Saturday, July 23, 2016

ಖತರ್ನಾಕ್ ಕಾದಂಬರಿ..ನಮ್ಮ ನಿಮ್ಮ ನಡುವೆ... ಅಧ್ಯಾಯ 14

                                 ಖತರ್ನಾಕ್ ಕಾದಂಬರಿ..ನಮ್ಮ ನಿಮ್ಮ ನಡುವೆ... ಅಧ್ಯಾಯ 14

ಮಾನಸಿಕ ಆಸ್ಪತ್ರೆಯಲ್ಲಿ ಕೊಲೆಯಾಗಿ ನಾಲ್ಕು ದಿನವೇ ಕಳೆದಿತ್ತು. ಕ್ಷಾತ್ರ ಫೈಲ್ ಹಿಡಿದುಕೊಂಡು ಕುಳಿತಿದ್ದ. ತಾನು ಕೊಲೆಗಾರನನ್ನು ಹಿಡಿಯಲು ತುಂಬ ಸನಿಹ ಇದ್ದೇನೆ ಎಂದೆನಿಸುತ್ತಿತ್ತು ಆತನಿಗೆ. ಮಾನಸಿಕ ಆಸ್ಪತ್ರೆಯ ಡಾಕ್ಟರ್ ಮತ್ತು ಉಳಿದ ನರ್ಸ್ ಗಳ ವಿವರಣೆಯಿಂದ ಕೊಲೆಗಾರನ ಮುಖಚರ್ಯೆ ಕೂಡ ಸಿಕ್ಕಿತ್ತು. ಅದನ್ನಾಗಲೇ ಎಲ್ಲ ಪೋಲಿಸ್ ಸ್ಟೇಷನ್ ಗೆ ಕಳುಹಿಸಿದ್ದ ಕೂಡ. ಟಿವಿಯಲ್ಲಾಗಲೀ, ಪತ್ರಿಕೆಗಳಲ್ಲಾಗಲೀ ಹಾಕಲು ಹೋಗಿರಲಿಲ್ಲ. ಅದು ಕೊನೆಯ ದಾರಿ. ಕೊಲೆಗಾರ ಅದನ್ನು ಗಮನಿಸಿದರೆ ಭೂಗತವಾಗಿ ಬಿಡುತ್ತಾನೆ. ಪೋಲಿಸರು ತನ್ನ ಹಿಂದೆ ಬಿದ್ದಿದ್ದಾರೆ ಎಂಬುದು ತಿಳಿಯುವುದರೊಳಗಾಗಿ ಹಿಡಿದು ಬಿಡಬೇಕು. ಸ್ವಲ್ಪ ಸೂಚನೆ ಸಿಕ್ಕಿದರೂ ಜಾಗ್ರತರಾಗಿಬಿಡುತ್ತಾರೆ. ಹಾಗಾಗಿ ಕೇವಲ ಪೋಲಿಸ್ ಸ್ಟೇಷನ್ ಗಳಿಗೆ ಮಾತ್ರ ಅವನ ಭಾವಚಿತ್ರ ಕಳುಹಿಸಲಾಗಿತ್ತು. ಈಗೀಗ ಕೊಲೆಗಾರರನ್ನು, ಕಳ್ಳರನ್ನು ಹಿಡಿಯುವುದು ಸುಲಭ. ಎಲ್ಲಿ ನೋಡಿದರಲ್ಲಿ ಸಿ. ಸಿ ಟೀವಿ ಗಳು ಬರಾಟೆ. ಅದೆಲ್ಲವನ್ನು ಫಾಲೋ ಮಾಡಲೇ ಎಷ್ಟೋ ಜನರು ನೇಮಕವಾಗಿರುತ್ತಾರೆ. ಎಲ್ಲಾದರೂ ಒಂದು ಕಡೆ ಗುರುತು ಸಿಕ್ಕೆ ಸಿಗುತ್ತದೆ. ಅದಕ್ಕಾಗಿಯೇ ಸ್ವಲ್ಪ ನಿಶಿನ್ಥನಾಗಿದ್ದ ಕ್ಷಾತ್ರ . ಹಿಂದೆಯೇ ಕ್ಷಾತ್ರ ಬೇರೆಲ್ಲ ಕೊಲೆಗೂ, ಮಾನಸಿಕ ಆಸ್ಪತ್ರೆಯಲ್ಲಿ ನಡೆದ ಕೊಲೆಗೂ ಇರುವ ವ್ಯತ್ಯಾಸ, ಸಾಮ್ಯತೆ ಎಲ್ಲವನ್ನೂ ಗಮನಿಸಿದ್ದ. 
ಮಾನಸಿಕ ರೋಗಿಗಳು ಹೀಗೇಕೆ Psycho serial killer ಆಗಿ ಬದಲಾಗಿ ಬಿಡುತ್ತಾರೆ ಒಮ್ಮೊಮ್ಮೆ ಎಂದು ಆತ ಯೋಚಿಸುತ್ತಿದ್ದ. ಈ ಮೆಂಟಾಲಿಟಿಯ ಬಗ್ಗೆ ಸ್ವಯಂವರಾಳಲ್ಲಿ ಕೇಳಿದರೆ ಹೇಗೆ ಎಂದು ಎರಡು ದಿನದಿಂದ ಬಹಳ ಸಾರಿ ಯೋಚಿಸಿದ. "ಮಾನಸಿಕ ರೋಗಿಗಳ ಬಗ್ಗೆ ಅರಿಯುವುದಕ್ಕಿಂತ ಹೆಚ್ಚಾಗಿ ನಿನಗೆ ಸ್ವಯಂವರಾಳ ಜೊತೆ ಮಾತನಾಡಬೇಕಿದೆ" ಎಂದು ಅಂತರಂಗ ಕುಕ್ಕುತ್ತಿದ್ದರಿಂದ ಇನ್ನೂ ಅಲ್ಲಿಗೆ ಹೋಗುವ ಸಾಹಸದಿಂದ ದೂರವೇ ಉಳಿದಿದ್ದ. ಮುಖ ನೋಡಿದರೆ ಮನಸ್ಸಿನಲ್ಲಿ ಇರುವುದನ್ನು ಅರಿಯುತ್ತಾಳೆ. ತನ್ನ ಮನಸ್ಸಿನ ಬಾವಗಳು ಅವಳಿಗೆ ತಿಳಿದು ಬಿಟ್ಟರೆ ಎಂಬ ಸಂಕೋಚವೂ ಸೇರಿತ್ತು ಅವನ ನಡೆಯಲ್ಲಿ. 
"ಸ್ವಯಂವರಾ" ಪದೇ ಪದೇ ನೆನಪಾಗಿದ್ದಂತೂ ನಿಜ. ಅವಳ ಮುಗ್ಧ ಕಳೆಭರಿತ ಮುಖ, ಮುಖಕ್ಕೆ ಹೊಂದುವ ಕಾಂತಿಯ ಕಪ್ಪು ಕಣ್ಣುಗಳು, ಅದಕ್ಕೆ ಹೊಂದುವ ನಗು, ಗಂಡಸಿನ ತಲೆ ಕೆಡಿಸುವ ಅವಳ ಸ್ನಿಗ್ಧ ಸೌಂದರ್ಯ ಅವನ ಮನಸ್ಸನ್ನು ಚಂಚಲಗೊಳಿಸಿತ್ತು.
ಕ್ಷಾತ್ರನಿಗೆ ಇದ್ಯಾವುದೂ ಹೊಸತಲ್ಲ. ಸ್ವಯಂವರಾಳಿಗಿಂತ ಚೆಂದದ ಹೆಣ್ಣುಗಳು ಕ್ಷಾತ್ರನ ಹಿಂದೆ ಬಿದ್ದಿದ್ದಿದೆ. ಆದರೆ ಕ್ಷಾತ್ರನ ಮನಸ್ಸು ಕದಲಿರಲಿಲ್ಲ. ಆತನದು ಗಾಂಭಿರ್ಯ ನಡೆ. ಎಷ್ಟೇ ಚಂದದ ಹೆಣ್ಣುಗಳು ಮುಂದೆ ನಿಂತು ಕೇಳಿದಾಗಲೂ ಮುಖದಲ್ಲಿ ಅದೇ ಶಾಂತತೆ. ಎಂದೂ ಕದಲದ ಮನುಷ್ಯ ನಾಲ್ಕು ದಿನದಿಂದ ಸ್ವಯಂವರಾಳ ಬಗ್ಗೆ ಬಹಳವೇ ಯೋಚಿಸುತ್ತಿದ್ದ. 
ಹಾಗಾದರೆ ಅವಳಲ್ಲಿ ಆಕರ್ಷಿಸಿದ್ದು ಏನು? ಚಾಣಾಕ್ಷತೆಯಾ!? ಮುಖ ನೋಡಿ ಮನಸ್ಸನ್ನು ಓದುವ ತಂತ್ರಗಾರಿಕೆಯಾ!? ತಾನೇನಾದರೂ ಪ್ರೀತಿಯಲ್ಲಿ ಬಿದ್ದುಬಿಟ್ಟೆನಾ!? ತಲೆ ಕೊಡವಿಕೊಂಡ ಕ್ಷಾತ್ರ. ತನ್ನದು ಮದುವೆ ಆಗುವ ವಯಸ್ಸೇ?? ಅದೇನೂ ಸುಳ್ಳಲ್ಲ. ಆದರೆ ಪ್ರೀತಿ ಎಂದು ಹಾಡು ಹಾಡಿಕೊಂಡು, ಮರ ಸುತ್ತುವ ಹುಡುಗತನದ ಕಾಲ ಮುಗಿದು ಹೋಗಿದೆ. 
"ಇಷ್ಟವಾದೆ. ಮದುವೆಯಾಗಲು ಒಪ್ಪಿಗೆಯಾ!? ಕೇಳಿದರೆ ಒಪ್ಪಿ ಬಿಡುತ್ತಾಳಾ??"
ಒಂದೇ ಸಲ ನೋಡಿದ್ದು. ಈಗ ಹೋಗಿ ಹೀಗೆ ಕೇಳಿದರೆ ಏನೆಂದುಕೊಳ್ಳಬಹುದು ನನ್ನ ಬಗ್ಗೆ? ಪೋಲಿಸ್ ತಲೆ ಎಷ್ಟೆಂದರೂ, ಪ್ರಶ್ನೆಗಳ ಮೇಲೆ ಪ್ರಶ್ನೆ ಏಳುತ್ತಿತ್ತು.
ಯೋಚಿಸುತ್ತ ಕುಳಿತ ಆತನಿಗೆ, ಆಕೆಯ ಬಳಿ ಮಾತನಾಡಲು ಮತ್ತೂ ಬಲವಾದ ಕಾರಣವೊಂದು ಸಿಕ್ಕಿತು. "ಇಲ್ಲೊಬ್ಬನು ಬಂದು ಸೇರಿದ್ದಾನೆ. ಆತ ಹುಚ್ಚನಲ್ಲ ಎಂದು ನನಗನ್ನಿಸುತ್ತಿದೆ. ನೀವು ವಿಚಾರಿಸಬೇಕು." ಎಂದು ಹೇಳಿದ್ದಳು. ನಂತರ ಈ ಕೊಲೆಯ ಮಧ್ಯ ಅದೆಲ್ಲವೂ ಮರೆತು ಹೋಗಿತ್ತು. ಈಗ ಮತ್ತೆ ಅದೇ ಮಾತು ನೆನಪಾದಾಗ ಅವಳಿಗೆ ಸಹಾಯ ಮಾಡಲು ಫೋನ್ ಮಾಡಿದರೆ ತಪ್ಪಲ್ಲ ಎಂದುಕೊಂಡು ರಿಸೀವರ್ ಎತ್ತಿ ಡಯಲ್ ಮಾಡಿದ.
ನಾಲ್ಕು ರಿಂಗ್ ಆದ ನಂತರ ಆಕಡೆಯಿಂದ ರಿಸೀವರ್ ಎತ್ತಿದ ಸದ್ದು. ಸ್ವಯಂವರಾಳ ಧ್ವನಿಗೆ ಕಾಯುತ್ತಿದ್ದ ಕ್ಷಾತ್ರನಿಗೆ ನಿರಾಸೆಯಾಯಿತು. 
"ದೀನ್ ದಯಾಳು ಮಾನಸಿಕ ಆಸ್ಪತ್ರೆ" ಎಂದಿತು ಗಡಸು ದನಿಯೊಂದು.
ನಿರಾಸೆಯಾದರೂ ತಡೆದುಕೊಂಡು "ಇನಸ್ಪೆಕ್ಟರ್ ಕ್ಷಾತ್ರ. ಅಂದು ನಡೆದ ಕೊಲೆಯ ಬಗ್ಗೆ ಮಾತನಾಡಬೇಕು. ಡಾಕ್ಟರ್ ಸ್ವಯಂವರಾ ಇಲ್ಲವೇ?" ಎಂದ ಪೋಲಿಸ್ ಗತ್ತಿನಲ್ಲಿ. 
ಇನಸ್ಪೆಕ್ಟರ್ ಎನ್ನುತ್ತಲೇ ಆ ಕಡೆಯ ಧ್ವನಿ ಕೂಡ ಮೆದುವಾಯಿತು. ಪೋಲಿಸ್ ಎಂದರೆ ಹಾಗೇ, ಎಂತಹವರನ್ನೂ ಮೆತ್ತಗಾಗಿಸುತ್ತದೆ. 
"ಸರ್, ಮೂರು ದಿನದಿಂದ ಅವರು ಆಸ್ಪತ್ರೆಗೆ ಬಂದಿಲ್ಲ" ಎಂದಿತು ಆ ಧ್ವನಿ. ಮುಂದೇನು ಮಾತನಾಡಬೇಕೆಂದು ತಿಳಿಯಲಿಲ್ಲ ಆತನಿಗೆ. "ಅವರ ಪರ್ಸನಲ್ ನಂಬರ್ ಇದ್ದರೆ ಕೊಡಿ. ಮಾತನಾಡುತ್ತೇನೆ" ಎಂದ ಕ್ಷಾತ್ರ. ಅತ್ತ ಕಡೆಯಿಂದ ಮಾತನಾಡುತ್ತಿರುವುದು ಪೋಲಿಸ್ ಆಗಿರುವುದರಿಂದ ಇಲ್ಲ ಎನ್ನಲಾಗದೆ "ಒಂದು ನಿಮಿಷ" ಎಂದು ಡೈರೆಕ್ಟರಿ ತಡಕತೊಡಗಿದ. ಪೋಲಿಸರಿಗೆ ಕೂಡ ಪ್ರೇಮವಾಗುತ್ತದೆ ಎಂದು ತಿಳಿದಿದ್ದರೂ ಕೂಡ ಆತನೇನು ಮಾಡುವಂತಿರಲಿಲ್ಲ. "ಸರ್, ಬರೆದುಕೊಳ್ಳಿ " ಎಂದು ನಂಬರ್ ಹೇಳಿದ ಆಕಡೆಯ ವ್ಯಕ್ತಿ.
ಫೋನ್ ಕಟ್ ಮಾಡಿ ತನ್ನ ಮೊಬೈಲ್ ನಿಂದ ಸ್ವಯಂವರಾಳ ನಂಬರ್ ಡಯಲ್ ಮಾಡಿದ. "ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ" ಎಂದಿತು ವಾಯ್ಸ್ ಕಾಲರ್.
ಸ್ವಲ್ಪ ಅಸಹನೆ ಮೂಡಿತು ಕ್ಷಾತ್ರನಿಗೆ. ತಾನು ಹೀಗೇಕೆ ಅವಳ ಹಿಂದೆ ಹುಚ್ಚಾಗಿದ್ದೇನೆ? ನಿಜವಾಗಿಯೂ ಕೇಸಿನ ಬಗ್ಗೆ ವಿಚಾರಿಸಲಾಗಲೀ, ಅವಳ ಪ್ರಶ್ನೆಗೆ ಉತ್ತರ ನೀಡಲಾಗಲೀ ಅವಳನ್ನು ಹುಡುಕುತ್ತಿಲ್ಲ ಎಂದು ಅವನಿಗೂ ಗೊತ್ತು. 
"ಥತ್ ತೇರಿ" ಅತಿಯಾಯಿತಿದು ಎಂದುಕೊಂಡು ಮೊಬೈಲ್ ಮೇಜಿನ ಮೇಲೆ ಕೈಗೆಟುಕುವುದಕ್ಕಿಂತಲೂ ದೂರವಿರಿಸಿ ಫೈಲಿನ ಒಳಗೆ ಮುಖ ಸೇರಿಸಿಕೊಂಡ ಕ್ಷಾತ್ರ. ಎರಡು ನಿಮಿಷ ಭಾರವಾಗಿ ಕಳೆದಂತೆ ಅನ್ನಿಸಿತು ಆತನಿಗೆ. ಅವಳೆಲ್ಲಿರಬಹುದು? ಪೇಟೆಯಲ್ಲೇ ಇದ್ದರೆ ವ್ಯಾಪ್ತಿ ಪ್ರದೇಶದ ಹೊರಗೆ ಏಕೆ? ಕೊಲೆ ಕಂಡು ಹೆದರಿ ಮನೆಗೆ ಏನಾದರೂ ಹೋದಳೆ? ಕೈ ಯಾಂತ್ರಿಕವಾಗಿ ಮತ್ತೆ ರೀಡಯಲ್ ಮಾಡಿತು. 
"ನೀವು ಕರೆ ಮಾಡಿದ ಚಂದಾದಾರರು ಸ್ವಿಚ್ ಆಫ್ ಮಾಡಿದ್ದಾರೆ" ಎಂದಿತು ವೈಸ್ ಮೆಸೆಂಜರ್. 
ಎರಡು ನಿಮಿಷದ ಹಿಂದೆ ವ್ಯಾಪ್ತಿ ಪ್ರದೇಶದ ಹೊರಗೆ ಎಂದ ಮೊಬೈಲ್ ಈಗ ಸ್ವಿಚ್ ಆಫ್ ಎನ್ನುತ್ತಿದೆ, ಮತ್ತೂ ಕಿರಿಕಿರಿ ಎನ್ನಿಸಿತು ಅವನಿಗೆ. ಆದರೆ ಏನೂ ಮಾಡುವಂತಿಲ್ಲ ಆತ. ಪೋಲಿಸ್ ಕೇಸ್ ಆದರೆ ಯಾರನ್ನಾದರೂ ಒಳಹಾಕಿ ಎರಡು ಗೂಸಾ ಕೊಟ್ಟು ಸಿಟ್ಟು ತಣಿಸಿಕೊಳ್ಳಬಹುದು. ಇದು ಬೇರೆಯೇ ತರಹದ ಕೇಸು. 
ಮರುಗಳಿಗೆ ಆತನ ಯೋಚನೆ ಬೇರೆ ಕಡೆ ತಿರುಗಿತು. ಆಕೆ ಕೊಲೆಗಾರನನ್ನು ನೋಡಿದ್ದಳಲ್ಲ, ಅವನೇನಾದರೂ?? ಹುಚ್ಚನಲ್ಲ ಎನ್ನುತ್ತಿದ್ದಳಲ್ಲ. ಕೊಲೆಗಾರನ ಮೇಲೆ ಮೊದಲೇ ಸಂಶಯವೇನಾದರೂ ಬಂದಿತ್ತಾ ಅವಳಿಗೆ. ಅದು ಕೊಲೆಗಾರನಿಗೂ ತಿಳಿದು ಅವಳಿಗೇನಾದರೂ ಮಾಡಿದನಾ!?
ತಟಕ್ಕನೆ ಫೋನೆತ್ತಿ ರೀಡಯಲ್ ಒತ್ತಿದ. ಈ ಬಾರಿ ಮಾನಸಿಕ ಆಸ್ಪತ್ರೆಗೆ. ಆ ಕಡೆಯಿಂದ ಈಗ ಬೇರೊಂದು ಧ್ವನಿ. 
"ದೀನ್ ದಯಾಳು ಮಾನಸಿಕ ಆಸ್ಪತ್ರೆ" ಎಂದಿತು. "ನಾನು ಇನಸ್ಪೆಕ್ಟರ್ ಕ್ಷಾತ್ರ ಮಾತನಾಡ್ತಾ ಇದೀನಿ. ಡಾಕ್ಟರ್ ಸ್ವಯಂವರಾ ರಜೆಯನ್ನೇನಾದರೂ ಹಾಕಿದ್ದಾರಾ?" ಕೇಳಿದ ಆತುರದಿಂದ. 
ಆತನ ಧ್ವನಿಯಲ್ಲಿ ಆಗಲೇ ಚಡಪಡಿಕೆ ಆರಂಭವಾಗಿತ್ತು. "ಗೊತ್ತಿಲ್ಲ" ಎಂದಿತು ಆಕಡೆಯ ಧ್ವನಿ.
"ಗೊತ್ತಿಲ್ಲ ಎಂದರೆ ಏನ್ರಿ? ರಿಜಿಸ್ಟರ್ ತೆಗೆದು ನೋಡಿ ಹೇಳ್ರಿ" ಸಿಡುಕಿದ ಕ್ಷಾತ್ರ. ಅಷ್ಟಾದರೂ ಆಕಡೆಯ ಧ್ವನಿಯಲ್ಲಿ ಅಂಜಿಕೆಯಾಗಲಿ, ತರಾತುರಿಯಾಗಲಿ ಕಾಣಲಿಲ್ಲ. "ಗೊತ್ತಿಲ್ಲಎಂದರೆ ಗೊತ್ತಿಲ್ಲ ಅಷ್ಟೇ" ಹರಿತವಾಗಿ ಬಂದಿತು ಉತ್ತರ. 
"ಹೋಗಲಿ, ಸ್ವಯಂವರಾ ಅವರ ಅಡ್ರೆಸ್ ಹೇಳಿ" ಎಂದ ಕ್ಷಾತ್ರ.
"ಅದೂ ಗೊತ್ತಿಲ್ಲ" ಎಂದಿತು ಆಕಡೆಯ ದನಿ. ಕನಲಿ ಕೆಂಡವಾದ ಕ್ಷಾತ್ರ. "ಮಗನೇ, ಹೇಳದಿದ್ದರೆ ಈಗಲೇ ಬಂದು ನಿನ್ನನ್ನು ಹಿಡಿದುತಂದು ಏರೋಪ್ಲೇನ್ ಹತ್ತಿಸುತ್ತೇನೆ" ಎಷ್ಟೇ ಶಾಂತವಾಗಿರಬೇಕೆಂದುಕೊಂಡರೂ ಆಗದೇ ಚೀರಿಕೊಂಡ ಕ್ಷಾತ್ರ. 
ಆ ಕಡೆಯಿಂದ ದೊಡ್ಡದಾಗಿ ನಗು ಕೇಳಿತು. "ಯಾರನ್ರೀ ಏರೋಪ್ಲೇನ್ ಹತ್ತಿಸೋದು? ನಾನು ಬಹಳ ಸಲ ಹತ್ತಿಯೇ ಇಲ್ಲಿ ಬಂದಿದ್ದೇನೆ. ನೋ ಪಾಸ್ ಪೋರ್ಟ್, ನೋ ವೀಸಾ" ಮತ್ತೆ ನಕ್ಕಿತು ಆ ಕಡೆಯ ಧ್ವನಿ. ಒಳ್ಳೆ ಹುಚ್ಚರ ಸಹವಾಸ ಎಂದು ಫೋನ್ ಕುಕ್ಕಿದ ಕ್ಷಾತ್ರ. 
ಅತ್ತಕಡೆಯಿಂದ ಮಾತನಾಡಿದ್ದು ಹುಚ್ಚನೇ ಎಂದು ಅರಿವಾಗಲಿಲ್ಲ ಸಿಟ್ಟಿನಲ್ಲಿ. ಮತ್ತೆ ಸ್ವಯಂವರಾಳ ನಂಬರ್ ಡಯಲ್ ಮಾಡಿದ. ಮತ್ತದೇ ವಾಯ್ಸ್ ಕಾಲ್. 
ತಡ ಮಾಡಲಿಲ್ಲ ಕ್ಷಾತ್ರ. ಆತನ ಪೋಲಿಸ್ ಮೆದುಳು ರಂಗಕ್ಕೆ ಇಳಿದು ಬಿಟ್ಟಿತು. ಕ್ರೈಂ ಬ್ರಾಂಚ್ ಆಪರೇಟರ್ ಗೆ ಫೋನ್ ಮಾಡಿ ಸ್ವಯಂವರಾಳ ನಂಬರ್ ಹೇಳಿ "ಈ ನಂಬರ್ ಟ್ರೇಸ್ ಮಾಡಿ ಈಗಲೇ ತಿಳಿಸಿ. Its Urjent" ಎಂದ ಕ್ಷಾತ್ರ. 
"ಐದು ನಿಮಿಷ ಕೊಡಿ" ಎಂದ ಆಪರೇಟರ್. ಐದು ನಿಮಿಷ ಕೆಂಡದ ಮೇಲೆ ಕುಳಿತಂತೆ ಇದ್ದ ಕ್ಷಾತ್ರ. ಫೋನ್ ಒಂದು ರಿಂಗ್ ಆಗುತ್ತಲೇ ಎತ್ತಿ "ಹೇಳಿ" ಎಂದ.
"ಸರ್, ನಂಬರ್ ಎರಡು ದಿನದ ಹಿಂದೆ ಸ್ವಿಚ್ ಆಫ್ ಆಗಿದೆ. ಅದಕ್ಕೂ ಎರಡು ದಿನ ಮೊದಲು ಯಾವ ಏರಿಯಾದಲ್ಲಿತ್ತೋ ಅಲ್ಲಿಯೇ ಸ್ವಿಚ್ ಆಫ್ ಆಗಿದೆ." 
"ಏರಿಯಾ ಹೇಳಿ" ಎಂದು ಬರೆದುಕೊಂಡ ಕ್ಷಾತ್ರ ಆತನಿಗೊಂದು ಥ್ಯಾಂಕ್ಸ್ ಹೇಳದೆ ಫೋನ್ ಇಟ್ಟು ಹೊರಗೋಡಿ ಜೀಪ್ ಏರಿದ. ಜೀಪಿನ ವಿಂಡೋ ತೆರೆದೇ ಇತ್ತು. ಸ್ವಯಂವರಾ ಹೇಳಿದ ಮೇಲೆ ಅಲ್ಲವೇ ತಾನು ಹೀಗೆ ಗಾಜು ಇಳಿಸಿ, ಗಾಳಿಗೆ ತೆರೆದುಕೊಂಡು ಜೀಪ್ ಓಡಿಸುತ್ತಿರುವುದು. ನಾಲ್ಕೇ ದಿನದಲ್ಲಿ ಎಷ್ಟು ಬದಲಾವಣೆ!! ಅದೇನೋ ಉತ್ಸಾಹ ತುಂಬಿದೆಯೋ ನನ್ನಲ್ಲಿ!! ಸ್ವಯಂವರಾಳೇ ಇದರ ಹಿಂದಿದ್ದಾಳೆ. ಆದರೆ ಈಗ ಅವಳು ಕ್ಷೇಮವಾಗಿದ್ದಾಳಾ? ನೆನಪು ಬರುತ್ತಲೇ ಆಕ್ಸಿಲೇಟರ್ ಮೇಲಿನ ಕಾಲು ಇನ್ನೂ ಅದುಮಿಕೊಂಡಿತು.
ಮೇನ್ ರೋಡಿನಿಂದ ಹೊರಬಿದ್ದ ಜಿಪು ಒಂದು ಗಲ್ಲಿಯೆಡೆಗೆ ತಿರುಗಿತು. ಎಕ್ಸ್ಯಾಕ್ಟ್ ಅಲ್ಲದಿದ್ದರೂ ಒಂದೈವತ್ತು ಮೀಟರ್ ಆಸುಪಾಸಿನಲ್ಲಿ ಸಿಗುತ್ತದೆ ಲೊಕೇಶನ್. ಅಷ್ಟು ಸಾಕು ಪೋಲಿಸರಿಗೆ. ಯೋಚನೆ ಮಾಡುತ್ತಲೇ ಮತ್ತೊಂದು ಸಣ್ಣ ರೋಡಿಗೆ ಇಳಿಯಿತು ಜೀಪ್. ಒಳ್ಳೆಯ ಏರಿಯಾದಂತೆ ಇತ್ತು. ಮಾನಸಿಕ ಆಸ್ಪತ್ರೆಯಿಂದ ಕೇವಲ ನಾಲ್ಕು ಕಿಲೋಮೀಟರ್ ದೂರವಷ್ಟೆ. ಹಾಗಾದರೆ ಅವಳ ಮನೆ ಇಲ್ಲಿಯೇ ಇರಬಹುದು. ರಜೆ ಹಾಕಿ ಯಾರ ಸಹವಾಸ ಬೇಡವೆಂದು ಮನೆಯಲ್ಲಿಯೇ ಕುಳಿತಿರಬಹುದೇ? 
ಅರ್ಥವಿಲ್ಲದೆ ಸುಮ್ಮನೇ ಭಯಪಟ್ಟೆನೆನೋ ಎನ್ನಿಸಿತು ಒಮ್ಮೆ. ಆದರೂ ಇಲ್ಲಿಯವರೆಗೂ ಬಂದು ಸುಮ್ಮನೆ ಹೋಗುವುದೇಕೆ? ನೋಡಿಕೊಂಡೇ ಹೋಗೋಣ ಎಂದು ಯಾವುದಾದರೂ ಮನೆಯೆದುರು ಸ್ವಯಂವರಾ ಎಂದು ಬರೆದಿದೆಯೇ ಎಂದು ರಸ್ತೆಯ ಎರಡೂ ಕಡೆಯ ಮನೆಯ ಬೋರ್ಡ್ ಗಳನ್ನು ಗಮನಿಸುತ್ತ ನಿಧಾನ ಸಾಗತೊಡಗಿದ ಕ್ಷಾತ್ರ.
ಅವಳಿಗೇನು ಆಗದೇ, ತನ್ನ ಅನುಮಾನ ಸುಳ್ಳಾಗಿ, ಹೀಗೆ ಟೆನ್ಶನ್ ನಲ್ಲಿ ನನ್ನ ನೋಡಿದರೆ ಆಕೆ ಬಿದ್ದು ಬಿದ್ದು ನಗುವುದಿಲ್ಲವೇ? ಎಂದುಕೊಂಡ. ನಕ್ಕರೆ ನಗಲಿ. ಸ್ವಯಂವರಾ ತಾನೇ!! ಅವಳ ನಗು ನೋಡುವುದೇ ಚಂದ ಎಂದು ಮುದಗೊಂಡಿತು ಮನಸು.
ಆತನ ಬೋರ್ಡ್ ಹುಡುಕುವ ಕಾರ್ಯಕ್ರಮ ಫಲ ಕೊಡದ ಕಾರಣ ಯಾರನ್ನಾದರೂ ಕೇಳೋಣ ಎಂದುಕೊಂಡು ರೋಡಿನ ಪಕ್ಕ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಹತ್ತಿರ ಜೀಪ್ ನಿಲ್ಲಿಸಿದ. ಪೋಲಿಸ್ ಜೀಪ್ ತನ್ನ ಪಕ್ಕ ನಿಂತಿದ್ದೇ ಸ್ವಲ್ಪ ಗಾಬರಿಗೊಂಡ ಆಗುಂತಕ. ಆದರೆ ಕ್ಷಾತ್ರನಿಗೆ ಇವೆಲ್ಲ ಸಾಮಾನ್ಯ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ "ಡಾಕ್ಟರ್ ಸ್ವಯಂವರಾ, ಮಾನಸಿಕ ರೋಗದ ಪೇಶಂಟ್ ನೋಡುವವರ ಮನೆ ಎಲ್ಲಿ?" ಎಂದು ಕೇಳಿದ. ಎದುರಿನ ವ್ಯಕ್ತಿ ಸ್ವಲ್ಪ ಯೋಚಿಸಿ, ತಲೆ ತರಿಸಿಕೊಂಡು "ಪಕ್ಕದ ರಸ್ತೆಯಲ್ಲಿ ಇದೆ ಹೋಗಿ" ಎಂದ.
ಜೀಪ್ ಅನ್ನು ಪಕ್ಕದ ರಸ್ತೆಗೆ ತಿರುಗಿಸಿದ ಕ್ಷಾತ್ರ. ಜಾಸ್ತಿ ಹುಡುಕುವ ಅವಶ್ಯಕತೆಯೇ ಇಲದೆ ಸಿಕ್ಕಿತು ಮನೆ. ಜೀಪ್ ಇಳಿದು ಗೇಟ್ ಬಳಿ ಬಂದು ಬೆಲ್ ಮಾಡಿದ. ಯಾವುದೇ ರೆಸ್ಪಾನ್ಸ್ ಬರದೇ ಒಂದು ನಿಮಿಷ ಕಳೆಯಿತು. 
ಎರಡಂತಸ್ತಿನ ಮನೆ. ಮನೆಯೆದುರು ಹೂವಿನ ಗಿಡಗಳು, ಅಲಂಕಾರಿಕ ಬಳ್ಳಿಗಳು. ಎರಡು ದಿನದಿಂದ ನೀರಿಲ್ಲದಂತೆ ಕಂಡರೂ ಸ್ವಯಂವರಾಳ ಅಭಿರುಚಿಗೆ ಸಾಕ್ಷಿಯಾಗಿದ್ದವು. ಗೇಟ್ ತೆಗೆದು ಒಳನಡೆದ. ಬಾಡಿಗೆಗೆ ಏನಾದರೂ ಇರಬಹುದಾ? ಅಥವಾ ಇವಳದೇ ಮನೆಯಾ? ಯೋಚಿಸುತ್ತಲೇ ಡೋರ್ ಬೆಲ್ ಒತ್ತಿದ. ಮೂವತ್ತು ಸೆಕೆಂಡ್ ಭಾರವಾಗಿ ಕಳೆಯಿತು. ಮತ್ತೆರಡು ಬಾರಿ ಒತ್ತಿದ. ಯಾವುದೇ ಉತ್ತರವಿಲ್ಲ. 
ಮೇಲುಗಡೆ ಹೋಗಲು ಯಾವುದಾದರೂ ದಾರಿಯಿದೆಯಾ ಎಂದು ನೋಡಿದ. ಹೊರಗಡೆಯಿಂದ ಸ್ಟೆಪ್ಸ್ ಇರಲಿಲ್ಲ. ಬಾಗಿಲು ಒಳಗಿನಿಂದ ಲಾಕ್ ಆಗಿದೆಯೇ ಅಥವಾ ಹೊರಗಿನಿಂದ ಲಾಕ್ ಮಾಡಿ ಹೊರಗೆ ಹೋಗಿದ್ದಾಳೆಯೇ? ಎಂಬುದು ತಿಳಿಯಲಿಲ್ಲ. ಅಕ್ಕ ಪಕ್ಕ ಕೇಳೋಣ ಎಂದರೆ ಈ ಮನೆ ಉಳಿದ ಮನೆಗಳಿಗಿಂತ ಸ್ವಲ್ಪ ದೂರವೇ ಇತ್ತು. 
ತಿರುಗಿ ಹೋಗೋಣವಾ ಎಂದುಕೊಂಡ. ಆದರೆ ಎರಡು ದಿನದಿಂದ ಮೊಬೈಲ್ ಸ್ವಿಚ್ ಆಫ್ ಇದೆ. ಮನೆಯಿಂದ ಹೊರಗೆ ಹೋದರೆ ಮೊಬೈಲ್ ಇಲ್ಲೇ ಯಾಕೆ ಬಿಟ್ಟು ಹೋಗುತ್ತಾಳೆ? ಒಳಗೇ ಇದ್ದರೆ ಬಾಗಿಲು ಯಾಕೆ ತೆರೆಯುತ್ತಿಲ್ಲ? "ಡೇಂಜರ್" ಎಂದಿತು ಆತನ ಪೋಲಿಸ್ ಮನಸ್ಸು. ಮತ್ತೆ ತಡ ಮಾಡಲಿಲ್ಲ, ಬಾಗಿಲಿಗೆ ಭುಜದಿಂದ ದಡ್ ಎಂದು ಗುದ್ದಿದ, ಚುರ್ ಎಂದಿತು ಭುಜದ ಮೂಳೆಗಳು. ಗಟ್ಟಿಯಾದ ಬಾಗಿಲು ಇದರಿಂದ ಪ್ರಯೋಜನವಿಲ್ಲ ಎಂದು ತಿಳಿಯಿತು.
ಮನೆಯ ಹಿಂಬದಿಗೆ ಹೋಗಿ ಸುತ್ತಲೂ ನೋಡಿದ. ನೀರು ಹೋಗುವ ಡ್ರೈನೇಜ್ ಪೈಪ್ ಕಂಡಿತು. ಪೈಪ್ ಹಿಡಿದು ಸರ ಸರ ಮೇಲೆ ಹೋಗಿ ಫ್ಲೋರ್ ಸೇರಿಕೊಂಡ. 
ತೂಗು ಜೋಕಾಲಿಯೊಂದು ಗಾಳಿಗೆ ತಲೆ ಹಾಕುತ್ತಿತ್ತು. ಅಲ್ಲಿದ್ದ ಬಾಗಿಲು ತನ್ನ ಭುಜಕ್ಕೆ ಸವಾಲಾಗುವಂತೆ ಕಂಡರೂ ಎರಡೇ ಗುದ್ದಿಗೆ ತೆರೆದುಕೊಂಡಿತು. 
ಅವಳೇನಾದರೂ ಮನೆಯಲ್ಲಿ ಇಲ್ಲದಿದ್ದರೆ. ಕೈ, ಮೈ ಬೆವರು ತೆರೆದುಕೊಂಡಿತು. ಇಲ್ಲಿಯವರೆಗೆ ಬಂದು ಹಿಂದೆ ಸರಿಯುವಂತಿಲ್ಲ. ಒಳ ನಡೆದು "ಸ್ವಯಂವರಾ" ಎಂದು ಕೂಗಿದ. ಯಾವುದೇ ಉತ್ತರವಿಲ್ಲ. ಒಂದೊಂದೇ ರೂಮ್ ನೋಡುತ್ತ ಕೆಳಗಿಳಿದ. ಮನೆ ತುಂಬಾ ಓರಣವಾಗಿತ್ತು. ಯಾವುದೇ ಕ್ರೈಮ್ ನಡೆದ ಚಿಹ್ನೆಗಳು ಕಾಣದಿದ್ದರಿಂದ ಸ್ವಲ್ಪ ಸುಧಾರಿಸಿಕೊಂಡಿತು ಆತನ ಮನಸ್ಸು. ಕೆಳಗೆ ಬಂದವ ಎದುರೇ ಕಾಣುತ್ತಿರುವ ರೂಮಿನ ಬಾಗಿಲು ದೂಡಿದ. ಒಮ್ಮೆಲೇ ಅವಾಕ್ಕಾಗಿ ನಿಂತ. ಬಾಗಿಲು ತೆರೆಯುತ್ತಲೇ ಘಾಟು ವಾಸನೆಯೊಂದು ಮೂಗಿಗೆ ಅಡರಿತು. ತಿಳಿ ಬೆಳಕು ಮಾತ್ರ ರೂಮಿನೊಳಗೆ ಪ್ರವೇಶಿಸುವಂತಿತ್ತು. 
ಎದುರಿದ್ದ ಮಂಚದ ಮೇಲೆ ಸ್ವಯಂವರಾ ಎಚ್ಚರವಿಲ್ಲದೆ ಬಿದ್ದಿದ್ದಾಳೆ. ಹಾಸಿಗೆ ವಸ್ತ್ರಗಳು ಅಸ್ತವ್ಯಸ್ತವಾಗಿದೆ. "ಸ್ವಯಂವರಾ!!" ಕೂಗುತ್ತಲೇ ಮಂಚದ ಹತ್ತಿರ ಓಡಿದ ಕ್ಷಾತ್ರ. ಅವಳಿಂದ ಯಾವ ಉತ್ತರವೂ ಬರಲಿಲ್ಲ. 
ಏನಾಗಿದೆ ಎಂದು ತಿಳಿಯಲಿಲ್ಲ ಆತನಿಗೆ, ಏನು ಮಾಡಬೇಕು ಎಂದೂ ತಿಳಿಯಲಿಲ್ಲ ಒಮ್ಮೆಲೇ. ಅವಳ ಬಟ್ಟೆ ಸರಿಪಡಿಸಿ ನಾಡಿ ಹಿಡಿದು ನೋಡಿದ. ಕ್ಷೀಣವಾಗಿ ಹೊಡೆದುಕೊಳ್ಳುತ್ತಿತ್ತು. ಏನು ನಡೆದಿದೆ ಎಂಬುದು ಆಮೇಲೆ. ಮೊದಲು ಅವಳ ಜೀವ ಉಳಿಸುವುದೇ ಮುಖ್ಯ ಎಂದು ತನ್ನ ಬಲವಾದ ಹಸ್ತಗಳಿಂದ ಅವಳನ್ನು ಅಲಾಕ್ಕಾಗಿ ಎತ್ತಿಕೊಂಡು ಹೊರಗೋಡಿದ. ಸ್ವಯಂವರಾಳ ಪರಿಸ್ಥಿತಿ ನೋಡಿ ಅವನ ಪೋಲಿಸ್ ಕಣ್ಣುಗಳಿಂದ ಕೂಡ ನೀರು ಚಿಮ್ಮಿತು.
                                        ...............................ಮುಂದುವರೆಯುತ್ತದೆ..............................
                                         https://www.facebook.com/katarnakkadamabri/

No comments:

Post a Comment