Saturday, July 23, 2016

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 19

                                         ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 19

ಸನ್ನಿ ಚಡ್ಡಾ ಆತನ hummer jeep ನಲ್ಲಿ ಕುಳಿತಿದ್ದ. ಜೀಪ್ ಅಲ್ಲ ಅದು ಅವನ ಕಾಳದಂಧೆಗಳಿಗೆ ಸಾಕ್ಷಿಯೆಂಬಂಥ ಕಪ್ಪು hummer. ನಡೆಸುತ್ತಿದ್ದವ ಆತನ ರೈಟ್ ಹ್ಯಾಂಡ್ ಬಾಷಾ. ಸನ್ನಿ ಚಡ್ಡಾ ಯಾವಾಗ ಬಿಸಿನೆಸ್ ಪ್ರಾರಂಭಿಸಿ, ತಾನೂ ಒಬ್ಬ ಗಣ್ಯ ವ್ಯಕ್ತಿ ಎಂಬಂತೆ ಪೋಷಾಕು ಧರಿಸಿಕೊಂಡನೋ, ಅಂದಿನಿಂದ ಆತನ ಕಳ್ಳ ದಂಧೆಗಳನ್ನೆಲ್ಲ ನಡೆಸುವುದು ಇದೇ ಬಾಷಾ. ಸನ್ನಿ ಚಡ್ಡಾನಷ್ಟೆ ಗಟ್ಟಿ. ಹೆದರಿಕೆ ಎಂಬುದು ಆತನ ಮನಸಲ್ಲಿ ಬರುವುದೇ ಇಲ್ಲ. ಕೈ ಕಾಲು ಮುರಿಯಬೇಕೆಂದರೆ ಅದು. ಕೊಲೆ ಎಂದರೆ ಅದಕ್ಕೂ ಓಕೆ. ಸನ್ನಿ ಚಡ್ಡಾನನ್ನು ಮುಗಿಸಿ ತಾನು ಮೇಲೆ ಬರಬೇಕೆಂದು ಆತ ಯೋಚಿಸಿದರೆ ಅದಕ್ಕೆ ಬಹಳ ಸಮಯ ಹಿಡಿಯುವುದಿಲ್ಲ. ಬಹುತೇಕ ಭೂಗತ ದೊರೆಗಳಿಗೆ ಅವರ ಶಿಷ್ಯಂದಿರೆ ಮೃತ್ಯು. ಆದರೆ ಭಾಷಾ ಹಾಗಲ್ಲ. ಆತನ ಮಾತೆಂದರೆ ಮಾತು. ನಂಭಿಕಸ್ತ. ಹಾಗಾಗೆ ಸನ್ನಿ ಚಡ್ಡಾ ತನ್ನ ಪೂರ್ತಿ ಅಧಿಕಾರ ಆತನಿಗೆ ಕೊಟ್ಟು ತಾನು ರಾಜಕೀಯಕ್ಕೆ ಇಳಿದಿದ್ದಾನೆ. ಹಲವರಿಗೆ ಆತ ಬಾಷಾ ಭಾಯಿ, ಹಲವರಿಗೆ ಭಾಯಿ ಜಾನ್. ಕೆಲವರಿಗೆ ಮಾತ್ರ ಯಮಪಾಶ. ಸನ್ನಿ ಚಡ್ಡಾನಿಗೆ ಆತ ಅಣ್ಣಾ ಎಂದು ಕರೆಯುತ್ತಾನೆ. ಸನ್ನಿ ಚಡ್ಡಾ ಏನೇ ಹುಕುಂ ನೀಡುವುದಿದ್ದರೂ ಅದು ಬಾಷಾ ಮೂಲಕವೇ. ಹಾಗಾಗಿಯೇ ಸನ್ನಿ ಚಡ್ಡಾನ ಪೂರ್ತಾ ಸರ್ಕಲ್ ನಲ್ಲಿ ಅವನಿಗೆ ಇರುವಷ್ಟೇ ಬೆಲೆ ಬಾಷಾನ ಮಾತಿಗೆ ಕೂಡ ಇದೆ. 
"ಏನಾದರೂ ವಿಷಯ ತಿಳಿಯಿತಾ??" ಕೇಳಿದ ಸನ್ನಿ ಚಡ್ಡಾ.
"ಇಲ್ಲ. ಅಣ್ಣಾ.. ಯಾರು ಮಾಡಿದ್ದಾರೆ? ಯಾಕೆ ಮಾಡಿದ್ದಾರೆ? ಎಂದು ತಿಳಿಯುತ್ತಿಲ್ಲ. ನನಗೆ ಅನುಮಾನ ಬಂದವರನ್ನೆಲ್ಲ ಬೆನ್ನು ಮುರಿದು ಕೇಳಿದ್ದೇನೆ. ಎಲ್ಲರೂ ಕಾಲಿಗೆ ಬೀಳುವವರೇ. ನಮ್ಮ ಹುಡುಗರನ್ನು ಮುಟ್ಟುವ ತಾಕತ್ತು ಯಾರಿಗೂ ಇಲ್ಲ ಅಣ್ಣಾ."
"ಹಂ.." ಮತ್ತೆ ಯೋಚಿಸುತ್ತಾ ಕುಳಿತ ಚಡ್ಡಾ. 
ಪ್ರಸ್ತುತ ಅವರು ದಿಲ್ಲಿ-ಆಗ್ರಾ ಹೈವೇಯಲ್ಲಿ ಹೋಗುತ್ತಿದ್ದರು. ಏನಾದರೂ ಗಹನವಾದ ಚರ್ಚೆಯಾಗುವುದಿದ್ದರೆ ಹೀಗೆ ತನ್ನ ಹಮ್ಮರ್ ಹತ್ತಿ ಲಾಂಗ್ ಡ್ರೈವ್ ಹೊರಟು ಬಿಡುತ್ತಾನೆ ಚಡ್ಡಾ. ಮಾತುಕತೆ ಮುಗಿಯುತ್ತಿದ್ದಂತೆ ಮತ್ತೆ ಆ ಕಪ್ಪು ಹಮ್ಮರ್ ವಾಪಾಸ್ ಆಗುತ್ತದೆ. 
ಚಡ್ಡಾನಿಗೆ ತನ್ನ ಕಡೆಯವನೋಬ್ಬನು ಸತ್ತಿದ್ದಕ್ಕಾಗಿ ಯಾವುದೇ ಬೇಸರವಾಗಲಿ, ವ್ಯಥೆಯಾಗಲೀ ಇರಲಿಲ್ಲ. ಸಾವುಗಳು ಇಲ್ಲಿ ದಿನ ಬೆಳಿಗ್ಗೆ ಎದ್ದರೆ ಕೇಳುವ ಸುದ್ದಿ. ಚಡ್ಡಾನು ಕೂಡ ಅದೆಷ್ಟೊ ಬಾರಿ ಸಾವಿನ ಬಾಗಿಲು ನೋಡಿದ ಮನುಷ್ಯನೇ. ಇದೆಲ್ಲವನ್ನು ಮಿರಿ ಬದುಕಿದವನಿಗೆ ಮನ್ನಣೆ. ಅವರ ಯೋಚನೆಯೇ ಬೇರೆ. ಕಪ್ಪು ಜಗತ್ತಿನಲ್ಲಿ ಹೀಗೊಂದು ತಲೆ ಎಗರಿದರೆ ಅದನ್ನು ಯಾರು ಮಾಡಿದ್ದಾರೆ ಎಂದು ತಿಳಿದುಕೊಂಡು ಮುಯ್ಯಿ ತೀರಿಸಿಕೊಳ್ಳದಿದ್ದರೆ ಅವರ ಬೆಲೆ ಕಡಿಮೆ ಆಗಿಬಿಡುತ್ತದೆ. ಸನ್ನಿ ಚಡ್ಡಾನ ಗ್ಯಾಂಗಿನಲ್ಲಿದ್ದರೆ ಬೆಲೆ ಇಲ್ಲ ಎಂದು ಒಮ್ಮೆ ಸುದ್ಧಿ ಹರಡಿ ಬಿಟ್ಟರೆ ಅವನ ಸುತ್ತ ಸುತ್ತಿಕೊಂಡಿದ್ದವರೆಲ್ಲ ಬಿಟ್ಟು ಹೋಗುತ್ತಾರೆ ಇಲ್ಲವೇ ಬಂಡಾಯವೆದ್ದರೂ ಏಳಬಹುದು. ಹಾಗಾಗಿ ಇಂಥ ಸಂದರ್ಭದಲ್ಲಿ ಕೊಲೆ ಮಾಡಿದ್ದು ಯಾರು ಎಂದು ತಿಳಿದು ತಲೆ ತೆಗೆದರೆ ಎಲ್ಲದಕ್ಕೂ ಫುಲ್ ಸ್ಟಾಪ್ ಕೊಟ್ಟಂತೆ. ಇಲ್ಲವೇ ದೊಡ್ಡ ಮಟ್ಟದ ರಾಜಿ ಒಂದು ನಡೆಯಬೇಕು. ಅದರ ಬಗ್ಗೆಯೇ ಮಾತನಾಡುತ್ತಿದ್ದಾರೆ ಈಗ ಚಡ್ಡಾ ಮತ್ತು ಬಾಷಾ. ಒಂದು ವಾರದಿಂದ ಬಾಷಾ ಎಲ್ಲ ಕಡೆಗಳಿಂದಲೂ ಸುದ್ಧಿ ಸಂಗ್ರಹಿಸಿದ್ದ. ಆದರೂ ಕೊಲೆ ಮಾಡಿದವರು ಯಾರು ಎಂಬುದು ತಿಳಿದಿರಲಿಲ್ಲ. 
"ಕೊಲೆಗಾರನನ್ನು ನೋಡಿದವರು ಇರಬೇಕಲ್ಲವೇ ಆಸ್ಪತ್ರೆಯಲ್ಲಿ!?" ಯೋಚಿಸುತ್ತ ಕುಳಿತಿದ್ದ ಚಡ್ಡಾ ಕೇಳಿದ. 
"ಹಂ.. ಎಲ್ಲರೂ ನೋಡಿದ್ದಾರೆ. ಡಾಕ್ಟರ್, ಕೆಲಸದವರು.. ಎಲ್ಲರೂ ನೋಡಿದ್ದಾರೆ. ಆದರೆ ಪೋಲಿಸರು ತೆಗೆದುಕೊಂಡ ಸ್ಕೆಚ್ ಎಲ್ಲೂ ಸಿಗುತ್ತಿಲ್ಲ." ಎಂದ ಬಾಷಾ. 
ಮತ್ತೊಂದೆರಡು ಕ್ಷಣ ಯೋಚಿಸಿ "ಆಸ್ಪತ್ರೆಯ ಡಾಕ್ಟರ್ ಬಳಿ ಹೋಗಿ ವಿಚಾರಿಸಿ. ಅವರ ಬಳಿ ಸ್ಕೆಚ್ ಇರಲೇಬೇಕು. ಜಾಸ್ತಿ ನಖರಾ ಮಾಡಿದರೆ ಯಾರಿಗೂ ತಿಳಿಯದಂತೆ ಎತ್ತಾಕಿಕೊಂಡು ಬಂದು ಮತ್ತೊಮ್ಮೆ ಸ್ಕೆಚ್ ಹಾಕಿಸಿ, ನಾನು ಪೋಲಿಸ್ ಡಿಪಾರ್ಟ್ ಮೆಂಟಿನಲ್ಲಿ ವಿಚಾರಿಸುತ್ತೇನೆ." ಎಂದ ಸನ್ನಿ ಚಡ್ಡಾ.
"ಅಣ್ಣಾ.. ಅವಳು ಲೇಡಿ ಡಾಕ್ಟರ್.. ಗೊತ್ತೇ ಇದೆಯಲ್ಲ ನಮ್ಮ ಹುಡುಗರು ಸ್ವಲ್ಪ ನಮಕ್ ಹರಾಮಿಗಳು..!" 
ನಕ್ಕ ಸನ್ನಿ ಚಡ್ಡಾ. "ಸ್ವಲ್ಪ ಗದರಿಸು ಅವರಿಗೆ. ಇರುವ ತಲೆ ಬಿಸಿಗಳೇ ಸಾಕಾಗಿದೆ. ಅದರ ಮೇಲೆ ಮತ್ತೊಂದು ಬೇಡ. ಹೇಳಿದ ಕೆಲಸ ಅಷ್ಟೇ ಆಗಲಿ. ಕೊಲೆಗಾರ ಮಾತ್ರ ಸಿಗಬೇಕು ನನಗೆ. ಇದು ನನ್ನ ಪ್ರೇಸ್ಟೀಜ್ ಪ್ರಶ್ನೆ."
"ಹಂ.. ಅಣ್ಣಾ.. ನಾನೇ ಮುಂದೆ ನಿಂತು ಮಾಡುತ್ತೇನೆ ಈ ಕೆಲಸ. ಇನ್ನೊಂದು ಸ್ವಲ್ಪ ದಿನದಲ್ಲಿ ತಲೆ ತೆಗೆಯೋಣ. ನಾವೆಂದರೆ ಯಾರೆಂದು ತೋರಿಸುವ ಸಮಯ ಬಂದಿದೆ ಈಗ." 
"ಬಾಷಾ ನಿನಗೆ ಹೊಸದಾಗಿ ಏನು ಹೇಳಬೇಕೆಂದೇನೂ ಇಲ್ಲ. ಮುಂದಿನ ವರ್ಷ ಚುನಾವಣೆಯಿದೆ.ನನಗೆ ಟಿಕೆಟ್ ಸಿಕ್ಕರೂ ಸಿಗಬಹುದು. ಇಂತಹ ಸಮಯದಲ್ಲಿ ಯಾವುದೇ ರಗಳೆಗೆ ಸಿಲುಕುವುದು,ಕೈ ರಾಡಿ ಮಾಡಿಕೊಳ್ಳುವುದು ನನಗೆ ಇಷ್ಟವಿಲ್ಲ. ಈ ವಿಷಯವನ್ನು ಆದಷ್ಟು ಬೇಗ ಮುಗಿಸು.." ಎರಡು ಲಕ್ಷದ ಕಂತೆ ತೆಗೆದು ಬಾಷಾನ ಪಕ್ಕಕ್ಕಿಟ್ಟ. 
ತಲೆಯಾಡಿಸಿದ ಬಾಷಾ "ಅಣ್ಣಾ, ಈ ವಿಷಯ ನನಗೆ ಬಿಡಿ. ನೀವೇನು ತಲೆ ಬಿಸಿ ಮಾಡಿಕೊಳ್ಳಬೇಡಿ." ಮತ್ತೆ ಮಾತನಾಡಲಿಲ್ಲ ಚಡ್ಡಾ.
ಬಾಷಾ ಜೀಪನ್ನು ಹಿಂದಕ್ಕೆ ತಿರುಗುಸಿದ. ಡಾಕ್ಟರನ್ನು ಭೇಟಿ ಮಾಡಿ ಹೇಗಾದರೂ ಇನ್ನಷ್ಟು ಮಾಹಿತಿ ತಿಳಿಯಬೇಕು. ಒಮ್ಮೆ ಕೊಲೆಗಾರ ಯಾರೆಂದು ತಿಳಿದರೆ ಗೋಣು ಮುರಿದು ಕೊಂದು ಬಿಡುತ್ತೇನೆ. ಹಲಾಲ್ ಕೋರ್ ಪತಾ ತೋ ಚಲೇ.. ಫಿರ್ ಛೋಡುಂಗಾ ನಹೀ.. ಎಂದುಕೊಳುತ್ತ ಜೀಪನ್ನು ಮುಂದಕ್ಕೋಡಿಸಿದ.
*................................................*...........................................*
"ಶಾಸ್ತ್ರಿ, ನಿನಗೇನೋ ಹೇಳಿದರೆ ಬಯ್ಯುವುದಿಲ್ಲ ತಾನೇ??" ಮುದ್ದುಗರೆಯುತ್ತ ಕೇಳಿದಳು ಸರೋವರಾ. ಏನಿಷ್ಟು ಪ್ರೀತಿ ಬಂದಿದೆ ಹುಡುಗಿಗೆ ಎಂದು ಹತ್ತು ನಿಮಿಷದಿಂದ ಯೋಚಿಸುತ್ತಲೇ ಇದ್ದ ಶಾಸ್ತ್ರಿ. ಹುಡುಗಿಯರು ಹೊತ್ತಲ್ಲದ ಹೊತ್ತಲ್ಲಿ ಮೈ ಮೇಲೆ ಬೀಳುತ್ತಿದ್ದಾರೆ ಇಲ್ಲವೇ ತುಂಬಾನೇ ಕೇರ್ ತೆಗೆದುಕೊಳ್ಳುತ್ತಿದ್ದಾರೆ ಎಂದರೆ ಸಂಶಯ ಮೂಡುವುದು ಸಹಜವೇ. ಅದು ಶಾಸ್ತ್ರಿಯಂಥ ಮನುಷ್ಯನಿಗೆ ಇನ್ನು ಸ್ವಲ್ಪ ಬೇಗವೇ ಅರ್ಥವಾಗಿತ್ತು.
ಹತ್ತು ನಿಮಿಷ ಬೇಕಾಯಿತು ನಿಜವಾದ ಬಾಣ ಬತ್ತಳಿಕೆಯಿಂದ ಹೊರಬರಲು. ಅದಕ್ಕೂ ಮೊದಲು ಶಾಸ್ತ್ರಿಯೂ ಕೂಡ ತನಗೆ ಬೇಕಾದಂತೆ ಇದ್ದ ಇನ್ನುವುದು ಬೇರೆಯ ವಿಷಯ.
"ಹೇಳು ಮನ್ವಂತರವೇ, ಅದೇನು ಗುಟ್ಟಿನ ವಿಷಯ ಎಂದು."
"ನನಗೆ ನಿನ್ನ ಮೇಲೆ ಅನುಮಾನ ಎಂದುಕೊಳ್ಳುವುದಿಲ್ಲ ತಾನೇ?" ಮತ್ತೊಂದು ದಾಳ ಹಾಕಿದಳು. 
ನಕ್ಕ ಶಾಸ್ತ್ರಿ. "ಇಲ್ಲ ನನ್ನ ಮಾಯಾಮೃಗವೇ, ಅದೇನು ಹೇಳುವೆಯೋ ಹೇಳು. ನಾನು ಕೇಳುತ್ತೇನೆ."
"ನಾನು ಪ್ರತಾಪ್ ನನ್ನು ಭೇಟಿಯಾಗಿದ್ದೆ." ಎನ್ನುತ್ತಾ ಶಾಸ್ತ್ರಿಯ ಮುಖ ನೋಡಿದಳು. ಶಾಸ್ತಿಯೂ ಸರೋವರಾಳ ಮುಖ ನೋಡಿದ. ತನ್ನನ್ನೇನಾದರೂ ಆಟ ಆಡಿಸಲು ನೋಡುತ್ತಿರುವಳಾ? ನಾನು ಇನ್ನೊಬ್ಬ ಹುಡುಗನನ್ನು ಭೇಟಿಯಾದೆ ಎಂದರೆ ಎಂತಹ ಗಂಡಾದರೂ ಜಲಸ್ ಆಗುತ್ತಾನೆ, ಕೋಪಗೊಳ್ಳುತ್ತಾನೆ. ಅದರಲ್ಲೂ ಪ್ರತಾಪ್ ನೋಡಲು ಚೆನ್ನಾಗಿದ್ದಾನೆ. ಪೋಲಿಸ್ ವೃತ್ತಿ ಬೇರೆ. ಆತನನ್ನು ಮಧ್ಯ ತಂದು ನನ್ನನ್ನು ಕಾಡಿಸಿ ಮಜಾ ತೆಗೆದುಕೊಳ್ಳಲು ನೊಡುತ್ತಿದ್ದಳಾ? ಗಂಡು ಜಲಸ್ ಆದರು ಹುಡುಗಿ ಖುಶಿಗೊಳ್ಳುತ್ತಾಳೆ ಎಂಬುದು ಶಾಸ್ತ್ರೀ ಇತ್ತೀಚಿಗೆ ಕಂಡುಕೊಂಡ ಸತ್ಯ. ಅಂತಹ ಆಟವನ್ನೆನಾದರೂ ಆಡುತ್ತಿದ್ದಾಳಾ!! ಪ್ರೀತಿ ಎಂಬ ಒಂದು ವಿಷಯದಲ್ಲಿ ಮಾತ್ರ ಶಾಸ್ತ್ರಿ ಕೂಡ ಎಲ್ಲರಂತೆಯೇ. ಏನು ಹೇಳಬೇಕು ತಿಳಿಯದೆ ಆಕೆ ಮುಂದೇನು ಹೇಳುವಳು ಎಂದು ಕಾಯುತ್ತ ಕುಳಿತ. 
"ಏನು ಹೇಳಲೇ ಇಲ್ಲ ನೀನು.." ಆತನ ಕೈ ಬೆರಳುಗಳನ್ನು ತನ್ನ ಕೈ ಬೆರಳೊಳಗೆ ಸೇರಿಸಿದಳು.
"ಅಯ್ಯೋ ದೇವರೇ!! ಇದಕ್ಕೆ ನಾನೇನು ಹೇಳಲಿ? ನೀನು ಹೇಳಬೇಕು ಯಾಕೆ ಭೇಟಿಯಾದೆ ಎಂದು.." ಆದಷ್ಟು ಸಹಜವಾದ ಧ್ವನಿಯಲ್ಲೇ ಉತ್ತರಿಸಿದ ಶಾಸ್ತ್ರಿ.
"ಹಂ.. ಆವತ್ತು ನಿನ್ನ ಶರ್ಟಿನ ಮೇಲೆ ಇದ್ದದ್ದು ನಾಯಿಯ ರಕ್ತ ಎಂದಿದ್ದೆಯಲ್ಲ. ಅದು ಮನುಷ್ಯರದು ಎಂದು ಪ್ರತಾಪ್ ಗೆ ಹೇಳಲು ಹೋಗಿದ್ದೆ." ಎಂದು ಶಾಸ್ತ್ರಿಯ ಕಣ್ಣುಗಳನ್ನೇ ನೋಡತೊಡಗಿದಳು. 
ಈಗ ಮಾತ್ರ ತನ್ನ ಭಾವಗಳನ್ನು ತಹಬದಿಗೆ ತರಲು ವಿಫಲನಾದ ಶಾಸ್ತ್ರಿ. ದೇಹದ ರಕ್ತವೆಲ್ಲ ಮುಖಕ್ಕೆ ಹರಿದುಬಂದಂತೆ ಕೆಂಪಾಯಿತು ಶಾಸ್ತ್ರಿಯ ಮುಖ. "ಮತ್ತೆ ಮೊದಲಿನಂತೆ ಅನುಮಾನಿಸಿದೆ" ಎಂದು ಶಾಸ್ತ್ರಿ ಕೋಪಗೊಳ್ಳುತ್ತಿದ್ದಾನೆ ಎಂದುಕೊಂಡಳು ಸರೋವರಾ. 
"ಬೇಜಾರಾಯಿತಾ??" ಎಂದು ಮತ್ತೂ ಹತ್ತಿರ ಸೇರಿಕೊಂಡಳು. ಒಂದೆರಡು ಕ್ಷಣ ಮೌನವಾಗಿದ್ದ ಶಾಸ್ತ್ರಿ "ಎಷ್ಟು ವರ್ಷ ಜೈಲಿಗೆ ಹಾಕಿಸುವೆ? ಯಾವಾಗ ಬರುತ್ತಾರೆ ನನ್ನ ಅರೆಸ್ಟ್ ಮಾಡಲು!?" ಎನ್ನುತ್ತಾ ಜೋರಾಗಿ ನಕ್ಕ ಶಾಸ್ತ್ರಿ.
ಪರಿಸ್ಥಿತಿ ಕೈ ಮೀರದ್ದನ್ನು ಕಂಡು ಸರೋವರಾಳೂ ಖುಷಿಯಾದಳು. "ನಿನ್ನನ್ನು ಯಾರು ತಾನೇ ಹಿಡಿಯಬಲ್ಲರು? ಪ್ರತಾಪ್ ಶಾಸ್ತ್ರಿ ಅಂತವನಲ್ಲ. ಸುಮ್ಮನೆ ಅನುಮಾನ ಪಡಬೇಡ ಎಂದು ಕಳಿಸಿಬಿಟ್ಟ. ನೀ ಕೊಲೆ ಮಾಡಿದರೂ ನಂಬುವುದಿಲ್ಲವೆನೋ ಪೋಲಿಸರು.." ಎನ್ನುತ್ತಾ ನಕ್ಕು ಆತನ ಕುತ್ತಿಗೆಗೆ ಜೋತು ಬಿದ್ದಳು.
"ನಿನ್ನನ್ನೇ ನಿಭಾಯಿಸುತ್ತಿದ್ದೇನಲ್ಲ!? ಇನ್ನು ಪೋಲಿಸ್ ಯಾವ ಲೆಕ್ಕ?? ನೀನು ಡಿಟೆಕ್ಟಿವ್ ಆಗಬೇಕಿತ್ತು ಕಣೆ. ಎಂತಹ ಜ್ಞಾನ ಸುಮ್ಮನೆ ಹಾಳಾಗುತ್ತಿದೆ. ಅದಕ್ಕೆ ಇಂಡಿಯಾ ಹೀಗಿದೆ." ಎಂದು ನಕ್ಕ.
ಅವಳು ನಕ್ಕಳು. "ಇಲ್ಲ ಕಣೋ, ಇನ್ಯಾವತ್ತೂ ನಿನ್ನ ಮೇಲೆ ಹೀಗೆ ಅನುಮಾನ ಪಡಲಾರೆ. ಅದೇನೋ ನಾನು ಇರುವುದೇ ಹಾಗೆ. ನೀನೆ ನನಗೆ ನಿಜ ಹೇಳಿದ್ದರೆ ಹೀಗೆ ಆಗುತ್ತಲೇ ಇರಲಿಲ್ಲ." ಎಂದು ತಪ್ಪನ್ನೆಲ್ಲ ಶಾಸ್ತ್ರಿಯ ಮೇಲೆ ಹೊರಿಸಿದಳು. 
"ಹಿಂದಿನ ಬಾರಿ ಚಾಲೆಂಜ್ ಮಾಡಿದ್ದೆ, ನಾನು ಗೆದ್ದರೆ ಜೀವನದಲ್ಲಿ ಯಾರಿಗೂ ಕೊಡದಿರುವುದನ್ನು ಕೊಡುತ್ತೇನೆ ಎಂದಿದ್ದೆಯಲ್ಲ. ನೆನಪಿದೆಯಾ??" ಎಂದ ಶಾಸ್ತ್ರಿ. 
ಈಗ ಸರೋವರಾಳ ಮುಖ ಕೆಂಪಾಗಿತ್ತು. ಶಾಸ್ತ್ರಿಯ ಮಡಿಲಿನಿಂದ ಎದ್ದು ದೂರ ಕುಳಿತಳು. "ಅವೆಲ್ಲ ಮದುವೆಯಾದ ಮೇಲೆ" ಎಂದಳು. 
"ಷರತ್ತು ಕಟ್ಟಿ ಸೋತವಳು ನೀನು. ಈಗ ಹೀಗಂದರೆ ಹೇಗೆ? ಮದುವೆಯಾದ ಮೇಲೆ ಎಲ್ಲರೂ ಕೊಡುತ್ತಾರೆ. ಈ Terms and Conditions ಷರತ್ತಿನಲ್ಲಿ ಇರಲಿಲ್ಲ". ಜಿದ್ದಿಗೆ ಬಿದ್ದವನಂತೆ ಹೇಳಿದ ಶಾಸ್ತ್ರಿ.
"Terms and Conditions ಇಲ್ಲದೇ ಯಾವ ಆಫರ್ ಕೂಡ ಇರುವುದಿಲ್ಲ. ನೀನು ಕೇಳಿಲ್ಲ. ನಾನೂ ಹೇಳಿಲ್ಲ. ಕಾರಿನ ಮೈಲೇಜ್ 24 ಕಿ.ಮೀ. ಎನ್ನುತ್ತಾರೆ. ರೋಡಿನಲ್ಲಿ ಕೊಡುವುದು ಅದು 16-17. ಕೇಳಿದರೆ Under the laboratery condition ಎನ್ನುತ್ತಾರೆ. ಜಗತ್ತು ನಡೆಯುವುದೇ ಹೀಗೆ. Terms and Condition ಗಳ ಮೇಲೆ. ಈಗ ನನ್ನ ದೂರಿ ಪ್ರಯೋಜನವಿಲ್ಲ. ತಾಳಿ ಕಟ್ಟು ನೋಡೋಣ." ಎಂದಳು.
ತನ್ನ ಜೊತೆಗಿದ್ದು ಇವಳೂ ಕ್ರಿಮಿನಲ್ ತಲೆ ಉಪಯೋಗಿಸುವುದನ್ನ್ನು ಕಲಿತಿದ್ದಾಳೆ ಎಂದುಕೊಂಡ ಶಾಸ್ತ್ರಿ. 
"ನೋಡು, ನೀನು ಪ್ರತಾಪನ ಬಳಿ ಕಂಪ್ಲೇಂಟ್ ಕೊಟ್ಟೆ ಎಂದು ನನಗೆ ಬೇಸರವಿಲ್ಲ. ಆದರೆ ನಿನಗೆ ನನ್ನ ಮೇಲೆ ಇರುವ ಅನುಮಾನ ಇನ್ನೂ ಹೋಗಿಲ್ಲ. ನಾನು ನಿನ್ನನ್ನು ಬಿಟ್ಟುಬಿಡುತ್ತೇನೆ, ನಿನಗೆ ಮೋಸ ಮಾಡುತ್ತೇನೆ ಎಂಬ ಸಂಶಯ ನಿನಗೆ ಇನ್ನೂ ಇದೆ. ಅದಕ್ಕೆ Terms and Condition ಬಗ್ಗೆ ಮಾತನಾಡುತ್ತಿದ್ದೀಯಾ!!"
ಒಟ್ಟಿಗೇ ಇರಲು ಮದುವೆಯೇ ಏಕೆ ಬೇಕು? ಕತ್ತಲ್ಲಿ ತಾಳಿ ಇರಲೇಬೇಕೆ? ಮನಸ್ಸಿದ್ದರೆ ಸಾಕಲ್ಲವೇ??" ಕುಟುಕಿದ ಶಾಸ್ತ್ರಿ.
"ಮದುವೆ, ತಾಳಿ ಇವೆಲ್ಲ ನಮಗಾಗಲ್ಲ, ಸಮಾಜಕ್ಕಾಗಿ. ಒಂದು ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಎಂದರೆ ಅದರ ರೀತಿ, ರಿವಾಜುಗಳು ನಮಗೂ ಅನ್ವಯಿಸುತ್ತವೆ. ಬೇಸಿಗೆಯಲ್ಲಿ ಸೆಕೆ.. ನನಗೆ ಬಟ್ಟೆಯೇ ಬೇಡ ಎಂದು ಹಾಗೆ ತಿರುಗಲು ಸಾಧ್ಯವೇ?" ಕ್ರಾಸ್ ಏಕ್ಸಾಮಿನ್ ಮಾಡಿದಳು ಸರೋವರಾ.
"ಹಾಗಾದರೆ ನಾನು ಜೈಲಿಗೆ ಹೋಗುತ್ತೇನೆ. ನೀನು, ನಿನ್ನ Terms and Condition ಗಳು ನಿನ್ನೊಟ್ಟಿಗಿರಲಿ" ಎಂದು ಮುನಿಸಿಕೊಂಡ.
ದೂರ ಕುಳಿತಿದ್ದ ಸರೋವರಾ ಒಮ್ಮೆಲೇ ಎದ್ದು ಬಂದು ಮತ್ತೆ ಶಾಸ್ತ್ರಿಯ ಕುತ್ತಿಗೆ ಜೋತು ಬಿದ್ದು ಆತನ ತುಟಿಗೆ ತುಟಿ ಸೇರಿಸಿದಳು. ಅದ್ಯಾವ ಮಾಯದಲ್ಲಿ ಅವಳ ಕಣ್ಣುಗಳು ತುಂಬಿದ್ದವೋ.. "ಶಾಸ್ತ್ರಿ, ಕನಸಿನಲ್ಲಿಯೂ ಆ ಯೋಚನೆ ಮಾಡದಿರು. ನಿನ್ನ ಬಿಟ್ಟು ನಾನಿರಲಾರೆ... ಶಾಸ್ತ್ರಿ..." ಮತ್ತೂ ಗಟ್ಟಿಯಾಗಿ ತಬ್ಬಿಕೊಂಡಳು. ಆ ಬಿರುಸಿಗೆ ಶಾಸ್ತ್ರಿಯ ಕೆಳದುಟಿಯನ್ನು ಕಚ್ಚಿದ್ದಳು.
"ಹಾಯ್!!" ಆತನ ಕೆಳದುಟಿಯಲ್ಲಿ ಸಣ್ಣಗೆ ರಕ್ತ ಇಳಿಯಿತು. "ಪಾಪಿ, ನನ್ನ ರಕ್ತವನ್ನೇ ಕುಡಿಯಬೇಕು ಮಾಡಿರುವೆಯಾ??" ನೋವಲ್ಲೂ ನಕ್ಕು ಆಕೆಯ ಕಣ್ಣೀರೊರೆಸಿದ. 
ಅವಳೂ ನಕ್ಕು ಸಮಾಧಾನಗೊಂಡು "ಸರಿ, ನಾನಿನ್ನು ಹೊರಡುತ್ತೇನೆ. ಕೆಲಸಗಳಿವೆ. ಮತ್ತೆ ಸಿಗೋಣ..ಬೈ.." ಎಂದು ಹೊರಟಳು.
ಸರಿ ಎಂದು ತಲೆಯಾಡಿಸಿದ. "ನಿನಗಿಂತ ಹೆಚ್ಚಿನ ಕೆಲಸಗಳು ನನಗಿವೆ" ಎಂದು ಮನಸ್ಸಿನಲ್ಲೇ ಅಂದುಕೊಂಡ. ಪ್ರತಾಪ್ ಎಷ್ಟೆಂದರೂ ಪೋಲಿಸ್. ಈಕೆಯ ಮಾತುಗಳನ್ನು ಕೇಳಿದ ಮೇಲೂ ಪ್ರತಾಪ್ ಸುಮ್ಮನೇ ಇದ್ದಾನೆ ಎಂದರೆ ನಂಬಲು ಸಾಧ್ಯವಿಲ್ಲದ್ದು. ನನಗೇ ತಿಳಿಯದಂತೆ ಏನೋ ನಡೆಯುತ್ತಿದೆ. ಸರೋವರಾಳನ್ನು ದೂರಿ ಪ್ರಯೋಜನವಿಲ್ಲ. ಆಕೆಯನ್ನು ಬಲ್ಲ ಆತ. ತಪ್ಪು ಮಾಡಿದವರು ಯಾರೇ ಆದರೂ ಅವರಿಗೆ ಶಿಕ್ಷೆ ಆಗಬೇಕು ಎಂದು ಬಯಸುವವಳು ಅವಳು. ಅವಳ ಆ ಗುಣ ಶಾಸ್ತ್ರಿಗೆ ಕೂಡ ಇಷ್ಟ. ಬಹಳ ಒಳ್ಳೆಯವರು ಹತ್ತಿರ ಇದ್ದರೆ ಕೂಡ ಎಷ್ಟು ಗೋಳು ಎಂದುಕೊಂಡ. 
ಸರೋವರಾ ಹೊರಗೆ ಹೋಗುತ್ತಲೇ ಶಾಸ್ತ್ರಿಯು ಹೊರಬಿದ್ದ. ಆತನಿಗೆ ಗೊತ್ತು ತಾನೀಗ ಬಹಳ ನಾಜೂಕಾಗಿ ವರ್ತಿಸಬೇಕು. ಇಲ್ಲದಿದ್ದರೆ ಜೈಲು ಸೇರಬೇಕಾಗುತ್ತದೆ. 
ಶಾಸ್ತ್ರಿಯ ಮೆದುಳು ಯುದ್ಧರಂಗಕ್ಕೆ ಇಳಿದ ಅಶ್ವದಂತೆ ಓಡತೊಡಗಿತು.
*..............................................*....................................................................* 
ಒಂದು ದಿನ ಅದೇ ಹೋಟೆಲ್ ನಲ್ಲಿಯೇ ಉಳಿದ ಗರುಡ. ಪ್ರಿಯಂವದಾ ಅಲ್ಲೇ ಕೊನೆಯುಸಿರೆಳೆಯಬಹುದೆಂಬ ಒಂದು ನೀರಿಕ್ಷೆ. ಆದರೆ ಅವನಿಗೆ ಅಂತಹ ಯಾವ ಸುದ್ಧಿಯೂ ಬಂದಿರಲಿಲ್ಲ. ಎಂಟಿಂಚಿನ ಗುಂಡು ತಿಂದು ಅದೇಗೆ ಬದುಕಿಬಿಟ್ಟಳು? ಗರುಡ ಆಶ್ಚರ್ಯಗೊಂಡಿದ್ದ. ಆತನಿಗೆ ಗೊತ್ತು ವಿಷಯ ಹೊರಗೆ ಹರಡದಿದ್ದರೂ ಕಳ್ಳ, ಪೋಲಿಸ್ ಜಗತ್ತಿನಲ್ಲಿ ಮಾತ್ರ ಈ ವಿಷಯ ಸಂಚಲನ ಮೂಡಿಸಿರುತ್ತದೆ. ಹೀಗೆ ಬಿಗ್ ಶಾಟ್ ಒಂದು ಕೆಳಗೆ ಬಿದ್ದಾಗ ಪೋಲಿಸರಿಗೆ ಬಹಳ ಒತ್ತಡವಿರುತ್ತದೆ. ಹಾಗಾಗಿ ಕಪ್ಪು ಜಗತ್ತಿನ ಲಿಂಕ್ ಇರುವ ಎಲ್ಲರನ್ನೂ ಬಂಧಿಸಿಬಿಡುತ್ತಾರೆ. ಬೆನ್ನುಮುರಿಯುವಂತೆ ತಳಿಸುತ್ತಾರೆ. ಇದು ತಮ್ಮ ಮೇಲೆ ಬರದಿದ್ದರೆ ಸಾಕೆಂದು ಯಾರು ಮಾಡಿರುವುದೆಂದು ತಿಳಿದಿದ್ದರೆ ಗುಪ್ತ ಮೂಲಗಳಿಂದ ಪೋಲಿಸರಿಗೆ ಸುದ್ಧಿ ಮುಟ್ಟಿರುತ್ತದೆ. ಕೆಲವೊಮ್ಮೆ ವಿರೋಧಿಗಳು ತಾವೇ ಕೊಲೆ ಮಾಡಿ ತಮ್ಮ ಪ್ರತಿಸ್ಪರ್ಧಿಗಳ ಮೇಲೆ ಹಾಕುವುದು ಉಂಟು. ಸಣ್ಣಪುಟ್ಟ ಕೊಲೆಗಳಲ್ಲಿ ಆಗುವ ಹಾನಿಯೂ ಕಡಿಮೆಯೇ. ಆದರೆ ಇದು ಬಿಗ್ ಶಾಟ್.. ಪ್ರಿಯಂವದಾ ರಾಜ್.. ಕಿಂಗ್ ಮೇಕರ್ ಅವಳು. ವಿಷಯ ಹೊರಬಿದ್ದರೆ ಭಾರತವೇ ಕದಲಿಬಿಡುತ್ತದೆ. ಹಾಗಾಗಿ ಈಗಾಗಲೇ ಕೊಲೆಗಾರನ ಹಂಟಿಂಗ್ ಪ್ರಾರಂಭವಾಗಿರುತ್ತದೆ. ಇಂತಹ ಸಮಯದಲ್ಲಿ ತಾನೀಗ ಮತ್ತೊಮ್ಮೆ ಮರಳಿ ಅಟ್ಯಾಕ್ ಮಾಡಬೇಕಾ?? ಅಥವಾ ನನ್ನ ದಾರಿ ಹಿಡಿದು ಹೋಗಲೇ? ಎಂದು ಯೋಚಿಸುತ್ತಿದ್ದ ಗರುಡ. ಅಮೇರಿಕಾ, ಇಂಗ್ಲೆಂಡ್ ನಂತಹ ಪೂರ್ತಿ ಸೆಕ್ಯೂರಿಟಿ ಇರುವ ದೇಶಗಳಲ್ಲೇ ಈತ ಭೇಟೆಯಾಡಿದ್ದಾನೆ. ಅಲ್ಲಿನ ಪೋಲಿಸ್ ನವರಿಗೆ, ಇಂಟಲಿಜನ್ಸ್ ವಿಂಗ್ ನವರಿಗೆ ಚಳ್ಳೆಹಣ್ಣು ತಿನ್ನಿಸಿ ಹೊರಬಂದಿದ್ದಾನೆ. ಆತನೇ ಹೀಗೊಂದು ಹತ್ಯೆ ಮಾಡಿದ್ದಾನೆ ಎಂದು ಪ್ರೂವ್ ಮಾಡಲು ಯಾರ ಬಳಿಯೂ, ಎಲ್ಲಿಯೂ ಯಾವ ಸಾಕ್ಷಿಗಳು ಉಳಿದಿಲ್ಲ. 
ಇದರ ಹೊರತಾಗಿ ಈಗೆಲ್ಲ ಹೊಸ ವ್ಯವಸ್ಥೆ ಬಂದಿದೆ. ಗರುಡನಂತಹ ಅಸಾಸಿನ್ ಗಳನ್ನು ಹಿಡಿದು ಸಾಕ್ಷಿ ಒದಗಿಸುವುದು ಬಹಳ ಕಷ್ಟ. ಆದ್ದರಿಂದ ಇಂಟಲಿಜನ್ಸ್ ವಿಂಗ್ ಗಳು ತಮ್ಮಲ್ಲೇ ಹಂಟಿಂಗ್ ಗ್ರೂಪ್ ಗಳನ್ನು ಸಿದ್ಧಪಡಿಸಿದೆ. ಅವರಿಗೆ ಕೊಡುವ ತರಬೇತಿ ಹಾಗೂ ತಿಂಗಳ ವೇತನ ಸಾಮಾನ್ಯರ ಯೋಚನೆಗೂ ನಿಲುಕುವಂಥದ್ದಲ್ಲ.
ಒಮ್ಮೆ ಅವರು ತರಬೇತಿ ಪಡೆದು ಹೊರಬಿದ್ದರೆ ಅವರಿಗೆ ಮತ್ತು ವಿಂಗ್ ನವರಿಗೆ ಯಾವುದೇ ಸಂಬಂಧವಿರುವುದಿಲ್ಲ. ಅವರ ಕೆಲಸವೇನಿದ್ದರೂ ಕೊಲ್ಲುವುದು. ಕೊಲ್ಲುವುದು ಅಂದರೆ ಕೊಲ್ಲುವುದು ಅಷ್ಟೇ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅವರೂ ಸಾಯುತ್ತಾರೆ. ಕೆಲವೊಮ್ಮೆ ಅವರ ಶವಗಳು ಕೂಡ ಮನೆ ಸೇರುವುದಿಲ್ಲ. ಇಂತಹ ವಿಂಗ್ ನ ಹಂಟಿಂಗ್ ಸ್ಕ್ವಾಡ್ ಗಳಿಗೂ ಗರುಡ ಸಿಕ್ಕಿಲ್ಲ. ಗರುಡ ಅವರಿಗೆಲ್ಲ ಹುಳಿ ದ್ರಾಕ್ಷಿಯೇ. ಹಾಗೆಂದು ಗರುಡ ಎಂದಿಗೂ ವಿಂಗ್ ಆಫೀಸರ್ ಗಳನ್ನು ಮುಟ್ಟಿಲ್ಲ. ಅವರು ಕೂಡ ಮಾಡುತ್ತಿರುವುದು ಕೆಲಸವೇ. ಅವರು ಮುಖಾಮುಖಿಯಾಗುತ್ತಾರೆ ಎಂದು ತಿಳಿದಾಗಲೆಲ್ಲ ಗರುಡ ಬಹುತೇಕ ಹಾದಿ ತಪ್ಪಿಸಿ ಓಡಾಡಿದ್ದಾನೆ. ಇಲ್ಲವೇ ಅವರ ದಾರಿ ತಪ್ಪಿಸಿದ್ದಾನೆ. ಕೊಲ್ಲುವುದು ಅವನಿಗೆ ಇಷ್ಟದ ವಿಷಯವಲ್ಲ. ಅದು ಅವನ ಪ್ರೊಫೆಶನ್ ಅಷ್ಟೇ. 
ಒಂದು ದಿನ ಯೋಚನೆಯಲ್ಲೇ ಕಳೆದ ಗರುಡ ಯಾವುದಕ್ಕೂ ವಾಪಾಸ್ ದೆಹಲಿಗೆ ಹೋಗಿ ತನಗೆ ಸಹಾಯವಾಗುವಂತಹ ಪರಿಸ್ಥಿತಿಯಿದ್ದರೆ ಇನ್ನೊಂದು ಚಾನ್ಸ್ ತೆಗೆದುಕೊಳ್ಳೋಣ ಇಲ್ಲದಿದ್ದರೆ ದುಬೈಗೆ ಹಾರಿಬಿಡುವುದು ಎಂದು ಯೋಚಿಸಿದ. ಅದೂ ಅಲ್ಲದೇ ಅವನಿಗೆ ಬಂದ ಸುದ್ಧಿಯ ಪ್ರಕಾರ ರಾಜ್ ಇನ್ನೂ ಕೋಮಾದಿಂದ ಹೊರಬಂದಿಲ್ಲ. ಬರುತ್ತಾಳೋ, ಇಲ್ಲವೋ? ಅದೂ ಕೂಡ ತಿಳಿದಿಲ್ಲ ಈ ಹೊತ್ತಿನಲ್ಲಿ. ಆದರೆ ಪೋಲಿಸರು ಅಥವಾ ಇಂಟಲಿಜನ್ಸ್ ವಿಂಗ್ ನವರಿಗೆ ಏನಾದರೂ ಇನ್ ಫಾರ್ಮೇಶನ್ ಸಿಕ್ಕಿದೆಯಾ? ಎಂಬುದೂ ಇನ್ನು ತಿಳಿದಿಲ್ಲ. ತಿಳಿದು ಬರಲು ಸಮ್ಮಿಶ್ರ ಪೋಲಿಸರನ್ನು ರಂಗಕ್ಕೆ ಇಳಿಸಿದ್ದರೆ ತಾನೇ? ಸಮ್ಮಿಶ್ರ ಎಂದರೆ ಹಾಗೆ. ಆತನ ನೆಟ್ ವರ್ಕ್ ಬಹಳ ದೊಡ್ಡದು. ಹತ್ತು ವರ್ಷದಿಂದ ಆತ ತನ್ನದೊಂದು ನೆಟ್ ವರ್ಕ್ ಕಟ್ಟಿಕೊಂಡ ರೀತಿಯನ್ನು ಎಂತವರು ಮೆಚ್ಚಲೇ ಬೇಕು. ಆತನ ಸರ್ಕಲ್ ನಲ್ಲಿ ಆರ್ಮಿಯವರಿದ್ದರು, ಡಾಕ್ಟರ್ ಗಳಿದ್ದರು. ಪೇಪರ್ ಹಾಕುವವರಿದ್ದರು, ಹಾಲು ಮಾರುವವರಿದ್ದರು, ಪೊಲೀಸರು, ಇಂಟಲಿಜನ್ಸ್ ವಿಂಗ್ ನವರು, ಮನೆ ಕೆಲಸದವರು ಎಲ್ಲರೂ ಇದ್ದಾರೆ. ವಿಷಯಗಳು ಬಹುಬೇಗ ಸಮ್ಮಿಶ್ರನನ್ನು ತಲುಪುತ್ತದೆ. ಆದರೆ ಸಮ್ಮಿಶ್ರನ ವಿಷಯಗಳು ಅಷ್ಟು ಬೇಗ ಅವನ ವಿರೋಧಿಗಳನ್ನು ತಲುಪುವುದಿಲ್ಲ. ಹಾಗಿಲ್ಲದಿದ್ದರೆ ಪ್ರಿಯಂವದಾ ಆತನನ್ನು ನಂಬಿ ಅವಳ ಪೂರ್ತಿ ಜವಾಬ್ದಾರಿ ಅವನಿಗೆ ಒಪ್ಪಿಸುತ್ತಿದ್ದಳಾ?? No chance.. ಗುಂಡು ತಿಂದ ಕ್ಷಣದಲ್ಲಿ ಕೂಡ "ಸಮ್ಮಿಶ್ರ, ಎಲ್ಲಿ ಎಡವಿದೆ?" ಎಂದು ಯೋಚಿಸಿದ್ದಳು. ಸಮ್ಮಿಶ್ರ ಕೂಡ ನೂರು ಬಾರಿ ಅದನ್ನೇ ಯೋಚಿಸುತ್ತಿದ್ದಾನೆ ಈಗ. 
ಮಾಡಿದ ತಪ್ಪು ಮತ್ತೆ ಮಾಡದವರು ಎಂದಿಗೂ ಗೆಲ್ಲುತ್ತಾರೆ. ಅಂತಹವರ ಸಾಲಿನಲ್ಲಿ ಮೊದಲಿಗ ಸಮ್ಮಿಶ್ರ. ಗರುಡನಿಗಾಗಿ ಆತ ಕಾದು ಕುಳಿತಿದ್ದಾನೆ ಎಂಬುದನ್ನು ಗರುಡ ಅರಿತಿಲ್ಲ. ಅದೊಂದು ಹಂತದಲ್ಲಿ ಕಪ್ಪು ಜಗತ್ತನ್ನು ಮೀರಿ ನಿಂತಿದ್ದ ಸಮ್ಮಿಶ್ರ. 
ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೋಟೆಲ್ ನಿಂದ ಹೊರಬಿದ್ದ ಗರುಡ. ಟ್ಯಾಕ್ಸಿ ರೆಡಿಯಾಗಿ ನಿಂತಿತ್ತು. ಈ ಬಾರಿಯ ಕಾರು ಬೇರೆ, ಡ್ರೈವರ್ ಕೂಡ ಅವನಲ್ಲ. ಆದರೆ ಸಮ್ಮಿಶ್ರನ ಕಡೆಯವರೇ. "Airport" ಎಂದ ಗರುಡ. ಛತ್ರಪತಿ ಶಿವಾಜಿ ಏರ ಪೋರ್ಟ್ ಕಡೆ ಹೊರಟಿತು ಕ್ಯಾಬ್. "ಸರ್, ಯಾವ ಟರ್ಮಿನಲ್ ಹೊರಟಿದ್ದೀರಿ?"
"ಟರ್ಮಿನಲ್ 1. ಡೊಮೆಸ್ಟಿಕ್." ಟರ್ಮಿನಲ್ 2 ಗೆ ಹೊರಟಿದ್ದರೆ ಅಲ್ಲಿನ ಕಥೆಯೇ ಬೇರೆ ಇರುತ್ತಿತ್ತು. ಯಾವುದೇ ಕಾರಣಕ್ಕೂ ಗರುಡ ಇಂಡಿಯಾ ಬಿಡುವಂತಿಲ್ಲ. ಸ್ಪಷ್ಟವಾಗಿ ಹೇಳಿದ್ದ ಸಮ್ಮಿಶ್ರ. ಮಾತುಕತೆಗೆ ಪ್ರಾರಂಭಿಸಿದ ಡ್ರೈವರ್. ಅದು ಇದು ಮಾತನಾಡಿ ಕೊನೆಯಲ್ಲಿ "ಇಬ್ಬರು ಹೆಂಡತಿಯರು ಸಾರ್ ನನಗೆ, ಬದುಕು ಕಷ್ಟವಾಗಿದೆ. ಇಂಡಿಯಾ ಬಿಟ್ಟು ಹೋಗಿಬಿಡಬೇಕು ಎನ್ನಿಸುತ್ತದೆ ಒಮ್ಮೊಮ್ಮೆ. ಎಲ್ಲಿಗೆ ಹೋಗಬಹುದು ಸಾರ್?? ತಲೆ ಮರೆಸಿಕೊಳ್ಳಲು??"
ಎದುರಿಗಿದ್ದ ಮಿರರ್ ನಲ್ಲಿ ಗರುಡನ ಮುಖದ ಲಕ್ಷಣ ನೋಡುತ್ತಲೇ ತಲೆ ಮರೆಸಿಕೊಳ್ಳಲು ಎಂಬ ಶಬ್ದ ಒತ್ತಿ ಹೇಳಿದ್ದ. ಏನೂ ಪ್ರತಿಕ್ರಿಯೆಯಿಲ್ಲದೇ ಸುಮ್ಮನೆ ಕುಳಿತಿದ್ದ ಗರುಡ. 
"ನಿಮಗೆ ತಲೆ ತಿಂದೆನೆನೋ? Sorry, Sir.. " ಎನ್ನುತ್ತಾ ಸುಮ್ಮನೆ ಕಾರು ಓಡಿಸತೊಡಗಿದ. ತಲೆ ಮರೆಸಿಕೊಳ್ಳುವುದು ಎಂದ ಕೂಡಲೇ ಚುರುಕಾಗಿದ್ದ ಗರುಡ. ಆದರೆ ಅದನ್ನು ತೋರಿಸಿಕೊಂಡಿರಲಿಲ್ಲ. ಆತನೂ ಸೂಕ್ಷ್ಮವಾಗಿ ಡ್ರೈವರ್ ನನ್ನು ಗಮನಿಸತೊಡಗಿದ. ಒಮ್ಮೊಮ್ಮೆ ಕೆಲಸದ ಮೇಲಿನ ಹೆಚ್ಚಿನ ಆಸಕ್ತಿಯೂ ತಪ್ಪು ಮಾಡಿಸುತ್ತದೆ. ಗರುಡ ಕಾರಿನ ಒಳಭಾಗವನ್ನು, ಡ್ರೈವರ್ ನನ್ನು ಸೂಕ್ಷ್ಮವಾಗಿ ಗಮನಿಸಿದ. ಮಾಮೂಲಿ ಬಾಡಿಗೆ ಹೊಡೆಯುವ ಕ್ಯಾಬ್ ಮತ್ತು ಇದಕೆ ಇರುವ ವ್ಯತ್ಯಾಸ ಗಮನಿಸಿದ. ಡ್ರೈವರ್ ಗೆ ಮೊದಲೇ ಸೂಚನೆಯಾಗಿತ್ತು ಗರುಡನ ಬಳಿ ಒಂದು ಮಾತೂ ಆಡಬಾರದೆಂದು. ವಿಂಗ್ ನಲ್ಲಿ ಸೇರಿದ ಹೊಸ ಹುಡುಗ ಆತ. ಏನಾದರೂ ಸಾಧಿಸುವ ಹುಮ್ಮಸ್ಸು. ಗರುಡನ ಬಾಯಿಯಿಂದ ಏನಾದರೂ ಹೊರಡಿಸಬಹುದಾ ಎಂದು ಮಾತಿಗಾರಂಭಿಸಿದ್ದ. ಗರುಡ ಗಂಭೀರತೆ ನೋಡಿ ಅವನು ಮಾತನಾಡಲಾರ ಎಂದು ತಿಳಿದರೂ ಆಗುವ ತಪ್ಪು ಆಗಿ ಹೋಗಿತ್ತು. ಆತನೇ ಮಾತನಾಡಿ ತಪ್ಪು ಮಾಡಿದ್ದ.
ಏರ್ ಪೋರ್ಟ್ ಬರುತ್ತಲೇ ಕ್ಯಾಬ್ ಗೆ ಬಿಲ್ ಪೇ ಮಾಡಿ ಒಳಗೆ ನಡೆದ ಗರುಡ. ಆತನ ಮುಖದ ಮೇಲೆ ಅರ್ಥ ವಿವರಿಸಲಾಗದ ನಗುವೊಂದು ಹಾದು ಹೋಗಿತ್ತು. ಎರಡೆ ಕ್ಷಣಗಳಲ್ಲಿ ಆತ ಅರಿತುಕೊಂಡಿದ್ದ I am tracked. ಅದೂ ತುಂಬ ಚಾಣಾಕ್ಷ ಜನರಿಂದ. ಗರುಡನ ಇನ್ ಫಾರ್ಮರ್ ಗಳಿಗೆ ತಿಳಿಯದಂತೆ. ಬಹಳ ಸಮಯದ ನಂತರ ನಿಜವಾದ ಚಾಲೆಂಜ್ ಎದುರಾಗಿದೆ ಎಂದುಕೊಂಡ ಗರುಡ. 
ಇದೇನು ಆಟವೋ ಆಡಿ ಬಿಡೋಣ ಎಂದು ನಿರ್ಧರಿಸಿಯಾಗಿತ್ತು ಗರುಡ ಕೂಡ. ಕೆಲಸವನ್ನು ಕೆಲಸವಾಗೇ ಮಾಡಿ ಮುಗಿಸಬೇಕು. ಆತ ಕೆಲಸವನ್ನು ಎಂದಿಗೂ ಪರ್ಸನಲ್ ಲೆವೆಲ್ ಗೆ ತೆಗೆದುಕೊಂಡು ಹೋಗಿರಲಿಲ್ಲ. 
ಈಗ ಸಮಯ ಬೇರೆಯದೇ ಇತ್ತು. ಬೇಟೆ ಕೂಡ ಬಲಿಯಾಗಿಲ್ಲ. ಹೊರತಾಗಿ ನನಗೇ ಗಂಟೆ ಕಟ್ಟಿದ್ದಾರೆ. ಇದರ ಹಿಂದಿರುವ ಚಾಣಾಕ್ಷ ತಲೆಗೆ ತನ್ನದೊಂದು ಏಟು ಕೊಟ್ಟೆ ಹೊರಗೆ ಬೀಳಬೇಕೆಂದು ಆತ ಸಿದ್ಧವಾಗಿದ್ದ. ತನಗೇನೂ ಅರಿವೇ ಇಲ್ಲದಂತೆ ದೆಹಲಿಯ ಟಿಕೆಟ್ ತೆಗೆದುಕೊಂಡು ವಿಮಾನ ಹತ್ತಿದ ಗರುಡ. 
ಸುದ್ಧಿ ಸಮ್ಮಿಶ್ರನಿಗೆ ತಲುಪಿತು. ನಿದ್ರೆಯಿಲ್ಲದ ರಾತ್ರಿಗಳನ್ನು ನಿನಗೂ ತೋರಿಸುತ್ತೇನೆ ಬಾ ಗರುಡ ಎಂದುಕೊಂಡ ಸಮ್ಮಿಶ್ರ... ಈ ಬಾರಿ ಗರುಡ ಒಂಟಿಯಾಗಿದ್ದ. ನೀರಿನ ಮೇಲೆ ತೇಲುತ್ತಿರುವ ಮೀನನ್ನು ಹಿಡಿಯಲು ರೆಕ್ಕೆ ಪಟ ಪಟಿಸಿ ಆಗಸದಿಂದ ನೀರಿಗೆ ಬಾಣದಂತೆ ಬರುವ ಗರುಡನಂತೆ ಚುರುಕಾದ ಆತ.
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/

No comments:

Post a Comment