. ಸಮ್ಮಿಶ್ರ ಕೂಡ ಒಳಹೋಗಿ ನಿಂತ. ಏನೇ ನಡೆದರೂ ಆತನ ಕಣ್ಣೆದುರಲ್ಲಿ ನಡೆಯಬೇಕು. ಯಾರನ್ನೂ ನಂಬುವ ಪರಿಸ್ಥಿತಿಯಲ್ಲಿ ಇಲ್ಲ ಆತ ಈಗ. ನಡೆಯುತ್ತಿರುವ ವಿದ್ಯಮಾನಗಳನ್ನು ನೋಡುತ್ತ ಗೋಡೆಗೆ ಒರಗಿ ಮುಷ್ಠಿ ಕಟ್ಟಿ ನಿಂತ ಸಮ್ಮಿಶ್ರ.
ಗರುಡ ಹೇಗೆ ಕುಳಿತಿದ್ದನೋ ಹಾಗೆಯೇ ಕುಳಿತಿದ್ದ. ಉಸಿರು ಬಿಗಿ ಹಿಡಿದು ಕುಳಿತುಕೊಳ್ಳುವುದು ಎಂಬುದಕ್ಕೆ ಸಾಕ್ಷಿಯಾಗುವಂತೆ. ಬಹಳ ಸಮಯವಲ್ಲ, ಕೇವಲ ಎರಡು ಕ್ಷಣಗಳು ಕಣ್ಣು ಮಿಟುಕಿಸಲಿಲ್ಲ. ಆತ ಹೊಡೆದ ಗುಂಡು ಪ್ರಿಯಂವದಾಳ ಕಾರಿನ ಹಿಂದಿನ ವಿಂಡೋ ಗ್ಲಾಸಿನಲ್ಲಿ ನುಗ್ಗಿತು. ಒಂದು ಸಣ್ಣ ನಗು ಹಾದು ಹೋಯಿತು ಆತನ ಮುಖದಲ್ಲಿ. ಆತ ತನ್ನ ಬೈನಾಕ್ಯುಲರ್ ನಲ್ಲಿ ಕಾರನ್ನು ನೋಡುತ್ತಲೇ ಗುಂಡು ಬಿದ್ದ ಕ್ಷಣವೇ ಕಾರು ನಿಲ್ಲಬೇಕು. ಆದರೆ ಹಾಗಾಗಲಿಲ್ಲ. ಕಾರು ಹೋಗುತ್ತಲೇ ಇತ್ತು. ಸ್ವಲ್ಪ ಅನುಮಾನ ಮೂಡಿತು ಆತನಿಗೆ. ಕಾರಿನ ಒಳ ಹೋದ ಗುಂಡಿನ ಗುರಿ ತಪ್ಪಿತೇ? ಅಲ್ಲಿ ನಿಂತರೆ ಮತ್ತೆ ಗುಂಡು ಬರಬಹುದು ಎಂದು ಕಾರು ಓಡಿಸುತ್ತಿದ್ದಾರೆಯೇ!? ಏನಾಯಿತು ತಿಳಿಯಲಿಲ್ಲ ಆತನಿಗೆ. ಬೈನಾಕ್ಯುಲರ್ ಅನ್ನು ಮತ್ತೂ ಕ್ಯೂರ್ ಮಾಡಿದ. ಹಿಂದೆ ಕುಳಿತ ಮಹಿಳೆ ಕೈ ಎತ್ತುತ್ತಿದ್ದಾಳೆ. ಅಂದರೆ ಅವಳು ಸತ್ತಿಲ್ಲ. ಗುರಿ ತಪ್ಪಿದೆ.
ಈಗ ಮತ್ತೊಮ್ಮೆ ಗುಂಡು ಹೊಡೆಯಬೇಕಾ? ಯೋಚಿಸಿದ ಗರುಡ. ಅಷ್ಟರಲ್ಲಿ ಕಾರು ನಿಂತಿತು. ಹಿಂದಿದ್ದ ಮಹಿಳೆ ಸೀಟಿಗೊರಗಿದಳು. ಡ್ರೈವರ್ ಹಿಂದಕ್ಕೆ ಜಿಗಿದ. ಅಂದರೆ ತನ್ನ ಗುರಿ ಮಿಸ್ ಆಗಿಲ್ಲ. ಅಲ್ಲಿನ ವಿದ್ಯಮಾನಗಳನ್ನೇ ನೋಡುತ್ತ ಕುಳಿತ ಗರುಡ. ಹಿಂದೆ ಬಂದ ವ್ಯಕ್ತಿ ಮುಷ್ಠಿಯಿಂದ ಗುದ್ದಿದ್ದು, ಗ್ಲಾಸ್ ಒಡೆದಿದ್ದು, ಎಲ್ಲವೂ ನಡೆದಿತ್ತು. ಅಂದರೆ ಗುರಿ ತಪ್ಪಿಲ್ಲ. ಇನ್ನು ತಾನು ಇಲ್ಲಿರುವ ಕೆಲಸವಿಲ್ಲ. ತನ್ನ ಮುಂದಿನ ಪ್ಲಾನಿನಂತೆ ಜಾಗ ಬಿಡಬೇಕು.
ಮುಖದ ಮೇಲೆ ಮತ್ತೆ ಪ್ರಶಾಂತತೆ ಮೂಡಿತು. ತನ್ನ ಸ್ನೈಪರ್ ಡಿಅಸೆಂಬಲ್ ಮಾಡಿ ಅದನ್ನೊಂದು ಬ್ಯಾಗಿಗೆ ಹಾಕಿ ಅಲ್ಲಿಂದ ಕೆಳಗೆ ಒಗೆದ. ಕೆಳಗೆ ಮಣ್ಣು ತುಂಬಿದ ಲಾರಿಯೊಂದು ನಿಂತಿತ್ತು. ಬ್ಯಾಗ್ ಬೀಳುತ್ತಿದ್ದಂತೆ ಧೂಳೆದ್ದು ಮಣ್ಣಿನೊಳಗೆ ಸೇರಿ ಹೋಯಿತು. ಅಲ್ಲಿಗೆ ಆ ಅಧ್ಯಾಯ ಮುಗಿದು ಹೋಯಿತು. ಕಪ್ಪು ಜಗತ್ತಿನಲ್ಲಿ ಒಮ್ಮೆ ಬಳಸಿದ ಸ್ನೈಪರ್ ಮತ್ತೆ ಬಳಸುವುದಿಲ್ಲ. ಎಲ್ಲಿ ಹೋಯಿತು ಎಂದು ಗೊತ್ತಾಗದಂತೆ ಕರಗಿಸಿ ಬಿಡುತ್ತಾರೆ.
ಗರುಡ ಕೆಳಗಿಳಿದು ಬಂದು ಸ್ವಲ್ಪ ದೂರ ಕಾಲ್ನಡಿಗೆಯಲ್ಲಿ ನಡೆದ. ನಂತರ ಒಂದು ಟ್ಯಾಕ್ಸಿ ಹಿಡಿದು IGI Airport ಎಂದ. ಹೀಗೆ ಹೈ ಪ್ರೊಫೈಲ್ ವ್ಯಕ್ತಿಗಳ ಅಸಾಸಿನ್ ಮಾಡಿದವರು ಭೂಗತವಾಗಿ ಬಿಡುತ್ತಾರೆ. ಯಾವುದೋ ಸಣ್ಣ ಗಲ್ಲಿಯಲ್ಲಿ ಅಥವಾ ಸಣ್ಣ ಹೊಟೆಲ್ ಗಳಲ್ಲಿ ರೂಮ್ ಮಾಡಿ ತಿಂಗಳುಗಟ್ಟಲೆ ಕುಳಿತು ಬಿಡುತ್ತಾರೆ.ವಿಷಯ ತಣ್ಣಗಾದ ಮೇಲೆ ಹೊರಗಡೆ ಬೀಳುತ್ತಾರೆ. ಈಗ ಅವರ ನಡೆಯೂ ಬದಲಾಗಿದೆ. ಇನ್ನು ವಿಷಯ ಹರಡಿ ಪೋಲಿಸ್ ಅಲರ್ಟ್ ಆಗುವುದರೊಳಗೆ ದೇಶ ಬಿಟ್ಟು ಬಿಡುತ್ತಾರೆ. ಅದನ್ನು ಊಹಿಸಿಯೇ ಸಮ್ಮಿಶ್ರ ಬಲೆ ಬೀಸಿದ್ದ ಕೂಡ.
ಮುಕ್ಕಾಲು ಘಂಟೆಯಲ್ಲಿ ಏರ್ ಪೋರ್ಟ್ ನ ಬಳಿ ಇಳಿದ ಆತ. ಇಳಿಯುತ್ತಿದ್ದಂತೆಯೇ ಪೋಲಿಸ್ ಗಾಳಿ ಆತನ ಮೂಗಿಗೆ ಬಡಿಯಿತು. ಮುಖದ ಮೇಲೆ ಕಿಂಚಿತ್ತು ಟೆನ್ಶನ್ ಕಾಣದಂತೆ ನಗು ಸೋಗ ಹಾಕಿಕೊಂಡು ಒಳಗೆ ನಡೆದ. ಮೊದಲ ಹಂತದ ಸೆಕ್ಯುರಿಟಿ ಬಹಳ ಸಮಯ ತೆಗೆದುಕೊಂಡಿತು. ಇಂತಹ ಚೆಕಿಂಗ್ ಎಷ್ಟೋ ಬಾರಿ ಫೇಸ್ ಮಾಡಿದ್ದಾನೆ ಆತ. ಅದಕ್ಕಾಗಿಯೇ ಟ್ರೇನಿಂಗ್ ಕೂಡ ಆಗಿದೆ. ಮುಕ್ಕಾಲು ಘಂಟೆಗಳ ನಂತರ ಎಲ್ಲ ಚೆಕಿಂಗ್ ಮುಗಿಸಿಕೊಂಡು ಒಳಗೆ ಬಂದು ಕುಳಿತ. ಟಿವಿಯಲ್ಲಿ ನ್ಯೂಸ್ ಬರುತ್ತಿತ್ತು. ಪ್ರಿಯಂವದಾಳ ಸುದ್ಧಿ ಏನಾದರೂ ಬರಬಹುದು ಎಂದು ನೋಡುತ್ತ ಕುಳಿತ. ಅವನಿಂದ ಮಾರು ದೂರದಲ್ಲಿ ಕುಳಿತ ವ್ಯಕ್ತಿ ಅವನನ್ನೇ ಗಮನಿಸುತ್ತಿದ್ದುದು ಲಕ್ಷ್ಯಕ್ಕೆ ಬಂತು. ಆತನನು ಮತ್ತೊಮ್ಮೆ ನೋಡುವ ಗೋಜಿಗೆ ಹೋಗಲಿಲ್ಲ ಗರುಡ.
"Passenger travelling to Dubai, Gate no. 12" ಮಧುರವಾದ ಧ್ವನಿಯೊಂದು ಉಲಿಯಿತು. ಲೈನ್ ಪ್ರಾರಂಭವಾಗುತ್ತಿದ್ದಂತೆಯೇ ಲೈನಿನಲ್ಲಿ ಹೋಗಿ ಸೇರಿಕೊಂಡ ಗರುಡ. ಲೈನ್ ನಿಧಾನವಾಗಿ ಮುಂದೆ ಸಾಗುತ್ತಿತ್ತು. ಆಗುಂತಕ ವ್ಯಕ್ತಿಯೂ ಗರುಡನ ಹಿಂದೆಯೇ ಬಂದು ನಿಂತಿದ್ದ.
ಅಷ್ಟರಲ್ಲಿ ಗರುಡನ ಮೊಬೈಲ್ ಸದ್ದಾಯಿತು. ಮೆಸೇಜ್ ನೋಡತೊಡಗಿದ ಗರುಡ.
"ಅಮ್ಮ ಕ್ಷೇಮವಾಗಿದ್ದಾಳೆ. ನಿನಗಾಗಿ ಕಾಯುತ್ತಿದ್ದಾಳೆ!" ಅವನ ಮುಖ ಒಂದು ಕ್ಷಣ ಕಳೆ ಕಳೆದುಕೊಂಡು ಹುಬ್ಬುಗಳು ಗಂಟೇರಿದವು. ಮತ್ತೊಮ್ಮೆ ಓದಿಕೊಂಡ "ಅಮ್ಮ ಕ್ಷೇಮವಾಗಿದ್ದಾಳೆ. ನಿನಗಾಗಿ ಕಾಯುತ್ತಿದ್ದಾಳೆ!"
"Sir, boarding pass, Please" ಎಂದಳು ಎದುರಿಗಿದ್ದ ಚೆಲುವೆ. ತನ್ನ ಎಡ ಕಿಸೆಯಿಂದ ಟಿಕೆಟ್ ತೆಗೆದುಕೊಟ್ಟ. ಟಿಕೆಟ್ ನೋಡಿದವಳು "ಸರ್ ನೀವು ತಪ್ಪು ಜಾಗದಲ್ಲಿದ್ದೀರಿ. ಇದು ದುಬೈ ಫ್ಲೈಟ್. ಮುಂಬೈ ಫ್ಲೈಟ್ ಗೇಟ್ ನಂಬರ್ 21." ಎಂದಳು. "Oh, sorry.. " ಎನ್ನುತ್ತಾ ಲೈನಿನಿಂದ ಹೊರಬಂದು 21 ರ ಕಡೆ ನಡೆದ. ಆತನನ್ನೇ ಗಮನಿಸುತ್ತಿದ್ದ ಆಗಂತುಕ ಲೈನ್ ಬಿಡದೆ ನಿಂತೇ ಇದ್ದ.
ಗರುಡ 21 ನೇ ಕೌಂಟರ್ ಗೆ ಹೋಗಿ ಬೋರ್ಡಿಂಗ್ ಮಾಡಿ ಮುಂದೆ ನಡೆದ. ಆತನ ಬಲ ಕಿಸೆಯಲ್ಲಿದ್ದ ದುಬೈಗೆ ಹೋಗುವ ಟಿಕೆಟ್ ಅಲ್ಲೇ ಉಳಿದಿತ್ತು. ತಾನು ಮುಂಬೈ ಲೈನ್ ಗೆ ಬರುತ್ತಲೇ ಮತ್ತೊಂದು ಬಾಲ ತನ್ನ ಹಿಂದೆ ಸೇರಿಕೊಂಡಿದೆ ಎಂಬುದನ್ನು ಆತ ಗಮನಿಸಿಯೂ ಗಮನಿಸಿದಂತೆ ಇದ್ದ.
                                          ...............................ಮುಂದುವರೆಯುತ್ತದೆ..............................

No comments:

Post a Comment