Saturday, July 23, 2016

ಖತರ್ನಾಕ್ ಕಾದಂಬರಿ.. ಅಧ್ಯಾಯ 12

                                          ಖತರ್ನಾಕ್ ಕಾದಂಬರಿ.. ಅಧ್ಯಾಯ 12


ಸಂಜೆ ಐದರ ಸಮಯ. ಮನೆಯೆದುರಲ್ಲಿ ಇರುವ ಹುಲ್ಲು ಹಾಸಿನ ಮೇಲೆ ಕುಳಿತಿದ್ದ ಶಾಸ್ತ್ರಿ, ಕುತೂಹಲದಿಂದ ಅವನೆದುರು ಕುಳಿತು ನೋಡುತ್ತಿದ್ದಳು ಸರೋವರಾ. ಎರಡು ದಿನದಲ್ಲಿ ಲಕ್ಷ ಸಂಪಾದಿಸುತ್ತೇನೆ ಎಂದು ಹೋದ ಶಾಸ್ತ್ರಿ 48 ಗಂಟೆಗಳ ನಂತರ ಬಂದು ಆಕೆಯ ಕೈಯಲ್ಲಿ ಒಂದು ಲಕ್ಷದ ನೋಟಿನ ಕಂತೆಯಿಟ್ಟಿದ್ದ. ಜೊತೆಗೆ ಆಕೆಯಿಂದ ತೆಗೆದುಕೊಂಡಿದ್ದ ಚಿನ್ನದ ಸರವನ್ನು ಕೂಡ ವಾಪಾಸ್ ಕೊಟ್ಟಿದ್ದ. ಅಷ್ಟೇ ಅಲ್ಲದೇ "ಕಣ್ಣು ಮುಚ್ಚು ಸರೂ..." ಎನ್ನುತ್ತಾ ಆಕೆಯ ಹಿಂದೆ ಸೇರಿಕೊಂಡು ಕೊರಳಿಗೆ ಅಂದವಾದ ಒಂದು ನೆಕ್ಲೆಸ್ ತೊಡಿಸಿ "ಈಗ ಕಣ್ಣು ಬಿಡು" ಎಂದು ಮುಗುಳ್ನಕ್ಕಿದ್ದ. 
ತನ್ನ ಇರುವನ್ನು ತಾನೇ ನಂಬದಾಗಿದ್ದಳು ಸರೋವರಾ. ಶಾಸ್ತ್ರಿ ತುಂಬಾನೇ ಬುದ್ಧಿವಂತ ಎಂದು ಗೊತ್ತವಳಿಗೆ. ಆದರೆ ಎರಡು ದಿನದಲ್ಲಿ ಏನೂ ಬಂಡವಾಳವಿಲ್ಲದೇ ಒಂದು ಲಕ್ಷ, ಜೊತೆಗೆ ಚಿನ್ನದ ನೆಕ್ಲೆಸ್. ನೆಕ್ಲೆಸ್ ಮುಟ್ಟಿನೋಡಿಕೊಂಡಳು. ಡಿಸೈನ್ ಅವಳಿಗೆ ಚೆಂದವಾಗಿ ಒಪ್ಪುತ್ತದೆ. ಆದರೆ ವಿಷಯ ಅದಲ್ಲ ಈಗ. ಈ ನೆಕ್ಲೆಸ್ ಗೆ ಏನೆಂದರೂ ಎರಡು ಲಕ್ಷ ಇದ್ದೇ ಇದೆ. ಎರಡು ದಿನದಲ್ಲಿ ಏನೂ ಬಂಡವಾಳವಿಲ್ಲದೇ ಮೂರು ನಾಲ್ಕು ಲಕ್ಷ ಸಂಪಾದಿಸಲು ಹೇಗೆ ಸಾಧ್ಯ?
ತನ್ನ ಸರವನ್ನು ತೆಗೆದುಕೊಂಡು ಹೋದವನು ಹಾಗೆಯೇ ವಾಪಸ್ ತಂದಿದ್ದಾನೆ. ಅಂದರೆ ಅದನ್ನು ಮಾರಿಲ್ಲ. ಅಥವಾ ಮಾರಿ ಅದರಲ್ಲಿ ಬಂದ ದುಡ್ಡಿನಲ್ಲಿ ಬಂಡವಾಳ ಹಾಕಿ ದುಡ್ಡು ಸಂಪಾದಿಸಿದನೆ? ತನ್ನ ಸರ ಅಡವಿಟ್ಟರೂ ಸಿಗುವುದು ಎಷ್ಟು? ಒಂದು ಇಪ್ಪತ್ತು ಸಾವಿರ. ಆ ಇಪ್ಪತ್ತು ಸಾವಿರವನ್ನು ಯಾವುದೇ ರೀತಿಯಲ್ಲಿ ತೊಡಗಿಸಿದರೂ ಎರಡು ದಿನಕ್ಕೆ ಇಷ್ಟು ದುಡಿಯುವುದು ಕಷ್ಟವೇ!! ಹಾಗಾದರೆ ಏನು ಮಾಡಿ ಶಾಸ್ತ್ರಿ ಹಣ ಸಂಪಾದಿಸಿದ? ಅರ್ಥವಾಗಲಿಲ್ಲ ಅವಳಿಗೆ. ಎಷ್ಟು ಯೋಚಿಸಿದರೂ ಕಳ್ಳತನ ಅಥವಾ ಮೋಸ ಮಾಡದೆ ಹೀಗೆ ಎರಡು ದಿನದಲ್ಲಿ ಇಷ್ಟು ದುಡ್ಡು ಸಂಪಾದಿಸಲು ಸಾಧ್ಯವೇ ಇಲ್ಲ ಎಂಬ ಒಮ್ಮತಕ್ಕೆ ಬಂದು ನಿಂತಳು. 
"ಶಾಸ್ತ್ರಿ, ನನ್ನ ನಿನ್ನ ಪಂದ್ಯದ ಪ್ರಕಾರ ಒಂದು ಲಕ್ಷ ದುಡಿಯಬೇಕು, ಆದರೆ ಯಾರಿಗೂ ಮೋಸ ಮಾಡದೆ, ಕಳ್ಳತನ ಮಾಡದೆ ಸಂಪಾದಿಸಬೇಕು. ಈಗ ಹೇಳು, ಇದನ್ನ ಹೇಗೆ ಸಂಪಾದಿಸಿದೆ? " ಎರಡು ದಿನದಿಂದ ಕೇಳುತ್ತಲೇ ಇದ್ದಳು. ಶಾಸ್ತ್ರಿ ನಕ್ಕು ಸುಮ್ಮನಾಗುತ್ತಿದ್ದ. ತನ್ನ ಚಡಪಡಿಕೆಯನ್ನು ಹೇಗೋ ಒಂದು ದಿನ ತಡೆದುಕೊಂಡ ಸರೋವರಾ ಮತ್ತೆ ಮತ್ತೆ ಕೇಳಿದ್ದಳು. ಆದರೂ ಶಾಸ್ತ್ರಿ ಹೇಳದಿದ್ದಾಗ ಈತ ಮೋಸ ಮಾಡಿಯೇ ಸಂಪಾದಿಸಿದ್ದಾನೆ ಎಂಬ ದೃಢ ನಿರ್ಧಾರಕ್ಕೂ ಬಂದಿದ್ದಳು. 
ಇಂದೂ ಸಹ ನಿಜ ಹೇಳುವಂತೆ ಶಾಸ್ತ್ರಿಯ ಬೆನ್ನು ಬಿದ್ದಿದ್ದಳು. 
"ನಾನು ಒಂದು ಲಕ್ಷ ಸಂಪಾದಿಸಿ ಬಂದರೆ ನಿನ್ನ ಜೀವನದಲ್ಲಿ ಯಾರಿಗೂ ಕೊಡದಿರುವುದನ್ನು ಕೊಡುವೆ ಎಂದಿದ್ದೆ. ಕೊಡಬಲ್ಲೆಯಾ?" ನಗುತ್ತ ಕೇಳಿದ ಶಾಸ್ತ್ರಿ. ಆತನ ಮುಖದಲ್ಲಿ ತುಂಟ ನಗುವಿತ್ತು. ಸರೋವರಾ ಎಂದರೆ ಆತನಿಗೆ ಎಲ್ಲಿಲ್ಲದ ಆತ್ಮೀಯತೆ. ಪ್ರೀತಿಸುವುದಕ್ಕಿಂತ ಹೆಚ್ಚಾಗಿ ಅವಳೆಂದರೆ ಆತನಿಗೆ ಸಮಾಧಾನ. ಅವಳು ಬಳಿ ಇದ್ದಾಳೆಂದರೆ ಆತ ಎಷ್ಟೇ ಕೋಪದಲ್ಲಿದ್ದರೂ, ಬೇಸರದಲ್ಲಿದ್ದರೂ ಸರಿ ಹೋಗಿಬಿಡುತ್ತಾನೆ. ಮನಸ್ಸು ಎಷ್ಟೇ ಮುದುಡಿದ್ದರೂ ತುಂಟತನ ಮಗುವಾಗಿ ಅರಳಿ ಬಿಡುತ್ತದೆ ಅವನಲ್ಲಿ. ಅವಳನ್ನು ಕಾಡಿಸುವುದು, ಆಕೆಗೆ ಸಿಟ್ಟು ಬರುವಂತೆ ಮಾಡಿ, ನಂತರ ಸಮಾಧಾನಿಸುವುದು ಎಲ್ಲವೂ ಅವನಿಗೆ ಇಷ್ಟವೇ. 
ಸರೋವರಾಳಿಗೆ ಸತ್ಯ ತಿಳಿಯಲೇ ಬೇಕಿತ್ತು. "ನಾನು ನೀನು ಕೇಳುವುದನ್ನು ಕೊಡಬಲ್ಲೆ. ಮೊದಲು ನೀನು ಮೋಸ ಮಾಡಿಲ್ಲ ಎನ್ನುವುದು ನನಗೆ ತಿಳಿಯಬೇಕು. ಆಮೇಲೆ ನೀನು ಕೇಳಿದ್ದು ಕೊಡುತ್ತೇನೆ" ಎಂದಳು ಸರೋವರಾ. 
"ಸರೋವರಾ, ಯೋಚಿಸಿ ಹೇಳು. ಸಂಜೆ ಮುಗಿದು ಕತ್ತಲು ಅರಳಿ ನಿಲ್ಲುವ ಹೊತ್ತಿನಲ್ಲಿ, ಹರೆಯ ತುಂಬಿದ ಹುಡುಗನೊಬ್ಬ ನಿನ್ನಂತ ಸುಂದರ ಕಲಾ ತಪಸ್ವಿಯ ಬಳಿ ಏನನ್ನು ಬೇಕಾದರೂ ಕೇಳಬಹುದು" ಎಂದ ಮತ್ತೆ ತುಂಟತನದಿಂದ ನಗುತ್ತಾ.
ಸರೋವರಾ ನಾಚಿದಳು. ಅವಳ ಇರುವಿಕೆಯೇ ಹಾಗೇ. ಪುಟ್ಟ ಪುಟ್ಟ ವಿಷಯಗಳಿಗೂ ಅವಳು ಸ್ಪಂದಿಸುತ್ತಾಳೆ. ಸಣ್ಣ ಸಣ್ಣ Double Meaning ಮಾತುಗಳಿಗೂ ಆಕೆ ನಾಚಿ ನೀರಾಗುತ್ತಾಳೆ. ಅವಳ ವಯಸ್ಸಿನ ಹೆಣ್ಣಿಗೆ ಅದಾಗಲೇ ಇಂತಹ Stage ಗಳನ್ನೆಲ್ಲ ದಾಟಿ ಮನಸ್ಸು ಪಕ್ವವಾಗಿರುತ್ತದೆ. ಅವಳೂ ಪಕ್ವಗೊಂಡಿದ್ದಾಳೆ. ಆದರೆ ಅವಳಲ್ಲಿಯ ಮುಗ್ಧತೆ ಹಾಗೆಯೇ ಉಳಿದುಕೊಂಡಿತ್ತು. ಅದನ್ನೇ ಆಸ್ವಾದಿಸುತ್ತಾನೆ ಶಾಸ್ತ್ರಿ. 
ಅವಳು ನಾಚಿಕೊಂಡರೆ ಮತ್ತೂ ಸುಂದರವಾಗಿ ಕಂಡಳು. 
"ನೀನು ಮೊದಲು ಹೇಳು, ನೀನು ಮೋಸ ಮಾಡದೆ ದುಡಿದಿದ್ದೇ ಹೌದಾದರೆ ನಾನು ಏನನ್ನೂ ಕೊಡಲು ರೆಡಿ. ಎರಡು ದಿನದಲ್ಲಿ ನಾಲ್ಕು ಲಕ್ಷವನ್ನು ಮಾನವಾಗಿ ಗಳಿಸಿದ್ದರೆ ನಿನಗೆ ನಾನು ಏನನ್ನೇ ಕೊಟ್ಟರೂ ನಾನು ಕಳೆದುಕೊಳ್ಳುವುದು ಏನೂ ಇಲ್ಲ" ಎಂದಳು ಅವಳೂ ಅಷ್ಟೇ ದೃಢವಾಗಿ. 
ಅಷ್ಟರಲ್ಲಿ ಅಲ್ಲಿಯೇ ಪಕ್ಕದಲ್ಲಿದ್ದ ರಸ್ತೆಯಲ್ಲಿ ದಿಢೀರ್ ಬ್ರೇಕ್ ನೊಂದಿಗೆ ನಿಂತಿತೊಂದು ಪೋಲಿಸ್ ಜೀಪ್. ತಮ್ಮದೇ ಲೋಕದಲ್ಲಿದ್ದ ಇಬ್ಬರೂ ಅತ್ತ ತಿರುಗಿ ನೋಡಿದರು. ಪೋಲಿಸ್ ಜೀಪ್ ನೋಡುತ್ತಲೇ ಸರೋವರಾಳ ಮುಖ ಕಪ್ಪಾಗಿ, ಹಣೆಯಲ್ಲಿ ಅಂಗೈಯಲ್ಲಿ ಬೆವರು ಉದಯಿಸಿತು. ಅದನ್ನು ಗಮನಿಸಿಯೂ ಗಮನಿಸದಂತೆ ಮೇಲೆದ್ದ ಶಾಸ್ತ್ರಿ ಹುಸಿನಗೆಯೊಂದಿಗೆ.
ಜೀಪಿನಿಂದ ಪ್ರತಾಪ್ ಇಳಿದು ಶಾಸ್ತ್ರಿಯ ಕಡೆಗೇ ನಡೆದು ಬಂದ. ಈಗಂತೂ ಸರೋವರಾಳ ಕಣ್ಣಿನ ಕೊಳ ತುಂಬಿ ಬಂತು. 
ಶಾಸ್ತ್ರಿ ಪ್ರತಾಪ್ ಕಡೆ ನಡೆಯುತ್ತಿದ್ದರೆ ಸರೋವರಾ ಅವರ ವಿರುದ್ಧ ದಿಕ್ಕಿಗೆ ಮುಖ ಮಾಡಿ ನಿಂತಳು. ಪ್ರತಾಪ್ ಶಾಸ್ತ್ರಿಯ ಹತ್ತಿರ ಬಂದವನೇ "Mr. ಶಾಸ್ತ್ರಿ, You are under arrest" ಎಂದ ದರ್ಪದಿಂದ. 
"ಕಾರಣ ಕೇಳಬಹುದೇ ಸಬ್ ಇನಸ್ಪೆಕ್ಟರ್ ಪ್ರತಾಪ್ ಅವರೇ?" ಎಂದು ಅಷ್ಟೇ ತಣ್ಣನೆ ಸ್ವರದಲ್ಲಿ ನುಡಿದ ಶಾಸ್ತ್ರಿ. 
"ಸಬ್ ಇನಸ್ಪೆಕ್ಟರ್ ಒಬ್ಬನನ್ನು ಒಳಗೆ ಹಾಕಿಕೊಂಡು ಇಬ್ಬರು ರೌಡಿಗಳಿಗೆ ಗುಂಡು ಹೊಡೆಸಿದ್ದೀಯಾ, ಮತ್ತಿಬ್ಬರು ಜೈಲು ಪಾಲಾಗುವಂತೆ ಮಾಡಿದ್ದೀಯಾ. ಈಗ ಆ ಸಬ್ ಇನಸ್ಪೆಕ್ಟರ್ ಇನಸ್ಪೆಕ್ಟರ್ ಆಗಿ ಪ್ರಮೋಷನ್ ಕೂಡ ಪಡೆದಿದ್ದಾನೆ.." ಎಂದು ಸೀರಿಯಸ್ ಆಗಿ ಶಾಸ್ತ್ರಿಯ ಮುಖ ನೋಡುತ್ತಿದ್ದವನು ಗಹಗಹಿಸಿ ನಕ್ಕ ಒಮ್ಮೆಲೇ. ಅವನ ನಗುವಿನ ಜೊತೆ ತನ್ನ ನಗುವನ್ನು ಸೇರಿಸಿದ ಶಾಸ್ತ್ರಿ ಪ್ರತಾಪನ ಕೈ ಕುಲುಕುತ್ತಾ "ಕಂಗ್ರಾಟ್ಸ್" ಎಂದ.
"ನಿನ್ನ ಉಪಾಯ ಫಲಿಸಿತು ಶಾಸ್ತ್ರಿ. ನಿನ್ನಂತ ಬುದ್ಧಿವಂತನನ್ನು ಕಂಡಿರುವುದು ಇದೇ ಮೊದಲು. ನೀನೊಬ್ಬ ಇಂದು ಬೆಳಿಗ್ಗೆ ಬರದೇ ಇದ್ದರೆ ಏನಾಗುತ್ತಿತ್ತೋ?" ಎಂದ ನಗುತ್ತಲೇ. 
"ನನ್ನದೇನಿದೆ ಪ್ರತಾಪ್? ತಪ್ಪಿತಸ್ಥರಿಗೆ ಶಿಕ್ಷೆ ಆಯಿತಲ್ಲ, ಅದುವೇ ಮುಖ್ಯ. ನನಗೂ ಖುಷಿಯಾಯಿತು" ಎಂದ ಶಾಸ್ತ್ರಿ.
"ಅದೆಲ್ಲ ಸರಿ, ಈಗ ನಿನ್ನ ಮೇಲೆ ಮೋಸದ ಆರೋಪವಿದೆಯಲ್ಲ, ಹೇಳು ಏನು ಮೋಸ ಮಾಡಿದೆ? ನಿನ್ನ ಬಾಯಿಯಿಂದಲೇ ಕೇಳಿ ಬಿಡುತ್ತೇನೆ." ಎಂದ ಪ್ರತಾಪ್. 
ಇವರ ಮಧ್ಯೆ ಏನು ಮಾತುಕತೆ ನಡೆಯುತ್ತಿದೆ ಎಂಬ ಸಣ್ಣ ಕಲ್ಪನೆಯೂ ಇಲ್ಲದ ಸರೋವರಾ ಕರ್ಚೀಪಿನಿಂದ ಕಣ್ಣು ಒರೆಸಿಕೊಳ್ಳುತ್ತಾ ಅತ್ತ ಕಡೆ ಮುಖ ಮಾಡಿ ನಿಂತಿದ್ದಳು. 
"ಸರೋವರಾ.. ಸರೋವರಾ.." ಕೂಗಿದ ಶಾಸ್ತ್ರಿ. ಶಾಸ್ತ್ರಿಯ ಧ್ವನಿ ಕೇಳುತ್ತಲೇ ಕಣ್ಣು ಮೂಗು ಒರೆಸಿಕೊಂಡು ಅವರತ್ತ ಬಂದಳು ಸರೋವರಾ. ಅತ್ತಿದ್ದರಿಂದ ಅವಳ ಕಣ್ಣು, ಮೂಗು, ಮುಖ ಎಲ್ಲವೂ ಕೆಂಪಾಗಿದ್ದವು. ಬಿಕ್ಕಿ ಬರುತ್ತಿದ್ದ ಅಳುವನ್ನು ತುಂಬಾ ಪ್ರಯತ್ನಪೂರ್ವಕವಾಗಿ ತಡೆಹಿಡಿದಿದ್ದಳು ಸರೋವರಾ. ಅವಳು ಹತ್ತಿರ ಬರುತ್ತಲೇ ಅವಳ ಮುಖ ನೋಡಿದ ಪ್ರತಾಪನ ಹುಬ್ಬುಗಳು ಮೇಲೇರಿದವು. ಶಾಸ್ತ್ರಿಯ ಹಗೆ ಎಂತಹದು ಎಂಬುದನ್ನು ತನಗೆ ಕೊಟ್ಟ ಉಪಾಯದಲ್ಲೇ ಗ್ರಹಿಸಿಬಿಟ್ಟಿದ್ದ. ಆತನಿಗೆ ಅಳುತ್ತಿರುವ ಸರೋವರಾಳನ್ನು ಕಂಡು ಅನುಮಾನ ಮೂಡಿತು. ಶಾಸ್ತ್ರಿಯ ಮುಖದಲ್ಲಿ ಮಾತ್ರ ನಗು ಇತ್ತು. "ಇವರು!?" ಎಂದ ಸಂದಿಗ್ಧದಲ್ಲೇ ಪ್ರತಾಪ. 
"ನನ್ನ ಭಾವಿ ಪತ್ನಿ, ಸರೋವರಾ.." ಎನ್ನುತ್ತಾ ನಕ್ಕ ಶಾಸ್ತ್ರಿ. ಮತ್ತಷ್ಟು ಆಶ್ಚರ್ಯಗೊಂಡ ಪ್ರತಾಪ್. 
"ನೋಡು ಪ್ರತಾಪ್, ನೀನು ಈ ಹೊತ್ತಲ್ಲಿ ಬಂದಿರುವುದು ಚೆನ್ನಾಗಿಯೇ ಆಯಿತು. ನಾನು ಮಾಡಿರುವ ಫ್ರಾಡ್ ಏನು ಎಂದು ಕೇಳಿದೆಯಲ್ಲ? ಈಗ ನಾನು ಅದೇನೆಂದು, ಅದರ ಹಿನ್ನೆಲೆಯೇನೆಂದು ಹೇಳುತ್ತೇನೆ. ನಾನು ಹೇಳಿ ಮುಗಿಸಿದ ನಂತರ ನಾನು ಬಿಸಿನೆಸ್ ಮಾಡಿದೆನೋ? ಮೋಸ ಮಾಡಿದೆನೋ? ನೀನೇ ನಿರ್ಧಾರ ಮಾಡು. ಅದರಿಂದ ನನ್ನ ಜೀವನದಲ್ಲಿ ನಾನು ಬಹು ಮುಖ್ಯವಾದುದನ್ನು ಪಡೆದುಕೊಳ್ಳುವವನಿದ್ದೇನೆ. ಇನ್ನು ಇವಳು ನೀನು ನನ್ನನ್ನು ಹಿಡಿದುಕೊಂಡು ಹೋಗಲು ಬಂದಿರುವೆಯೆಂದು ಅಳುತ್ತಿದ್ದಾಳೆ ಅಷ್ಟೆ" ಎಂದು ವಾತಾವರಣ ತಿಳಿಗೊಳಿಸಿದ. ಅವಳು ಅಳುತ್ತಿರುವುದಕ್ಕು ಶಾಸ್ತ್ರಿಯ ಹಗೆಗೂ ಸಂಭಂದವಿಲ್ಲ ಎಂದು ತಿಳಿದ ಮೇಲೆ ಸಮದಾನಗೊಂಡ ಪ್ರತಾಪ್. 
ಶಾಸ್ತ್ರಿ ಬಂದಿರುವ ಪೋಲಿಸನ ಬಳಿ ಇಷ್ಟು ಆತ್ಮೀಯವಾಗಿ ಮಾತನಾಡುತ್ತಿರುವುದು ಮತ್ತು ಶಾಸ್ತ್ರಿ ಹೇಗೆ ಹಣ ಸಂಪಾದಿಸಿದ ಎಂಬುದು ಈಗ ತಿಳಿಯುವುದು ಎಂದು ಮನಗಂಡ ಸರೋವರಾ ಕೂಡ, ತನ್ನ ಕಾಲ್ಪನಿಕ ಕಟ್ಟು ಕಥೆಗಳಿಗೆ ತಾನೇ ಮನಸ್ಸಾರೆ ನಕ್ಕು "ನಮಸ್ಕಾರ ಪ್ರತಾಪ್ ಅವರೇ" ಎಂದಳು.
ತಿಳಿಗೊ0ಡ ವಾತಾವರಣದಲ್ಲಿ ಶಾಸ್ತ್ರಿ ಹೇಳತೊಡಗಿದ. ತಾನು ಸರೋವರಾಳ ಹತ್ತಿರ ಪಂದ್ಯ ಕಟ್ಟಿದ್ದು, ನಂತರ ಪೇಪರಿನಲ್ಲಿ ಬಿಳಿ ಬಿಳಿ ಕೋಳಿ ಮೊಟ್ಟೆ ಕಂಪನಿಯ ಹಾನಿಯ ಬಗ್ಗೆ ಓದಿದ್ದು, ಮರುದಿನ ಷೇರು ಮಾರುಕಟ್ಟೆಯ ಬಳಿ ಕಂಡ ಗಾಳಿಗುಡ್ದ, ಅವನಿಗಾದ ಅನ್ಯಾಯ, ಅವನನ್ನು ಸ್ನೇಹಿತನನ್ನಾಗಿ ಮಾಡಿಕೊಂಡ ರೀತಿ, ಅವನ ಬಳಿಯಿದ್ದ ಕರ್ನಾಟಕ ಅಕ್ಕಿ ಕಂಪನಿಯ ಷೇರು ಮಾರಿಸಿದ್ದು, ನಂತರ BBKM ಕಂಪನಿಯ ಷೇರು ಕೊಂಡಿದ್ದು.. ಎಲ್ಲವನ್ನೂ ರಸವತ್ತಾಗಿ ಹೇಳುತ್ತಾ ಹೋದ ಶಾಸ್ತ್ರಿ. 
ಇಲ್ಲಿಯವರೆಗೂ ಶಾಸ್ತ್ರಿ ಹೇಳುವುದನ್ನು ಆಲಿಸಿದ ಪ್ರತಾಪ್ "ಇದರಲ್ಲಿ ಮೋಸವೇನು ಕಂಡುಬರುತ್ತಿಲ್ಲ. ಆದರೆ ಕುಸಿದು ಬಿದ್ದ ಷೇರನ್ನು ಖರೀದಿಸಿ ಆತನಿಗೆ ಹೇಗೆ ಲಾಭ ತಂದುಕೊಟ್ಟೆ? ಅರ್ಥವಾಗಲಿಲ್ಲ" ಎಂದ ಕುತೂಹಲದಿಂದ. 
ಶಾಸ್ತ್ರಿ ಸರೋವರಾಳ ಮುಖ ನೋಡಿ ಮುಂದುವರೆಸಿದ. "ಗಾಳಿಗುಡ್ದನಿಗೆ ಮೋಸ ಮಾಡಿದ್ದನಲ್ಲ ಬ್ರೋಕರ್, ಅವನ ಜೊತೆ ನಾನು ಬಿಸಿನೆಸ್ ಮಾಡಿದೆ" ಎಂದ ಶಾಸ್ತ್ರಿ. 
ಬಿಸಿನೆಸ್ ಎಂಬ ಶಬ್ದ ಬರುತ್ತಲೇ ಶಾಸ್ತ್ರಿ ತನ್ನ ಚಾಲಾಕಿತನ ತೋರಿಸಿದ್ದಾನೆ ಎಂದು ಕಿವಿ ನಿಮಿರಿಸಿದಳು ಸರೋವರಾ. 
ಶಾಸ್ತ್ರಿ ಮತ್ತೆ ಮುಂದುವರೆಸಿದ. ತಾನು ಪೇಪರಿನಲ್ಲಿ ಜಾಹೀರಾತು ನೀಡಿದ್ದು, ನಂತರ ಅದೇ ಪೇಪರ್ ಅನ್ನು ಬ್ರೋಕರ್ ಗೆ ಮಾರಿಸಿದ್ದು, ಷೇರುಗಳು ಬೇಕೆಂದು ಬೇರೆ ಬೇರೆ ನಂಬರ್ ಗಳಿಂದ ಫೋನ್ ಮಾಡಿಸಿ ಬ್ರೋಕರ್ ನನ್ನು ಗುಂಡಿಗೆ ಬೀಳಿಸಿದ್ದು, ತೆಗೆದುಕೊಂಡವುಗಳಲ್ಲಿ ಒಂದು ಷೇರು ಬಿಟ್ಟು ಉಳಿದವೆಲ್ಲವುಗಳನ್ನು ಬ್ರೋಕರ್ ಗೆ ಮಾರಿಸಿದ್ದು.. ಎಲ್ಲವನ್ನೂ ಹೇಳಿಬಿಟ್ಟ ಶಾಸ್ತ್ರಿ. 
ಸರೋವರಾಳಿಗಂತೂ ಖುಷಿ. ಇದು ಫ್ರಾಡ್, ತಾನೇ ಗೆದ್ದೇ ಎಂದುಕೊಂಡಳು ಮನಸ್ಸಿನಲ್ಲಿ. ಈಗ ಶಾಸ್ತ್ರಿಯನ್ನು ಪ್ರತಾಪ್ ಹಿಡಿದುಕೊಂಡು ಹೋಗಿ ಬಿಟ್ಟರೆ ಎಂಬ ಸಣ್ಣ ಸಂಶಯವೂ ಮೂಡಿ ಅಂಗೈ ಬೆವರಿತು ಕೂಡ.
ಪ್ರತಾಪ್ ಮಾತ್ರ ಶಾಸ್ತ್ರಿಯ ಮಾತಿನಿಂದ ಅವಾಕ್ಕಾಗಿ ನಿಂತಿದ್ದ. ಒಬ್ಬನನ್ನು ಮೋಸಗೊಳಿಸುವುದು ಇಷ್ಟು ಸುಲಭವಾ ಎನ್ನಿಸಿಬಿಟ್ಟಿತವನಿಗೆ. ಶಾಸ್ತ್ರಿ ಮಾತ್ರ ಅದನ್ನು ಬಿಸಿನೆಸ್ ಎಂದೇ ಹೇಳುತ್ತಿದ್ದ. ಈಗ ತಾನೇನು ಮಾಡಬೇಕು? ಶಾಸ್ತ್ರಿಯನ್ನು ಬಂಧಿಸಬೇಕಾ? ಕೇವಲ ತನ್ನ ಸಂಗಾತಿಯ ಜೊತೆ ಪಂದ್ಯ ಗೆಲ್ಲಲು ಇಷ್ಟು ದೊಡ್ಡ ಗೇಮ್ ಪ್ಲ್ಯಾನ್ ಮಾಡಬಲ್ಲ ಶಾಸ್ತ್ರಿ ಮನಸ್ಸು ಮಾಡಿದರೆ ಇನ್ನೆಂತಹ ಹಗರಣಗಳನ್ನು ಸೃಷ್ಟಿಸಿ ಕೋಟಿಗಳನ್ನು ದುಡಿಯಬಲ್ಲ. ಆತನ ಎಡಗಣ್ಣು ಅದುರುತ್ತಿತ್ತು. 
"ಇದು ಫ್ರಾಡ್ ಅಲ್ಲ ಎಂದು ಹೇಗೆ ಹೇಳುತ್ತಿಯಾ ಶಾಸ್ತ್ರಿ?" ಕೇಳಿದ ಪ್ರತಾಪ್. ತನ್ನ ಜಾಲಿ ಮೂಡಿನಿಂದ ಸೀರಿಯಸ್ ಆಗಿದ್ದ ಪ್ರತಾಪ್. ಶಾಸ್ತ್ರಿ ಅದನ್ನು ಗಮನಿಸಿದ್ದ ಕೂಡಾ. 
ಶಾಸ್ತ್ರಿ ಶಾಸ್ತ್ರಿಯೇ. ಇಂತಹ ಹತ್ತು ಪ್ರತಾಪ್ ಬಂದರೂ, ಸಿಟ್ಟಿನಿಂದ ಎದುರು ನಿಂತಿದ್ದರೂ, ಸಂಯಮದಲ್ಲಿರುವ ವ್ಯಕ್ತಿ. ಇದಕ್ಕೆ ಶಾಸ್ತ್ರಿ ಹೇಗೆ ಉತ್ತರಿಸಬಲ್ಲ ಎಂದು ನೋಡುತ್ತ ನಿಂತಿದ್ದಳು ಸರೋವರಾ!!
ಶಾಸ್ತ್ರಿ ಶಾಂತವಾಗಿಯೇ ಮಾತು ಪ್ರಾರಂಭಿಸಿದ. ಮುಂದುವರೆದಂತೆ ಆತನ ಮಾತು ಲಹರಿಯಾಯಿತು. ನಂತರದಲ್ಲಿ ಅದು ತುಂಬಿ ಹರಿಯುವ ನದಿಯಂತೆ ಅಲೆ ಅಲೆಯಾಗಿ, ಸುಳಿ ಸುಳಿಯಾಗಿ, ಸರೋವರಾ ಮತ್ತು ಪ್ರತಾಪನನ್ನು ತನ್ನ ಸೆಳವಿನಲ್ಲಿ ಎಳೆದು ಇಂಚಿಂಚಾಗಿ ಮುಳುಗಿಸತೊಡಗಿತು. 
"ಪ್ರತಾಪ್! ನಾನು ಮಾಡಿದ್ದು ಬಿಸಿನೆಸ್. ಯಾಕೆ ಹೇಳು? ಈ ಷೇರು ಮಾರುಕಟ್ಟೆ ನಡೆಯುವುದು ಹೀಗೆಯೇ. ದಿನವೂ ಒಂದಿಲ್ಲೊಂದು ಕಂಪನಿಗಳ ಷೇರ್ ವ್ಯಾಲ್ಯೂ ಪೇಪರಿನಲ್ಲಿ ಬರುತ್ತಿರುತ್ತಲ್ಲ, ಅದೆಲ್ಲವೂ ನಿಜವಾ!? ಅಲ್ಲ ತಾನೇ? ದೊಡ್ಡ ಗ್ಯಾಂಬಲ್ ಇದು. ಸರ್ಕಾರಕ್ಕೂ ಗೊತ್ತು. ಸರ್ಕಾರವೇ ಹೆಚ್ಚು ಹೆಚ್ಚು ಹಣ ಷೇರು ಮಾರುಕಟ್ಟೆಯಲ್ಲಿ ತೊಡಗಿಸಲು ಹುರಿದುಂಬಿಸುತ್ತದೆ. ಅದಕ್ಕಾಗಿ ಟ್ಯಾಕ್ಸ್ ದೋಚುತ್ತದೆ. ಹಾಗೆ ದೋಚಿದ ದುಡ್ಡನ್ನು ದೇಶದ ಅಭಿವೃದ್ಧಿಗೆ ಉಪಯೋಗಿಸುತ್ತಿದ್ದಾರಾ? ಇಲ್ಲ. ಎಲ್ಲೆಂದರಲ್ಲಿ ಲೂಟಿ. ಪಂಚಾಯತಿ ಅಧ್ಯಕ್ಷನಾದವನು ಬೆಂಝ್ ಮೇಲೆ ಓಡಾಡುವಷ್ಟು ಗಳಿಸುತ್ತಾನೆ ಈ ಭಾರತದಲ್ಲಿ. 
ಸುಳ್ಳು ಮಾರ್ಕೆಟ್ ವ್ಯಾಲ್ಯೂ ತೋರಿಸುವ ಕಂಪನಿಗಳು ಮಾಡುವುದು ಬಿಸಿನೆಸ್. ಅದರಿಂದ ನನ್ನಂತ, ನಿನ್ನಂತ ಸಾಮಾನ್ಯರು ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಳ್ಳುವುದು ಬಿಸಿನೆಸ್. ಸರ್ಕಾರ ಟ್ಯಾಕ್ಸ್ ವಸೂಲಿ ಮಾಡುವುದು ಬಿಸಿನೆಸ್. ಆ ದುಡ್ಡನ್ನು ಹರಿದು ಹಂಚಿ ತಿನ್ನುವ ರಾಜಕಾರಣಿಗಳು, ಅವರ ಕೆಳಗಿನ ಅಧಿಕಾರಿಗಳು, ಟೆಂಡರ್ ಬರೆಯುವ ಬುಕ್ಕಿಗಳು ಇವರೆಲ್ಲರೂ ಮಾಡುತ್ತಿರುವುದು ಬಿಸಿನೆಸ್ ಎಂದಾದ ಮೇಲೆ ನಾನು ಮಾಡುತ್ತಿರುವುದು ಹೇಗ ಫ್ರಾಡ್ ಪ್ರತಾಪ್? ಇದೂ ಬಿಸಿನೆಸ್.
ಷೇರು ಮಾರುಕಟ್ಟೆಯಲ್ಲಿ ಕ್ಷಣಗಳೆಂಬ ಅಂತರಗಳು ಎಷ್ಟು ದುಡ್ಡು ಲಪಟಾಯಿಸುತ್ತವೆ ಗೊತ್ತಾ?? ಎಷ್ಟೋ ಕಡೆ ಟ್ರೇಡಿಂಗ್ ಗೆ ಕೂಡ ಲಾಜಿಕ್ ಬರೆಸಿ ಕಂಪ್ಯೂಟರ್ ಪರದೆಯ ಮುಂದೆ ಕುಳಿತಿರುವ ದಿಗ್ಗಜರಿರುತ್ತಾರೆ. ನೂರಾರು G.B ಮೆಮೊರಿ ಪವರ ಇರುವ ಮಷಿನ್ ಗಳು, ಮನುಷ್ಯನೊಬ್ಬ ಒಂದು ಬಟನ್ ಒತ್ತುವುದರೊಳಗೆ ಹತ್ತು Transaction ನಡೆಸುತ್ತಿರುತ್ತದೆ. ನೀನು ಎಷ್ಟು ಸ್ಪೀಡ್ ಇರುವ ಮಷಿನ್ ಹೊಂದಿರುವೆ ಎಂಬುದರ ಮೇಲೆ ನಿನ್ನ ಲಾಭ ನಿರ್ಧಾರವಾಗುವ ಈ ಕಾಲದಲ್ಲಿ, ಗಾಳಿಗುಡ್ಡನಂತವರಿಗೆ ,ಬ್ರೋಕರ್ ಗಳು ಮಾಡುತ್ತಿರುವುದು ಮೋಸವಲ್ಲ ಬಿಸಿನೆಸ್ ಎಂದಾದರೆ ನಾನು ಮಾಡಿರುವುದು ಹೇಗೆ ಮೋಸ ಪ್ರತಾಪ್? ಇದು ಕೂಡ ಬಿಸಿನೆಸ್. ಎಲ್ಲರೂ ಅವರವರ ಲೆವೆಲ್ ಗೆ ತಲೆ ಉಪಯೋಗಿಸಿ ಬಿಸಿನೆಸ್ ಮಾಡುತ್ತಾರೆ. ನಾನು ಇನ್ನೊಬ್ಬನಿಗಿಂತ ಬುದ್ಧಿವಂತ ಎಂಬುದೇ ಮೋಸ ಎಂದಾದರೆ ಪ್ರಪಂಚದಲ್ಲಿ ನಡೆಯುವುದೆಲ್ಲಾ ಮೋಸವೇ. "
ಮಾತು ನಿಲ್ಲಿಸಿ ಅವರಿಬ್ಬರ ಮುಖ ನೋಡಿದ. ಏನನ್ನೂ ಹೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ ಇಬ್ಬರೂ. 
ಸರೋವರಾ ಬಾಯಿ ತೆರೆದಳು. "ಅದೆಲ್ಲಾ ಬೇಡ ಈಗ. ಬೇರೆಯವರು ಬಿಸಿನೆಸ್ ಮಾಡುತ್ತಾರೋ? ಮೋಸ ಮಾಡುತ್ತಾರೋ ಅದಲ್ಲ ಪ್ರಶ್ನೆ. ನೀನು ಮಾಡಿದ್ದು ಮೋಸ ಅಷ್ಟೆ. ಅಲ್ವೇನ್ರಿ ಪ್ರತಾಪ್?" ಎಂದಳು. 
ಪ್ರತಾಪ್ ಸಂದಿಗ್ಧದಲ್ಲಿದ್ದ. ಗೊತ್ತವನಿಗೆ ಶಾಸ್ತ್ರಿಯಂತವರು ಹೀಗೆಯೇ ಮಾತನಾಡುತ್ತಾರೆ. ಎದುರಿಗಿದ್ದವರು ಬಾಯಿ ಬಿಟ್ಟುಕೊಂಡು ಕೇಳುತ್ತಿರಬೇಕಷ್ಟೆ. ಹಿಪ್ನಾಟಿಸಂ ಮಾಡಿ ಬಿಡುತಾರೆ. ಈಗ ತಾನು ಅಂಥದೇ ಮೋಡಿಯಲ್ಲಿದ್ದಾನೆ. ಶಾಸ್ತ್ರಿ ಮಾಡಿರುವುದು ಮೋಸವೇ!
"ಸರೋವರಾ ಇಸ್ ರೈಟ್. ನೀನು ಏನೇ ಹೇಳು ಶಾಸ್ತ್ರಿ. ನಿನ್ನ ಆತ್ಮಸಾಕ್ಷಿಗಾದರೂ ಗೊತ್ತಿದೆ, ನೀನು ಮೋಸ ಮಾಡಿರುವೆ ಎಂದು." ಎಂದು ಸುಮ್ಮನಾದ ಪ್ರತಾಪ್. 
ಗಹಗಹಿಸಿ ನಕ್ಕ ಶಾಸ್ತ್ರಿ "ನಿನಗೂ ನಾನು ಮೋಸ ಮಾಡಿದೆ ಎಂದೆನಿಸಿದರೆ ಪೋಲಿಸ್ ನೀನು ಅರೆಸ್ಟ್ ಮೀ" ಎಂದ. 
ನಿಲ್ಲಿಸಿದ ಮಾತನ್ನು ಮತ್ತೆ ಮುಂದುವರೆಸಿದ ಶಾಸ್ತ್ರಿ " ಆತ್ಮಸಾಕ್ಷಿ ಕೋರ್ಟಿನಲ್ಲಿ ಸಾಕ್ಷಿಯಾಗಿ ಬರುವುದಿಲ್ಲ ಪ್ರತಾಪ್. ನೀನು ಈಗ ನನ್ನನ್ನು ಬಂಧಿಸಿದೆ ಎಂದುಕೋ. ಯಾವ ಸಾಕ್ಷಿ ತೋರಿಸುತ್ತೀಯಾ? ಪೇಪರಿನಲ್ಲಿ ನಾನು ಹಾಕಿಸಿರುವ ಜಾಹೀರಾತಿನ ಕೆಳಗೆ ಚಿಕ್ಕದಾಗಿ ಮಾಹಿತಿದಾರರೇ ಜವಾಬ್ದಾರರು ಎಂದು ಹಾಕಿಸಿದ್ದೇನೆ. ಹಾಗಾಗಿ ಪೇಪರಿನವರು ಅದರ ಬಗ್ಗೆ ತಲೆ ಬಿಸಿ ಮಾಡಿಕೊಳ್ಳುವುದಿಲ್ಲ. ಅದರ ಮೇಲೆ ಕೇಸ್ ನಿಲ್ಲುವುದಿಲ್ಲ. ಇನ್ನು ಅದನ್ನು ನಾನು Advertise Section ನಲ್ಲಿ ಹಾಕಿಸಿದ್ದೇನೆ. ಅಂದಿನ ಪೂರ್ತಿ ಮುಖಪುಟವೇ Advertisement Section. ಅದು ಕೇವಲ ಸುದ್ಧಿ. ನಿಜವೋ?ಸುಳ್ಳೊ? ಯಾರು ಬಲ್ಲರು? ಇನ್ನು ಬ್ರೋಕರ್ ನನ್ನನ್ನು ನೋಡಿಲ್ಲ. ಪೇಪರ್ ಮಾರಿದವರು ಚಿಂದಿ ಆರಿಸುವ ಮಕ್ಕಳು. ಯಾರನ್ನೆಂದು ಹುಡುಕುತ್ತೀಯಾ? ಬ್ರೋಕರ್ ನ ಮೊಬೈಲ್ ಗೆ ಎಲ್ಲ ಪ್ರೈವೇಟ್ ನಂಬರ್ ಇಂದ ಕಾಲ್ ಹೋಗಿದೆ. ಯಾರು ಫೋನ್ ಮಾಡಿದ್ದೆಂದು ತಿಳಿಯುವುದಿಲ್ಲ. ಗಾಳಿಗುಡ್ದ ನನ್ನ ವಿರುದ್ಧ ಸಾಕ್ಷಿ ಹೇಳುವುದಿಲ್ಲ. ಏನೆಂದು ಕೇಸ್ ಹಾಕುತ್ತೀಯಾ? ಯಾವ ಸಾಕ್ಷಿ ತರುತ್ತೀಯಾ? ಮಾಡಿರುವ ಪ್ರತೀ Transaction ಗೂ ಟ್ಯಾಕ್ಸ್ ಕಟ್ಟಿದ್ದೇನೆ. ಬ್ರೋಕರ್ ತಾನೇ ಕುದ್ದಾಗಿ ಗಾಳಿಗುಡ್ಡನ ಬಳಿ ಬೇಡಿಕೊಂಡು ಷೇರು ತೆಗೆದುಕೊಂಡಿದ್ದಾನೆ. ಎಲ್ಲಿದೆ ಮೋಸ? ಇದು ಅಪ್ಪಟ ಬಿಸಿನೆಸ್ ಪ್ರತಾಪ್!!" ಮತ್ತೆ ನಕ್ಕ ಶಾಸ್ತ್ರಿ. ನೀನು ನನ್ನ ಕೂದಲನ್ನೂ ಕೊಂಕಿಸಲಾರೆ ಎಂಬ ಸ್ಪಷ್ಟ ಸಂದೇಶವದು. 
ಪ್ರತಾಪನ ಮುಖ ಕೆಂಪು ಕೆಂಪಾಗಿತ್ತು. ಒಬ್ಬ ಮೋಸಗಾರ ತನ್ನೆದುರು ಹೇಗೆ ಮೋಸ ಮಾಡಿದೆ ಎಂದು ಹೇಳಿದರೂ ತನ್ನಿಂದ ಏನೂ ಮಾಡಲಾಗುತ್ತಿಲ್ಲ. ಆತ್ಮ ಸಾಕ್ಷಿ , ಸಾಕ್ಷಿಯಾಗಿ ನಿಲ್ಲುವುದಿಲ್ಲ ಪ್ರತಾಪ್!! ಎಂಥ ಮಾತು. ಕೆನ್ನೆಗೆ ಹೊಡೆಸಿಕೊಂಡಂತೆ ಆಗಿತ್ತು. ತನ್ನೆದುರು ನಿಂತವನು ಮಿತ್ರನೇ ಆದರೂ, ಶತ್ರುವೇ ಆದರೂ ಅವನ ಬುದ್ಧಿವಂತಿಕೆಗೆ ಮೆಚ್ಚಲೇ ಬೇಕು ಎಂದುಕೊಂಡ. ಈಗ ಮೋಸವನ್ನು ಬಿಸಿನೆಸ್ ಎಂದು ಒಪ್ಪಿಕೊಳ್ಳಬೇಕು. ಇಲ್ಲ ಆತನನ್ನು ಅರೆಸ್ಟ್ ಮಾಡಬೇಕು. ಅರೆಸ್ಟ್ ಮಾಡಲಿಲ್ಲ ಎಂದರೆ ಶಾಸ್ತ್ರಿ ಗೆಲ್ಲುತ್ತಾನೆ. ನಾವಿಬ್ಬರೂ ಅದು ಬಿಸಿನೆಸ್ ಎಂದು ಒಪ್ಪಿಕೊಂಡಂತೆ. ಮಂತ್ರಿ, ಆನೆ, ಕುದುರೆ ಉಪಯೋಗಿಸಿ ಚೆಕ್ ಕೊಟ್ಟರೆ ರಾಜ ತಪ್ಪಿಸಿಕೊಳ್ಳಲಾರ. ಪ್ರತಾಪ್ ಕೂಡ ತಪ್ಪಿಸಿಕೊಳ್ಳದಾದ. ಪ್ರತಾಪ್ ಕೂಡ ತಲೆ ತಗ್ಗಿಸಿ ನಿಂತರೆ ಸರೋವರಾ ತಾನೇ ಏನು ಮಾಡಬಲ್ಲಳು. 
ವಾತಾವರಣ ತಿಳಿಗೊಳಿಸಲು ಒಂದು ಚಟಾಕಿ ಹಾರಿಸಿದ ಶಾಸ್ತ್ರಿ. ಬಿಸಿಯಾದ ವಾತಾವರಣ ಅದೂ ಖಾಕಿಯೆದುರು ಒಳ್ಳೆಯದಲ್ಲ ಗೊತ್ತು ಶಾಸ್ತ್ರಿಗೆ. 
"ಪ್ರತಾಪ್, ಈಗ ನಾನು ಜೀವನದಲ್ಲಿ ಇಲ್ಲಿಯವರೆಗೂ ಪಡೆಯದ್ದನ್ನ ಪಡೆಯುವ ಸಮಯ. ಪಂದ್ಯ ಗೆದ್ದಿದ್ದೇನೆ. ನೀನು ಅನುಮತಿಸಿದರೆ ಫಲವನ್ನು ಅನುಭವಿಸುತ್ತೇನೆ." ಎಂದ ನಗುತ್ತಾ. 
ಸರೋವರಾ ಕೆಂಡವಾಗಿ ಶಾಸ್ತ್ರಿಯ ಬೆನ್ನಿಗೊಂದು ಗುದ್ದಿದಳು.
"ಜೋಡಿ ಹಕ್ಕಿಗಳ ನಡುವೆ ನನಗೇನು ಕೆಲಸ? Enjoy Your Time. ಹಾಂ ಬೆಳಗಿನ ಸಲಹೆಗೆ ಮತ್ತೊಮ್ಮೆ ಥ್ಯಾಂಕ್ಸ್. ನಾನಿನ್ನು ಬರುತ್ತೇನೆ" ಎಂದು ಹೊರಡಲನುವಾದ. 
ತಟಕ್ಕನೆ ನಿಂತು "ಈ ಪಂದ್ಯದಲ್ಲಿ ಎಷ್ಟು ಗಳಿಸಿದೆ? " ಎಂದು ಕೇಳಿದ. "23,13,970 ರೂಪಾಯಿ." ಗಾಳಿಗುಡ್ದ ನನ್ನ ಜೊತೆ ಬಿಸಿನೆಸ್ ಮಾಡಲಿಲ್ಲ. ಇಪ್ಪತ್ತು ಲಕ್ಷ ಅಷ್ಟೆ ಇಟ್ಟುಕೊಂಡು 3,13,970 ರೂಪಾಯಿ ನನಗೆ ಕೊಟ್ಟ. ನನ್ನ ಕಮೀಟ್ ಮೆಂಟ್ ಕೇವಲ ಲಕ್ಷವಾಗಿತ್ತು." ಎಂದು ಹುಸಿನಕ್ಕ ಶಾಸ್ತ್ರಿ.
ತಲೆಯಾಡಿಸುತ್ತಾ ತಿರುಗಿ ಹೊರಟ ಪ್ರತಾಪ್. "ಅಂದ ಹಾಗೇ ನನ್ನ ಮೇಲೆ ಕಂಪ್ಲೆಂಟ್ ಇತ್ತಲ್ಲಾ!!" ಎಂದು ಕೂಗಿದ ಶಾಸ್ತ್ರಿ. "ಅದಿನ್ನು ನಿಲ್ಲುವುದಿಲ್ಲ" ಎನ್ನುತ್ತಾ ಪ್ರತಾಪ್ ತಿರುಗಿ ನೋಡದೆಯೇ ಮುಂದು ಸಾಗಿದ.
"ಅದು ಗೊತ್ತಿದೆ ನನಗೆ. ಕಂಪ್ಲೇಂಟ್ ಕೊಟ್ಟವರು ಯಾರೆಂದು ಬೇಕಿತ್ತು "ಎನ್ನುತ್ತಾ ಹುಸಿನಗೆ ನಕ್ಕು ಸರೋವರಾಳ ಸೊಂಟ ಗಿಲ್ಲಿದ. 
ಹಿಂದೆ ತಿರುಗದೆ ಮುಂದೆ ನಡೆಯುತ್ತಲೇ ಇದ್ದ ಪ್ರತಾಪ್. ಶಾಸ್ತ್ರಿಯ ಬಳಿ ಉತ್ತರವಿದೆ ಎಂದು ಗೊತ್ತಿದೆ ಅವನಿಗೆ. 
ಶಾಸ್ತ್ರಿಯ ರೇಂಜಿನಲ್ಲಿ ಸೇಡು ತೀರಿಸಿಕೊಳ್ಳದಿದ್ದರೆ ಸಾಕು ಎಂದು ನುಡಿಯುತ್ತಿತ್ತು ಪ್ರತಾಪ್ ನ ಅಂತರಾತ್ಮ. 
                                ...............................ಮುಂದುವರೆಯುತ್ತದೆ..............................

No comments:

Post a Comment