Saturday, July 23, 2016

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 20

                                      ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 20

"No...." ಶಾಸ್ತ್ರಿಯನ್ನು ನೋಡುತ್ತಲೇ ಸ್ವಯಂವರಾ ಚೀರುತ್ತ ಮೇಲೆದ್ದಳು. "He is the one.. He is the one.." ಭಯದಿಂದ ಕಿರುಚುತ್ತಲೇ ಇದ್ದಳು ಸ್ವಯಂವರಾ.
ಆಕೆಯ ಪಕ್ಕದಲ್ಲಿಯೇ ಕುಳಿತಿದ್ದ ಕ್ಷಾತ್ರ ಅವಳನ್ನು ಆತುಕೊಂಡ. ಆತನ ಕಣ್ಣಂಚು ಮಾಡಿದ ಸನ್ನೆಯನ್ನು ಒಂದೆ ಕ್ಷಣದಲ್ಲಿ ಅರಿತುಕೊಂಡ ಪ್ರತಾಪ್ ಆಗಷ್ಟೇ ಬಾಗಿಲು ದಾಟಿ ಬರುತ್ತಿದ್ದ ಶಾಸ್ತ್ರಿಯ ಕಡೆ ಓಡಿದ. "He is the one.. He is the one.." ಒಳಗೆ ಬರುತ್ತಿದ್ದ ಶಾಸ್ತ್ರಿಗೂ ಕೇಳಿಸಿತ್ತು ಹುಡುಗಿಯೊಬ್ಬಳು ತನ್ನತ್ತಲೇ ನೋಡುತ್ತ ಹಿಸ್ಟಾರಿಕ್ ಆಗಿ ಕೂಗುತ್ತಿದ್ದಾಳೆ. ಆಕೆ ತನ್ನನ್ನು ಸರಿಯಾಗಿ ನೋಡಿಯೇ ಹಾಗೆ ಕೂಗುತ್ತಿದ್ದಾಳಾ ? ಇಲ್ಲವೇ ತಪ್ಪು ಕಲ್ಪನೆಯಾ . ಶಾಸ್ತ್ರೀಗೆ ಒಂದು ಕ್ಷಣದಲ್ಲಿ ಏನಾಗುತ್ತಿದೆಯೆಂದಾಗಲೀ, ಏನು ಮಾಡಬೇಕೆಂದಾಗಲೀ ತಿಳಿಯಲಿಲ್ಲ. ಮರುಕ್ಷಣದಲ್ಲಿ ಪ್ರತಾಪನ ಬಲವಾದ ಹಿಡಿತ ಶಾಸ್ತ್ರಿಯ ಭುಜದ ಮೇಲಿತ್ತು. ಭುಜದ ಮೇಲೆ ಬಿದ್ದ ಕೈಯಿಯ ಒತ್ತಡದಿಂದಲೇ ಶಾಸ್ತ್ರಿ ಪರಿಸ್ಥಿತಿ ಕೆಟ್ಟದಾಗಿದೆ ಎಂದು ಅರಿತು ಬಿಟ್ಟ.
ಸರೋವರಾ ಬಂದು ಪ್ರತಾಪನನ್ನು ಭೇಟಿಯಾಗಿರುವ ವಿಷಯವನ್ನು ಹೇಳುತ್ತಲೇ ಮುಂಬರುವ ಸುಳಿಗಳನ್ನು ಶಾಸ್ತ್ರಿ ಯೋಚಿಸಿದ್ದ. ಇಂದು ಬೆಳಿಗ್ಗೆ ಪ್ರತಾಪ್ ತನ್ನನ್ನು ನೋಡಲು ಬರುವಂತೆ ಕಾನಸ್ಟೇಬಲ್ ಬಳಿ ಹೇಳಿ ಕಳುಹಿಸಿದಾಗಲೇ ಆತ ಎಲ್ಲದಕ್ಕೂ ಸಿದ್ಧವಾಗೇ ಇದ್ದ. ಪ್ರತಾಪನ ಬಳಿ ಮೊದಲೇ ಸ್ವಲ್ಪ ಸಲಿಗೆಯಿರುವುದರಿಂದ ನಡೆದ ವಿಷಯವನ್ನು ಹೇಳುವುದು ಅಷ್ಟೇನು ತೊಂದರೆಯಲ್ಲ ಎಂದುಕೊಂಡಿದ್ದ.
"He is the one.. He is the one.." ಎಂದು ಕಂಪಿಸಿದ ಧ್ವನಿ. ಶಾಸ್ತ್ರಿ ಆಕೆಯ ಮುಖ ನೋಡುತ್ತಲೇ ಉಳಿದ. ಅವಳನ್ನು ನೋಡಿದ ನೆನಪು ಬರುತ್ತಿಲ್ಲ. ಹೀಗೇಕೆ ಆರೋಪ ಮಾಡುತ್ತಿದ್ದಾಳೆ? "He is the one!! ಯಾರು ನಾನು?? ಇಷ್ಟೇಕೆ ಭಯ ಬಿದ್ದು ಕೂಗುತ್ತಿದ್ದಾಳೆ? ಯಾವ ಪ್ರಕರಣದಲ್ಲಿ ನನ್ನ ಮೇಲೆ ಸಂಶಯ ಬಂದಿದೆ!?". ಸ್ವಯಂವರಾಳನ್ನು ಆತು ನಿಂತಿದ್ದ ಕ್ಷಾತ್ರನ ಮೈಕಟ್ಟು, ಆತನ ಮುಖದ ಭಾವನೆ. ಎರಡು ಕ್ಷಣಗಳಲ್ಲೇ ಶಾಸ್ತ್ರಿಯಂಥ ಶಾಸ್ತ್ರಿಯ ಬೆನ್ನು ಹುರಿಯಲ್ಲೂ ಸಣ್ಣನೆಯ ಚಳಿ ಮೂಡಿತು. ಪ್ರತಾಪನ ಬಳಿ ಏಗಿದಷ್ಟು ಸುಲಭವಾಗಿ ಈತನನ್ನು ತಾನು ಬಗ್ಗಿಸಲಾರ. "Tough character". ಮುಂದೆ ಯೋಚಿಸಲು ಸಮಯ ನೀಡಲಿಲ್ಲ ಪ್ರತಾಪ್. ಪ್ರತಾಪನ ಕೈಗಳು ಶಾಸ್ತ್ರಿಯನ್ನು ಎಳೆದುಕೊಂಡು ಪಕ್ಕದ ರೂಮಿಗೆ ಕರೆದೊಯ್ಯಿತು. ಭುಜದ ಮೇಲಿದ್ದ ಪ್ರತಾಪನ ಕೈ ಅದ್ಯಾವಾಗ ಕಾಲರ್ ಹಿಡಿದಿತ್ತೋ? ರೌಡಿ ಶೀಟರ್ ಗಳನ್ನು ಎಳೆದು ತರುವಂತೆ ಎಳೆದು ತಂದ ಶಾಸ್ತ್ರಿಯನ್ನು. ಮೊದಲ ಬಾರಿ ಶಾಸ್ತ್ರಿಯಿಂದ ಅವಮಾನಿತಗೊಂಡ ಕಾನಸ್ಟೇಬಲ್ ಈ ಬಾರಿ ನಿನ್ನ ಕಥೆ ಮುಗಿಯಿತು ಮಗನೇ.. ಎನ್ನುವ ದೃಷ್ಟಿ ಬೀರುತ್ತಿದ್ದ. ಎಲ್ಲವೂ ಕಾಣುತ್ತಿದ್ದರೂ ಏನೂ ಕಾಣದಂತೆ ಸುಮ್ಮನೆ ಕೀಲಿ ಕೊಟ್ಟ ಕೈಗೊಂಬೆಯ ಹಾಗೆ ಪ್ರತಾಪನ ಜೊತೆ ನಡೆದ. ಕಾಲರ್ ಹಿಡಿದ ಪ್ರತಾಪನ ಕೈಗಳನ್ನು ಬಿಡಿಸುವ ಪ್ರಯತ್ನವನ್ನೂ ಆತ ಮಾಡಲಿಲ್ಲ.
ತಾನು ಮಾತನಾಡುವ ಸಮಯವಲ್ಲ ಇದು. ಒಂದು ಹೇಳಿದರೆ ಮತ್ತಿನ್ನೇನೋ ಆಗುತ್ತದೆ. ಮೊದಲು ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಬೇಕು. ಕೆಲವೊಂದು ಸಂದರ್ಭದಲ್ಲಿ ಮಾತುಗಳೇ ಹೆಚ್ಚು ಮೋಸ ಮಾಡುತ್ತವೆ. ಅದನ್ನು ಶಾಸ್ತ್ರಿ ಬಹಳವೇ ಚೆನ್ನಾಗಿ ತಿಳಿದಿದ್ದಾನೆ. ಪ್ರತಾಪ್ ಶಾಸ್ತ್ರಿಯನ್ನು ಎಳೆತಂದು ಸೆಲ್ ಒಳಗೆ ದೂಡಿದ. ಶಾಸ್ತ್ರಿ ತನ್ನ ಗೆಳೆಯ ಎಂದಾಗಲೀ, ಇದೇ ಶಾಸ್ತ್ರಿ ಹಿಂದೊಮ್ಮೆ ತನಗೆ ಪ್ರಮೋಶನ್ ಬರಲು ಕಾರಣನಾಗಿದ್ದ ಎನ್ನುವ ನೆನಪಾಗಲಿ ಪ್ರತಾಪನ ದೂಡುವಿಕೆಯಲ್ಲಿ ಕಂಡುಬರಲಿಲ್ಲ. ಆತನ ಹಿಂದೆ ಹಿಂದೆಯೇ ಬಂದ ಕಾನಸ್ಟೇಬಲ್ ಸೆಲ್ ಲಾಕ್ ಮಾಡಿದ. ಪ್ರತಾಪ್ ತಿರುಗಿಯೂ ನೋಡದೇ ದುಡುದುಡುನೆ ಅಲ್ಲಿಂದ ಹೊರನಡೆದ.
ಇನ್ನು ನನ್ನ ದಾರಿಯನ್ನು ನಾನೇ ಸರಿ ಮಾಡಿಕೊಳ್ಳಬೇಕು. ಸಹಾಯ ಬಯಸುವುದಿರಲಿ, ಪ್ರತಾಪನಿಂದ ಕೇಡು ಬರದಿದ್ದರೆ ಸಾಕು ಎಂದುಕೊಂಡ. ಈಗ ಸ್ವಲ್ಪ ದಿನದ ಹಿಂದೆಯಷ್ಟೆ ಇದೇ ಸೆಲ್ ನಲ್ಲಿ ನಿಂತಿದ್ದ ನಾಲ್ವರು ಪುಡಾರಿಗಳಿಗೆ ಅವನೇ ಶಿಕ್ಷೆ ಕೊಡಿಸಿದ್ದಾನೆ. ಈಗ ಅದೇ ಸೆಲ್ ಒಳಗೆ ತಾನು ನಿಂತಿದ್ದಾನೆ. ಅಂತಹ tension ನಲ್ಲಿಯೂ ನಗು ಬಂದಿತು ಅವನಿಗೆ. Atleast ಯಾರಿಗಾದರೂ ಪೋಲಿಸ್ ಸ್ಟೇಶನ್ ಗೆ ಹೋಗುತ್ತಿದ್ದೇನೆ ಎಂದು ಹೇಳಿ ಬರಬೇಕಿತ್ತು. "ಸರೋವರಾಳಿಗೆ ಹೇಳಿದ್ದರೆ ?" ಅವಳಿಗೆ ಅಳು ಜಾಸ್ತಿ!? ನನಗಿಂತ ಹೆಚ್ಚಾಗಿ ಅವಳ ಬಗ್ಗೆಯೇ ಯೋಚಿಸಬೇಕಾಗಿತ್ತೇನೋ ಆಮೇಲೆ. ಎಂತಹ ಎಡವಟ್ಟು ಕೆಲಸ ಮಾಡಿದೆ ಹುಡುಗಿ ಎಂದುಕೊಂಡ ಶಾಸ್ತ್ರಿ.
ಅದನ್ನೇ ಯೋಚಿಸುತ್ತ ಕುಳಿತರೆ.. You are finished... ಎಚ್ಚರಿಸಿತು ಅಂತರಾತ್ಮ. ಹಾಗಾಗಕೂಡದು. ಶಾಸ್ತ್ರೀ ಇಷ್ಟು ಸುಲಭವಾಗಿ ಸೋಲೋಪ್ಪುವ ಮನುಷ್ಯನಲ್ಲ.
ಮೂಲೆಯ ಬೆಂಚಿನ ಮೇಲೆ ಕುಳಿತ ಶಾಸ್ತ್ರಿ ಹಾಗೆಯೇ ಕಣ್ಣು ಮುಚ್ಚಿದ. ಮೆದುಳು ತನಗೆ ಸಹಾಯ ಮಾಡುವ ವ್ಯಕ್ತಿ ಯಾರಿದ್ದಾನೆ ಎಂದು ಹುಡುಕತೊಡಗಿತು. "ಗಾಳಿಗುಡ್ಡ.."
ಹೌದು ಗಾಳಿಗುಡ್ಡ. ಆದರೆ ಆತ ಎಷ್ಟೆಂದರೂ Businessmen. ತಾನು ಮಾಡಿದ ಸಹಾಯಕ್ಕೆ ಪೈಸಾ ಪೈಸಾ ಚುಕ್ತಾ ಮಾಡಿದ್ದಾನೆ. ಈಗ ಅವನು ಲಾಭವಿಲ್ಲದೆ ನನ್ನ ಸಹಾಯಕ್ಕೆ ಬರಬಹುದಾ!?
ಬಂದರೂ ಬರಬಹುದು.. ಯಾಕೋ ಸಹಾಯ ಮಾಡಿದರೆ ಆತನೇ ಎಂದೆನಿಸಿತು ಶಾಸ್ತ್ರಿಗೆ. ಆದರೆ ವಿಷಯ ತಲುಪಿಸುವುದು ಹೇಗೆ!!? Bail ಸಿಗಬೇಕೆಂದರೆ ಗಾಳಿಗುಡ್ಡನೊಬ್ಬನೆ ಶ್ಯೂರಿಟಿ ನೀಡಬಲ್ಲ ವ್ಯಕ್ತಿ. ಆದರೆ ಇಲ್ಲಿ ನಡೆಯುತ್ತಿರುವುದಾದರೂ ಏನು?? ಹೇಗೆ ಗಾಳಿಗುಡ್ಡನನ್ನು ಸಂಪರ್ಕಿಸಲಿ? ತಲೆಯ ಒಳಗೆ ಪ್ರಶ್ನಾರ್ತಕ ಚಿನ್ಹೆಯ ಸೂರಿ ಮಳೆ ಪ್ರಾರಂಭವಾಯಿತು.
*.............................................*...................................................*
ಕ್ಷಾತ್ರ ಸ್ವಯಂವರಾಳನ್ನು ಸಮಾಧಾನಗೊಳಿಸಿದ್ದ. ಈಗ ಆಕೆಯೂ ಮೊದಲಿನ ಸ್ಥಿತಿಗೆ ಮರಳುತ್ತಿದ್ದಳು. ಪ್ರತಾಪ್ ಬಂದು ಅವರಿಬ್ಬರ ಬಳಿ ಕುಳಿತ.
"Is she alright??"
"I am ok.." ಎಂದು ಸ್ವಯಂವರಾಳೇ ಉತ್ತರಿಸಿದಳು.
"ನೀವೇನು ಭಯಪಡಬೇಕಾಗಿಲ್ಲ ಸ್ವಯಂವರಾ ಅವ್ರೆ, ಇನ್ನು ಅವನು ತಪ್ಪಿಸಿಕೊಳ್ಳಲಾರ. ಅದಲ್ಲದೇ ಕ್ಷಾತ್ರನಂತಹ Safe hand ನಲ್ಲಿ ನೀವಿರುವವರೆಗೂ ಇಂತಹ ಎಷ್ಟು ಜನ ಬಂದರೂ ನಿಮ್ಮನ್ನು ಏನು ಮಾಡಲಾರರು. ನೀವವನನ್ನು ಗುರುತಿಸಿದಿರಲ್ಲ, ಕೆಲಸ ಮುಗಿಯಿತು. ಇನ್ನು ಮುಂದಿನದನ್ನು ನನಗೆ ಬಿಡಿ. ನೀವು ಕ್ಷಾತ್ರ ಮುಂಬೈ ನೋಡಿ. You know ಜ್ಯೂಹೂ ಬೀಚ್? ಪ್ರೇಮಿಗಳಿಗೆ ಅದೊಂದು ಅಪೂರ್ವ ಸ್ಥಳ. ಇಬ್ಬರೂ ಜೊತೆಯಾಗಿ ಹೋಗಿಬನ್ನಿ." ಎಂದು ಕ್ಷಾತ್ರನ ಮುಖ ನೋಡಿದ.
ಪ್ರತಾಪ್ ಹಾಗೆನ್ನುತ್ತಲೇ ಏನೆನ್ನಬೇಕೋ ತಿಳಿಯದ ಸ್ವಯಂವರಾ ಕ್ಷಾತ್ರನ ಮುಖ ನೋಡಿದಳು. ಕ್ಷಾತ್ರನೇ ಎಚ್ಚೆತ್ತು "ಪ್ರೇಮಿಗಳಿಗೆ ಅಪೂರ್ವ ಸ್ಥಳವಾದರೂ, ಪ್ರೇಮಿಗಳಲ್ಲದವರು ಭೇಟಿ ನೀಡಲು ಅಡ್ಡಿಯಿಲ್ಲ ಅಲ್ಲವೇ?? ಪ್ರತಾಪ್!!" ನಸುನಕ್ಕ ಕ್ಷಾತ್ರ.
ವಿಷಯ ತಿಳಿಯದೇ ದುಡುಕಿದೆ ಎಂದು ತಿಳಿದು "Ofcourse.. ofcourse.." ಎನ್ನುತ್ತಾ ನಕ್ಕ ಪ್ರತಾಪ್.
"ಸ್ವಯಂವರಾ, ಒಂದೆರಡು ನಿಮಿಷ ನೀನು ಕುಳಿತಿರು. ನಾನು ಪ್ರತಾಪ್ ಬಳಿ ಸ್ವಲ್ಪ ಮಾತನಾಡುವುದಿದೆ. ನಂತರ ನಾವು ಮುಂಬೈ ನೋಡಿ.. ದೆಹಲಿಗೆ ಹಾರಬಹುದು .."ಎಂದು ಹೇಳಿ ಕ್ಷಾತ್ರ ಪ್ರತಾಪನ ಜೊತೆ ಹೊರನಡೆದ.
"Good job ಪ್ರತಾಪ್!! ಅಷ್ಟು ಸರಿಯಾಗಿ ನೀವು ಹೇಗೆ ಗುರುತಿಸಿದಿರಿ? ಆ ಸ್ಕೆಚ್ ಗೂ, ಈತನ ಮುಖಕ್ಕೂ ಅಂತಹ ಹೋಲಿಕೆಯೇನೂ ಇಲ್ಲ. ಆದರೂ ಅದೇಗೆ ನೀವು ಕಂಡು ಹಿಡಿದಿರಿ??" ಇಷ್ಟು ಕೊಲೆಗಳ ಸೂತ್ರಧಾರ ಹೀಗೆ ಸಿಗುತ್ತಾನೆ ಎಂದು ಆಲೋಚಿಸಿಯೂ ಇರದ ಕ್ಷಾತ್ರ ಚಕಿತನಾಗಿದ್ದ.
ನಿಜವಾದ ವಿಷಯ ಹೇಳಿದ ಪ್ರತಾಪ್. "Credit goes to his girlfriend.. ಸರೋವರಾ!"
"ಅದೇನು??" ಆಶ್ಚರ್ಯಚಕಿತನಾಗಿ ಕೇಳಿದ ಕ್ಷಾತ್ರ.
"ಮಿ.ಕ್ಷಾತ್ರ, ವಾರದ ಮೊದಲು ಇಲ್ಲೂ ಒಂದು ಕೊಲೆ ನಡೆಯಿತು. ಆ ಕೊಲೆಗೂ, ದಿಲ್ಲಿಯಲ್ಲಿ ನಡೆದ ಕೊಲೆಗೂ ಸಾಮ್ಯತೆಯಿದೆ. ಸರೋವರಾ ಬಂದು ಶಾಸ್ತ್ರಿಯ ಶರ್ಟಿನ ಮೇಲಿದ್ದುದು ಮನುಷ್ಯನ ರಕ್ತದ ಕಲೆಗಳು ಎಂದಾಗ ಆ ಸ್ಯಾಂಪಲ್ ಚೆಕ್ ಮಾಡಿಸಿದೆ. ಸಿಕ್ಕಿಬಿದ್ದ. ಕೊಲೆಯಾದ ವ್ಯಕ್ತಿಯ ರಕ್ತ ಮತ್ತು ಶಾಸ್ತ್ರಿಯ ಶರ್ಟಿನ ಮೇಲಿನ ರಕ್ತ ಒಂದೇ ಆಗಿತ್ತು.
ಕೊಲೆಯಲ್ಲಿ ಸಾಮ್ಯತೆಯಿದ್ದದ್ದರಿಂದ, ರಕ್ತವೂ ಒಂದೇ ಆಗಿದ್ದರಿಂದ ಇನ್ನೂ ಹೆಚ್ಚಿನ ಸಾಕ್ಷಿಗೆಂದು ಏರ್ ಪೋರ್ಟ್, ರೈಲ್ವೇ ಸ್ಟೇಶನ್, ಬಸ್ ಸ್ಟಾಂಡ್ ಎಲ್ಲದರ ವಿಡಿಯೋ ತರಿಸಿ ನೋಡಿದೆ. ಏರ್ ಪೋರ್ಟ್ ವಿಡಿಯೋ ನೋಡಿದಾಗ ಸಿಕ್ಕಿಬಿದ್ದ. You know he is ಶಾಸ್ತ್ರಿ!! ಬುದ್ಧಿವಂತ. ಆದರೆ ಈಗ ಸ್ವಯಂವರಾ ಗುರುತಿಸಿಬಿಟ್ಟಳಲ್ಲ. ಇನ್ನು ತಪ್ಪಿಸಿಕೊಳ್ಳಲಾರ."
"ಬುದ್ಧಿವಂತ!! ಬುದ್ಧಿವಂತ!! ಎನ್ನುತ್ತಿರುವೆಯಲ್ಲಾ?? ಆತನ ಬಗ್ಗೆ ನಿನಗೆ ಹೇಗೆ ಅಷ್ಟೆಲ್ಲ ಗೊತ್ತು??" ಎಂದ ಕ್ಷಾತ್ರ.
ಪೇಲವ ನಗೆ ನಕ್ಕ ಪ್ರತಾಪ್. "ಏನು ಹೇಳಲಿ ಕ್ಷಾತ್ರ?? ನಾವು ಅಂದುಕೊಳ್ಳುವುದು ಒಂದು.. ಆಗುವುದೇ ಇನ್ನೊಂದು.. ಈತನೊಬ್ಬ ಒಳ್ಳೆಯ ಗೆಳೆಯನಾಗುತ್ತಾನೆ ಎಂದುಕೊಂಡೆ. ಆದರೆ ಕೊಲೆಗಾರನಾಗಿ ನಿಂತಿದ್ದಾನೆ." ಎಂದು ಹಳೆಯ ಕಥೆಯನ್ನೆಲ್ಲ ಹೇಳಿ ಮುಗಿಸಿದ.
"ಹಂ.." ಎಂದು ಗಾಢವಾದ ನಿಟ್ಟುಸಿರು ಬಿಟ್ಟು "ನಡಿ ಒಮ್ಮೆ ಮಾತನಾಡಿಸಿ, ನಾನು ಸ್ವಯಂವರಾ ಸ್ವಲ್ಪ ಹೊರಗೆ ಹೋಗಿ ಬರುತ್ತೇವೆ." ಎಂದ ಕ್ಷಾತ್ರ.
ಮಾತನಾಡಿಸುವುದು ಎಂದರೆ ಪೋಲಿಸ್ ಭಾಷೆಯಲ್ಲಿ ಬೇರೆಯದೇ ಅರ್ಥವಿದೆ. ತಲೆಯಾಡಿಸುತ್ತ ಅವನ ಹಿಂದೆ ನಡೆದ ಪ್ರತಾಪ್. ಶಾಸ್ತ್ರಿ ನಿಂತಿದ್ದ ಸೆಲ್ ಕಡೆ ಬಂದರು ಅವರಿಬ್ಬರೂ. ಅವರಿಬ್ಬರೂ ಅತ್ತ ಬರುತ್ತಲೇ ಶಾಸ್ತ್ರಿಯ ಸೆಲ್ ಬಳಿ ನಿಂತಿದ್ದ ಕಾನಸ್ಟೇಬಲ್ ಅವಸರವಸರವಾಗಿ ದೂರ ಸರಿದ. ಇನ್ನೊಬ್ಬ ಕಾನಸ್ಟೇಬಲ್ ಒಳಗೆ ಸ್ವಯಂವರಾಳ ಬಳಿ ನಿಂತಿದ್ದ. ಶಾಸ್ತ್ರಿ ಏನಾದರೂ ಈತನ ಕಿವಿ ಚುಚ್ಚಿದನಾ ಎಂದೆನಿಸಿತು ಪ್ರತಾಪ್ ಗೆ.
ಏನು ಕಿವಿ ಚುಚ್ಚಿದರೂ ಇನ್ನೇನು ಮಾಡಬಲ್ಲ ಎಂದುಕೊಂಡು ಸೆಲ್ ಬಾಗಿಲು ತೆಗೆದು ಒಳನಡೆದರು ಪ್ರತಾಪ್ ಮತ್ತು ಕ್ಷಾತ್ರ. ಅವರು ಹಾಗೆ ಒಳನಡೆಯುತ್ತಲೇ ಕಾನಸ್ಟೇಬಲ್ ಬೆಕ್ಕಿನ ನಡಿಗೆಯಲ್ಲಿ ಹೊರನಡೆದ. ಮುಂದೈದು ನಿಮಿಷಗಳಲ್ಲಿ ಶಾಸ್ತ್ರಿಯ ಮಾತಿನಂತೆ ಆತ ಗಾಳಿಗುಡ್ದನಿಗೆ ಫೋನ್ ಮಾಡಿ ಮುಗಿಸಿ ಏನು ತಿಳಿಯದವರಂತೆ ಸೆಲ್ ಹೊರಗೆ ಬಂದು ಸುಮ್ಮನೆ ನಿಂತ.
"ಶಾಸ್ತ್ರಿ, ಮೈ ಕೈ ನೋವು ಮಾಡಿಕೊಳ್ಳಲು ನನಗೂ ಇಷ್ಟವಿಲ್ಲ. ನೀನು ಎಷ್ಟೇ ಬುದ್ಧಿವಂತನಾದರೂ ತಪ್ಪಿಸಿಕೊಳ್ಳಲಾರೆ. ಸುಮ್ಮನೆ ತಪ್ಪು ಒಪ್ಪಿಕೊ.ಯಾವ ಹಗೆಯಿಂದ ಈ ಕೊಲೆಗಳನ್ನೆಲ್ಲ ಮಾಡುತ್ತಿರುವೆ? ದೆಹಲಿಗೆ ಹೋಗಿ ಕೊಲೆ ಮಾಡಿ ಬಂದಿರುವೆ?? ಯಾಕೆ? ಏನಾಗಿದೆ ನಿನಗೆ? ಇದರ ಹಿಂದೆ ಏನಾದರೂ ಬಲವಾದ ಕಾರಣವಿದ್ದರೆ ಹೇಳಿ ಬಿಡು. ಕಾನೂನನ್ನು ನಿನ್ನ ಕೈಗೆ ತೆಗೆದುಕೊಂಡಿದ್ದು ತಪ್ಪೇ ಆದರೂ ಅದರ ಹಿಂದೆ ಏನಾದರೂ ಅನ್ಯಾಯವಿದ್ದರೆ ನಾನು ನಿನ್ನ ಬೆಂಬಲಕ್ಕೆ ನಿಲ್ಲುತ್ತೇನೆ, ಶಿಕ್ಷೆ ಕಡಿಮೆ ಮಾಡಿಸುತ್ತೇನೆ." ಏರಿಳಿತವಿಲ್ಲದ ದನಿಯಲ್ಲಿ ಹೇಳಿದ ಪ್ರತಾಪ್.
ಶಾಸ್ತ್ರಿ ಪ್ರತಾಪನ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿದ. "ಏನು ಹೇಳುತ್ತಿರುವೆ ಪ್ರತಾಪ್?? ಇದ್ಯಾವ ಕೊಲೆಗಳನ್ನು ನನ್ನ ತಲೆಗೆ ಕಟ್ಟುತ್ತಿದ್ದೀರಿ? ನಾನು ದೆಹಲಿಗೆ ಹೋಗಿ ಕೊಲೆ ಮಾಡಿ ಬರುವುದೆಂದರೆ?? ನನಗೇನೂ ಅರ್ಥವಾಗುತ್ತಿಲ್ಲ ಪ್ರತಾಪ್. ವಿಷಯವನ್ನು ಬಿಡಿಸಿ ಹೇಳು. ನನಗೆ ಗೊತ್ತಿರುವುದನ್ನು ನಾನು ಹೇಳಿ ಬಿಡುತ್ತೇನೆ" ಎಂದ.
ಇಬ್ಬರ ಮಾತುಗಳನ್ನೂ ಕೇಳುತ್ತ ನಿಂತಿದ್ದ ಕ್ಷಾತ್ರ ಅದ್ಯಾವ ಮಾಯದಲ್ಲಿ ಚಲಿಸಿದನೋ ಪ್ರತಾಪ್ ಗೆ ಕೂಡ ತಿಳಿಯಲಿಲ್ಲ. ಅವನ ಬಿಗಿಮುಷ್ಠಿ ಶಾಸ್ತ್ರಿಯ ಕೆಳದವಡೆಗೆ ಅಪ್ಪಳಿಸಿತ್ತು. "ಅಮ್ಮಾ...." ಎನ್ನುತ್ತಾ ಎಗರಿಬಿದ್ದ ಶಾಸ್ತ್ರಿ. ಈ ರೀತಿಯ ಹೊಡೆತ ತಿಂದ ಮನುಷ್ಯನಲ್ಲ ಆತ. ಏನಿದ್ದರೂ ಆತ ಬುದ್ದ್ಧಿಶಕ್ತಿಯಿಂದ ಕೆಲಸ ಮುಗಿಸಬಲ್ಲ. ಹೊಡೆತ ಎಷ್ಟು ಬಲವಾಗಿತ್ತೆಂದರೆ ಕೆಳಗೆ ಬಿದ್ದ ಶಾಸ್ತ್ರಿ ಒಂದೆರಡು ಕ್ಷಣ ಮಿಸುಕಾಡಲಿಲ್ಲ. ಕ್ಷಾತ್ರನೇನಾದರೂ ಹೊಡೆಯಬಾರದ ಜಾಗಕ್ಕೆ ಹೊಡೆದನಾ ಎಂದು ಗಾಬರಿಗೊಂಡ ಪ್ರತಾಪ್. ಕ್ಷಾತ್ರS ಅದರಲ್ಲೇ ಪಳಗಿದವನು. ಯಾವ ಜಾಗದಲ್ಲಿ ಹೊಡೆತ ಬಿದ್ದರೆ ಸಾಯುತ್ತಾರೆ.. ಎಲ್ಲಿ ಹೊಡೆದರೆ ಪ್ರಜ್ಞೆ ತಪ್ಪುತ್ತದೆ.. ಎಲ್ಲಿ ಹೊಡೆದರೆ ನರಕ ಯಾತನೆ ಅನುಭವಿಸುತ್ತಾರೆ.. ಎಲ್ಲವನ್ನೂ ಚೆನ್ನಾಗಿ ಬಲ್ಲ. "ಏಳು ಮಗನೇ, ಯಾವ ಕೊಲೆ ಗೊತ್ತುಮಾಡಿಸುತ್ತೇನೆ ಈಗ.." ಎನ್ನುತ್ತಾ ಶಾಸ್ತ್ರಿಯ ಹಿಂಬದಿಯ ಕಾಲರ್ ಹಿಡಿದು ಅಲಾಕ್ಕಾಗಿ ಮೇಲೆತ್ತಿ ಬೆನ್ನಿನ ಮೇಲೆ ಮತ್ತೊಂದು ಗುದ್ದಿದ. ಮೊದಲನೆಯ ಏಟಿನ ನೋವಿನಿಂದಲೇ ಹೊರಬರದ ಶಾಸ್ತ್ರೀಗೆ ಎರಡನೆಯ ಏಟಿನ ನೋವು ತಿಳಿಯಲೇ ಇಲ್ಲ. ಮತ್ತೆ ಕೈ ಎತ್ತಿದ ಕ್ಷಾತ್ರನನ್ನು ತಡೆದ ಪ್ರತಾಪ್ ಒಂದೆರಡು ನಿಮಿಷ ಕೊಡು ನಾನು ವಿಚಾರಿಸುತ್ತೇನೆ ಎಂಬಂತೆ.
ನಿಧಾನವಾಗಿ ಗೋಡೆಗೆ ಒರಗಿ ನಿಂತ ಶಾಸ್ತ್ರಿ. ಆತನ ತುಟಿ ಸೀಳಿ ರಕ್ತ ಒಸರುತ್ತಿತ್ತು. ತುಟಿಯಿಂದ ಇಳಿಯುತ್ತಿದ್ದ ರಕ್ತವನ್ನು ನಾಲಿಗೆಯಿಂದ ಒರೆಸಿಕೊಂಡ. ಬಿಸಿ ರಕ್ತದ ಒಗರು ನಾಲಿಗೆಗೆ ತಾಗುತ್ತಿದ್ದಂತೆ ಹೋದ ಪ್ರಜ್ಞೆ ಮತ್ತೆ ಬಂದಂತಾಯಿತು. ಆತನ ಮೂಗು ಒಡೆದು ಸೋರಿದ ರಕ್ತದ ಕಲೆ ಶರ್ಟಿನ ಮೇಲೆ ಮೂಡಿತು.
ಇದೇ ಮೊದಲ ಬಾರಿ ಶಾಸ್ತ್ರಿ ಈ ಪರಿಯ ಶಿಕ್ಷೆಗೆ ಒಳಗಾಗಿದ್ದ. ತನ್ನ ರಕ್ತವನ್ನು ನೋಡುತ್ತಲೇ ಆತನ ಕಣ್ಣುಗಳು ಸಹ ರಕ್ತ ವರ್ಣಕ್ಕೆ ತಿರುಗಿದ್ದವು. ಅದೇ ದೃಷ್ಟಿಯನ್ನು ಆತ ಕ್ಷಾತ್ರನ ಮೇಲೆ ಬೀರಿದ.
"ಶಾಸ್ತ್ರಿ, ಪರಿಸ್ಥಿತಿ ಕೈ ಮೀರುವ ಮೊದಲು ನಿಜ ಹೇಳಿಬಿಡು. ನಿನ್ನ ಸ್ನೇಹಿತನಾಗಿ ಹೇಳುತ್ತಿದ್ದೇನೆ. ನನ್ನ ಕೈ ಮೀರುವುದರೊಳಗೆ ನೀನು ಸಹಕರಿಸಿದರೆ ನಾನೂ ಸಹಕರಿಸುತ್ತೇನೆ. ಇಲ್ಲದ ರಂಪ ಮಾಡಿಕೊಳ್ಳಬೇಡ. ನಾನು ಹೇಳುವುದನ್ನು ಕೇಳು." ಎಂದ.
ಶಾಸ್ತ್ರಿಯ ಸಹನೆ ಮುಗಿದುಹೋಗಿತ್ತು. "ಪ್ರತಾಪ್, Its enough.. ನಿಮ್ಮ ತಪ್ಪು ಕಲ್ಪನೆಗಳಿಗೆ ನಾನು ಹೊಣೆಗಾರನಲ್ಲ. ನೀವು ಪೊಲೀಸರು ಎಂದ ಮಾತ್ರಕ್ಕೆ ಯಾರನ್ನು ಬೇಕಾದರೂ ಎಳೆದು ತಂದು ಹೀಗೆ ಆರೋಪ ಹೊರಿಸಲು, ಮನ ಬಂದಂತೆ ತಳಿಸಲು ಅಧಿಕಾರವಿಲ್ಲ. ನಿಮಗೆ ತಾಕತ್ತಿದ್ದರೆ ಸಾಕ್ಷ್ಯ ತೋರಿಸಿ. ನಾನು ತಪ್ಪು ಮಾಡಿದ್ದರೆ ನಾನೇ ಒಪ್ಪಿಕೊಳ್ಳುತ್ತೇನೆ. ಕೋರ್ಟಿನಲ್ಲಿ ಬೇಕಾಗಿರುವುದು ಸಾಕ್ಷಿ. ನಿಮ್ಮ ಬಳಿ ಏನು ಸಾಕ್ಷ್ಯಾಧಾರಗಳಿವೆ ತೋರಿಸಿ. ಅದೇನಾದರೂ ಪಕ್ಕಾ ಆಗಿದ್ದರೆ ನಾನೇ ಒಪ್ಪಿಕೊಳ್ಳುತ್ತೇನೆ. ಕೇವಲ ಯಾವುದೋ ಒಂದು ಕಲ್ಪನೆಯ ಎಳೆಯ ಮೇಲೆ ನನ್ನನ್ನು ಅಪರಾಧಿಯೆಂದು ಪರಿಗಣಿಸುವುದನ್ನು ಇಂಟರಾಗೇಶನ್ ಎನ್ನುವುದಿಲ್ಲ. ಹಲ್ಲೆ, ದಬ್ಬಾಳಿಕೆ ಎನ್ನುತ್ತಾರೆ. ನಾನು ಶಾಸ್ತ್ರಿ, ನನ್ನೊಂದಿಗೆ ಅನ್ಯಾಯವಾದರೆ ಸಹಿಸುವವನಲ್ಲ ಎಂದು ನಿನಗೂ ಚೆನ್ನಾಗಿ ಗೊತ್ತು.." ಎಂದು ಮಾತು ನಿಲ್ಲಿಸಿದ ಶಾಸ್ತ್ರಿ.
ಶಾಸ್ತ್ರಿಯ ಮಾತುಗಳನ್ನು ಕೇಳಿ ಅವಾಕ್ಕಾದ ಕ್ಷಾತ್ರ. ಎಂತಹ ಧೈರ್ಯ ಈತನಿಗೆ. ನನ್ನ ಎರಡು ಹೊಡೆತ ತಿಂದ ನಂತರವೂ ಹೀಗೆ ನಮ್ಮಿಬ್ಬರನ್ನು ಎದುರು ಹಾಕಿಕೊಳ್ಳುತ್ತಿದ್ದಾನೆ. ಪ್ರತಾಪ್ ಹೇಳಿದಂತೆ ಈತ ಸಾಮಾನ್ಯ ಮನುಷ್ಯನಲ್ಲ ಎಂದೆನ್ನಿಸಿತು.
"ನಿನ್ನ ಸೊಕ್ಕಿನ್ನೂ ಮುರಿಯಲಿಲ್ಲವೇ??" ಕ್ಷಾತ್ರ ಬುಸುಗುಟ್ಟಿದ."ಪ್ರತಾಪ್, ಒಂದರ್ಧ ಘಂಟೆ ಈತನನ್ನು ನನಗೊಪ್ಪಿಸು. ಇಂತವರನ್ನು ಬಹಳ ಕಂಡಿದ್ದೇನೆ. ಈತನ ಬಾಯಿ ಹೇಗೆ ಬಿಡಿಸಬೇಕೆಂದು ನನಗೆ ಗೊತ್ತು." ಸಿಟ್ಟೇರಿ ಕ್ಷಾತ್ರನ ಮೈ ನಡುಗುತ್ತಿತ್ತು.
ಅಷ್ಟರಲ್ಲಿ ಹೊರಗಿದ್ದ ಕಾನಸ್ಟೇಬಲ್ "ಸರ್, ಗಾಳಿಗುಡ್ಡ ಎಂಬುವವರು ಲಾಯರ್ ಜೊತೆ ಬಂದಿದ್ದಾರೆ. ಬೇಲ್ ತಂದಿದ್ದೇನೆ. ನಿಮ್ಮ ಜೊತೆ ಮಾತನಾಡಬೇಕು ಎನ್ನುತ್ತಿದ್ದಾರೆ." ಎಂದ.
ಶಾಕ್ ಹೊಡೆದಂತೆ ಕ್ಷಾತ್ರನ ಮುಖ ನೋಡಿದ ಪ್ರತಾಪ್. ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡೇ ಶಾಸ್ತ್ರಿ ಇಲ್ಲಿಗೆ ಬಂದನಾ? ಅಥವಾ ಇಲ್ಲಿಂದಲೆ ಗಾಳಿಗುಡ್ಡನಿಗೆ ತನ್ನ ಸುದ್ಧಿ ತಲುಪಿಸುವ ವ್ಯವಸ್ಥೆ ಮಾಡಿಕೊಂಡನಾ?? ಈಗ ಶಾಸ್ತ್ರಿ ಬೇಲ್ ಮೇಲೆ ಹೊರಗೆ ಬಂದರೆ ಮತ್ತೆ ಸಿಗಲಾರ.
ಕ್ಷಾತ್ರನನ್ನು ಪಕ್ಕಕ್ಕೆ ಕರೆದು, "ಕ್ಷಾತ್ರ ನಿನಗಿರುವುದು ಅರ್ಧ ಘಂಟೆ ಮಾತ್ರ. ನಾನು ಹೇಗಾದರೂ ಮಾಡಿ ಬಂದವರನ್ನು ಅರ್ಧ ಘಂಟೆ ತಡೆಯುತ್ತೇನೆ. ಅಷ್ಟರಲಿ ನೀನು ಈತನ ಬಾಯಿ ಬಿಡಿಸು. ಇಲ್ಲದಿದ್ದರೆ ಈತನನ್ನು ಮತ್ತೆ ಬಂಧಿಸುತ್ತೇವೆ ಎಂಬುದು ಕನಸಿನ ಮಾತು. ನೀನೇ ನೋಡುತ್ತಿರುವೆ ಅವನ ಶಕ್ತಿ, ಯುಕ್ತಿ ಎಷ್ಟೆಂದು. Your time starts now.." ಎನ್ನುತ್ತಾ ಗಾಳಿಗುಡ್ಡನಿರುವ ಕಡೆ ನಡೆದ.
"ಮಿ. ಪ್ರತಾಪ್, ನೀವು ನನ್ನ ಕ್ಲೈಂಟ್ ಅನ್ನು ಬಂಧಿಸಿದ್ದೀರಿ ಎಂದು ತಿಳಿಯಿತು. ಕಾರಣ ಏನೇ ಇರಲಿ, ಇಲ್ಲಿದೆ ನೋಡಿ anticipatory bail. ಮೊದಲು ಅವರನ್ನು ಹೊರಗೆ ಬಿಡಿ. ಇನ್ನೇನಿದ್ದರೂ ಕೋರ್ಟಿನ ಪ್ರೋಸೀಜರ್ ಪ್ರಕಾರವೇ ಎಲ್ಲವೂ ನಡೆಯಬೇಕು. ಶಾಸ್ತ್ರಿಯನ್ನು ವಿಚಾರಿಸಬೇಕೆಂದರೆ ಮೊದಲು ನೀವು ಕೋರ್ಟಿನಿಂದ ಆರ್ಡರ್ ತೆಗೆದುಕೊಂಡು ಬನ್ನಿ. ಕೋರ್ಟ್ ಹೇಳಿದಾಗ ಆತನನ್ನು ಕರೆತರುವುದು ನಮ್ಮ ಜವಾಬ್ದಾರಿ." bail ಪೇಪರ್ ಪ್ರತಾಪನ ಕೈಗೆ ನೀಡಿ ಅವನ ಉತ್ತರವನ್ನೇ ನಿರೀಕ್ಷಿಸುತ್ತ ಕುಳಿತ ಗಾಳಿಗುಡ್ಡನೊಂದಿಗೆ ಬಂದಿದ್ದ ಲಾಯರ್.
ಗಾಳಿಗುಡ್ಡ ಕೂಡ ಪ್ರತಾಪನನ್ನೇ ನೋಡುತ್ತ ಕುಳಿತಿದ್ದ. ಆಕಡೆಯ ಪಕ್ಕದಲ್ಲಿ ಸ್ವಯಂವರಾ ಪುಸ್ತಕವೊಂದನ್ನು ಹಿಡಿದು ಕುಳಿತಿದ್ದಳು. ಪುಟಗಳನ್ನೂ ತಿರುವಿ ಹಾಕುತ್ತಿದ್ದರು ಅವಳ ಗಮನವೆಲ್ಲ ಇತ್ತಕಡೆಯೇ ಇತ್ತು.ನಿಧಾನವಾಗಿ ಬೇಲ್ ಪೇಪರ್ ಓದುತ್ತಿದ್ದ ಪ್ರತಾಪ್. ಕಳ್ಳರನ್ನು, ಕೊಲೆಗಾರರನ್ನು ಹಿಡಿಯುವಷ್ಟರಲ್ಲಿ ಬೇಲ್ ಹಿಡಿದುಕೊಂಡು ಬರುವ ಲಾಯರ್ ಗಳು. ಲಾ ಅಂಡ್ ಆರ್ಡರ್ ಹೇಗೆ ತಾನೇ ದಾರಿಗೆ ಬರಬೇಕು?? ಒಬ್ಬನನ್ನು ಹಿಡಿಯುವಷ್ಟರಲ್ಲಿಯೇ ಬೆವರು ಕಿತ್ತುಕೊಂಡು ಬಂದಿರುತ್ತದೆ. ಅಷ್ಟರ ಮೇಲೆ ಹೀಗೆ. ಪೋಲಿಸ್ ಕೆಲಸವೇ ಸಾಕಪ್ಪ. ಮೈ ಉರಿಯತೊಡಗಿತ್ತು ಪ್ರತಾಪಗೆ.
"ಬೇಗ ಓದಿ.." ಗಾಳಿಗುಡ್ಡ ಅವಸರಿಸಿದ. ಪೊಲೀಸರು ಶಾಸ್ತ್ರಿಗೆ ಅದೆಂತ ಪಚೀತಿ ತಂದಿರುವರೋ?? ಆದಷ್ಟು ಬೇಗ ಶಾಸ್ತ್ರಿಯನ್ನು ನೋಡಬೇಕು ಎಂಬ ತವಕ ಆತನಿಗೆ.
"ಯಾವ ಕಂಪ್ಲೆಂಟ್ ಆಧಾರದ ಮೇಲೆ ಬಂಧಿಸಿದ್ದೀರಿ ಆತನನ್ನು?? ಕಂಪ್ಲೆಂಟ್ ಕಾಪಿ ಕೋಡಿ.." ಎಂದ ಲಾಯರ್. ಪ್ರತಾಪನ ಬಳಿ ಕಂಪ್ಲೇಂಟ್ ಇದ್ದರೆ ತಾನೇ?? ಒಂದು ಕೊಲೆಯನ್ನು ಬೆನ್ನು ಹತ್ತಿ ಹೊರಟಿರುವಾಗ ಶಾಸ್ತ್ರಿಯನ್ನು ಬಂಧಿಸಿದ್ದಾರೆ ಅಷ್ಟೆ. "420, ಆವತ್ತು ಕೊಲೆ ನಡೆದಿತ್ತಲ್ಲ ಅದರ ಫೈಲ್ ಜೆರಾಕ್ಸ್ ತೆಗೆದು ಲಾಯರ್ ಗೆ ಕೊಡು." ಹಾಗೂ ಸ್ವಲ್ಪ ಸಮಯ ಕಳೆಯೋಣವೆಂದು ಮತ್ತೆ ಬೇಲ್ ಪೇಪರ್ ಓದುತ್ತ ಕುಳಿತ.
ಪ್ರತಾಪ್ ಹೊರ ಹೋಗುತ್ತಲೇ ಕ್ಷಾತ್ರ ಜೋರಾಗಿ ನಕ್ಕ. ಸ್ವಯಂವರಾಳ ಪರಿಸ್ಥಿತಿ ಆತನ ಕಣ್ಣ ಮುಂದೆ ಹಾದು ಹೋಯಿತು. ಎಡಪಕ್ಕೆಯ ಗಾಯವನ್ನು ಒಮ್ಮೆ ಮುಟ್ಟಿಕೊಂಡ. ಸ್ವಯಂವರಾ ಚಾಕುವಿನಿಂದ ಚುಚ್ಚಿದ ಗಾಯ ಇನ್ನೂ ಹಸಿಯಾಗಿಯೇ ಇತ್ತು. ಆತನ ಸಿಟ್ಟು ಮತ್ತೂ ತಾರಕಕ್ಕೇರಿತು. "ಶಾಸ್ತ್ರಿ, ಈಗ ನಿನ್ನನ್ನು ಬಚಾವ್ ಮಾಡಲು ಪ್ರತಾಪ್ ಕೂಡ ಇಲ್ಲ. ಹೇಗೆಂದರೂ ಈಗ ನಾನು ನಿನ್ನ ಬಾಯಿ ಬಿಡಿಸುವವನಿದ್ದೇನೆ. ಸುಮ್ಮನೆ ಹೊಡೆತ ತಿಂದು ಮುಂದೆ ಬದುಕಿದ್ದರೆ ಅಂಗವಿಕಲನಾಗಿ ಸಾಯುವಂತೆ ಮಾಡಿಕೊಳ್ಳಬೇಡ." ಎನ್ನುತ್ತಾ ಶಾಸ್ತ್ರಿಯ ಹತ್ತಿರ ಬಂದ.
ಗೋಡೆಗೆ ಒರಗಿ ನಿಂತಿದ್ದ ಶಾಸ್ತ್ರಿ ಕ್ಷಾತ್ರನ ಕಣ್ಣುಗಳನ್ನೇ ನೋಡುತ್ತ ಉಳಿದನೆ ಹೊರತು ಯಾವುದೇ ಪ್ರತ್ಯುತ್ತರ ನೀಡಲಿಲ್ಲ. ಆಗ ತಡೆಯಲಾಗಲಿಲ್ಲ ಕ್ಷಾತ್ರನಿಗೆ.
ಆತನ ಬಲಗೈ ಮೊದಲಿಗಿಂತಲೂ ವೇಗವಾಗಿ ಶಾಸ್ತ್ರಿಯ ಮುಖದತ್ತ ತೂರಿ ಬಂತು. ಮುಂದಿನ ಕ್ಷಣ ಏನು ನಡೆಯಿತು ಎಂದು ಕ್ಷಾತ್ರ ಕೂಡ ನಂಬದಾದ. ಮುಖದತ್ತ ನುಗ್ಗಿ ಬಂದ ಕ್ಷಾತ್ರನ ಕೈಯನ್ನು ಶಾಸ್ತ್ರಿ ಬಲವಾಗಿ ಹಿಡಿದಿದ್ದ. ಕ್ಷಾತ್ರ ಇಂಟರಾಗೇಷನ್ ಮಾಡುವಾಗ ಹೀಗೆ ಎದುರಾಳಿ ತಿರುಗಿ ನಿಂತದ್ದು ಇದೆ ಮೊದಲ ಬಾರಿ. ಎಂತಹ ಮನುಷ್ಯನೇ ಆದರೂ ಪೊಲೀಸ್ ಸ್ಟೇಶನ್ ನಲ್ಲಿ ಪೊಲೀಸರ ಕೈ ಹಿಡಿಯುವ ಸಾಹಸಕ್ಕೆ ಕೈ ಹಾಕಲಾರ. ಅದರಿಂದ ಉಂಟಾಗುವ ಪರಿಣಾಮ ಎಂಥದ್ದು ಎಂದು ಎಂತಹ ದಡ್ಡನಿಗಾದರೂ ತಿಳಿದಿರುತ್ತದೆ. ಅಂತಹದರಲ್ಲಿ ಶಾಸ್ತ್ರಿ ತನ್ನ ಕೈಯನ್ನು ಅಲಾಕ್ಕಾಗಿ ಹಿಡಿಯುತ್ತಾನೆ ಎಂದುಕೊಂಡಿರಲಿಲ್ಲ ಕ್ಷಾತ್ರ. ಆತನಿಗೂ ಒಂದು ಕ್ಷಣವೇ ಹಿಡಿಯಿತು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು. ಶಾಸ್ತ್ರಿಯ ಕೈಗಳಿಂದ ತನ್ನ ಕೈಯನ್ನು ಹೊರಗೆಳೆಯಲು ನೋಡಿದ ಕ್ಷಾತ್ರ. ಆದರೂ ಶಾಸ್ತ್ರಿ ಹಿಡಿತ ಸಡಿಲಿಸಲಿಲ್ಲ. ಅದೇ ಸಮಯದಲ್ಲಿ ಕ್ಷಾತ್ರನ ಕಣ್ಣುಗಳು ಶಾಸ್ತ್ರಿಯ ಕಣ್ಣುಗಳನ್ನು ಸಂಧಿಸಿದವು. ಶಾಸ್ತ್ರಿಯ ಕಣ್ಣು ಕೆಂಡವಾಗಿತ್ತು.
ಕ್ಷಾತ್ರನ ಕೈಗಳನು ಹಾಗೆಯೇ ಬಿಗಿಯಾಗಿ ಹಿಡಿದು "She is sick.." ಎಂದ ಶಾಸ್ತ್ರಿ.
"What!!??"
ಮತ್ತೇ ಅದೇ ಮಾತನ್ನು ಉಚ್ಛರಿಸಿದ ಶಾಸ್ತ್ರಿ "She is sick.. Schizophrenia.. She is suffering from Schizophrenia.." ಮೊದಲ ದಾಳ ಉರುಳಿಸಿದ ಶಾಸ್ತ್ರಿ.
ಕ್ಷಾತ್ರನ ಕೈಗಳು ಇದ್ದಕ್ಕಿಂದತೆ ಸಡಿಲವಾದವು. ಸಿಗರೇಟ್ ಸೇದಬೇಕೆಂಬ ಮನದ ಯೋಚನೆಯನ್ನು ತಡೆದುಕೊಳ್ಳಲಾಗದೆ ತಲೆ ಸಿಡಿಯುವಂತಾಯಿತು. ಸೆಲ್ ನಿಂದ ಹೊರಗೆ ಬಂದು ಬಾಗಿಲು ಎಳೆದುಕೊಂಡು ಹೊರಗೆ ನಡೆದು ಬಿಟ್ಟ ಕ್ಷಾತ್ರ. ಆತ ಹೋಗುವುದನ್ನು ನೋಡುತ್ತಲೇ ಗೋಡೆಗೆ ಒರಗಿಯೇ ಕೆಳಗೆ ಜಾರಿ ಕುಳಿತ ಶಾಸ್ತ್ರಿ. ರಕ್ತ ಸುರಿಯುತ್ತಿದ್ದ ಮೂಗಿನಿಂದ ಭಾರವಾದ ನಿಟ್ಟುಸಿರೊಂದು ಹೊರಬಿದ್ದಿತು. ತುಟಿಯ ಮೇಲೆ ಹೆಪ್ಪುಗಟ್ಟಿದ ರಕ್ತವನ್ನು ನಾಲಿಗೆಯಿಂದ ಮತ್ತೊಮ್ಮೆ ಸವರಿಕೊಂಡ.
*........................................*.............................................*
ವಿಮಾನ ನಿಲ್ದಾಣಕ್ಕೆ ಬಂದ ಮೇಲೆ ವಿಹಾರಿಯ ಮುಸುಕು ತೆಗೆದರು ಅವನನ್ನು ಕರೆದುಕೊಂಡು ಬಂದ ಅನಾಮಿಕ ಶತ್ರುಗಳು. ಏನಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು ಯೋಚಿಸತೊಡಗಿದ ವಿಹಾರಿ. ಏರ್ ಪೋರ್ಟಿನಲ್ಲಿ ಗುಂಡು ಪ್ರಯೋಗಿಸುವುದು ಕಷ್ಟ. ಹಾಗೇನಾದರೂ ಮಾಡಿದರೆ ಆರ್ಮಿಯವರು ಇವರ ಮೇಲೆ ಗುಂಡಿನ ಮಳೆ ಸುರಿದು ಬಿಡುತ್ತಾರೆ. ಅದೂ ಅಲ್ಲದೇ ತನ್ನನ್ನು ಹಿಡಿದವರು ಯಾರು ಎಂದು ಇನ್ನೂವರೆಗೂ ತಿಳಿದಿಲ್ಲ. ಒಂದು ಸಣ್ಣ ಅವಕಾಶಕ್ಕಾಗಿ ಕಾಯುತ್ತಿದ್ದ ಆತ. ವಿಹಾರಿಯ ಯೋಚನೆಗಳನ್ನು ಓದಿದವನಂತೆ ಒಬ್ಬ ಬಂದು "ತಪ್ಪಿಸಿಕೊಳ್ಳುವ ಯೋಚನೆ ಬಿಟ್ಟು ಬಿಡು. ಅದರಿಂದ ನಿನಗೇ ತೊಂದರೆ. ನಾವು ಹೇಳಿದಂತೆ ಕೇಳಿದರೆ ನಿನಗೇ ಒಳ್ಳೆಯದು. ಸುಮ್ಮನೆ ರಂಪ ಮಾಡಬೇಡ." ಹೇಳಿದವನ ಧ್ವನಿಯಲ್ಲಿ ಯಾವುದೇ ನಾಟಕೀಯತೆ ಕಂಡುಬರಲಿಲ್ಲ.
ಅಷ್ಟೇ ಅಲ್ಲದೇ ಇಬ್ಬರ ಬಳಿ ರಿವಾಲ್ವರ್ ಇರುವುದನ್ನು ಕಂಡೂ ಸೆಕ್ಯೂರಿಟಿಯವರು ಪ್ರಶ್ನಿಸದೆ ಒಳಗೆ ಬಿಟ್ಟಾಗ ತಪ್ಪಿಸಿಕೊಳ್ಳುವ ಆಲೋಚನೆಗಳಿಗೆ ಬ್ರೇಕ್ ಹಾಕಿದ ವಿಹಾರಿ. ಕೇವಲ ಕೆಲವೇ ಜನರಿಗೆ ಮಾತ್ರ ಏರ್ ಪೋರ್ಟ್ ಒಳಗೆ, ಫ್ಲೈಟ್ ಒಳಗೆ ಹೀಗೆ ರಿವಾಲ್ವರ್ ಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿರುತ್ತದೆ. ಅಂದರೆ ತಾನೀಗ ಬಹಳ ದೊಡ್ಡ ವ್ಯಕ್ತಿಗಳಿಂದ ಹಿಡಿಯಲ್ಪಟ್ಟಿದ್ದೇನೆ. ಇಲ್ಲವೇ ಆರ್ಮಿಯವರಿಂದ ಟ್ರ್ಯಾಕ್ ಆಗಿದ್ದೇನೆ. ಯಾಕೆ?? ISIS ಸೈಟ್ ಹ್ಯಾಕ್ ಮಾಡಿದ್ದಕ್ಕಾಗಿ ನನ್ನನ್ನು ಟ್ರ್ಯಾಕ್ ಮಾಡಿದ್ರಾ? ಯೋಚನೆಗಳು ಓಡುತ್ತಲೇ ಉಳಿದಿತ್ತು. ತಪ್ಪಿಸಿಕೊಳ್ಳುವುದು ದೂರದ ಮಾತು ಎಂದು ತಿಳಿದಾಗಿನಿಂದ ಆತನ ಬುದ್ಧಿ ಬೇರೆ ಕಡೆ ಓಡತೊಡಗಿತ್ತು.
ಎರಡು ತಾಸಿನ ನಂತರ ದೆಹಲಿಯ ಇಂದಿರಾ ಗಾಂಧಿ ಏರ್ ಪೋರ್ಟ್ ನಿಂದ ಹೊರ ಬಂದಾಗ ಆತನ ತಲೆ ಯೋಚಿಸುವುದನ್ನು ನಿಲ್ಲಿಸಿತ್ತು. ಯೋಚಿಸಿ ಪ್ರಯೋಜನವಿಲ್ಲ ಎಂದು ತಿಳಿದ ಮೇಲೆ ಮತ್ತೆ ಅದನ್ನೇ ಮಾಡಿ ಪ್ರಯೋಜನವೇನು ಎಂಬ ಸಿದ್ಧಾಂತಕ್ಕೆ ಜೋತು ಬಿದ್ದ ವಿಹಾರಿ. ವಿಮಾನ ನಿಲ್ದಾಣದಿಂದ ಹೊರ ಬರುತ್ತಲೇ ಮತ್ತೆ ಅವನಿಗೆ ಮುಸುಕು ಹಾಕಿ ಕಾರಿಗೆ ಹತ್ತಿಸಿದರು.
ಅವರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ತಾನು ಎಲ್ಲಿಯವರೆಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದಿಲ್ಲವೋ ಅಲ್ಲಿಯವರೆಗೆ ಯಾವುದೇ ಹಾನಿ ಮಾಡುವವರಂತೆ ಕಾಣುವುದಿಲ್ಲ. ಅಂದರೆ ಯಾವುದೋ ಒಂದು ಗಮ್ಯಕ್ಕೆ ನನ್ನನ್ನು ಸೇರಿಸುವುದಷ್ಟೆ ಇವರ ಕೆಲಸ. ಯಾರಿದ್ದಾರೆ..!? ಇದರ ಹಿಂದೆ ಯಾರಿದ್ದಾರೆ?? ಪೊಲೀಸರಂತೂ ಅಲ್ಲ ಎಂಬುದೇ ಆತನಿಗೆ ಸ್ವಲ್ಪ ಸಮಾಧಾನ ತರುವ ವಿಷಯ.
ಅರ್ಧ ಮುಕ್ಕಾಲು ಘಂಟೆ ಕಾರು ಸಾಗುತ್ತಲೇ ಇತ್ತು. ನಂತರ ಆತನನ್ನು ಕಾರಿನಿಂದ ಇಳಿಸಿ ಒಂದು ದೊಡ್ಡ ಮನೆಯ ಒಳಗೆ ಕರೆದುಕೊಂಡು ಹೋಗಿ ಆತನ ಮುಸುಕು ತೆಗೆದು "ವಿಶ್ರಾಂತಿ ತೆಗೆದುಕೋ ವಿಹಾರಿ, ನೀನು ಎಲ್ಲಿಯವರೆಗೆ ತಪ್ಪಿಸಿಕೊಳ್ಳುವ ಯೋಚನೆ ಮಾಡುವುದಿಲ್ಲವೋ ಅಲ್ಲಿಯವರೆಗೆ ನಿನಗೆ ಯಾವುದೇ ತೊಂದರೆ ಆಗುವುದಿಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ನಮ್ಮ ಬಾಸ್ ನಿನ್ನನ್ನು ಭೇಟಿಯಾಗುತ್ತಾರೆ." ಎಂದು ಬಾಗಿಲು ಹಾಕಿ ಅಲ್ಲಿಂದ ಹೊರನಡೆದ. ಒಳಗಡೆ ಯಾವುದೇ ಸೆಕ್ಯೂರಿಟಿಯವರಿರಲಿಲ್ಲ. ತುಂಬಾ ಅಚ್ಚುಕಟ್ಟಾಗಿ ಜೋಡಿಸಲಾದ ಮನೆ.
ಎಲ್ಲಿ ಕರೆದುಕೊಂಡು ಬಂದಿದ್ದಾರೆ? ನನ್ನನ್ನು ಇಲ್ಲಿ ಯಾಕೆ ಕರೆದುಕೊಂಡು ಬಂದಿದ್ದಾರೆ? ಎಂದು ಯೋಚಿಸುವುದನ್ನು ಬಿಟ್ಟರೆ ಮತ್ತೇನು ಕೆಲಸ ಉಳಿದಿರಲಿಲ್ಲ ವಿಹಾರಿಗೆ.
ಒಮ್ಮೆ ಮನೆಯನ್ನು ಪೂರ್ತಿ ಓಡಾಡಿ ಬಂದ ವಿಹಾರಿ. ಇನ್ನು ಕಾಯುವಿಕೆಯೇ ತನ್ನ ಪ್ರಶ್ನೆಗಳಿಗೆ ಉತ್ತರ ನೀಡಬಹುದೆಂದು ಅಲ್ಲಿಯೇ ಇದ್ದ ಸೋಫಾದ ಮೇಲೆ ಒರಗಿಕೊಂಡ. ವಿಶ್ರಾಂತಿ ಬಯಸುತ್ತಿದ್ದ ಆತನ ಮನಸ್ಸು, ದೇಹ ಎರಡನ್ನೂ ನಿದ್ರಾದೇವಿ ತನ್ನ ತೆಕ್ಕೆಗೆ ಎಳೆದುಕೊಂಡಳು. ಅದೆಷ್ಟು ಹೊತ್ತು ನಿದ್ರಿಸಿದನೋ!! ಬಾಗಿಲು ತೆರೆದ ಸದ್ದಾಯಿತು. ದಿಡಿರನೇ ಎದ್ದು ಕುಳಿತ ವಿಹಾರಿ.
ಬಾಗಿಲು ತೆರೆದುಕೊಂಡು ಬಂದ ವ್ಯಕ್ತಿ "ಹಾಯ್ ವಿಹಾರಿ, ನಿದ್ರೆಯಾಯಿತಾ? Are you comfortable?" ನಗು ಮುಖದೊಂದಿಗೆ ವಿಹಾರಿಯೆಡೆಗೆ ಬಂದ.
ವಿಹಾರಿಗೆ ನೋಡುತ್ತಿರುವುದು ಕನಸಾ? ನಿಜವಾ? ತಿಳಿಯುತ್ತಿಲ್ಲ.
ಎದುರಿಗಿದ್ದ ವ್ಯಕ್ತಿ ಪರಿಚಯಿಸಿಕೊಳ್ಳುವ ಅಗತ್ಯವಿಲ್ಲ.
ಸಮ್ಮಿಶ್ರ.. Kingmaker ಪ್ರಿಯಂವದಾ ರಾಜ್ ಳ ಮೂರನೇ ಕಣ್ಣು ಸಮ್ಮಿಶ್ರ.
"I am ಸಮ್ಮಿಶ್ರ.." ಎನ್ನುತ್ತಾ ಕೈಚಾಚಿದ್ದ ಸಮ್ಮಿಶ್ರ ನ ಕೈಗಳಿಗೆ ಕೈ ಸೇರಿಸಿ "ವಿಹಾರಿ" ಎಂದ.
ನಸುನಕ್ಕ ಸಮ್ಮಿಶ್ರ.
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/

No comments:

Post a Comment