Saturday, July 23, 2016

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 15

                                                      ಖತರ್ನಾಕ್ ಕಾದಂಬರಿ..ಅಧ್ಯಾಯ 15

ಪ್ರತಾಪ್ ಯೋಚಿಸುತ್ತ ಕುಳಿತಿದ್ದ ಪೋಲಿಸ್ ಸ್ಟೇಶನ್ ನಲ್ಲಿ. ಆತ ಇನಸ್ಪೆಕ್ಟರ್ ಆಗಿ ಬಡ್ತಿ ಪಡೆದಿದ್ದ. ಅದರ ಹಿಂದೆ ಶಾಸ್ತ್ರಿ ಕೊಟ್ಟ ಉಪಾಯದ ಬಲವಿತ್ತು. ಅದಾದ ನಂತರ ಶಾಸ್ತ್ರಿಯ ಫ್ರಾಡ್ ಕೇಸ್ ವಿಚಾರಣೆಗೆ ಹೋದಾಗ ಬಿಸಿನೆಸ್ ಮತ್ತು ಮೋಸದ ನಡುವಿನ ಎಳೆಯನ್ನು ಶಾಸ್ತ್ರಿ ಎಷ್ಟು ಚೆನ್ನಾಗಿ ಅರಿತಿದ್ದಾನೆ ಎಂದು ಮನಗಂಡಿದ್ದ. ಶಾಸ್ತ್ರಿ ಎಷ್ಟು ಒಳ್ಳೆಯವನೋ ಕೆಟ್ಟವರಿಗೆ ಅಷ್ಟೇ ಕೆಟ್ಟವನಾಗಬಲ್ಲ ಎಂಬುದೂ ಪ್ರತಾಪ್ ನಿಗೆ ಸ್ಪಷ್ಟವಾಗಿ ಅರಿವಾಗಿತ್ತು. ಶಾಸ್ತ್ರಿ ಕತ್ತಿ ಹಿಡಿದು ಯಾರ ಎದುರೂ ನಿಲ್ಲುವುದು ಬೇಕಿಲ್ಲ. ಕೇವಲ ಆತನ ಬುದ್ಧಿಯ ಸಾಮರ್ಥ್ಯದಿಂದಲೇ ಎದುರು ನಿಂತವರನ್ನು ಮತ್ತೆ ಏಳದಂತೆ ಬಗ್ಗಿ ಬಿಡುದು ಬಲ್ಲ. ಅವನ ಬುದ್ಧಿಶಕ್ತಿ ಕತ್ತಿಗಿಂತ ಹರಿತವಾಗಿದೆ ಎಂದು ಪ್ರತಾಪ್ ನಿಗೆ ಮನವರಿಕೆಯಾಗಿತ್ತು.
ಆದರೀಗ ಪ್ರತಾಪ್ ಶಾಸ್ತ್ರಿಯ ಬಗ್ಗೆ ಯೋಚಿಸುತ್ತಿಲ್ಲ. ಇವೆಲ್ಲ ನಡೆದು ವಾರವೇ ಕಳೆದು ಹೋಗಿದೆ. ಪ್ರತಾಪ್ ನ ಎದುರು ಎರಡು ಫೈಲಿದೆ, ಒಂದು ಫೈಲ್ ದೆಹಲಿಯಿಂದ ಕ್ಷಾತ್ರ ಕಳಿಸಿದ್ದು, ಅದರಲ್ಲಿ ದೆಹಲಿಯ ಮಾನಸಿಕ ಆಸ್ಪತ್ರೆಯಲ್ಲಿ ಕೊಲೆ ಮಾಡಿದ ಮಾನಸಿಕ ರೋಗಿಯ ಬಿಡಿಸಿದ ಚಿತ್ರವಿದೆ. ಅದರ ಜೊತೆಗೆ ಉಳಿದ ಕೊಲೆಗಳು ನಡೆದ ರೀತಿಯ ಬಗ್ಗೆ ವಿವರಗಳು, ಚಿತ್ರಗಳು ಇವೆ.
ಇನ್ನೊಂದು ಫೈಲಿನಲ್ಲಿ ಪ್ರತಾಪ್ ನ ಏರಿಯಾದಲ್ಲಿ ಒಂದು ವಾರದ ಹಿಂದೆ ನಡೆದ ಕೊಲೆಯ ವಿವರವಿತ್ತು. ಆತನ ಏರಿಯಾದಲ್ಲಿ ನಡೆದ ಕೊಲೆಯ ಸುಳಿವು ಹಿಡಿಯಲು ಆತ ಬಹಳವೇ ಪ್ರಯತ್ನಿಸುತ್ತಿದ್ದ. ಆದರೆ ಇನ್ನೂ ಅದರ ಬಗ್ಗೆ ಯಾವುದೇ ಮಾಹಿತಿ ದೊರೆತಿರಲಿಲ್ಲ. ಕೊಲೆ ಏಕೆ ಮಾಡಿದ್ದಾರೆ? ಯಾರು ಮಾಡಿದ್ದಾರೆ? No. ಯಾವುದೇ ವಿವರಗಳು ದೊರೆತಿರಲಿಲ್ಲ. ಇದರ ಬಗ್ಗೆಯೇ ಸಾಕಷ್ಟು ತಲೆಕೆಡಿಸಿಕೊಂಡಿರುವಾಗಲೇ ದೆಹಲಿಯಿಂದ ಮತ್ತೊಂದು ಫೈಲ್ ಬಂದು ಸೇರಿಕೊಂಡಿತ್ತು. ಅದರೊಳಗಿನ ವಿವರ ನೋಡಿ ಕುಳಿತಲ್ಲಿಯೇ ಚುರುಕಾಗಿದ್ದ ಪ್ರತಾಪ್. ದೆಹಲಿಯಿಂದ ಬಂದ ಫೈಲಿಗೂ, ಇಲ್ಲಿ ನಡೆದಿರುವ ಕೊಲೆಗೂ ಮತ್ತೆದೇ ಸಾಮ್ಯತೆಯಿದೆ. ಇಲ್ಲಿಯೂ ಮರ್ಮಾಂಗ ಮಿಸ್...!!?
ಇದು ಕೇವಲ ಕಾಕತಾಳೀಯವಾ? ಅಥವಾ ದೆಹಲಿಯಲ್ಲಿ ಕೊಲೆ ಮಾಡಿದ ಮಾನಸಿಕ ರೋಗಿ ಅಲ್ಲಿಂದ ಮುಂಬೈಗೆ ಬಂದು ಇಲ್ಲಿಯೂ ಕೊಲೆ ಮಾಡಿದ್ದಾನಾ? ಇಲ್ಲವೇ ಕೊಲೆಗಾರ ಇಲ್ಲಿಂದ ದೆಹಲಿಗೆ ಹೋಗಿ ಮತ್ತೆ ಈಕಡೆಯೇ ಬಂದಿರಬಹುದಾ?? ಯಾವುದಕ್ಕೂ ಈ ವಿಷಯವನ್ನು ದೆಹಲಿಯ ಇನಸ್ಪೆಕ್ಟರ್ ಗೆ ತಿಳಿಸಬೇಕು. ಕೊಲೆಗಾರ ಒಬ್ಬನೇ ಆಗಿದ್ದರೆ ಆತ ವಿಮಾನ ನಿಲ್ದಾಣದಲ್ಲೊ, ರೈಲ್ವೆಯಲ್ಲೋ ಬರುವಾಗ ಸಿ.ಸಿ ಟಿವಿಯಲ್ಲಿ ರೆಕಾರ್ಡ್ ಆಗಿರುತ್ತದೆ. ಅದಕ್ಕೂ ಇಲ್ಲಿನ ಭಾವಚಿತ್ರಕ್ಕೂ ಹೋಲಿಸಿದರೆ ಕೊಲೆಗಾರ ಸಿಕ್ಕಿಬಿಡುತ್ತಾನೆ ಎಂದೆನ್ನಿಸಿತು.
ರಿಸೀವರ್ ತೆಗೆದುಕೊಂಡು ಫೈಲ್ ನಲ್ಲಿದ್ದ ಕ್ಷಾತ್ರನ ನಂಬರಿಗೆ ಫೋನಾಯಿಸಿದ. ಕ್ಷಾತ್ರನ ಪರ್ಸನಲ್ ನಂಬರ್ ಸ್ವಿಚ್ ಆಫ್ ಎಂದು ಬರುತ್ತಿತ್ತು. ಆಫೀಸ್ ನಂಬರ್ ಗೆ ಫೋನಾಯಿಸಿದರೆ "ಎರಡು ದಿನದಿಂದ ರಜೆಯ ಮೇಲಿದ್ದಾರೆ ನಾಳೆ ಬರುತ್ತಾರೆ" ಎಂದಿದ್ದ ಕಾನಸ್ಟೇಬಲ್.
ಈತ ಕೇವಲ ಮಾನಸಿಕ ರೋಗಿಯೇ ಹೌದಾ!? ಹಾಗಾದರೆ ಕೊಲೆ ಮಾಡಲು ಇಷ್ಟು ದೂರ ಬಂದು ಕೊಲೆ ಮಾಡಲು ಮಾನಸಿಕ ಸ್ಥಿಮಿತವೂ ಬೇಕಲ್ಲವೇ? ಇದಕ್ಕೂ ಮೊದಲು NCR ಏರಿಯಾದಲ್ಲಿ ಏಳೆಂಟು ಕೊಲೆಗಳು ಹೀಗೆಯೇ ನಡೆದಿವೆ. ಇಲ್ಲಿ ನಡೆದ ಕೊಲೆಯಲ್ಲಿ ಕೂಡ ಯಾವುದೇ ವಸ್ತು, ಹಣದ ಕಳುವಾಗಲಿ, ಹಳೆಯ ವೈಷಮ್ಯವಾಗಲಿ ಇದ್ದಂತೆ ಕಾಣುತ್ತಿಲ್ಲ. ಹಾಗಾದರೆ Psycho Killer ಇರಬಹುದು. ಯಾವುದಕ್ಕೂ ನಾಳೆ ಕ್ಷಾತ್ರನ ಜೊತೆ ಮಾತನಾಡಿ, ಸಿಸಿಟಿವಿ ಫೋಟೇಜ್ ತೆಗೆಸಬೇಕು ಹಾಗೂ ಇನ್ನೂ ಹೆಚ್ಚಿನ ವಿವರ ತಿಳಿದುಕೊಳ್ಳಬೇಕು ಎಂದುಕೊಂಡ.
ಇಲ್ಲಿ ಕೊಲೆ ನಡೆದ ಡೇಟ್ ನೋಡಿಕೊಂಡ. 24/4/2016. ಮಾನಸಿಕ ಆಸ್ಪತ್ರೆಯಲ್ಲಿ 22/4/2016. ಅಂದರೆ ಕೇವಲ ಎರಡು ದಿನದ ಅಂತರ. ಎರಡು ದಿನದ ಸಿ.ಸಿ ಟಿವಿ ಫೋಟೇಜ್ ತಡಕಾಡಿದರೆ ಸಾಕು, ಸತ್ಯ ಹೊರಬೀಳುತ್ತದೆ; ಅದರ ಜೊತೆ ಕೊಲೆಗಾರನೂ ಕೂಡ. ಪ್ರತಾಪ್ ಗೆ ಉತ್ಸುಕತೆ ಜಾಸ್ತಿಯಾಯಿತು. ಇನಸ್ಪೆಖ್ಟರ್ ಆದ ನಂತರ ಮೊದಲ ದೊಡ್ದ ಕೇಸ್. ಇದನ್ನು ತಾನು ಸರಿಯಾಗಿ ಬಳಸಿಕೊಂಡರೆ ಡಿಪಾರ್ಟ್ ಮೆಂಟಿನಲ್ಲಿ ಬಹಳ ಬೇಗ ಮೇಲೇರಬಹುದು. ಲಕ್ಕಿ ಪ್ರತಾಪ್ ನೀನು ಎಂದು ಮನದಲ್ಲೇ ಖುಶಿಗೊಂಡ. ಕ್ಷಾತ್ರನಂಥ ಕ್ಷಾತ್ರನೇ ಈ ಕೇಸಿನ ಹಿಂದೆ ಬಿದ್ದು ತಿಂಗಳು ಕಳೆದರೂ ಫಲಿತಾಂಶ ಸೊನ್ನೆ ಎಂಬುದು ಪ್ರತಾಪ್ ಗೆ ತಿಳಿದಿರಲಿಲ್ಲ. ಅಷ್ಟೆ ಏನು, ಕ್ಷಾತ್ರನ ಬಗ್ಗೆಯಾಗಲೀ, ಆತನ ಕಾರ್ಯ ವೈಖರಿಯ ಬಗ್ಗೆಯಾಗಲೀ, ಏನೂ ತಿಳಿದಿಲ್ಲ ಪ್ರತಾಪ್ ಗೆ.
ಅಷ್ಟರಲ್ಲಿ ಕಾನಸ್ಟೇಬಲ್ ಒಳಗೆ ಬಂದು "ಸಾರ್!!" ಎಂದ. ತನ್ನ ಯೋಚನೆಯಿಂದ ಹೊರಬಂದ ಪ್ರತಾಪ್ ಏನೆನ್ನುವಂತೆ ನೋಡಿದ.
"ಯಾವುದೋ ಲೇಡಿ ಬಂದಿದ್ದಾಳೆ ಸಾರ್!! ನಿಮ್ಮನ್ನು ನೋಡಬೇಕಂತೆ ನೋಡಲು ಚೆನ್ನಾಗೂ ಇದ್ದಾಳೆ ಸಾರ್!!" ಹಲ್ಲು ಗಿಂಜಿದ ಕಾನಸ್ಟೇಬಲ್. ತನಗಿಂತ ಮೊದಲಿದ್ದ ಇನಸ್ಪೆಕ್ಟರ್ ನ ಖಯಾಲಿಗಳನ್ನು ಅರಿತಿದ್ದ ಪ್ರತಾಪ್ ಕಾನಸ್ಟೇಬಲ್ ನ ನಡೆಗೆ ಲಕ್ಷ್ಯ ನೀಡದೆ "ಒಳಗೆ ಕಳಿಸು" ಎಂದ ಸೀರಿಯಸ್ ಆಗಿ.
ಆತನನ್ನು ಖುಶಿಗೊಳಿಸಬೇಕೆಂದು ಬಂದ ಕಾನಸ್ಟೇಬಲ್ "ಯಾಕೋ ಸಾಹೇಬರು ಗರಂ ಆಗಿದ್ದರೆ" ಎಂದುಕೊಂಡು ಹೊರನಡೆದ.
ಎರಡು ನಿಮಿಷದ ನಂತರ ಒಳಬಂದಳು ಸರೋವರಾ!! ಇಲ್ಲಿ ಅವಳನ್ನು ಕಂಡು ಆಶ್ಚರ್ಯವಾಯಿತು ಪ್ರತಾಪ್ ಗೆ. ಅವಳ ಮುಖದಲ್ಲಿ ತಾನು ಹಿಂದಿನ ಬಾರಿ ನೋಡಿದ ಕಳೆಯಿಲ್ಲ. ಮುಖ ಬಾಡಿದೆ, ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು ಮೂಡಿವೆ, ದೇಹದ ತೂಕವೂ ಸ್ವಲ್ಪ ಇಳಿದಂತೆ ಕಾಣುತ್ತಿದೆ. ತನ್ನ ಮೇಲೆ ಈಕೆಯೇ ಕಂಪ್ಲೆಂಟ್ ಕೊಟ್ಟಿದ್ದು ಎಂದು ತಿಳಿದ ಶಾಸ್ತ್ರಿ ಏನಾದರೂ ಮಾಡಿದನಾ? ಎಂದುಕೊಂಡ. ಶಾಸ್ತ್ರಿ ಅಷ್ಟು ಕೆಟ್ಟವನಲ್ಲ. ಅವನನ್ನು ಪ್ರೀತಿಸುವವರನ್ನು ಹಿಂಸಿಸುವ ಕ್ರೂರ ಮನಸ್ಸು ಅವನದಲ್ಲ. ಹಾಗಾದರೆ ಒಂದು ವಾರದಲ್ಲಿ ಏನು ನಡೆಯಿತು ಇಷ್ಟು ಬದಲಾಗುವಷ್ಟು? ಎಂದುಕೊಂಡ.
ಆಕೆ ಹತ್ತಿರ ಬಂದು "ನಮಸ್ಕಾರ ಪ್ರತಾಪ್" ಎಂದಳು.
"ನಮಸ್ಕಾರ ಸರೋವರಾ ಅವರೇ!! ನೀವೆನಿಲ್ಲಿ?? ಮತ್ತೆ ಶಾಸ್ತ್ರಿಯವರೇನಾದರೂ ಫ್ರಾಡ್ ಮಾಡಿದರೇನು? ಕಂಪ್ಲೇಂಟ್ ಕೊಡಲು ಬಂದಿರಾ?" ನಗುತ್ತಾ ನುಡಿದ!! ಭಾರದ ನಗೆ ನಕ್ಕು ಎದುರಿನ ಕುರ್ಚಿಯಲ್ಲಿ ಕುಳಿತುಕೊಂಡಳು. ತನ್ನ ತಮಾಷೆಗೆ ಅವಳಿಂದ ಸರಿಯಾದ ರೆಸ್ಪಾನ್ಸ್ ಬರದ ಕಾರಣ ಅಲ್ಲಿಗೇ ಸುಮ್ಮನಾದ ಪ್ರತಾಪ್ "ಒಂದು ಗ್ಲಾಸ್ ನೀರು ತಂದುಕೊಡು 420." ಎಂದು ಕೂಗಿದ.
ಕಣ್ಣಿನಿಂದ ಇನ್ನೇನು ನೀರು ತುಳುಕಬೇಕು ಎನ್ನುವಂತಾಯಿತು ಸರೋವರಾಳಿಗೆ. ಪ್ರತಾಪ್ ಮಸುಬು ಮಸುಬಾಗಿ ಕಂಡ. ಅಷ್ಟರಲ್ಲಿ ನೀರು ತಂದುಕೊಟ್ಟ ಕಾನಸ್ಟೇಬಲ್. ಅದನ್ನು ಕುಡಿದ ನಂತರ ಸ್ವಲ್ಪ ಸಮಾಧಾನವಾಯಿತು ಸರೋವರಾಳಿಗೆ.
"ಈಗ ಹೇಳಿ ಏನಾಯಿತು??" ಎಂದ ಪ್ರತಾಪ್ ಆತ್ಮೀಯತೆ ತುಂಬಿದ ಧ್ವನಿಯಿಂದ. ಹೆಣ್ಣಿಗೆ ಕಣ್ಣೀರು ಮೊದಲು, ವಿಷಯ ಆಮೇಲೆ ಎಂದು ಆತನಿಗೆ ಗೊತ್ತಿದ್ದರಿಂದ ಬೇಸರಗೊಳ್ಳದೆ ಆಕೆಯ ಪ್ರತಿಕ್ರಿಯೆಗೆ ಕಾಯುತ್ತಿದ್ದ.
"ಪ್ರತಾಪ್ ನೀವು ನನ್ನ ಸಂಶಯ ನೋಡಿ ನಗಬಹುದು. ಇಲ್ಲವೇ ಈಕೆಗೇನಾದರೂ ತಲೆ ಕೆಟ್ಟಿದೆಯಾ ಎಂದೆನ್ನಿಸಬಹುದು. ಮೊದಲು ಒಂದು ಫ್ರಾಡ್ ಕೇಸ್ ಹಾಕಿದಳು. ಈಗ ನೋಡಿದರೆ ಇನ್ನೇನೋ ಒಂದು ಸಂಶಯ ಹೊತ್ತು ತಂದಿದ್ದಾಳೆ. ಶಾಸ್ತ್ರಿಯ ಪ್ರೇಯಸಿಯಾಗಿ, ಈಕೆಗೆ ಇದೇನು ಹಗೆ ಅವನ ಮೇಲೆ ಎಂದು ನಿಮಗನ್ನಿಸಲೂಬಹುದು. ಆದರೆ ನಾನು ಹೇಳಬೇಕೆಂದಿರುವುದನ್ನು ಹೇಳಿಬಿಡುತ್ತೇನೆ. ಆದರೆ ಮುಂದಿನದು ನಿಮಗೇ ಬಿಟ್ಟಿದ್ದು" ಎಂದು ಮುಗೊರೆಸಿಕೊಂಡಳು.
ಈಕೆ ಮತ್ತೆ ಶಾಸ್ತ್ರಿಯ ಮೇಲೆ ಯಾವುದೋ ಅಪವಾದ ಹೇರಲು ಬಂದಿದ್ದಾಳೆ ಎಂದು ಅರ್ಥವಾಯಿತು ಪ್ರತಾಪನಿಗೆ. ಶಾಸ್ತ್ರಿಯ ಕೇಸೆಂದರೆ ಅವನಿಗೂ ಸ್ವಲ್ಪ ಇಂಟರೆಸ್ಟ್ ಬಂದಿತು. ಮತ್ತೆಂತಹ ಫ್ರಾಡ್ ಮಾಡಿದ ಆತ ಎಂದುಕೊಂಡು ಮುಖದಲ್ಲಿ ಕುತೂಹಲ ತುಂಬಿಕೊಂಡು "ಹೇಳಿ" ಎಂದ.
"ಇದು ಒಂದು ವಾರದ ಮೊದಲಿನ ಸಂಗತಿ. ನೀವು ಅಂದು ಸಂಜೆ ನಮಗೆ ಸಿಕ್ಕಿದ್ದಿರಲ್ಲ. ಅದಾಗಿ ಮೂರು-ನಾಲ್ಕು ದಿನಗಳ ನಂತರ. ಸಂಜೆ ಶಾಸ್ತ್ರಿಯನ್ನು ಭೇಟಿ ಮಾಡಲು ಹೋಗಿದ್ದೆ. ಎಂದಿನ ಶಾಸ್ತ್ರಿಯಂತೆ ಕಾಣಲಿಲ್ಲ ಆತ. ನಾನು ಅವನ ಮನೆಗೆ ಹೋದಾಗ ಆತ ರಕ್ತಸಿಕ್ತವಾದ ಬಟ್ಟೆಗಳನ್ನು ಒಗೆದು ಹಾಕುತ್ತಿದ್ದ. ನಾನು ಕೇಳಿದರೆ ದಾರಿಯ ಮೇಲೆ ನಾಯಿಮರಿಯೊಂದು ಕಾರಿಗೆ ಸಿಕ್ಕಿತ್ತು, ಅದನ್ನು ಬದುಕಿಸಲು ಪ್ರಯತ್ನಿಸಿದೆ. ಆಗ ಬಟ್ಟೆಯೆಲ್ಲ ರಕ್ತವಾಯಿತು ಎಂದ. ಆದರೆ ಅವನ ಹಾವಭಾವ ಎಂದಿನಂತಿರಲಿಲ್ಲ. ಅದಕ್ಕೇ ನಾನು ಮತ್ತೆ ಮತ್ತೆ ಕೇಳಿದೆ. ಮತ್ತದೇ ಹಾರಿಕೆಯ ಉತ್ತರ ನೀಡಿದ. ಆತ ಶಾಸ್ತ್ರಿ. ಎಂತಹ ಮನುಷ್ಯರನ್ನು ಕೂಡ ಮರುಳು ಮಾಡಬಲ್ಲ ಎಂದು ನಿಮಗೂ ಗೊತ್ತಿದೆ. ಅದಕ್ಕಾಗಿಯೇ ನಾನು ಆ ರಕ್ತದ ಸ್ಯಾಂಪಲ್ ಅನ್ನು ಆತನಿಗೆ ತಿಳಿಯದಂತೆ ತೆಗೆದುಕೊಂಡು ಹೋಗಿ ಪರೀಕ್ಷಿಸಿದೆ" ಎಂದು ಸುಮ್ಮನಾಗಿ ಪ್ರತಾಪ್ ನ ಮುಖ ನೋಡಿದಳು.
ಆಕೆ ಹೇಳುವುದನ್ನೇ ಗಮನವಿಟ್ಟು ಕೇಳುತ್ತ ಕುಳಿತಿದ್ದ ಪ್ರತಾಪ್, "ಮುಂದೆ ಹೇಳಿ, ಪರೀಕ್ಷಿಸಿದಿರಿ ಎಂದಿರಿ! ನೀವೇನು ಡಾಕ್ಟರಾ!?" ಕೇಳಿದ ಪ್ರತಾಪ್.
"ಇಲ್ಲಾ, ಆದರೆ ನಾನು ಜಿಯಾಲಜಿ ಗೋಲ್ಡ್ ಮೆಡಲಿಸ್ಟ್".
"ಹಂ, ಏನಾಯಿತು ಮುಂದೆ ಹೇಳಿ.." ಮತ್ತೂ ಕುತೂಹಲಗೊಂಡ ಪ್ರತಾಪ್.
"ನಾನು ಅದನ್ನು ಪರೀಕ್ಷಿಸಿದಾಗ ಅದು ನಾಯಿಯ ರಕ್ತವಲ್ಲ ಮನುಷ್ಯನ ರಕ್ತ ಎಂದು ತಿಳಿಯಿತು" ಎನ್ನುತ್ತಾ ಕಣ್ಣೀರಾದಳು.
"ಅಂದರೆ..!!? ನೀವು ಏನು ಹೇಳುತ್ತಿದ್ದೀರಿ?" ಎಂದು ಕೇಳಿದ ಪ್ರತಾಪ್.
ಸರೋವರಾ ಮುಖವೆತ್ತಿ ಅವನನ್ನೇ ನೋಡಿದಳು. "ಅಲ್ಲಾ ರೀ, ಒಬ್ಬ ವ್ಯಕ್ತಿ ಹಾಕಿಕೊಂಡ ಬಟ್ಟೆ ಮನುಷ್ಯನ ರಕ್ತದಿಂದ ತುಂಬಿ ಹೋಗಿದ್ದರೆ ಅನುಮಾನ ಬರುವುದಿಲ್ಲವಾ? ಕೇಳಿದರೆ ಸುಳ್ಳು ಬೇರೆ ಹೇಳುತ್ತಿದ್ದಾನೆ." ಎಂದಳು ಸರೋವರಾ ತೀಕ್ಷ್ಣವಾಗಿ.
"ಸರೋವರಾ ಅವರೇ, ನೀವು ಹೇಳುವುದೇನೋ ಸರಿ. ಆದರೆ ನಿಮ್ಮ ಮಾತಿನ ಅರ್ಥವೇನು? ಶಾಸ್ತ್ರಿ ಯಾರನಾದರೂ ಕೊಲೆ ಮಾಡಿದ್ದಾನೆ ಎಂದಾ!? ಅವನಿಗೆ ಅಂತಹ ಕಾರಣವಾದರೂ ಏನಿದೆ? ಶಾಸ್ತ್ರಿಗೆ ಯಾರ ಮೇಲಾದರೂ ಹಗೆಯಿದ್ದರೆ, ಸಿಟ್ಟಿದ್ದರೆ ಅದನ್ನು ಅವನ ಬುದ್ಧಿ ಶಕ್ತಿಯನ್ನು ಉಪಯೋಗಿಸಿ ತೀರಿಸಿಕೊಳ್ಳುತ್ತಾನೆ. ನಾನವನನ್ನು ನೋಡಿದ್ದೇನಲ್ಲ. ಕೊಲೆ ಮಾಡುವಂಥ ವ್ಯಕ್ತಿಯಲ್ಲ ಅವನು. ನೀವು ಸುಮ್ಮನೆ ಟೆನ್ಶನ್ ಮಾಡಿಕೊಂಡಿದ್ದೀರಿ" ಎಂದು ವಾತಾವರಣ ತಿಳಿಯಾಗಿಸಲು ಪ್ರಯತ್ನಿಸಿದ.
ಅವಳು ಸ್ವಲ್ಪ ಸಮಾಧಾನಗೊಂಡು "ಅಷ್ಟೆ ಎನ್ನುತ್ತೀರಾ?" ಎಂದಳು.
"ಹಂ, ಅಷ್ಟೆ. ನೀವು ಸುಮ್ಮನೆ ತಲೆ ಕೆಡಿಸಿಕೊಂಡಿದ್ದೀರಿ. ಇನ್ನೆರಡು ಬಾರಿ ಲಲ್ಲೆಗರೆದು ಕೇಳಿ ಏನಾಯಿತು ಎಂದು. ಆಗ ಆತನೇ ನಿಜ ಹೇಳುತ್ತಾನೆ" ಎಂದ ಕುರ್ಚಿಗೊರಗುತ್ತಾ.
ಸರೋವರಾಳ ಮನಸ್ಥಿತಿ ಕೂಡ ಎಂಥದೆಂಬುದು ಅರ್ಥವಾಗಲಿಲ್ಲ ಆತನಿಗೆ. ಶಾಸ್ತ್ರಿ ಕೊಲೆಯನ್ನೇ ಮಾಡಿದ್ದರೂ ಪ್ರೇಯಸಿಯಾಗಿ ಇವಳು ಸುಮ್ಮನಿರಬೇಕು. ಹಾಗಿಲ್ಲದೆ ಪೋಲಿಸರ ಬಳಿ ಬರುವವಳು ಇವಳೇ, ಆಮೇಲೆ ಶಾಸ್ತ್ರಿಗೇನಾಗುತ್ತದೋ ಎಂದು ದುಃಖ ಪಡುವವಳು ಇವಳೇ. ಟಿಪಿಕಲ್ ವುಮನ್ ಎಂದುಕೊಂಡ.
ಮತ್ತೇನು ಹೇಳಬೇಕು ಎಂದು ತಿಳಿಯದಿದ್ದಾಗ "ಸರಿ ನಾನಿನ್ನು ಬರುತ್ತೇನೆ" ಎಂದಳು ನಗುತ್ತಾ. ಪ್ರತಾಪನ ಮಾತಿನಿಂದ ಅವಳಿಗೆ ಸಮಾಧಾನ ಸಿಕ್ಕಿತ್ತು.
"ಓಕೆ, ರಕ್ತದ ಸ್ಯಾಂಪಲ್ ಎಂದಿರಲ್ಲಾ, ತಂದಿದ್ದೀರಾ? ನೀವು ಗೋಲ್ಡ್ ಮೆಡಲಿಸ್ಟ್ ಹೌದೋ ಅಲ್ಲವೋ ತಿಳಿಯಲಷ್ಟೆ" ಎಂದ ನಸು ನಗುತ್ತಾ.
"ಹಂ, ಇದೆ. ನೀವು ಪರೀಕ್ಷಿಸಿ ಹೇಳಿ" ಎಂದು ನಗುತ್ತಾ ಅದನ್ನು ತೆಗೆದು ಕೊಟ್ಟಳು. "ಮತ್ತೊಂದು ವಿಚಾರ.. ಶಾಸ್ತ್ರಿ ಹೀಗೆ ರಕ್ತಸಿಕ್ತವಾಗಿ ಬಂದದ್ದು ಯಾವಾಗ? ಡೇಟ್ ಏನಾದರೂ ನೆನಪಿದೆಯಾ?" ಎಂದು ಕೇಳಿದ. "ಹಂ, ಡೇಟ್.... " ಹಾ.. 24" ಎಂದಳು.
"ಸರಿ, ನೀವಿನ್ನು ಹೊರಡಿ, ನಾನೇ ಬಿಟ್ಟು ಬರಲಾ?" ಎಂದ ಪ್ರತಾಪ್.
"ಬೇಡ ನಾನೇ ಹೋಗುತ್ತೇನೆ, ದೂರವೆನಿಲ್ಲ" ಎನ್ನುತ್ತಾ ಹೊರನಡೆದಳು ಸರೋವರಾ.
ಅಷ್ಟೊತ್ತು ಮುಖದ ಮೇಲೆ ನಗು ತಂದುಕೊಂಡಿದ್ದ ಪ್ರತಾಪ್ ಒಮ್ಮೆಲೇ ಸೀರಿಯಸ್ ಆದ. ಮನುಷ್ಯನ ರಕ್ತದ ಸ್ಯಾಂಪಲ್ ಎನ್ನುತ್ತಲೇ ಆತನ ಕಿವಿ ಚುರುಕಾಗಿತ್ತು. ಕೊನೆಯಲ್ಲಿ ತಾರೀಕ್ 24 ಎನ್ನುತ್ತಲೇ ತನ್ನ ಮುಖದ ಮೇಲಿನ ನಗು ಉಳಿಸಿಕೊಳ್ಳಲು ಬಹಳ ಪ್ರಯತ್ನಿಸಿದ್ದ ಪ್ರತಾಪ್.
ಸರೋವರಾ ಹೊರಬೀಳುತ್ತಲೇ ಫೋನೆತ್ತಿಕೊಂಡು Forensic ಡಿಪಾರ್ಟ್ಮೆಂಟ್ ಗೆ ಫೋನಾಯಿಸಿ ತಾನೀಗ ಒಂದು ರಕ್ತದ ಸ್ಯಾಂಪಲ್ ಕಳಿಸುತ್ತೇನೆ. ಅದನ್ನು ಟೆಸ್ಟ್ ಮಾಡಿ ನಿಮ್ಮಲ್ಲಿ ಆ ಸ್ಯಾಂಪಲ್ ಮೊದಲೇನಾದರೂ ಬಂದಿದೆಯಾ ನೋಡಿ. ಬಂದ ರೆಕಾರ್ಡಿದ್ದರೆ ಯಾವಾಗ? ಯಾರದ್ದು? ಬೇಗ ಹೇಳಿ ಎಂದ.
"ಸರಿ ಸರ್" ಕಳುಹಿಸಿಕೊಡಿ, ಅರ್ಧ ಘಂಟೆಯಲ್ಲಿ ರಿಪೋರ್ಟ್ ಕೊಡುತ್ತೇವೆ" ಎಂದಿತು ಆ ಕಡೆಯಿಂದ ದ್ವನಿ.
ಪ್ರತಾಪ್ ಕಾನಸ್ಟೇಬಲ್ ಗಳನ್ನು ಕಳುಹಿಸುವ ಬದಲು ತಾನೇ ಜೀಪೇರಿ ಆಕಡೆ ನಡೆದ. ಆದಷ್ಟು ಬೇಗ ರಿಪೋರ್ಟ್ ಬೇಕು. ಸರೋವರಾಳ ಎದುರು ತನಗೆ ಶಾಸ್ತ್ರಿಯ ಮೇಲೆ ಸ್ವಲ್ಪವೂ ಅನುಮಾನವಿಲ್ಲದಂತೆ ನಡೆದುಕೊಂಡಿದ್ದ. ಶಾಸ್ತ್ರಿ ಯಾವುದಾದರೂ ಅಪರಾಧದಲ್ಲಿ ಭಾಗಿಯಾಗಿದ್ದರೂ ಅದು ಪೋಲಿಸರವರೆಗೆ ಹೋಗಿದೆ ಎಂದು ಶಾಸ್ತ್ರಿಗೆ ಸಣ್ಣ ಸಂಶಯ ಬಂದರೂ ಆತ ಮತ್ತೆ ಸಿಗುವುದಿಲ್ಲ ಎಂಬುದನ್ನು ಪ್ರತಾಪ್ ಚೆನ್ನಾಗಿ ಬಲ್ಲ. ಒಂದು ಸಾಕ್ಷಿಯೂ ಉಳಿಯದಂತೆ ಆತ ಅಳಿಸಿಬಿಡಬಲ್ಲ. ಆದ್ದರಿಂದಲೇ ಆಕೆಯನ್ನು ಸಮಾಧಾನಿಸಿ ಕಳಿಸಿದ್ದ. ರಕ್ತದ ಸ್ಯಾಂಪಲ್ ಟೆಸ್ಟಿಗೆ ಕೊಟ್ಟು ಅಲ್ಲಿಯೇ ಅಡ್ಡಾಡುತ್ತಿದ್ದ ಪ್ರತಾಪ್. ಹದಿನೈದು ನಿಮಿಷ ಕಳೆಯುವುದರೊಳಗೆ ಅಲ್ಲಿನ ಅಟೆಂಡರ್ ಚೀರುತ್ತಲೇ ಬಂದ "ಸರ್, ಇದು ಮೊನ್ನೆ ಕೊಲೆಯಾಯಿತಲ್ಲ, ಆತನ ರಕ್ತ..."
ತಾನು ನಿಂತ ನೆಲವೇ ಕುಸಿದಂತಾಯಿತು ಪ್ರತಾಪ್ ಗೆ. ಶಾಸ್ತ್ರಿ ಕೊಲೆ ಮಾಡಿದ್ದಾನಾ? ಆದರೆ ಯಾಕೆ??
"ತಪ್ಪಿನಲ್ಲಿ ಚಿಕ್ಕ ತಪ್ಪು, ದೊಡ್ಡ ತಪ್ಪು ಎಂಬುದೇನಿಲ್ಲ ಪ್ರತಾಪ್, ಸಣ್ಣ ತಪ್ಪಿಗೆ ಶಿಕ್ಷೆಯಾಗದಿದ್ದಾಗ ವ್ಯಕ್ತಿ ಮತ್ತೂ ದೊಡ್ಡ ತಪ್ಪು ಮಾಡುತ್ತಾನೆ. ಇಂದು ಹಫ್ತಾ ವಸೂಲಿಗೆಂದು ಬಡಬಗ್ಗರ, ಅಂಗಡಿಕಾರರ ಕೈ ಕಾಲು ಮುರಿಯಲು ಹೇಸದ ಜನ ಶಿಕ್ಷೆ ಆಗದೇ ಉಳಿದರೆ ನಾಳೆ ತಲೆ ಕಡಿಯುವಷ್ಟು ಬೆಳೆಯುತ್ತಾರೆ. ಮುಳ್ಳನ್ನು ಕೊಳೆಯುವ ಮುನ್ನವೇ ತೆಗೆಯಬೇಕು, ಕಳೆಯನ್ನು ಬೆಳೆಯುವ ಮೊದಲೇ ಕೀಳಬೇಕು.
ಪ್ರತೀ ಸಣ್ಣ ತಪ್ಪಿಗೂ ದೊಡ್ಡ ಶಿಕ್ಷೆ ಆದರೆ ಮಾತ್ರ ದೇಶ ಬದಲಾಗುತ್ತದೆ. ಕಳ್ಳತನ ಮಾಡಿದರೆ ಕೈ ತೆಗೆಯಬೇಕು, ಅತ್ಯಾಚಾರ ಮಾಡಿದರೆ ತಲೆ... ಅಂದರೆ ಮಾತ್ರ ದೇಶ ಬದಲಾಗಬಹುದು ಪ್ರತಾಪ್". ಶಾಸ್ತ್ರಿಯ ಮಾತು ನೆನಪಾಯಿತು. ಈಗ ತಾನೇನು ಮಾಡಬೇಕು? ಶಾಸ್ತ್ರಿಯನ್ನು ಭಂದಿಸಲಾ? ಆದರೆ ಸಾಕ್ಷಿ? ಸರೋವರಾ!! ಶಾಸ್ತ್ರಿಯ ಮೇಲಿನ ಪ್ರೀತಿಗೆ ಕೊನೆಯ ಕ್ಷಣದಲ್ಲಿ ಅವಳು ಬದಲಾಗಿ ಬಿಟ್ಟರೆ? ಮುಗಿಯಿತು ಕೇಸ್ ನಿಲ್ಲುವುದಿಲ್ಲ. ಶಾಸ್ತ್ರಿಯನ್ನು ಹಿಡಿಯುವುದಿದ್ದರೆ ಪಕಡ್ಬಂದಿ ಬಲೆ ಬೀಸಬೇಕು. ತಕ್ಷಣ ಆತನಿಗೆ ಇನ್ನೊಂದು ಫೈಲಿನ ನೆನಪಾಯಿತು. ಅದರಲ್ಲಿ ಕೊಲೆಗಾರನನ್ನು ನೋಡಿ ಬಿಡಿಸಿದ ಚಿತ್ರವಿತ್ತಲ್ಲ. ಮತ್ತೆ ಸೀದಾ ಪೋಲಿಸ್ ಸ್ಟೇಶನ್ ಗೆ ಬಂದು ಫೈಲ್ ತೆಗೆದು ನೋಡಿದ. ಶಾಸ್ತ್ರಿಯ ಮುಖದ ಹೋಲಿಕೆ ಅಷ್ಟೆನೂ ಕಾಣುತ್ತಿಲ್ಲ. ಆದರೆ ಆತನ ಎತ್ತರ, ಮೈಕಟ್ಟು ಎಲ್ಲ ವಿವರಣೆಯೂ ಶಾಸ್ತ್ರಿಯನ್ನು ಹೋಲುತ್ತಿದೆ. ಮುಖ ಹೋಲಿಕೆ ಸ್ವಲ್ಪ ಬದಲಿಸಿರಬಹುದಲ್ಲ!! ಅಲ್ಲಿ ಆತನನ್ನು ನೋಡಿದವರನ್ನು ಇಲ್ಲಿಯೂ ಕರೆಸಬೇಕು. ಅವರು ಶಾಸ್ತ್ರಿಯನ್ನು ನೋಡಿ ಗುರುತಿಸಿದರೆ ಮುಗಿದೇ ಹೋಯಿತು. ಶಾಸ್ತ್ರಿ ಅಂದರ್. ನನ್ನಷ್ಟು ಬುದ್ಧಿವಂತ ಯಾರೂ ಇಲ್ಲ ಎಂದುಕೊಳ್ಳುತ್ತಿದ್ದೆಯಲ್ಲ ಶಾಸ್ತ್ರಿ, ನಿನಗೆ ಕಾದಿದೆ ಎಂದುಕೊಂಡ ಮನಸ್ಸಿನಲ್ಲಿಯೇ. ಆದರೆ ಒಂದು ಮಾತ್ರ ಆತನಿಗೆ ಅರ್ಥವಾಗುತ್ತಿಲ್ಲ. ಶಾಸ್ತ್ರಿ ಕೇವಲ ಇದೊಂದೆ ಕೊಲೆ ಮಾಡಿದ್ದಾನಾ? ಅಥವಾ NCR ನಲ್ಲಿ ನಡೆಯುತ್ತಿರುವ ಎಲ್ಲ ಕೊಲೆಗಳನ್ನು ಆತನೇ ಮಾಡಿದ್ದಾನಾ? ಯಾವ ಸೇಡು ತೀರಿಸಿಕೊಳ್ಳಲು ಹೀಗೆ ಕೊಲೆ ಮಾಡುತ್ತಿದ್ದಾನೆ? ಒಂದಂತು ನಿಜ. ನೂರು ಕೊಲೆಗಳನ್ನು ಮಾಡಿದರೂ ತಪ್ಪಿಸಿಕೊಳ್ಳುವ ಛಾತಿ ಆತನಿಗಿದೆ. ಸರೋವರಾಳಿಂದ ಈಗ ಸಿಕ್ಕಿಬಿದ್ದಿದ್ದಾನೆ. ಇನ್ನು ತಡ ಮಾಡಿದರೆ ಆತನನ್ನು ಹಿಡಿಯುವುದು ಕಷ್ಟ. ಇವೆರಡು ಫೈಲ್ ಗಳ ನಂತರ ಇರುವ ಮಿಸ್ಸಿಂಗ್ ಲಿಂಕ್ ಕಂಡುಹಿಡಿಯಬೇಕೆಂದರೆ 22-23-24 ಇಷ್ಟು ದಿನದ ಸಿಸಿಟಿವಿ ಫೋಟೇಜ್ ತರಿಸುವುದು. ಅದರಲ್ಲಿ ತಾನು ಶಾಸ್ತ್ರಿಯನ್ನು ಗುರುತಿಸಬಲ್ಲ. ತಕ್ಷಣವೇ ಕ್ರೈಂ ಬ್ರಾಂಚ್ ಗೆ ಫೋನ್ ಮಾಡಿ ತನಗೆ ಏನೇನು ಬೇಕೋ ಎಲ್ಲವನ್ನೂ ಹೇಳಿದ. ಇನ್ನು ಒಂದು ಘಂಟೆಗಳ ನಂತರ ಇಲ್ಲಿಗೆ ಬನ್ನಿ ಸರ್, ನೀವು ಹೇಳಿರುವುದೆಲ್ಲ ಬಂದಿರುತ್ತದೆ ಎಂದರವರು. ತನ್ನಲ್ಲೇ ಸಮಾಧಾನಗೊಂಡ ಪ್ರತಾಪ್. ಪೋಲಿಸ್ ಡಿಪಾರ್ಟಮೆಂಟಿನ ಕೆಲಸದ ಗತಿಯು ಕೂಡ ಈಗೀಗ ಸುಧಾರಿಸುತ್ತಿದೆ. ತಿಂಗಳುಗಟ್ಟಲೆ ತೆಗೆದುಕೊಳ್ಳುತ್ತಿದ್ದ ಕೆಲಸಗಳು ತಾಸುಗಳಲ್ಲಿ ನಡೆಯುತ್ತಿವೆ.
ಈ ಬಾರಿ ಇಬ್ಬರು ಕಾನಸ್ಟೇಬಲ್ ಗಳನ್ನು ಕರೆದುಕೊಂಡು ಕ್ರೈಂ ಬ್ರಾಂಚಿಗೆ ಹೋದ. ಈತನಿಗಾಗಿಯೇ ಪ್ರಾಜೆಕ್ಟರ್ ಅದಾಗಲೇ ರೆಡಿಯಾಗಿತ್ತು. Railway station, Bus stand, Airport ಎಲ್ಲದರ ಫೋಟೇಜ್ ಗಳು ಬಂದಿದ್ದವು. ಇವೆಲ್ಲವನ್ನೂ ನೋಡಿ ಮುಗಿಸಬೇಕೆಂದರೆ ತಲೆ ಬಿಸಿ ಹೆಚ್ಚುವುದೆಂದು ಗೊತ್ತು.
"4X Speed Set ಮಾಡಿ, ಮೊದಲು Exit gate Video ಹಾಕಿ ವಿಮಾನ ನಿಲ್ದಾಣದ್ದು" ಎಂದ ಪ್ರತಾಪ್. ತನ್ನ ಜೊತೆಗಿದ್ದ ಕಾನಸ್ಟೇಬಲ್ ಗಳಿಗೆ ಅಂದು ಫ್ರಾಡ್ ಕೇಸ್ ಮೇಲೆ ಹಿಡಿದು ತಂದಿದ್ದಿರಲ್ಲ ಶಾಸ್ತ್ರಿ, ಅವನು ಕಂಡರೆ ಹೇಳಿ ಎಂದ.
ಏನೋ ಹಕಿಕತ್ತಿದೆ. ಅಂದು ಆತ ಮಾಡಿದ ಅವಮಾನಕ್ಕೆ ತಕ್ಕ ಶಾಸ್ತಿ ಮಾಡುತ್ತೇನೆ ಎಂದುಕೊಂಡೆ ನೋಡತೊಡಗಿದ ಕಾನಸ್ಟೇಬಲ್.ನಿಮಿಷಗಳು ಕಳೆದಂತೆಲ್ಲ ಪ್ರತಾಪ್ ಗೆ ಚಡಪಡಿಕೆ ಶುರುವಾಯಿತು. ತನ್ನ ಯೋಚನೆ ನಿಜವಿರಬಹುದಾ? ಶಾಸ್ತ್ರಿಯೇ ಕೊಲೆಗಾರನಾ?? ಯೋಚನೆಗಳು ಆತನಿಗೆ ಪ್ರೊಜೆಕ್ಟರ್ ಪರದೆಯ ಮೇಲೆ ಗಮನ ಕೇಂದ್ರೀಕರಿಸಲು ಬಿಡುತ್ತಿಲ್ಲ. ಅದೂ ಅಲ್ಲದೇ 4x ಸ್ಪೀಡ್ ಬಹಳವಾಗಿತ್ತು. ಅದನ್ನು 2x ಮಾಡಿ ಎಂದ. ವೀಡಿಯೋ ನಿಧಾನವಾಗಿ ಓಡತೊಡಗಿತು. ಶಾಸ್ತ್ರಿಯಂತ ಬುದ್ಧಿವಂತ ಕೊಲೆ ಮಾಡಿದರೂ ಹೀಗೆ ಅಬ್ಬೆಪಾರಿಯಂತೆ ಸಿಕ್ಕಿ ಬೀಳುವ ತಪ್ಪು ಮಾಡುವುದಿಲ್ಲವೇನೋ ಎನ್ನಿಸಿತು.
ಅಷ್ಟರಲ್ಲಿ ಕಾನಸ್ಟೇಬಲ್ ಕೂಗಿಕೊಂಡ "ಶಾಸ್ತ್ರಿ!! ಸರ್!!" ಪ್ರತಾಪ್ ತನ್ನ ಯೋಚನೆಗಳಿಂದ ಒಮ್ಮೆಲೇ ಎಚ್ಚೆತ್ತು ವೀಡಿಯೋ Pause ಮಾಡಿ ನಾರ್ಮಲ್ ಸ್ಪೀಡ್ ಗೆ ತಂದು ನೋಡತೊಡಗಿದ. ಅಷ್ಟೇನೂ ಕಷ್ಟವಾಗದೆ ಒಂದು ಘಂಟೆಯಲ್ಲಿ ಸಿಕ್ಕಿಬಿಟ್ಟಿದ್ದ ಶಾಸ್ತ್ರಿ. ಮುಂಬೈನ ವಿಮಾನ ನಿಲ್ದಾಣದಲ್ಲಿ ಚೆಕ್ ಔಟ್ ಮಾಡಿ ಹೊರಬರುತ್ತಿದ್ದಾನೆ ಶಾಸ್ತ್ರಿ. ದೆಹಲಿಯಲ್ಲಿ ಕೊಲೆಯಾದ ದಿನವೇ. ಗಂಟೆ ನೋಡಿಕೊಂಡ ಎರಡು ಗಂಟೆಯಾಗಿತ್ತು.
ಶಾಸ್ತ್ರಿ ನೀನಿನ್ನು ಸಿಕ್ಕಿಬಿದ್ದೆ. ನಿನ್ನ ಕಥೆ ಮುಗಿಯಿತು. ಮಾನಸಿಕ ರೋಗಿಯು ಅಲ್ಲ!! ಬುದ್ಧಿ ಭ್ರಮೆಯೂ ಅಲ್ಲ!! ಬುದ್ಧಿ ಹೆಚ್ಚಾಗಿದೆ ನಿನಗೆ. ಸರೋವರಾ ಒಬ್ಬಳಿರದಿದ್ದರೆ ನಿನ್ನ ಹಿಡಿಯುವುದು ಕಷ್ಟವೇ ಇತ್ತು. ಆದರೇಕೆ ಹೀಗೆ ಮಾಡುತ್ತಿದ್ದೀಯಾ? ಇವೆಲ್ಲ ಕೊಲೆಗಳು ಯಾಕೆ??
ಶಾಸ್ತ್ರಿಯನ್ನು ಹಿಡಿದು ವಿಚಾರಿಸುವಾಗ ಎಲ್ಲ ಸತ್ಯ ಹೊರಗೆ ಬಂದೇ ಬರುತ್ತದೆ. ಈಗೇನು ಮಾಡಬೇಕು? ಶಾಸ್ತ್ರಿಯನ್ನು ಅರೆಸ್ಟ್ ಮಾಡಲು ಇಷ್ಟು ಎವಿಡೆನ್ಸ್ ಸಾಕಾ?
ಆ ವೀಡಿಯೊವನ್ನು ಎವಿಡೆನ್ಸ್ ಎಂದು ಮಾರ್ಕ್ ಮಾಡಿಸಿಕೊಂಡು ಅಲ್ಲಿಂದ ಹೊರಟ. ಕಾನಸ್ಟೇಬಲ್ ಗಳಿಗೆ ಈತನ ಮನದಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿಲ್ಲವಾದರೂ ಯಾವುದೋ ದೊಡ್ಡ ಕೇಸಿನ ಸುರುಳಿ ಬಿಚ್ಚಿಕೊಳ್ಳುತ್ತಿದೆ ಎಂಬುದು ತಿಳಿದಿತ್ತು.
ಇನ್ನು ಉಳಿದಿರುವುದು ಒಂದೆ. ಮಾನಸಿಕ ಆಸ್ಪತ್ರೆಯಿಂದ ಯಾರನ್ನಾದರೂ ಕರೆಸಿ ಶಾಸ್ತ್ರಿಯನ್ನು ಗುರುತಿಸಲು ಹೇಳುವುದು. ಅದು ನಡೆದರೆ ಮುಗಿಯಿತು. ತಾನು ಇನ್ನೊಂದು ಕೇಸನ್ನು ಸರಾಗವಾಗಿ ಮುಗಿಸಿಬಿಡಬಲ್ಲೆ ಎಂದುಕೊಂಡ. ಸರೋವರಾಳಿಗೆ ಭೇಟಿ ಮಾಡಿ ಶಾಸ್ತ್ರಿ ಹೊರಗೆಲ್ಲಾದರೂ ಹೋಗಿದ್ದನಾ ಎಂದು ತಿಳಿದುಕೊಂಡರೆ ಕೇಸಿಗೆ ಇನ್ನೂ ಹತ್ತಿರ ಬಂದಂತಾಗುತ್ತದೆ ಎಂದುಕೊಂಡ. ಆದರೆ ಮತ್ತೆ ಅವಳೇನಾದರೂ ಶಾಸ್ತ್ರಿಗೆ ತಿಳಿಸಿದರೆ ಅವನು ಚುರುಕಾಗುತ್ತಾನೆ.
ನೋ.. ಶಾಸ್ತ್ರಿಗೆ ಸಮಯ ಕೊಡಬಾರದು. ಅಂದರ್ ಮಾಡಿಬಿಡಬೇಕು. ತಾನೇ ಬುದ್ಧಿವಂತ ಎಂದು ಮೆರೆಯುತ್ತಿದ್ದಾನಲ್ಲ.. "ಅಂದರ್" ಮುಖದ ಮೇಲೆ ನಗು ಮೂಡಿತು.
ಗಂಡಸಿನ ಸಹಜ ಈರ್ಷ್ಯೇ ತೃಪ್ತಿಗೊಂಡಿತು. ಶಾಸ್ತ್ರಿಗೆ ಅರಿವಿರದೇ ಅವನ ಕೊರಳ ಸುತ್ತಲೂ ಉರುಳಿನ ಕುಣಿಕೆ ಬಿಗಿಯಾಗತೊಡಗಿತು.....
                                         ...............................ಮುಂದುವರೆಯುತ್ತದೆ..............................
                                             https://www.facebook.com/katarnakkadamabri/

No comments:

Post a Comment