Saturday, July 23, 2016

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 18

                                      ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 18

ವಿಹಾರಿಯನ್ನು ಹುಡುಕಿಕೊಂಡು ಅನ್ವೇಷಣಾ ಆತನ ಮನೆಯ ಕಡೆ ಬಂದಿದ್ದಳು. ಬಹಳ ದಿನಗಳಿಂದ ಆತನ ಭೇಟಿಯಾಗಬೇಕೆಂದುಕೊಂಡರೂ ಆಗಿರಲಿಲ್ಲ ಆಕೆಗೆ. ಕೆಲವು ಬಾರಿ ಅವನೇ ಸಿಗುತ್ತಿರಲಿಲ್ಲ. ಇನ್ನು ಕೆಲವೊಮ್ಮೆ ಕೆಲಸದ ಒತ್ತಡದಲ್ಲಿ ಇವಳಿಗೆ ಸಿಗಲು ಆಗುತ್ತಿರಲಿಲ್ಲ. ಆದರೂ ಅವರಿಬ್ಬರದು ಪವಿತ್ರ ಪ್ರೇಮ. ಪ್ರೀತಿಯಲ್ಲಿ ಒಮ್ಮೆ Understanding ಮೂಡಿತೆಂದರೆ ನಂತರ ಎಲ್ಲವೂ ಸಲೀಸು. ನಿಮಿಷಕ್ಕೊಂದು ಮೆಸೇಜ್, ತಾಸಿಗೊಂದು ಫೋನ್ ಕಾಲ್.. ಎಲ್ಲವೂ ನಂಬಿಕೆ ಕಡಿಮೆಯಾದಾಗ. ಎಲ್ಲಿ ತನ್ನ ಸಂಗಾತಿ ಬಿಟ್ಟು ಓಡಿಬಿಡುತ್ತಾರೋ ಎಂಬ Insecure feeling ಮಾತನಾಡಿಸುತ್ತಲೇ ಇರುತ್ತದೆ. ಎಂಗೇಜ್ ಮಾಡಿದಷ್ಟೂ ಕಡಿಮೆ ಎನ್ನಿಸುತ್ತದೆ. ಎಂಟರ್ಟೈನ್ ಮಾಡಲು ಸರ್ಕಸ್ ನಡೆಯುತ್ತಲೇ ಇರುತ್ತದೆ. ನಿಜವಾದ ಪ್ರೀತಿಯಲ್ಲಿ ಒಮ್ಮೆ ಒಬ್ಬರ ಮೇಲೊಬ್ಬರಿಗೆ ನಂಬಿಕೆ ಬಂದರೆ ಇವೆಲ್ಲ ತಲೆ ಬಿಸಿಗಳೇ ಇಲ್ಲ. ವಿಹಾರಿ, ಅನ್ವೇಷಣಾ ಇಂತಹ ಸಮ್ಮತಕ್ಕೆ ಎಂದೋ ಬಂದಾಗಿದೆ. ಅನ್ವೇಷಣಾಳ ಬಳಿ ಮೊಬೈಲ್ ಕೂಡ ಇಲ್ಲ. ಅವರು ಒಮ್ಮೆ ಭೇಟಿಯಾಗಬೇಕೆಂದರೆ ಹರಸಾಹಸವನ್ನೇ ಮಾಡಬೇಕು.
ಇಂದೇಕೋ ವಿಹಾರಿಯ ಜೊತೆ ಮಾತನಾಡಬೇಕೆಂದು ಬಹಳವೇ ಅನ್ನಿಸುತ್ತಿತು. ವಿಹಾರಿ ಮಾತನಾಡುವುದೇ ಒಂದು ಚಂದ. ಮಾತಿನಲ್ಲಿಯೇ ಸ್ವಪ್ನ ತಾರೆ ಅರಳಿಸಬಲ್ಲಂತ ಚೇತೋಹಾರಿ. ಸಣ್ಣ ಸಣ್ಣ ಬೇಸರಗಳು, ಬಿಗುಮಾನಗಳು ಪ್ರೀತಿಯಲ್ಲಿ ಸಹಜ. ಅದು ಅವರ ನಡುವಿನಲ್ಲೂ ಇತ್ತು. ಅಷ್ಟಿಲ್ಲದಿದ್ದರೆ ಪ್ರೀತಿಯೇನು ಚಂದ!!??
ಬಾಗಿಲು ತಟ್ಟಿ ಎರಡು ನಿಮಿಷದ ನಂತರ ಬಾಗಿಲು ತೆರೆದ ವಿಹಾರಿ ಅವಸರದಲ್ಲಿರುವವನಂತೆ ಕಂಡ. "ಬೇಗ ಬಾ ಒಳಗೆ.." ಎನ್ನುತ್ತಾ ಅವಳನ್ನು ಒಳಗೆ ಎಳೆದುಕೊಂಡು ಬಾಗಿಲು ಹಾಕಿದ. ಅವಳಿಗೇನು ಅರ್ಥವಾಗದೇ ಆತನ ಹಿಂದೆಯೇ ದೌಡಾಯಿಸಿದಳು. ಆತನ ರೂಮಿನ ಒಳ ಹೋಗುತ್ತಿದ್ದಂತೆ ಅವಾಕ್ಕಾಗಿ ನಿಂತಳು. ತೆರೆದ ಕಣ್ಣು ಕಿರಿದಾಗಲೇ ಇಲ್ಲ. ಮೂರು ದೊಡ್ಡ ದೊಡ್ಡ ಕಂಪ್ಯೂಟರ್ ಸ್ಕ್ರೀನ್ ಗಳು. ಅದರ ಮೇಲೆ ಕಪ್ಪು ಪರದೆಯಲ್ಲಿ ಏನೇನೋ Logs ಪ್ರಿಂಟಾಗಿ ಬರುತ್ತಿವೆ. 
"ಏನು ಮಾಡುತ್ತಿದ್ದೀಯಾ ವಿಹಾರಿ??" ವಿಹಾರಿಯ ಮನೆಗೆ ಎಷ್ಟೊಂದು ಸಲ ಬಂದಿದ್ದರೂ ಈ ರೂಮ್ ಮಾತ್ರ ಲಾಕ್ ಆಗೇ ಇರುತ್ತಿತ್ತು. ಇದೇ ಮೊದಲು ನೋಡಿದ್ದು. ಆದರೆ ವಿಹಾರಿ ಇಷ್ಟೊಂದು ಕಂಪ್ಯೂಟರ್ ಸೆಟ್ ಅಪ್ ಮಾಡಿಕೊಂಡು ಏನು ಮಾಡುತ್ತಿದ್ದಾನೆ. ತನಗೆ ತಿಳಿಯದಂತೆ ಏನು ಕೆಲಸ ಮಾಡುತ್ತಿದ್ದಾನೆ. ಅರ್ಥವಾಗಲಿಲ್ಲ ಅವಳಿಗೆ. ಅದನ್ನೇ ಕೇಳಬೇಕೆಂದುಕೊಂಡಳು. 
"ಒಂದ್ಹತ್ತು ನಿಮಿಷ ಕುಳಿತಿರು. I am doing something important. ನಿನ್ನೆ ನಿನಗೊಂದು ಪ್ರೇಮಪತ್ರ ಬರೆದಿದ್ದೇನೆ, ಓದಿಕೋ." ಎಂದು ಒಂದು ಪೇಪರ್ ತೆಗೆದು ಕೊಟ್ಟು ತಾನು ಮತ್ತೆ ಸ್ಕ್ರೀನ್ ಗಳ ಮಧ್ಯೆ ಸೇರಿಕೊಂಡ. 
ಈತ ಏನು ಮಾಡುತ್ತಿದ್ದಾನೆ ಎಂಬ ಗುಂಗಿನಲ್ಲಿದ್ದ ಅವಳಿಗೆ ಪ್ರೇಮ ಪತ್ರವೂ ನೀರಸವೆನ್ನಿಸಿತು. ಕಂಪ್ಯೂಟರ್ ಕೀ ಬೋರ್ಡ್ ಬಟನ್ ಗಳ ಮೇಲೆ ಆತನ ಬೆರಳುಗಳು ನಿರಾಯಾಸವಾಗಿ ಓಡಾಡಿಕೊಂಡಿದೆ. ದೊಡ್ಡ ಪರದೆಯ ಮೇಲೆ ಬಿಳಿಯ ಅಕ್ಷರಗಳು ಚಿತ್ತಾರ ಮೂಡಿಸುತ್ತಿವೆ. ಆತನ ಹಾವಭಾವವನ್ನೇ ನೋಡುತ್ತಾ ಕುಳಿತಳು ಅನ್ವೇಷಣಾ. ಅವನಷ್ಟು ತನ್ಮಯತೆಯಿಂದ ಒಂದು ಕೆಲಸದಲ್ಲಿ ತೊಡಗಿಕೊಂಡಿರುವುದನ್ನು ಆಕೆ ನೋಡುತ್ತಿರುವುದು ಇದೇ ಮೊದಲು. ಆಗಾಗ ಆತನ ಮುಖದಲ್ಲಿ ಏನನ್ನೋ ಸಾಧಿಸಿದ ಭಾವ, ನಗು ಮೂಡುತ್ತಿತು. ಆಗಂತೂ ಆತ ತುಂಬಾ ಇಷ್ತವಾಗುತ್ತಿದ್ದ ಆಕೆಗೆ.
ಯಾವುದೋ ಕೀ ಒತ್ತಿ ಆ ಕಡೆಯಿಂದ ಅದೇನೋ ರೆಸ್ಪಾನ್ಸ್ ಬರಲು ಕಾಯುತ್ತಿದ್ದ. ರೆಸ್ಪಾನ್ಸ್ ಬರುತ್ತಲೇ ನಿಟ್ಟುಸಿರು ಬಿಟ್ಟು ಮತ್ತೊಂದಿಷ್ಟು ಬಟನ್ ಗಳ ಮೇಲೆ ಕೈ ಬೆರಳುಗಳನ್ನು ಓಡಿಸುತ್ತಿದ್ದ. ಅದೇನು ಮಾಡುತ್ತಿರುವೆ ಪ್ರಿಯತಮನೇ!? ಎಂದುಕೊಂಡಳು ಅನ್ವೇಷಣಾ.
Hacking!! ಹೌದು. ಕಂಪ್ಯೂಟರ್ ಗಳ ಆವಿಷ್ಕಾರವಾದಾಗಿನಿಂದ, ನೆಟವರ್ಕ್ ಗಳ ಜೊತೆ ಸೇರಿ ದೊಡ್ಡ Nurology ಸಂಚಲನ ಶುರುವಾದಾಗಲಿಂದ ಹ್ಯಾಕಿಂಗ್ ಎಂಬುದು ಒಂದು ಕಪ್ಪು ಪ್ರಪಂಚವೇ. ಅಂಡರ್ ವರ್ಲ್ಡ್ ನಲ್ಲಿ ಎಷ್ಟು ಚೊಕ್ಕದಾಗಿ ಕೆಲಸ ನಡೆಯುತ್ತದೆಯೋ, ಎಷ್ಟು ಚಾಣಕ್ಯರಿದ್ದಾರೋ, ಎಷ್ಟು ಸಮರ್ಥರು ಇದ್ದರೋ, ಕುಖ್ಯಾತರು ಇರುವರೋ ಇಲ್ಲೂ ಕೂಡ ಹಾಗೆಯೇ. ಹ್ಯಾಕಿಂಗ್ ಪ್ರಪಂಚ ತುಂಬ ಸಣ್ಣದು. ಆದರೆ ಅಲ್ಲಿ ಕುಳಿತವರು? ಮಹಾ ಪ್ರಚಂಡರು. ಎಲ್ಲ ಬಹುದೊಡ್ಡ ಕಂಪನಿಗಳಿಗೂ ತಲೆ ಬಿಸಿ ತಂದು ನಿಲ್ಲುವವರು.
ಜಗತ್ತಿನ ಯಾವುದೇ ಸೈಟ್ ಉಳಿದಿಲ್ಲ ಹ್ಯಾಕರ್ ಗಳಿಂದ ತಪ್ಪಿಸಿಕೊಂಡು. ನಾಸಾದ ವೆಬ್ ಸೈಟ್ ಮತ್ತು ಕಂಪ್ಯೂಟರ್ ಗಳು ಹ್ಯಾಕರ್ ಗಳಿಗೆ ಅತ್ಯಂತ ಪ್ರಿಯ. ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ಕೂಡಿಡುವ ಅದೆಷ್ಟೋ ಮಹತ್ವ ಪೂರ್ಣ ಮಾಹಿತಿಗಳನ್ನು ಕದ್ದು ಕುಳಿತುಬಿಡುತ್ತಾರೆ ಆ ಆಸಾಮಿಗಳು. ಅತ್ಯಂತ ಹೆಚ್ಚು ಬಾರಿ ಹ್ಯಾಕ್ ಆದ ಸೈಟ್ ಎಂದರೆ ನಾಸಾದ ಅಧಿಕೃತ ವೆಬ್ ಸೈಟ್ ಮತ್ತು ಸರ್ವರ್ ಗಳು. ಹ್ಯಾಕಿಂಗ್ ಕೇವಲ ಇಷ್ಟಕ್ಕೇ ಸೀಮಿತವಾಗಿಲ್ಲ. ಬ್ಯಾಂಕ್ ಸೈಟ್ ಗಳು, Gmail, Facebook. ನೋ. ಯಾವುದೇ ಕಂಪನಿಗಳು ಇವರಿಂದ ತಪ್ಪಿಸಿಕೊಂಡಿಲ್ಲ. 
ಫೇಸ್ಬುಕ್ ನ ಪರ್ಸನಲ್ ಖಾತೆಗಳು ಅಥವಾ Gmail account ಗಳ ಪಾಸ್ ವರ್ಡ್ ಕ್ರ್ಯಾಕ್ ಮಾಡುವುದೆಲ್ಲ ಇವರಿಗೆ ನೀರು ಕುಡಿದಂತೆ. ಅಂತಹ ಸಿಲ್ಲಿ ಕೆಲಸಗಳನ್ನು ಹ್ಯಾಕರ್ ಗಳು ಮಾಡುವುದೂ ಇಲ್ಲ. ಅವರದ್ದೇನಿದ್ದರೂ ಬಿಗ್ ಶಾಟ್.. ಬಿಗ್ ಡೆಟಾ...
ಕಂಪ್ಯೂಟರ್ ಒಂದು ಇಂಟರ್ ನೆಟ್ ಗೆ ಕನೆಕ್ಟ್ ಆಯಿತು ಎಂದರೆ ಕಳ್ಳರಿಗೆ ಮನೆಯ ಬಾಗಿಲು ತೆರೆದಿಟ್ಟಂತೆ. ಕೆಲವರು ಮೋಜಿಗಾಗಿ ಮಾಡಿದರೆ ಇನ್ನು ಕೆಲವರು ಮಾಹಿತಿ ಸಂಗ್ರಹಿಸಲು, ದುಡ್ಡು ಗಳಿಸಲು, ರಿವೆಂಜ್ ಗೆ ಮಾಡುವವರು ಇದ್ದಾರೆ. ಕೆಲವೊಮ್ಮೆ ಒಂದು ದೇಶದವರು ಇನ್ನೊಂದು ದೇಶದ ಬಗ್ಗೆ ಮಾಹಿತಿ ಕದಿಯಲು ಇಂಥ ಹ್ಯಾಕರ್ ಗಳನ್ನು ಬಳಸುತ್ತಾರೆ. ಅದೊಂದು ದೊಡ್ಡ ಜಾಲ.
ಹೀಗೆ ಜೈಲಿಗೆ ಹೋಗಿ ಬಂದವರು ಬಹಳ ಮಂದಿ ಇದ್ದಾರೆ. ಜೈಲಿನಲ್ಲೇ ಕುಳಿತು FBI Site ಬ್ರೇಕ್ ಮಾಡಿ ಅದರಲ್ಲಿ ತಮ್ಮ ಮಾಹಿತಿಯನ್ನೇ ಅಳಿಸಿದವರೂ ಇದ್ದಾರೆ. ಹಾಗೆಂದು ನಿಂತ ನಿಲುವಲ್ಲಿ ಹ್ಯಾಕಿಂಗ್ ಕಲಿಯಲು ಸಾಧ್ಯವಿಲ್ಲ. ನೆಟ್ ವರ್ಕ್ ನ ಇಂಚಿಂಚು ಅರಿವಾದರೆ ಮಾತ್ರ ಹ್ಯಾಕಿಂಗ್ ಸಾಧ್ಯ. IP address, TCP Headers, Network Protocol, File Buffering, Bytes, Bits, Binary... ಒಂದೇ? ಎರಡೇ? ಎಲ್ಲವನ್ನೂ ಅರಿಯಬೇಕು. ಅದರಲ್ಲಿರುವ ಲೂಪ್ ಹೋಲ್ ಗಳನ್ನ್ನು ಅರಿತುಕೊಂಡು ಸಾಗಬೇಕು.
ಅಷ್ಟೇ ಅಲ್ಲ, ಯಾರು ಹ್ಯಾಕ್ ಮಾಡುತ್ತಾರೋ ಅವರು ಮೊದಲು ತಮ್ಮ ಕಂಪ್ಯೂಟರ್ ಗಳನ್ನು ಸರಿಯಾಗಿಟ್ಟುಕೊಳ್ಳಬೇಕು. ಹ್ಯಾಕರ್ ಗಳಿಗೆ ಹ್ಯಾಕರ್ ಗಳೇ ಶತ್ರುಗಳು. ಸ್ವಲ್ಪ ಯಾಮಾರಿದರೂ ಮತ್ತೊಬ್ಬ ಹ್ಯಾಕರ್ ಈತನ ಮಷಿನ್ ನ ಪ್ರತಿಯೊಂದಕ್ಷರವನ್ನೂ ಅಳಿಸಿಹಾಕಿಬಿಡಬಲ್ಲ. ಮಾಂತ್ರಿಕರು ದಿಗ್ಭಂಧನ ಹಾಕಿದಂತೆ ಹ್ಯಾಕರ್ ಗಳು ತಮ್ಮ ಮಷಿನ್ ಗಳನ್ನು Fire Wall ಗಳಿಂದ ಬಂಧಿಸಿರುತ್ತಾರೆ. ಆದರೆ ಒಬ್ಬ ಹ್ಯಾಕರ್ ಮಷಿನ್ ಒಳಗೆ ನುಸುಳಬೇಕೆಂದರೆ ಅದು ಕಷ್ಟದ ವಿಷಯ. 
ವಿಹಾರಿ ಕೂಡ ಒಬ್ಬ ಹ್ಯಾಕರ್. ಅದನ್ನು ಆತ ಹೊರಗೆಲ್ಲೂ ಹೇಳಿಕೊಂಡು ತಿರುಗಬೇಕೆಂದಿಲ್ಲ. ಅನ್ವೇಷಣಾಳಿಗೆ ಕೂಡ ಈ ವಿಷಯ ತಿಳಿದಿಲ್ಲ. ಆದರೆ ಹ್ಯಾಕರ್ ಜಗತ್ತಿಗೆ ಆತ ಚಿರಪರಿಚಿತ. ಆಗಾಗ ನಡೆಯುವ ಹ್ಯಾಕರ್ ಜಗತ್ತಿನ ಗುಪ್ತ ಕಾಂಪಿಟೇಶನ್ ಗಳಲ್ಲಿ ಎಷ್ಟೋ ಬಾರಿ ಆತನೇ ಮೊದಲಿಗ. ಹ್ಯಾಕರ್ ಜಗತ್ತಿನಲ್ಲಿ ಆತನಿಗೆ 'Logical Trozan'
ಎಂದೇ ಹೆಸರು. ಅಷ್ಟು Logical ಆಗಿ ಥಿಂಕ್ ಮಾಡುವ ವ್ಯಕ್ತಿ ಮತ್ತೊಬ್ಬನಿಲ್ಲ ಅಲ್ಲಿ. ಅದಕ್ಕೆ ಆ ಬಿರುದು.
ಆತ ಮನಸ್ಸು ಮಾಡಿದ್ದರೆ ಜಗತ್ತಿನ ಪ್ರತಿಷ್ಠಿತ ಕಂಪನಿಗಳಲ್ಲಿ ತಿಂಗಳಿಗೆ ಕೋಟಿಗಳನ್ನು ಎಣಿಸುವ ಕೆಲಸದಲ್ಲಿ ಇರಬಹುದಿತ್ತು. ಪ್ರತಿಯೊಂದು ಕಂಪನಿಗಳು ತಮ್ಮ ಡೆಟಾಗಳನ್ನು ಹ್ಯಾಕರ್ ಗಳಿಗೆ ಸಿಗದಂತೆ ಇಡಲು ತಮ್ಮದೇ ಹ್ಯಾಕರ್ ಗುಂಪುಗಳನ್ನು ಇಟ್ಟುಕೊಂಡಿರುತ್ತಾರೆ. ಮುನ್ನುಗ್ಗಿ ಬರುತ್ತಿರುವ ಹ್ಯಾಕರ್ ಗಳ ಜಾಲವನ್ನು, ಚಾಲವನ್ನು ಇವರು ಕಂಡು ಹಿಡಿದು ರಿವರ್ಸ್ ಹ್ಯಾಕ್ ಮಾಡಿಬಿಡಬಲ್ಲಂಥವರು ಇವರು. ವಿಹಾರಿಗೆ ಇಂಥದ್ಯಾವುದೂ ಇಷ್ಟವಿಲ್ಲ. ಜಗತ್ತಿನ ದೊಡ್ಡ ಹಗರಣ ಮಾಡಬೇಕು ಎಂಬುದೊಂದು ಆತನ ತಲೆಯಲ್ಲಿತ್ತು. ಅನ್ವೇಷಣಾಳ ಬಳಿ ಅದನ್ನು ಹೇಳಿದ್ದ ಕೂಡ. ಆಕೆಯೂ ಈತ ತಮಾಷೆ ಮಾಡುತ್ತಿದ್ದಾನೆ ಎಂದು ನಕ್ಕು ಸುಮ್ಮನಾಗುತ್ತಿದ್ದಳು. ಈಗ ಆತ ಮಾಡುವುದನ್ನೇ ನೋಡುತ್ತ ಕುಳಿತಿದ್ದಾಳೆ. 
ಅದು ವಿಹಾರಿಯ ಹೊಸ ಪ್ರಪಂಚ. ಏನು ಮಾಡುತ್ತಿದ್ದಾನೆ ಈತ? ಮುಖದಲ್ಲಿ ಅದೇ ಪ್ರಶ್ನಾರ್ಥಕ ಚಿಹ್ನೆ ಹಾಕಿಕೊಂಡು ಕುಳಿತಿದ್ದಳು ಅನ್ವೇಷಣಾ. 
"Yes!! Got it....!!"
ವಿಹಾರಿ ಏನು ಮಾಡುತ್ತಿದ್ದಾನೆಂದಾಗಲೀ, ಏನು ಸಿಕ್ಕಿತೆಂದಾಗಲೀ ಅವಳಿಗೆ ಅರ್ಥವಾಗದೇ " ಏನಾಯಿತು ವಿಹಾರಿ?" ಎಂದು ಕೇಳಿದಳು. 
"ಬಾ ಇಲ್ಲಿ ಈಗ, ನಿನಗೆ ಇಷ್ಟವಾದ ಒಂದು ಫೋಟೋ ಆರಿಸು." ದೊಡ್ಡ ಪರದೆಯ ಮೇಲೆ ಸನ್ನಿ ಲಿಯೋನಳ ವಿಧ ವಿಧವಾದ ನಮೂನೆಯ ಫೋಟೋಗಳಿದ್ದವು. 
ವಿಹಾರಿಯ ಬೆನ್ನಿಗೊಂದು ಗುದ್ದು ಬಿದ್ದಿತ್ತು "ಅಸಹ್ಯ ನಾನದನ್ನು ನೋಡಲಾರೆ" ತಿರುಗಿ ಕುಳಿತಳು ಅನ್ವೇಷಣಾ. "ಏನೋ ಘನ ಕಾರ್ಯ ಮಾಡುತ್ತಿದ್ದೆ ಎಂದರೆ ಇದೇನು?? ನಾನು ಹೊರಡುತ್ತೇನೆ" ಎಂದು ಹೊರಡಲನುವಾದಳು. 
"ಅಯ್ಯೋ ದೇವರೆ!! ಅದೇಕೆ ಹೀಗೆ ಮಾಡುತ್ತೀಯಾ?? ಸನ್ನಿ ಲಿಯೋನ್ ಬಾಲಿವುಡ್ ಹಿರೋಯಿನ್ ಕಣೆ. ಜಗತ್ತಿನ ಅತ್ಯಂತ ಜನಪ್ರಿಯ ಹೆಣ್ಣು. ಅವಳನ್ನು ಕಂಡರೆ ನಿನಗೇಕೆ ಹೊಟ್ಟೆ ಉರಿ?" ಎಂದ ವಿಹಾರಿ.
"ನನಗ್ಯಾಕೆ ಹೊಟ್ಟೆ ಉರಿ? ಅವಳ ಕರ್ಮ ಅವಳಿಗೆ, ನಿನ್ನ ಕರ್ಮ ನಿನಗೆ." ಎಂದಳು ಮತ್ತೂ ಸಿಟ್ಟಾಗಿ.
ಅಷ್ಟರಲ್ಲಿ ವಿಹಾರಿ Browser settings ಚೇಂಜ್ ಮಾಡಿದ್ದ. 'ಸ್ಟ್ರಿಕ್ಟ್ ಫಿಲ್ಟರ್'. ಈಗ ಪರದೆಯ ಮೇಲೆ ಸಭ್ಯಸ್ಥರು ನೋಡುವಂತಹ ಕೆಲವು ಫೋಟೋಗಳು ಬಂದವು. "ನಾನು ಏನು ಮಾಡುತ್ತಿದ್ದೇನೆ ಎಂದು ಹೇಳುತ್ತೇನೆ, ಮೊದಲು ಒಂದು ಫೋಟೋ ಆರಿಸು ಮಹರಾಯ್ತಿ. ಜಗಳ ಆಡುವ ಸಮಯವಲ್ಲ. I am in hurry!!" 
"ಫೋಟೋ ಆರಿಸಲು ಅದೇನು ದೇವರದಾ ಇಲ್ಲಾ ಭಾರತಮಾತೆಯದಾ??" ಉರಿಯುತ್ತಲೇ ಇದ್ದಳು.
"ಓಯ್ ತೇರಿ!!" ನಿನಗಿರುವ ತಲೆ ನನಗಿಲ್ಲ ನೋಡು." ಎನ್ನುತ್ತಾ ಮತ್ತೆ ಕೀಲಿಮಣೆ ಟಕ ಟಕ ಮಾಡಿದ. ಭಾರತ ಮಾತೆಯ ಫೋಟೋ, RSS ಲಾಂಛನದ ಫೋಟೋಗಳು ಬಂದವು. "ಇದೇ ಕರೆಕ್ಟ್" ಎಂದು ಒಂದು ಫೋಟೊ ಸೆಲೆಕ್ಟ್ ಮಾಡಿ ಅನ್ವೇಷಣಾಳನ್ನು ಹತ್ತಿರ ಎಳೆದು ಅವಳ ಕೈಯಲ್ಲಿ ಎಂಟರ್ ಹಿಟ್ ಮಾಡಿಸಿದ. 
"ಏನು ಮಾಡುತ್ತಿರುವೆ ವಿಹಾರಿ? ನನಗೆ ಅರ್ಥವಾಗುತ್ತಿಲ್ಲ" ಎಂದು ಕೊಸರಿಕೊಂಡಳು. ಅವಳನ್ನು ಹತ್ತಿರ ಎಳೆದು ತನ್ನ ಮಡಿಲಲ್ಲಿ ಹಾಕಿಕೊಂಡ ವಿಹಾರಿ.
"ಈಗ ನೋಡುತ್ತಿರು ನಾನೇನು ಮಾಡಿದೆ ಎಂದು ತೋರಿಸುವೆ" ಎಂದು ಮತ್ತಷ್ಟು ಕೀ ಗಳನ್ನು ಚಕಚಕನೆ ಒತ್ತಿದ. ಕಂಪ್ಯೂಟರ್ ಪರದೆಯ ಮೇಲೆ ವೆಬ್ ಸೈಟ್ ಒಂದು ಓಪನ್ ಆಯಿತು. ISIPakisthan. "ಏನು ಮಾಡುತ್ತಿರುವೆ ವಿಹಾರಿ" ಅದು ಪಾಕಿಸ್ತಾನದ ISI website. ಅದರಲ್ಲಿ ನನಗೇನು ತೋರಿಸುತ್ತಿರುವೆ?"
"ನೋಡುತ್ತಿರು ಈಗ ನಿನಗೆ ತಿಳಿಯುತ್ತದೆ" ಎಂದು ಕಂಪ್ಯೂಟರ್ ಪರದೆಯನ್ನೇ ನೋಡುತ್ತ ಕುಳಿತ ವಿಹಾರಿ. ಒಂದೆರಡು ಕ್ಷಣಗಳಲ್ಲಿ ಕಂಪ್ಯೂಟರ್ ಪರದೆ ಬ್ಲರ್ ಆಯಿತು. ಮತ್ತೊಂದು ಕ್ಷಣದಲ್ಲಿ ISI Website ನಲ್ಲಿ ವಿಹಾರಿ ಈಗಷ್ಟೆ ಅಪ್ ಲೋಡ್ ಮಾಡಿದ್ದ ಭಾರತಮಾತೆಯ ಚಿತ್ರ ನಳನಳಿಸತೊಡಗಿತು!!
ಮೂಕ ವಿಸ್ಮಿತಳಾಗಿ ಕುಳಿತುಬಿಟ್ಟಳು ಅನ್ವೇಷಣಾ. ಪಾಕಿಸ್ತಾನದಲ್ಲಿ ಅದೆಂಥ ಸಂಚಲನ ಮೂಡಿಸಬಹುದು ಎಂದು ಅನ್ವೇಷಣಾ ಬಲ್ಲಳು.
ಅದರ ಕೆಳಗೆ ವಿಹರಿ ಹಾಕಿದ ಮೆಸೇಜ್ ಕೂಡ ಬರುತ್ತಿತ್ತು. "ಪಟಾಣ್ ಕೋಟ್ ಧಾಳಿಗೆ ಸರಿಯಾದ ಉತ್ತರವನ್ನು ಸಧ್ಯದಲ್ಲಿಯೇ ನೀಡಲಿದ್ದೇವೆ. ಅದು ಶಸ್ತ್ರಾಸ್ತ್ರಗಳಿಂದಲ್ಲ. ಕಂಪ್ಯೂಟರ್ ಗಳಿಂದ. ನಿಮ್ಮ ಪ್ರತಿಯೊಂದೂ ಡೇಟಾಗಳು ನಮ್ಮ ಬಳಿ ಇದೆ. We are just deleting all your data. Wait and Watch!!" ಕುಳಿತಲ್ಲಿಯೇ ಬೆವರಿದಳು ಅನ್ವೇಷಣಾ. 
"ವಿಹಾರಿ ಇದೆಲ್ಲ ಯಾಕೆ? ದೇಶ ದೇಶಗಳ ಮಧ್ಯೆ ಸಂಬಂಧವೇ ಹಾಳಾಗಿ ಬಿಡುತ್ತದೆ. "
"ಹಾಳಾಗಲು ಈಗ ಸರಿಯಿದೆಯಾ? ಶತ್ರುಗಳು ಎಂದಿಗೂ ಶತ್ರುಗಳೇ. ನೋಡಿ ಉರಿದುಕೊಳ್ಳಲಿ. ಇನ್ನೊಂದು ಸ್ವಲ್ಪ ಕೆಲಸ ಉಳಿದಿದೆ. ಅದೊಂದಾದರೆ ಅವರ ಮಿಲಿಟರಿ ಡಾಟಾಬೇಸ್ ನಲ್ಲಿರುವ ಒಂದಕ್ಷರವೂ ಬಿಡದಂತೆ ಇಲ್ಲಿ ಕುಳಿತು ಓದುತ್ತೇನೆ. ಇಲ್ಲವೇ ಬಲೂಚಿಸ್ಥಾನ್ ಗೆ ಕೊಟ್ಟು ಬಿಡುತ್ತೇನೆ. ಆಗ ನೋಡಬೇಕು ಮಜಾ..!!" ಎಂದ ವಿಹಾರಿ.
"ಮಜಾ ಎನ್ನುತ್ತಿರುವೆಯಲ್ಲ ವಿಹಾರಿ? ಯುದ್ಧ ಎಷ್ಟು ಜನರ ಸಾವನ್ನು ತರುತ್ತದೆ ನಿನಗೆ ಗೊತ್ತಾ?? ಯಾರು ಸತ್ತರೂ ಜೀವಹಾನಿ ತಾನೇ?? ಪಾಕಿಸ್ತಾನದವರು ಮನುಷ್ಯರೇ ಅಲ್ಲವಾ?"
ನಕ್ಕ ವಿಹಾರಿ. "ಮನುಷ್ಯರ ಹಾಗೆ ಕಾಣುವವರೆಲ್ಲ ಮನುಷ್ಯರಲ್ಲ ಅನ್ವೇಷಣಾ. ಮನೆ ಬಿಟ್ಟು ಹಿಮದ ಮೇಲೆ ಅದೆಷ್ಟೊ ಸಾವಿರ ಅಡಿ ಎತ್ತರದಲ್ಲಿ ದೇಶ ಕಾಯುವ ನಮ್ಮ ಸೈನಿಕರ ತಲೆ ಕಡಿದು ಒಯ್ದರಲ್ಲ ಆಗ ಅವರು ಮನುಷ್ಯರಂತೆ ವರ್ತಿಸಿದ್ದರಾ? ಮುಂಬೈಗೆ ಬಂದು ತಾಜ್ ಮೇಲೆ ಧಾಳಿ ಮಾಡಿ ಕಾರಣವೇ ಇಲ್ಲದೆ ನೂರಾರು ಜನರ ಪ್ರಾಣ ತೆಗೆದರಲ್ಲ.. ನಾವೇನು ಅವರ ನಿದ್ದೆಗೆಡಿಸಲು ಹೋಗಿದ್ದೆವಾ? ಮೊನ್ನೆ ಮೊನ್ನೆ ಪಟಾಣ್ ಕೋಟ್ ಮೇಲೆ ಧಾಳಿ ನಡೆಸಿದರಲ್ಲ ಆಗ ಯಾವ ಮನುಷ್ಯತ್ವವನ್ನು ಅವರು ನೋಡಲಿಲ್ಲ ಅಲ್ಲವೇ??" ವಿಹಾರಿಯ ಮುಖ ಕೆಂಪು ಕೆಂಪಾಗಿತ್ತು. ಭಾವುಕ ಹುಡುಗರೇ ಹಾಗೆ, ಬಹು ಬೇಗ ಉದ್ವೇಗಗೊಳ್ಳುತ್ತಾರೆ. ಭಾವನೆಗಳಿಗೆ ಬೇಗ ಸ್ಪಂದಿಸುವವರು ಅವರೇ.
"ಇದಕ್ಕೆಲ್ಲ ಕೊನೆಯಿಲ್ಲ ಅನ್ವೇಷಣಾ. ನಾವು ಶಾಂತಿಪ್ರಿಯರಾಗೇ ಉಳಿದರೆ ಅವರೇನು ಶಾಂತಿಮಂತ್ರ ಜಪಿಸಿ ಮೌನವಾಗಿರುವುದಿಲ್ಲ. ಆ ನೆಲದ ರಕ್ತವೇ ಹಾಗೆ. ಮೊದಲಿನಿಂದ ಬದುಕಿದ್ದು ಇದೆ ರೀತಿ. ನಮ್ಮ ಸರ್ಕಾರಗಳು, ರಾಜಕಾರಣಿಗಳು ಬಾಯಿಮಾತಿನ ಡೊಂಬರಾಟವೇ ಹೊರತು ಮತ್ತೇನೂ ಮಾಡಲಾರರು. ಇವರಿಗೆಲ್ಲ ನನ್ನಂಥವರೇ ಸರಿ." 
ಅನ್ವೇಷಣಾಳಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. "ಹೋಗಲಿ ಬಿಡು. ನೀನು ಹೀಗೆ ಇನ್ನೊಬ್ಬರ ನಿದ್ದೆಗೆಡಿಸುವ ಕೆಲಸ ಮಾಡುವೆ ಎಂದು ಇಂದಿನವರೆಗೂ ಹೇಳಲೇ ಇಲ್ಲ.." 
"ಹಂ.. ನಿನ್ನ ನಿದ್ರೆಗೆಡಿಸುವ ರಾತ್ರಿಗಳು ಇನ್ನೂ ದೂರ ಉಳಿದಿವೆಯಲ್ಲ. ಹಾಗಾಗಿ ಬೇರೆಯವರ ನಿದ್ದೆಗೆಡಿಸುತ್ತಿದ್ದೇನೆ." ಎನ್ನುತ್ತಾ ಆಕೆಯ ಕುತ್ತಿಗೆಯ ಬಳಿ ತುಟಿ ಊರಿದ. ಆತನ ಕೈಗಳು ಆಕೆಯ ಸೊಂಟ ಬಳಸಿದ್ದವು.
"ಇದಕ್ಕೇನು ಕಡಿಮೆಯಿಲ್ಲ. ನಿದ್ದೆಗೆಡಿಸುವೆಯಂತೆ ಬಿಡು ಈಗ.."
"ಬ್ಯಾಂಕಿನಲ್ಲಿರುವ ಹಣವನ್ನು ಆಗಾಗ ತಡಕಿ ನೋಡದಿದ್ದರೆ ಅವು ಇಟ್ಟಲ್ಲೇ ಕೆಲಸಕ್ಕೆ ಬಾರದಂತೆ ಆಗಿಬಿಡುತ್ತವೆ" ಎಂದು ನಕ್ಕ. 
ಅವನ ಮಾತಿನ ಅರ್ಥವಾಗಿ ನಗು ಬಂದರು ತಡೆದುಕೊಂಡು "ಈಗೆಲ್ಲ ಹಣ ಬ್ಯಾಂಕಿನಲ್ಲಿರುವುದೇ ಇಲ್ಲ. ಅವೆಲ್ಲ ಡಿಜಿಟಲ್ ಗಳು. Online ಲೇ ಹರಿದಾಡುತ್ತವೆ." ಎಂದಳು.
"Online ಲಿ ಎಷ್ಟು ಹಣವಿದ್ದರೂ ಅದನ್ನು ಕೈಲಿ ಹಿಡಿದುಕೊಂಡಾಗಲೇ ಖುಷಿ ನೋಡು" ಎನ್ನುತ್ತಾ ಸೊಂಟದಿಂದ ಕೈ ಮೇಲೆರಿಸಿದ. 
"ಹಮ್.. ಹೀಗೆ ಬ್ಯಾಂಕಿನಲ್ಲಿ ಯಾವಾಗ ಬೇಕಾದಾವಾಗ ಹಣ ಇಡುವುದು ತೆಗೆಯುವುದು ಮಾಡಿದರೆ ಬಡ್ಡೀಯೂ ಬರುತ್ತದೆ. ಬಿಡು ಸಾಕು.. " ಆತನ ಮಡಿಲಿನಿಂದ ಕೊಸರಿಕೊಂಡು ಮೇಲೆದ್ದಳು. ಕಂಪ್ಯೂಟರ್ ಆರಿಸಿ ಆತನೂ ಆಕೆಯ ಹಿಂದೆ ನಡೆದ. 
ವಿಹಾರಿಯನ್ನು ತುಂಬ ಕಡಿಮೆ ಅಂದಾಜು ಮಾಡಿದ್ದ ಅನ್ವೇಷಣಾಳಿಗೆ ಈಗ ಆತ ಬಹಳ ಇಂಟಲಿಜೆಂಟ್ ಮನುಷ್ಯ ಎಂದೆನ್ನಿಸುತ್ತಿತ್ತು. ಅದನ್ನೇ ಉಪಯೋಗಿಸಿ ಒಂದು ಕೆಲಸ ಹಿಡಿದು ಸೆಟಲ್ ಆಗಿದ್ದರೆ ಮದುವೆಯಾಗಿ ಸುಖದಿಂದ ಇರಬಹುದು ಎಂದೆನ್ನಿಸಿತು ಆಕೆಗೆ. 
"ಏನೋ ತುಂಬಾನೇ ಯೋಚನೆ ಮಾಡುತ್ತಿದ್ದೀಯಲ್ಲಾ.." ಎನ್ನುತ್ತಾ ಮತ್ತೆ ಹಿಂದಿನಿಂದ ಬಂದು ತಬ್ಬಿಕೊಂಡ. ಎದುರಿನ ನಿಲುವುಗನ್ನಡಿಯಲ್ಲಿ ಅವರಿಬ್ಬರ ಬಿಂಬ ಕಾಣಿಸುತ್ತಿತ್ತು. ಎರಡು ನಿಮಿಷ ನೋಡುತ್ತಲೇ ಇದ್ದರು ಒಬ್ಬರನ್ನೊಬ್ಬರು. ಆತ ಆಕೆಯ ಕಿವಿ ಕಚ್ಚಿದ. "ಅನೂ.... ನೀನೆಷ್ಟು ಚೆನ್ನಾಗಿದ್ದೀಯಾ ಗೊತ್ತಾ??"
"ಹಂ...." ಮಾತನಾಡುವ ಸಮಯವಲ್ಲ ಅದು. 
ಕೆಲವು ಸಮಯಗಳಲ್ಲಿ ಮೌನವೇ ಇಷ್ಟವಾಗುತ್ತದೆ. ರಸಭರಿತ ಕ್ಷಣಗಳಲ್ಲಿ ಮಾತುಗಳು ಮಾಂಸದೊಳಗಿನ ಎಲುಬಿನಂತೆ.
ಅದರ ಅರಿವಾಯಿತು ವಿಹಾರಿಗೆ. ಆತನೂ ಮಾತನಾಡದೆ ಆಕೆಯನ್ನು ತಬ್ಬಿಯೇ ನಿಂತಿದ್ದ. ಅವಳ ಕೊರಳಿಗೆ ತಾಕುತ್ತಿರುವ ಅವನ ಬಿಸಿಯುಸಿರು.. ಅವನ ಗಲ್ಲವ ಮುದ್ದಿಸುತ್ತಿರುವ ಅವಳ ಮುಂಗುರುಳು.. ಬೇರೆಯದೇ ಲೋಕಕ್ಕೆ ಒಯ್ದಿತ್ತು ಇಬ್ಬರನ್ನೂ.. ತನ್ನ ಸೊಂಟ ಬಳಸಿದ ಅವನ ಕೈಗಳನ್ನು ಆಕೆ ಮತ್ತೂ ಬಿಗಿಯಾಗುವಂತೆ ಒತ್ತಿ ಹಿಡಿದಿದ್ದಳು. ಒಂದು.. ಎರಡು... ಮೂರು.. ನಿಮಿಷಗಳು ಕಳೆದೆ ಇದ್ದವು.
ಅನ್ವೇಷಣಾ..
ಪ್ರೀತಿಯೆಂಬುದು ನೀರಿದ್ದಂತೆ. ಪ್ರೀತಿಯೆಂಬುದು ಬಿಸಿಲು ಕೂಡ. ಅರ್ಥವಾಗಲಿಲ್ಲವಾ?? ನೀನು ಬಿರು ಬಿಸಿಲಿನಲ್ಲಿ ಮರಳುಗಾಡಿನಲ್ಲಿ ನಡೆಯುತ್ತಿರುವಾಗ ನೀರು ಸಿಕ್ಕರೆ...?? ಕಲ್ಪನೆಯೇ ಎಷ್ಟು ಹಿತ ಕೊಡುತ್ತಿದೆ ಅಲ್ಲವಾ??
ಶೀತ ಪ್ರದೇಶದ ಕಣಿವೆಯೊಂದರಲ್ಲಿ ಛಳಿಯ ತಾಳಲಾರದೆ ನೀ ನಡುಗುವಾಗ ನಿನ್ನೆಡೆಗೆ ಬರುವ ಬಿಸಿಲಿನ ಕಿರಣವೊಂದು ಎಂಥ ಬೆಚ್ಚನೆಯ ಭಾವವನ್ನು ನೀಡುತ್ತದೆ. ಊಹಿಸಬಲ್ಲೆಯಾ!!? 
ಹಾಗೆ ಪ್ರೀತಿ ಕೂಡ.. ಅದರ ಅನುಭೂತಿಯೇ ಚಂದ. 
ಸ್ವಾತಿಯ ಮಳೆ ಜಿನುಗಬೇಕು.. ಭೂಮಿ ಹಸಿರನುಟ್ಟು ಮಿನುಗಬೇಕು.. ಆಗ ಹಕ್ಕಿಗಳ ಕಲವರ ಗೆಳತಿ... 
ಮೇಘಗಳು ಕೂಡ ಮಾತನಾಡಲು ಬಯಸಿ ಗುಡುಗಾಗುತ್ತವೆಯಾ? ಗಂಡು ಮೇಘವೊಂದು ಹೇಳಿದ ಮಾತು ಕೇಳಿ ನಾಚುವ ಹೆಣ್ಣು ಮೇಘದ ನಸು ನಗು ಮಿಂಚಾಗುತ್ತದೆಯಾ?? ಅರ್ಧಾಂಗಿಯು ಸಿಟ್ಟಿನಿಂದ ಕೂಗಿದಾಗ ಅದು ಸಿಡಿಲಾಗುತ್ತದೆಯಾ ಕೇಳಬೇಡ..!!
ನೀನೊಬ್ಬಳು ನನ್ನ ಜೀವನದಲ್ಲಿ ಬರದಿದ್ದರೆ ಹೇಗಿರುತ್ತಿದ್ದೆನೋ ನಾ?? ಅಸ್ತಿತ್ವದ ಮೊಳಕೆಯೊಡೆಯುವುದು ತನ್ನವರು, ತನ್ನದು ಎಂಬುದು ಇದ್ದಾಗ ಮಾತ್ರ. ನೀ ಬರುವ ಮುಂಚೆ ಏನಿತ್ತು?? ವಿಹಾರಿ ಚೇತೋಹಾರಿಯಾಗಿದ್ದು ನಿನ್ನ ನಗು ಕಂಡ ಮೇಲೆಯೇ. ಇದೊಂದು ಕೂಡುಹಾದಿ ಎಂದಿಗೂ ಕವಲೊಡೆಯದಿರಲಿ.. ನಿನ್ನ ಜೊತೆ ಕಳೆದ ಕ್ಷಣಗಳು ಪಲ್ಲವಿಯಾಗಿ ಮತ್ತೆ ಮತ್ತೆ ಬರಲಿ.. 
ನಿನ್ನಲ್ಲಿ ಅನ್ವೇಷಿಸುವುದು ಬಹಳವೇ ಇದೆ. ಈ ಅನುರಾಗಿ ಯಾವಾಗಲೂ ನಿನ್ನ ನೆನಪಿನಲ್ಲಿರುತ್ತಾನೆ ಎಂಬುದನ್ನು ಮರೆಯದಿರು... 
ನಿನ್ನವ
ವಿಹಾರಿ.
ಆತನ ಬೆಚ್ಚನೆಯ ಬೆಸುಗೆಯಲ್ಲಿ ನಿಂತೆ ಆತ ಕೊಟ್ಟ ಪತ್ರವನ್ನು ಮತ್ತೆ ಮತ್ತೆ ಓದಿಕೊಂಡಳು. ಉಪಮೇಯಗಳೇ ಎಷ್ಟು ಚಂದ ಎಂದುಕೊಂಡಳು.
ಅದೆಷ್ಟೋ ಹೊತ್ತಿನ ಬಳಿಕ "ನಾನು ಹೊರಡುತ್ತೇನೆ, ಇನ್ನೆರಡು ದಿನಗಳಲ್ಲಿ ನಮ್ಮ ಕಂಪನಿಯ ಬಾಸ್ ನ ಪಾರ್ಟನರ್ಸ್ ದಿಲ್ಲಿಯಿಂದ ಬರುತ್ತಿದ್ದಾರೆ. ತುಂಬಾನೇ ಅರೆಂಜಮೆಂಟ್ಸ್ ಮಾಡುವುದಿದೆ. ಪಾರ್ಟಿ ಬೇರೆ ಇದೆ." ಎಂದಳು ಆತನ ತೆಕ್ಕೆಯಿಂದ ಹೊರಬರುತ್ತಾ.
"ಯಾವಾಗಲೂ ಬಾಸ್, ಬಾಸ್ ಎನ್ನುತ್ತೀಯಲ್ಲಾ.. ಆತನೇ ಪುಣ್ಯವಂತ..!!" ಎಂದ ವಿಹಾರಿ.
"ಹೊಟ್ಟೆಗೆ ಬೇಕಲ್ಲಪ್ಪ. ನೀನಂತೂ ಜವಾಬ್ದಾರಿ ಹೊರಲಾರೆ. ಇಲ್ಲದಿದ್ದರೆ ಯಾವಾಗಲೋ ಬರುತ್ತಿದ್ದೆ ನಿನ್ನ ಬಳಿ.." ಎಂದಳವಳು.
"ಹಾ.. ಸಧ್ಯದರಲ್ಲಿಯೇ ನಿನ್ನೆಲ್ಲ ಚಿಂತೆಗಳಿಗೂ ಬ್ರೇಕ್ ಕೊಡುತ್ತೇನೆ. ನಂತರ ನಮ್ಮದೇ ಪ್ರಪಂಚ.." ಎಂದ ವಿಹಾರಿ. 
ಟಕ್.. ಟಕ್.. ಬಾಗಿಲು ತಟ್ಟಿದ ಸದ್ದು. ಹಿಂದೆಯೇ ಕಾಲಿಂಗ್ ಬೆಲ್ ಕೂಡ ಮೊಳಗಿತು. ದಿಢೀರನೆ ತನ್ನ ಯೋಚನೆಗಳಿಂದ ಎಚ್ಚೆತ್ತ ವಿಹಾರಿ. ಅನ್ವೇಷಣಾಳ ಹಳೆಯ ನೆನಪುಗಳೊಂದಿಗೆ ಕಳೆದು ಹೋಗಿದ್ದ ಆತ. ಮತ್ತೆ ಬಾಗಿಲು ತಟ್ಟಿದ ಸದ್ದು. ವರ್ತಮಾನಕ್ಕೆ ಬರಲು ಆತನಿಗೆ ಕ್ಷಣಗಳೇ ಹಿಡಿಯಿತು. ಯಾರು ಬಂದಿರಬಹುದು ಎಂದು ತಿಳಿಯಲಿಲ್ಲ. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಒಂದು ಕ್ಷಣದ ಆಲಸ್ಯವೂ ತನ್ನನ್ನು ಸಮಸ್ಯೆಗೆ ನೂಕಬಲ್ಲದು ಎಂಬುದು ಆತನಿಗೆ ಗೊತ್ತು. 
ಕೈಗೆ ಸಿಕ್ಕ ಶರ್ಟ್ ಒಂದನ್ನು ತೆಗೆದು ಹಾಕಿಕೊಂಡು ಬೆಕ್ಕಿನ ನಡಿಗೆಯಲ್ಲಿ ಕಿಡಕಿಯ ಬಳಿ ಹೋಗಿ ಸ್ವಲ್ಪವೇ ಪರದೆ ಸರಿಸಿ ಬಾಗಿಲ ಬಳಿ ಯಾರು ನಿಂತಿದ್ದಾರೆ ಎಂದು ನೋಡಿದ. 
ಮತ್ತೆ ಯೋಚಿಸಲಿಲ್ಲ. ಬಾಗಿಲ ಬಳಿ ನಿಂತವರು ಪೋಲಿಸ್ ಡಿಪಾರ್ಟಮೆಂಟ್ ನವರು ಇಲ್ಲವೇ ಸಿಕ್ರೆಟ್ ಏಜೆನ್ಸಿಯವರು. ಸಿಕ್ಕಿಬಿದ್ದರೆ ಮುಗಿಯಿತು. ಮತ್ತೊಮ್ಮೆ ಕಾಲಿಂಗ್ ಬೆಲ್ ಸದ್ದು ಮಾಡಿತು.
ಸದ್ದು ಮಾಡದೆ ಗಡಿಬಿಡಿಯಿಂದ ಮಹಡಿಯ ಮೆಟ್ಟಿಲೇರಿದ. ತಾನು ಮನೆಯಲ್ಲಿ ಇರುವುದನ್ನು ತಿಳಿದೇ ಬಂದಿರುತ್ತಾರೆ ಎಂಬುದಂತೂ ಸತ್ಯ. ಬಂದವರು ನಿಲ್ಲುವ ರೀತಿಯಲ್ಲೇ ತಿಳಿದುಬಿಡುತ್ತದೆ ಅವರೆಷ್ಟು ಪ್ರೊಫೆಶನಲ್ ಎಂದು. ಸದ್ದಾಗದಂತೆ ಮಹಡಿಯ ಹಿಂಬಾಗಿಲನ್ನು ತೆಗೆದು ಹೊರಗೆ ಬಂದು ಟೆರೆಸ್ ಸೇರಿದ ವಿಹಾರಿ. ಜೋರಾಗಿ ಓಡಿ ಹೋಗಿ ಜಿಗಿದರೆ ಪಕ್ಕದ ಮನೆಯ ಟೆರೆಸ್ ಸಿಗುವಂತೆ ಕಂಡಿತು. ಆದರೆ ಜಿಗಿಯುವಾಗ ತನ್ನ ಮನೆಯೇದುರಿನಲ್ಲಿ ನಿಂತವರಿಗೆ ಕಂಡರೆ ಕಷ್ಟ. ಎಷ್ಟು ಜನ ಬಂದಿದ್ದಾರೆ ತಿಳಿದಿಲ್ಲ. ಮನೆಯ ಹಿಂದೆ ಯಾರ ಸುಳಿವು ಕಾಣಲಿಲ್ಲ. 
ಡ್ರೈನೇಜ್ ಪೈಪ್ ಸಹಾಯದಿಂದ ಕೆಳಗಿಳಿದು ಹಿಂದಿನಿಂದ ಓಡಿ ತಪ್ಪಿಸಿಕೊಳ್ಳುವುದೇ ಸರಿ ಎಂದೆನ್ನಿಸಿತು. ಮತ್ತೆ ಯೋಚಿಸದೆ ಹಲ್ಲಿಯಂತೆ ಸರಸರನೆ ಕೆಳಗೆ ಜಾರಿ ಹಿಂದಕ್ಕೆ ತಿರುಗಿದ ಅಷ್ಟೆ.
ಬಲವಾದ ಮುಷ್ಠಿಯೊಂದು ಆತನ ಕುತ್ತಿಗೆಯೆಡೆಗೆ ತೂರಿ ಬಂತು. ಆ ಹೊಡೆತ ಗುರಿಯಿಟ್ಟಲ್ಲಿ ಬಿದ್ದಿದ್ದರೆ ಕಮ್ ಕಿಮ್ ಎನ್ನದೇ ಕುಸಿದು ಬಿಡುತ್ತಿದ್ದ ವಿಹಾರಿ. ಆದರೆ ಆತ ಆ ಕ್ಷಣಕ್ಕೆ ಮೊದಲೇ ಪಕ್ಕಕ್ಕೆ ಸರಿದು, ಎದುರು ನಿಂತಿದ್ದವನಿಗೆ ಜಾಡಿಸಿ ಒದ್ದ. ಎದುರಿನಲ್ಲಿದ್ದವ ಬಲವಾದ ಆಳು. ಆದರೂ ಎರಡು, ಮೂರು ಮಾರು ಹಿಂದಕ್ಕೆ ಬಿದ್ದ. 
"ವಿಹಾರಿ, ಇನ್ನೊಂದು ಇಂಚು ಸರಿದರು ಗುಂಡು ನಿನ್ನ ತಲೆಯೊಳಗೆ ಇಳಿಯುತ್ತದೆ. ಸುಮ್ಮನೆ ನಿಲ್ಲು.." ಎಂದಿತು ಗಡಸು ದನಿಯೊಂದು.
ಓಡಲು ಕಾಲೆತ್ತಿದ್ದ ವಿಹಾರಿ ಹಿಂದೆ ತಿರುಗಿ ನೋಡಿದ. ರಿವಾಲ್ವರ್ ತನ್ನೆಡೆಗೆ ಗುರಿ ಹಿಡಿದು ನಿಂತಿದ್ದ ಒಬ್ಬ ವ್ಯಕ್ತಿ.ತಾನಿನ್ನೇನೂ ಮಾಡುವಂತಿಲ್ಲ. ಮುಂದೇನಾಗುತ್ತದೋ ನೋಡೋಣ ಎಂದು ನಿಂತಲ್ಲಿಯೇ ನಿಂತ. ಎಲ್ಲಿದ್ದರೋ ಮತ್ತಿಬ್ಬರು? ಬಂದು ಆತನನ್ನು ಹಿಡಿದುಕೊಂಡರು. ಒದೆ ತಿಂದ ವ್ಯಕ್ತಿಯೂ ನಿಧಾನವಾಗಿ ಎದ್ದು ಬಂದು ಅವರ ಜೊತೆ ಸೇರಿದ. 
ವಿಹಾರಿಯ ಮುಖಕ್ಕೆ ಕಪ್ಪನೆಯ ಮುಸುಕು ಹಾಕಿ ಮುಂದೆ ಕರೆದುಕೊಂಡು ಹೊರಟರು. ಈಗ ಸ್ವಲ್ಪ ತಗಾದೆ ತೆಗೆದರೂ ತನ್ನೆಡೆಗೆ ಗುಂಡು ಹಾರಿಸಲು ರಿವಾಲ್ವರ್ ವ್ಯಕ್ತಿ ಗುರಿ ಹಿಡಿದೇ ಇದ್ದಾನೆ ಎಂದು ತಿಳಿದಿದ್ದರಿಂದ ವಿಹಾರಿ ಮತ್ತೇನನ್ನು ಮಾಡದೆ ಅವರ ಜೊತೆ ನಡೆದ. 
ವಿಹಾರಿಯನ್ನು ಹತ್ತಿಸಿಕೊಂಡ ಜೀಪ್ ಬಂದ ದಾರಿಯಲ್ಲೇ ವಾಪಾಸ್ಸಾಯಿತು. ತನ್ನನ್ನು ಆ ಕ್ಷಣದಲ್ಲಿ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಸಣ್ಣ ಸುಳಿವು ಇಲ್ಲದೆ ಕತ್ತಲ ಮುಸುಕಿನೊಳಗೆ ತನ್ನ ಸಮಯ ಬರುವುದೋ ಎಂದು ಕಾಯತೊಡಗಿದ ವಿಹಾರಿ.
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/

No comments:

Post a Comment