Saturday, July 23, 2016

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 21

                                            ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 21


ವಿಮಾನದಿಂದಿಳಿದ ಗರುಡ Airport ನಿಂದ ಹೊರಬಂದ. ಆತನಿಗೆ ಗೊತ್ತು ಕಾರು ತನಗಾಗಿ ಕಾಯುತ್ತಿದೆ ಎಂದು. ವಿಂಗ್ ತನ್ನ ಹಿಂದೆ ಬಿದ್ದಾಗಿದೆ. ಇಂಡಿಯಾದಲ್ಲಿ ಕೂಡ ಇಷ್ಟು ಚುರುಕಾಗಿ ಕಾರ್ಯ ಪ್ರಗತಿಯಾಗುತ್ತದೆ ಎಂದು ಗರುಡ ಯೋಚಿಸಿರಲೂ ಇಲ್ಲ. ಕಾರಿನ ಡ್ರೈವರ್ ವೇಷದಲ್ಲಿ ಬಂದ ಅಧಿಕಾರಿ ಮಾತನಾಡುವ ಮೈಮರೆವಿನಲ್ಲಿ ದುಬೈ ಎನ್ನದಿದ್ದರೆ ತಿಪ್ಪರಲಾಗ ಹಾಕಿದರೂ ಗರುಡನಿಗೆ ತಿಳಿಯುತ್ತಿರಲಿಲ್ಲ ತಾನು ಟ್ರ್ಯಾಕ್ ಆಗಿರುವುದು. ಈಗ!! ಅವರ ಸಂಚೆಲ್ಲ ಗರುಡನಿಗೆ ಗೊತ್ತು. ಗರುಡನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ವೇದಿಕೆ ಸಿದ್ಧವಾಗುತ್ತಿದೆ. ಎಲ್ಲಿಯವರೆಗೆ ಗರುಡ ದೇಶ ಬಿಡುವ ಪ್ರಯತ್ನ ಮಾಡುವುದಿಲ್ಲವೋ ಅಥವಾ ಪ್ರಿಯಂವದಾಳ ಮೇಲೆ ಮತ್ತೊಮ್ಮೆ ಹತ್ಯಾ ಪ್ರಯತ್ನ ಮಾಡುವುದಿಲ್ಲವೋ ಅಲ್ಲಿಯವರೆಗೆ ಗರುಡನನ್ನು ನೆರಳಿನಂತೆ ಹಿಂಬಾಲಿಸುವುದೇ ಇವರ ಕೆಲಸ. ಎಷ್ಟು ಜನರಿದ್ದಾರೆ? ಇವರ ಹಿಂದಿರುವ ಮಾಸ್ಟರ್ ಮೈಂಡ್ ಯಾರು? ತಿಳಿದುಕೊಳ್ಳಬೇಕು. ಸಮಯ ಹಿಡಿದರೂ ಪರವಾಗಿಲ್ಲ ಇದನ್ನು ಮುಗಿಸಿಯೇ ಬಿಡಬೇಕು. ಗರುಡ ನಿಶ್ಚಯಿಸಿದ ಮೇಲೆ ಮುಗಿಯಿತು. ಕೈ ಮಾಡಿದ ಕೂಡಲೇ ಬಂದು ನಿಂತಿತು ಕ್ಯಾಬ್. ಭಯವಿಲ್ಲದೆ, ಮುಖದಲ್ಲಿ ಯಾವುದೇ ಭಾವನೆಗಳನ್ನು ವ್ಯಕ್ತಪಡಿಸದೆ ಒಳ ಸೇರಿ ಸೀಟ್ ಮೇಲೆ ಕುಳಿತುಕೊಂಡ. 
"ತಾಜ್ ಪ್ಯಾಲೇಸ್" ಶಾಂತವಾಗಿತ್ತು ಗರುಡನ ದ್ವನಿ. ಎಳ್ಳಷ್ಟು ಒಡಕಿಲ್ಲದ ಕಂಚಿನ ಕಂಠ.
ಒಮ್ಮೆ ಮುಖ ಮುಖ ನೋಡಿದ ಡ್ರೈವರ್. ತಾಜ್ ಪ್ಯಾಲೇಸ್ ದೆಹಲಿಯ ಮುಖ್ಯ ಭಾಗದಲ್ಲಿರುವ 7 Star hotel. ಒಬಾಮಾ ನಂತಹ ಮುತ್ಸದ್ದಿಗಳು ಬಂದಾಗ ಅಲ್ಲಿಯೇ ವಾಸವಾಗುವ ವ್ಯವಸ್ಥೆಯಾಗುತ್ತದೆ. ಅದೊಂದು ರಕ್ಷಣಾ ಕೋಟೆ ಎಂದೇ ಹೇಳಬಹುದು. ಅಲ್ಲಿ ಹೇಗೆ ಸಾಧ್ಯ? ಯೋಚಿಸುತ್ತಿದ್ದ ಸಮ್ಮಿಶ್ರನ ಮನುಷ್ಯ. ಗರುಡ ಆತನ ಬೆನ್ನು ತಟ್ಟಿ "ನೀನು ಕೇಳಿದ್ದು ಸರಿಯಾಗಿಯೇ ಇದೆ, ತಾಜ್ ಪ್ಯಾಲೇಸ್ ಪ್ಲೀಸ್.." ಎಂದ.
ಒಂದು ತಿಂಗಳು ಮೊದಲೇ ಬುಕ್ ಮಾಡದಂತೂ ಅಲ್ಲಿ ಯಾರಿಗೂ ರೂಮ್ ಸಿಗುವುದಿಲ್ಲ. ಈತ ಹೇಗೆ ರೂಮ್ ಹಿಡಿದ. ವಿಂಗ್ ಡ್ರೈವರ್ ನ ತಲೆಯಲ್ಲಿ ಈ ವಿಚಾರ ಕೊರೆಯತೊಡಗಿತು. ಆತ ಏನೂ ಮಾಡುವಂತಿರಲಿಲ್ಲ. ಆ ಕಡೆ ಕಾರು ಓಡಿಸಿದ. ಕಪ್ಪು ಜಗತ್ತೇ ಹಾಗೆ. ತನ್ನ ಬೇರುಗಳನ್ನು ಅತಿ ಆಳವಾಗಿ ಚಾಚಿದೆ. ತಾಜ್ ಪ್ಯಾಲೇಸ್ ಆಗಲೀ, ದುಬೈ ನ ಬುರ್ಜ್ ಕಲಿಫಾ ಆಗಲಿ ಅವರು ತಲುಪದಂತಹ ಸ್ಥಳಗಳಲ್ಲ.
ಯೋಚನೆ ಮಾಡುವಂಥದ್ದಾಗಲಿ, ಭಯವಾಗಲೀ ಗರುಡನಲ್ಲಿ ಉಳಿದಿರಲಿಲ್ಲ. ಅವನಿಗೆ ಗೊತ್ತು ತಾನಾಗಲೇ ಸುಳಿಯ ಒಳಗೆ ಇಳಿದಾಗಿದೆ. ಒಂದೋ ಈಜಿ ಜಯಿಸಬೇಕು, ಇಲ್ಲವೇ ಮುಳುಗಿ ಸಾಯಬೇಕು. ಕಣ್ಣು ಮುಚ್ಚಿ ಹಾಗೆಯೇ ಸೀಟಿಗೆ ಒರಗಿಕೊಂಡ. ಒಮ್ಮೆ ತಾಜ್ ಪ್ಯಾಲೇಸ್ ಸೇರಿಕೊಂಡರೆ ಮುಂದೇನು ಮಾಡಬೇಕು ಎಂಬ ಸ್ಪಷ್ಟ ಕಲ್ಪನೆ ಆತನಲ್ಲಿ ಮೂಡಿ ಬಹಳ ಸಮಯವಾಗಿತ್ತು. 
*....................................................*............................................................* 
"She is sick. ಸ್ಕಿಜೊಫ್ರೋನಿಯಾ.." ಎನ್ನುತ್ತಲೇ ಕ್ಷಾತ್ರನ ಮುಷ್ಠಿ ಕಟ್ಟಿದ ಕೈ ತಾನಾಗಿಯೇ ಸಡಿಲವಾಗಿತ್ತು. ಕ್ಷಾತನ ಕಣ್ಣುಗಳು ಶಾಸ್ತ್ರಿಯ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿತು. ಅದರಲ್ಲಿ ಯಾವುದೇ ಭಯವಾಗಲೀ, ಅಪಹಾಸ್ಯವಾಗಲೀ ಇರಲಿಲ್ಲ. ದೃಢವಾದ ಶಾಸ್ತ್ರಿಯ ಕಣ್ಣುಗಳನ್ನು ನೋಡುತ್ತಲೇ ಕ್ಷಾತ್ರನಿಗೆ ತಾನು ಹೊರಡುವ ಎರಡು ದಿನ ಮೊದಲು ನಡೆದ ಘಟನೆ ಕಣ್ಣ ಮುಂದೆ ಬಂತು.ಸಿಗರೇಟ್ ಸೇದಬೇಕೆಂಬ ಮನದ ಯೋಚನೆಯನ್ನು ತಡೆದುಕೊಳ್ಳಲಾಗದೆ ತಲೆ ಸಿಡಿಯುವಂತಾಯಿತು. ಸೆಲ್ ನಿಂದ ಹೊರಗೆ ಬಂದು ಬಾಗಿಲು ಎಳೆದುಕೊಂಡು ಹೊರಗೆ ನಡೆದು ಬಿಟ್ಟ ಕ್ಷಾತ್ರ. ಆತನ ಮೆದುಳು ಎರಡು ದಿನದ ಹಿಂದಿನ ಗಟನೆ ಮೆಲುಕು ಹಾಕ ತೊಡಗಿತು.
ತನ್ನ ಎಡಪಕ್ಕೆಯಲ್ಲಿ ಇಳಿದ ಚಾಕುವಿನ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಕ್ಷಾತ್ರ. ಅಂತಹ ಅದೆಷ್ಟೋ ಏಟುಗಳನ್ನು ತಿಂದಿದ್ದಾನೆ ಆತ. ಆ ಪರಿಸ್ಥಿತಿಯಲ್ಲೂ ಕೂಡ ಕ್ಷಾತ್ರ ಯೋಚಿಸುತ್ತಿದ್ದದ್ದು ಒಂದೇ.. ಸ್ವಯಂವರಾಳಿಗೆ ಇಷ್ಟೊಂದು ಶಕ್ತಿ ಎಲ್ಲಿಂದ ಬಂತು?? ತಾನು ಅವಳ ಕೈಯನ್ನು ಬಲವಾಗಿ ಹಿಡಿದಿದ್ದರೂ ಕೂಡ ತನ್ನ ಶಕ್ತಿಯನ್ನೂ ಮೀರಿ ಚಾಕು ತನ್ನ ಎಡಪಕ್ಕೆಯಲ್ಲಿ ಇಳಿಸಿದ್ದಾಳೆ. ಔಷಧಿಯ ಅಮಲಿನಲ್ಲಿ ಹೀಗೆ ಮಾಡುತ್ತಿರುವಳೇ? ನಿದ್ರೆಯ ಮತ್ತಿನಲ್ಲಿ ಮಲಗಿರಬೇಕು ಅದನ್ನು ಬಿಟ್ಟು ಚಾಕು ಹಿಡಿದು ಹೀಗೇಕೆ ಆಡುತ್ತಿದ್ದಾಳೆ.
ಸ್ವಯಂವರಾಳ ಕೈಯಲ್ಲಿನ ಚಾಕು ನೋಡಿಯೇ ನರ್ಸ್ ಹೆದರಿ ಹೋಗಿದ್ದಳು. ಕ್ಷಾತ್ರನಿಗೆ ಬಲವಾದ ಏಟು ಬಿದ್ದದ್ದನ್ನು ಕಂಡ ಮೇಲಂತೂ ಏನು ಮಾಡಬೇಕೆಂದು ತಿಳಿಯದೆ ನಿಂತಲ್ಲಿಯೇ ನಿಂತಿದ್ದಳು. ಈ ಸಂದಿಗ್ಧತೆಯಿಂದ ಮೊದಲು ಸುಧಾರಿಸಿಕೊಂಡಿದ್ದು ಕ್ಷಾತ್ರನೇ. ಎಡಪಕ್ಕೆಗೆ ಹೊಕ್ಕಿದ್ದ ಚಾಕುವನ್ನು ಮರೆತು, ಕಿರುಚುತ್ತಾ, ನಡುಗುತ್ತಿದ್ದ ಸ್ವಯಂವರಾಳನ್ನು ಬಾಚಿ ತಬ್ಬಿಕೊಂಡು ಸಂತೈಸಲು ನೋಡಿದ. ಅಷ್ಟರಲ್ಲಿ ನರ್ಸ್ ಕೂಡ ಓಡಿ ಬಂದು ಆಕೆಗೆ ಇನಜೆಕ್ಷನ್ ಮಾಡಿದಳು. ಅನುಶ್ಲೇಷ ಕೊಡುತ್ತಲೇ ಎಗರಾಡುತ್ತಿದ್ದ ಸ್ವಯಂವರಾ ಕ್ಷಾತ್ರನ ಬಾಹುಗಳಲ್ಲಿಯೇ ನಿದ್ರೆಗೆ ಜಾರಿದಳು. ಅವಳನ್ನು ನಿಧಾನಕ್ಕೆ ಹಾಸಿಗೆಗೆ ಒರಗಿಸಿ ತನ್ನ ಪಕ್ಕೆಗೆ ನೆಟ್ಟಿದ್ದ ಚಾಕುವನ್ನು ಹೊರತೆಗೆದ. ಗಾಯದಿಂದ ರಕ್ತ ಚಿಮ್ಮತೊಡಗಿತು. ನರ್ಸ್ ಬೇಗ ಬೇಗನೇ ಕಿಟ್ ನಿಂದ ಬ್ಯಾಂಡೇಜ್ ತೆಗೆದು ಮೊದಲು ರಕ್ತವನ್ನು ನಿಲ್ಲಿಸಿದಳು. ತನ್ನ ನೋವಿಗಿಂತ ಹೆಚ್ಚಾಗಿ, ಸ್ವಯಂವರಾ ಹೀಗೇಕೆ ಮಾಡಿದಳು ಎಂಬ ಚಿಂತೆಯಲ್ಲಿಯೇ ಇದ್ದ ಕ್ಷಾತ್ರ. ಗಾಯವನ್ನು ಸ್ವಚ್ಚಗೊಳಿಸಿ ಆಯಿಂಟ್ ಮೆಂಟ್ ಹಾಕಿ ಎರಡು ಸ್ಟಿಚ್ ಹಾಕಿದಳು. ಕಮಕ್ ಕಿಮಕ್ ಎನ್ನಲಿಲ್ಲ ಕ್ಷಾತ್ರ. ಸುಮಾರಿನಂಥವರು ಆ ನೋವನ್ನು ತಾಳಲಾರರು. ಪೇನ್ ಕಿಲ್ಲರ ಕೊಟ್ಟೇ ಸ್ಟಿಚ್ ಹಾಕಬೇಕಾಗುತ್ತದೆ. ಆ ಸಮಯದಲ್ಲಿ ಅಂತಹ ಯಾವುದೇ ವ್ಯವಸ್ಥೆಗಳಿಲ್ಲದ ಕಾರಣ ಆಕೆ ಹಾಗೆಯೇ ಸ್ಟಿಚ್ ಹಾಕಿದ್ದಳು.ಕ್ಷಾತ್ರ ಅಲುಗಾಡಲಿಲ್ಲ. ಆದರೆ ಆತನ ಕಣ್ಣುಗಳಿಂದ ನೀರು ಹರಿಯಿತು. ಅದು ಸ್ವಯಂವರಾಳ ಸ್ಥಿತಿ ನೋಡಿ ಎಂಬುದು ನರ್ಸ್ ಗೆ ತಿಳಿಯಲಿಲ್ಲ. 
ಎರಡು ದಿನ ಆಕೆಯನ್ನು ಬಿಟ್ಟು ಸರಿಯಲಿಲ್ಲ ಕ್ಷಾತ್ರ. ನಿದ್ರೆಯಿಂದ ಎಚ್ಚರವಾದರೆ ವಿಚಿತ್ರವಾಗಿ ಹಲುಬುತ್ತಿದ್ದಳು. ಕ್ಷಾತ್ರನನ್ನು ನೋಡಿಯೂ ಗುರುತಿಸದಂತೆ ಮಾಡುತ್ತಿದ್ದಳು.
ಡಾಕ್ಟರ್ ನೋಡಲು ಬಂದಾಗ "ತುಂಬ ಹೆದರಿದ್ದಾಳೆ. ಒಂದಷ್ಟು ದಿನ ಬೇರೆ ಕಡೆ ಎಲ್ಲಾದರೂ ಕರೆದುಕೊಂಡು ಹೋಗಿ. ಸ್ಥಳ ಮತ್ತು ವಾತಾವರಣ ಬದಲಾದರೆ ಮೊದಲಿನಂತಾಗುತ್ತಾರೆ. ಆದರೆ ಇದು ಹೀಗೆಯೇ ಮುಂದುವರೆದರೆ ತುಂಬಾ ಅಪಾಯಕಾರಿ. "ಸ್ಕಿಜೋಫ್ರೆನಿಯ" ಮೊದಲ ಹಂತ ಇದು." ಎಂದಿದ್ದರು.
ಮತ್ತಷ್ಟು ತಲೆಬಿಸಿಯಾಗಿತ್ತು ಕ್ಷಾತ್ರನಿಗೆ. ಅವನು ಅಷ್ಟು ದಿನ ಕೆಲಸ ಬಿಟ್ಟು ಹೊರಗೆ ಹೋಗುವಂತಿಲ್ಲ. ಕೊಲೆಯ ಜಾಡು ಹಿಡಿಯುವುದು ಹಾಗೆಯೇ ಇದೆ. ಹಾಗೆಂದು ಸ್ವಯಂವರಾಳನ್ನು ಈ ಸ್ಥಿತಿಯಲ್ಲಿ ನೋಡಲೂ ಸಾಧ್ಯವಿಲ್ಲ. ಮನೆಗೆ ಕಳಿಸೋಣವೆಂದರೆ ಅವಳೆನ್ನುವವರು ಯಾರೂ ಇಲ್ಲ. ಯಾವುದಕ್ಕೂ ಒಮ್ಮೆ ಸ್ಟೇಶನ್ ಗೆ ಹೋಗಿ ಅಲ್ಲಿನ ಪರಿಸ್ಥಿತಿ ನೋಡಿಕೊಂಡು ಮುಂದೆ ಯೋಚಿಸೋಣ ಎಂದು ನಿರ್ಧರಿಸಿದ.
ನರ್ಸನ್ನು ಕರೆದು "ಸ್ಟೇಶನ್ ಗೆ ಹೋಗಿ ಬರುತ್ತೇನೆ. ಅಂದಿನಂತೆ ಒಬ್ಬಳನ್ನೇ ಬಿಟ್ಟು ಹೊರಹೋಗಬೇಡಿ. ಒಂದು ಜೀವದ ಪ್ರಶ್ನೆ.." ಎಂದು ಮೃದುವಾಗಿಯೇ ಹೇಳಿ ಹೊರಬಂದು ಜೀಪನ್ನೇರಿದ.
ಸ್ಟೇಶನ್ ಕಡೆಗೆ ಸಾಗಿತು ಜೀಪು. ಮನಸ್ಸು ಮಾತ್ರ ಅಲ್ಲಿಯೇ ಇತ್ತು. 
ಸ್ಕಿಜೊಪ್ರೋನಿಯ.. ಅತಿಯಾದ ಹೆದರಿಕೆಯಿಂದ ಬರುವ ಕಾಯಿಲೆ. ಇಲ್ಲದಿರುವುದನ್ನು ಇದ್ದಂತೆ ಕಲ್ಪಿಸಿಕೊಂಡು ಭಯದಿಂದ ನರಳುವುದು.
ನಾಲ್ಕೇ ನಾಲ್ಕು ದಿನಗಳಲ್ಲಿ ಸ್ವಯಂವರಾ ಹೀಗಾದಳಲ್ಲ. ಮೊದಲ ದಿನ ನೋಡಿದಾಗ ಅದೆಷ್ಟು ಆತ್ಮವಿಶ್ವಾಸವಿತ್ತು. ಅಷ್ಟು ಗಟ್ಟಿ ಹುಡುಗಿ ಹೇಗಾಗಿ ಹೋಗಿದ್ದಾಳೆ ಎಂದು ಯೋಚಿಸುತ್ತಲೇ ಸ್ಟೇಶನ್ ತಲುಪಿದ.
ಕಾನಸ್ಟೇಬಲ್ ಬಂದು ಸೆಲ್ಯೂಟ್ ಹೊಡೆದು ಎರಡು ದಿನದಿಂದ ಬಂದ ಕಂಪ್ಲೇಂಟ್ ಗಳನ್ನೆಲ್ಲ ಮುಂದಿಟ್ಟ. ಅದನ್ನೆಲ್ಲ ತಿರುವಿ ಹಾಕಿ ಅರ್ಜೆಂಟ್ ವಿಷಯಗಳೇನಾದರೂ ಬಂದಿವೆಯಾ ಎಂದು ವಿಚಾರಿಸಿದ. 
ಒಂದೆರಡು ಕ್ಷಣ ಯೋಚಿಸಿದ ಕಾನಸ್ಟೇಬಲ್ "ಹಾಂ, ಸರ್, ಪ್ರತಾಪ್ ಅಂತಾ ಇನಸ್ಪೆಕ್ಟರ್ ಮುಂಬಯಿಯಿಂದ ಫೋನ್ ಮಾಡಿದ್ದರು. ನಾವು ಒಂದು ಕೊಲೆ ಬಗ್ಗೆ ಇನಫಾರ್ಮೇಶನ್ ಕಳಿಸಿದ್ದೆವಲ್ಲ ಅದರ ಬಗ್ಗೆ ಮಾತನಾಡಬೇಕಂತೆ.."
ಕಿವಿ ಚುರುಕಾಯಿತು ಕ್ಷಾತ್ರನಿಗೆ. "ಯಾವಾಗ ಫೋನ್ ಮಾಡಿದ್ದರು??"
"ಎರಡು ದಿನ ಆಯಿತು ಸರ್, ನಿಮಗೆ ಫೋನ್ ಮಾಡಿದ್ದೆ. ನೀವು ರೆಸ್ಪಾನ್ಸ್ ಮಾಡಲಿಲ್ಲ.."
"ನಂಬರ್ ಏನಾದರು ಕೊಟ್ಟಿದ್ದಾರಾ? ಅವರಿಗೊಂದು ಕಾಲ್ ತಗೊಳ್ಳಿ.." ಎಂದ ಕ್ಷಾತ್ರ. ಕಾನಸ್ಟೇಬಲ್ ಫೋನಾಯಿಸಿದ. ಅತ್ತ ಕಡೆಯಿಂದ ಹಲೋ ಎಂದ ಪ್ರತಾಪ್. "ಸರ್, ದಿಲ್ಲಿಯಿಂದ ನಮ್ಮ ಸಾಬ್ ಮಾತನಾಡುತ್ತಾರೆ" ಎಂದು ಕ್ಷಾತ್ರನ ಕೈಗಿತ್ತ. ಆ ಕಡೆಯಿಂದ ಪ್ರತಾಪ್ ಸಂಕ್ಷಿಪ್ತವಾಗಿ ಎಲ್ಲವನ್ನೂ ವಿವರಿಸಿದ. ತಾನು ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತಡಕಿದಂತಾಯಿತು ಕ್ಷಾತ್ರನಿಗೆ. ಪ್ರತಾಪ್ ಹೇಳುವುದನ್ನೆಲ್ಲ ಹೇಳಿ ಮುಗಿಸಿ "ನೀವು ಕೊಲೆಗಾರನನ್ನು ನೋಡಿದವರು ಯಾರಾದರೂ ಇದ್ದರೆ ಕರೆದುಕೊಂಡು ಇಲ್ಲಿಗೆ ಬನ್ನಿ. ಒಮ್ಮೆ ಆತನನ್ನು ಗುರುತಿಸಿ ಬಿಟ್ಟರೆ ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ." ಎಂದ. 
ಕ್ಷಾತ್ರನಿಗೂ ಆತ ಹೇಳುತ್ತಿರುವುದು ಸರಿ ಎನ್ನಿಸಿತು. "ಸರಿ ಪ್ರತಾಪ್, ನಾಳೆಯೇ ಬರುತ್ತಿದ್ದೇನೆ. ಯಾವುದಕ್ಕೂ ನೀನು ಅವನ ಮೇಲೆ ಕಣ್ಣಿಟ್ಟಿಡು. He is very dangerous." 
ನಿನಗಿಂತ ಚೆನ್ನಾಗಿ ನನಗೆ ಆತನ ಬಗ್ಗೆ ಗೊತ್ತು ಎಂದು ಮನಸ್ಸಿನಲ್ಲಿಯೇ ನಕ್ಕ ಪ್ರತಾಪ್. 
ಫೋನಿಟ್ಟ ಕ್ಷಾತ್ರ. ಹೇಗೂ ಸ್ವಯಂವರಾ ಆತನನ್ನು ನೋಡಿದ್ದಾಳೆ. ಅವಳಿಗೂ ವಾತಾವರಣದ ಬದಲಾವಣೆ ಆಗುತ್ತದೆ. ಅದೂ ಅಲ್ಲದೇ ಒಮ್ಮೆ ಕೊಲೆಗಾರ ಸಿಕ್ಕಿಬಿದ್ದ ಎಂದರೆ ಅವಳೂ ಮೊದಲಿನಂತಾಗಬಹುದು ಎಂದುಕೊಂಡ.
ಮುಂದಿನೆರಡು ಘಂಟೆಗಳಲ್ಲಿ ಮುಂಬೈಗೆ ಫ್ಲೈಟ್ ಟಿಕೆಟ್ ಬುಕ್ ಮಾಡಿಸಿ ಕಾನಸ್ಟೇಬಲ್ ಗಳಿಗೆ ಮಾಡುವ ಕೆಲಸಗಳನ್ನು ವಿವರಿಸಿ ನಾಲ್ಕು ದಿನಗಳಲ್ಲಿ ವಾಪಸ್ ಬರುತ್ತೇನೆಂದು ಸ್ಟೇಶನ್ ನಿಂದ ಹೊರಬಿದ್ದ ಕ್ಷಾತ್ರ. 
ಪ್ರತಾಪ್ ಹೇಳಿದ ವಿಚಾರಗಳೇ ಆತನ ತಲೆಯಲ್ಲಿ ಗಿರಾಕಿ ಹೊಡೆಯುತ್ತಿದ್ದವು. ಇದು ಸಾಧ್ಯವಾ?? ಪ್ರತಾಪ್ ಹೇಳುವುದನ್ನು ಕೇಳಿದರೆ ಕೊಲೆಗಾರ ಮಾನಸಿಕ ರೋಗಿಯಲ್ಲ. He is a brilliant character. ಪ್ರತಾಪ್ ಕೂಡ ಸಿನಿಮೀಯ ರೀತಿಯಲ್ಲಿ ಆತನನ್ನು ಟ್ರ್ಯಾಕ್ ಮಾಡಿದ್ದಾನೆ. ಯಾವುದಕ್ಕೂ ನಾಳೆ ವಿಷಯ ಬಯಲಾಗುತ್ತದೆ. ಸ್ವಯಂವರಾಳನ್ನು ಹೊರಡಲು ತಯಾರು ಮಾಡಬೇಕು. ಏನೆನ್ನುತ್ತಾಳೋ ಅವಳು ಎಂದುಕೊಳ್ಳುತ್ತಲೇ ಮನೆ ಕಡೆ ನಡೆದ ಕ್ಷಾತ್ರ. 
ಸ್ವಯಂವರಾಳನ್ನು ಒಪ್ಪಿಸಿಕೊಂಡು ಮುಂಬೈಗೆ ಬಂದಿದ್ದ ಕ್ಷಾತ್ರ. ಆತನ ಸನಿಹ ಹಾಗೂ ವಾತಾವರಣದ ಬದಲಾವಣೆಯಿಂದ ಸ್ವಯಂವರಾಳೂ ಚೇತರಿಸಿಕೊಂಡಂತೆ ಕಂಡಳು. ಮೊದಲಿನ ಹಾಗೆ ಈಗ ನಿದ್ರೆಯಲ್ಲಿ ಕನವರಿಸುತ್ತಿರಲಿಲ್ಲ. ಭಯದಿಂದ ಎದ್ದು ಕುಳಿತು ಚೀರುತ್ತಿರಲಿಲ್ಲ. ಕ್ಷಾತ್ರನೂ ಪ್ರೀತಿಯಿಂದ ಕೇಳಿದ್ದ. ಕೊಲೆಗಾರನನ್ನು ಗುರುತಿಸಬೇಕು. ಒಂದೆರಡು ಜನರ ಮೇಲೆ ಗುಮಾನಿಯಿದೆ. ನೋಡಿ ಹೌದೋ, ಅಲ್ಲವೋ ಎಂದರೆ ಸಾಕು ಎಂದಿದ್ದ. ಅವಳೂ ಸರಿಯೆಂಬಂತೆ ತಲೆಯಾಡಿಸಿದ್ದಳು. ಅವಳನ್ನು ಕರೆದುಕೊಂಡು ಪ್ರತಾಪನ ಸ್ಟೇಶನ್ ಗೆ ಬಂದಿದ್ದ ಕ್ಷಾತ್ರ.
ಶಾಸ್ತ್ರಿ ಬರುತ್ತಲೇ "He is the one.." ಎಂದು ಕೂಗಿಕೊಂಡಿದ್ದಳು. ಅದರ ಬೆನ್ನಲ್ಲಿಯೇ ಶಾಸ್ತ್ರಿಯ ಇಂಟರಾಗೇಶನ್ ಕೂಡ ಸ್ಟಾರ್ಟಾಗಿತ್ತು. ಡಾಕ್ಟರ್ ಮೊದಲೇ ಸ್ಕಿಜೋಫ್ರೇನಿಯಾ ಎಂದಿದ್ದರಿಂದ ಅವಳಿಗೆ ಕೊಲೆಗಾರನನ್ನು ಗುರುತಿಸಲು ಹೇಳುವುದೋ, ಬೇಡವೋ ಎಂದು ಭಯಗೊಂಡಿದ್ದ ಕ್ಷಾತ್ರ. ಎಲ್ಲಾದರೂ ಹೆದರಿಕೆಯಿಂದ ತಪ್ಪಾಗಿ ಗುರುತಿಸಿದರೆ ಎಂದು.. ಆದರೆ ಅವಳು ಚೇತರಿಸಿಕೊಂಡಿದ್ದನ್ನು ನೋಡಿ ಓಕೆ ಎಂದುಕೊಂಡಿದ್ದ. 
ಈಗ ಶಾಸ್ತ್ರಿ "She is sick.." ಎಂದ ಕೂಡಲೇ ತಲೆ ಒದರಿಕೊಂಡ. ಸಿಗರೇಟ್ ಸೇದಬೇಕೆಂಬ ಆತನ ಮಹತ್ತರವಾದ ಆಸೆಯನ್ನು ತಡೆ ಹಿಡಿಯಲಾಗದೆ ಹೊರ ಬಿದ್ದಿದ್ದ. ಶಾಸ್ತ್ರಿಗೆ ಹೇಗೆ ತಿಳಿಯಲು ಸಾಧ್ಯ?? ಆತ ಕೇವಲ ಎರಡು ನಿಮಿಷ ಆಕೆಯನ್ನು ನೋಡಿದ್ದಾನೆ. ಅಷ್ಟರಲ್ಲಿ ಆಕೆಗೆ ಇಂಥದ್ದೇ ಆಗಿದೆ ಎಂದು ಹೇಗೆ ತಿಳಿದುಕೊಂಡ?? 
ಈಗ ಕ್ಷಾತ್ರನಿಗೂ ಅರ್ಥವಾಯಿತು ಪ್ರತಾಪ್ ಯಾಕೆ ಈತ ಬುದ್ಧಿವಂತ ಎಂದು ಹೇಳುತ್ತಿದ್ದಾನೆ ಎಂದು . ಶಾಸ್ತ್ರಿ ಕೊಲೆಗಾರನೆ ಆಗಿದ್ದರೂ ಆತನನ್ನು ಮೆಚ್ಚಲೇ ಬೇಕು. ಹೇಗೆ ತಿಳಿದುಕೊಂಡ ಈತ ಎಂದು ಕೇಳಬೇಕೆನ್ನಿಸಿತು. ಅರ್ದ ಸುಟ್ಟಿದ್ದ ಸಿಗರೆಟ್ ಎಸೆದು ಒಳ ಬಂದ ಕ್ಷಾತ್ರ.
"ಶಾಸ್ತ್ರಿ, ನೀನು ಬುದ್ಧಿವಂತ ಎಂದು ನನಗೆ ಗೊತ್ತು. ತಪ್ಪಿಸಿಕೊಳ್ಳಲು ಬೇಕಾದ ನಾಟಕವನ್ನು ಮಾಡಬಲ್ಲೆ ನೀನು. ಆದರೂ ಕೇಳುತ್ತಿದ್ದೇನೆ. ನಿನಗೆ ಆಕೆ ಮನೋರೋಗಿಯಂತೆ ಏಕೆ ಕಂಡಳು? ನೀನು ಹೇಳುವ ಲಾಜಿಕ್ ಏನಾದರೂ ನನಗೆ ಸರಿಯಾಗಿ ಕಂಡರೆ ನಿನ್ನ ಪೂರ್ತಿ ಕಥೆ ಕೇಳಲು ನಾನು ಸಿದ್ಧ." ಎಂದ ಕ್ಷಾತ್ರ. 
ಶಾಸ್ತ್ರಿ ಅಂಥ ನೋವಿನಲ್ಲೂ ನಕ್ಕ. 
"ಕ್ಷಾತ್ರ ಅವ್ರೆ, ನೀವು ನನ್ನನ್ನು ಇಲ್ಲಿಗೆ ಕರೆಸಿದ ರೀತಿಯಲ್ಲೇ ತಿಳಿಯುತ್ತಿದೆ ನಿಮಗಿನ್ನೂ ನಾನೇ ಅಪರಾಧಿ ಹೌದೋ ಅಲ್ಲವೋ ಎಂದು ತಿಳಿದಿಲ್ಲ ಎಂದು. ಅದೂ ಅಲ್ಲದೆ ಪ್ರತಾಪ್ ನನಗೆ ಗೊತ್ತಿದ್ದವ. ಹಾಗಾಗಿ ಆ ಹುಡುಗಿಯ ಬಳಿ ನೀವು ಮೊದಲೇ ಹೇಳಿರುತ್ತೀರಾ ಹೌದೋ ಅಲ್ಲವೋ ಸುಮ್ಮನೆ ಗುರುತಿಸು ಸಾಕು. ಹೌದಾದರೆ ನಾವು ಮುಂದಿನ ಕ್ರಮ ತೆಗೆದುಕೊಳ್ಳೋಣ ಎಂದು. ನೀವು ಹಾಗೆ ಹೇಳಿದ ಮೇಲೂ ಪೋಲಿಸ್ ಸ್ಟೇಶನ್ ನಲ್ಲಿ ಇಬ್ಬರು ಇನಸ್ಪೆಕ್ಟರ್ ಗಳ ನಡುವೆ ಕುಳಿತವಳು ನನ್ನನ್ನು ನೋಡುತ್ತಲೇ ಇಷ್ಟು ಭಯ ಬಿದ್ದು ಕೂಗಬೇಕಾದದ್ದಿಲ್ಲ. ನಾನೇ ಹೌದಾದರೂ ನಿಮಗೆ ಸನ್ನೆ ಮಾಡಬಹುದಿತ್ತು. ಇಲ್ಲವೇ ನಿಧಾನವಾಗಿ ಹೇಳಬಹುದಿತ್ತು. ನಿಜ ಹೇಳಬೇಕೆಂದರೆ ಆಕೆಯನ್ನು ನಾನು ನೋಡೇ ಇಲ್ಲ. ಆಕೆಯೂ ನನ್ನನ್ನು ನೋಡಿಲ್ಲ. ಈ ಕೊಲೆಗೂ ನನಗೂ ಸಂಬಂಧವಿಲ್ಲ. 
ನೀವು ಆಕೆಗೆ ಕೊಲೆಗಾರನನ್ನು ಗುರುತಿಸು ಎಂದು ಹೇಳಿರುತ್ತೀರಿ. ಆಕೆ ಕೊಲೆ ನೋಡಿದ ದಿನದಿಂದ ಬಹಳ ಒತ್ತಡದಲ್ಲಿ ಕಳೆದಿದ್ದಾಳೆ. ಹಾಗಾಗಿ ನೀವು ಹೇಳುತ್ತಲೇ ಕೊಲೆಗಾರನೇ ಬರಬಹುದು ಎಂದು ಊಹಿಸಿ, ಊಹಿಸಿ ಭಯ ಪಟ್ಟು ಮಾನಸಿಕ ಹೊಡೆತ ತಿಂದಿದ್ದಾಳೆ. ನಾನು ಬರುತ್ತಲೇ ಆಕೆಯ ಭಯ, ಟೆನ್ಶನ್ ಹೀಗೆ ಹೊರಬಂದಿದೆ ಅಷ್ಟೆ. ನೀವು ನನಗೊಂದು ಚಾನ್ಸ್ ಕೊಡಿ. ನಾನು ಪ್ರೂವ್ ಮಾಡುತ್ತೇನೆ. ಈಗ ಸಮಾಧಾನದಿಂದ ಕೇಳಿದರೆ ಆಕೆಯೇ ಹೇಳುತ್ತಾಳೆ." ಮಾತು ನಿಲ್ಲಿಸಿದ ಶಾಸ್ತ್ರಿ.
ಆತನ ಮಾತಿನಲ್ಲಿದ್ದ ಸತ್ಯವನ್ನು ಅರಿತ ಕ್ಷಾತ್ರ ಹೇಗೂ ಸ್ವಯಂವರಾ ಇಲ್ಲೇ ಇದ್ದಾಳೆ ಮತ್ತೊಮ್ಮೆ ಆತನನ್ನು ಗುರುತಿಸಲು ಹೇಳಿದರೆ ತಪ್ಪೇನೂ ಇಲ್ಲ ಎಂದುಕೊಂಡ. ಅಷ್ಟರಲ್ಲಿ ಕ್ಷಾತ್ರ ಕೊಟ್ಟ ಏಟಿಗೆ ಶಾಸ್ತ್ರಿಯ ಗಲ್ಲ, ಮುಖ ಊದಿಕೊಂಡಿತ್ತು. ತುಟಿ ಕೂಡ ಸೀಳಿ ರಕ್ತ ಹೆಪ್ಪುಗಟ್ಟಿತ್ತು. "ಸರಿ, ಇನ್ನೊಮ್ಮೆ ನಿನ್ನನು ಗುರುತಿಸಲು ಹೇಳುತ್ತೇನೆ.." ಎಂದ ಕ್ಷಾತ್ರ.
"ನೋ... ನೀವು ಮತ್ತೆ ಗುರುತಿಸಿ ಎಂದರೆ ಆಕೆಯೂ ಅಂಜಿ ಮತ್ತೆ ಮೊದಲಿನಂತೆ ಆಗಬಹುದು. ನಾನು ಈಗ ನಿಮ್ಮ ಜೊತೆ ಹೊರಬರುತ್ತೇನೆ. ಅವಳು ನನ್ನನ್ನು ಕಂಡು ಹೇಗೆ ಪ್ರತಿಕ್ರಿಯಿಸುತ್ತಾಳೆ ನೋಡಿ. ನಾನೇ ಆಗಿದ್ದರೆ ಆಕೆ ಮೊದಲಿನಂತೆ ಪ್ರತಿಕ್ರಿಯೆ ಮಾಡುತ್ತಾಳೆ. ಇಲ್ಲದಿದ್ದರೆ ಸುಮ್ಮನಿರುತ್ತಾಳೆ. ಹೇಗೂ ನೀವಿಬ್ಬರೂ ಇನಸ್ಪೆಕ್ಟರ್ ಗಳು ಇದ್ದಾಗ ನಾನು ತಪ್ಪಿಸಿಕೊಂಡು ಹೋಗಲಂತೂ ಸಾಧ್ಯವಿಲ್ಲ." ಎಂದ ಶಾಸ್ತ್ರಿ.
ಕ್ಷಾತ್ರನಿಗೂ ಆತ ಹೇಳುತ್ತಿರುವುದು ಸರಿ ಎನ್ನಿಸಿತು. ಸರಿ ನೋಡಿಯೇ ಬಿಡೋಣ ಎಂದು ಜೊತೆ ನಡೆದ ಕ್ಷಾತ್ರ. 
ಪ್ರತಾಪ್ ಇನ್ನೂ bail ಒಳಗೆ ಮುಖ ಹಾಕಿಕೊಂಡು ಕುಳಿತಿದ್ದ. ಗಾಳಿಗುಡ್ಡನಿಗಂತೂ ಕುಳಿತಲ್ಲಿಯೇ ಚಡಪಡಿಕೆ ಶುರುವಾಗಿತ್ತು. ಇದೇನಿದು ಇಷ್ಟು ಹೊತ್ತು?? ಕುಳಿತಲ್ಲಿಯೇ ತನ್ನ ಬದಿಗಿದ್ದ ಲಾಯರ್ ಗೆ ಮೊಣಕೈ ಇಂದ ಸನ್ನೆ ಮಾಡಿದ. ಲಾಯರ್ ಬಾಯಿ ತೆರೆಯಬೇಕು ಎನ್ನುವಷ್ಟರಲ್ಲಿ ಕ್ಷಾತ್ರನ ಜೊತೆ ನಡೆಯುತ್ತ ಬಂದ ಶಾಸ್ತ್ರಿ. ಆತನಿಗಾದ ಪರಿಸ್ಥಿತಿ ನೋಡಿ ಕಳವಳಗೊಂಡ ಗಾಳಿಗುಡ್ಡ. ಅವನಿಗಿಂತ ಹೆಚ್ಚಾಗಿ ಕಂಗಾಲಾದವನು ಪ್ರತಾಪ್. ಅವನ ಕಳವಳಕ್ಕೆ ಕಾರಣ ಶಾಸ್ತ್ರಿಗೆ ಬಿದ್ದ ಏಟುಗಳಲ್ಲ. ಕ್ಷಾತ್ರ ಇತನನು ಏಕೆ ಹೊರಕರೆದುಕೊಂಡು ಬಂದ? ಅವನೇ ಕೊಲೆ ಮಾಡಿದ್ದೆಂದು ಶಾಸ್ತ್ರಿ ಒಪ್ಪಿಕೊಂಡನೇ? ಹಾಗಿದ್ದರೆ ಸೆಲ್ ನಿಂದ ಹೊರ ಕರೆತರುತ್ತಿರಲಿಲ್ಲ.ಬದಲಿಗೆ ಇನ್ನೇನೋ ನಡೆದಿದೆ. ಶಾಸ್ತ್ರಿ ಕ್ಷಾತ್ರನನ್ನು ಮಾತಿನಿಂದ ಮರುಳು ಮಾಡಿದ್ದಾನೆ. ಅದನ್ನೇ ಹೇಳಬೇಕು ಎಂದು ಎದ್ದು ನಿಲ್ಲಬೇಕು ಎನ್ನುವಷ್ಟರಲ್ಲಿ, ಕ್ಷಾತ್ರ ಸುಮನಿರುವಂತೆ ಸನ್ನೆ ಮಾಡಿದ. ಕ್ಷಾತ್ರ, ಶಾಸ್ತ್ರಿ ಇಬ್ಬರೂ ಅಲ್ಲಿಯೇ ಖಾಲಿಯಿದ್ದ ಕುರ್ಚಿಯಲ್ಲಿ ಕುಳಿತುಕೊಂಡರು. ಸ್ವಯಂವರಾ ಅಲ್ಲಿಯೇ ಪಕ್ಕದಲ್ಲಿ ಬೆಂಚಿನ ಮೇಲೆ ಕುಳಿತು ಯಾವುದೋ ಪುಸ್ತಕದಲ್ಲಿ ಮುಖ ಹುದುಗಿಸಿಕೊಂಡಿದ್ದಳು. ಆಕೆಯನ್ನು ಹೇಗಾದರೂ ಈಕಡೆ ನೋಡುವಂತೆ ಮಾಡಬೇಕು!! "ಸ್ವಯಂವರಾ ಅವ್ರೆ, ಹೊರಡೋಣವೇ?" ಎಂದ ಕ್ಷಾತ್ರ. ಆಕೆ ತಲೆಯೆತ್ತಿ ನೋಡಿದವಳು ಕ್ಷಾತ್ರನ ಬದಿಗಿದ್ದ ಶಾಸ್ತ್ರಿಯ ಮುಖವನ್ನು ಎರಡು ಕ್ಷಣ ನೋಡಿ "ಹಾ, ಸರಿ.." ಎಂದಳು. ಶಾಸ್ತ್ರಿಯೂ ಆಕೆಯ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡುತ್ತಿದ್ದ. 
"ಸರಿ, ಒಂದೈದು ನಿಮಿಷ. ಹೊರಡೋಣ.." 
ಆಕೆ ಮತ್ತೆ ಪುಸ್ತಕದೊಳಗೆ ಮುಖ ಹುದುಗಿಸಿದಳು. 
ಏನು ನಡೆಯುತ್ತಿದೆ ಅರ್ಥವಾಗಲಿಲ್ಲ ಪ್ರತಾಪನಿಗೆ. ಶಾಸ್ತ್ರಿಯ ಮುಖದಲ್ಲಿ ಮಾತ್ರ ಒಂದು ಗೆಲುವಿನ ನಗೆ ಮಿಂಚಿ ಮರೆಯಾಯಿತು. ಅವ ಎದ್ದು ಸ್ವಯಂವರಾ ಕುಳಿತ ಕಡೆ ನಡೆದ. ಕ್ಷಾತ್ರನೂ ಅಡ್ಡಿಪಡಿಸಲಿಲ್ಲ. ಉದ್ದನೆಯ ಬೆಂಚಾಗಿದ್ದರಿಂದ ಪಕ್ಕದಲ್ಲಿ ಕುಳಿತುಕೊಳ್ಳಲು ಜಾಗವಿತ್ತು. ಅಲ್ಲಿ ಕುಳಿತು "ನಮಸ್ಕಾರ ಸ್ವಯಂವರಾ ಅವ್ರೆ.." ಎಂದ ಶಾಸ್ತ್ರಿ. ಆಕೆ ಆತನ ಕಡೆ ತಿರುಗಿ ನೋಡಿ "ನಮಸ್ಕಾರ" ಎಂದಳು ಪ್ರತ್ಯುತ್ತರವಾಗಿ. ಆತನ ಮುಖದಲ್ಲಿದ್ದ ಗಾಯಗಳಿಗೆ ವಿಷಾದ ವ್ಯಕ್ತಪಡಿಸುತ್ತಿತ್ತು ಆಕೆಯ ಕಣ್ಣುಗಳು. ಶಾಸ್ತ್ರಿ ಮೊದಲು ಪೊಲೀಸ್ ಸ್ಟೇಶನ್ ಒಳಗೆ ಬಂದಾಗ ಅವನನ್ನು ನೋಡದೆಯೇ ಕೂಗಿಕೊಂಡಿದ್ದಾಳೆ ಎಂದು ಅರಿವಾಯಿತು ಅವನಿಗೆ. ಈಗ ಅವಳ ಮುಖದಲ್ಲಿ ಅಪರಿಚಿತನನ್ನು ನೋಡಿದ ಭಾವ ಎದ್ದು ಕಾಣುತ್ತಿತ್ತು.
ಒಂದು ತಲೆಬಿಸಿಯಿಂದ ತಪ್ಪಿಸಿಕೊಂಡೆ ಎಂದು ಸಮಾಧಾನವಾಯಿತು ಶಾಸ್ತ್ರಿಗೆ. ಅಲ್ಲಿಂದ ಎದ್ದು ಮೊದಲು ಕುಳಿತಲ್ಲಿಯೇ ವಾಪಸ್ ಬಂದ ಶಾಸ್ತ್ರಿ. ಇದೆಲ್ಲ ಏನು ನಡೆಯುತ್ತಿದೆ ಎಂದು ಕ್ಷಾತ್ರ ಮತ್ತು ಶಾಸ್ತ್ರಿಯ ಹೊರತಾಗಿ ಮತ್ಯಾರಿಗೂ ಅರಿವಿಲ್ಲದ ಕಾರಣ ಉಳಿದವರೆಲ್ಲ ಮುಖ ಮುಖ ನೋಡಿಕೊಳ್ಳುತ್ತಿದ್ದರು. Bail ಪೇಪರ್ ನೀಡಲು ಬಂದ ಲಾಯರ್ ಗೂ ಇಲ್ಲೇನು ನಡೆಯುತ್ತಿದೆ ಎಂದು ತಿಳಿಯಲಿಲ್ಲ. 
"ಪ್ರತಾಪ್, ಎರಡು ನಿಮಿಷ ನನ್ನ ಜೊತೆ ಬಾ" ಹೊರ ನಡೆದ ಕ್ಷಾತ್ರ, ಅವನ ಹಿಂದೆಯೇ ಹೊರ ನಡೆದ ಪ್ರತಾಪ್. ನಡೆದ ವಿಚಾರ ಹೇಳಿದ ಕ್ಷಾತ್ರ. 
"ಕ್ಷಾತ್ರ, ಆತ ತುಂಬಾ ಹುಷಾರಿ. ನನಗೇಕೋ ಅನುಮಾನ. ಆದರೂ ಸ್ವಯಂವರಾ ಈಗ ಗುರುತಿಸುತ್ತಿಲ್ಲ ಎಂದರೆ ಆ ಕೊಲೆಯಲ್ಲಿ ಅವನ ಕೈವಾಡ ಇಲ್ಲದಿರಬಹುದು. ಆದರೆ ಇಲ್ಲಿ ನಡೆದ ಕೊಲೆಯ ಬಗ್ಗೆ ವಿಚಾರಿಸಬೇಕು.." ಶಾಸ್ತ್ರಿಯ ಶರ್ಟಿನ ಮೇಲಿನ ರಕ್ತದ ಕಲೆ ನೆನಪಾಗಿ ಹೇಳಿದ ಪ್ರತಾಪ್.
ಒಂದೆರಡು ನಿಮಿಷ ಯೋಚಿಸುತ್ತ ನಿಂತ ಕ್ಷಾತ್ರ "ಸರಿ, ನಿನ್ನ ಬಳಿ ಏನೇನು ಎವಿಡೆನ್ಸ್ ಇದೆ. ನೀನೇ ಹೇಳು. ಆತ ಏನು ಹೇಳುತ್ತಾನೆ ನೋಡೋಣ. ಇಷ್ಟು ನೀರಿಗಿಳಿದ ಮೇಲೆ ಆಕಡೆಯೋ? ಈಕಡೆಯೋ? ನೋಡೇ ಬಿಡೋಣ.." ಎಂದ ಕ್ಷಾತ್ರ. 
ಪ್ರತಾಪ್ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡು ಮತ್ತೆ ಒಳಗೆ ಬಂದರು. ಶಾಸ್ತ್ರಿಯನ್ನು ಕರೆದ ಕ್ಷಾತ್ರ ನಿನ್ನ ಜೊತೆ ಸ್ವಲ್ಪ ಮಾತನಾಡಬೇಕು ಬಾ ಎಂದ. 
ಲಾಯರ್ "ಇನ್ನೇನಿದ್ದರೂ ಕೋರ್ಟಿನ ಆರ್ಡರ್ ಬಂದ ನಂತರ ಅದೆಲ್ಲ. ನನ್ನ ಕಕ್ಷಿದಾರನ ಪರಿಸ್ಥಿತಿ ನೋಡಿ. ಥರ್ಡ್ ಡಿಗ್ರಿ ಪ್ರಯೋಗವಾಗಿದೆ." ಏನೇನೋ ಹೇಳಲು ಶುರು ಮಾಡಿದ್ದ. ಶಾಸ್ತ್ರಿಯೇ ಅವನನ್ನು ತಡೆದು "ಏನೆಂದು ಕೇಳಿ ಬರುತ್ತೇನೆ. ಸ್ವಲ್ಪ ತಡೆಯಿರಿ.." ಎಂದು ಅವರಿಬ್ಬರ ಜೊತೆ ಹೊರ ನಡೆದ. 
"ನೀನ್ಯಾಕೆ ದೆಹಲಿಗೆ ಹೋಗಿದ್ದೆ?? ಶಾಸ್ತ್ರಿ??" ಕೇಳಿದ ಪ್ರತಾಪ್.
"ದೆಹಲಿಗಾ? ನಾನ್ಯವಾಗ ಹೋಗಿದ್ದೆ?" ಆಶ್ಚರ್ಯದಿಂದ ಕೇಳಿದ ಶಾಸ್ತ್ರೀ.
"ಶಾಸ್ತ್ರಿ ಸುಳ್ಳು ಹೇಳಬೇಡ. ಏರ್ಪೋರ್ಟ್ video ನನ್ನ ಬಳಿ ಇದೆ ಸತ್ಯ ಹೇಳಿ ಬಿಡು" ಎಂದ ಪ್ರತಾಪ್.
"ನೀನು ಮುಂಬೈ ಏರ್ ಪೋರ್ಟಿನಲ್ಲಿ ನಾನು ಬರುವುದನ್ನು ನೋಡಿದೆಯೋ? ಅಥವಾ ದೆಹಲಿ ಏರ್ ಪೋರ್ಟಿನಲ್ಲಿ ವಿಮಾನ ಹತ್ತುವುದನ್ನೋ? ಪ್ರತಾಪ್."
ಮುಖ ಪೆಚ್ಚಾಯಿತು ಪ್ರತಾಪ್ ಗೆ. "ಮುಂಬೈ ಏರ್ ಪೋರ್ಟಿನಲ್ಲಿ.." 
ನಸು ನಕ್ಕ ಶಾಸ್ತ್ರಿ. "ನಾನು ಬೆಂಗಳೂರಿಗೆ ಹೋಗಿದ್ದೆ ಕೆಲಸದ ನಿಮಿತ್ತ. ನಾನು ಪೂರ್ತಿ ಎರಡು ದಿನ ಅಲ್ಲೇ ಇದ್ದೆ. ಹೋಗಿ ಬಂದ ಟಿಕೆಟ್ ಎಲ್ಲವೂ ನನ್ನ ಬಳಿ ಇದೆ." ಎಂದ ಶಾಸ್ತ್ರಿ.
ಅಲ್ಲಿಗೆ ಶಾಸ್ತ್ರಿ ನಿಜವನ್ನೇ ಹೇಳುತ್ತಿದ್ದರೆ ಹುಚ್ಚಾಸ್ಪತ್ರೆಯಲ್ಲಿ ನಡೆದ ಕೊಲೆಯನ್ನು ಈತ ಮಾಡಿಲ್ಲ. ಅದರಿಂದ ಈತ ಹೊರ ಬಂದಂತೆ. ಇನ್ನುಳಿದಿರುವುದು ತನ್ನ ಜ್ಯುರಿಡಿಕ್ಷನ್ ನಲ್ಲಿ ನಡೆದ ಕೊಲೆ. ಅದನ್ನೇ ಹೇಳಿದ ಪ್ರತಾಪ್. 
"ನಿನ್ನ ಶರ್ಟಿನ ಮೇಲೆ ಇರುವ ರಕ್ತದ ಕಲೆಯೂ ಮೊನ್ನೆ ಕೊಲೆಯಾಗಿದೆಯಲ್ಲ ಅವನ ರಕ್ತವೂ ಒಂದೇ. ಇದಕ್ಕೇನು ಹೇಳುತ್ತಿಯಾ ಶಾಸ್ತ್ರಿ??"
"ನಾನು ನಿನಗೆ ಮೊದಲೇ ಹೇಳಬೇಕು ಎಂದುಕೊಂಡಿದ್ದೆ. ಯಾರೋ ಆ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ದಾರಿಯ ಮೇಲೆ ಬಿಸಾಕಿದ್ದರು. ನಾನು ಆ ದಾರಿಯ ಮೂಲಕವೇ ಬರುತ್ತಿದ್ದಾಗ ಆತ ಇನ್ನೂ ಬದುಕಿಯೇ ಇದ್ದ. ಹಾಗಾಗಿ ಹಾಸ್ಪಿಟಲ್ ಗೆ ಸೇರಿಸಿದೆ. ಅಲ್ಲಿಂದಲೇ ಪೊಲೀಸ್ ಸ್ಟೇಶನ್ ಗೆ ಕೂಡ ಫೋನ್ ಮಾಡಿದೆ. ಆದರೆ ಆ ಸಮಯದಲ್ಲಿ ನೀನೆಲ್ಲೋ ಹೊರಗೆ ಹೋಗಿದ್ದೆ. ಹಾಗೆ ಆತನನ್ನು ಆಸ್ಪತ್ರೆಗೆ ಸೇರಿಸುವಾಗ ಅಂಟಿದ ರಕ್ತವದು. ಸರೋವರಾಳಿಗೆ ಹೇಳಿದರೆ ಹೆದರುತ್ತಾಳೆ ಎಂಬ ಕಾರಣಕ್ಕೆ ಹಾಗೆ ಸುಳ್ಳು ಹೇಳಿದ್ದೆ. ಅದೇ ಇಷ್ಟೆಲ್ಲ ನಾಟಕಕ್ಕೆ ಕಾರಣವಾಯಿತು. ನಿಮ್ಮ ಕೆಲಸ ನೀವು ಮಾಡಿದ್ದೀರಿ. ಅದಕ್ಕೆ ನನಗೇನು ಬೇಸರವಿಲ್ಲ."
ಕ್ಷಾತ್ರ, ಪ್ರತಾಪ್ ಇಬ್ಬರೂ ಗೊಂದಲಕ್ಕೆ ಬಿದ್ದರು. ಈ ಶಾಸ್ತ್ರಿಯನ್ನು ನಂಬುವುದು ಹೇಗೆ? ಎಂಥ ಸಂದರ್ಭವನ್ನು ಕೂಡ ತನಗೆ ಬೇಕಾದಂತೆ ಬಳಸಿಕೊಳ್ಳಬಲ್ಲ. ಇಂಥ ಶಾಸ್ತ್ರಿಯನ್ನು ನಂಬುವುದು ಹೇಗೆ?? 
"ನೀನು ಅವನನ್ನು ಹಾಸ್ಪಿಟಲ್ ಗೆ ಸೇರಿಸಿದ್ದಕ್ಕೆ ಸಾಕ್ಷಿಯೇನು??" ಕೇಳಿದ ಪ್ರತಾಪ್.
"ಈ ಎರಡೂ ಕೊಲೆಗಳಿಗೂ ನಿನಗೂ ಎಳ್ಳಷ್ಟೂ ಸಂಬಂಧವಿಲ್ಲ ಎನ್ನುತ್ತೀಯಾ?" ಕೇಳಿದ ಕ್ಷಾತ್ರ.
"No.. ಕ್ಷಾತ್ರ.. ಅಂಥ ಕೊಲೆ ನಾನೇಕೆ ಮಾಡಲಿ?? ಅಂಥ ಅಗತ್ಯತೆ ನನಗೇನಿದೆ??" ಸ್ಪಷ್ಟವಾಗಿ ಹೇಳಿದ ಶಾಸ್ತ್ರಿ.
"ಪ್ರತಾಪ್, ಆಸ್ಪತ್ರೆಯ ವಿಡಿಯೋ ಫೋಟೇಜ್ ತರಿಸು ನೋಡೋಣ. ಈತ ನಿಜವೇ ಹೇಳುತ್ತಿದ್ದಾನೆ ಎನ್ನಿಸುತ್ತದೆ. ವಿಡಿಯೋದಲ್ಲಿ ಈತ ಹೇಳಿದ ಸನ್ನಿವೇಶವೇ ಇದ್ದರೆ bail ಅಂತೂ ಬಂದಿದೆ. bail ಮೇಲೆ ಇವನನ್ನು ಬಿಡೋಣ.." ಕ್ಷಾತ್ರ ಇದೇ ಕೊನೆಯ ನಿರ್ಧಾರ ಎಂಬಂತೆ ನುಡಿದಿದ್ದ. 
"ನೀನು ಒಳಗಿರು ಶಾಸ್ತ್ರಿ. ನಾವೀಗ ಬಂದೆವು.." ಎಂದ ಕ್ಷಾತ್ರ.
ಶಾಸ್ತ್ರಿ ಅತ್ತ ಹೋಗುತ್ತಲೇ ಪ್ರತಾಪ್ "ಕ್ಷಾತ್ರ, ನೀನು ಆತನನ್ನು ನಂಬಿ ತಪ್ಪು ಮಾಡುತ್ತಿರುವೆ. ಯಾಕೆ ಆತನೇ ಹತ್ಯಾ ಪ್ರಯತ್ನ ಮಾಡಿ ಆಸ್ಪತ್ರೆಗೆ ಸೇರಿಸಿರಬಾರದು? ಮುಂದಾಲೋಚನೆ ಮಾಡಿರಬಹುದು." ಎಂದ. 
ಈ ಸಲ ಜೋರಾಗಿ ನಕ್ಕ ಕ್ಷಾತ್ರ. "ಬಹಳ ತಲೆ ಓಡಿಸುತ್ತಿರುವೆ. ಅಷ್ಟೊಂದು ಕ್ರಿಮಿನಲ್ ಥಿಂಕಿಂಗ್ ಮಾಡದಿರು. ನೀನು ಪೋಲಿಸ್.. ಒಳ ಹೋಗಿರು ಬಂದೆ.." ಎನ್ನುತ್ತಾ ಸಿಗರೇಟ್ ತೆಗೆದು ಹಚ್ಚಿದ ಕ್ಷಾತ್ರ.
ಶಾಸ್ತ್ರಿಯ ತಲೆ ಕ್ರಿಮಿನಲ್ ಗಳಿಗಿಂತ ಹತ್ತು ಪಟ್ಟು ಹೆಚ್ಚು ಯೋಚಿಸುತ್ತದೆ ಎಂದು ಆ ಗಳಿಗೆಯಲ್ಲಿ ಕ್ಷಾತ್ರ ಅರಿಯದ ಸತ್ಯ.......
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/

No comments:

Post a Comment