Saturday, July 23, 2016

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 22

                                     ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 22

"ವಿಹಾರಿ ಮುಚ್ಚುಮರೆಯಿಲ್ಲದೆ ಇರುವ ವಿಷಯಕ್ಕೆ ಬರುತ್ತೇನೆ. ನಿನ್ನಿಂದ ನನಗೊಂದು ಸಹಾಯ ಬೇಕಾಗಿದೆ. ನಿನ್ನನ್ನು ಹೀಗೆ ಅಪಹರಿಸಿಕೊಂಡು ಬಂದಿದ್ದಕ್ಕೆ ಕ್ಷಮೆಯಿರಲಿ." ವಿಷಯಕ್ಕೆ ಬಂದ ಸಮ್ಮಿಶ್ರ.
ಸಮ್ಮಿಶ್ರನ ಮಾತುಗಳನ್ನೇ ಕೇಳುತ್ತಿದ್ದ ವಿಹಾರಿ. ಕೋಪ ಬಂದಿದ್ದರೂ, ತನ್ನನ್ನು ಕರೆದುಕೊಂಡು ಬಂದಿರುವುದು ಯಾವುದೋ ಸಮಸ್ಯೆಯನ್ನು ಬಗೆಹರಿಸಲು ಎಂದು ತಿಳಿದಿದ್ದರಿಂದ ಸ್ವಲ್ಪ ಸಮಾದಾನವಾಯಿತು ಆತನಿಗೆ. ಆದರೆ ದೇಶದ ಕಿಂಗ್ ಮೇಕರ್ ಪ್ರಿಯಂವದಾ ರಾಜ್ ಳಂತವಳ ರೈಟ್ ಹ್ಯಾಂಡ್ ಆಗಿ ಕೆಲಸ ಮಾಡುವ ಸಮ್ಮಿಶ್ರನಿಗೆ ನಾನು ಮಾಡುವ ಸಹಾಯವಾದರೂ ಏನು?? ಎಂದು ಯೋಚಿಸತೊಡಗಿದ. ಈತ ಕೇಳದ ಕೂಡಲೇ ನಾನೇಕೆ ಸಹಾಯ ಮಾಡಬೇಕು ಅಥವಾ ಮಾಡಲು ಒಪ್ಪ ಬೇಕು ಎಂಬ ಅಹಂಕಾರ ಕೂಡ ಎದ್ದು ನಿಂತಿತು.
"ಅದೇನು ಹೇಳಿ ಸಮ್ಮಿಶ್ರ ಅವ್ರೆ.." ಯಾವ ಭಾವವನ್ನು ತೋರಿಸಿಕೊಳ್ಳಲಿಲ್ಲ ವಿಹಾರಿ. 
ಪಕ್ಕದಲ್ಲಿ ನಿಂತಿದ್ದ ಇಬ್ಬರಿಗೂ ಸಮ್ಮಿಶ್ರ ಕಣ್ಸನ್ನೆ ಮಾಡುತ್ತಲೇ ಅವರಿಬ್ಬರೂ ಹೊರಹೋಗಿ ಬಾಗಿಲು ಹಾಕಿಕೊಂಡರು.
"ನೋಡು ವಿಹಾರಿ, ಇದು ತುಂಬ ಗುಪ್ತ ವಿಷಯ. ನನ್ನನ್ನು ಬಿಟ್ಟರೆ ಈ ವಿಷಯ ತಿಳಿದಿರುವುದು ಪ್ರಿಯಂವದಾ ರಾಜ್ ಗೆ ಮಾತ್ರ.ಆದರೆ ಅವರಿಗ ಮಾತನಾಡುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಇ ವಿಷಯ ತಿಳಿಯುತ್ತಿರುವ ಮೂರನೇ ವ್ಯಕ್ತಿ ನೀನು. ಅಂದರೆ ನೀನು ಅರ್ಥ ಮಾಡಿಕೋ. ನನಗೆ ನಿನ್ನ ಮೇಲೆ ನಂಬಿಕೆ ಬಂದಿದೆಯೋ? ಅಥವಾ ನನಗೆ ಸಹಾಯ ಮಾಡುವಂಥ ಮನುಷ್ಯ ನೀನೇ ಎಂದು ನನಗೆ ಹೇಗೆ ಅನ್ನಿಸಿತೋ? ನನಗೆ ತಿಳಿದಿಲ್ಲ. ನಾನು ನಿನ್ನ ಮೇಲಿಟ್ಟಿರುವ ನಂಬಿಕೆ, ಭರವಸೆಗಳನ್ನು ಉಳಿಸಿಕೊಳ್ಳುವುದು, ಬಿಡುವುದು ನಿನ್ನ ಮೇಲಿದೆ."
ಕುತೂಹಲ ಹೆಚ್ಚಾಯಿತು ವಿಹಾರಿಗೆ. ಸಮ್ಮಿಶ್ರ ನನ್ನನ್ನು ಕರೆಸುವುದು, ಯಾರಿಗೂ ತಿಳಿಯದ ವಿಷಯವನ್ನು ನನಗೆ ತಿಳಿಸುವುದು. Some thing is cooking. ಅಷ್ಟೇ ಅಲ್ಲ. Its some thing important. ವಿಹಾರಿಯ ಒಳಗಿನ ಚತುರತೆ ಚುರುಕಾಯಿತು. "ಹೇಳಿ ಸಮ್ಮಿಶ್ರ, ನನ್ನ ಕೈಲಾದ್ದನ್ನು ನಾನು ಮಾಡುತ್ತೇನೆ." ಎಂದ ವಿಹಾರಿ.
ಸಮ್ಮಿಶ್ರ ವಿವರಿಸತೊಡಗಿದ. ಪ್ರಿಯಂವದಾ ರಾಜ್ ಳಿಗೆ ಗುಂಡು ಬಿದ್ದಿದ್ದು, ಅವಳು ಯಾರಿಗೂ ಕಾಣದಂತೆ ಕಾರಿನ ಗಾಜಿನ ಮೇಲೆ "HIM" ಎಂದು ಬರೆದದ್ದು, ಅವನು ಅದನ್ನು ಓದಿ ಅಳಿಸಿ ಹಾಕಿದ್ದು, ಈಗ ಅವಳು ಕೋಮಾದಲ್ಲಿರುವುದು.. ಎಲ್ಲವನ್ನೂ ಹೇಳಿ ಗಾಢವಾದ ನಿಟ್ಟುಸಿರು ಬಿಟ್ಟ. ಪರಿಸ್ಥಿತಿ ಅರ್ಥವಾದ ವಿಹಾರಿಯೂ ನಿಡಿದಾದ ಉಸಿರಾಡಿದ. ಪ್ರಿಯಂವದಾ ರಾಜ್ ಏನಾದರೂ ಕೊನೆಯುಸಿರೆಳೆದರೆ ಎಂತಹ ಸಂಚಲನ ಉಂಟಾಗುತ್ತದೆ ಎಂಬುದನ್ನು ಬಲ್ಲವ ವಿಹಾರಿ. ಆದರೆ ಇಲ್ಲಿ ಅವನು ಮಾಡುವ ಸಹಾಯವೇನು ಎಂಬುದು ಆತನಿಗೆ ತಿಳಿಯಲಿಲ್ಲ. 
ಆತನ ಮನಸ್ಸನ್ನು ಅರಿತವನಂತೆ ಸಮ್ಮಿಶ್ರ, "ವಿಹಾರಿ, ನೀನೊಬ್ಬ ಚತುರ ಹ್ಯಾಕರ್ ಎಂದು ನನಗೆ ತಿಳಿದಿದೆ. ಅದೆಷ್ಟೋ ಕ್ಲಿಷ್ಟವಾದ ಸೈಪರ್ ಗಳನ್ನು ಡಿಸೈಪರ್ ಮಾಡುವ ಚಾಲಾಕಿಯೆಂದು ನನಗೆ ತಿಳಿದು ಬಂದಿದೆ. ಹಾಗಾಗಿ ಈ "HIM" ಕೋಡನ್ನು ಡಿಕೋಡ್ ಮಾಡಿಕೊಡು. ಯಾವ ಅರ್ಥದಲ್ಲಿ ರಾಜ್ ಹಾಗೆ ಬರೆದಿದ್ದಾರೆ ಎಂದು ನನಗೆ ಅರಿತುಕೊಳ್ಳಲು ಕಷ್ಟವಾಗುತ್ತಿದೆ. ಈ ಕೋಡ್ ಹಿಂದಿನ ಅರ್ಥ ತಿಳಿದು ಬಂದರೆ ಅವಳ ಮೇಲೆ ಹತ್ಯೆ ಮಾಡಲು ಪ್ರಯತ್ನಿಸಿದವರು ಯಾರೆಂದು ತಿಳಿಯಬಹುದು."
ಒಂದೆರಡು ನಿಮಿಷ ಯೋಚಿಸುತ್ತ ಕುಳಿತಿದ್ದ ವಿಹಾರಿ. ಸಮ್ಮಿಶ್ರ ಆತನ ಆಲೋಚನೆಗೆ ಭಂಗ ತರದಂತೆ ನೋಡುತ್ತ ಕುಳಿತಿದ್ದ. 
"ಎಲ್ಲವೂ ಸರಿ ಸಮ್ಮಿಶ್ರ, ಆದರೆ ನಾನು ಈ ಕೆಲಸವನ್ನು ಮಾಡಲಾರೆ. ನಿನ್ನ ಸಾಹಸವೆಲ್ಲಾ ನಿಷ್ಪಲವಾಯಿತು ಎಂದು ಬೇಸರವಾಗಬಹುದು ನಿನಗೆ. ಆದರೆ ನಾನು ಈ ಕೆಲಸವನ್ನು ಮಾಡಲಾರೆ ಅಷ್ಟೆ. ನಾನು ಬೇರೆಯವರಿಗಾಗಿ ನನ್ನ ವಿದ್ಯೆಯನ್ನು ಉಪಯೋಗಿಸಲಾರೆ. ಎಂದೋ ಮಾಡಿದ ಶಪಥವಿದೆ.." ಎಂದುಬಿಟ್ಟ ವಿಹಾರಿ.
ಆತ ಹಾಗೆ ಹೇಳುತ್ತಲೇ ಸಮ್ಮಿಶ್ರ ಮೌನದಲ್ಲಿ ಕಳೆದ.
"ಇನ್ನು ನಾನಿಲ್ಲಿ ಕುಳಿತು ಮಾಡುವುದು, ಮಾತನಾಡುವುದು ಏನೂ ಇಲ್ಲ ಸಮ್ಮಿಶ್ರ. ದೇಶದಲ್ಲಿ ನನಗಿಂತ ಅನುಭವಿ, ಚಾಲಾಕಿ ಹ್ಯಾಕರ್ ಗಳಿದ್ದಾರೆ. ಅವರನ್ನು ಸಂಪರ್ಕಿಸು. ನಿನ್ನ ಕೆಲಸ ಆದರು ಆಗಬಹುದು." ಎಂದು ಎದ್ದು ನಿಂತ ವಿಹಾರಿ.
ವಿಹಾರಿ ಎರಡು ಹೆಜ್ಜೆ ಎತ್ತಿಟ್ಟಿರಲಿಲ್ಲ. "ಈ ಕೆಲಸ ನಿನಗಾಗಿ ನೀನು ಮಾಡಿಕೊಳ್ಳುತ್ತಿರುವೆ ಎಂದುಕೋ ವಿಹಾರಿ..." ಈ ಬಾರಿ ಸಮ್ಮಿಶ್ರನ ಮಾತಿನಲ್ಲಿ ತೀಕ್ಷ್ಣತೆಯಿತ್ತು.
ತಿರುಗಿ ನೋಡಿದ ವಿಹಾರಿ. ಸಮ್ಮಿಶ್ರನ ಮುಖದಲ್ಲಿ ಬೇಟೆಗೆ ಸಿದ್ದವಾದ ಚಿರತೆಯ ಕಾಳಜಿಯಿತ್ತು.
"ನಾ ನಿನ್ನೊಡನೆ ಎರಡು ನಿಮಿಷ ಮಾತನಾಡುತ್ತೇನೆ. ಅದರ ನಂತರವೂ ಈ ಕೆಲಸ ನಿನಗೆ ಸಂಬಂಧಿಸಿದ್ದಲ್ಲ ಎಂದು ನಿನಗನ್ನಿಸಿದರೆ ನೀನು ಹೊರಡಬಹುದು."
ಒಮ್ಮೆ ಹುಲಿಯ ಬೋನಿನಲ್ಲಿ ಬಿದ್ದರೆ ಹುಲಿಯ ಅಪ್ಪಣೆಯಿಲ್ಲದೆ ಹೊರಬೀಳುವುದು ಕಷ್ಟ ಎಂಬ ಸತ್ಯದ ಅರಿವಾಯಿತು ಈಗ ವಿಹಾರಿಗೆ. ಒಂದೋ, ಹುಲಿ ಹಸಿದಿರಬಾರದು.. ಇಲ್ಲವೇ ಹುಲಿಯ ಜೊತೆ ಬಡಿದಾಡುವ ಕೆಚ್ಚಿರಬೇಕು. ಈಗ ಹುಲಿ ಹಸಿದಿದೆ. ಬಡಿದಾಡುವುದೊಂದೇ ಉಳಿದ ದಾರಿ. ನೋಡಿ ಬಿಡೋಣ. ಹುಲಿ ಯಾವ ದಿಕ್ಕಿನಿಂದ ಆಕ್ರಮಣ ಮಾಡುತ್ತದೆ ಎಂದು ತಿರುಗಿ ಬಂದು ಕುಳಿತ. 
ಸಮ್ಮಿಶ್ರ ಹೇಳತೊಡಗಿದ. ವಿಹಾರಿಯ ಮುಖದ ಮೇಲೆ ಸಣ್ಣನೆ ಬೆವರು ಮೂಡಿತು.
ಇಷ್ಟೆಲ್ಲಾ ಮಾಹಿತಿಗಳನ್ನು, ಸತ್ಯಗಳನ್ನು ಅರಿತ ಸಮ್ಮಿಶ್ರನಂಥ ವ್ಯಕ್ತಿಗಳು ರಾತ್ರಿ ಹೇಗೆ ನಿದ್ದೆ ಮಾಡುತ್ತಾರೆ ಎಂದು ಯೋಚಿಸುತ್ತಲೇ ಉಳಿದ ವಿಹಾರಿ..
*..................................................*.......................................................*
ಗಾಳಿಗುಡ್ಡ ಮತ್ತು ಲಾಯರ್ ಹತ್ತಿರ ನೀವು ಮನೆಗೆ ಹೋಗಿರಿ, ನನಗೆ ಬೇಲ್ ಅವಶ್ಯಕತೆಯಿಲ್ಲ. ಸಮಯಕ್ಕೆ ಸರಿಯಾಗಿ ಸಹಾಯಕ್ಕೆ ಬಂದಿದ್ದಕ್ಕೆ ಧನ್ಯವಾದಗಳು. ಗಾಳಿಗುಡ್ಡ ಅವ್ರೆ, ನಿಮ್ಮ ಸಹಾಯಕ್ಕೆ ಮತ್ತೊಮ್ಮೆ ಪ್ರತಿಫಲ ಕೊಡುತ್ತೇನೆ ಎಂದು ನಸುನಕ್ಕ ಶಾಸ್ತ್ರಿ.
ನಮ್ಮ ಅವಶ್ಯಕತೆ ಇಲ್ಲದ ಮೇಲೆ ಕರೆಸಿದರಿ ಯಾಕೆ ಗೊಣಗಿಕೊಂಡ lawyer. ಗಾಳಿಗುಡ್ಡ ಶಾಸ್ತ್ರಿಯ ಬೆನ್ನು ತಟ್ಟಿ ಹೊರನಡೆದ. ವಿಷಯ ಇಷ್ಟು ಬೇಗ ಮತ್ತು ಇಷ್ಟು ಸುಲಭವಾಗಿ ಇತ್ಯರ್ಥಗೊಂಡಿದ್ದಕ್ಕೆ ಖುಷಿಗೊಂಡಿದ್ದ ಆತ. ಆತನ ಅನುಭವ ಮತ್ತು ತಿಳುವಳಿಕೆಯಲ್ಲಿ ಪೋಲಿಸ್ ಎಂದರೆ ಕಿರಿಕ್.
ಅವರು ಹೊರನಡೆಯುತ್ತಲೇ "ಸರಿ, ನಾವಿನ್ನು ಹಾಸ್ಪಿಟಲ್ ಗೆ ಹೋಗಿ, ಆ ವಿಡಿಯೋ ಫೋಟೇಜ್ ತೆಗೆಸಿ ನೋಡಿ ಬಿಡೋಣ. ನಿ ಹೇಳಿದ್ದು ನಿಜವೇ ಆಗಿದ್ದಲ್ಲಿ ನಮ್ಮ ತಪ್ಪಿಗೆ ಕ್ಷಮೆ ಯಾಚಿಸುತ್ತೇವೆ. ಆದರೆ ಅಲ್ಲಿಯವರೆಗೆ ನಾ ನಿನ್ನ ನಂಬಲಾರೆ ಶಾಸ್ತ್ರಿ.." ಎಂದು ಪ್ರತಾಪ್ ಜೀಪಿನೆಡೆ ನಡೆದ.
ಕ್ಷಾತ್ರ ಅವರ ಜೊತೆ ನಡೆದ.
ಇನ್ನು ತನಗೇನು ಕೆಲಸ. ಅವರ ಜೊತೆಯೇ ನಡೆದಳು ಸ್ವಯಂವರಾ. ಕ್ಷಾತ್ರ ಕೆಲಸದಲ್ಲಿ ಮುಳುಗಿಬಿಟ್ಟರೆ ಅದೆಷ್ಟು ಸುಲಭವಾಗಿ ಎಲ್ಲವನು ಮರೆತು ಬಿಡುತ್ತಾನೆ ಎಂದುಕೊಂಡಳು ಸ್ವಯಂವರಾ.
ಗಂಡು ಅದೆಷ್ಟೆ ತಲೆಬಿಸಿಯಲ್ಲಿರಲಿ,ಕೆಲಸದಲ್ಲಿರಲಿ, ತನ್ನ ಬಗ್ಗೆ ಗಮನ ಹರಿಸಬೇಕು ಎಂಬ ಹೆಣ್ಣಿನ ಭಾವವನ್ನು ಅರಿತವರು ತುಂಬ ಕಡಿಮೆ ಜನ. ಕ್ಷಾತ್ರನಂತಹ ಪೊಲೀಸ್ ಕೂಡ ಅದರಿಂದ ಹೊರತಾಗಿಲ್ಲ.ಕಳ್ಳರ ಮನಸ್ಥಿತಿಯನು, ನಾಟಕವನ್ನು ಅವನೆಷ್ಟು ಬೇಗ ಗುರುತಿಸುತ್ತಾನೆ ಎಂಬುದು ನಿಜವಾದರೂ, ಸ್ವಯಂವರಾಳ ಮನಸ್ಸಿನ ಕಳವಳಗಳು, ತುಡಿತಗಳು ಕ್ಷಾತ್ರನಿಗೆ ಅರಿಯದೇ ಹೋಯಿತು. ಜೀಪಿನ ಮೇಲೆ ಕುಳಿತ ಅವರೆಲ್ಲ ಶಾಸ್ತ್ರಿ ಹೇಳಿದ ಆಸ್ಪತ್ರೆಯ ಕಡೆ ಹೊರಟಿದ್ದರು. ಪ್ರತಾಪ್ ಡ್ರೈವ್ ಮಾಡುತ್ತಿದ್ದರೆ ಕ್ಷಾತ್ರ ಆತನ ಪಕ್ಕ ಕುಳಿತಿದ್ದ. ಹಿಂದೆ ಸ್ವಯಂವರಾ, ಶಾಸ್ತ್ರಿಕುಳಿತಿದ್ದರು. ಎರಡನೇ ಬಾರಿ ಸ್ವಯಂವರಾ ಶಾಸ್ತ್ರಿಯನ್ನು ಗುರುತಿಸದ ಕಾರಣ ಶಾಸ್ತ್ರಿಯ ಜೊತೆ ಹಿಂದೆ ಕುಳಿತರೆ ತಪ್ಪೆಂದು ಕ್ಷಾತ್ರನಿಗೆ ಅನ್ನಿಸಲಿಲ್ಲ. ಪಕ್ಕದಲಿ ಕುಳಿತಿದ್ದ ಶಾಸ್ತ್ರಿ ಸ್ವಯಂವರಾಳ ಮುಖ ನೋಡಿದ. ಅದೇ ಸಮಯಕ್ಕೆ ಅವಳು ಆತನ ಮುಖ ನೋಡಿದಳು. ಒಂದು ಕ್ಷಣ ಇಬ್ಬರ ಕಣ್ಣುಗಳು ಸಂಧಿಸಿದವು. ಕ್ಷಾತ್ರ ಕೊಟ್ಟ ಏಟುಗಳಿಂದ ಶಾಸ್ತ್ರಿಯ ಮುಖ ಊದಿಕೊಂಡಿತ್ತು. ಅತಿಯಾದ ಬಳಲಿಕೆಯಿಂದ, ಯೋಚನೆಗಳಿಂದ ಸ್ವಯಂವರಾಳ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಮೂಡಿದ್ದವು. ಸಧ್ಯದಲ್ಲಿ ತಮ್ಮಿಬ್ಬರ ಪರಿಸ್ಥಿತಿಯೂ ಒಂದೆ ಎಂದುಕೊಂಡ ಶಾಸ್ತ್ರಿ. ಒಂದು ಕ್ಷಣ ಆಕೆಯ ಕೈಗಳನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ಸಂತೈಸಲೇ ಎಂದುಕೊಂಡ ಶಾಸ್ತ್ರಿ. ಇವಳಿಂದಲೇ ತಾನು ಇಂತಹ ಶಿಕ್ಷೆಗೆ ಒಳಗಾಗಿದ್ದೇನೆ ಎಂಬುದನ್ನು ಆತ ಯಾವಾಗಲೋ ಮರೆತಂತಿತ್ತು. ಶಾಸ್ತ್ರಿಯ ಗುಣವೇ ಅಂಥದ್ದು. ಗೊತ್ತಿಲ್ಲದೇ ಆದ ತಪ್ಪುಗಳನ್ನು ಆತ ಬಹುಬೇಗ ಕ್ಷಮಿಸಿ ಬಿಡುತ್ತಾನೆ.ಆದರೆ ಮೋಸ ಮಾಡುವವರನ್ನು ಆತ ಕ್ಷಮಿಸಲಾರ.ಬೆನ್ನು ಬಿದ್ದು ಕಾಡುತ್ತಾನೆ. ಶಾಸ್ತ್ರಿಯ ಮುಖದ ಭಾವನೆ ಅರಿತವಳಂತೆ ಸಣ್ಣ ನಗು ನಕ್ಕಳು ಸ್ವಯಂವರಾ. ಅದೊಂದು ಸಣ್ಣ ನಗು ಅವಳ ಮುಖದಲ್ಲಿ ಹೊಸಕಳೆ ತುಂಬಿ ತುಂಬಾ ಮುದ್ದಾಗಿ ಕಂಡಳು. ಪ್ರತಾಪ್, ಕ್ಷಾತ್ರ ಇಬ್ಬರೂ ತಮ್ಮದೇ ಆಲೋಚನೆಯಲಿ ಕಳೆದುಹೋಗಿದ್ದರು. 
ಶಾಸ್ತ್ರಿ ಹಿಂದೆ ಮುಂದೆ ಯೋಚಿಸದೇ ಸ್ವಯಂವರಾಳ ಕೈಯನ್ನು ಅವನ ಕೈಯಲ್ಲಿ ತೆಗೆದುಕೊಂಡು ಗಟ್ಟಿಯಾಗಿ ಹಿಡಿದುಕೊಂಡ. ಸ್ವಯಂವರಾ ತನ್ನ ಕೈಗಳನ್ನು ಹಿಂದಕ್ಕೆ ಎಳೆದುಕೊಳ್ಳಲಿಲ್ಲ, ಕೂಗಲಿಲ್ಲ, ಭಯಗೊಳ್ಳಲೂ ಇಲ್ಲ. ಶಾಸ್ತ್ರಿಯ ಕೈ ಹಿಡಿತವೇ ಸಾಕಿತ್ತು ಅವನ ಮನಸ್ಸಿನ ಭಾವ ಅರ್ಥವಾಗಲು. Dont be sad!! ಕೈ ಹಿಡಿತದಲ್ಲೂ ಆತನ ಕಂಗಳಲ್ಲೂ ಒಂದೇ ಭಾವ.
ಕ್ಷಾತ್ರನ ಆತ್ಮೀಯತೆಯಲ್ಲಿ, ತಬ್ಬುವಿಕೆಯಲ್ಲಿ ಇದೊಂದು ಭಾವ ಆಕೆಗೆ ಯಾವಾಗಲೂ ಅನುಭವವಾಗಿಲ್ಲ. ಹಾಗೆಂದು ಅವನ ತಬ್ಬುವಿಕೆಯಲ್ಲಿ ಬೇರೆ ಯಾವ ತಪ್ಪರ್ಥಗಳಿವೆಯೆಂದಲ್ಲ. ಅವಳ ಪ್ರತೀ ನೋವಿಗೂ ಸ್ಪಂದಿಸಿದ್ದಾನೆ ಆತ. ಆದರೂ ಏನೋ ಕೊರತೆ. ಅವನ ಸನಿಹದಲ್ಲಿಯೂ ಕೂಡ. ಹೆಣ್ಣೊಬ್ಬಳ ಸೂಕ್ಷ್ಮತೆಯನ್ನು ಅರಿಯುವುದು ಬಹಳ ಕಷ್ಟ. ಕ್ಷಾತ್ರ ಅದನ್ನು ಅರಿಯದೇ ಹೋದ.
ಶಾಸ್ತ್ರಿ ಹೇಳಿದ ಆಸ್ಪತ್ರೆಯೆದುರು ನಿಂತಿತು ಜೀಪ್. ಮುಂದೆ ಮುಂದೆ ನಡೆದ ಪ್ರತಾಪ್. ಕ್ಷಾತ್ರ ಸ್ವಯಂವರಾಳ ಬಳಿ ಬಂದು "ಸ್ವಲ್ಪ ಸಮಯದ ಕೆಲಸವಷ್ಟೆ, ನಂತರ ಹೊರಟುಬಿಡೋಣ.." ಎಂದ ಬಹಳ ಕಕ್ಕುಲತೆಯಿಂದ. ಸರಿ ಎನ್ನುವಂತೆ ತಲೆಯಾಡಿಸಿದಳು. ಶಾಸ್ತ್ರಿ ಪ್ರತಾಪನನ್ನು ಹಿಂಬಾಲಿಸಿದರೆ, ಸ್ವಯಂವರಾ ಕ್ಷಾತ್ರನನ್ನು ಹಿಂಬಾಲಿಸಿದಳು. ನಡೆಯುತ್ತಿರುವ ವಿದ್ಯಮಾನಗಳು ಅವಳಿಗೂ ಈಗ ಅರಿವಾಗಿತ್ತು. ತಾನು ಶಾಸ್ತ್ರಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ತಿಳಿದಿತ್ತು. ಅಷ್ಟಾದ ಮೇಲು ಶಾಸ್ತ್ರಿ ತನ್ನ ಜೊತೆ ನಡೆದುಕೊಂಡ ರೀತಿ ಅವಳನ್ನು ಬೆರಗುಗೊಳಿಸಿತ್ತು. ಈ ಕೊಲೆಗೂ, ಆತನಿಗೂ ಸಂಬಂಧವಿಲ್ಲ ಎಂದು ಆಕೆಯ ಮನಸ್ಸು ಹೇಳುತ್ತಿತ್ತು.
ಮನಸ್ಸಿನ ಭಾವುಕತೆಯ ಆಧಾರದ ಮೇಲೆ ಪೊಲೀಸರು ಕಾರ್ಯ ನಿರ್ವಹಿಸುವುದಿಲ್ಲ.ಕೋರ್ಟ್ ಕೂಡ ಅಷ್ಟೇ. ಸಾಕ್ಷಿ ಕೇಳುತ್ತದೆ ನ್ಯಾಯಾಂಗ.
ಪ್ರತಾಪ್ ರಿಸೆಪ್ಶನ್ ನಲ್ಲಿ ಸಿಸಿಟಿವಿ ಫೋಟೇಜ್ ನೋಡಬೇಕು ಎಂದಾಗ ರಿಸೆಪ್ಶನಿಸ್ಟ್ ಮ್ಯಾನೇಜರ್ ಬಳಿ ಮಾತನಾಡುತ್ತಿದ್ದ. ಬಂದಿರುವವರು ಪೋಲಿಸ್ ಆದ್ದರಿಂದ ಕೊಡುವುದಿಲ್ಲ ಎಂಬುದು ಸಾಧ್ಯವಿಲ್ಲ. ಸ್ವತಃ ಮ್ಯಾನೇಜರ್ ಅವರ ಬಳಿ ಬಂದು ವಿಷಯ ಏನೆಂದು ತಿಳಿದುಕೊಂಡು ಸಿಸಿಟಿವಿ ಮೆಂಟೇನೆನ್ಸ್ ರೂಮಿಗೆ ಕರೆದುಕೊಂಡು ಹೋದ. ಕೊಲೆಯಾದ ಡೇಟಿನ ಸಿಸಿಟಿವಿ ಫೋಟೇಜ್ ತೆಗೆಯಲು ಹೇಳಿದ. ಅಲ್ಲಿ ಗಮನಿಸಲು ಕುಳಿತಿದ್ದ ಹುಡುಗ ಯಾವ ವಿಡಿಯೋ ಎಂದು ತಿಳಿಯದೇ ನೋಡುತ್ತಿದ್ದ. ಆಗ ಶಾಸ್ತ್ರಿ "ಹಾಸ್ಪಿಟಲ್ ನಲ್ಲಿ ಒಟ್ಟೂ ಇಪ್ಪತ್ನಾಲ್ಕು ಕ್ಯಾಮೆರಾಗಳಿವೆ. ಮೇನ್ ಗೇಟ್, ರಿಸೆಪ್ಶನ್, ಬಿಲ್ ಕೌಂಟರ್, ಎಲ್ಲ ಫ್ಲೋರ್ ಗಳಲ್ಲಿ, ಹೀಗೆ.. ರಿಸೆಪ್ಶನ್ ಹಾಗೂ ಬಿಲ್ ಕೌಂಟರ್ ವಿಡಿಯೋ ತೆಗೆಯಿರಿ ಸಮಯ 12 ಮತ್ತು 1 ರ ನಡುವೆ.." ಎಂದ.
ಶಾಸ್ತ್ರಿಯ ಕಾನ್ಫಿಡೆನ್ಸ್ ನೋಡಿ ಕ್ಷಾತ್ರನಂತೂ ಶಾಸ್ತ್ರಿಯ ಮಾತುಗಳನ್ನು ಪೂರ್ತಿಯಾಗಿ ನಂಬಿದ. ಸ್ವಯಂವರಾ ತಾನು ಮಾಡಿದ ತಪ್ಪಿಗೆ ಅದಾಗಲೇ ನೊಂದುಕೊಳ್ಳುತ್ತಿದ್ದಳು. ಈಗ ಅನುಮಾನ ಉಳಿದಿರುವುದು ಕೇವಲ ಪ್ರತಾಪ್ ಗೆ ಮಾತ್ರ. ಅಷ್ಟು ಸುಲಭವಾಗಿ ಆತ ಶಾಸ್ತ್ರಿಯನ್ನು ನಂಬಲಾರ.
Camera managemnet operator ಕಂಪ್ಯೂಟರ್ ಸ್ಕ್ರೀನಿನಲ್ಲಿ ಅವರು ಹೇಳಿದ ಟೈಮ್ ನ ವಿಡಿಯೋ ಹಾಕಿ ತೋರಿಸುತ್ತಿದ್ದ. 
ಒಬ್ಬ ವ್ಯಕ್ತಿಯನ್ನು ಸ್ಟ್ರೆಚರ್ ಮೇಲೆ ಹಾಕಿ ಒಳ ತರುತ್ತಿದ್ದಂತೆ ಇತನೇ ತಾನು ಕರೆತಂದ ವ್ಯಕ್ತಿ ಎಂದು ಗುರುತಿಸಿದ ಶಾಸ್ತ್ರಿ. ಇನ್ನೇನು ನನ್ನ ಮುಖ ಕಾಣಿಸುತ್ತದೆ. ಬಿಡುಗಡೆಗೊಂಡು ಹೊರಗಿರುತ್ತೇನೆ ಎಂದು ಸಮಾಧಾನಗೊಂಡ.
ವ್ಯಕ್ತಿಯೊಬ್ಬ ರಿಸೆಪ್ಶನ್ ನಲ್ಲಿ ನಿಂತು ಮಾತನಾಡುತ್ತಿದ್ದಾನೆ. ಹಿಂದಿರುಗಿದರೆ ಅವನೇ ಶಾಸ್ತ್ರಿ. ರಿಸೆಪ್ಶನ್ ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಹಿಂದಿರುಗಿದ.. ಒಮ್ಮೆಲೇ ಮೈ ಜುಮ್ ಎಂದಿತು ಶಾಸ್ತ್ರಿಗೆ. ವಿಡಿಯೋದಲ್ಲಿ ತಾನಿಲ್ಲ. ನನ್ನ ಬದಲಿಗೆ ಇನ್ಯಾರೋ ಇದ್ದಾರೆ. ಮುಖದಲ್ಲಿ ಬೆವರಿನ ಹನಿಗಳು ಮೂಡಿದವು. ಏನು ಮಾಡಬೇಕೆಂದು ತಿಳಿಯದೇ ಎದುರು ಕುಳಿತಿದ್ದ ಆಪರೇಟರ್ ಅನ್ನು ಎಬ್ಬಿಸಿ ತಾನೇ ಕುಳಿತು ಮತ್ತೆ ಮೊದಲಿನಿಂದ ವಿಡಿಯೋ ನೋಡತೊಡಗಿದ. ಸಂಶಯವೇ ಇಲ್ಲ. ಇವನೇ ನಾನು ಆಸ್ಪತ್ರೆಗೆ ಸೇರಿಸಿದ ವ್ಯಕ್ತಿ. ರಿಸೆಪ್ಶನ್ ನಲ್ಲಿ ಮಾತನಾಡುತ್ತಿರುವುದು ನಾನೇ. ತಿರುಗಿ ನಿಂತರೆ ತಾನಿಲ್ಲ. How is it possible??
ಬಿಲ್ಲಿಂಗ್ ಕೌಂಟರ್ ವಿಡಿಯೋ ತೆಗೆದ ಶಾಸ್ತ್ರಿ. ಅಲ್ಲಿಯೂ ಅಷ್ಟೆ ಹಣ ಪಾವತಿಸುತ್ತಿರುವವರು ಬೇರೆ ಯಾರೋ. ಇನ್ನು ಪ್ರತಾಪ್ ನನ್ನನ್ನು ಉಳಿಸುವುದಿಲ್ಲ. ಗಾಳಿಗುಡ್ಡನನ್ನು ಮನೆಗೆ ಕಳಿಸಿದ್ದೇನೆ. ಏನು ಮಾಡುವುದು? ಯಾರೋ ನನ್ನನ್ನು ಬಲೆಗೆ ಬೀಳಿಸಲು ಹೀಗೆ ಮಾಡಿದ್ದಾರೆ. ಆದರೆ ಯಾರು?? ತನ್ನ ಮೇಲೆ ಯಾಕೆ ಹಗೆ?? ಗಾಳಿಗುಡ್ಡನಿಗೆ ಶೇರು ಮಾರ್ಕೆಟ್ಟಿನಲ್ಲಿ ಮೋಸ ಮಾಡಿದ ಬ್ರೋಕರ್ ಏನಾದರೂ ಇದರ ಹಿಂದಿದ್ದಾನೆಯೆ?? ಯೋಚನೆ ಮುಂದುವರೆಯುವುದರಲ್ಲೇ ಇತ್ತು. ಅಷ್ಟರಲ್ಲಿ ಬಲವಾದ ಹಸ್ತವೊಂದು ತನ್ನ ಭುಜದ ಮೇಲೆ ಬಿದ್ದಾಗ ಈ ಜಗತ್ತಿಗೆ ಬಂದ ಶಾಸ್ತ್ರಿ.
"ಇನ್ನೇನಾದ್ರು ಹೇಳುವುದು, ತೋರಿಸುವುದಿದೆಯಾ ಶಾಸ್ತ್ರಿ?" ಗಡುಸಾಗಿತ್ತು ಪ್ರತಾಪನ ಧ್ವನಿ.
"ಈ ವಿಡಿಯೋವನ್ನು ಎವಿಡೆನ್ಸ್ ಎಂದು ಪರಿಗಣಿಸುತ್ತೇವೆ. ನನಗೆ ಸಿಡಿ ತೆಗೆದುಕೊಡಿ" ಎಂದು ಮ್ಯಾನೇಜರ್ ಗೆ ಹೇಳಿ.. "ಶಾಸ್ತ್ರಿ, ಇನ್ನು ನಾಟಕ ಸಾಕು ಮಾಡು, ನಾನು ಹೇಳಿದಂತೆ ಕೇಳಿದರೆ ನಿನಗೇ ಒಳ್ಳೆಯದು" ಎಂದು ಆತನ ಕಾಲರ್ ಹಿಡಿದು ಹೊರಗೆ ಎಳೆದುತಂದ ಪ್ರತಾಪ್.
ತಾಸಿಗೊಂದು ಥರ ಬದಲಾಗುತ್ತಿರುವ ತನ್ನ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ಅರ್ಥವಾಗಲಿಲ್ಲ ಶಾಸ್ತ್ರಿಗೆ. ಆದರೆ ಈ ಬಾರಿ ಕ್ಷಾತ್ರ ಸಮಾಧಾನದಿಂದಿದ್ದ.
"ಪ್ರತಾಪ್ ನನಗೇಕೋ.." ಎಂದು ಏನನ್ನೋ ಹೇಳಲು ಪ್ರಯತ್ನಿಸಿದ ಕ್ಷಾತ್ರನ ಮಾತನ್ನು ಅರ್ಧಕ್ಕೆ ತುಂಡರಿಸಿ "ಕ್ಷಾತ್ರ, ದೆಹಲಿಯಲ್ಲಿ ನಡೆದ ಕೊಲೆಗೂ, ಈತನಿಗೂ ಯಾವುದೇ ಸಂಬಂಧವಿಲ್ಲ ಎಂದು ನೀನಂದುಕೊಂಡರೆ ನನಗೇನು ಅಭ್ಯಂತರವಿಲ್ಲ. ಆದರೆ ನನ್ನ ಜಾಗದಲ್ಲಿ ನಡೆದ ಕೊಲೆಯ ಬಗ್ಗೆ ವಿಚಾರಣೆ ನಡೆಸುವುದು ನನ್ನ ಕರ್ತವ್ಯ ಹಾಗೂ ಜವಾಬ್ದಾರಿ. ಹಾಗಾಗಿ ನೀನದರಲ್ಲಿ ತಲೆ ಹಾಕಬೇಡ." ಕಡ್ಡಿ ತುಂಡು ಮಾಡಿದಂತೆ ಹೇಳಿದ್ದ ಪ್ರತಾಪ್. ನಿನ್ನ ದಾರಿ ನೀನು ನೋಡಿಕೋ ಎಂದಂತಿತ್ತು ಪ್ರತಾಪ್ ನ ಧಾಟಿ. ಕ್ಷಾತ್ರ ಕೊನೆಯ ಬಾರಿ ಶಾಸ್ತ್ರಿಯ ಮುಖ ನೋಡಿದ. ಶಾಸ್ತ್ರಿ ತಾನೇ ಗೊಂದಲದಲ್ಲಿದ್ದ. ವಿಡಿಯೋ ಹೇಗೆ ತಿರುಚಿದರು? ವಿಡಿಯೋ ನೋಡಲು ಬರುತ್ತೇವೆ ಎಂಬ ಮುಂದಾಲೋಚನೆ ಯಾರಿಗಿರಲು ಸಾಧ್ಯ??" ಯೋಚಿಸುತ್ತಲೇ ಕ್ಷಾತ್ರನ ಮುಖ ನೋಡಿ ಪೇಲವ ನಗೆ ನಕ್ಕ ಶಾಸ್ತ್ರಿ. 
"ಇನ್ನು ನಮಗಿಲ್ಲಿ ಕೆಲಸವಿಲ್ಲ ನಡಿ ಸ್ವಯಂವರಾ.." ಎನ್ನುತ್ತಾ ಮುಂದೆ ನಡೆದ ಕ್ಷಾತ್ರ. ಸ್ವಯಂವರಾ ಮತ್ತೆ ಶಾಸ್ತ್ರಿಯನ್ನು ನೋಡುವ ಸಾಹಸ ಮಾಡಲಿಲ್ಲ. ತಾನು ಶಾಸ್ತ್ರಿಯನ್ನು ಇಲ್ಲದ ಸಮಸ್ಯೆಗೆ ಸಿಗಿಸಿದೇನೆ? ಅದೊಂದೆ ಅವಳನ್ನು ಕಾಡುತ್ತಿದ್ದ ಪ್ರಶ್ನೆ.
ಏನೋ ನಡೆಯುತ್ತಿದೆ ಇಲ್ಲಿ. ತಾನಾಗಿ ತಾನು ವಿಡಿಯೋದ ಮಾತನಾಡಿ ಬಲೆಗೆ ಬೀಳುವ ವ್ಯಕ್ತಿಯಲ್ಲ ಶಾಸ್ತ್ರಿ. ಇಲ್ಲಿ ನಾವಂದುಕೊಂಡಿದ್ದಕ್ಕಿಂತ ಕ್ಲಿಷ್ಟ ಸಮಸ್ಯೆಯಿದೆ. ಶಾಸ್ತ್ರಿ ಅದರಲ್ಲಿ ಸಿಕ್ಕಿಬಿದ್ದಿದ್ದಾನೆ ಅಥವಾ ಶಾಸ್ತ್ರಿಯೇ ಏನನ್ನಾದರೂ ಮುಚ್ಚಿಡುತ್ತಿರಬಹುದು. ನೋಡೋಣ ಪ್ರತಾಪ್ ಏನು ಮಾಡುತ್ತಾನೆ ಎಂದು.. ಯಾವುದಕ್ಕೂ ಈಕಡೆಯೂ ಸ್ವಲ್ಪ ಗಮನವಿರಿಸಬೇಕು ಎಂದುಕೊಳ್ಳುತ್ತ ಹೊರಗೆ ಬಂದು, ಟ್ಯಾಕ್ಸಿ ಹಿಡಿದು ಸ್ವಯಂವರಾಳ ಜೊತೆ ಹಿಂದಿನ ಸೀಟಿನಲ್ಲಿ ಕುಳಿತು ಜುಹೂ ಬೀಚ್ ಎಂದ. ಶಾಸ್ತ್ರಿಯನ್ನು ಹತ್ತಿಸಿಕೊಂಡ ಜೀಪ್ ಮುಂಬೈನ ಟ್ರಾಫಿಕ್ ನಲ್ಲಿ ಮಾಯವಾಯಿತು. ತಾನೆಷ್ಟು ಪಕಡ್ಬಂದಿ ಸಮಸ್ಯೆಯಲ್ಲಿ ಸಿಲುಕಿದ್ದೇನೆ ಎಂಬ ಸಣ್ಣ ಅರಿವು ಶಾಸ್ತ್ರಿಗೆ ಆ ಕ್ಷಣದಲ್ಲಿ ಇರಲಿಲ್ಲ.
*...........................................*..........................................................*
"ವಿಹಾರಿ ಮುಚ್ಚುಮರೆ ಮಾಡಿ ನನಗೆ ಅಭ್ಯಾಸವಿಲ್ಲ. ಅದರಿಂದ ನಿನ್ನ ಮತ್ತು ನನ್ನ ಇಬ್ಬರ ಸಮಯವೂ ಹಾಳು. ನೀನು ಈಗ ನನಗೆ ಸಹಾಯ ಮಾಡಿದರೆ ನಾನು ನಿನಗೊಂದು ಸಹಾಯ ಮಾಡಬಲ್ಲೆ. ನೀನು ಕೊಲೆಗಾರ ಎಂದು ನನಗೆ ಗೊತ್ತು. ನೀನು ಮಾಡಿದ ಕೊಲೆಗಳ ಬಗ್ಗೆ ನನ್ನ ಬಳಿ ವಿವರವಿದೆ." ವಿಹಾರಿಯ ಮುಖ ನೋಡಿದ ಸಮ್ಮಿಶ್ರ. ಮುಳ್ಳಿನ ಖುರ್ಚಿಯ ಮೇಲೆ ಕುಳಿತಂತಿತ್ತು ವಿಹಾರಿಗೆ. ಬಹಳ ಹೊತ್ತಿನಿಂದ ನೋಡುತ್ತಿದ್ದ ಸಸ್ಪೆನ್ಸ್ ಸಿನಿಮಾವೊಂದರ ಮಹತ್ವದ ತೆರೆ ಕಳಚಿ ಬಿದ್ದಂತಿತ್ತು. ನನ್ನ ಕೆಲಸ ಮಾಡು, ಇಲ್ಲವೇ ಜೈಲು ಸೇರು. ಅದನ್ನು ಎಷ್ಟು ಚಂದ ರೀತಿಯಲ್ಲಿ ಹೇಳುತ್ತಿದ್ದಾನೆ. ಮಾಡದಿದ್ದರೆ ನಿನ್ನನ್ನು ನಾನು ಹಿಡಿದುಕೊಡುತ್ತೇನೆ ಎಂದು ಹೆದರಿಸುತ್ತಿಲ್ಲ. ಕೆಲಸ ಮಾಡು, ನಿನ್ನನ್ನು ಬಚಾವು ಮಾಡುತ್ತೇನೆಂದು ಅಭಯ ನೀಡುತ್ತಿದ್ದಾನೆ. ಮಾತುಗಳ ಜೋಡಣೆಯಲ್ಲಿ ಅದೆಂತಹ ಅರ್ಥ ವ್ಯತ್ಯಾಸವಿರುತ್ತದೆ. ಅದಕ್ಕೆ ಅಲ್ಲವೇ ಪ್ರಿಯಂವದಾ ರಾಜ್ ಕೂಡ ಈತನನ್ನು ಹತ್ತಿರಕ್ಕೆ ಬಿಟ್ಟು ಕೊಂಡಿದ್ದು. ಇದನ್ನೆಲ್ಲಾ ಯೋಚಿಸುವುದಕ್ಕಿಂತ ಮುಂದೇನು ಮಾಡಬೇಕು ಎಂದು ಯೋಚಿಸಬೇಕು. 
"ಕೇವಲ ದೆಹಲಿಯ ಆಸ್ಪತ್ರೆಯಲ್ಲಿ ಮಾಡಿದ ಕೊಲೆಯಲ್ಲ, ನೀನು ಮುಂಬೈಯಲ್ಲಿ ಇನ್ನೊಂದು ಕೊಲೆ ಮಾಡಿದೆ ಅದರ ಬಗ್ಗೆಯೂ ಪೊಲೀಸರಿಗೆ ವಿವರ ಸಿಕ್ಕಿದೆ. ಅವರೀಗ ಇನ್ನೊಬ್ಬನ ಮೇಲೆ ಅನುಮಾನಗೊಂಡು ಬಲೆ ಬೀಸಿದ್ದಾರೆ. ಆದರೆ ಅದು ಬಹಳ ಹೊತ್ತು ನಿಲ್ಲುವ ಅನುಮಾನವಲ್ಲ. ಆಮೇಲೆ ಅವರು ಸುಳಿವು ಹಿಡಿದು ನಿನ್ನ ಹಿಂದೆ ಬೀಳುತ್ತಾರೆ. ಪೊಲೀಸರು ಯಾವ ಕಾರ್ನರ್ ನಿಂದ ವಿಚಾರಣೆ ಸ್ಟಾರ್ಟ್ ಮಾಡಿದ್ದಾರೆ ಎಂದು ನಾನು ಹೇಳಬಲ್ಲೆ. ನಿನ್ನ ಬಳಿ ಒಂದು ನಿಮಿಷ ಕಾಲಾವಕಾಶವಿದೆ." ಎಂದಷ್ಟೇ ಹೇಳಿ ಸುಮ್ಮನೇ ಕುಳಿತ ಸಮ್ಮಿಶ್ರ. 
ಜೀವನದಲ್ಲಿ ಒಂದು ನಿಮಿಷದ ಬೆಲೆ ಏನೆಂಬುದನ್ನು ಬಹುತೇಕ ಜನ ಸಾಯುವ ತನಕ ಅರಿಯುವುದಿಲ್ಲ. ನಿಮಿಷದ ಸಾವಿರದ ಒಂದು ಭಾಗದಲ್ಲಿ ಗುರಿ ನೋಡಿ ಟ್ರಿಗರ್ ಒತ್ತುವ ಗರುಡನಿಗೆ, ಪ್ರಿಯಂವದಾ ರಾಜ್ ಳಂಥ ಕಿಂಗ್ ಮೇಕರ್ ಳ ಕ್ಷಣ ಕ್ಷಣಗಳ ಮ್ಯಾನೇಜ್ ಮಾಡುವ ಸಮ್ಮಿಶ್ರನಂಥವರಿಗೆ ನಿಮಿಷವೆಂಬುದು ಬಹು ಅಮೂಲ್ಯ. ವಿಹಾರಿಯ ಬಳಿ ಬೇರೆ ದಾರಿ ಉಳಿದಿಲ್ಲ. ಪ್ರಿಯಂವದಾ ರಾಜ್ ಳಂಥ ಕಿಂಗ್ ಪಿನ್ ಗೆ ಚೆಕ್ ಮೀಟ್ ಮಾಡಿದ ಸಮ್ಮಿಶ್ರ ಆತ. ಮತ್ತೆ ಹತ್ತು ವರ್ಷದ ಅನುಭವವೂ ಆತನ ಸಾಥ್ ನೀಡಿದೆ ಈಗ. ಮತ್ತು ಪಕ್ವವಾಗಿದ್ದಾನೆ ಸಮ್ಮಿಶ್ರ. ಆತ ಚೆಕ್ ಕೊಟ್ಟರೆ ಮುಗಿಯಿತು. ಚೆಕ್ ಎಂಡ್ ಮೀಟ್. 
"ನಿನ್ನ ಒಂದು ನಿಮಿಷ ಮುಗಿಯಿತು ವಿಹಾರಿ.." ಎದ್ದು ನಿಂತ ಸಮ್ಮಿಶ್ರ. 
"ನಾನು ನಿನ್ನ ಕೆಲಸಗಳನ್ನು ಮಾಡಿದ ಮೇಲೂ ಈ ವಿವರಗಳು ಪೋಲೀಸರ ಕೈ ಸೇರುವುದಿಲ್ಲ ಎಂದು ಏನು ಗ್ಯಾರೆಂಟಿ??" 
ನಕ್ಕ ಸಮ್ಮಿಶ್ರ. "ವಿಹಾರಿ ಬ್ರದರ್, ನಾನು ರಾಜಕೀಯ ವಲಯದಲ್ಲಿರುವವನು. ಇದಕ್ಕಿಂತ ದೊಡ್ಡ ಸತ್ಯಗಳು ನನ್ನಲ್ಲಿವೆ. ನೀನು ಮಾಡಿದ್ದು ಸಾಸಿವೆ ಕಾಳಿನಷ್ಟು ಸಣ್ಣ ತಪ್ಪುಗಳಷ್ಟೆ. ತಿಮಿಂಗಲಗಳನ್ನು ನೀನಿನ್ನೂ ನೋಡಿಲ್ಲ. ಈ ಸಮುದ್ರಕ್ಕೆ ನೀನಿಗಷ್ಟೇ ಒಳಕ್ಕೆ ಬರುತ್ತಿದ್ದೀಯಾ.. ಎಲ್ಲಿಯವರೆಗೆ ನೀನು ನನ್ನ ಆಶ್ರಯದಲ್ಲಿರುತ್ತಿಯೋ ಅಲ್ಲಿಯವರೆಗೆ no one can touch you.." ಸಣ್ಣಗೆ ಸಿಳ್ಳೆ ಹಾಕಿದ ಸಮ್ಮಿಶ್ರ. ವಿಹಾರಿಯ ಉತ್ತರವೆನೆಂದು ಆತ ತಿಳಿದುಕೊಂಡಿದ್ದ. ಈಗಲ್ಲ ವಿಹಾರಿಯನ್ನು ಎತ್ತಾಕಿಕೊಂಡು ಬರಲು ಹೇಳಿದಾಗಲೇ ಆತ ಅದನ್ನು ಬಲ್ಲ. ಬಾಗಿಲು ಹಾಕಿಕೊಂಡು ಹೋದ ಇಬ್ಬರೂ ವಾಪಸ್ ಬಂದರು. ಎರಡು ನಿಮಿಷದಲ್ಲಿ ವಿಹಾರಿಯೇದುರು ಕಂಪ್ಯೂಟರ್ ಗಳು ಜೋಡಣೆಯಾದವು. ನೋಡುತ್ತಲೇ ತಿಳಿಯಿತು ಅವೆಷ್ಟು ಸುಪರ್ ಫಾಸ್ಟ್ ಕಂಪ್ಯೂಟರ್ ಗಳೆಂದು. ಸಮ್ಮಿಶ್ರನ ತಲೆಗೆ ಸಾಟಿಯಿದೆಯಾ ಎಂದುಕೊಂಡ. ಸಮ್ಮಿಶ್ರನಿಗೆ ಮೊದಲೇ ಗೊತ್ತಿದೆ ವಿಹಾರಿ ತಪ್ಪಿಸಿಕೊಳ್ಳಲಾರ. ಒಂದಲ್ಲ ಒಂದು ರೀತಿಯಿಂದ ತನ್ನಿಂದ ಕೆಲಸ ಮಾಡಿಸುತ್ತಾನೆ. ಹಾಗಾಗಿಯೇ ಎಲ್ಲ ರೆಡಿ ಮಾಡಿಸಿದ್ದಾನೆ. hats off ಸಮ್ಮಿಶ್ರ ಎಂದುಕೊಂಡ ಮನಸ್ಸಿನಲ್ಲಿಯೇ ವಿಹಾರಿ. 
ಕಂಪ್ಯೂಟರ್ ಸೆಟ್ ಮಾಡಿ ಹೊರಹೋಗುತ್ತಲೇ "ವಿಹಾರಿ, ನಿನ್ನ ಮೊದಲ ಟೆಸ್ಟ್ ಆಗಿ ನಿನ್ನನ್ನು ನೀನು ಉಳಿಸಿಕೋ. ಪೊಲೀಸರು ಏರ ಪೋರ್ಟಿನ ಸಿಸಿಟಿವಿ ಫೋಟೇಜ್ ನೋಡುತ್ತಿದ್ದಾರೆ. ಈಗವರು ಬೇರೆಯವರ ಮೇಲಿನ ಅನುಮಾನದಿಂದ ಅರ್ಧವಷ್ಟೇ ಇನವೆಷ್ಟಿಗೇಶನ್ ಮಾಡಿದ್ದಾರೆ. ಅದಕ್ಕೆ ನೀನಿನ್ನು ಇಲ್ಲೇ ಇರುವೆ. ಅವರು ಫುಲ್ ವಿಡಿಯೋ ನೋಡಿದರೆ ಸಿಗುವುದು ನೀನೇ. ಹಾಗಾಗಿ You know what to do next!!" 
ಅಷ್ಟಲ್ಲದೇ ಮುಂಬೈಯಲ್ಲಿ ನಿನ್ನ ಹತ್ಯಾ ಪ್ರಯತ್ನದ ನಂತರ ಒಬ್ಬ ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾನೆ. ಪೊಲೀಸರ ಸಂಶಯ ಈಗ ಆತನ ಮೇಲೆಯೇ ಇದೆ. 
ಆತನೇ ಆಸ್ಪತ್ರೆಗೆ ಸೇರಿಸಿದ ಎಂಬ ಮಾಹಿತಿಯೇ ಇಲ್ಲದಂತೆ ಮಾಡಿದರೆ!!??"
ಸಮ್ಮಿಶ್ರ ಎಂಥ ಚಾಣಾಕ್ಷ ಎಂದು ತಿಳಿಯಿತು ವಿಹಾರಿಗೆ. ತನ್ನನ್ನು ಉಳಿಸಿಕೊಳ್ಳಲು ಇನ್ನೊಬ್ಬನನ್ನು ಬಲಿ ಕೊಡುವುದು ತಪ್ಪಲ್ಲವಾ?? ಆದರೆ ವಿಹಾರಿಗೆ ಬೇರೆ ದಾರಿ ಕಾಣಲಿಲ್ಲ. ಒಮ್ಮೆ ಆ ಮಾಹಿತಿಗಳನ್ನೆಲ್ಲ ಅಳಿಸಿದರೆ ಮತ್ತೆ ಸಮ್ಮಿಶ್ರ ನಿಗೂ ಸವಾಲ್ ಹಾಕಬಹುದು ಎಂದುಕೊಂಡ ವಿಹಾರಿ. 
"ಈಗ ಉಳಿದಿರುವುದು ಒಂದೇ, Hacking!! Airport cctv database. ಆಸ್ಪತ್ರೆಯ database. ಮಾಹಿತಿ ತಪ್ಪಿಸಬೇಕು, ಅಳಿಸಬೇಕು. ವಿಹಾರಿಯ ಕೈ ಬೆರಳು ಕೀಬೋರ್ಡ್ ನ ಮೇಲೆ ತಲೆಗೆ ಸ್ಫರ್ಧಿಸುವಂತೆ ಓಡತೊಡಗಿತು. ಸಣ್ಣ ಮುಗುಳ್ನಗೆಯೊಂದಿಗೆ ಹೊರಬಿದ್ದ ಸಮ್ಮಿಶ್ರ. 
ಆಸ್ಪತ್ರೆಯ ಸಿಸಿಟಿವಿ ಡೇಟಾದಲ್ಲಿ ಶಾಸ್ತ್ರಿಯ ಮುಖದ ಬದಲು ಇನ್ನೊಬ್ಬ ವ್ಯಕ್ತಿಯ ಮುಖವನ್ನು ಅದೆಷ್ಟು ಚಂದವಾಗಿ ವಿಹಾರಿ ಸೇರಿಸಿದ್ದನೆಂದರೆ? ಪ್ರತಾಪ್, ಕ್ಷಾತ್ರನ ಜೊತೆ ಬಂದು ವಿಡಿಯೋ ನೋಡಿದ ಶಾಸ್ತ್ರಿಯೇ ಅವಾಕ್ಕಾಗಿ ಹೋಗಿದ್ದ.
ವಿಹಾರಿ.. ದಿ ಕಿಲ್ಲರ್.
ಶಾಸ್ತ್ರಿ... ದಿ ಬ್ರಿಲಿಯಂಟ್..!!
ಕ್ಷಾತ್ರ.. ಒನ್ ಮ್ಯಾನ್ ಆರ್ಮಿ..!!
ಸಮ್ಮಿಶ್ರ.. ದಿ ಗೇಂ ಪ್ಲಾನರ್
ಗರುಡ.. ದಿ ಅಸಾಸಿನ್
ಒಬ್ಬರ ಹಾದಿಗಳು ಇನ್ನೊಬ್ಬರ ಹಾದಿಯೊಂದಿಗೆ ಹಾಸುಹೊಕ್ಕಾಯಿತು. ಸಮಯ ವೇಗವಾಗಿ ಓಡತೊಡಗಿತು. ವಿಹಾರಿ ವೀಡಿಯೊಗಳನ್ನು ಬದಲಿಸುವ ಮುನ್ನವೇ ಅದರ ಕಾಪಿಗಳನ್ನು ಸಮ್ಮಿಶ್ರ ತೆಗೆಸಿ ಇಟ್ಟುಕೊಂಡಿದ್ದಾನೆ ಎಂಬ ಸಣ್ಣ ಸಂಶಯವು ವಿಹಾರಿಗೆ ಬರದೆ ಹೋಯಿತು.
*........................................................*...............................................*
ಮಾತುಗಳು ವರ್ಷಿಸುತ್ತವೆ.. ಭಾವಗಳು ಸ್ಪರ್ಷಿಸುತ್ತವೆ.. ಪ್ರತೀ ಉಸಿರು ನಿನ್ನ ನೆನೆದು ಹರ್ಷಿಸುತ್ತದೆ. ನೀರಿನಲೆಗಳ ಮೇಲೆ ಚಂದ್ರನ ಪ್ರತಿಬಿಂಬ ಮೂಡಿ, ರಾತ್ರಿಯಲ್ಲಿ ಅರಳಿದ ಮುದುಡು ತಾವರೆ ತನ್ನ ಕನಸಿನಲ್ಲಿ ಚಂದದ ಬಿಳುಪು ರಾಜಹಂಸದ ಜೊತೆ ಲಲ್ಲೆಗರೆಯುವ ಸುಂದರ ಪ್ರಣಯ ಪ್ರಲಾಪವೊಂದು ನನ್ನ ಮನದಲ್ಲೂ ಆಗಾಗ ರೆಕ್ಕೆ ಬಿಚ್ಚಿ ಹಾರುತ್ತದೆ. ಯೌವ್ವನವು ಇಂದು ಬಂದು ನಾಳೆ ಹೋಗುವ ಸೊಗಸುಗಾರ. ಪ್ರೀತಿಯೆಂಬುದು ಮಾತ್ರ ಕೊನೆಯ ತನಕ ಮಧುರ ನೆನಪುಗಳಾಗಿ, ವರ್ತಮಾನದ ಊರುಗೋಲಾಗಿ ನಮ್ಮ ಜೊತೆ ಉಳಿದು ಹೋಗುವ ದಿವ್ಯ ಆಟಗಾರ. ನೀ ಹುಚ್ಚು ಹುಡುಗ. ನನ್ನ ಮೈ ತಾಕಿದರೆ ಸಾವಿರ ಕನಸುಗಳು, ಸಾವಿರ ವಾಂಛೆಗಳು ಎದ್ದು ನಿಲ್ಲುತ್ತವೆ. ಅದೇಕೆ ನೀ ದೂರ ನಿಲ್ಲುತ್ತೀಯಾ?? ಇವಿಷ್ಟೂ ವರ್ಷಗಳು, ಬೇಸರವಿಲ್ಲದೆ ಕನಸಿನ ನೇಯ್ಗೆ ಹೆಣೆದು, ನನ್ನ ಪ್ರಪಂಚಕ್ಕೆ ಯಾರನ್ನೂ ಬಿಡದೆ, ಕಟ್ಟಿದ ಮಹಲುಗಳನ್ನೇ ಮತ್ತೆ ಮತ್ತೆ ಚಂದವಾಗಿಸಿ ಅದೆಂತಹ ರೂಪುರೇಷೆ ಕೊಟ್ಟಿದ್ದೇನೆ ನೋಡಬೇಕೆನ್ನಿಸುವುದಿಲ್ಲವಾ ನಿನಗೆ??
ನೀ ಸನಿಹ ಬಂದಾಗಲೆಲ್ಲ ನಾ ಕಟ್ಟಿದ ಸುಂದರ ಮಹಲುಗಳ ಬಾಗಿಲನ್ನು ನಿನಗಾಗಿ ತೆರೆಯುವ ಸಾಹಸ ಮಾಡಬೇಕೆಂದೆನ್ನಿಸುತ್ತಿದೆ. ನಿನಗೇಕೆ ಮನಸ್ಸಾಗುತ್ತಿಲ್ಲ?? ನನ್ನಂದ ಸಾಲದೇ!! ಅಥವಾ ಸುಮ್ಮನೆ ಕಾಡಿಸಿ ತಿನ್ನುವ ಸಂಚೆ?? 
ಇದು ಬರೀ ಕಾಮನೆಗಳ ಉದ್ವೇಗವಲ್ಲ ಹುಡುಗಾ. ಭಾವನೆಗಳ ಸುಪ್ತ ಸಮುದ್ರ. ಸಮುದ್ರದ ನೀರಿನಷ್ಟು ಭಾವಗಳು ಎದೆಯಲ್ಲಿ ತುಂಬಿದಾಗ ಅಲೆ ಮೂಡುವುದು ಸಹಜವಲ್ಲವೇ? ನೀನೇ ಹೇಳು.. 
ಅಲೆಅಲೆಯಾಗಿ ನಾ ನಿನ್ನತ್ತ ಸಾಗಿ ಬಂದರೆ ಭಯ ಬೀಳುವಿಯಾ?? ನನ್ನ ಆಸೆಯೇನೋ ಸಹಜವೇ..ದಡಗಳಿಗೆ ಬಡಿದು ಪ್ರತೀ ಕಣಗಳನ್ನು ನನ್ನಲ್ಲಿ ಹುದುಗಿಸಿಕೊಳ್ಳುವ ಆಸೆ. 
ಆದರೆ ಉಪ್ಪು ನೀರಿನಂಥ ಕ್ರೂರತೆ ನನ್ನಲ್ಲಿಲ್ಲ.ನಾನೇನಿದ್ದರೂ ಸಿಹಿ ನೀರು. ನಿನ್ನ ಪ್ರತೀ ಖಾಲಿ ಜಾಗಗಳಲ್ಲಿ ಸಂಚರಿಸಿ ಬೃಂದಾವನ ಸೃಷ್ಟಿಸುತ್ತೇನೆ ಹೊರತಾಗಲೀ, ನಿನ್ನ ಅಸ್ತಿತ್ವವನ್ನು ಪ್ರಶ್ನಿಸುವ ಅಹಂಕಾರ ನನ್ನ ಪ್ರೀತಿಗಿಲ್ಲ. ನಾನಿನ್ನು ತಡೆಯಲಾರೆ ಹುಡುಗಾ... ಬಹುಬೇಗ ಹತ್ತಿರ ಸೇರಿಸಿಕೊ... ಸೆರೆಯಲ್ಲೂ ಹಿತವಿದೆ ಎಂದೆನ್ನಿಸುತ್ತಿದೆ. ಜೀವನದಲ್ಲಿ ಯಾರಿಗೂ ಕೊಡದಿದ್ದನ್ನು ನಿನಗೆ ಕೊಡುತ್ತೇನೆ ಎಂದಿದ್ದೆನಲ್ಲ ನೀನಲ್ಲದೇ ಇನ್ಯಾರಿಗೆ ಕೊಡಲಿ? 
ಬಂದುಬಿಡು ಇನಿಯಾ.. ನನ್ನ ಪ್ರೀತಿಯ ಜಗತ್ತಿಗೆ..... 
ತಾನು ಬರೆದ ಪತ್ರ ಮತ್ತೊಮ್ಮೆ ತಾನೇ ಓದಿಕೊಂಡಳು ಸರೋವರಾ!! ನಾಚಿಕೆ ಭರಿತ ಕೆಂಪು ರಸಿಕತೆ ತುಂಬಿದ ಸುಂದರ ನಗುವೊಂದು ಅವಳ ಮುಖದಲಿ ಹಾದು ಹೋಯಿತು. ಬಹಳ ದಿನಗಳಿಂದ ಜೀವನವೆಖೋ ನೀರಸವೆನ್ನಿಸಿಬಿಟ್ಟಿತ್ತು. ಮಾಡಿದ್ದೇ ಕೆಲಸ ಮಾಡು.. ಸಂಬಳ ತಗೋ.. ಮತ್ತದೇ ಕೆಲಸ.. ಬದುಕು ಇಷ್ಟಕ್ಕೇ ಸೀಮಿತವಾ?? ಎನ್ನಿಸಿಬಿಟ್ಟಿತ್ತು. 
ಶಾಸ್ತ್ರಿಯ ಅಂತರಂಗ ಕೆಣಕಬೇಕು ಎಂದುಕೊಂಡು ಒಂದು ರಸಿಕತೆ ತುಂಬಿದ ಪತ್ರ ಬರೆದುಕೊಂಡು ತಾವು ಸಿಗುವ ಜಾಗಕ್ಕೆ ಬಂದು ಕುಳಿತಿದ್ದಳು.ಶಾಸ್ತ್ರಿ ಎಷ್ಟು ಹೊತ್ತಿಗೆ ಬರುತ್ತಾನೆ?? ಯಾವಾಗ ಪತ್ರ ಓದುತ್ತಾನೆ?? ಪತ್ರ ಓದಿದ ಕೂಡಲೇ ತನ್ನ ಸೊಂಟ ಗಿಲ್ಲುತ್ತಾನಾ? ಇಲ್ಲವೇ ತುಟಿಗೆ ತುಟಿ ಸೇರಿಸಿ ಕುಳಿತು ಬಿಡುತ್ತಾನಾ?? ಮತ್ತಷ್ತು ಕೆಂಪಾಯಿತು ಅವಳ ಮುಖ. 
ಹಿಂದಿನಿಂದ ಸದ್ದಾಯಿತು. ಶಾಸ್ತ್ರಿಯೇ ಬಂದ ಎಂದು ಎದ್ದು ನಿಂತಳು ಸರೋವರಾ ಖುಷಿಯಿಂದ. 
ಪ್ರತಾಪ್..!!
ಪೊಲೀಸ್ ಯುನಿಫಾರ್ಮ್ ನಲ್ಲಿರದೇ ಕ್ಯಾಶುವಲ್ ನಲ್ಲಿ ಬಂದಿದ್ದ. ಒಮ್ಮಲೇ ಅವಳ ಉತ್ಸಾಹಕ್ಕೆ ಯಾರೋ ನೀರೆರೆಚಿದಂತಾಯಿತು. ಕೈಯಲ್ಲಿರುವ ಕಾಗದವನ್ನು ಆದಷ್ಟೂ ಕಾಣದಂತೆ ಮಾಡಲು ಪ್ರಯತ್ನಿಸಿದಳು. ಆಶ್ಚರ್ಯಕರ ಭಾವವೊಂದು ಅವಳ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.
"ಇದೇನಿದು ಪ್ರತಾಪ್ ನೀವಿಲ್ಲಿ???" ಮಾತಿಗಷ್ಟೆ ಕೇಳಿದ್ದು ಅವಳು.
ಪ್ರತಾಪ್ ಕೂಡ ಅವಳ ಗೊಂದಲ ಅರಿತ. 
"ನಿಮ್ಮನ್ನು ನೋಡಿ ಮಾತನಾಡಿ ಹೋಗೋಣ ಎಂದು ಬಂದೆ. ಕುಳಿತುಕೊಳ್ಳಿ ಹೇಳುತ್ತೇನೆ." ಅವಳು ಕುಳಿತಿದ್ದ ಕಲ್ಲು ಬೆಂಚಿನ ಮೇಲೆ ಕುಳಿತ. 
ಶಾಸ್ತ್ರಿ ಇನ್ನೂ ಏಕೆ ಬಂದಿಲ್ಲ?? ಸಮಯಕ್ಕೆ ಬಹಳ ಮಹತ್ವ ಕೊಡುವ ವ್ಯಕ್ತಿ!! ಯಾವಾಗಲೂ ಕಾಯಿಸಿದ ವ್ಯಕ್ತಿಯಲ್ಲ. ಬೇಗ ಬಾ ಶಾಸ್ತ್ರಿ ಎಂದುಕೊಂಡಳು. ಅವಳಲ್ಲೊಂದು ಅನಕಂಫರ್ಟೇಬಲ್ ಚಡಪಡಿಕೆ ಪ್ರಾರಂಭವಾಯಿತು. 
ಒಂದು ನಿಮಿಷ ಸುಮ್ಮನೇ ಕುಳಿತ ಪ್ರತಾಪ ಸರೋವರಾಳ ಕಡೆ ನೋಡಿ, "ನಿಮ್ಮ ಅನಿಸಿಕೆ ಸರಿ, ಶಾಸ್ತ್ರಿ ಒಬ್ಬ ಕೊಲೆಗಾರ.."
ನಿಮಿಷಗಳೇ ಕಳೆದವು ಪ್ರತಾಪ್ ಏನು ಹೇಳಿದ ಎಂದು ಅರ್ಥ ಮಾಡಿಕೊಳ್ಳಲು. 
"You are lying.." ಅವಳ ಕಂಗಳಲ್ಲಿ ನೀರು ತುಳುಕಿತು. 
"ಇಲ್ಲಾ ಸರೋವರಾ, ನಿನ್ನ ಡೌಟ್ ಮೇಲೆ ಇನವೆಷ್ಟಿಗೇಶನ್ ಮಾಡಿದೆ. ಈಗ ಶಾಸ್ತ್ರಿ ಜೈಲಿನಲ್ಲಿದ್ದಾನೆ. ನಾಳೆ ಕೋರ್ಟ್ ಗೆ ಹಾಜರುಪಡಿಸುತ್ತೇನೆ. He is a culprit. 
ಏನು ಹೇಳಬೇಕೆಂದು ತಿಳಿಯಲಿಲ್ಲ ಸರೋವರಾಳಿಗೆ. ಉಕ್ಕಿ ಬರುತ್ತಿರುವ ಅಳುವನ್ನು ತುಟಿ ಕಚ್ಚಿ ತಡೆದುಕೊಂಡಳು. ಕೈಲಿದ್ದ ಕಾಗದ ಅಲ್ಲೇ ಮುದ್ದೆಯಾಗಿ ಹೋಯಿತು. ಮುರಿದು ಬೀಳುತ್ತಿರುವ ಅವಳ ಕನಸುಗಳ ಮಹಲಿಗೆ ಸಾಕ್ಷಿಯೆಂಬಂತೆ ಕಂಡಿತು ಮುದುಡಿದ ಕಾಗದ. ನಡೆದಿದ್ದನ್ನೆಲ್ಲ ವಿವರಿಸಿದ ಪ್ರತಾಪ್. ಆತನ ಮಾತು ಕೇಳಿದ ನಂತರ ಏನು ಮಾತನಾಡಬೇಕು? ಏನು ಮಾಡಬೇಕು ಎಂದು ತಿಳಿಯದೇ ಕುಳಿತಳು ಸರೋವರಾ. ಶೂನ್ಯ ಅವಳನ್ನು ಆವರಿಸಿತು. ಪ್ರತಾಪ್ ಅವಳ ಕೈಯನ್ನು ತನ್ನ ಕೈಯೊಳಗೆ ಸೇರಿಸಿದ. 
"ಸರೋವರಾ, ಆತ ನಿನಗೆ ಒಳ್ಳೆಯ ಸಂಗಾತಿಯಲ್ಲ. ಅಧ್ಯಾಯ ಮುಗಿಸಿ ಬಿಡು. ನಿನ್ನ ನಾನು ಬಲ್ಲೆ. ಒಳ್ಳೆಯ ಜೀವನವಿದೆ ನಿನಗೆ.." 
ಆತನ ಮಾತು ಅರ್ಥವಾಗುವ ಸ್ಥಿತಿಯಲ್ಲಿರಲಿಲ್ಲ ಆಕೆ. ಹಾಗೆಯೇ ಕುಳಿತೇ ಇದ್ದಳು. ಮೌನ ಮುಂದುವರೆಯಿತು. ಸ್ವಲ್ಪ ಸಮಯದ ಬಳಿಕ ಪ್ರತಾಪ್ ತಾನೇ ಆಕೆಯ ಕೈ ಇಂದ ಕೈ ತೆಗೆದು ಹೊರಡುತ್ತೇನೆಂದು ಎದ್ದು ನಿಂತ.
ಸರೋವರಾ ಕುಳಿತೆ ಇದ್ದಳು. ಮೌನದಲ್ಲಿ ಅದ್ದಿ ತೆಗೆದ, ಶಿಲ್ಪಿ ಕೆತ್ತಿದ ಮೂರ್ತಿಯಂತೆ, ಗಾಳಿಯು ಇಲ್ಲದಿರುವಾಗ ಶಾಂತವಾಗಿ ಅಲೆಯಿಲ್ಲದೆ ಚಲಿಸದೆ ನಿಂತ ಸರೋವರದಂತೆ ಮೌನದಲ್ಲಿಯೇ ಇದ್ದಳು ಸರೋವರಾ....
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/

No comments:

Post a Comment