Saturday, July 23, 2016

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 25

                                    ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 25

ವಿಹಾರಿಯ ತಲೆ ಕಾದ ಕುಲುಮೆಯಂತಾಗಿತ್ತು. ಎರಡು ದಿನದಿಂದ ಆತ ಎಡಬಿಡದೆ HIM ಸಂಕೇತದ ಹಿಂದೆ ಬಿದ್ದಿದ್ದ. ಸಮ್ಮಿಶ್ರ ಬಲವಂತವಾಗಿ ವಿಹಾರಿಯ ಬಳಿ ಆ ಕೆಲಸ ಮಾಡುವಂತೆ ಮಾಡಿದ್ದ. ಅದರೊಳಗಿನ ಗೂಡಾರ್ಥವೇನು ಎಂದು ಕಂಡು ಹಿಡಿಯಲು ಮೊದಲಿಗೆ ಆತನಿಗೆ ಮನಸ್ಸಿರಲಿಲ್ಲ. ಎರಡು ದಿನದ ನಂತರ ವಿಹಾರಿಗೆ ಅದೊಂದು ರೀತಿಯ ಜಿದ್ದು ಹುಟ್ಟಿಕೊಂಡಿತು.
ಹ್ಯಾಕಿಂಗ್ ಎಂಬುದು ಜಾದೂ ಅಲ್ಲ. ಅದೊಂದು ಕಲೆ. ತಲೆಯೊಳಗಿನ ಲಾಜಿಕ್ ಸ್ಕಿಲ್ ಎಷ್ಟು ಉತ್ತಮವಾಗಿದೆ ಹಾಗೂ ಮಾಹಿತಿ ಸಂಗ್ರಹಣೆ ಹೇಗಿದೆ ಎಂಬುದರ ಮೇಲೆ ಹ್ಯಾಕಿಂಗ್ ಮಹಲು ಎದ್ದು ನಿಲ್ಲುತ್ತದೆ. ಸೂಪರ್ ಸಾನಿಕ್ ವೇಗದಲ್ಲಿ ಕೆಲಸ ಮಾಡುವ ಕಂಪ್ಯೂಟರ್, ಹ್ಯಾಕರ್ ಉಪಯೋಗಿಸುವ ಕೀ ವರ್ಡ್ ಗಳನ್ನು ಬಳಸಿಕೊಂಡು ಮಹತ್ವದ ದಾಖಲೆಗಳನ್ನು ಚಿಂದಿ ಮಾಡಿ ಬಿಡಬಲ್ಲದು. ಫೈರ್ ವಾಲ್ ಗಳನ್ನು, IP Address ಗಳನ್ನು ಬೇಧಿಸಿಇನ್ನೊಬ್ಬರ ಮಷಿನ್ ಗಳಲ್ಲಿರುವ ಡಾಟಾ, ಅದರ ಮಹತ್ವ, ಅದರ ಒಳ ಅರ್ಥಗಳು ಎಲ್ಲವನ್ನೂ.. ಮನಸ್ಸು ಮಾಡಿದರೆ ಒಬ್ಬ ಹ್ಯಾಕರ್ ಎಲ್ಲವನ್ನೂ ಬದಲಾಯಿಸಿಬಿಡಬಲ್ಲ.
"HIM". "HIM". ಸಾಯುವ ಸಮಯದಲ್ಲಿ ಏಕೆ ಹೀಗೆ ಬರೆದಿಟ್ಟಳು? ಆಕೆ ಸಾಯದೆ ಕೋಮಾದಲ್ಲಿ ಇರಬಹುದು ನಿಜ. ಆದರೆ ಆಕೆ ಮಾತ್ರ ತಾನು ಸಾಯುತ್ತೇನೆ ಎಂದು ತಿಳಿದುಕೊಂಡೇ ಏನನ್ನೋ ಬರೆಯಲು ಹೊರಟಿದ್ದಾಳೆ. ತನಗೆ ಗುಂಡು ಹೊಡೆದವರು ಯಾರೆಂದು ಆಕೆಗೆ ತಿಳಿದಿತ್ತಾ?? ಅದರ ಬಗ್ಗೆ ಮಾಹಿತಿ ನೀಡಲು ಹೊರಟಿದ್ದಳಾ?? ಅಥವಾ??
ಪ್ರಿಯಂವದಾ ರಾಜ್.. ಊಹಾಪೋಹಗಳ ಪ್ರಕಾರ ವಿದೇಶಿ ಬ್ಯಾಂಕ್ ಗಳಲ್ಲಿ ಅದೆಷ್ಟೋ ಕೋಟಿ ಕಪ್ಪು ಹಣ ಇದೆ ಆಕೆಯ ಬಳಿ. ಅದು ನಿಜವಾ? ಸುಳ್ಳಾ?? ಯಾರೊಬ್ಬರಿಗೂ ಗೊತ್ತಿಲ್ಲ. ಆಕೆಯ ವಿರೋಧಿಗಳು ಈ ಬಗ್ಗೆ ಹೇಳುತ್ತಾರಾಗಲೀ ಅದು ಎಲ್ಲಿದೆ? ಯಾವ ರೂಪದಲ್ಲಿದೆ?? ಅವರಿಗೆ ಕೂಡ ತಿಳಿದಿಲ್ಲ. ಆ ವಿಷಯ ನೆನಪಾಯಿತು ವಿಹಾರಿಗೆ. ಏನಾದರೂ ಕಪ್ಪು ಹಣದ ಬಗ್ಗೆ ಬರೆದಿಟ್ಟಿದ್ದಾಳಾ? ಯೋಚನೆ ಬಂದೊಡನೆ ವಿಹಾರಿಯ ಮನಸ್ಸು ಪ್ರಪಂಚದ ದೊಡ್ಡ ಹಗರಣ ಮಾಡಬೇಕು ಎಂಬ ತನ್ನ ಯೋಚನೆಯೆಡೆಗೆ ತಿರುಗಿತು. ಅದು ಏನೇ ಇರಲಿ, "HIM" ಎನ್ನುವ ಕೋಡ್ ವರ್ಡ್ ಬಿಡಿಸುವವರೆಗೆ ಸಮಾಧಾನವಿಲ್ಲ ಎಂದುಕೊಂಡು ತನ್ನ ಕೆಲಸದ ಕಡೆ ಮತ್ತಷ್ಟು ಗಮನ ಹರಿಸಿದ.
ಅವನಿಗೆ ತೋಚುವ ಎಲ್ಲ ಕಾಂಬಿನೇಷನ್ ಗಳನ್ನು ಅದಾಗಲೇ ಟ್ರೈ ಮಾಡಿ ಮುಗಿಸಿದ್ದ. ಹಿಮಾಂಶು, ಪ್ರಿಯಂವದಾ, ಸಮ್ಮಿಶ್ರ, ಪಾಲಿಟಿಕ್ಸ್.. ಹೀಗೆ ಹಲವಾರು ಕೀ ವರ್ಡ್ ಗಳನ್ನು HIM ಜೊತೆ ಸೇರಿಸಿ ಅದಕ್ಕೆ ಇಂಗ್ಲೀಷ್ ವರ್ಣಾಕ್ಷರಗಳು, ಸಂಖ್ಯೆಗಳು, ಹೀಗೆ ಅನೇಕ ಕಾನ್ಸೆಪ್ಟ್ ಗಳನ್ನು ಹಿಂದೆ ಮುಂದೆ ಜೋಡಿಸಿ ಏನಾದರೂ ಒಂದು ಅರ್ಥಪೂರ್ಣ ವರ್ಡ್ ಆಗಲೀ, ಅಥವಾ ವಾಕ್ಯವಾಗಲೀ, ಇಲ್ಲವೇ ಸಂಖ್ಯೆಯಾಗಲೀ ಸಿಗುತ್ತದಾ ಎಂದು ಹುಡುಕುತ್ತಲೇ ಇದ್ದ ವಿಹಾರಿ.
ಮೊದಮೊದಲು ಸಮ್ಮಿಶ್ರನಿಂದ ಪಾರಾದರೆ ಸಾಕು ಎಂದು ಶುರು ಮಾಡಿದ ಹ್ಯಾಕಿಂಗ್ ಈಗ ಆತನಿಗೊಂದು ಚಾಲೆಂಜ್ ಆಗಿಬಿಟ್ಟಿತ್ತು. ಅದೆಂತಹ ಸೈಫರ್ ಗಳನ್ನು ಡಿಸೈಫರ್ ಮಾಡಿಲ್ಲ ವಿಹಾರಿ. ಆದರೆ ಈ ಕೋಡ್ ಮಾತ್ರ ಆತನನ್ನು ಸತಾಯಿಸುತ್ತಿತ್ತು. ಛಲ ಬಿಡದ ತ್ರಿವಿಕ್ರಮನಂತೆ ತನ್ನ ಪ್ರಯತ್ನ ಮುಂದುವರೆಸಿದ ವಿಹಾರಿ.
*..........................................*.......................................................*
ಕೋರ್ಟಿನಲ್ಲಿ ಒಂದು ರೂಮು ಆರೋಪಿಗಳ ಹಾಗೂ ಲಾಯರ್ ಗಳ ಭೇಟಿಗೆಂದೇ ಇರುತ್ತದೆ. ಶಾಸ್ತ್ರಿಯನ್ನು ಅಲ್ಲಿ ತಂದು ಕೂರಿಸಿದ್ದರು. ಹತ್ತು ನಿಮಿಷಗಳ ನಂತರ ಅಲ್ಲಿಗೆ ಬಂದಳು ಸರೋವರಾ. ಅವಳು ಅಲ್ಲಿಗೆ ಬರುತ್ತಲೇ ಶಾಸ್ತ್ರೀಯ ಕೈ ಕೋಳವನ್ನು ಪಕ್ಕದಲ್ಲಿದ್ದ ಕಬ್ಬಿಣದ ಸರಳಿಗೆ ಲಾಕ್ ಮಾಡಿ ಹೊರನಡೆದ ಕಾನಸ್ಟೆಬಲ್. ತಮ್ಮಿಬ್ಬರ ಬಳಿ ಇನ್ನು ಅರ್ಧ ಘಂಟೆ ಸಮಯ ಇದೆ. ಅಷ್ಟರೊಳಗೆ ಎಷ್ಟಾಗುತ್ತದೋ ಅಷ್ಟು ಮುಂದಿನ ಯೋಚನೆ ಮಾಡಿಕೊಳ್ಳಬೇಕು ಎಂಬುದು ಇಬ್ಬರಿಗೂ ಗೊತ್ತು. ಶಾಸ್ತ್ರಿ ಎಂದಿನ ಲಯದಲ್ಲಿರದೆ ತಲೆ ತಗ್ಗಿಸಿ ಕುಳಿತಿದ್ದ.
ಒಂದು ನಿಮಿಷ ಸುಮ್ಮನೆ ಕುಳಿತ ಸರೋವರಾ ಮಾತು ಶುರುವಿಟ್ಟಳು. "ಏನು ಶಾಸ್ತ್ರಿ? ನೀನು ಕ್ರಾಂತಿ ಮಾಡುವ ಮನುಷ್ಯನಲ್ಲವೇ? ಇಷ್ಟಕ್ಕೆ ತಲೆ ತಗ್ಗಿಸಿ ಕುಳಿತರೆ ಹೇಗೆ?"
ಶಾಸ್ತ್ರಿ ಮುಖವೆತ್ತಿ ಅವಳ ಮುಖ ನೋಡಿದ. ಮುಗುಳ್ನಗುತ್ತಿದ್ದಳು ಸರೋವರಾ. ತಾವಿಬ್ಬರು ಕೋರ್ಟಿನಲ್ಲಿದ್ದೇವೆ, ಹೊರಗಡೆ ಪೊಲೀಸರು ತಮ್ಮನ್ನು ಕಾಯುತ್ತಿದ್ದಾರೆ ಇವೆಲ್ಲವನ್ನು ಮರೆತು ಶಾಸ್ತ್ರಿ ಸರೋವರಳ ಬಳಿ ಸರಿದು ಒಂದೇ ಕೈಯಿಂದ ತಬ್ಬಿಕೊಂಡ. ಆತನ ಅಪ್ಪುಗೆಯೇ ಆಕೆಗೆ ಎಲ್ಲವನ್ನೂ ವಿವರಿಸಿತ್ತು. " ಶಾಸ್ತ್ರಿ, ಇದೇನು ಲಾಲಬಾಗ್ ಎಂದುಕೊಂಡೆಯಾ ಹೀಗೆ ಅಪ್ಪಿಕೊಳ್ಳಲು?? ನನಗಲ್ಲದಿದ್ದರು ನನ್ನ ಮೈಮೇಲಿರುವ ಈ ಕಪ್ಪು ಕೋಟಿಗಾದರೂ ಮರ್ಯಾದೆ ಬೇಡವಾ? ನೀನು ವಿಚಾರಣಾಧೀನ ಕೈದಿ, ನಾನು ಲಾಯರ್. ದೂರ ಸರಿ.." ಮತ್ತಷ್ಟು ಸತಾಯಿಸಿದಳು ಸರೋವರಾ. ಆದರೆ ಆತನ ತಬ್ಬುವಿಕೆಯಿಂದ ಹೊರಬರುವ ಪ್ರಯತ್ನ ಮಾತ್ರ ಅವಳು ಮಾಡಲೇ ಇಲ್ಲ. ಎರಡು ಪುಟ್ಟ ಹಕ್ಕಿಗಳು ಆಸ್ಥೆಯಿಂದ ಕಟ್ಟಿಕೊಂಡ ಸುಂದರವಾದ ಗೂಡನ್ನು ಮಳೆರಾಯ ಕೊಚ್ಚಿಹಾಕಿದಾಗ, ಒಬ್ಬರಿಗೊಬ್ಬರು ಆತು ಕುಳಿತುಕೊಂಡು ತಮಗೆ ತಾವೇ ಸಮಾಧಾನ ಹೇಳಿಕೊಳ್ಳುವ ಸ್ಥಿತಿಯಂತಿತ್ತು ಸರೋವರಾ ಮತ್ತು ಶಾಸ್ತ್ರಿಯ ಹಾವಭಾವ.
"ಸರೋವರಾ, ನಿನಗೆ ನನ್ನ ಮೇಲೆ ನಂಬಿಕೆ ಇದೆ ಅಲ್ಲವಾ??" ತಗ್ಗಿದ ದನಿಯಲ್ಲಿ ಕೇಳಿದ ಶಾಸ್ತ್ರಿ. ಈಗ ಶಾಸ್ತ್ರಿಯ ಮುಖವನ್ನು ನೋಡಿದ ಸರೋವರಾ ಯೋಚಿಸದೆ ಶಾಸ್ತ್ರಿಯ ತುಟಿಗೆ ತುಟಿ ಸೇರಿಸಿದಳು.
ಅದೊಂದು ಭರವಸೆ. ನಂಬಿಕೆ ಇಲ್ಲದಿದ್ದರೆ ನಾನೇಕೆ ಹೀಗೆ ಬರುತ್ತಿದ್ದೆ ಎಂಬ ಭಾವ.. ಅಷ್ಟೇ ಸಾಕಿತ್ತು ಶಾಸ್ತ್ರಿಗೆ. ಕೆಲವೊಮ್ಮೆ ಕ್ರಿಯೆಗಳು ಮಾತಿಗಿಂತ ಹೆಚ್ಚಿನ ಅರ್ಥವನ್ನು ನೀಡುತ್ತವೆ.
ಇನ್ನು ಉಳಿದಿರುವ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂಬ ಅರಿವು ಇಬ್ಬರಲ್ಲೂ ಇತ್ತು.
ದೂರ ಸರಿದು ಕುಳಿತ ಶಾಸ್ತ್ರಿ ಮಾತಿಗೆ ಪ್ರಾರಂಭಿಸಿದ. "ನೀನು ಲಾಯರ್ ವೃತ್ತಿ ಯಾವಾಗಿನಿಂದ ಪ್ರಾರಂಭಿಸಿದೆ ನನಗೆ ತಿಳಿಯದೆ ಎಂದುಕೊಂಡೆ. ಇವತ್ತೇ ಮೊದಲ ದಿನ ಎಂದು ಆಮೇಲೆ ತಿಳಿಯಿತು. ಹೇಳು ಮುಂದೇನು ಮಾಡಲಿರುವೆ.."
"ನನ್ನ ಜೀವಮಾನದಲ್ಲಿ ಹೀಗೆ ಕಪ್ಪು ಕೋಟ್ ಧರಿಸುತ್ತಿದ್ದೆನೋ ಇಲ್ಲವೋ ನಿನ್ನಿಂದ ಅದು ಕೂಡ ಸಾಕಾರವಾಯಿತು. ಪ್ರಿಯತಮ ಇದ್ದರೆ ಹೀಗಿರಬೇಕು ನೋಡು.." ಎನ್ನುತ್ತಾ ಮತ್ತೆ ಮುಗುಳ್ನಕ್ಕಳವಳು. ಅವಳ ನಗು ಶಾಸ್ತ್ರಿಯನ್ನು ಮತ್ತೆ ಸಹಜ ಸ್ಥಿತಿಗೆ ಮರಳುವಂತೆ ಮಾಡುತ್ತಿತ್ತು. ಆತನಿಗೆ ಬೇಕಾಗಿರುವುದು ಅದೇ; ನೀರಿನಲ್ಲಿ ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆಯೇ. ಶಾಸ್ತ್ರಿಯಂಥವನಿಗೆ ಆ ಹುಲ್ಲು ಕಡ್ಡಿಯನ್ನು ಮರದ ದಿಮ್ಮಿಯಂತೆ ಹೇಗೆ ಬಳಸಿಕೊಳ್ಳಬೇಕೆಂಬುದು ಗೊತ್ತು.
"ನಿನಗೆ bail ಕೊಡಿಸುತ್ತೇನೆ. ಮುಂದಿನದು ಮುಂದೆ." ತುಂಬಾ ಮುಗ್ಧವಾಗಿ ಕಂಡಳವಳು. ಶಾಸ್ತ್ತ್ರಿಗೆ ಗೊತ್ತು. ಜಾನಕಿರಾಮ್ ಕುಡಿ ಚಿಗುರನ್ನು ಚಿವುಟಿದ ಹಾಗೆ ಚಿವುಟಿ ಬಿಡಬಲ್ಲ ಈಕೆಯ ವಾದವನ್ನು. ಈಗೇನೋ ಸರೋವರಾ ಆತನನ್ನು ಹೊಗಳಿ ಅಟ್ಟಕ್ಕೇರಿಸಿದ್ದಕ್ಕೆ ಹಾಗೂ ತನಗೆ ಅದರಿಂದ ಯಾವುದೇ ನಷ್ಟವಿಲ್ಲದ್ದರಿಂದ ಸುಮ್ಮನೆ ಇರುವನೇ ಹೊರತೂ ಈಕೆ bail ಎಂಬ ಒಂದು ಶಬ್ಧ ಉಪಯೋಗಿಸಿದರೆ ಸಾಕು ತಾನು ಪೊಲೀಸ್ ಕಸ್ಟಡಿಯ ಒಳಗೆ ಇರುವುದು ಗ್ಯಾರೆಂಟಿ.
ಹಾಗಾಗಬಾರದು.. ನನಗೆ ಸ್ವಲ್ಪ ಸಮಯ ಬೇಕು ಯೋಚಿಸಲು.. ಪ್ರತಿತಂತ್ರ ಹೂಡಲು.. ಹೇಗೆ ಸಾಧ್ಯ!? ಪ್ರಸಾದರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ!? ಇದೇ ವಿಷಯವನ್ನು ಸರೋವರಾಳಿಗೂ ಹೇಳಿದ ಶಾಸ್ತ್ರಿ.
ಶಾಸ್ತ್ರಿ ಹೇಳಿದ ಮಾತು ಆಕೆಗೂ ತಪ್ಪೇನೆಂದು ಅನ್ನಿಸಲಿಲ್ಲ. ವಾದ ಮಾಡಿ ತನಗೇನು ಅಭ್ಯಾಸವಿಲ್ಲ. ಪ್ರಸಾದರ ಎದುರು ಒಂದು ಪಾಯಿಂಟ್ ಕೂಡ ಜಡ್ಜ್ ಗೆ ಮನವರಿಕೆ ಮಾಡಿಸಲಾರೆ. ಏನು ಮಾಡುವುದು??
ಇಬ್ಬರು ಯೋಚನೆಯಲ್ಲಿ ಮುಳುಗಿದರು. ಹೊರಗಡೆಯಿಂದ ಕಾನಸ್ಟೆಬಲ್ ಬಾಗಿಲು ತಟ್ಟಿದ ಸದ್ದು ಕೇಳಿತು. ಅರ್ಧ ಘಂಟೆ ಆಗಿತ್ತು. ಇನ್ನೇನು ನಿರ್ಧಾರ ತೆಗೆದುಕೊಂಡರೂ ಬೇಗ ನಿರ್ಧರಿಸಬೇಕು. ಒಂದೆರಡು ನಿಮಿಷದಲ್ಲಿ ಕಾನಸ್ಟೆಬಲ್ ಒಳಗೆ ಬಂದು ಶಾಸ್ತ್ರಿಯನ್ನು ಕರೆದೊಯ್ಯುತ್ತಾನೆ. ಮತ್ತೆ ಶಾಸ್ತ್ರಿಯನ್ನು ನೋಡುವುದು ಇನ್ಯಾವಾಗಲೋ?? ಪೊಲೀಸ್ ಕಸ್ಟಡಿಗೆ ತೆಗೆದುಕೊಂಡರೆ ಪ್ರತಾಪ್ ಇನ್ನೆಷ್ಟು ಹಿಂಸೆ ಕೊಡುತ್ತಾನೋ?? ಸರೋವರಾಳ ಕಣ್ಣಿಂದ ನೀರು ತುಳುಕಿತು ಈಗ. ಸರೋವರಾ ಈಗ ಅಳುವ ಸಮಯವಲ್ಲ. ಯೋಚಿಸುವ ಸಮಯ.
ಸರೋವರಾ ಶಾಸ್ತ್ರಿಯ ಮುಖ ನೋಡಿ, "ಶಾಸ್ತ್ರಿ, ನಿನ್ನೆ ಪ್ರತಾಪ್ ಬಂದಿದ್ದ ಸಂಜೆ, ನಾನು ನಿನಗಾಗಿ ಪಾರ್ಕಿನಲ್ಲಿ ಕುಳಿತಿದ್ದೆ. ನಿನ್ನನ್ನು ಭಂಧಿಸಿದ್ದನ್ನು ಅವನೇ ಹೇಳಿದ. ಕೊನೆಯಲ್ಲಿ ಕೈ ಹಿಡಿದುಕೊಂಡ. ಆದರೆ ಆ ಸ್ಪರ್ಶದಲ್ಲಿ ನನಗೆ ಒಳ್ಳೆಯ ಭಾವ ಕಾಣಲಿಲ್ಲ." ಹಾಗೊಂದು ಮಾತು ಸರೋವರಾ ಹೇಳಿ ಮುಗಿಸಲಿಲ್ಲ ಶಾಸ್ತ್ರಿ ಬದಲಾಗಿಬಿಟ್ಟ. ಆತನ ಮುಖದ ಕೆಂಪನ್ನು ಸರೋವರಾ ಕೂಡ ನೋಡದಾದಳು.
ಅಷ್ಟರಲ್ಲಿ ಒಳಬಂದ ಕಾನಸ್ಟೆಬಲ್ "ಮೇಡಂ, ಟೈಮ್ ಆಯಿತು.."
ತಾನಿನ್ನು ಜಾನಕಿರಾಮ್ ರ ವಿರುದ್ಧ bail ಗಾಗಿ ವಾದಿಸಬೇಕು. ಅದು ಸಾಧ್ಯವಿಲ್ಲ. ಶಾಸ್ತ್ರಿ ಪೊಲೀಸ್ ಕಸ್ಟಡಿಯ ಪಾಲಾಗುತ್ತಾನೆ. ಸರೋವರಾಳ ಮನಸ್ಸು ಮರುಗುತ್ತಿತ್ತು.
ಶಾಸ್ತ್ರಿ ಸರೋವರಾಳ ಕಡೆ ನೋಡಿ "ಸರೋವರಾ, ನನ್ನನ್ನು ಜೈಲಿಗೆ ಹಾಕಿಸು.." ಎಂದ. ಆ ಹೊತ್ತಿಗೆಲ್ಲ ಕಾನಸ್ಟೆಬಲ್ ಶಾಸ್ತ್ರಿಯ ಕೈಕೋಳವನ್ನು ಸರಳಿನಿಂದ ಬಿಡಿಸುತ್ತಿದ್ದ.
ಶಾಸ್ತ್ರಿ ಹೀಗೇಕೆ ಹೇಳುತ್ತಿದ್ದಾನೆ ಕೇಳಲು ಸಮಯವಿಲ್ಲ. ಪೂರ್ತಿ ಬಿಡಿಸಿ ಹೇಳಲು ಕಾನಸ್ಟೆಬಲ್ ಅಲ್ಲಿಯೇ ಇದ್ದಾನೆ. ಶಾಸ್ತ್ರಿಯ ಮನಸ್ಸನ್ನು ತಾನೀಗ ಅರಿಯಬೇಕು.
ಶಾಸ್ತ್ರಿಯ ಮುಖವನ್ನೇ ನೋಡುತ್ತಿದ್ದಳು ಸರೋವರಾ. ಮತ್ತದೇ ಮಾತು ಹೇಳಿದ ಶಾಸ್ತ್ರಿ.
"ಸರೋವರಾ, ನನ್ನನ್ನು ಜೈಲಿಗೆ ಹಾಕಿಸು. ಮುಂದಿನದು ನಾನು ನೋಡಿಕೊಳ್ಳುತ್ತೇನೆ..." ಕಣ್ಣು ಮಿಟುಕಿಸಿದ.
ಕಾನಸ್ಟೆಬಲ್ ಆತನನ್ನು ಹೊರಗೆಳೆದುಕೊಂಡು ಹೋದ. ರೂಮಿನಲ್ಲಿ ಒಂಟಿಯಾಗಿ ನಿಂತಳು ಸರೋವರಾ. ಶಾಸ್ತ್ರಿ ಹೇಳಿದ ಮಾತಿನ ಅರ್ಥವೇನು ಎಂಬುದನ್ನು ಹುಡುಕುತ್ತ ಆಕೆಯ ಮನಸ್ಸು ಆಕೆಯನ್ನು ಬಿಟ್ಟೋಡಿತು..
*..........................................................*...........................................................*
ವಿಹಾರಿ ತಲೆ ಕೆಡಿಸಿಕೊಂಡು ಹುಡುಕುತ್ತಲೇ ಇದ್ದ. HIM ಎಂಬ ಶಬ್ಧದಿಂದ ಯಾವುದೇ ಮಾಹಿತಿಯನ್ನು ಪಡೆಯಲಾಗದೆ ಸೋತು ಹೋದೆ ಎಂದೆನಿಸಿತು ಒಮ್ಮೆ. ಪ್ರಿಯಂವದಾ ರಾಜ್ ಎಷ್ಟೇ ರಾಜಕೀಯ ಚತುರೆಯಾಗಿದ್ದರೂ ಸೈಫರ್, ಡಿಸೈಫರ್, ಕಂಪ್ಯೂಟರ್ ಅಂತಹ ವಿಷಯಗಳಲ್ಲಿ ಇಷ್ಟು ಆಳದ ಜ್ಞಾನ ಹೊಂದಿರಲು ಸಾಧ್ಯವಿಲ್ಲ. ತಾನೇನೋ ಮಿಸ್ ಮಾಡುತ್ತಿದ್ದೇನೆ ಎಂದೆನ್ನಿಸಿತು ಆತನಿಗೆ. ಸಾಧಾರಣವಾಗಿ ವ್ಯಕ್ತಿಯೊಬ್ಬ ತಮ್ಮ ಮೇಲ್ ಅಥವಾ ಬ್ಲಾಗ್ ಎಕೌಂಟ್ ಗಳ ಲಾಗಿನ್ ಗೆ ತನ್ನ ಹೆಸರು ಅದರ ಜೊತೆಗೆ ಕೆಲವು ಸ್ಪೆಷಲ್ ಕ್ಯಾರೆಕ್ಟರ್ ಗಳನ್ನು ಹಾಗೂ ಅಂಕೆಗಳನ್ನು ಉಪಯೋಗಿಸುತ್ತಾರೆ. ಇನ್ನು ಕೆಲವರು ತಮ್ಮ ಪ್ರೇಯಸಿಯ, ಹೆಂಡತಿಯ ಅಥವಾ ಊರಿನ ಹೆಸರಿನ ಸ್ಪೆಲ್ ಜೊತೆ ಇತರ character ಗಳನ್ನು ಉಪಯೋಗಿಸುತ್ತಾರೆ. ನೆನಪಿಡಲು ಸುಲಭ ಎಂಬುದು ಅವರ ಯೋಚನೆ. ಇದನ್ನು ಹ್ಯಾಕರ್ ಗಳು ಮನಗಂಡಿದ್ದಾರೆ. ವಿಹಾರಿಯ ಎದುರಿನಲ್ಲಿರುವ ಸರ್ವರ್ ಮಷಿನ್ ಒಂದು ನಿಮಿಷದಲ್ಲಿ ಬರೋಬ್ಬರಿ ಒಂದು ಬಿಲಿಯನ್ ಕಾಂಬಿನೇಷನ್ ಗಳನ್ನು ರೂಪಿಸಬಲ್ಲದು. ಅಂಥ ಸೂಪರ್ ಫಾಸ್ಟ್ ಮಷಿನ್ ಗೆ ಇಂಥ ಕಾಮನ್ ಪಾಸ್ ವರ್ಡ್ ಹುಡುಕುವುದು ಅಥವಾ ಬಿಡಿಸುವುದು ಒಂದು ಆಟದಂತೆಯೇ. ಅಂತದ್ದರಲ್ಲಿ ವಿಹಾರಿ ಎರಡು ದಿನ ಮಷಿನ್ ಜೊತೆ ತಾನೂ ತಲೆ ಕೆಡಿಸಿಕೊಂಡರು ಏನು ಸಿಕ್ಕಿಲ್ಲ.
ಅದಕ್ಕೆ ಆತನಿಗೆ ತಲೆ ಕೆಡುವಂತಾಗಿತ್ತು. ಇನ್ನು ತಾನು ಸಮ್ಮಿಶ್ರನ ಬಳಿ ಇರುವ ವಿಚಾರ ಹೇಳಿದರೆ ಮುಂದೆ ಆತ ಏನು ಹೇಳುತ್ತಾನೋ ನೋಡಬೇಕು. ತನ್ನ ಮಾತನ್ನು ಆತ ನಂಬುವುದು ಕಷ್ಟವೇ. ಸಮ್ಮಿಶ್ರನ ಮಾತು ಹಾಗಿರಲಿ ವಿಹಾರಿಗೆ ಈ ಸೋಲನ್ನು ಸಹಿಸಲಾಗುತ್ತಿಲ್ಲ. ಸ್ವಲ್ಪ ಹೊತ್ತಿನ ಬಿಡುವು ಬೇಕೆನ್ನಿಸಿತು ಆತನಿಗೆ.
ಕಾಫಿ ಮಷಿನ್ ಇಂದ ಕಾಫಿ ಹಿಡಿದುಕೊಂಡು ಬಾಲ್ಕನಿಗೆ ಬಂದ ವಿಹಾರಿ ರೋಲಿಂಗ್ ಚೇರ್ ಮೇಲೆ ಕುಳಿತು ಸುಮ್ಮನೆ ಯೋಚಿಸುತ್ತ ಉಳಿದ.
HIM..
HIM..
HIM..
ಬ್ಲಡಿ ಹಿಮ್ ಎಂದುಕೊಂಡು ಅದರ ಸ್ಪೆಲ್ ಹಿಂದೆ ಮುಂದೆ ಮಾಡಿ ನೋಡಿದ. MIH, MHI, IHM, IMH... ಬ್ಲಡಿ ಹಿಮ್.. ಇವೆಲ್ಲ ಕಾಂಬಿನೇಷನ್ ಗಳನ್ನು ಸರ್ವರ್ ಚೆಕ್ ಮಾಡಿ ಇರುತ್ತದೆ. ಪ್ರಿಯಂವದಾ ರಾಜ್.. ಅದೆಂತಹ code word ಬರೆದಿದ್ದೀಯಾ ತಾಯಿ.. ಎಂದುಕೊಳ್ಳುತ್ತ ಕಾಫಿಯ ಗುಟುಕು ಹೀರಿದ. ಹೊರಗೆ ಕತ್ತಲು ನಿಧಾನವಾಗಿ ಆವರಿಸುತ್ತಿತ್ತು. ಮೇನ್ ರೋಡಿನಿಂದ ಅದೆಷ್ಟು ದೂರದಲ್ಲಿದೆಯೋ ಮನೆ.. ವಾಹನಗಳ ಸದ್ದಿಲ್ಲ. ಮನೆಯ ಸುತ್ತಲೂ ಮರಗಳು ತುಂಬಿವೆ. ತಂಪನೆಯ ಗಾಳಿ ಬೀಸುತ್ತಿದೆ. ಸಮ್ಮಿಶ್ರನ ಭೇಟಿಯಾಗಿ ಎರಡು ದಿನವಾಯಿತು. ಅದರ ನಂತರ ಅವನ ಸುಳಿವಿಲ್ಲ. ತನ್ನ ಉತ್ತರಕ್ಕಾಗಿ ನಿರೀಕ್ಷಿಸುತ್ತಿರಬಹುದಾ?? ನಾನೀಗ ಸೋತು ಹೋದೆ ಎಂದರೆ ನನ್ನನ್ನು ಬಿಟ್ಟು ಬಿಡುತ್ತಾನಾ? ಅಥವಾ?? ಇರುವ ಸಾಕ್ಷ್ಯಾಧಾರಗಳಿಂದ ತನ್ನನ್ನು ಜೈಲು ಪಾಲು ಮಾಡುತ್ತಾನಾ?? ಸಾಕ್ಷ್ಯಾಧಾರಗಳನ್ನು ನಾನೇ ಅಳಿಸಿ ಬಿಟ್ಟೆನಲ್ಲ.. ಇನ್ನೆಲ್ಲಿಯ ಸಾಕ್ಷ್ಯಾಧಾರ?? ಸಮ್ಮಿಶ್ರ ತನ್ನನ್ನೇನು ಮಾಡಲಾರ ಎಂದೆನ್ನಿಸಿತು. ಮತ್ತೊಂದು ಗುಟುಕು ಕಾಫಿ ಹೀರಿದ.
ಅನ್ವೇಷಣಾ ನೆನಪಾದಳು. ಅವಳೊಬ್ಬಳಿದ್ದರೆ ಈಗ!! ಎಷ್ಟು ಚಂದದ ಹುಡುಗಿ.. ಮತ್ತೆ ಮುಂದೆ ಯೋಚಿಸದಾದ ಆತ. ಅನ್ವೇಷಣಾ ನೆನಪಾದರೆ ಮನಸ್ಸು ತುಂಬಾ ಅವಳೇ ತುಂಬಿಕೊಳ್ಳುತ್ತಾಳೆ. ಆದ್ದರಿಂದಲೇ ಅವಳ ನೆನಪುಗಳಿಂದಲೂ ದೂರವಿರುತ್ತಾನೆ ವಿಹಾರಿ. ಆಗುವ ಕೆಲಸವು ಅಲ್ಲಿಗೆ ನಿಲ್ಲುತ್ತದೆ ಅವಳು ಮನಸ್ಸಿನಲ್ಲಿ ತುಂಬಿಕೊಂಡರೆ.
ಗುಟುಕು ಕಾಫಿ ಗಂಟಲು ಬಿಸಿ ಮಾಡುತ್ತಿದ್ದರೆ ಕುರ್ಚಿಗೆ ಒರಗಿ ಕಣ್ಮುಚ್ಚಿಕೊಂಡ. ಕಂಗಳ ಎದುರು HIM. ಎರಡು ದಿನದಿಂದ ಅದೊಂದೇ ಶಬ್ಧ ಅವನ ಯೋಚನೆಗಳಲ್ಲಿ.. ಮನಸ್ಸಿನಲ್ಲಿ.. ಅದೇ ಶಬ್ದವನ್ನು 2 ದಿನ ಯೋಚಿಸುತ್ತಲೇ, ನೋಡುತ್ತಲೇ ಇರುವುದರಿಂದಲೇನೋ ರೆಟಿನಾದ ಮೇಲೆ ಮತ್ತದೇ ಶಬ್ಧ ಮೂಡಿತು. ಕಣ್ಣು ಮುಚ್ಚಿದರು ಬಿಡದಾಯಿತಲ್ಲ HIM ಎಂದು ಕೊಂಡು ಕಣ್ಣು ತೆರೆಯಬೇಕು ಅಷ್ಟರಲ್ಲಿ ಶಾಕ್ ಹೊಡೆದ ಹಾಗಾಯಿತು ಆತನಿಗೆ. WIH.. ಕಣ್ಣಿನ ಪರದೆಯ ಮೇಲೆ HIM ಬದಲಾಗಿ WIH. ತಾನು ಮಾಡಿದ ತಪ್ಪೇನು ಎಂಬುದು ಅರ್ಥವಾಗಿ ಹೋಯಿತು ಆತನಿಗೆ. coffe ಕಪ್ ಕೆಳಗಿಟ್ಟು ಕೆಳಗೋಡಿ ಬಂದ. ಕಂಪ್ಯೂಟರ್ ಕೂಡ HIM ನ ಇತರೆ ಕಾಂಬಿನೇಷನ್ ಗಳನ್ನು ನೋಡಿಕೊಂಡು ಓಡುತ್ತಲೇ ಇತ್ತು. ಆದದ್ದಾಗಲಿ ಎಂದು ಅದನ್ನು ಅಲ್ಲಿಗೆ ನಿಲ್ಲಿಸಿ ಪಕ್ಕದಲ್ಲೇ ಇದ್ದ ಲ್ಯಾಪ್ ಟಾಪ್ ತೆಗೆದು ಗೂಗಲ್ ಮಾಡಿದ. WIH. 1,28,00,000. result ನೀಡಿತು google. ಓಹ್..!! ಅವನ ದೃಷ್ಟಿ ಒಂದೆಡೆ ನಿಂತು ಬಿಟ್ಟಿತು. Wallet Investment Holdings. (ಹೆಸರು ಬದಲಾಯಿಸಲಾಗಿದೆ.)
WIH.. Wallet Investment Holdings.. Switzerland.. ಯುರೇಕಾ ಎಂದು ಕೂಗಿಕೊಂಡು ಹೊರಗೆ ಓಡಿಬಿಡಬೇಕು ಎನ್ನಿಸಿಬಿಟ್ಟಿತು ವಿಹಾರಿಗೆ. ಪ್ರಿಯಂವದಾ ರಾಜ್ ಳ ಕಪ್ಪು ಹಣವೆಲ್ಲ ಈ WIH ನ ಒಳಗೆ ಬಂಧಿಯಾಗಿದೆ. ಸಂದೇಹವೇ ಇಲ್ಲ. ಇನ್ನುಳಿದಿರುವುದು ಒಂದೇ. WIH ನ ಸರ್ವರ್ ಹ್ಯಾಕ್ ಮಾಡಿ ಅದರೊಳಗೆ ರಾಜಳ ಎಕೌಂಟ್ ಇದೆಯಾ ನೋಡಬೇಕು.
ಈಗ ವಿಹಾರಿಯಲ್ಲಿ ಮತ್ತೆ ಲವಲವಿಕೆ ಮೂಡಿತು. ಜಗತ್ತಿನ ಅದೆಷ್ಟೋ ದಿಗ್ಗಜರ ಕಪ್ಪು ಹಣವನ್ನು ಕೂಡಿಟ್ಟುಕೊಂಡ WIH ನ ಸರ್ವರ್ ಒಳಗೆ ನಡೆಯಲು ವಿಹಾರಿಯ ಪ್ರಯತ್ನ ಪ್ರಾರಂಭವಾಯಿತು. WIH ನ ಫೈರ್ ವಾಲ್ ಗಳನ್ನು ದಾಟಿಕೊಂಡು ಹೋಗಲು Trozon ಒಂದನ್ನು ಬರೆದು ಹರಿಬಿಟ್ಟ ವಿಹಾರಿ. ಅದೆಷ್ಟೋ ಕೋಟಿ ಹಣಕ್ಕೆ ತಾನು ಬಹಳ ಹತ್ತಿರವಿದ್ದೇನೆ ಎಂದು ಆ ಕ್ಷಣದಲ್ಲಿ ವಿಹಾರಿಗೆ ತಿಳಿದಿರಲಿಲ್ಲ.
*...................................................................*...............................................................*
ಮೂರು ಘಂಟೆಗೆ ಮತ್ತೆ ಎಲ್ಲರೂ ಕೋರ್ಟ್ ಹಾಲಿನಲ್ಲಿ ಸೇರಿದ್ದರು. ಈ ಬಾರಿ ಶಾಸ್ತ್ರಿಯ ಪ್ರಕರಣ ಒಂದೇ ಆಗಿದ್ದರಿಂದ ಯಾರು ಜನರಿರಲಿಲ್ಲ. ಒಂದೆಡೆ ಪ್ರತಾಪ್, ಇನ್ನೊಂದೆಡೆ ಜಾನಕಿರಾಮ್ ಕುಳಿತಿದ್ದರೆ ಅವರ ಹಿಂದೆ ಪ್ರಾಕ್ಟೀಸ್ ಮಾಡುವ ನಾಲ್ಕಾರು ಲಾಯರ್ ಗಳು ಕುಳಿತಿದ್ದರು. ಇನ್ನೊಂದೆಡೆ ಸರೋವರಾ ಕುಳಿತು ಶಾಸ್ತ್ರಿ ಹಾಗೇಕೆ ಹೇಳಿದ ಎಂದು ಯೋಚನೆ ಮಾಡುತ್ತಿದ್ದಳು. ಉಳಿದ ಸಿಬ್ಬಂದಿಗಳೆಲ್ಲರೂ ಅವರವರ ಜಾಗದಲ್ಲಿ ಬಂದು ಕುಳಿತಿದ್ದರು.
ಪ್ರತಾಪ್ ನನ್ನನ್ನು ಭೇಟಿಯಾದ ಪ್ರಕರಣ ಕೇಳಿ ಹಾಗೆ ಹೇಳಿದನೇ?? ಉಹುಂ.. ಶಾಸ್ತ್ರಿ ಎಂಥ ಪರಿಸ್ಥಿತಿಯಲ್ಲೂ ಸ್ಥಿಮಿತ ಕಳೆದುಕೊಳ್ಳಲಾರ. ಕೊನೆಯಲ್ಲಿ ಕಣ್ಣು ಮಿಟುಕಿಸಿದ್ದು ಏಕೆ? ತಲೆ ಬಗ್ಗಿಸಿ ಕುಳಿತಿದ್ದ ಆಕೆ ತಲೆ ಎತ್ತಿ ಸುತ್ತಲೂ ನೋಡಿದಳು. ಆಕೆಯನ್ನೇ ನೋಡುತ್ತಿದ್ದ ಪ್ರತಾಪ್ ಮುಖ ಅತ್ತಕಡೆ ಹೊರಳಿಸಿದ. ಜಾನಕಿರಾಮ್ ಸುಮ್ಮನೆ ನೋಡುತ್ತಾ ಕುಳಿತಿದ್ದರು. ಸರೋವರಾ ಅವರ ಕಡೆ ನೋಡುತ್ತಲೇ ಸ್ನೇಹಪೂರ್ವಕ ನಗು ಬೀರಿದರು. ಸರೋವರಾ ಕೂಡ ಒಂದು ಗೌರವಯುತ ನಗು ನಕ್ಕಳು. ಅವಳ ತಲೆಯಲ್ಲಿ ಒಂದೇ ಯೋಚನೆ. ಶಾಸ್ತ್ರಿ ಏನು ಹೇಳಲು ಹೊರಟಿದ್ದ?? ಯಾವ ಸಂಕೇತಕ್ಕಾಗಿ ಕಣ್ಣು ಮಿಟುಕಿಸಿದ?
ಚಕ್ಕನೆ ಅವಳ ಮನದಲ್ಲಿ ಒಂದು ಯೋಚನೆ ಬಂದಿತು. ಓಹ್.. ನಾನೇಕೆ ಇಷ್ಟು ಹೊತ್ತು ಹೀಗೆ ಯೋಚಿಸಿರಲಿಲ್ಲ. ಶಾಸ್ತ್ರಿ ತನಗೆ ಸೂಚನೆ ಕೊಟ್ಟ ಮೂರು ಘಂಟೆಯ ನಂತರ ಈ ವಿಚಾರ ಹೊಳೆಯುತ್ತಿದೆಯಲ್ಲ.. ಈಗ ಆಕೆಯ ಮುಖದ ಮೇಲೆ ನಗು ಮೂಡಿತು. ಶಾಸ್ತ್ರಿ, You are so intelligent. ಎಷ್ಟೆಂದರೂ ತನ್ನ ಪ್ರಿಯತಮ ಅಲ್ಲವೇ?? ಎಂದುಕೊಂಡಳು.
ಅಷ್ಟರಲ್ಲಿ ಜಡ್ಜ್ ಬಂದಿದ್ದರಿಂದ ಎಲ್ಲರೂ ಎದ್ದು ನಿಂತರು. ಎಲ್ಲರಿಗೂ ಕುಳಿತುಕೊಳ್ಳುವಂತೆ ಸೂಚಿಸಿ, ತಾವೂ ಕುಳಿತುಕೊಂಡು ಪೆನ್ ತೆಗೆದು ಟೈಮ್ ನೋಟ್ ಮಾಡಿಕೊಂಡು "ಜಾನಕಿರಾಮ್ ಯು ಕ್ಯಾನ್ ಪ್ರೋಸಿಡ್.." ಎಂದರು.
ಜಾನಕಿರಾಮ್ ಎದ್ದು ನಿಂತು "ನಾನು ಹೇಳುವುದನ್ನೆಲ್ಲ ಬೆಳಿಗ್ಗೆಯೇ ಹೇಳಿಯಾಗಿದೆ. ವಿಚಾರಣಾಧೀನ ವ್ಯಕ್ತಿಯನ್ನು ಹೆಚ್ಚಿನ ವಿಚಾರಣೆಗೋಸ್ಕರ ಪೊಲೀಸ್ ಕಸ್ಟಡಿಗೆ ಒಪ್ಪಿಸಬೇಕು. ಸಾಕ್ಷಿಗಳನ್ನು ಬದಲಾಯಿಸುವ ಭಯವಿರುವುದರಿಂದ ವ್ಯಕ್ತಿಯು ಯಾವುದೇ ಕಾರಣಕ್ಕೂ ಬೇಲ್ ಗೆ ಅರ್ಹವಾಗಿಲ್ಲ. ಆ ಕಾರಣದಿಂದ ನನ್ನ ಬೆಳಗ್ಗಿನ ವಾದವನ್ನು ಪರಿಗಣಿಸಿ ವ್ಯಕ್ತಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಬೇಕು, ಯುವರ್ ಆನರ್."
ಜಡ್ಜ್ ಸರೋವರಾ ಕಡೆಗೆ ತಿರುಗಿ "ನೀವು ಹೇಳುವುದು ಏನಾದರೂ ಇದೇಯೇನಮ್ಮಾ??" ಎನ್ನುತ್ತಾ ಮುಖ ನೋಡಿದರು.
"ಯೆಸ್.. ಯುವರ್ ಆನರ್.." ಎನ್ನುತ್ತಾ ಎದ್ದು ನಿಂತಳು ಸರೋವರಾ.
ಇವಳೇನು ವಾದ ಮಾಡುವಳು ಎಂದು ಕುತೂಹಲದಿಂದ ಜಾನಕಿರಾಮ್ ಕೂಡ ಅವಳತ್ತಲೇ ನೋಡುತ್ತಿದ್ದ.
"ಯುವರ ಆನರ್, ಜಾನಕಿರಾಮ್ ಪ್ರಸಾದ್ ಹೇಳಿದಂತೆ ಆರೋಪಿಯು ಬಹಳ ಬುದ್ಧಿವಂತ. ನಾನವನ ಜೊತೆ ಮಾತನಾಡಿದ ಮೇಲೆ ನನಗೂ ಅದರ ಸ್ಪಷ್ಟ ಅರಿವಾಗಿದೆ." ಎನ್ನುತ್ತಾ ಶಾಸ್ತ್ರೀಯ ಮುಖ ನೋಡಿದಳು. ಶಾಸ್ತ್ರಿಯು ಆಶ್ಚರ್ಯಚಕಿತನಾಗಿ ನೋಡಿದ. ಏನು ಹೀಗೆ ವಾದ ಮಾಡುತ್ತಿರುವಳಲ್ಲ ಎಂಬಂತಿತ್ತು ಆತನ ಮುಖದ ಭಾವ.
ಸರೋವರಾ ಮುಂದುವರೆಸಿದಳು.
"ಅರ್ಧ ಘಂಟೆ ಆರೋಪಿಯ ಜೊತೆ ಮಾತನಾಡಿದ ಮೇಲೆ ಈತ ಹೊರಬಿದ್ದರೆ ಸಾಕ್ಷಿಗಳ ಮೇಲೆ ಹಾಗೂ ಸಿಕ್ಕ ಆಧಾರಗಳ ಮೇಲೆ ಪ್ರಭಾವ ಬಿರುತ್ತಾನೆ ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ."
ಆಕೆಯ ಮಾತಿಗೆ ಅಲ್ಲಿದ್ದವರೆಲ್ಲ ಒಮ್ಮೆ ಆಶ್ಚರ್ಯಚಕಿತರಾದರು. ಪ್ರಾಕ್ಟೀಸ್ ಗೆಂದು ಬಂದು ಕುಳಿತ ಯುವ ಲಾಯರ್ ಗಳಂತೂ ತಮ್ಮ ತಮ್ಮಲ್ಲೇ ಗುಸುಗುಸು ಪ್ರಾರಂಭಿಸಿದರು. Bail ಕೊಡಿಸಲು ಬಂದ ಈಕೆ ಹೀಗೇಕೆ ವಾದಿಸುತ್ತಿದ್ದಾಳೆ. ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುತ್ತಿದ್ದಾಳೆ. ಇನ್ನು ಈತನಿಗೆ ಬೇಲ್ ಸಿಕ್ಕಂತೆಯೇ ಎಂದುಕೊಂಡರು ಎಲ್ಲರೂ.
ಸತ್ಯ ಕೋರ್ಟಿನಲ್ಲಿ ವಾದ ಮಾಡುವಾಗ ಉಪಯೋಗಕೆ ಬರುವುದಿಲ್ಲ ಶಿಷ್ಯೆ.. ಎಂದುಕೊಂಡರು ಜಾನಕಿರಾಮ್. ಶಾಸ್ತ್ರಿ ಅದೇ ಆಶ್ಚರ್ಯದ ಭಾವನೆಯ ಮುಖ ಹೊತ್ತು ನಿಂತಿದ್ದ.
ಎಲ್ಲರಿಗಿಂತ ಮೊದಲು ಎಚ್ಚೆತ್ತವನು ಪ್ರತಾಪ್. ಇಲ್ಲೇನೋ ನಡೆಯುತ್ತಿದೆ, ಶಾಸ್ತ್ರಿ ಏನೋ ಸಂಚು ಮಾಡಿದ್ದಾನೆ. ಸರೋವರಾ ಶಾಸ್ತ್ರೀಯ ಪ್ರೇಯಸಿ ಎಂಬುದನ್ನು ನಾನು ಜಾನಕಿರಾಮ್ ಗೆ ಹೇಳುವುದನ್ನೇ ಮರೆತಿದ್ದೇನೆ. ಇದನ್ನೀಗಲೇ ಅವರಿಗೆ ಹೇಳಬೇಕು ಎಂದು ಎದ್ದು ನಿಂತ ಪ್ರತಾಪ್.
ಹಾಗೆ ವಾದ ನಡೆಯುತ್ತಿರುವಾಗ ಎದ್ದು ನಿಲ್ಲುವುದು ಕೋರ್ಟಿನ ಗೌರವಕ್ಕೆ ಶೋಭೆ ಅಲ್ಲ. ಜಡ್ಜ್ ಅವನ ಕಡೆ ತಿರುಗುತ್ತಲೇ ಅದನ್ನು ಗಮನಿಸಿದ ಜಾನಕಿರಾಮ್ ಪ್ರತಾಪ್ ಗೆ ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು. ಆತ ಕುಳಿತುಕೊಳ್ಳುವಂತೆ ಸೂಚನೆ ನೀಡಿದ ಮೇಲೂ ಮಾತನಾಡಲು ಅಥವಾ ಕಾಲ್ತೆಗೆದು ಮುಂದಿಡಲು ಧೈರ್ಯ ಬರಲಿಲ್ಲ. ಪ್ರಸಾದ್ ಗೆ ಸಿಟ್ಟು ಬಂದರೆ ಈ ಕೇಸನ್ನು ಇಲ್ಲಿಗೆ ಬಿಟ್ಟುಬಿಡಬಲ್ಲ. ಹಾಗೊಮ್ಮೆ ಆತ ಕೇಸ್ ಬಿಟ್ಟನೆಂದರೆ ಇನ್ಯಾರು ಆ ಕೇಸ್ ತೆಗೆದುಕೊಳ್ಳುವುದಿಲ್ಲ.
ಹೇಗಾದರೂ ಮಾಡಿ ಸರೋವರಾ ಶಾಸ್ತ್ರೀಯ ಪ್ರೇಯಸಿ ಎಂಬ ಅಂಶ ಪ್ರಸಾದರಿಗೆ ತಿಳಿಸಬೇಕು ಎಂದು ಮೊಬೈಲ್ ತೆಗೆದು ಒಂದು ಲೈನಿನ ಸಂದೇಶ ಬರೆದು ಜಾನಕಿರಾಮ್ಗೆ ಕಳುಹಿಸಿದ.
ಜಾನಕಿರಾಮ್ ಮೊಬೈಲ್ ತೆಗೆದು ನೋಡುತ್ತಾರೇನೋ ಎಂಬ ಆತನ ಆಸೆಗೆ ತಣ್ಣೀರೆರೆಚಿದಂತಾಯಿತು. ಎರಡು ನಿಮಿಷವಾದರೂ ಅವರು ಕಿಸೆಗೆ ಕೈ ಹಾಕಲಿಲ್ಲ. ಸರೋವರಾ ಮುಂದುವರೆಸಿಯೇ ಇದ್ದಳು.
"ಯುವರ ಆನರ್, ಆ ವ್ಯಕ್ತಿ ನನ್ನ ಬಳಿ ಸತ್ಯವನ್ನೇ ಹೇಳಿದ್ದಾನೆ. ಈತನನ್ನು ಹೊರಗೆ ಬಿಟ್ಟರೆ ಸಾಕ್ಷ್ಯಗಳನ್ನು ಹೇಗೆ ಬದಲಾಯಿಸಬಹುದು ಎಂದು ಆತ ನನಗೆ ಹೇಳಿದ್ದಾನೆ. ಆದರೆ ಆತನ ಮಾತಿನ ಪ್ರಕಾರ ಇದೆಲ್ಲ ಸುಳ್ಳು ಆಧಾರಗಳು. ಈತನ ವಿರುದ್ಧ ಇನ್ಯಾರೋ ಕುತಂತ್ರ ಮಾಡಿ ಆಧಾರಗಳನ್ನು, ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ನಾವು ಸಾಕ್ಷಿಗಳನ್ನು, ಆಧಾರಗಳನ್ನು ನಾಶಪಡಿಸಿ ಅಥವಾ ತಿದ್ದುಪಡಿಗೊಳಿಸಿ ಹೊರಬರಲು ನೋಡುವುದು ಅಪರಾಧ. ಮೋಸಕ್ಕೆ ಮೋಸವೇ ಪ್ರಾಯಶ್ಚಿತವಲ್ಲ. ಈತನ ಮಾತನ್ನು ಹಾಗೂ ಸಿಕ್ಕ ಸಾಕ್ಷಾಧಾರಗಳನ್ನು ನೋಡಿದ ಮೇಲೆ ನನಗೇಕೋ ಇದರಲ್ಲೇನೋ ಗೋಲ್ ಮಾಲ್ ಇದೆ ಎಂದೆನ್ನಿಸುತ್ತಿದೆ. ಮೇಲಿಂದ ನೋಡಲು ಈತನೇ ಅಪರಾಧಿ ಎಂದು ಕಂಡು ಬಂದರೂ ಈ ಕೊಲೆ ಆಪಾದನೆಯ ಹಿಂದೆ ಯಾವುದೋ ಶಡ್ಯಂತ್ರ ಇರುವಂತೆ ತೋರುತ್ತಿದೆ. ಹಾಗಾಗಿ.."
ಒಮ್ಮೆ ಜಡ್ಜ್ ಮುಖವನ್ನೂ, ಇನ್ನೊಮ್ಮೆ ಜಾನಕಿರಾಮ್ ಮುಖವನ್ನೂ ನೋಡಿ, "ಈ ಆರೋಪಿಗೆ ಹದಿನೈದು ದಿನ ಜೈಲಿನಲ್ಲಿ ಬಂಧಿಸಿಡಬೇಕಾಗಿ ಕೇಳಿಕೊಳ್ಳುತ್ತೇನೆ.." ಎಂದಳು.
ಜಾನಕಿರಾಮ್ ಒಮ್ಮೆ Objection ಹೇಳಬೇಕೋ ಬೇಡವೋ ಯೋಚಿಸಿದರು. Bail ಕೊಡಲು ಬಂದ ಹುಡುಗಿಯೇ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಹೇಳುತ್ತಿದ್ದಾಳೆ. ಯಾಕೆ!? 15 ದಿನದಲ್ಲಿ ಪೂರ್ತಿ ಕೇಸ್ ಸ್ಟಡಿ ಮಾಡಲಾ?? ಅಥವಾ ಇದೇನಾದರೂ ಬೇರೆ ಯೋಚನೆಯಾ??
Bail ಸಿಗದಂತೆ ಮಾಡುವುದು ನನ್ನ ಕೆಲಸ.ಇನ್ನು ಪೊಲೀಸ್ ಕಸ್ಟಡಿಯ ವಿಚಾರ ಹದಿನೈದು ದಿನದ ಮೇಲಾದರೂ ಪೊಲೀಸರು ಬೆಂಡೆತ್ತಿ ಬಾಯಿ ಬಿಡಿಸುತ್ತಾರೆ.
ನಾನೀಗ Objection ಹೇಳದಿದ್ದರೂ ನಾನೇನು ಸೋತಂತಲ್ಲ. ಬದಲಾಗಿ ಒಬ್ಬ ಹೊಸ ಲಾಯರ್ ಮನವಿಗೆ ತಾನು ಒಪ್ಪಿಕೊಂಡಂತೆ. ಇದರಿಂದ ಪ್ರಸಾದ್ ರಿಗೆ ಹೃದಯ, ಮನಸ್ಸು ಇದೆ ಎಂದುಕೊಳ್ಳುತ್ತಾರೆ ಎಂದು ಯೋಚಿಸಿ ಸುಮ್ಮನೆ ಕುಳಿತಿದ್ದ ನೋಡೋಣ ಮುಂದೆ ಏನು ಹೇಳುತ್ತಾಳೆ ಎಂದುಕೊಂಡು.
ಪ್ರತಾಪ್ ಗೆ ಮಾತ್ರ ವಿಪರೀತ ಚಡಪಡಿಕೆ ಶುರುವಾಗಿತ್ತು. ಅಷ್ಟರಲ್ಲಿ ಕಾನಸ್ಟೆಬಲ್ ಗಳ ಮಧ್ಯೆ ನಿಂತ ಶಾಸ್ತ್ರಿ "ಯುವರ ಆನರ್.. ಈ ಲಾಯರ್ ನನಗೆ ಅನ್ಯಾಯ ಮಾಡುತ್ತಿದ್ದಾರೆ. Bail ಕೊಡುತ್ತೇನೆ ಎಂದು ನಂಬಿಸಿ ಸತ್ಯ ತಿಳಿದುಕೊಂಡು ಈಗ ಹೀಗೆ ಮಾಡುತ್ತಿದ್ದಾರೆ. ನನಗಿವರು ಬೇಡ.." ಎಂದು ಕೂಗಿಕೊಂಡ.
ಆರ್ಡರ್..
ಆರ್ಡರ್..
ಮರದ ಸುತ್ತಿಗೆಯಿಂದ ಎರಡು ಸಲ ಬಾರಿಸಿ "ರೀ ಮಿಸ್ಟರ್, ನೀವೇನಾದರೂ ಹೇಳುವುದಿದ್ದರೆ ಕಟಕಟೆಯಲ್ಲಿ ನಿಂತು ಹೇಳಿ. ಎಲ್ಲೆಂದರಲ್ಲಿ ನಿಂತು ಕೂಗಲು ಇದು ನಿಮ್ಮ ಮಾವನ ಮನೆಯಲ್ಲ.." ಎಂದರು.
ಶಾಸ್ತ್ರಿ ಕಟಕಟೆಗೆ ಬಂದು ನಿಂತು ಮತ್ತೆ ಅದನ್ನೇ ಹೇಳಿದ.
ಒಮ್ಮೆ ಮೊಬೈಲ್ ನೋಡಿ ಪ್ರಸಾದ್.. ಎಂದು ಕೂಗಬೇಕೆನ್ನಿಸಿತು ಪ್ರತಾಪ್ ಗೆ.
ಸರೋವರಾ ಶಾಸ್ತ್ರಿಯ ಕಡೆ ಕೋಪದ ನೋಟ ಬೀರಿ "ರೀ ಶಾಸ್ತ್ರಿ, ಸುಮ್ಮನೆ ಇರಿ.. ಸುಳ್ಳು ಹೇಳಿ, ಮೋಸ ಮಾಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏನೋ ನಿಮ್ಮ ಮಾತಿನಲ್ಲಿ ಸತ್ಯವಿದೆ ಎಂದು ಅನ್ನಿಸಿದ್ದರಿಂದ ಕೇಸ್ ಮುಂದೆ ನಡೆಸುತ್ತಿದ್ದೇನೆ. ಜಾನಕಿರಾಮ್ ರ ವಿರುದ್ಧ ವಾದ ಮಾಡಲು ಯಾರೂ ಮುಂದೆ ಬರುವುದಿಲ್ಲ. ನಾನು ಬಂದಿದ್ದು ಅದೃಷ್ಟ ಎಂದುಕೊಳ್ಳಿ. ಸತ್ಯದ ದಾರಿಯಲ್ಲಿ ಏನು ಸಾಧ್ಯವೋ ನಾನು ಅದನ್ನು ಮಾಡುತ್ತೇನೆ. ಸುಳ್ಳು ಹೇಳಿ, ಮೋಸ ಮಾಡಿ ನಿಮ್ಮನ್ನು ಗೆಲ್ಲಿಸಲು ನಾನು ಎಲ್ಲರಂತೆ ಲಾ ಕಲಿತು ಬಂದಿಲ್ಲ. ಪವಿತ್ರವಾದ ಕಾನೂನನ್ನು ಪ್ರೀತಿಸಿ ಓದಿದ್ದೇನೆ. ನೀವು ಸುಮ್ಮನಿದ್ದರೆ ನಿಮಗೆ ಒಳಿತು. ಇಲ್ಲ್ಫಿದ್ದರೆ ನಿಮ್ಮ ಕರ್ಮ.." ಎಂದು ಸಿಟ್ಟಿನಿಂದ ಹೋಗಿ ಕುಳಿತುಕೊಂಡಳು.
"ಸ್ಸಾರಿ ಮೇಡಂ.. ಮುಂದುವರೆಸಿ..." ಶಾಸ್ತ್ರಿ ತಲೆ ತಗ್ಗಿಸಿ ನಿಂತ.
ಏನಪ್ಪಾ ನಾಟಕ ಎಂದುಕೊಂಡರು ಜಡ್ಜ್.
ಮತ್ತೆ ಎದ್ದು ನಿಂತ ಸರೋವರಾ, "ಯುವರ ಆನರ್, ನೂರು ಜನ ಅಪರಾಧಿಗಳಿಗೆ ಶಿಕ್ಷೆ ಆಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬ ಧ್ಯೇಯ, ಉದ್ಧೇಶದ ಮೇಲೆ ನಿಂತಿದೆ ನಮ್ಮ ನ್ಯಾಯಾಂಗ. ಅದನ್ನು ಪರಿಗಣಿಸಿ ಈ ವ್ಯಕ್ತಿಯನ್ನು ಹದಿನೈದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕೇ ಹೊರತು ಪೊಲೀಸ್ ಕಸ್ಟಡಿಗೆ ನೀಡಬಾರದು ಎಂದು ಕೇಳಿಕೊಳ್ಳುತ್ತೇನೆ. ನಾನು bail ಕೊಡಿ ಎಂದು ವಾದ ಮಾಡಲು, ವಾದ ಮಾಡಿ ಗೆಲ್ಲಲು ಸಾಧ್ಯವೇ ಇಲ್ಲದ ಕಾರಣ ಈ ರೀತಿಯಲ್ಲಾದರೂ ನನಗೆ ಹದಿನೈದು ದಿನದ ಸಮಯ ಸಿಗುವಂತೆ ಮಾಡಬೇಕಾಗಿ ನ್ಯಾಯಾಂಗಕ್ಕೆ ನಾನು ಕೇಳಿಕೊಳ್ಳುತ್ತೇನೆ.
ಹದಿನೈದು ದಿನದ ನಂತರವೂ ಕೂಡ ಈ ವ್ಯಕ್ತಿಯನ್ನು ಪೊಲೀಸ್ ಕಸ್ಟಡಿಗೆ ನೀಡಬಹುದು. ಈತ ಹೇಳಿದ್ದು ಸುಳ್ಳಾದಲ್ಲಿ ನನ್ನದೇನು ಅಭ್ಯಂತರವೂ ಇಲ್ಲ. ಹಾಗಾಗದೆ ಈತ ನಿರಪರಾಧಿಯೇ ಆಗಿದ್ದರೆ ಹದಿನೈದು ದಿನ ಹೊಡೆತ ತಿಂದ ಮೇಲೆ ಅದು ನಮಗೆ ಮನವರಿಕೆ ಆದರೂ ಆಗುವ ಶಿಕ್ಷೆ ಆಗಿ ಹೋಗಿರುತ್ತದೆ.
ಇದನ್ನೆಲ್ಲ ಮನಗಂಡು 15 ದಿನ ಈತನನ್ನು ಜೈಲಿನಲ್ಲಿಡಬೇಕು ಹಾಗೂ ನನಗೆ ಈತನಿಂದ ಇನ್ನು ಹಲವು ವಿಷಯಗಳನ್ನು ತಿಳಿದುಕೊಳ್ಳಬೇಕಾಗಿದ್ದರಿಂದ ಈತನ ಭೇಟಿಗೆ ಸಮಯವನ್ನು ನೀಡಬೇಕು. ಈತನ ಕಡೆಯಿಂದ ಯಾವುದೇ ಸಾಕ್ಷಿ ಆಧಾರಗಳ ತಿದ್ದುಪಡಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು." ಎಂದು ಹೇಳಿ ಬಂದು ಕುಳಿತುಕೊಂಡಳು.
ಈಗ ಜಾನಕಿರಾಮ್ ಏನು ಹೇಳುತ್ತಾರೆ ಎಂಬುದರ ಮೇಲೆ ತಮ್ಮ ಪ್ಲಾನಿನ ಏಳು ಬೀಳು ಎಂಬುದು ಶಾಸ್ತ್ರಿ ಮತ್ತು ಸರೋವರಾ ಇಬ್ಬರಿಗೂ ಗೊತ್ತು.
ಇವರ ಸಂಚನ್ನು ಅರಿತವನೆಂದರೆ ಪ್ರತಾಪ್ ಮಾತ್ರ. ಈಗ ಬಿಟ್ಟರೆ ಮುಗಿಯಿತು. 15 ದಿನದಲ್ಲಿ ಜೈಲಿನಲ್ಲಿ ಕುಳಿತು ಶಾಸ್ತ್ರಿ ಹೊರಹೋಗುವ ದಾರಿ ಹುಡುಕಿಬಿಡುತ್ತಾನೆ. ನಂತರ ಜಾನಕಿರಾಮ್ ಅಲ್ಲ, ಯಾರೇ ಬಂದರೂ ಶಾಸ್ತ್ರಿಯನ್ನು ಹಿಡಿಯಲಾರರು. ಆ ಸಮಯವನ್ನು ಈಗ ಇವರು ಕೇಳುತ್ತಿರುವುದು. No.. No.. ಪ್ರಸಾದ್.. ಸುಳಿಗೆ ಸಿಲುಕಬೇಡಿ.. ಇನ್ನು ಕುಳಿತಿದ್ದರೆ ಕೆಲಸ ಕೆಲಸ ಕೆಟ್ಟಂತೆ ಎಂದು ಎದ್ದು ನಿಂತು "ಲಾಯರ್ ಜೊತೆ ಮಾತನಾಡಬೇಕು ಯುವರ ಆನರ್.." ಎಂದ ಪ್ರತಾಪ್. ಪ್ರಸಾದ್ ಪ್ರತಾಪ್ ಕಡೆಗೆ ಕೆಂಗಣ್ಣು ಬೀರಿದರು..
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/

No comments:

Post a Comment