Saturday, July 23, 2016

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 16

                                          ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 16

ನಿಂತಲ್ಲಿಯೇ ನಿಂತಿದ್ದ ಸಮ್ಮಿಶ್ರ. ಆತನ ಬಲಗೈ ಮುಷ್ಠಿ ಗೋಡೆಗೆ ಗುದ್ದುತ್ತಿತ್ತು, ಕಣ್ಣುಗಳಿಂದ ಬೇಡವೆಂದರೂ ನೀರು ಚಿಮ್ಮುತ್ತಿತ್ತು. ಪ್ರಿಯಂವದಾ ರಾಜ್ ಎಂದರೆ ಅದೊಂದು ಆತ್ಮೀಯತೆ. ಹತ್ತು ವರ್ಷದ ಒಡನಾಟಕ್ಕೆ ಸಾಕ್ಷಿಯದು. ಪ್ರಿಯಂವದಾಳ ಪ್ರತಿಯೊಂದು ಕಪ್ಪು ದಂಧೆಯೂ ಆತನಿಗೆ ಗೊತ್ತು. ಅದವನಿಗೆ ಬೇಡದ ವಿಷಯ. ಎಂದಿನಿಂದ ಆತ ಅವಳ ಸೆಕ್ಯೂರಿಟಿ ಚೀಫ್ ಆಗಿ ಸೇರಿದ್ದಾನೋ ಅಂದಿನಿಂದ ಅವಳು ಅವನನ್ನು ಗೌರವಿಸಿದ್ದಾಳೆ, ನಂಬಿದ್ದಾಳೆ. ಆತನೂ ತನ್ನ ಕೆಲಸವನ್ನು ಅಷ್ಟೇ ಇಷ್ಟಪಟ್ಟು ಮಾಡಿದ್ದಾನೆ. ಅಷ್ಟು ಸಾಕು ಅದೊಂದು ಆತ್ಮೀಯತೆ ಬೆಳೆಯಲು. ಈಗವಳು ಗುಂಡು ತಿಂದು ಮಲಗಿದ್ದಾಳೆ. ಪ್ರಿಯಂವದಾಳ ಸುತ್ತಲೂ ಡಾಕ್ಟರ್ ಗಳ ದೊಡ್ದ ಗುಂಪೇ ನೆರೆದಿದೆ. ಬುಲೆಟ್ ತೆಗೆಯುವ ಕೆಲಸವೇನೂ ಉಳಿದಿರಲಿಲ್ಲ. ಆದರೆ ಅಷ್ಟು ದೊಡ್ಡ ಬುಲೆಟ್ ಅವಳ ದೇಹವನ್ನು ಛಿದ್ರ ಮಾಡಿ ಬಿಟ್ಟಿದೆ. ಇಷ್ಟೊತ್ತು ಅವಳು ಬದುಕಿರುವುದೇ ಹೆಚ್ಚು.
ತುಂಡಾದ ನಾಳಗಳನ್ನು ಜೋಡಿಸಿ ರಕ್ತ ನಿಲ್ಲಿಸಲು ಪ್ರಯತ್ನ ಪಡುತ್ತಿದ್ದರು. ತಾಸುಗಳೇ ಕಳೆದು ಹೋಗಿತ್ತು. ಯಾವುದೇ ಡಾಕ್ಟರ್ ಗಳ ಮುಖದಲ್ಲಿ ಕೂಡ ಭರವಸೆ ಕಾಣುತ್ತಿರಲಿಲ್ಲ.ರೂಮಿನ ತುಂಬೆಲ್ಲ ಕ್ಷಣಗಳು ಕಳೆದಂತೆ ಟೆನ್ಷನ್ ಹೆಚ್ಚಾಗತೊಡಗಿತ್ತು. ಅದೆಲ್ಲವನ್ನೂ ಗಮನಿಸುತ್ತಲೇ ಇದ್ದ ಆತ. ಸ್ವಲ್ಪ ಹೊತ್ತು ನಡೆದ ಘಟನೆಯ ಸುಳಿಯಲ್ಲಿ ಸಮ್ಮಿಶ್ರ ಸಿಕ್ಕಿ ಹೋಗಿದ್ದ. ಅದು ಸ್ವಲ್ಪ ಹೊತ್ತಷ್ಟೆ, ಮತ್ತೆ ಆತ ಯೋಚಿಸಲಿಲ್ಲ ಒಂದರ ನಂತರ ಒಂದು ಫೋನ್ ಮಾಡಿದ್ದ. ಸಮ್ಮಿಶ್ರ ತಾನು ನಂಬುವ ಜನರನ್ನು ಕರೆಸಿ ಹೊರಗಡೆ ಕಾವಲಿಗೆ ನಿಲ್ಲಿಸಿ ಬಿಟ್ಟ. ಒಂದೆರಡು ಜನ ಆಪರೇಶನ್ ಥಿಯೇಟರ್ ಒಳಗೂ ಬಂದು ನಿಂತ ಮೇಲೆ ಸ್ವಲ್ಪ ನಿರಾಳವಾದ ಆತ.
ಪ್ಲಾನ್ A ಫಲ ನೀಡಲಿಲ್ಲ ಎಂದು ಪ್ಲಾನ್ B ಏನಾದರೂ ಆಕ್ಟಿವೇಟ್ ಮಾಡಿ ಯಾರಾದರೂ ಧಾಳಿ ಮಾಡಿದರೆ ಎಂಬ ಸಣ್ಣ ಸಂಶಯ ಕಾಡದೆ ಇರಲಿಲ್ಲ ಸಮ್ಮಿಶ್ರನನ್ನು. ಕತ್ತಲ ಜಗತ್ತಿನ ಕಾರ್ಯ ಶೈಲಿ ಆತನಿಗೆ ಹೊಸದೇನು ಅಲ್ಲ. ಪ್ರಿಯಂವದಾ ರಾಜ್ ಳ ಬಳಿ ಕೆಲಸಕ್ಕೆ ಸೇರಿದಾಗಲಿಂದ ಕಪ್ಪು ಜಗತ್ತಿನ ಮೇಲು ಒಂದು ಕಣ್ಣು ಇಟ್ಟೇ ಇದ್ದ. ಅವೆಷ್ಟೊ ಬಾರಿ ಅದೇ ಆತನಿಗೆ ವರವಾಗಿ ಪರಿಣಮಿಸಿತ್ತು. ಆದ್ದರಿಂದಲೇ ಅಷ್ಟು ಮುಂದಾಲೋಚನೆ ತೆಗೆದು ಕೊಂಡಿದ್ದ. ತಾನು ತೆಗೆದುಕೊಂಡ ಕ್ರಮಗಳನ್ನೆಲ್ಲಾ ಮತ್ತೊಂದು ಬಾರಿ ಪರಿಶೀಲಿಸಿದ ಮೇಲೆ ಆತನಿಗೆ ಸ್ವಲ್ಪ ಸಮಾದಾನವಾಯಿತು. ಇನ್ನೇನು ತೊಂದರೆ ಇಲ್ಲ ಎಂದು ಅವನಿಗೆ ಅನ್ನಿಸಿದ ನಂತರ ಆಪರೇಷನ್ ಥಿಯೇಟರ್ ನಿಂದ ಹೊರಬಂದ. ಅದಾಗಲೇ ಹಿಮಾಂಶು ಬಂದು ಹೊರಗಡೆ ನಿಂತಿದ್ದ. ವಿಷಯ ತಿಳಿದು ತುಂಬ ಸೋತವನಂತೆ ಕಂಡ. ಅತ್ತು ಕಣ್ಣುಗಳು ಕೆಂಪಾಗಿದ್ದವು. ಸಮ್ಮಿಶ್ರ ಹೊರಬಂದವನೇ ಹಿಮಾಂಶುವಿನ ಬಳಿ ನಡೆದು ಅವನ ಭುಜ ತಟ್ಟಿದ.
ಹಿಮಾಂಶು ಭುಜದ ಮೇಲಿನ ಸಮ್ಮಿಶ್ರಣ ಕೈಯನ್ನು ಕೆಳಗೆ ದೂಡಿದ. ಇಷ್ಟೇ ನಿನ್ನ ಸಾಮರ್ಥ್ಯ ಎನ್ನುವಂತೆ ಹಿಮಾಂಶುವಿನ ಕಣ್ಣುಗಳು ಸಮ್ಮಿಶ್ರನನ್ನು ಕುಕ್ಕಿದವು. ಸಮ್ಮಿಶ್ರನು ಕೂಡ ಅಷ್ಟೇ ನೊಂದಿದ್ದ. ಹಿಮಾಂಶುವನ್ನು ಸಂಭಾಳಿಸಲಾಗಲೀ, ಅವನ ಜೊತೆ ಕಿರಿಕ್ ಮಾಡಲಾಗಲಿ ಸಮ್ಮಿಶ್ರನ ಬಳಿ ಶಕ್ತಿ ಉಳಿದಿರಲಿಲ್ಲ. ಉಳಿದಿದ್ದರು ಜಗಳ ಕಾಯಲು, ಪ್ರತ್ಯುತ್ತರ ನೀಡಲು ಇದು ಸರಿಯಾದ ಸಮಯವಲ್ಲ. ಮತ್ತೆ ಹಿಮಾಂಶುವನ್ನು ನೋಡದೆ ಹೊರ ನಡೆದ.
ಆಸ್ಪತ್ರೆಯ ಹೊರಗಡೆ ಸನ್ನಿ ಚಡ್ಡಾನ ಚೇಲಾಗಳು ಸುತ್ತುವರೆದಿದ್ದರು. ಯಾವುದೇ ಕಾರಣಕ್ಕೂ ಅವರನ್ನು ಒಳಬಿಡಬೇಡಿ ಎಂದು ಸೆಕ್ಯೂರಿಟಿಯವರಿಗೆ ಎಚ್ಚರಿಸಿ ಕಾರಿನ ಬಳಿ ನಡೆದ.
ಈಗ ಮತ್ತೆ ನಿಜವಾದ ಸಮ್ಮಿಶ್ರನಾದ ಆತ. ಸಮ್ಮಿಶ್ರ ಬಾವನೆಗಳ ಮಿಳಿತ ಆತನನ್ನು ಬಡಿದೆಬ್ಬಿಸತೊಡಗಿದವು. ಹೇಗೆ ಸಾಧ್ಯ ಇಂಥ ಬಧ್ರ ಕೋಟೆಯನ್ನು ಬೇಧಿಸಲು?? ಕಾರಿನ ಬುಲೆಟ್ ಪ್ರೂಫ್ ಗುಣವನ್ನು ಹೋಗಲಾಡಿಸುವುದು ಹೇಗೆ ಸಾಧ್ಯ? ಕೈಯಲ್ಲಿ ಗುದ್ದಿದರೆ ಪುಡಿ ಪುಡಿಯಾಗಿ ಬಿಟ್ಟಿತಲ್ಲ.
ಕಾರಿನ ಸುತ್ತಲೂ ಒಂದು ಸುತ್ತು ಹಾಕಿದ. ಕಾರಿನ ಬಳಿಯೂ ಯಾರೂ ಬರದಂತೆ ಸೆಕ್ಯೂರಿಟಿ ನಿಲ್ಲಿಸಲಾಗಿತ್ತು. ಕಾರಿನ ಗಾಜನ್ನು ತಟ್ಟಿ ನೋಡಿದ. No doubt, Something is wrong!! ಕಾರಿನ ಬಾಗಿಲು ತೆಗೆದು ಒಳ ಕೂತ. ಮೊದಲ ಗಮನಿಸದ ಘಾಟು ವಾಸನೆಯನ್ನು ಆತನ ಮೂಗು ಈಗ ಗುರುತಿಸಿ ಬಿಟ್ಟಿತು. "ಹೈಡ್ರೋ ಫ್ಲೋರಿಕ್ ಆಸಿಡ್!" ತನ್ನಲ್ಲಿಯೇ ಉಚ್ಚರಿಸಿದ. ಆತನ ಮುಖದಲ್ಲೊಂದು ಪ್ರಶ್ನಾರ್ಥಕ ಚಿಹ್ನೆ ಮೂಡಿತು. ಹೇಗೆ ಸಾಧ್ಯ? ಬೆಳಿಗ್ಗೆ ಹೊರಡುವಾಗ ಸ್ವತಃ ಪರೀಕ್ಷಿಸಿದ್ದೇನೆ. ಅದಾದ ನಂತರ ಫಂಕ್ಷನ್ ಗೆ ಹೋದಾಗಲೂ ಎರಡು ಜನ ಕಾವಲು ನಿಂತಿದ್ದಾರೆ. ಗಾಜಿನ ಮೇಲೆ ಆಸಿಡ್ ಪ್ರಯೋಗಿಸಲು ಹೇಗೆ ಸಾಧ್ಯ? ಹಾಗಾದರೆ ಕಾವಲು ನಿಂತವರೂ ಇನವಾಲ್ವ್ ಆಗಿದ್ದಾರೆಯೇ? ಮೈ ಜುಮ್ ಎಂದಿತು ಆತನಿಗೆ. ವೈರಿ ಕಂಕುಳಲ್ಲಿಯೇ ಇರುವನೇ? ತಕ್ಷಣ ಕಾರು ಇಳಿದು ಅಲ್ಲಿದ್ದ ಒಬ್ಬ ಗಾರ್ಡ್ ನನ್ನು ಕರೆದು ಬೆಳಿಗ್ಗೆ ಕಾವಲಿಗಿದ್ದ ಇಬ್ಬರನ್ನೂ ಕರೆದು ತಾ ಎಂದು ಕಳಿಸಿದ.
ಅವರೇನಾದರು ಅದರಲ್ಲಿ ಇನವಾಲ್ವ್ ಆಗಿದ್ದರೆ ಇಷ್ಟೊತ್ತಿಗೆ ಅವರು ಭ್ಹುಗತವಾಗಿಬಿಟ್ಟಿರುತ್ತಾರೆ ಎಂದವನಿಗೆ ಗೊತ್ತು. ಆದರೆ ಈಗ ಸಂಶಯ ಪರಿಹರಿಸಿಕೊಳ್ಳಲೇ ಬೇಕು, ತಾನು ಬೇಟೆ ಆಡಲೇ ಬೇಕು, ಮತ್ತು ಚುರುಕಾದ ಸಮ್ಮಿಶ್ರ. ಗಾರ್ಡ್ ಅತ್ತ ನಡೆಯುತ್ತಲೇ ತಾನು ಮತ್ತೆ ಕಾರಿನೊಳಕ್ಕೆ ಬಂದು ಪರೀಕ್ಷಿಸತೊಡಗಿದ. ಪ್ರಿಯಂವದಾಳ ದೇಹದೊಳಗೆ ಹೊಕ್ಕ ಬುಲೆಟ್ ಹೊರಬಂದು ಕಾರಿನ ಬಾಡಿಗೆ ಹೊಕ್ಕಿ ನಿಂತಿತ್ತು. ಪೂರ್ತಿ ಎಂಟಿಂಚಿನ ಬುಲೆಟ್. ಬುಲೆಟ್ ನೋಡುತ್ತಲೇ ತಿಳಿದಿತ್ತು McMillan-TAC 50. ಭೂಗತ ಪ್ರಪಂಚವೇಕೆ ಪ್ರಿಯಂವದಾಳ ಹಿಂದೆ ಬಿದ್ದಿತು? ತನಗೆ ಗೊತ್ತಿಲ್ಲದಂತೆ ಏನಾದರು ನಡೆಸುತ್ತಿದ್ದಳಾ? ಹೌದಾದರೆ ಏನು? ತಲೆ ಕೊಡವಿಕೊಂಡ ಸಮ್ಮಿಶ್ರ. ಈಗ ಅದೆಲ್ಲವನ್ನು ಯೋಚಿಸಿ ಪ್ರಯೋಜನವಿಲ್ಲ. ಅದಕ್ಕೆಲ್ಲ ಪ್ರಿಯಂವದಾ ಉತ್ತರಿಸಬೆಕಷ್ಟೇ.
ಹೀಗೆ ದೂರ ಕುಳಿತು ಹೊಂಚು ಹಾಕುವವರು ಭೂಗತ ಜಗತ್ತಿನಲ್ಲಿ ಎಷ್ಟೋ ಜನರಿದ್ದಾರೆ. ಹೇಗೆ ಹಿಡಿಯುವುದು?? ಅದಲ್ಲದೇ ಇಷ್ಟು ಚೆನ್ನಾಗಿ ಪ್ಲಾನ್ ಮಾಡಿದ್ದಾರೆ ಎಂದರೆ ಇದರ ಹಿಂದೆ ಯಾರೋ ಅಸಾಮಾನ್ಯರೇ ಇದ್ದಾರೆ. ಇದು ತನಗೊಂದು ಸವಾಲು. ಪ್ರಿಯಂವದಾ ರಾಜ್ ಇದೊಂದು ಬಾರಿ ಸಾವಿನಿಂದ ಈಚೆ ಬರಲಿ ಎಂದುಕೊಂಡ. ಆತನ ಎಡಗಣ್ಣು ಅದುರಿತು. ಎಂಟಿಂಚಿನ ಬುಲೆಟ್, ಅಷ್ಟು ವೇಗದಿಂದ ಮೈಯೊಳಗೆ ಹೊಕ್ಕರೆ ಮೂಳೆಗಳು ಕೂಡ ಪುಡಿಯಾಗಿ ಬಿಡುತ್ತವೆ. ರಾಜ್ ಇಷ್ಟು ಹೊತ್ತು ಬದುಕಿದ್ದೇ ಹೆಚ್ಹು. ಅಂತಹ ನೋವಿನಲ್ಲೂ ತಮ್ಮಿಬ್ಬರ ಮಧ್ಯೆ ಇರುವ ಗಾಜಿನ ಪರದೆ ಇಳಿಸಿದ್ದಾಳೆ. ಇಲ್ಲದಿದ್ದರೆ ಆಕೆ ಸತ್ತಿದ್ದು ನನಗೆ ತಿಳಿಯುತ್ತಲೇ ಇರಲಿಲ್ಲ. ಗಾಜಿನ ಗ್ಲಾಸ್ ಬರುವ ಮಧ್ಯದ ಬಟನ್ ಒತ್ತಿದ. ನಿಧಾನವಾಗಿ ಎದುರು ಬಂದಿತು ಗಾಜು. ಅದನ್ನು ನೋಡುತ್ತಿದ್ದಂತೆ ಕೂತಲ್ಲಿಯೇ ಬೆವರಿದ ಸಮ್ಮಿಶ್ರ. ಇವಳೇನು ಹೆಣ್ಣಾ? ದೇಹದೊಳಗೆ ಎಂಟಿಂಚಿನ ಬುಲೆಟ್ ಸೇರಿ, ಜೀವ ಹಿಂಡುವಾಗಲೂ ಏನೋ ಬರೆಯಲು ಪ್ರಯತ್ನಿಸಿದ್ದಾಳೆ. ರಕ್ತ ಒಣಗಿ ಕಪ್ಪಾಗಿದೆ. ಬರೆದಷ್ಟು ಸ್ಪಷ್ಟವಾಗಿ ಕಾಣುತ್ತಿದೆ. H I M. ಏನಿದು H I M? ಸಾಯುವ ಮೊದಲು ಏನು ಬರೆಯಲು ಹೊರಟಿದ್ದಳು? ಹಿಮಾಂಶು!? ಹಿಮಾಂಶು ಎಂದು ಬರೆಯಲು ಪ್ರಯತ್ನಿಸಿದ್ದಳಾ? ಆದರೆ ಯಾಕೆ? ಈ ಕೊಲೆಯ ಹಿಂದೆ ಅವನದೇ ಕೈವಾಡವಿದೆಯಾ?? ಅದು ಮೊದಲೇ ರಾಜ್ ಗೆ ತಿಳಿದಿದ್ದರೂ ಅಲಕ್ಷ್ಯಗೊಂಡು ಸುಮ್ಮನಿದ್ದಳಾ.. ತನಗೂ ಹೇಳದೆ!!??
ಅಥವಾ ಬೇರೆ ಏನಾದರೂ ಕೋಡ್ ಇರಬಹುದಾ? ಆಕೆ ದುಡಿದ ದುಡ್ಡನ್ನೆಲ್ಲ ಹೇಗೆ ದೇಶದಿಂದ ಹೊರಗೆ ಸಾಗಿಸುತ್ತಾಳೆ ಎಂಬ ಸಣ್ಣ ಅರಿವಿದೆ ಆತನಿಗೆ. ಆದರೆ ಅವಳಾಗಿಯೇ ಅದರ ಬಗ್ಗೆ ಅವನ ಬಳಿ ಒಮ್ಮೆಯೂ ಚರ್ಚಿಸಿಲ್ಲ ಅಥವಾ ಹೇಳಿಯೂ ಇಲ್ಲ. ಅವನೂ ಕೇಳುವ ಗೋಜಿಗೆ ಹೋಗಿರಲಿಲ್ಲ. ಅವಳು ಸತ್ತರೆ ಅಷ್ಟೊಂಡು ಹಣ ವೇಸ್ಟ್ ಆಗಿಬಿಡುತ್ತದಲ್ಲಾ ಎಂದು ಅದಕ್ಕೆ ಸಂಬಂಧಪಟ್ಟ ಕೋಡ್ ಏನಾದರೂ ಬರೆದಿದ್ದಾಳಾ?? ಅಥವಾ ಇದು ಬರೇ HIM ಅಷ್ಟೇನಾ? "ಅವನು?" ಯಾರು ಹಾಗಾದರೆ?? ತಲೆ ಕೆಡತೊಡಗಿತು.
ಒಂದು ನಿಮಿಷ ಯೋಚಿಸುತ್ತಲೇ ಇದ್ದ ಸಮ್ಮಿಶ್ರ, ಏನೋ ನಿರ್ದಾರಕ್ಕೆ ಬಂದವನಂತೆ ಕರವಸ್ತ್ರ ತೆಗೆದು ಅದನ್ನು ಒರೆಸಿ ಬಿಟ್ಟ. ಅದೇನೇ ಸತ್ಯವಿರಲಿ, ತಾನೇ ಕಂಡು ಹಿಡಿಯಬೇಕು. ಎಲ್ಲರು ತಿಳಿಸಬೇಕೆಂದಿದ್ದರೆ ರಾಜ್ ಎಲ್ಲರಿಗೂ ಕಾಣುವಂತೆಯೇ ಬರೆದಿರುತ್ತಿದ್ದಳು. ಅವಳಿಗೆ ತಿಳಿದಿತ್ತು ಈ ಗಾಜಿನ ಪರದೆಯ ಮೇಲೆ ಬರೆದರೆ ಯಾರಿಗೂ ಕಾಣಿಸುವುದಿಲ್ಲವೆಂದು. ಅಂದರೆ ತನಗಷ್ಟೇ ಏನನ್ನೋ ಹೇಳಲು ಬಯಸುತ್ತಿದ್ದಾಳೆ. ಹತ್ತು ವರ್ಷ ತನ್ನೊಡನೆ ಕೆಲಸ ಮಾಡಿದ ನಿನಗೆ ಮಾತ್ರ ಈ ಒಗಟನ್ನು ಬಿಡಿಸಲು ಸಾದ್ಯ ಎಂದು ಹೇಳಿದಂತೆ ಅನ್ನಿಸಿತು ಅವನಿಗೆ.
ಪ್ರಶ್ನೆ ಪತ್ರಿಕೆ ಮೊದಲೇ ಕೊಟ್ಟರೂ ಉತ್ತರವೇ ಸಿಗದಂಥ ಕಷ್ಟದ ಪ್ರಶ್ನೆಗಳು. ಇದನ್ನು ಅಳಿಸಿ ತಾನು ತಪ್ಪು ಮಾಡುತ್ತಿದ್ದೆನಾ?? ನಿಜವಾದ ಇನವೆಸ್ಟಿಗೇಶನ್ ನಡೆಸುವವರು ದಾರಿ ಹಾದಿ ತಪ್ಪಿ ಬಿಡುತ್ತಾರಾ? ಎಲ್ಲವೂ ಪ್ರಶ್ನೆಗಳಾಗೇ ಉಳಿದಿದ್ದವು. ಏನಾದರಾಗಲಿ ಎಂದು ಮತ್ತೆ ಆ ಬಟನ್ ಒತ್ತಿ ಕಾರಿಳಿದು ಹೊರಬಂದ. ರಕ್ತದ ಸಣ್ಣ ಕಲೆಯೂ ಉಳಿಯದ ಗಾಜಿನ ಪರದೆ ತನ್ನೊಳೊಗೆ ಸತ್ಯವನ್ನು ಸೇರಿಸಿಕೊಂಡು ಒಳಗೆ ಸೇರಿಕೊಂಡಿತು.
ಅಷ್ಟರಲ್ಲಿ ಬೆಳಿಗ್ಗೆ ಕಾವಲಿದ್ದ ಇಬ್ಬರು ಗಾರ್ಡ್ ಗಳು ಬಂದರು. ಅವರ ಮುಖವನ್ನೇ ಸೂಕ್ಷ್ಮವಾಗಿ ಗಮನಿಸಿದ. ಇಬ್ಬರ ಮುಖದಲ್ಲೂ ಎಳ್ಳಷ್ಟೂ ಸಂಶಯವಿಲ್ಲ. ಅವರ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡುತ್ತ "ಬೆಳಿಗ್ಗೆ ಕಾರಿನ ಬಳಿ ಯಾರನ್ನು ಬಿಟ್ಟಿದ್ದೀರಿ?" ಎಂದು ಪ್ರಶ್ನಿಸಿದ. ಈಗಿನ ಪರಿಸ್ಥಿತಿ ಅವರಿಗೂ ತಿಳಿದಿದೆ. ಒಬ್ಬರ ಮುಖ ಒಬ್ಬರು ನೋಡಿಕೊಂಡು ನಡೆದ ವಿಷಯ ಒಂದೂ ಬಿಡದೆ ಹೇಳಿದರು. ಮಣ್ಣು ತುಂಬಿದ ಲಾರಿ ಬಂದಿದ್ದು, ಕಾರು ಧೂಳಿನಿಂದ ಆವೃತವಾಗಿದ್ದು, ಲಾರಿಯ ಡ್ರೈವರ್ ಕಾರನ್ನು ಸ್ವಚ್ಚಗೊಳಿಸಿದ್ದು.. ಎಲ್ಲವನ್ನೂ ಹೇಳಿದ್ದರು. ಅವರ ಮುಖದಲ್ಲಿ ಯಾವುದೇ ನಾಟಕೀಯ ಬದಲಾವಣೆಯಾಗಲೀ, ಭಯವಾಗಲೀ ಇರಲಿಲ್ಲ. ನಡೆದ್ದಿದ್ದನ್ನು ಹೇಳಿದ್ದರು. ಅದರಲ್ಲಿ ಅವರಿಗೆ ಯಾವುದೇ ತಪ್ಪು ಕಾಣಿಸಲಿಲ್ಲ. ಸಮ್ಮಿಶ್ರನಿಗೆ ಅರ್ಥವಾಗಲು ಕ್ಷಣವೂ ಹಿಡಿಯಲಿಲ್ಲ. They planned. Not only planned. Executed well. ಯಾರಿಗೂ ಅನುಮಾನ ಬರಲು ಸಾಧ್ಯವೇ ಇಲ್ಲ. ಇವರಿಬ್ಬರ ಜಾಗದಲ್ಲಿ ತಾನಿದ್ದರೂ ಅನುಮಾನ ಹುಟ್ಟುತ್ತಿರಲಿಲ್ಲ. ಅಷ್ಟು ಅಚ್ಚು ಕಟ್ಟಾಗಿ ಬಲೆ ಹಣೆದಿದ್ದಾರೆ. ಅವರಿಗೆ ಏನು ಹೇಳಿ ಪ್ರಯೋಜನವಿಲ್ಲ. "ಸರಿ ನೀವಿನ್ನು ಹೊರಡಿ" ಎಂದು ಅವರನ್ನು ಕಳುಹಿಸಿದ. ಅರ್ಧ ಘಟನೆ ಬಿಚ್ಚಿಕೊಂಡಿದೆ. ಆದರೆ ಕೊಲೆಗಾರನ ಬಗ್ಗೆ ಮಾಹಿತಿ ಸಿಗುವುದು ಕಷ್ಟ. ಇಷ್ಟು ಬೇಗ ಬಗೆ ಹರಿಯುವ ಸಮಸ್ಯೆಯಲ್ಲ ಇದು ಎಂದೆನ್ನಿಸಿತು. ಪ್ರಿಯಂವದಾ ಎಚ್ಚೆತ್ತರೆ ಇನ್ನರ್ಧ ಸಮಸ್ಯೆ ಕಡಿಮೆ ಆಗಬಹುದೇನೋ. ಅವಳು ಬರೆದ HIM ನ ಅರ್ಥ ಅವಳೇ ಹೇಳಿ ಬಿಡುತ್ತಾಳೆ. ನಂತರ ಉಳಿಯುವುದೊಂದೇ.. ಹಂಟಿಂಗ್.. ಚಿರತೆಯಂತೆ ಬೆನ್ನು ಬಿದ್ದು ಬೇಟೆಯಾಡುತ್ತೇನೆ. ನೀನು ಯಾರೇ ಆಗಿರು ಎಂದು ಮನಸ್ಸಲ್ಲೇ ನಿರ್ಧರಿಸಿದ ಸಮ್ಮಿಶ್ರ. ಮತ್ತೆರಡು ಬಾರಿ ಕಾರನ್ನು ಸೂಕ್ಷ್ಮವಾಗಿ ಗಮನಿಸಿ ಮತ್ತೇನು ಇಲ್ಲ ಎಂದುಕೊಂಡು ಆಪರೇಶನ್ ಥಿಯೇಟರ್ ಕಡೆ ಸಾಗಿದ. ಆತನ ಒಪ್ಪಿಗೆ ಸಿಕ್ಕರೆ ಕಾರನ್ನು ಮತ್ತೆ ಉಳಿದ ಸಂಗತಿಗಳನ್ನು ತಿಳಿದುಕೊಳ್ಳಲು ಇನವೆಸ್ಟಿಗೇಶನ್ ಆಫೀಸರ್ ಬಂದು ನಿಂತಿದ್ದ.
ಆತನ ಬಳಿ ನಡೆದ ಸಮ್ಮಿಶ್ರ ನಡೆದಿದ್ದೆಲ್ಲವನ್ನು ವಿವರಿಸಿದ. "ಈ ವಿಷಯ ಈಗಲೆ ಮೀಡಿಯಾದವರಿಗೆ ತಿಳಿಯುವಂತಿಲ್ಲ" ಎಂದ ಕೊನೆಯಲ್ಲಿ. ಸಮ್ಮಿಶ್ರ ಯಾರು ಮತ್ತು ಎಂತವ ಎಂದು ಆಫೀಸರ್ ಬಲ್ಲ. ಅದಾಗಲೇ ನಡೆದ ಅರ್ಧ ಘಟನೆಗಳ ವಿವರಗಳನ್ನು ಸಮ್ಮಿಶ್ರ ಹೇಳಿ ಮುಗಿಸಿದ್ದ. ತಾನು ಮಾಡಿರುವ ಅರೆಂಜ್ ಮೆಂಟ್ಸ್ ಕೂಡ ಹೇಳಿದ್ದ. ಈಗ ಅವರೆಲ್ಲರಿಂದ ಮಾಹಿತಿ ಸಂಗ್ರಹಿಸಬೇಕು ಮತ್ತು ವಿಷಯ ಹೊರಗೆ ಹರಡುವಂತೆಯೂ ಇಲ್ಲ. ಇಷ್ಟು ದೊಡ್ಡ ವಿಷಯ ಸುದ್ಧಿಯಾಗದೇ ಗೌಪ್ಯವಾಗಿಡಬೇಕೆಂದರೆ ಸಣ್ಣ ಮಾತಲ್ಲ.
ಇಂತಹ ಘಟನೆಗಳು ನಡೆದಾಗ ತುಂಬ ಸೂಕ್ಷ್ಮತೆಯಿಂದ ವರ್ತಿಸಬೇಕು. ಇಲ್ಲದಿದ್ದಲ್ಲಿ ದೊಂಬಿಗಳು, ಗಲಾಟೆಗಳು ಪ್ರಾರಂಭವಾಗಿ ಬಿಡುತ್ತದೆ. ರಾಜಕಾರಣಿಗಳಿಗೆ ಬೇಕಾಗಿರುವುದು ಅದೇ. ಕಾಲಹರಣವಾಗಬೇಕು. ದೇಶಕ್ಕಾಗಿ ಏನು ಮಾಡಿದ್ದೀರಿ ಎಂದು ಜನ ಕೇಳಬಾರದು. ಜನರು ಆ ಹಾದಿಯಲ್ಲಿ ಯೋಚಿಸಿದರೆ ಅವರಿಗೆ ಉಳಿಗಾಲವಿಲ್ಲ. ಹಾಗಾಗಿ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ. ಮತ, ಪಂಥಗಳು, ಜಾತಿ, ಧರ್ಮಗಳು ಜನರನ್ನು ಬಹು ಬೇಗ ಆಕರ್ಷಿಸುತ್ತದೆ. ಇಂತಹ ಘಟನೆಗಳು ನದೆದರಂತೂ ತಿಂಗಳುಗಟ್ಟಲೆ ಅದರ ಬಗ್ಗೆಯೇ ಚರ್ಚೆಗಳು, ವಾದ-ವಿವಾದಗಳು. ಅಷ್ಟು ಸಾಕು. ರೋಗಿ ಬಯಸುವುದೂ, ಡಾಕ್ಟರ್ ಕೊಡುವುದೂ ಎರಡು ಒಂದೇ ಆದರೆ ರೋಗಿಗೆ ತೊಂದರೆಯೇ ಇಲ್ಲ. ಎಂದಿಗೆ ದೇಶ Film stars ಗಳನ್ನು, ರಾಜಕಾರಣಿಗಳನ್ನು ಜನ ಸಾಮಾನ್ಯನಂತೆ ನೋಡುತ್ತದೆಯೋ ಅಂದಿಗೆ ಅರ್ಧ ಸಮಸ್ಯೆ ದೂರ ಆದಂತೆಯೇ. ಆದರೆ ಇದನ್ನೆಲ್ಲಾ ಜನ ಅರಿಯುವುದಿಲ್ಲ. ಅದಕ್ಕೆ ಹಿಂದೂಸ್ಥಾನ ಹೀಗಿದೆ. ಇಂತಹ ದೊಂಬಿ, ಗಲಾಟೆಗಳನ್ನೆಲ್ಲ ತಡೆಯಲು ಸಮ್ಮಿಶ್ರ ವಿಷಯವನ್ನು ಗುಟ್ಟು ಮಾಡಿದ್ದ. ಪ್ರಿಯಂವದಾ ಚಿಕಿತ್ಸೆಗೆ ಸ್ಪಂದಿಸದೇ ಸತ್ತರೆ ಆಗ ನಡೆಯುವ ಗಲಾಟೆಗಳನ್ನಂತೂ ತಪ್ಪಿಸಲು ಸಾಧ್ಯವಿಲ್ಲ. ಆದರೆ ಅದೇಕೆ ಈಗಿನಿಂದಲೆ ಮೊದಲ್ಗೊಳ್ಳಬೇಕು ಎಂಬುದು ಆತನ ಆಲೋಚನೆ.
ಮೆಟ್ಟಿಲೇರಿ ಬರುತಿದ್ದಂತೆ, ಅಲ್ಲೇ ಕುಳಿತಿದ್ದ ಹಿಮಾಂಶು ಎದ್ದು ಬಂದು "ಇಷ್ಟು ದೊಡ್ಡ ಅನಾಹುತವನ್ನು ಜನರಿಂದ ಮುಚ್ಚಿಡುವುದು ಸರಿಯಲ್ಲ, ಒಂದು ಪತ್ರಿಕಾಗೋಷ್ಠಿ ಕರೆದು ಹೇಳಿಬಿಡೋಣ" ಎಂದ. ಸಮ್ಮಿಶ್ರ ಮೊದಲಿನಂತಾಗಿದ್ದ. ತಾಯಿಯ ಸಾವಿನಲ್ಲೂ ಬೀಳುವ ಓಟುಗಳನ್ನು ಎಣಿಸುತ್ತಿದ್ದಾನೆ ಇವನು ಅದೆಷ್ಟು ಸ್ವಾರ್ಥಿ ಎಂದೆನ್ನಿಸಿಬಿಟ್ಟಿತು.
HIM- HIMANSHU... ಪ್ರಿಯಂವದಾಳ ಕೊಲೆಯ ಹಿಂದೆ ಈತನೇ ಇರಬಹುದಾ? ಅದನ್ನೇ ಬರೆಯಲು ಹೊರಟ ರಾಜ್ ಇನ್ನು ಉಳಿಯುವುದಿಲ್ಲ ಎಂದೆನ್ನಿಸಿ ಬಟನ್ ಒತ್ತಿರಬಹುದಾ? ಮುಂದಿನ ವರ್ಷದ ಜನರಲ್ ಎಲೆಕ್ಷನ್ ನಲ್ಲಿ ಗೆದ್ದು ಬರಲು ಜನರ ಸಿಂಪತಿ ಪಡೆಯಲು ತಾಯಿಯನ್ನೇ ಕೊಲ್ಲುವ ಮನಸ್ಸು ಮಾಡಿರಬಹುದಾ? ಮತ್ತೆ ಮನಸ್ಸು ಅದೇ ರಾಗ ಎಳೆಯಿತು.
"ಏನು ಮಾಡಬೇಕು, ಯಾವಾಗ್ ಮಾಡಬೇಕು, ಹೇಗೆ ಮಾಡಬೇಕು, ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಹಿಮಾಂಶು. ಮಾಡುತ್ತೇನೆ ಕೂಡಾ." ಎಂದು ಆಪರೇಶನ್ ಥಿಯೇಟರ್ ಕಡೆ ನಡೆದ ಸಮ್ಮಿಶ್ರ. ನೀನು ಇದರಲ್ಲಿ ತಲೆ ಹಾಕಬೇಡ ಎಂಬ ಸ್ಪಷ್ಟ ಸಂದೇಶವಿತ್ತು ಅವನ ಧಾಟಿಯಲ್ಲಿ.
ಆತ ಆಪರೇಶನ ಥಿಯೇಟರ್ ಬಳಿ ಹೋಗುತ್ತಲೇ ಡಾಕ್ಟರ್ ಗಳು ಆಪರೇಷನ್ ಮುಗಿಸಿ ಹೊರ ಬರುತ್ತಿದ್ದರು. ಅವರೆಲ್ಲರ ಮುಖದಲ್ಲೂ ಆಯಾಸ ತುಂಬಿತ್ತು. ಸಮ್ಮಿಶ್ರನ ಬಳಿ ಬಂದ ಮುಖ್ಯ ಡಾಕ್ಟರ್ "ಡಿಯರ್ ಸಮ್ಮಿಶ್ರ, ಈಗಲೇ ನಾವು ಏನೂ ಹೇಳಲು ಸಾಧ್ಯವಿಲ್ಲ. ಜವಾಬ್ದಾರಿಯನ್ನು ನಿಭಾಯಿಸಿದ್ದೇವೆ. ಈಗಂತೂ ಯಾವುದಕ್ಕೂ ಸರಿಯಾದ ರೆಸ್ಪಾನ್ಸ್ ಬರುತ್ತಿಲ್ಲ. ಏನಿದ್ದರೂ 24 ಗಂಟೆಗಳ ನಂತರವೇ ಹೇಳಬಹುದು. ಈಗಿನ ಪರಿಸ್ಥಿತಿಯಲ್ಲಂತೂ ದೇವರ ಮೇಲೆ ಭಾರ ಹಾಕಬೇಕಷ್ಟೆ" ಎಂದ.
ಸಮ್ಮಿಶ್ರನೂ ಬಲ್ಲ. ರಾಜ್ ಳ ಪರಿಸ್ಥಿತಿಯ ಬಗ್ಗೆ ಅರಿವಾಗಲು ಡಾಕ್ಟರ್ ಆಗಬೇಕೆಂದೇನೂ ಇಲ್ಲ. ಆ ಎಂಟಿಂಚಿನ ಬುಲೆಟ್ ನೋಡಿದರೆ ಸಾಕು.
ಸರಿ ಎನ್ನುವಂತೆ ತಲೆಯಾಡಿಸಿ ಅಲ್ಲಿಯೇ ಬದಿಗಿದ್ದ ಖುರ್ಚಿಯಲ್ಲಿ ಕುಳಿತ. ಆತನ ತಲೆ ನಡೆದ ಘಟನೆಗಳು, ಉಳಿದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಕೆಲಸದಲ್ಲಿ ನಿರತವಾಯಿತು.
ಅದೇ ಸಮಯದಲ್ಲಿ ಮುಂಬಯಿ ಏರ್ ಪೋರ್ಟಿನಲ್ಲಿ ಇಳಿದ ಗರುಡ. ಎಂಟಿಂಚಿನ ಬುಲೆಟ್ ದೇಹವನ್ನು ಛಿದ್ರ ಮಾಡಿದ ನಂತರವೂ ಬದುಕುಳಿದ ಪ್ರಿಯಂವದಾ ರಾಜ್, ಆಶ್ಚರ್ಯದ ಜೊತೆಗೆ ಕಸಿವಿಸಿಯೂ ಆಗಿತ್ತು. ಹಿದೆಂದೂ ಆತ ಗುರಿ ಇಟ್ಟ ಜೀವ ಬದುಕಿ ಉಳಿದಿದ್ದಿಲ್ಲ. ಇದೇ ಮೊದಲ ಬಾರಿ ಬೇಟೆ ತಪ್ಪಿದೆ. ಈಗೇನು ಮಾಡಬೇಕು? ಮತ್ತೊಮ್ಮೆ ಪ್ರಯತ್ನಿಸಬೇಕಾ? ಅಥವಾ ಡೀಲ್ ಕ್ಯಾನ್ಸಲ್ ಮಾಡಿಕೊಂಡು ಹೋಗಿಬಿಡಬೇಕಾ? ಇಂತಹ ಮಿಸ್ಟೇಕ್ ಗಳು ಕಪ್ಪು ಜಗತ್ತಿನಲ್ಲಿ ಬಹುಬೇಗ ಹೆಸರು ಕೆಡಿಸಿ ಬಿಡುತ್ತದೆ. ಏನು ಮಾಡಲಿ ಎಂದು ಯೋಚಿಸುತ್ತಲೇ ಇದ್ದ. ತನ್ನ ಕೆಲಸ ಮುಗಿಯಿತು ಒಮ್ಮೆ ದುಬೈಗೆ ಹಾರಿಬಿಟ್ಟರೆ ತನ್ನನ್ನು ಹಿಡಿಯಲು ಯಾರಿಗೂ ಸಾಧ್ಯವಿಲ್ಲ. ದುಬೈ ಎಂಬುದು ತಲೆ ತಪ್ಪಿಸಿಕೊಳ್ಳುವವರಿಗೆ ಸ್ವರ್ಗವಿದ್ದಂತೆ. ಗರುಡನಿಗೆ ತಲೆ ತಪ್ಪಿಸಿಕೊಳ್ಳುವ ಅಗತ್ಯವೂ ಇಲ್ಲ. ಯಾಕೆಂದರೆ ಹೀಗೊಂದು ಹತ್ಯೆ ಆತ ಮಾಡಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಆತ ದುಬೈಗೆ ಹಾರುವ ಕ್ಯೂದಲ್ಲಿ ನಿಂತಾಗಲೇ ಬಂದಿತ್ತು ಸಂದೇಶ. "ಅಮ್ಮ ಕ್ಷೇಮವಾಗಿದ್ದಾಳೆ. ನಿನಗಾಗಿ ಕಾಯುತ್ತಿದ್ದಾಳೆ!". She is alive!! ಚಕ್ಕನೆ ಆತ ತನ್ನ ರೂಟ್ ಬದಲಾಯಿಸಿದ್ದ. ಭೂಗತ ಲೋಕದ ಅಂತಹ ನಡೆಗಳೇ ಪೋಲಿಸರ ಹೊರತಾಗಿ ಇಂಟಲಿಜನ್ಸ್ ಏಜನ್ಸಿಯವರಿಗೆ ಕೂಡ ತಲೆನೋವಾಗಿ ಪರಿಣಮಿಸುವುದು. ಮೊದಲೇ ಎರಡು ಟಿಕೆಟ್ ತೆಗೆದುಕೊಂಡಿಟ್ಟುಕೊಳ್ಳುವುದು ಅದೆಷ್ಟು ಮುಂದಾಲೋಚನೆ!!
ಹಾಗೆ ಆತ ಕ್ಯೂ ಬದಲಾಯಿಸಿದಾಗಲೂ ಆತನ ಹಿಂದೆ ಬಾಲವೊಂದು ಸೇರಿಕೊಂಡಿದೆ ಎಂಬುದೂ ಆತನಿಗೆ ಗೊತ್ತು. ಗರುಡನ ಪ್ರೊಫೈಲ್ ಡಿಪಾರ್ಟ್ ಮೆಂಟಿನಲ್ಲಿರುವುದು ಸಹಜ. ಆದರೆ ಇಷ್ಟು ಬೇಗ ತನ್ನನ್ನು ಗುರುತಿಸಿ ಹಿಂದೆ ಸೇರಿದ್ದಾರಾ??ಅಥವಾ ಇದು ಕೇವಲ ಸಂಶಯವಾ?? ಆತ ಸುತ್ತಲೂ ಗಮನಿಸಿದ್ದ. ಕೇವಲ ತನ್ನ ಕ್ಯೂದಲ್ಲಷ್ಟೇ ಅಲ್ಲ. ಬೇರೆ ಬೇರೆ ಸಾಲುಗಳಲ್ಲಿ ಸಹ ಹೀಗೆ ಬಾಲಗಳು ಹೋಗಿ ನಿಲ್ಲುತ್ತಿವೆ. ಅಂದರೆ ಅವರು ತನ್ನನ್ನು ಹಿಂಬಾಲಿಸುತ್ತಿಲ್ಲ. ಈಗ ಸಣ್ಣ ತಪ್ಪು ಮಾಡಿದರೂ ಸಿಕ್ಕಿ ಬೀಳುತ್ತೇನೆ ಅಷ್ಟೆ. ತನ್ನ ಹಾವಭಾವಗಳನ್ನು ಮತ್ತೂ ಸ್ಥಿಮಿತಕ್ಕೆ ತಂದುಕೊಂಡು ಮುಂದೆ ನಡೆದು ವಿಮಾನ ಹತ್ತಿದ್ದ ಗರುಡ.
ಎರಡು ತಾಸಿನ ನಂತರ ಮುಂಬೈ ಏರ ಪೋರ್ಟಿನಿಂದ ಹೊರ ಬಿದ್ದು ಟ್ಯಾಕ್ಸಿ ಹತ್ತಿದ. ತನ್ನ ಹಿಂದೆ ಯಾರಾದರೂ ಬರುತ್ತಿದ್ದಾರ ಎಂದು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದ ಗರುಡ. ತನ್ನೊಂದಿಗೆ ವಿಮಾನವೇರಿದ ವ್ಯಕ್ತಿ ಸ್ವಲ್ಪ ಸಮಯ ಆಕಡೆ ಈಕಡೆ ನೋಡಿ, ನಡೆದಾಡಿ ವಿಮಾನ ಟೇಕ್ ಆಫ್ ಆಗುವುದಕ್ಕೂ ಮುಂಚೆ ವಿಮಾನದಿಂದ ಹೊರಹೋದದ್ದನ್ನು ಆತ ಗಮನಿಸಿದ್ದ. ತನ್ನನು ಯಾರೂ ಹಿಂಬಾಲಿಸುತ್ತಿಲ್ಲ ಎಂದು ತಿಳಿಯುತ್ತಲೇ ನಿರಾಳವಾಗಿ ಸೀಟಿಗೊರಗಿ ಕಣ್ಮುಚ್ಚಿದ್ದ. ಟ್ಯಾಕ್ಸಿ ಆತ ಹೇಳಿದ ಹೋಟೆಲ್ ನ ದಾರಿ ಹಿಡಿಯಿತು. ಎಷ್ಟೇ ನಿರಾಳವೆಂದುಕೊಂಡರೂ ಆಗಾಗ ಮಿರರ್ ನಲ್ಲಿ ಹಿಂದೆ ಯಾರಾದರೂ ಬರುತ್ತಿದ್ದಾರಾ ಎಂದು ನೋಡುವುದನ್ನು ಮರೆತಿರಲಿಲ್ಲ. ಹಾಗೇನೂ ನಡೆಯದ್ದರಿಂದ ಮುಂದೇನು ಎಂದು ಯೋಚಿಸುತ್ತ, ಟ್ಯಾಕ್ಸಿ ಬಿಲ್ ಪೇ ಮಾಡಿ ಹೋಟೆಲ್ ನ ಒಳ ನಡೆದ ಗರುಡ.
ಆತ ಹೋಟೆಲ್ ನ ಒಳ ನಡೆಯುತ್ತಲೇ ಟ್ಯಾಕ್ಸಿ ಡ್ರೈವರ್ ಮೊಬೈಲ್ ತೆಗದು ಸಂದೇಶವೊಂದನ್ನು ಟೈಪಿಸಿ ಸೆಂಡ್ ಮಾಡಿದ. "ವೈರಸ್ ಡಿಟೆಕ್ಟೆಡ್..."
ಗರುಡ ಇಂಡಿಯನ್ ಇಂಟಲಿಜನ್ಸ್ ವಿಂಗ್ ನವರನ್ನು ತುಂಬಾ ಕಡಿಮೆ ಅಂದಾಜು ಮಾಡಿದ್ದ. ಅದೇ ಆತ ಮಾಡಿದ ತಪ್ಪು. ಎಲ್ಲಿಯವರೆಗೆ ಆತ ದುಬೈಗೆ ಹೋಗುವ ಸಾಲಿನಲ್ಲಿ ನಿಂತಿದ್ದನೋ ಅಲ್ಲಿಯವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಆತ ಮುಂಬೈ ವಿಮಾನ ಏರಿದ ನಂತರ ಬೋರ್ಡಿಂಗ್ ಏರಿಯಾದಲ್ಲಿ "Passenger travelling to Dubai, AIR LUPTHANJA. Seat No.14 Mr. Martin Vengal, Please come. Its final call." ಲೌಡ್ ಸ್ಪೀಕರ್ ನಲ್ಲಿ ಗಗನಸಖಿಯ ದನಿ ಕೇಳುತ್ತಿತ್ತು. ಆಗಲೇ ಚುರುಕಾಗಿದ್ದರು ವಿಂಗ್ ನವರು. ಬೋರ್ಡಿಂಗ್ ಪಾಸ್ ತೆಗೆದುಕೊಂಡ ವ್ಯಕ್ತಿ ಕಾಣುತ್ತಿಲ್ಲ. ಅಂದರೆ ಪೋಲಿಸರಿಂದ ಅಂಜಿ ಅಡಗಿದನೆ? ಪಟಪಟನೆ ಆ ವ್ಯಕ್ತಿಯ ಹಿಂದೆ ಬಿದ್ದಿದ್ದರು.
ಕೌಂಟರ್ ನಲ್ಲಿ ವ್ಯಕ್ತಿ ಅರ್ಧ ಗಂಟೆಯ ಮೊದಲಷ್ಟೆ ಬೋರ್ಡಿಂಗ್ ಮಾಡಿರುವುದು ತಿಳಿಯಿತು. ತಕ್ಷಣ ಸಿಸಿಟಿವಿ ಫೋಟೇಜ್ ತೆಗೆಸಿ ನೋಡಿದರು. ಗರುಡ ದುಬೈ ಕ್ಯೂ ನಲ್ಲಿ ನಿಂತಿದ್ದು, ನಂತರ ಮೊಬೈಲ್ ನೋಡಿದ್ದು, ಅಲ್ಲಿ ಬಿಟ್ಟು ಮುಂಬೈ ಸಾಲಿಗೆ ಹೋಗಿ ಸೇರಿಕೊಂಡಿದ್ದು ಎಲ್ಲವೂ ಕಂಡಿತು. Something is wrong.. ಆದರೆ ಅಷ್ಟರಲ್ಲಿ ಮುಂಬೈ ವಿಮಾನ ಆಕಾಶಕ್ಕೆ ಚಿಮ್ಮಿತ್ತು.
ಆತ ಎರಡು ಟಿಕೆಟ್ ಹೊಂದಿದ್ದಾನೆ ಎಂಬುದು ಬಿಟ್ಟರೆ ಮತ್ತೇನೂ ಆಪಾದನೆಯನ್ನು ಆತನ ಮೇಲೆ ಹೊರಿಸುವಂತಿಲ್ಲ. ಇದೆಲ್ಲ ವಿಷಯಗಳು ಸಮ್ಮಿಶ್ರನಿಗೆ ತಲುಪಿತು. ಸಮ್ಮಿಶ್ರ ಆತನನ್ನು ಸುಮ್ಮನೆ ಫಾಲೋ ಮಾಡಿ ಎಂದಷ್ಟೆ ಹೇಳಿದ್ದ. ಸುಮ್ಮನೆ ಫಾಲೋ ಮಾಡಿ ಎಂಬುದರ ಅರ್ಥ ಅಷ್ಟೇ ಅಲ್ಲ. ಅದಕ್ಕೆ ಬೇರೆಯದೇ ಅರ್ಥಗಳಿವೆ. ಅದು ಸಮ್ಮಿಶ್ರನಿಗೆ ಗೊತ್ತು. ವಿಂಗ್ ಆಫೀಸರ್ ಗಳಿಗೆ ಗೊತ್ತು. ಅದೊಂದು ಆರ್ಡರ್ ಸಾಕು. ಗರುಡ ಮುಂಬೈ ಏರ್ ಪೋರ್ಟ್ ನಿಂದ ಹೊರಬೀಳುವ ಮುನ್ನ ಅವನನ್ನು ಹಿಡಿಯಲು ಬೇಕಾದ ಎಲ್ಲ ಯೋಜನೆಗಳೂ ಪ್ರಾರಂಭವಾಗಿದ್ದವು.
ಗರುಡ ಕಾರಿನ ಡ್ರೈವರ್ ತನ್ನ ಚಲನ ವಲನಗಳನ್ನು ಗಮನಿಸುತ್ತಿದ್ದಾನೆ ಎಂದು ಅರಿಯದೇ ಹೋದ. ಆತನ ಗಮನವೆಲ್ಲ ಹಿಂದೆ ಯಾರಾದರೂ ಬರುತ್ತಿದ್ದಾರಾ ಎಂಬುದರ ಮೇಲೆಯೇ ಇತ್ತು. ಈಗ ಆತ ಕುಳಿತಿರುವುದು ವಿಂಗ್ ನ ಕಾರಿನಲ್ಲಿ, ಕಾರು ನಡೆಸುತ್ತಿರುವವ ವಿಂಗ್ ಆಫೀಸರ್ ಎಂಬ ಸಣ್ಣ ಅನುಮಾನವೂ ಬರದಷ್ಟು ಅಚ್ಚುಕಟ್ಟಾದ ಯೋಜನೆ.
ಇದೆಲ್ಲ ವಿಷಯವು ನಿಮಿಷ ನಿಮಿಷಕ್ಕೂ ಸಮ್ಮಿಶ್ರನಿಗೆ ತಲುಪತೊಡಗಿತು. ಸಮ್ಮಿಶ್ರ ಹಾತೊರೆಯಲಿಲ್ಲ. ಆತನ ಮುಂದಿನ ನಡೆ ಗಮನಿಸೋಣ. ಆತನೇನಾದರೂ ದೇಶ ಬಿಟ್ಟು ಹೋಗಲು ಪ್ರಯತ್ನಿಸಿದರೆ ಮಾತ್ರ ಹಿಡಿಯಿರಿ. ಸಮ್ಮಿಶ್ರ ಏಕೆ ಹೀಗೆ ಮಾಡುತ್ತಿದ್ದಾನೆ ಎಂಬ ಸಣ್ಣ ಅನುಮಾನವೂ ಮೂಡಿತು ವಿಂಗ್ ನವರಿಗೆ. ಪ್ರಶ್ನಿಸುವುದು ಹೇಗೆ?
ಸಮ್ಮಿಶ್ರ ಬೇರೆಯದೇ ಯೋಚನೆಯಲ್ಲಿದ್ದ. ಆತ ತನ್ನ ದಾರಿ ಬದಲಾಯಿಸಿದ್ದಾನೆ ಎಂದರೆ ಮತ್ತೆ ಬೇಟೆಗೆ ಬರುತ್ತಾನೆ. ಆಗ ರುಚಿ ತೋರಿಸಬೇಕು. ಇಷ್ಟು ಬೇಗ ತಾನು ಹತ್ಯೆಯ ರೂವಾರಿಯ ಬಳಿ ಹೋಗುತ್ತೇನೆಂದು ತಿಳಿದುಕೊಂಡಿರಲಿಲ್ಲ ಸಮ್ಮಿಶ್ರ. ಆಪರೇಶನ್ ಥಿಯೇಟರ್ ಹೊರಗೆ ಕುಳಿತು ತನ್ನ ರಿವಾಲ್ವರ್ ತೆಗದು ಸ್ವಚ್ಚಗೊಳಿಸಿ ಜೋಡಿಸಿಕೊಳ್ಳತೊಡಗಿದ. ವೀಡಿಯೋ ದಲ್ಲಿ ಕಂಡ ವ್ಯಕ್ತಿಯ ಬಗ್ಗೆ ಪೂರ್ತಿ ಡಿಟೇಲ್ ಬೇಕು ಎಂದು ಆತ ಹೇಳಿಯಾಗಿತ್ತು.
ಯಾರಾತ!? ಎರಡು ಕಿಲೋಮೀಟರ್ ದೂರ ಕುಳಿತು ರಾಜ್ ಮೇಲೆ ಗುಂಡು ಹಾರಿಸಿದವ. ವೈರಿಯಾದರೂ ಮೆಚ್ಚಲೇ ಬೇಕು. ನೀನು ಯಾರೇ ಆಗಿರು, ಗುಂಡು ಹಾರಿಸಿರುವುದು! ಅದು ಕಿಂಗ್ ಮೇಕರ್ ಪ್ರಿಯಂವದಾ ರಾಜ್ ಮೇಲೆ!! ಗುಂಡು ಹೊಡೆದ ಮೇಲೂ ಇಲ್ಲಿಂದ ನೀನು ತಪ್ಪಿಸಿಕೊಳ್ಳುವೆ ಎಂಬ ನಿನ್ನ ಭ್ರಮೆಯನ್ನು ಬೇರು ಸಹಿತ ಕೀಳುತ್ತೇನೆ ಎಂದು ಗನ್ ಹೋಲ್ ಸ್ಟರ್ ಮಾಡಿಕೊಂಡ ಸಮ್ಮಿಶ್ರ.
ಯಾವುದೇ ನಿಮಿಷದಲ್ಲಿ ಕೂಡ ಸಿಡಿಯಲು ಆತ ಸಿದ್ದವಾಗಿದ್ದ. ತಾನೇನು ಕಡಿಮೆಯಿಲ್ಲ ಎಂಬಂತೆ ಹೋಲ್ ಸ್ಟರ್ ನಲ್ಲಿ ಕಪ್ಪಗೆ ಮಿರ ಮಿರನೆ ಮಿಂಚಿತು ಆತನ ರಿವಾಲ್ವರ್.
                                                  ...............................ಮುಂದುವರೆಯುತ್ತದೆ..............................
                                                             https://www.facebook.com/katarnakkadamabri/

No comments:

Post a Comment