Saturday, July 23, 2016

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 24

                                          ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 24

ಕೋರ್ಟಿನ ಹಾಲಿನಲ್ಲಿ ಕಿಕ್ಕಿರಿದು ಜನ ತುಂಬಿದ್ದರು. ಜಡ್ಜ್ ಬಂದವರು ಒಂದರ ಹಿಂದೆ ಒಂದರಂತೆ ಮೂರು ನಾಲ್ಕು ಕೇಸ್ ಗಳನ್ನು ಸಾಗಹಾಕುತ್ತಾರೆ. ಸವಾಲು ಹಾಗೂ ಪಾಠಿ ಸವಾಲುಗಳು, ಅದನ್ನು ನಡೆಸುವ ಲಾಯರ್ ಗಳು ಎಷ್ಟು ಚಾಣಾಕ್ಷರು ಎನ್ನುವುದರ ಮೇಲೆ, ವಾದ ವಿವಾದ ಎಷ್ಟು ಸಮಯ ನಡೆಯುತ್ತದೆ ಎಂಬುದು ನಿರ್ಧಾರವಾಗುತ್ತದೆ. ಎರಡು ಮೂರು ಕೇಸುಗಳಿಗೆ ಸಂಬಂಧಿಸಿದ ಎಲ್ಲ ಜನರು ಹಾಲಿನಲ್ಲಿ ಬಂದು ಸೇರಿದ್ದರಿಂದ ಸ್ವಲ್ಪ ಜಾಸ್ತಿಯೇ ಎನ್ನುವಷ್ಟು ಗಿಜಿಗಿಜಿ ಇತ್ತು.
ಮುಂದಿನ ಬೆಂಚಿನಲ್ಲಿ ಪ್ರತಾಪ್ ಕುಳಿತಿದ್ದ. ಆತನ ಎಡಪಕ್ಕ ಗೋಡೆಯ ಬಳಿ ಇಬ್ಬರು ಕಾನಸ್ಟೇಬಲ್ ಶಾಸ್ತ್ರೀಯ ಕೈಗೆ ಕೋಳ ತೊಡಿಸಿ ಹಿಡಿದು ನಿಂತಿದ್ದರು. ಪೊಲೀಸರ ಕಡೆಯಿಂದ ವಾದ ಮಾಡಲು ಅದಾಗಲೇ ಸರ್ಕಾರದ ಕಡೆಯಿಂದ ಒಬ್ಬ ಲಾಯರನ್ನೂ ಗುರುತು ಮಾಡಿದ್ದ ಪ್ರತಾಪ್. ಆತ ಅಂತಿಂಥ ಲಾಯರ್ ಅಲ್ಲ. ಜಾನಕಿ ರಾಮ್ ಪ್ರಸಾದ್. ಆತ ವಾದ ಮಾಡಲು ಪ್ರಾರಂಭಿಸಿದರೆ ಪ್ರತಿವಾದಿಗಳು ಸುಮ್ಮನೆ ನಿಂತು ಬಿಡುತ್ತಾರೆ. ನ್ಯಾಯಾಂಗವನ್ನು ಆತ ಅರೆದು ಕುಡಿದಿದ್ದಾನೆ. ಕೇವಲ ಅರೆದು ಕುಡಿದಿದ್ದಲ್ಲ, ಕುಡಿದು ಜೀರ್ಣಿಸಿಕೊಂಡಿದ್ದಾನೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಗಳಲ್ಲಿ ವಾದಿಸಿದ ಅನುಭವವಿದೆ. ಯಾವುದೇ ಕಾರಣಕ್ಕೂ ಶಾಸ್ತ್ರಿ ತಪ್ಪಿಸಿಕೊಳ್ಳಬಾರದು. ಪ್ರತಾಪ್ ಚಾನ್ಸ್ ತೆಗೆದುಕೊಳ್ಳುವಂತಿಲ್ಲ ಇಂಥ ಸಂದರ್ಭದಲ್ಲಿ. ಹಾಗಾಗಿ ಜಾನಕಿರಾಮ್ ಗೆ ಒಪ್ಪಿಸಿದ್ದ. ಆತ ಕೇಸ್ ನಡೆಸಲು ಒಪ್ಪಿಕೊಂಡರೆ ಅರ್ಧ ಕೇಸ್ ಗೆದ್ದಂತೆಯೇ ಲೆಕ್ಕ. ಇನ್ನು ಜಡ್ಜ್ ಬಂದಿರದ ಕಾರಣ ಗುಸುಗುಸು ನಡೆದೇ ಇತ್ತು. ಶಾಸ್ತ್ರಿ ನಿಂತಲ್ಲಿಂದಲೇ ಸುತ್ತಲೂ ನೋಡಿದ. ಸಾಲಾಗಿ ಹಾಕಲಾಗಿದ್ದ ಬೆಂಚಿನ ಮೇಲೆ ಕುಳಿತ ಜನರು, ತನ್ನ ಪಕ್ಕದಲ್ಲಿ ನಿಂತಿದ್ದ ಮತ್ತೊಂದಿಷ್ಟು ಆರೋಪಿಗಳು, ಅವರನ್ನು ಹಿಡಿದು ನಿಂತ ಖಾಕಿಗಳು, ಮಧ್ಯದಲ್ಲಿ ಖುರ್ಚಿಯ ಮೇಲೆ ಕುಳಿತು ಲಾ ಬುಕ್ಕಿನ ಯಾವ್ಯಾವುದೋ ಪುಟಗಳಲ್ಲಿ ಮುಖ ಹುದುಗಿಸಿಕೊಂಡಿರುವ ಲಾಯರ್ ಗಳು..
ಶಾಸ್ತ್ರಿ ಆಲೋಚಿಸುತ್ತಿದ್ದ. ತನಗೆ ಈಗ ಸರ್ಕಾರಿ ಲಾಯರ್ ಗತಿ. ಆರೋಪಿಗೆ ದುಡ್ಡು ಕೊಡುವ ಶಕ್ತಿ ಇಲ್ಲದಿರುವಾಗ ಅಥವಾ ಲಾಯರ್ ಗಳನ್ನು ಯೋಜಿಸಿಕೊಳ್ಳಲಾಗದ ಸಂದರ್ಭಗಳಲ್ಲಿ ಸರ್ಕಾರಿ ಲಾಯರ್ ಗಳೇ ಪಾಠಿ ಸವಾಲು ಮಾಡಿಸುತ್ತಾರೆ. ಬಹುತೇಕ ಸಮಯದಲ್ಲಿ ಹೀಗಾದಾಗ ಇಬ್ಬರು ಲಾಯರ್ ಗಳು ಮಾತನಾಡಿಕೊಂಡು ಆದಷ್ಟು ಬೇಗ ಕೇಸ್ ಮುಗಿಸಲು ನೋಡುತ್ತಾರೆ. ಯಾಕೆಂದರೆ ಅವರಿಗೆ ಸಿಗುವುದು ಏನೂ ಇಲ್ಲ. ದುಡ್ಡಿದ್ದರೆ ಕೇಸ್ ನಡೆಯುತ್ತಲೇ ಇರುತ್ತದೆ. ವಾರ, ತಿಂಗಳು, ವರ್ಷ.... ವಾದಿಸುತ್ತಿದ್ದ ಲಾಯರ್, ಸಾಕ್ಷಿ ಹೇಳುವ ಸಾಕ್ಷಿದಾರ ಸತ್ತು ಬಿಡುತ್ತಾರೆ ಆದರೂ ಪ್ರಕರಣಗಳು ದಡ ಸೇರುವುದಿಲ್ಲ. ಸಂಜೆ ಬರುವ ಧಾರಾವಾಹಿಗಳಿಗೂ, ಹಿಂದೂಸ್ಥಾನದ ನ್ಯಾಯಾಂಗ ವ್ಯವಸ್ಥೆಗೂ ಬಹುತೇಕ ಸಾಮ್ಯತೆಯಿದೆ ಎಂದರೂ ತಪ್ಪಿಲ್ಲ. ಎರಡೂ ಮುಗಿಯುವುದಿಲ್ಲ. ಕೈಯಲ್ಲಿ ತಕ್ಕಡಿ, ಕಣ್ಣಿಗೆ ಬಟ್ಟೆ. ನ್ಯಾಯದೇವತೆಯ ಕಣ್ಣಿಗೆ ಅದೇಕೆ ಕಪ್ಪು ಬಟ್ಟೆ??
ಕಪ್ಪು ಅಂಧಕಾರದ ಸಂಕೇತ. ಕಪ್ಪು ಬಟ್ಟೆಯಲ್ಲಿರುವ ಲಾಯರ್ ಗಳು, ಜಡ್ಜ್. ಕಪ್ಪು ಬಟ್ಟೆ ಕಣ್ಣಿಗೆ ಕಟ್ಟಿಕೊಂಡಿರುವ ನ್ಯಾಯ ದೇವತೆ..!! ಕಪ್ಪು ಬಟ್ಟೆ, ಕಣ್ಣಿಗೆ ಕಟ್ಟಿರುವ ಬಟ್ಟೆಯ ಬಣ್ಣವೂ ಅದೇ..
ನ್ಯಾಯಾಂಗವನ್ನು ಪ್ರತಿನಿಧಿಸುವ ಜನರ ಬಟ್ಟೆಗೂ, ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಗಾಡಾಂಧಕಾರಕ್ಕೂ ಮತ್ತೆ ಅದೇ ಸಾಮ್ಯತೆ.
ದುಡ್ಡಿದ್ದವರಿಗೊಂದು ರೀತಿಯ ನ್ಯಾಯ, ದುಡ್ಡಿಲ್ಲದವರಿಗೆ ಇನ್ನೊಂದು ರೀತಿಯ ನ್ಯಾಯ. ತಲೆ ಸಿಡಿಯುವಂತಾಯಿತು ಶಾಸ್ತ್ರಿಗೆ.
ಹಿಂದಿನ ದಿನ ರಾತ್ರಿಯೂ ನಿದ್ದೆ ಮಾಡಿರಲಿಲ್ಲ ಶಾಸ್ತ್ರಿ. ಇಂತಹದೇ ಹತ್ತು ಹಲವು ಯೋಚನೆಗಳು ಕಿತ್ತು ತಿಂದಿವೆ. ಒಬ್ಬ ವ್ಯಕ್ತಿ ಅಸಹಾಯಕ ಪರಿಸ್ಥಿತಿಯಲ್ಲಿ ಸಿಲುಕಿದರೆ ಅಷ್ಟೇ.. ಪರಿಸ್ಥಿತಿ ಮತ್ತು ಯೋಚನೆ ಎರಡೂ ಕಾಡುತ್ತವೆ. ಏನೂ ಯೋಚನೆ ಮಾಡದೆ ಇರಬೇಕೆಂದರೆ ಅದು ಸಾಧ್ಯವಿಲ್ಲ.
ಅಷ್ಟರಲ್ಲಿ ಜಡ್ಜ್ ಒಳಗೆ ಬಂದರು. ಕೋರ್ಟ್ ಹಾಲಿನಲ್ಲಿ ಒಮ್ಮೆ ನಿಶ್ಯಬ್ಧ. ಎಲ್ಲರೂ ಎದ್ದು ನಿಂತು ಜಡ್ಜ್ ಹೋಗಿ ಕುಳಿತುಕೊಳ್ಳುತ್ತಿದ್ದಂತೆ ಮತ್ತೆ ಕುಳಿತುಕೊಂಡರು. ಜನರಿಂದ ತುಂಬಿದ ಕೊಠಡಿಯನ್ನು ಒಮ್ಮೆ ಸುತ್ತಲೂ ನೋಡಿ "ಹಮ್.. ಶುರು ಮಾಡಿ.." ಎಂದರು.
ಕೇಸಿನಲ್ಲಿ ನಡೆಯುವ ಮಾತುಕತೆಗಳನ್ನು ಟೈಪ್ ಮಾಡುವ ಹಾಗೂ ಸಿಕ್ಕ ಸಾಕ್ಷ್ಯಗಳನ್ನು ಜಡ್ಜ್ ಗೆ ಕೊಡಲು ಕುಳಿತ ವ್ಯಕ್ತಿ ಮೊದಲ ಕೇಸಿನ ಆರೋಪಿಯ ಹೆಸರು ಕೂಗಿದ.
ಮುಂದಿನ ಹೆಸರು ಶಾಸ್ತ್ರಿಯದೇ. ಪ್ರತಾಪನಿಗೆ ನಾನೇ ಸಹಾಯ ಮಾಡಿದ್ದೆ. ಆದರೆ ಪೊಲೀಸರು ಎಂದಿಗೂ ಪೊಲೀಸರೇ. ತೋರಿಸಿಬಿಟ್ಟ ಚಾಲಾಕಿತನ. ತಾನು ಕೊಲೆ ಮಾಡಿದ್ದೇನೆ ಎಂದು ನಂಬಿದ್ದಾನಾ?? ಅಥವಾ ಬೇರೇನಾದರೂ ಉದ್ಧೇಶವಿಟ್ಟುಕೊಂಡು ಹೀಗೆ ಮಾಡುತ್ತಿದ್ದಾನಾ?? ನನ್ನನ್ನು ಜೈಲಿಗೆ ಕಳುಹಿಸಿದರೆ ಈತನಿಗೆ ಏನು ಲಾಭ?? ಎದುರಿನಲ್ಲಿ ಪ್ರತಾಪ್ ಕುಳಿತು ಪ್ರಸಾದ್ ರನ್ನೇ ನೋಡುತ್ತಿದ್ದ. ಎಲ್ಲರೂ ಸೆಕ್ಷನ್ ಗಳನ್ನು ನೋಡುತ್ತಿದ್ದರೆ ಪ್ರಸಾದ್ ಸುಮ್ಮನೆ ಕುಳಿತಿದ್ದರು. ತಲೆ ಕೂದಲು ಆಗಲೇ ನೆರೆತಿದೆ. ಅಗಲ ಮುಖದ ಮೇಲೆ ಚೂಪನೆ ಮೂಗು, ಚುರುಕಾದ ಕಣ್ಣುಗಳು, ಮುಖದಲ್ಲಿ ತುಂಬಿರುವ ಆತ್ಮವಿಶ್ವಾಸ.. ಶಾಸ್ತ್ರಿಯ ಮನಸ್ಸು ಮತ್ತಷ್ಟು ಅದುರಿತು.
ತನಗೆ ಯಾವೊಬ್ಬನೂ ಸಹಾಯಕ್ಕೆ ನಿಲ್ಲಲಾರನೇನೋ?? ಸುಮ್ಮನೆ ಯಾರು ತಾನೇ ಬಾಯಿ ನೋವು ಮಾಡಿಕೊಳ್ಳುತ್ತಾರೆ??? ಕೊನೆಯಲ್ಲಿ ಗೆಲ್ಲುವುದು ಆತನೇ.. ಜಾನಕಿರಾಮ್ ಪ್ರಸಾದ್!! ಅದಕ್ಕೆ ಸ್ಪಷ್ಟ ಕುರುಹು ಎಂಬಂತೆ ಇನ್ನು ಯಾರು ಕೂಡ ಅವನ ಬಳಿ ಬಂದು ಏನಾಯಿತು?? ನಡೆದದ್ದೇನು?? ವಿಚಾರಿಸಿಕೊಂಡಿಲ್ಲ.
ತನ್ನ ವಾದ ತಾನೇ ನೋಡಿಕೊಳ್ಳಲಾ?? ಲಾ ಎಂದರೇನು?? ಮಕ್ಕಳಾಟವಾ?? ಸುಮ್ಮನೆ ವಾದ ಮಾಡುವುದಲ್ಲ. ಅದೆಷ್ಟು ಸೆಕ್ಷನ್ ಗಳು? ಅದೆಷ್ಟು ರೂಲ್ ಗಳು?? ತನ್ನನ್ನು ಯಾರೂ ಕೇಳುವುದಿಲ್ಲ. ಪ್ರಸಾದ್ ಗಲ್ಲು ಎಂದರೆ ಗಲ್ಲು.. ಜೀವಾವಧಿ ಎಂದರೆ ಅದೇ.. ಎಂದು ಯೋಚಿಸುತ್ತಿರುವ ಶಾಸ್ತ್ರಿಯ ಮನಸ್ಸಿನಲ್ಲಿ ಒಮ್ಮೆ ಭಯ ಹಾಗೂ ಹತಾಶೆಯ ಛಾಯೆ ಹಾದು ಹೋಯಿತು.
ಅಷ್ಟರಲ್ಲಿ ಮೊದಲನೇ ಕೇಸಿನ ವಾದ ವಿವಾದ ಮುಗಿದು ಮುಂದಿನ ವಿಚಾರಣೆಯ ದಿನಾಂಕ ನಿಗದಿಯಾಗಿತ್ತು.
ಶಾಸ್ತ್ರಿ..
ಶಾಸ್ತ್ರಿ..
ಶಾಸ್ತ್ರಿ..
ಮೂರು ಬಾರಿ ಈತನ ಹೆಸರನ್ನು ಕೂಗುತ್ತಲೇ ಪೇದೆಗಳಿಬ್ಬರೂ ಆತನನ್ನು ವಿಚಾರಣೆ ನಡೆಯುವ ಸ್ಥಳಕ್ಕೆ ಕರೆದೊಯ್ದು ನಿಲ್ಲಿಸಿದರು. ಕೈಗೆ ಹಾಕಿದ ಕೋಳ ಬಿಚ್ಚಲಾಯಿತು. ಒಮ್ಮೆ ಗಾಢವಾದ ಉಸಿರು ಚೆಲ್ಲಿ ಎದ್ದು ನಿಂತ ಜಾನಕಿರಾಮ್. ಜಡ್ಜ್ ಮುಖದಲ್ಲಿ ಕೂಡ ಒಂದು ಪರಿಚಿತ ನಗು ಹಾದು ಹೋಯಿತು.
ಶಾಸ್ತ್ರಿಯತ್ತ ತಿರುಗಿದ ಜಡ್ಜ್ "ನಿನ್ನ ಪರವಾಗಿ ವಾದ ಮಾಡಲು ಯಾರಿದ್ದಾರೆ??" ಎಂದು ಕೇಳಿದ.
"ನನಗೆ ಲಾಯರ್ ನಿಯೋಜಿಸಿಕೊಳ್ಳಲು ಸಮಯವನ್ನೇ ನೀಡಲಿಲ್ಲ." ಎಂದ ಶಾಸ್ತ್ರಿ
"ಹಾಗಾದರೆ ಯಾರಾದರೂ ಸರ್ಕಾರಿ ಲಾಯರ್ ನಿನ್ನ ಪರವಾಗಿ ವಾದಿಸುತ್ತಾರೆ ನಿನಗೆ ಒಪ್ಪಿಗೆ ಇದ್ದರೆ.. " ಎಂದು ಶಾಸ್ತ್ರಿಯ ಮುಖ ನೋಡಿದ ಜಡ್ಜ್.
ತಾನು ನಿಧಾನವಾಗಿ ಉಸುಬಿನೊಳಗೆ ಇಳಿಯುತ್ತಿದ್ದ ಅನುಭವವಾಗತೊಡಗಿತು ಶಾಸ್ತ್ರಿಗೆ. ಅವನಲ್ಲಿ ಇನ್ಯಾವುದೂ ದಾರಿ ಉಳಿಯದ್ದರಿಂದ ಸರಿ ಎನ್ನುವಂತೆ ತಲೆಯಾಡಿಸಿದ.
ಜಡ್ಜ್ ಕುಳಿತಿದ್ದ ಉಳಿದ ಲಾಯರ್ ಗಳ ಕಡೆ ತಿರುಗಿ "ಯಾರಾದರೂ ಈ ಕೇಸ್ ಬಗ್ಗೆ ಆಸಕ್ತಿ ಇದ್ದರೆ ಸ್ವಯಂ ಇಚ್ಛೆಯಿಂದ ಈತನ ಪರವಾಗಿ ವಾದಿಸಲು ಮುಂದೆ ಬರುವುದಾದರೆ ಬನ್ನಿ.." ಎಂದರು.
ಜಡ್ಜ್ ಹಾಗೆನ್ನುತ್ತಲೇ ಜಾನಕಿರಾಮ್ ತಿರುಗಿ ಅಲ್ಲಿರುವ ಲಾಯರ್ ಗಳ ಮೇಲೆ ತೀಕ್ಷ್ಣ ದೃಷ್ಟಿ ಬೀರಿದ. ಯಾರೊಬ್ಬರೂ ಮಾತನಾಡಲಿಲ್ಲ. ಜಡ್ಜ್ ಗೂ ತಿಳಿಯಿತು ಉಳಿದವರ ಉಭಯ ಸಂಕಟ. ಶಾಸ್ತ್ರಿಗೆ ಕೂಡ ಪರಿಸ್ಥಿತಿಯ ಅರಿವಾಗುತ್ತಲೇ ಇತ್ತು. ನನ್ನನ್ನೀಗ ಕಂಬಿಯ ಹಿಂದೆ ದೂಡುತ್ತಾರೆ. ಮೇಲ್ಮನವಿ ಸಲ್ಲಿಸಿ ಮುಂದೆ ಯಾವುದಾದರೂ ಒಳ್ಳೆಯ ಲಾಯರ್ ಹಿಡಿಯಬೇಕು. ಈ ಪ್ರತಾಪ್ ಯಾಕೆ ನನ್ನನ್ನು ನಂಬುತ್ತಿಲ್ಲ?? ನನ್ನನ್ನು ಜೈಲಿಗೆ ಕಳುಹಿಸಲು ಇಂತಹ ಹಟವೇಕೆ?? ಒಂದು ಕೊಲೆ ಕೇಸ್ Solve ಮಾಡಿದೆ ಎಂದು ಬೀಗಲಾ?? ಅಥವಾ ಇನ್ನೇನಾದರೂ??
ಸರೋವರಾ..!!
ಸರೋವರಾಳಿಗೆ ತಿಳಿದರೆ ಏನು ಮಾಡಬಹುದು? ತುಂಬಾ ಭಾವಾವೇಶದ ಹುಡುಗಿ. ಅಳುತ್ತಾಳೆ. ಎಷ್ಟು ದಿನವೆಂದು ಅಳುತ್ತಾಳೆ?? ತನ್ನನ್ನು ಬಿಟ್ಟು ಇನ್ಯಾರ ಗೂಡಿಗೋ ಹಾರುತ್ತಾಳೆ.. ಸರಿಯಿದ್ದಾಗ ಮಾತ್ರ ಪ್ರೀತಿ ಪ್ರೇಮ ಎಲ್ಲ ಚಂದ. ಯಾವ ಹೂವು ಯಾರ ಮುಡಿಗೋ?? ತನಗೆ ನಿಜವಾಗಿಯೂ ಏನೋ ಆಗಿದೆ.. ಜೈಲಿನಲ್ಲಿ ಸಮಸ್ಯೆಯ ಬಗ್ಗೆ ಯೋಚಿಸುವುದನ್ನು ಬಿಟ್ಟು... ಈ ರೀತಿ...
ತಟಕ್ಕನೆ ಒಂದು ವಿಚಾರ ಹೊಳೆಯಿತು. ಪ್ರತಾಪ್ ಗೆ ಏನಾದರೂ ಸರೋವರಳ ಮೇಲೆ ಕಣ್ಣು ಬಿತ್ತಾ?? ಆ ಯೋಚನೆಯೇ ಕಹಿ ಎನ್ನಿಸಿತು ಶಾಸ್ತ್ರಿಗೆ. ಯಾಕಾಗಬಾರದು?? ತಾನೊಬ್ಬ ಜೈಲು ಸೇರಿ ಬಿಟ್ಟರೆ ಇನ್ನಾರು ಗತಿ?? ಸುಲಭವಾಗಿ ಬಲೆ ಬೀಸಬಹುದಲ್ಲ. ಶಾಸ್ತ್ರಿಯ ಕಣ್ಣುಗಳು ಕೆಂಪಾದವು. ಮುಷ್ಠಿ ಬಿಗಿಯಿತು. ನಾನೆಂದುಕೊಂಡಿದ್ದು ನಿಜವೇ ಆದರೆ ಶಾಸ್ತ್ರಿ ಏನೆಂದು ನಿನಗೆ ತೋರಿಸುತ್ತೇನೆ ಪ್ರತಾಪ್ ಎಂದುಕೊಂಡ. ಒಂದು ಸಣ್ಣ ಗ್ಯಾಪ್ ಸಿಕ್ಕರೆ ಸಾಕು ಎಂದುಕೊಂಡು ಈಗ ಸರೋವರಾ ಎಲ್ಲಿರಬಹುದು? ವಿಷಯ ತಿಳಿದಿದ್ದರೆ ಇಲ್ಲಿಗೂ ಬರುತ್ತಿದ್ದಳೇನೋ??
ಕಳ್ಳತನ, ಸುಳ್ಳು, ಅಪರಾಧಗಳು ಅವಳಿಗೆ ಹಿಡಿಸುವುದಿಲ್ಲ. ನನ್ನ ಮುಖವನ್ನು ಆಕೆ ಇನ್ನೆಂದು ನೋಡಲಾರೆನೇನೋ ಎನ್ನಿಸಿತು ಆತನಿಗೆ.
ಅಷ್ಟರಲ್ಲಿ ಜಾನಕಿರಾಮ್ ಕಂಚಿನ ಕಂಠ ಮೊಳಗಿತು. "Your honour.. ಇಲ್ಲಿ ನಿಂತಿರುವ ಆರೋಪಿ ಸಾಮಾನ್ಯ ಆಸಾಮಿ ಅಲ್ಲ. ಭಯಂಕರ ಬುದ್ಧಿವಂತ. ಎಂತಹವರಿಗೆ ಬೇಕಾದರೂ ಚಳ್ಳೆ ಹಣ್ಣು ತಿನ್ನಿಸುವ ಮಹಾ ಚತುರ. ಅಂತಹ ಬುದ್ಧಿಯನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸುವುದು ಬಿಟ್ಟು ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯೋಚಿಸುತ್ತಿದ್ದಾನೆ. ಕೊಲೆಗೆ ಬೇಕಾದ ಸಾಕ್ಷ್ಯಾಧಾರಗಳು, ಸಾಕ್ಷಿದಾರರು ಎಲ್ಲವೂ ಇವೆ. ಪೊಲೀಸರ ಪ್ರಕಾರ ಈತ ಇದೊಂದೇ ಕೊಲೆಯನ್ನು ಮಾಡಿಲ್ಲ. ಇನ್ನು ಅನೇಕ ಕೊಲೆಗಳನ್ನು ಮಾಡಿದ್ದಾನೆ. ಅವುಗಳ ಬಗ್ಗೆ ವಿಷಯ ಮಾಹಿತಿ ಪಡೆಯಲು ಹದಿನೈದು ದಿನಗಳವರೆಗೆ ಈತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡುತ್ತೇನೆ.
ಅಷ್ಟೇ ಅಲ್ಲದೆ ಈತನ ಪರವಾಗಿ ವಾದಿಸಲು ಇತರರು ಬರುತ್ತಿಲ್ಲ ಎಂದರೆ ಎಲ್ಲರೂ ಸಾಕ್ಷಿ ಎಷ್ಟು ಬಲವಾಗಿದೆ ಎಂದು ನೋಡಿದ್ದಾರೆ. ಹಾಗಾಗಿ ಇಂಥ ಸಮಾಜಕ್ಕೆ ಧಕ್ಕೆ ತರುವ ಮನುಷ್ಯರು ನಮ್ಮ ಮಧ್ಯೆ ಇರುವುದು ಸರಿ ಅಲ್ಲ. ಹಾಗಾಗಿ IPC ಸೆಕ್ಷನ್ 307 ಪ್ರಕಾರ ಆರೋಪಿಯನ್ನು ಅಪರಾಧಿ ಎಂದು ಘೋಷಿಸಿ ಉಳಿದ ಮಾಹಿತಿಗಳು ಬಂದ ಮೇಲೆ ಶಿಕ್ಷೆ ಘೋಷಿಸಬೇಕು ಎಂಬುದೇ ನನ್ನ ವಾದ. ಇವತ್ತು ಪೊಲೀಸರು ಈತನನ್ನು ಹದಿನೈದು ದಿನಗಳವರೆಗೆ ತಮ್ಮ ವಶಕ್ಕೆ ನೀಡಲು ಕೇಳುತ್ತಿರುವುದರಿಂದ ನಾನು ಯಾವುದೇ ಸಾಕ್ಷ್ಯವನ್ನು ತಂದಿಲ್ಲ.
ಸಮಾಜದಲ್ಲಿ ಆತಂಕ ಸೃಷ್ಟಿಸುವ ಜನರ ಮೇಲೆ ಕಿಂಚಿತ್ತೂ ಕರುಣೆ ತೋರದೆ ಮನವಿಯನ್ನು ಸ್ವೀಕರಿಸಬೇಕು.. " ಎಂದು ತಲೆಬಾಗಿದ ಜಾನಕಿರಾಮ್ ಪ್ರಸಾದ್.
ಜಡ್ಜ್ ಬಳಿ ಮತ್ತೇನು ಇರಲಿಲ್ಲ ಕೇಳಲು.
"ಮಿ. ಶಾಸ್ತ್ರಿ, ನಿನ್ನ ಪರವಾಗಿ ಯಾರು ವಾದ ಮಂಡಿಸಲು ಬಾರದ ಕಾರಣ ಹಾಗೂ ಪೊಲೀಸರ ಕಡೆಯಿಂದ ಅವರ ವಾದ ಸರಿ ಇರುವುದರಿಂದ ಇನ್ನು ಹದಿನೈದು ದಿನಗಳ ಕಾಲ ನಿನ್ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುತ್ತೇನೆ. ನೀನು ಹದಿನೈದು ದಿನಗಳೊಳಗಾಗಿ ಲಾಯರ್ ನೇಮಿಸಿಕೋ. ಆಗದಿದ್ದರೆ, ನಾನು ಅಂದರೆ ಸರ್ಕಾರ ನಿನಗೊಂದು ಲಾಯರ್ ನೀಡುತ್ತದೆ. ಇನ್ನು ನೀನು ಏನಾದರೂ ಹೇಳುವುದಿದೆಯಾ??" ಮಾತು ಮುಗಿಸಿದ ಜಡ್ಜ್.
ಶಾಸ್ತ್ರಿ ಪ್ರತಾಪ್ ಕಡೆ ನೋಡಿದ. ಪ್ರತಾಪ್ ಶಾಸ್ತ್ರಿಯನ್ನು ನೋಡದೆ ಮತ್ತೆಲ್ಲೋ ಮುಖ ತಿರುಗಿಸಿಕೊಂಡ. ಅಂದರೆ ನಾನು ಕೊಲೆಗಾರ ಅಲ್ಲ ಎಂದು ಇವನಿಗೆ ಗೊತ್ತಾ?? ಅದೆಲ್ಲ ಆಮೇಲೆ. ಈಗ ಜಡ್ಜ್ ಗೆ ಉತ್ತರಿಸಬೇಕು. ಒಪ್ಪಿಕೊಳ್ಳದೆ ಬೇರೆ ದಾರಿಯಿಲ್ಲ. ಮತ್ತೆ ನಾಳೆ ಗಾಳಿಗುಡ್ಡನನ್ನು ಕರೆದು ಲಾಯರ್ ನೇಮಿಸಿಕೊಳ್ಳಬೇಕು. ಅದೇ ಸರಿ ಎಂದು ತಲೆಯಾಡಿಸಬೇಕು. ಅಷ್ಟರಲ್ಲಿ..
ಬಾಗಿಲ ಕಡೆಯಿಂದ ಮಧುರವಾದ ಧ್ವನಿಯೊಂದು ಕೇಳಿ ಬಂತು. "ಯುವರ್ ಆನರ್, ಆರೋಪಿಯ ಪರವಾಗಿ ನಾನು ಪಾಠಿಸವಾಲು ಮಾಡುತ್ತೇನೆ."
ಒಂದು ಕ್ಷಣ ಇಡೀ ಕೋರ್ಟಿನಲ್ಲಿದ್ದವರೆಲ್ಲ ಬಾಗಿಲ ಕಡೆ ತಿರುಗಿ ನೋಡಿದರು. ಓಡೋಡಿ ಬಂದವಳಂತೆ ಏದುಸಿರು ಬಿಡುತ್ತಿದ್ದಳು. ಈಗ ಶಾಕ್ ಆಗುವ ಸರದಿ ಶಾಸ್ತ್ರಿಯದು. ಅಷ್ಟೇ ಅಲ್ಲ ಪ್ರತಾಪ್ ಕೂಡ ಶಾಕ್ ಗೆ ಒಮ್ಮೆ ಎದ್ದು ನಿಂತ. ಬಂದವಳು ಬೇರಾರು ಅಲ್ಲ..
ಸರೋವರಾ...!!
ಲಾಯರ್ ಡ್ರೆಸ್ ಅವಳಿಗೆ ತುಂಬಾ ಸರಿಯಾಗಿ ಹೊಂದಿತ್ತು. ಸುಂದರವಾಗಿ ಕಾಣುತ್ತಿದಳು. ಮನಸ್ಸಿಗೆ ಸ್ವಲ್ಪ ಬೇಸರವಾದರೂ ಕಣ್ಣೀರು ಹಾಕುವ ಸರೋವರಳಾಗಲಿ, ಹಿಂದಿನ ದಿನ ಶಾಸ್ತ್ರಿಯನ್ನು ಬಂಧಿಸಿದ್ದೇನೆ ಎಂದು ಪ್ರತಾಪ್ ಹೇಳಿದಾಗ ಸುಮ್ಮನೆ ಕುಳಿತುಬಿಟ್ಟ ಸರೋವರಾಳಂತಾಗಲಿ ಕಾಣಲಿಲ್ಲ ಆಕೆ ಈಗ. ಶಾಸ್ತ್ರಿಗೆ ಆಶ್ಚರ್ಯವಾಗಿದ್ದು ಅದಕ್ಕೆ. ಅದೆಷ್ಟು ವರ್ಷಗಳಿಂದ ಆಕೆಯ ಜೊತೆಯಲ್ಲಿದ್ದರೂ ಅವಳ ಇನ್ನೊಂದು ಮುಖದ, ಮನಸ್ಸಿನ ಅರಿವಾಗಲಿಲ್ಲವಲ್ಲ ಎಂದುಕೊಂಡ. ತನ್ನ ಬಗ್ಗೆ ಕಂಪ್ಲೇಂಟ್ ಕೊಟ್ಟವಳೂ ಇವಳೇ.. ಈಗ ತನ್ನ ಪರವಾಗಿ ವಾದಿಸಲು ಬಂದವಳು ಇವಳೇ..
ಅಂದರೆ ತಾನು ನಿರಪರಾಧಿ ಎಂದು ಅವಳಿಗೆ ಅನ್ನಿಸಿರಬಹುದಾ?? ಮನಸ್ಸಿಗೆ ಹಾಯ್ ಎನ್ನಿಸಿತು. ಜಗತ್ತೇ ವಿರೋಧಿಸಿ ನಿಂತರು ಪ್ರೇಯಸಿ ಆದವಳು ನಾನು ನಿನ್ನನ್ನು ನಂಬುತ್ತೇನೆ ಹುಡುಗ ಎಂದು ಜೊತೆ ನಿಂತ ಕ್ಷಣ.
ಅರೆ.. ಇವಳು ಯಾವಾಗ ಲಾ ಓಡಿದಳು? ಕೊನೆಯಲ್ಲೊಮ್ಮೆ ಆ ಪ್ರಶ್ನೆ ಉದಯಿಸಿತು ಅವನ ಮನಸ್ಸಿನಲ್ಲಿ. Biology Student ಎಂಬುದು ಗೊತ್ತಿತ್ತು. ತನ್ನ ಜೊತೆ ಓದಿದವಳು. ಆದರೆ Law?? ತನಗೆ ಹೇಳಿಲ್ಲ ಕೂಡ. ಕೇಸು ಗೆಲ್ಲುವುದು ಬಿಡುವುದು ಕೊನೆಗೆ. ಆದರೆ ನಾನು ನಿನ್ನೊಂದಿಗಿದ್ದೇನೆ ಎಂದು ಮೆಸೇಜ್ ಕೊಟ್ಟಳಲ್ಲ, ಅಷ್ಟು ಸಾಕು. ಶಾಸ್ತ್ರಿಯ ಮನಸ್ಸಿನ ದುಗುಡವೆಲ್ಲ ಒಮ್ಮೆಲೇ ಯಾರೋ ಅಳಿಸಿದಂತೆ ದೂರವಾಯಿತು. ಈಗ ಆತನಲ್ಲಿನ ಚತುರ ಎದ್ದು ನಿಂತ. ಇದೇನು ಸಮಸ್ಯೆ ನೋಡಿಯೇ ಬಿಡೋಣ ಎಂದೆನ್ನಿಸಿತು ಶಾಸ್ತ್ರಿಗೆ. ಜಡ್ಜ್ ಎದುರು ಬಂದು ನಿಂತು ನಾನು ಈ ಕೇಸಿನ ಪಾಠಿಸವಾಲು ಮಾಡುತ್ತೇನೆ ಎಂದು ಒಂದು ಅಫಿಡವಿಟ್ ನೀಡಿ ಹಿಂದೆ ಬಂದು ನಿಂತಳು.
ಜಾನಕಿರಾಮ್ ಇವಳ ಕಡೆಯೇ ನೋಡುತ್ತಿದ್ದ. ಇನ್ನು ಪ್ರಾಯದ ಹುಡುಗಿ, ಅದೇನು ಓದಿದ್ದಾಳೋ.. ಬಿಟ್ಟಿದ್ದಾಳೋ ಕಾಲೇಜಿನಲ್ಲಿ. ತನ್ನ ವಿರುದ್ಧ ಇವಳೇನು ವಾದ ಮಾಡುತ್ತಾಳೆ? ಇದೇನೋ ಆಟದಂತೆ ಅನ್ನಿಸಿತು ರಾಮ್ ಪ್ರಸಾದ್ಗೆ. ಸ್ವಲ್ಪ ಮಜಾ ತೆಗೆದುಕೊಳ್ಳೋಣ.. ಮುಂದೇನು ನಡೆಯುತ್ತದೆ ಎಂದು ನೋಡೋಣ ಎಂದು ಸುಮ್ಮನೆ ಕುಳಿತ.
ಜಡ್ಜ್ ಒಮ್ಮೆ ಅವಳ ಕಾಗದ ಪತ್ರ ನೋಡಿ "ಮಿಸ್ ಸರೋವರಾ, ಎಲ್ಲವೂ ಸರಿ.. ಆದರೆ ಹೀಗೆ ನೀವು ಆರೋಪಿಯ ಕಡೆಯಿಂದ ವಾದ ಮಾಡುವವರು ಸಮಯಕ್ಕೆ ಸರಿಯಾಗಿ ಬರಬೇಕಲ್ಲವೇ?? ಕೋರ್ಟಿನ ಸಮಯ ಬಹಳ ಅಮೂಲ್ಯವಾದದ್ದು. ಅದಕ್ಕೆ ನಾವೆಲ್ಲ ಗೌರವ ಕೊಡಬೇಕು.." ಎಂದರು ಜಡ್ಜ್.
ಒಮ್ಮೆ ತನ್ನ ನಡು ಬಗ್ಗಿಸಿ "ಯುವರ್ ಆನರ್, ನಾನು ಕೋರ್ಟಿನ ಹಾಗೂ ತಮ್ಮ ಇಬ್ಬರ ಸಮಯವನ್ನೂ ಗೌರವಿಸುತ್ತೇನೆ. ಅಷ್ಟೇ ಅಲ್ಲದೆ ವಾದ ಮಂಡಿಸುತ್ತಿರುವ ಜಾನಕಿರಾಮ್ ಅವರ ಸಮಯದ ಬೆಲೆ ಎಷ್ಟು ಎಂದು ನನಗೆ ಗೊತ್ತು. ಆದರೆ ನನಗೆ ಈ ಕೇಸಿನ ಬಗ್ಗೆ ತಿಳಿದಿದ್ದು ನಿನ್ನೆ ರಾತ್ರಿಯಷ್ಟೆ. ನನ್ನ ಬಳಿ ಒಂದು ಕಪ್ಪು ಕೋಟ್ ಕೂಡ ಇರಲಿಲ್ಲ. ಈಗ ಅಂಗಡಿ ಬಾಗಿಲು ತೆರೆಯುತ್ತಲೇ ಕೋಟ್ ತೆಗೆದುಕೊಂಡು ಇತ್ತ ಕಡೆ ಬಂದೆ. ಕೋರ್ಟಿನ ಇತರ ನಿಯಮಗಳನ್ನೂ ನಾವು ಪಾಲಿಸಬೇಕಲ್ಲವೇ??"
ಒಮ್ಮೆಲೇ ಕೋರ್ಟಿನಲ್ಲಿ ಗುಸುಗುಸು ಪ್ರಾರಂಭವಾಯಿತು.
"Order!! Order!!" ಜಡ್ಜ್ ತಮ್ಮ ಮುಂದಿದ್ದ ಮರದ ಸುತ್ತಿಗೆಯಿಂದ ಎರಡು ಬಾರಿ ತಟ್ಟಿದರು.
ಎಲ್ಲರೂ ಸುಮ್ಮನಾದರು.
"ಅಂದರೆ ನೀನು ಹೇಳುತ್ತಿರುವುದು ಏನು?? ಈ ಮೊದಲು ಪ್ರಾಕ್ಟೀಸ್ ಮಾಡಿಲ್ಲವೇ?" ಜಡ್ಜ್ ಕುತೂಹಲದಿಂದ ಕೇಳಿದರು.
ತಲೆ ಅಡ್ಡಡ್ಡ ಆಡಿಸಿದಳು ಸರೋವರಾ. "ಇಲ್ಲ ಯುವರ್ ಆನರ್, ಕಾನೂನು ನನ್ನ ಇಷ್ಟದ ವಿಷಯ. ಅದನ್ನು ಸುಮ್ಮನೆ ಓದಿರುವೆ. ಹೊರತಾಗಿ ನನಗೆ ಯಾವುದೇ ಪ್ರಾಕ್ಟೀಸ್ ಆಗಲೀ, ಈ ಮೊದಲು ಕೋರ್ಟಿನಲ್ಲಿ ವಾದ ಮಾಡಿದ ಅನುಭವವಾಗಲಿ ಇಲ್ಲ. ಇದಕ್ಕೆ ಜಾನಕಿರಾಮ್ ಪ್ರಸಾದರ ಅಭ್ಯಂತರವೇನೂ ಇಲ್ಲ ಎಂದುಕೊಳ್ಳುತ್ತೇನೆ.." ಎಂದು ಒತ್ತಿ ಹೇಳಿದಳು.
ಇಲ್ಲದಿದ್ದರೆ ಒಮ್ಮೆ ಆತ ಎದ್ದು ನಿಂತು ಕಾನೂನಿನಲ್ಲಿ ಹಾಗಿದೆ, ಹೀಗಿದೆ, ಅವರು ವಾದಿಸಬಾರದು.. ಇವರು ವಾದಿಸಬಾರದು.. ನಿನ್ನ ಬಳಿ ಡಿಗ್ರಿ ಏನಿದೆ? ಎಂದು ಬಿಟ್ಟರೆ ಮುಗಿದು ಹೋಯಿತು. ಆಕೆ ಮುಂದೆ ವಾದಿಸುವಂತಿಲ್ಲ. ಹಾಗಾಗಿಯೇ ಅವಳು ಮೊದಲು ಜಾನಕಿರಾಮ್ ರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು.
ತನ್ನ ಬಗೆಗಿರುವ ಗೌರವವನ್ನು ನೋಡಿ ಆತನಿಗೆ ಮನಸ್ಸಿನಲ್ಲೇನೋ ಖುಷಿ ಆಯಿತು. ಆದರೆ ಅದನ್ನು ತೋರಗೊಡದೆ " ಸರಿ, ಸರಿ, ಅದೇನು ಬೇಗ ಶುರು ಮಾಡಿ.." ಎಂದ.
ಪ್ರತಾಪನಿಗೆ ಇದೊಂದು ಅರ್ಥವಾಗದೆ ಏನು ನಡೆಯುತ್ತಿದೆ ಇಲ್ಲಿ ಎಂದುಕೊಂಡ. ನಿನ್ನೆ ಶಾಸ್ತ್ರಿ ಜೈಲಿನಲ್ಲಿದ್ದಾನೆ ಎಂದಾಗ ದಿಗ್ಬ್ರಮೆಯಲ್ಲಿ ಕಳೆದುಹೋದ ಸರೋವರಾ ಇವಳೇನಾ?? ನಾನು ಸರೋವರಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಏನೇ ಹೇಳಿದರೂ ಶಾಸ್ತ್ರಿ ಮೆಚ್ಚಿದ ಹುಡುಗಿ ಇವಳು. ಸ್ವಲ್ಪ ಹುಷಾರಾಗಿ ಇರುವಂತೆ ಹೇಳಬೇಕು ಪ್ರಸಾದರಿಗೆ ಎಂದೆನ್ನಿಸಿತು.
ಜಾನಕಿರಾಮ್, ಪ್ರತಾಪ್, ತಲೆ ನೆರೆತ ಜಡ್ಜ್ ಯಾರೂ ಗಮನಿಸದ ಒಂದಂಶವನ್ನು ಗಮನಿಸಿದ್ದ ಶಾಸ್ತ್ರಿ.
ಸರೋವರಾ ಅವನಂದುಕೊಂಡಷ್ಟು ಅಳುಮುಂಜಿಯಾಗಲಿ, ಕೈಲಾಗದವಳಾಗಲಿ ಅಲ್ಲ. ಸ್ಮಾರ್ಟ್ ಗರ್ಲ್. ಆಕೆ ಸುಮ್ಮನೆ ಹಗ್ಗ ಕಟ್ಟುತ್ತಿಲ್ಲ. ಜೇಡರ ಬಲೆ ಹೆಣೆಯುವಂತೆ ನೆಯ್ಯುತ್ತಿದ್ದಾಳೆ. ಮೊದಲಿರುವುದು ಒಂದೇ ಎಳೆ. ನಂತರ ನಿಧಾನವಾಗಿ ಒಂದೊಂದೇ ಎಳೆ ಹೆಣೆದು ನಂತರ ಸಿದ್ಧವಾಗುವುದಿದೆಯಲ್ಲ ಅದು ಬಲೆ..!! ಅದನ್ನು ಶಾಸ್ತ್ರಿ ಗಮನಿಸಿದ್ದ. ಅಂತಹ ಅದೆಷ್ಟೋ ಬಲೆಗಳನ್ನು ನೇಯ್ದ ಚಾಲಾಕಿತನ ಶಾಸ್ತ್ರಿಗಿದೆ.
ಮೊದಲು ಏನೋ ಭಾವೋದ್ವೇಗದಲ್ಲಿ ಬಂದಿದ್ದಾಳೆ ಎಂದುಕೊಂಡಿದ್ದ. ಆದರೀಗ ಅವಳು ಮನಾತನಾಡಿದ್ದು ಕೇಳಿದ ನಂತರ "ಭೇಷ್!! ಸರೋವರಾ.. ಎಂದುಕೊಂಡ ಮನಸ್ಸಿನಲ್ಲಿಯೇ.
ಒಮ್ಮೆ ಸರೋವರಳ ಬಳಿ ಅರ್ಧ ಘಂಟೆ ಮಾತನಾಡಲು ಸಿಕ್ಕರೆ ಸಾಕು. ಅವಳು ನೇಯುವ ಬಲೆಗೆ ತನ್ನ ಸಹಾಯವೇನಿದ್ದರೂ ಮಾಡಬಹುದು ಎಂದುಕೊಂಡ.
ಮತ್ತೆ ಪ್ರಾರಂಭಿಸಿದಳು ಸರೋವರಾ. "ಯುವರ್ ಆನರ್, ಆರೋಪಿಯ ಸ್ಥಾನದಲ್ಲಿರುವ ಶಾಸ್ತ್ರಿ ಎನ್ನುವ ಈತನ ಮೇಲೆ ಕೊಲೆಯ ಆರೋಪವನ್ನು ಹೊರಿಸಲಾಗಿದೆ ಎಂದು ನಿನ್ನೆ ರಾತ್ರಿಯಷ್ಟೇ ತಿಳಿಯಿತು.
ಸಮಯ ಆಗಿ ಹೋಗಿದ್ದರಿಂದ ನನ್ನ ಕಕ್ಷಿದಾರನ ಬಳಿ ಮಾತನಾಡಲಾಗಲೀ, ಮಾಹಿತಿ ಪಡೆಯಲಾಗಲೀ ನನ್ನಿಂದ ಸಾಧ್ಯವಾಗಲಿಲ್ಲ. ಗುರುಗಳ ಸ್ಥಾನದಲ್ಲಿರುವ ಜಾನಕಿರಾಮ್ ಪ್ರಸಾದ್ ರವರು ಕೇಸಿನ ಒಂದು ಎಳೆಯನ್ನು ಹಿಡಿದು ಅದರ ತಲೆ ಮುಟ್ಟಿಸುತ್ತಾರಾಗಲಿ ನನ್ನಂತವನ ಬಳಿ ಅದು ಸಾಧ್ಯವಿಲ್ಲ. ಕಾನೂನು ನನ್ನ ಇಷ್ಟದ ವಿಷಯ. ಜಾನಕಿರಾಮ್ ರ ಅದೆಷ್ಟೋ ಕೇಸ್ ಗಳ ವಾದವನ್ನು ನಾನು ಓದುತ್ತ ಓದುತ್ತ ಅವರ Virtual ಶಿಷ್ಯೆಯೇ ಆಗಿಹೋಗಿದ್ದೇನೆ. ಅದು ಹಾಗಿರಲಿ, ನಾನು ಹೇಳುತ್ತಿರುವುದು ಏನೆಂದರೆ ಒಮ್ಮೆಯಾದರೂ ನನ್ನ ಕಕ್ಷಿದಾರನ ಜೊತೆ ಮಾತನಾಡದೆ ಪ್ರಸಾದ್ ರಂತಹ Great ಲಾಯರ್ ಜೊತೆ ವಾದ ಮಾಡುವುದು ಕಷ್ಟ ಸಾಧ್ಯ.ಈ ವಿಷಯವನ್ನು ಪರಿಗಣಿಸಿ ನ್ಯಾಯಾಲಯವು ನನಗೆ ಶಾಸ್ತ್ರಿಯ ಜೊತೆ ಮಾತನಾಡಲು ಒಂದರ್ಧ ಘಂಟೆ ಸಮಯ ಕೊಡಬೇಕು, ಇದಕ್ಕೆ ಗುರುಗಳ ಸ್ಥಾನದಲ್ಲಿರುವ ಪ್ರಸಾದ್ ಒಪ್ಪುತ್ತಾರೆ ಎಂದು ನಾನಂದುಕೊಂಡಿದ್ದೇನೆ. ಈ ಕೇಸಿನ ಮೇಲಿನ ಹೆಚ್ಚಿನ ಆಸ್ಥೆಯಾಗಲೀ, ಆರೋಪಿಯ ಮೇಲಿನ ಯಾವುದೇ ಪ್ರೀತಿಯಾಗಲೀ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿಲ್ಲ. ಹೊರತಾಗಿ ಪ್ರಸಾದ್ ರಂತವರ ಜೊತೆ ವಾದ ಮಾಡುವುದೇ ಒಂದು ಹೆಮ್ಮೆ. ಅದಕ್ಕಾಗಿ ನಾನು ಇಲ್ಲಿಗೆ ಬಂದಿರುವುದು. ಅದನ್ನು ಇಲ್ಲಿಗೆ ಮೊಟಕುಗೊಳಿಸಲಾಗುವುದಿಲ್ಲ ಎಂದು ನನಗೆ ನಂಬಿಕೆಯಿದೆ." ಪ್ರಸಾದ್ ರ ಮುಖವನ್ನು ಆಸ್ಥೆಯಿಂದ ನೋಡಿದಳು ಸರೋವರಾ.
ಎಷ್ಟು ಏರಿಸಲೋ ಸಾಧ್ಯವೋ ಅಷ್ಟು.. ಕೇಸಿನ ಬದಲಾಗಿ ಪ್ರಸಾದರನ್ನು ಹೊಗಳುವ ಕೆಲಸವನ್ನೇ ಮಾಡಿದ್ದ್ದಳು ಅವಳು. ಸ್ವಲ್ಪ ಕಿರಿಕಿರಿ ಎನ್ನಿಸಿದರೂ ಆಕೆ ನೇಯ್ದ ಬಲೆಯಿಂದ ಹೊರ ಬರದಾದರೂ ಪ್ರಸಾದ್. ಅಷ್ಟು ಸುಂದರ ಹೆಣ್ಣೊಬ್ಬಳು ಹೀಗೆ ಇಷ್ಟು ಜನರ ಮುಂದೆ ತನ್ನನ್ನು ಹೊಗಳಿ ಗುರುಗಳ ಸ್ಥಾನವನ್ನು ನೀಡಿದ ಮೇಲೆ ಹೇಗೆ ತಾನೇ ತಳ್ಳಿಹಾಕಲು ಸಾಧ್ಯ??
ಜಡ್ಜ್ ಜಾನಕಿರಾಮ್ ರ ಮುಖ ನೋಡಿದರು. ಜಾನಕಿರಾಮ್ ಸರಿ ಎನ್ನುವಂತೆ ತಲೆಯಾಡಿಸಿದರು.
"ವಾದ ವಿವಾದವನ್ನು ಪರಿಶೀಲಿಸಿ ಎರಡು ಲಾಯರ್ ಗಳ ಸಮ್ಮತಿಯ ಮೇರೆಗೆ ಈ ಮೊಕದ್ದಮೆಯನ್ನು ಮಧ್ಯಾಹ್ನ ಮೂರು ಘಂಟೆಯವರೆಗೆ ಮುಂದೆ ಹಾಕಲಾಗಿದೆ. ಅದರಲ್ಲಿ ಅರ್ಧ ಘಂಟೆಯ ಸಮಯ ಮಾತ್ರ ಆರೋಪಿಯು ತನ್ನ ಲಾಯರ್ ಬಳಿ ಮಾತನಾಡಬಹುದು.
Now court is abandoned.."
ಜಡ್ಜ್ ಎದ್ದು ನಿಂತರು. ಉಳಿದವರು ಕೂಡ ಮೇಲೆದ್ದು ನಿಂತರು. ಈ ಜಡ್ಜ್ ಹೋಗುತ್ತಿದಂತೆಯೇ ಮುಂದಿನ ಕೇಸ್ ನಡೆಸುವ ಜಡ್ಜ್ ಒಳ ಬಂದರು. ಅದೇ ಸಮಯದಲ್ಲಿ ಸರೋವರಾ ಜಾನಕಿರಾಮ್ ರ ಬಳಿ ನಡೆದು ತುಂಬಿದ ಕೋರ್ಟ್ ನ ಎದುರು ಅವರ ಕಾಲು ಮುಟ್ಟಿ ನಮಸ್ಕರಿಸಿ ಗುರುಗಳೇ ಆಶೀರ್ವದಿಸಿ ಎಂದಳು.
ಎಲ್ಲ ತಮ್ಮ ಅಭಿಮಾನ ಎಂದು ಆಕೆಯ ಕೈ ಹಿಡಿದು ಮೇಲೆತ್ತಿದರು ಪ್ರಸಾದ್.
ಕಟಕಟೆಯಿಂದ ಕೆಳಗಿಳಿಯುತ್ತಿದ್ದ ಶಾಸ್ತ್ರಿ ಓರೆಗಣ್ಣಿನಿಂದ ಎಲ್ಲವನ್ನು ನೋಡುತ್ತಿದ್ದ. ಆತನ ಮುಖದಲ್ಲಿ ನಗು ಮೂಡಿತು.
ಪ್ರತಾಪ್ ಕೂಡ ಹೊರನಡೆದು ಹೋಗುವಾಗ ಶಾಸ್ತ್ರಿಯ ಮುಖದ ಮೇಲಿನ ನಗು ನೋಡಿದ. ಆದರೆ ಆ ನಗುವನ್ನು ಪ್ರತಾಪ್ ಸಹಿಸದೆ ಹೋದ...
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/

No comments:

Post a Comment