Saturday, July 23, 2016

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 17

                                 ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 17

ಸ್ವಯಂವರಾಳನ್ನು ಎತ್ತಿಕೊಂಡು ಆಸ್ಪತ್ರೆಯ ಒಳಗೆ ಓಡಿದ ಕ್ಷಾತ್ರ. ಪ್ರತಿ ನಿಮಿಷವೂ ಆಕೆ ಸಾವಿನ ಬಳಿ ಸರಿಯುತ್ತಿದ್ದಾಳೆ ಎಂಬುದು ಗೊತ್ತವನಿಗೆ. 
"ಡಾಕ್ಟರ್, ಡಾಕ್ಟರ್ ಎಮರ್ಜೆನ್ಸಿ.." ಎಂದು ಕೂಗುತ್ತಲೇ ಒಳ ನಡೆದ ಕ್ಷಾತ್ರ.
ಡ್ಯೂಟಿಯಲ್ಲಿದ್ದ ಡಾಕ್ಟರ್ ಒಬ್ಬರು ಓಡಿ ಬಂದು ಸ್ವಯಂವರಾಳ ನಾಡಿ ನೋಡಿದ. ಕ್ಷೀಣವಾಗಿ ಬಡಿದುಕೊಳ್ಳುತ್ತಿದೆ ತಿರುಗಿ "ಏನಾಗಿದೆ?" ಎಂದು ಕೇಳಿದ. 
"ಅದೆಲ್ಲ ಗೊತ್ತಿಲ್ಲಾರೀ, ಮೊದಲು ನೀವು ಫಸ್ಟ್ ಏಡ್ ಮಾಡಿ" ಎಂದ.
"ಇದೇನೋ ಪೋಲಿಸ್ ಕೇಸ್ ತರಾ ಇದೆ" ಎಂದು ಹೇಳುವುದರಲ್ಲಿದ್ದ ಡಾಕ್ಟರ್ ಯುನಿಫಾರ್ಮ್ ನಲ್ಲಿದ್ದ ಕ್ಷಾತ್ರನನ್ನು ಕಂಡು ಸುಮ್ಮನಾಗಿ "ನರ್ಸ್" ಎಂದು ಕೂಗಿದ. ಎರಡು ಮೂರು ಜನ ನರ್ಸ್ ಬಂದು ಆಕೆಯನ್ನು ಸ್ಟ್ರೆಚರ್ ಮೇಲೆ ಹಾಕಿಕೊಂಡು ಎಮರ್ಜೆನ್ಸಿ ವಾರ್ಡ್ ಒಳಗೆ ಕರೆದುಕೊಂಡು ಹೋದರು. 
"ನೀವು ಎಡ್ಮಿಟ್ ಮಾಡುವ ಪ್ರೊಸೀಜರ್ ಮುಗಿಸಿಕೊಂಡು ಬನ್ನಿ" ಎನ್ನುತ್ತಲೇ ನರ್ಸ್ ಗಳನ್ನು ಹಿಂಬಾಲಿಸಿದ ಡಾಕ್ಟರ್.
ಅಡ್ಮಿಶನ್ ಕೌಂಟರ್ ಕಡೆಗೆ ನಡೆದ ಕ್ಷಾತ್ರ. ಅಲ್ಲಿ ಉದ್ದನೆಯ ಸಾಲೇ ನೆರೆದಿತ್ತು. ಯಾರು ಯಾರಿಗೆ ಯಾವ ಸಮಸ್ಯೆಯೋ? ತಾನೇನೋ ಪೋಲಿಸ್ ಆಗಿದ್ದಕ್ಕೆ ಸ್ವಯಂವರಾಳನ್ನು ಒಳಗೆ ಕರೆದುಕೊಂಡು ಹೋಗಿದ್ದಾರೆ. ಇಲ್ಲದಿದ್ದರೆ ಇವಿಷ್ಟು ಪ್ರೊಸೀಜರ್ ಮುಗಿದಂತೂ ಡಾಕ್ಟರ್ ಪೇಷಂಟ್ ಅನ್ನು ನೋಡುವುದೇ ಇಲ್ಲ. ಓಡುತ್ತಿರುವ ಕಾಲದ ಜೊತೆಗೆ ಬದಲಾಗುತ್ತಿರುವ ಮಾನವೀಯತೆಯ ಪುಟಗಳು. "ವೈದ್ಯೋ ನಾರಾಯಣೋ ಹರೀ" ಎಂಬ ಹಳೆಯ ಮಾತು ಈಗ ಅನ್ವಯಿಸುವುದಿಲ್ಲ. ಯಾರ ಬಳಿ ದುಡ್ಡಿದೆಯೋ ಅವರಿಗೆ ಮಾತ್ರ ಬದುಕು. 
ಒಂದು ದೇಶದ ವ್ಯಾಸಂಗ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳು ಬಿಸಿನೆಸ್ ಆಗಿ ಕನವರ್ಟ್ ಆಗುವುದಕ್ಕಿಂತ ದೊಡ್ಡ ಸಮಸ್ಯೆ ಇನ್ಯಾವುದೂ ಇಲ್ಲ. ಉಳಿದ ಕಡೆಗಳಲ್ಲಿ ಓಕೆ. ಓದುವ ಮತ್ತು ಬದುಕುವ ಜಾಗದಲ್ಲಿ ಎಲ್ಲರಿಗೂ ಸಮಾನತೆ ಇರಬೇಕಲ್ಲವೇ? 
ಸಾವಿನ ನಡುವಿನಲ್ಲಿರುವ ತಮ್ಮವರನ್ನು ಬಿಟ್ಟು ಕ್ಯೂದಲ್ಲಿ ನಿಂತಿರುವ ಮುಖಗಳನ್ನು ಕಂಡು ಬೇಜಾರೆನಿಸಿತು ಕ್ಷಾತ್ರನಿಗೆ. ಅರಾಜಕತೆಯ, ಬಂಡಾಯದ ಪ್ರಾರಂಭಗಳು ಇವೇ ಅಲ್ಲವೇ? ಒಂದು ದೇಶದಲ್ಲಿ ದುಡ್ಡಿದ್ದವರು ಮತ್ತು ದುಡ್ಡಿಲ್ಲದವರ ಸಂಖ್ಯೆಯಲ್ಲಿ ವಿಪರೀತ ವ್ಯತ್ಯಾಸವಾದಾಗ ತಾನೇ ಬಂಡಾಯ!? ಹಿಂದೂಸ್ಥಾನದ ಮುಂದಿನ ಪರಿಸ್ಥಿತಿಯೇನು?? 
ಕ್ಷಾತ್ರ ಯೋಚಿಸುತ್ತಲೇ ಕೌಂಟರ್ ಬಳಿ ತಲುಪಿದ್ದ. ಅದಾಗಲೇ ಸ್ವಯಂವರಾಳಿಗೆ ಏನೇನು ಟೆಸ್ಟ್ ಆಗಬೇಕೋ ಅದೆಲ್ಲ ಚಿಕಿತ್ಸೆಗಳ ವಿವರ ಅಲ್ಲಿ ಮುಟ್ಟಿದ್ದವು. ಈಗ 25000 ಕಟ್ಟುವುದು, ಉಳಿದಿರುವುದು ಡಿಸ್ ಚಾರ್ಜ್ ಸಮಯದಲ್ಲಿ ಎಂದು ಹೇಳಿದರು. ಕ್ಷಾತ್ರ ತಲೆ ಕೊಡವಿಕೊಂಡ. ನಡೆಯಬಾರದ್ದೇನೋ ನಡೆದಿದೆ. ಆದ್ದರಿಂದಲೇ ಇವಿಷ್ಟು ಟೆಸ್ಟ್ ಗಳು ಎಂದುಕೊಂಡು 25,000 ಕಟ್ಟಿ ರಸೀದಿ ಹಿಡಿದು ಹೊರಬಂದು ಎಮರ್ಜೆನ್ಸಿ ವಾರ್ಡ್ ಕಡೆ ನಡೆದ. 
ಆಗ ನೆನಪಾಯಿತು ಅವನಿಗೆ, ಸ್ವಯಂವರಾಳ ಮನೆಯವರಿಗೆ ತಿಳಿಸಬೇಕಲ್ಲ. ತಾನೇಕೆ ಇಷ್ಟು ಮುತುವರ್ಜಿ ವಹಿಸಿ ಇವನ್ನೆಲ್ಲ ಮಾಡುತ್ತಿದ್ದೇನೆ. ಆಸ್ಪತ್ರೆಗೆ ತಂದು ಸೇರಿಸಿದ್ದಾಯಿತು. ಇನ್ನೇನಿದ್ದರೂ ಅವಳ ಮನೆಯವರಿಗೆ ಹೇಳಿ ತಾನು ತನ್ನ ದಾರಿ ನೋಡಿಕೊಳ್ಳಬಹುದಲ್ಲ. 
ಅಷ್ಟರಲ್ಲಿ ಎದುರಿನಿಂದ ಡಾಕ್ಟರ್ ಬಂದರು. "ಅಂದ ಹಾಗೇ ಪೇಶಂಟ್ ನಿಮಗೆ ಏನಾಗಬೇಕು?" 
ಒಂದು ಕ್ಷಣ ಏನು ಹೇಳಬೇಕೆಂದು ತಿಳಿಯಲಿಲ್ಲ ಕ್ಷಾತ್ರನಿಗೆ. "ನನ್ನ ಸ್ನೇಹಿತೆ ಅವಳು. ಏನಾಗಿದೆ? Is she fine?" ಮನಸ್ಸಿನ ಗಾಬರಿ ಮಾತಿನಲ್ಲಿ ಹೊರಬಂದಿತ್ತು. 
"ಗಾಬರಿ ಪಡಬೇಕಾದದ್ದು ಏನೂ ಇಲ್ಲ. ತೀವ್ರವಾದ ಜ್ವರದಿಂದ ಬಳಲುತ್ತಿದ್ದಾರೆ. ಸಂಜೆಯ ವೇಳೆಗೆಲ್ಲಾ ಸರಿಯಾಗುತ್ತಾರೆ. ಆಬ್ಸರವೇಶನ್ ನಲ್ಲಿ ಇಟ್ಟಿದೀವಿ. ಈಗ ಎಚ್ಚರವಿಲ್ಲ. ಅವರ ಮನೆಯವರಿಗೆ ಹೇಳಿ ಕಳುಹಿಸಿ." ಎಂದು ಅಲ್ಲಿಂದ ನಡೆದ ಡಾಕ್ಟರ್.
ಮೈಮೇಲಿದ್ದ ಸಾವಿರ ಕೆಜಿ ಭಾರವೊಂದು ಯಾರೋ ಹಟಾತ್ತನೆ ಎತ್ತಿಟ್ಟಂತೆ ಅನ್ನಿಸಿತು ಕ್ಷಾತ್ರನಿಗೆ. ಆತನ ಮನಸ್ಸಿನಲ್ಲಿ ಬಂದು ಹೋಗುತ್ತಿದ್ದ ಇಲ್ಲ ಸಲ್ಲದ ಆಲೋಚನೆಗಳು ಈಗ ನಿಯಂತ್ರಣಕ್ಕೆ ಬಂದವು. ಆಬ್ಸರ್ವೇಶನ್ ವಾರ್ಡಿನ ಬಳಿ ನಡೆದ ಕ್ಷಾತ್ರ. ಹಾಸಿಗೆಯ ಮೇಲೆ ಮಲಗಿಸಿ ಕೈಗೆ ಡ್ರಿಪ್ ಏರಿಸಿದ್ದರು. ಎಚ್ಚರವಿಲ್ಲದಂತೆ ಮಲಗಿದ್ದಳು ಅವಳು. ಎರಡು ನಿಮಿಷ ಹಾಗೆಯೇ ನೋಡುತ್ತ ಕುಳಿತಿದ್ದ ಕ್ಷಾತ್ರ. ಆಯಾಸದಿಂದ ಅವಳ ಮುಖ ದಣಿದಿದ್ದರೂ ಅದರಲ್ಲೊಂದು ಕಳೆಯಿತ್ತು. ಎಚ್ಚರವಿಲ್ಲದ್ದರಿಂದ ಇಹದ ಮೇಲೆ ಹಿಡಿತವಿಲ್ಲದೆ ಆಕೆಯ ಮುಖದಲ್ಲಿ ಯಾವುದೇ ಕಲಬೆರಕೆಯ ಮಿಳಿತವಿಲ್ಲ. ಅದೆಷ್ಟು ಬೇಗ ಇಷ್ಟು ಇಷ್ಟವಾದೆ ಹುಡುಗಿ ಎಂದುಕೊಂಡ ಕ್ಷಾತ್ರ. ಎಚ್ಚರವಿಲ್ಲದೆ ಮಲಗಿದ್ದ ವಯಸ್ಸಿನ ಹುಡುಗಿಯನ್ನು ಹೀಗೆ ನೋಡುತ್ತ ನಿಲ್ಲುವುದು ಸರಿಯಲ್ಲ ಎನ್ನಿಸಿ ಹೊರಬಂದ. ಆಕೆಯ ಮನೆಯವರ ಬಗ್ಗೆ ಕೇಳಲು ಆಕೆ ಎಚ್ಚರಗೊಳ್ಳಬೇಕು. ತಿರುಗಿ ಸ್ಟೇಶನ್ ಹೋಗಿ ಸಂಜೆ ಬರಲೇ ಎಂದುಕೊಂಡ. 
ಯಾಕೋ ಎದ್ದು ಹೊರಡಲು ಮನಸ್ಸು ಬರಲಿಲ್ಲ. ಆಬ್ಸರ್ವೇಶನ್ ರೂಮಿನೊಳಗೆ ಹೋಗುತ್ತಿದ್ದ ನರ್ಸ್ ಬಳಿ ಏನಾದರೂ ಬೇಕಿದ್ದರೆ ಹೇಳಿ, ನಾನಿಲ್ಲಿಯೇ ಇರುತ್ತೇನೆ ಎಂದು ಹೇಳಿ ಕುಳಿತುಕೊಂಡ. 
ಮನಸ್ಸು ಇಷ್ಟೊಂದು ಸಂವೇದನೆಗೆ ಒಳಗಾಗಿ ಅದೆಷ್ಟು ದಿನಗಳಾಗಿದ್ದವೋ ಎಂದೆನ್ನಿಸಿತು ಅವನಿಗೆ. ಸ್ಟೇಶನ್ ಗೆ ಫೋನ್ ಮಾಡಿ "ಎರಡು ದಿನ ಬರುವುದಿಲ್ಲ, ರಜೆಯ ಮೇಲಿದ್ದೇನೆ. ಯಾವುದಾದರೂ ಇಂಪಾರ್ಟೆಂಟ್ ಕಾಲ್ ಬಂದರೆ ನನಗೆ ತಿಳಿಸು" ಕಾನಷ್ಟೆಬಲ್ ಗೆ ಹೇಳಿ ಫೋನಿಟ್ಟ. ಬಹಳ ದಿನಗಳ ನಂತರ ಹೀಗೆ ಸ್ಟೇಷನ್ ವಿಷಯಗಳನ್ನು ಬಿಟ್ಟು ಅವನ ಪರ್ಸನಲ್ ವಿಷಯಗಳನ್ನು ಗಮನಿಸುತ್ತಿದ್ದಾನೆ. "ಇದು ಯಾವಾಗ ನಿನ್ನ ಪರ್ಸನಲ್ ವಿಷಯವಾಯಿತು?" ಕುಟುಕಿತು ಅಂತರಂಗ.
ಒಂದೆರಡು ಬಾರಿ ಹಾಸ್ಪಿಟಲ್ ನಿಂದ ಹೊರಬಂದ. ಸಿಗರೇಟ್ ಸೇದುವ ಮನಸ್ಸಾಯಿತು. ಸ್ವಯಂವರಾ ತೊಂದರೆಯಲ್ಲಿದ್ದಾಳೆ ಎಂದು ಅನ್ನಿಸಿದಾಗಿಲಿನಿಂದ ಇಲ್ಲಿಯವರೆಗೆ ಆತ ಸಿಗರೇಟ್ ಹಚ್ಚಿರಲೇ ಇಲ್ಲ. ಮನಸ್ಸೆಂಬ ಮರ್ಕಟ. ಇಲ್ಲ ತಾನಿನ್ನು ಸಿಗರೇಟ್ ಮುಟ್ಟಬಾರದು ಎಂದುಕೊಂಡು ಒಳನಡೆದ. ಅಂತೂ ಇಂತೂ ಸಂಜೆಯವರೆಗೆ ಕೆಲಸವಿಲ್ಲದೇ ಸಮಯ ಕೊಲ್ಲುವುದು ಅವನಿಗೆ ತುಂಬಾನೇ ಕಷ್ಟವಾಯಿತು. Workoholic!! ಕೆಲಸವಿಲ್ಲದೇ ಬದುಕಲಾಗದ ವ್ಯಕ್ತಿಗಳಲ್ಲಿ ತಾನು ಒಬ್ಬ ಎಂದುಕೊಂಡ. ಸಂಜೆಯ ಹೊತ್ತಿಗೆ ಬಂದ ಡಾಕ್ಟರ್ "ಇನ್ನೇನು ತೊಂದರೆ ಇಲ್ಲ, ಇಂಜೆಕ್ಷನ್ ಕೊಟ್ಟಿದ್ದೇನೆ. ಸ್ವಲ್ಪ ಅಮಲಿನಲ್ಲಿದ್ದಾಳೆ. ಮನೆಗೆ ಕರೆದುಕೊಂಡು ಹೋಗಬಹುದು. ಎರಡು ದಿನ ರೆಸ್ಟ್ ಮಾಡಿದರೆ ಸರಿ ಹೋಗುತ್ತಾಳೆ" ಎಂದರು.
ತಾನು ಪೋಲಿಸ್ ಆಗಿಲ್ಲದಿದ್ದರೆ ಇನ್ನೂ ನಾಲ್ಕು ದಿನ ಅವಳನ್ನು ಇಲ್ಲೇ ಇಟ್ಟು ದುಡ್ಡು ಕೀಳುತ್ತಿದ್ದರೇನೋ? Health care ಮಾಪಿಯಾ!! ನನ್ನ ಬಳಿ ದುಡ್ಡು ತೆಗೆದುಕೊಳ್ಳುವುದು ಕಷ್ಟ ಎಂದು ಈಗಲೇ ಬಿಟ್ಟು ಕಳುಹಿಸುತ್ತಿದ್ದಾರೆ. ಕೇವಲ ಜ್ವರವೆಂದು ಗೊತ್ತಿದ್ದರೆ ಅಷ್ಟೇಕೆ ಟೆಸ್ಟ್ ಗಳು ಎಂದುಕೊಂಡ. ಸಮಯ ಸಿಕ್ಕಾಗ Health care ಮಾಪಿಯಾ ಅನ್ನು ವಿಚಾರಿಸಿಕೊಳ್ಳಬೇಕು ಎಂದುಕೊಳ್ಳುತ್ತಾ ಮತ್ತೈದು ಸಾವಿರ ಕಟ್ಟಿ ಸ್ವಯಂವರಾಳನ್ನು ವ್ಹೀಲ್ ಚೇರ್ ಮೇಲೆ ಕರೆದುಕೊಂಡು ಬರುವುದನ್ನು ನೋಡುತ್ತಾ ನಿಂತ. 
ಈಗ ನಿಜವಾದ ಸಮಸ್ಯೆ ಎದುರಾಯಿತು. ತಾನೀಗ ಅವಳನ್ನು ನನ್ನ ಮನೆಗೆ ಕರೆದೊಯ್ಯಲೇ? ಅಥವಾ ಅವಳ ಮನೆಗೋ? ಅವಳಿಗಿನ್ನೂ ಪೂರ್ತಿಯಾಗಿ ಎಚ್ಚರವೇ ಬಂದಿಲ್ಲ.ಈಗ ತಾನಿವಳನ್ನು ಮನೆಗೆ ಕರೆದೊಯ್ಯುವುದು ಸಭ್ಯತೆಯೇ? ಎಂದುಕೊಂಡ.
ಮರಳಿ ಒಳಗೆ ಬಂದು "ಇಂದು ಒಬ್ಬ ನರ್ಸ್ ಅವಳ ಜೊತೆಯೇ ಇರಲಿ ಕಳುಹಿಸಿಕೊಡಿ, ಅದರ ಬಿಲ್ ಪೇ ಮಾಡುತ್ತೇನೆ" ಎಂದು ಬಿಲ್ ಪೇ ಮಾಡಿ ಅಂಬ್ಯುಲೆನ್ಸ್ ಗೆ ಅವಳನ್ನು ಏರಿಸಿದ ನಂತರ ತನ್ನ ಮನೆಯ ಅಡ್ರೆಸ್ ಹೇಳಿ ಜೀಪನ್ನೇರಿದ ಕ್ಷಾತ್ರ. 
ಸ್ವಯಂವರಾಳನ್ನು ಬೆಡ್ ಮೇಲೆ ಮಲಗಿಸಿ ನರ್ಸ್ ಹೇಳಿದ್ದನ್ನೆಲ್ಲ ತಂದುಕೊಟ್ಟು ಹಾಲಿನಲ್ಲಿ ಬಂದು ಕುಳಿತ ಕ್ಷಾತ್ರ. ತಾನು ಮಾಡುತ್ತಿರುವುದು ಸರಿಯಾ?? ಅವಳ ಮನೆಗೆ ತಿಳಿಸುವುದು ತನ್ನ ಕರ್ತವ್ಯ ಎಂದೆನ್ನಿಸಿತು. ಸ್ವಯಂವರಾಳ ಮನೆಯ ಬಾಗಿಲು ಕೂಡ ಮುಚ್ಚಿದ್ದು ನೆನಪಿಲ್ಲ ತನಗೆ. ಯಾವುದಕ್ಕೂ ಅವಳ ಮೊಬೈಲ್ ತಂದುಬಿಡೋಣ ಎಂದುಕೊಂಡು "ಈಗಲೆ ಬಂದೆ" ಎಂದು ನರ್ಸ್ ಗೆ ಹೇಳಿ ಹೊರಬಂದು ಜೀಪ್ ಏರಿ ಸ್ವಯಂವರಾಳ ಮನೆಯ ಕಡೆ ಹೊರಟ. ಸ್ವಯಂವರಾಳ ಪಕ್ಕ ಕುಳಿತಿದ್ದ ನರ್ಸ್ ಪುಸ್ತಕವೊಂದಕ್ಕೆ ಅಂಟಿಕೊಂಡು ಕುಳಿತಿದ್ದಳು. ಸ್ವಯಂವರಾ ಔಷಧಿಯ ಅಮಲಿನಿಂದ ನಿದ್ರಿಸುತ್ತಿದ್ದಳು. ಒಂದೈದು ನಿಮಿಷದ ನಂತರ ನರ್ಸ್ ಓದುತ್ತಿರುವ ಪುಸ್ತಕ ಬೇಸರವಾಗಿ ಇಲ್ಲಿ ಕುಳಿತು ಏನು ಮಾಡುವುದು? ಹೀಗೆ ಹತ್ತು ನಿಮಿಷ ಹೊರಗಡೆ ಓಡಾಡಿ ಬರಬಹುದು, ಹೇಗೂ ಇವಳು ನಿದ್ರಿಸುತ್ತಿದ್ದಾಳೆ ಎಂದುಕೊಂಡು ಪುಸ್ತಕವನ್ನು ಅಲ್ಲೇ ಬದಿಗಿರಿಸಿ ನಿಧಾನವಾಗಿ ಹೆಜ್ಜೆಯಿಡುತ್ತ ಹೊರನಡೆದಳು.
ಕಾಲಿಂಗ್ ಬೆಲ್ ಸದ್ದು ಮಾಡಿತು. ಮಲಗಿದಲ್ಲಿಯೇ ಹೊರಳಾಡಿದಳು ಸ್ವಯಂವರಾ. ಮತ್ತೆರಡು ಬಾರಿ ಕಾಲಿಂಗ್ ಬೆಲ್ ಸದ್ದು. ಏಳುವ ಮನಸ್ಸಾದರೂ ಮೈ ಸಹಕರಿಸುತ್ತಿಲ್ಲ. ಸುತ್ತಲೂ ನೋಡಿದಳು ಒಮ್ಮೆ. ತಾನಿರುವ ಜಾಗದ ಪರಿಚಯ ಸಿಗುತ್ತಿಲ್ಲ ಅವಳಿಗೆ. ಎಲ್ಲಿದ್ದೇನೆ ಎಂದು ತಿಳಿಯುತ್ತಿಲ್ಲ. ಅಷ್ಟರಲ್ಲಿ ಹೊರಗಡೆ ಬಾಗಿಲು ದೂಡಿದ ಸದ್ದು. ತಾನೇಕೆ ಹೀಗೆ ಅಪರಿಚಿತ ಜಾಗದಲ್ಲಿ ಮಲಗಿದ್ದೇನೆ ಎಂದೂ ನೆನಪಾಗುತ್ತಿಲ್ಲ. ಇನ್ನೂ ಔಷಧಿಯ ಅಮಲು ಹಾಗೆಯೇ ಇದ್ದದ್ದರಿಂದ ಯೋಚಿಸುತ್ತಲೇ ತಲೆ ಸಿಡಿಯುವಂತಾಯಿತು.
ಯಾರೋ ಒಳಗೆ ಬರುತ್ತಿದ್ದಾರೆ. ಪಕ್ಕದ ರೂಮಿನ ಬಾಗಿಲು ತೆರೆದ ಸದ್ದು. ಅವಳಿಗೆ ಸ್ವಲ್ಪ ಸ್ವಲ್ಪ ನೆನಪಾಗತೊಡಗಿತು.ಮದ್ಯದಲ್ಲಿ ಯಾವಗಲೋ ಕ್ಷಾತ್ರನ ಮಾತುಗಳು ಕೇಳಿವೆ. ಆಸ್ಪತ್ರೆಯಲ್ಲಿ ಮಲಗಿದ ನೆನಪು ಬಂತು. ಅಲ್ಲಿಂದ ಅವನ ಮನೆಗೇ ಕರೆತಂದದ್ದು.. ಹಾಗಾದರೆ ಆತ ಎಲ್ಲಿ ಹೋದ? ಈಗ ಆತನೇ ಬರುತ್ತಿದ್ದಾನೆಯೇ? ಬಾಗಿಲೆನೆಡೆಗೇ ನೋಡುತ್ತಿದ್ದಳು. ಮೈ ಸಣ್ಣಗೆ ಬೆವರತೊಡಗಿತು. ಒಂದೆರಡು ಕ್ಷಣಗಳ ನಂತರ ರೂಮಿನ ಬಾಗಿಲು ತೆಗೆದುಕೊಂಡು ಒಳಗೆ ಬಂದ ಆಕೃತಿಯನ್ನು ನೋಡಿ ಜೋರಾಗಿ ಕಿರುಚಬೇಕೆಂದುಕೊಂಡಳು. ಆದರೆ ಭಯದಿಂದ ಅವಳ ಧ್ವನಿ ಗಂಟಲಿನಲ್ಲೇ ನಿಂತುಹೋಯಿತು. ಎದ್ದು ಓಡಬೇಕೆಂದುಕೊಂಡರೆ ಕಾಲುಗಳು ಎತ್ತಲೂ ಆಗುತ್ತಿಲ್ಲ. ದೇಹ ಒಮ್ಮೆಲೇ ಬೆವರಿನ ಸೆಲೆಯಾಯಿತು. 
ಈತನೆ!! ಆಸ್ಪತ್ರೆಯಲ್ಲಿ ಕೊಲೆ ಮಾಡಿದವನು!!? ಈಗಲೂ ಅದೇ ಬಾವರಹಿತ ಮುಖ. ತನಗೆ ಆತನ ಮುಖದ ಭಾವನೆಗಳನ್ನು ಅರಿಯಲು ಸಾಧ್ಯವಾಗುತ್ತಿಲ್ಲ. 
ಮುಖದಲ್ಲಿ ಆತ ಯಾವ ಭಾವನೆಗಳನ್ನೂ ಹೊರಹಾಕುತ್ತಿಲ್ಲ. ಅಂದೂ ಹೀಗೆ ನಡೆದಿತ್ತಲ್ಲವೆ? ಗಂಡನ್ನು ಹೆಣ್ಣಾಗಿಯೂ, ಹೆಣ್ಣನ್ನು ಗಂಡಾಗಿಯೂ ನೋಡುವ ಪೇಶಂಟ್. ತನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ತನ್ನ ದಿಕ್ಕು ತಪ್ಪಿಸಿ ಕೊಲೆ ಮಾಡಿ ಹೊರಗೆ ಓಡಿ ಹೋಗಿದ್ದ ವ್ಯಕ್ತಿ. ಈಗ ಕ್ಷಾತ್ರನ ಮನೆಯಲ್ಲಿ. ತನ್ನನ್ನು ಕೊಲೆ ಮಾಡುತ್ತಾನಾ? ಕೈ ಮುಷ್ಠಿ ಕಟ್ಟಿದಳು. ಅಷ್ಟರಲ್ಲಿ ಆತ ಹತ್ತಿರ ಬಂದು ನರ್ಸ್ ಹಾಕಿದ್ದ ಕುರ್ಚಿಯಲ್ಲಿ ಕುಳಿತು ಸ್ವಯಂವರಾಳನ್ನೇ ನೋಡತೊಡಗಿದ. ಭಯಬೀತ ಹರಿಣಿಯಂತೆ ಕಂಡಳು ಸ್ವಯಂವರಾ.
ಆ ವ್ಯಕ್ತಿ ತನ್ನ ಕೈಯನ್ನು ಅವಳ ಹಣೆಯ ಮೇಲಿರಿಸಿದ. "ಜ್ವರ ಇಳಿಯಿತಾ?" ತುಂಬ ಮೃದುವಾಗಿತ್ತು ಆತನ ಧ್ವನ್ನಿ. ಆತನ ಕೈ ತೆಗೆಯಲು ಮಲಗಿದಲ್ಲೇ ಕೊಸರಿದಳು. ನಕ್ಕ ಆತ. "ಭಯವಾ?? ನೀನು ತುಂಬ ಕಲಿತಿರುವೆ. ಯಾರ ಮುಖವನ್ನು ಬೇಕಾದರೂ ನೋಡಿ ಅವರ ಮನಸ್ಸು ಅರಿಯಬಲ್ಲೆ ಎಂಬ ಭ್ರಮೆ ಅಲ್ಲವೇ ನಿನಗೆ? ಸ್ವಯಂವರಾ??" ಮತ್ತೂ ಮೃದುವಾಗಿಯೇ ಕೇಳಿದ. ಅವಳಿಗೆ ಏನು ಮಾತನಾಡಬೇಕೆಂದು ತಿಳಿಯುತ್ತಿಲ್ಲ. Psycho killer.. ಯಾವ ಕ್ಷಣದಲ್ಲಾದರೂ ಬದಲಾಗಬಹುದು. ಎಲ್ಲಿರುವೆ ಕ್ಷಾತ್ರ? ಎಂದುಕೊಂಡಳು.
ಅದೇ ಹೊತ್ತಿಗೆ ಕ್ಷಾತ್ರ ಸ್ವಯಂವರಾಳ ಮನೆ ತಲುಪಿದ್ದ. ಬಾಗಿಲು ತೆರೆದುಕೊಂಡೇ ಇತ್ತು. ತನ್ನ ಬುದ್ಧಿ ಅದ್ಹೇಗೆ ಕೆಲಸ ಮಾಡಲಿಲ್ಲ ಎಂದು ಆಶ್ಚರ್ಯಗೊಂಡ. ಕಳ್ಳರೇನಾದರೂ ನುಗ್ಗಿ ಎಲ್ಲವನ್ನೂ ದೋಚಿಕೊಂಡು ಹೋದರೆ? ಯೋಚಿಸುತ್ತಲೇ ಒಳ ನಡೆದ ಕ್ಷಾತ್ರ. ಆತನ ಅನುಮಾನದಂತೆ ಏನೂ ನಡೆದಿರಲಿಲ್ಲ. ಮನೆ ಓರಣವಾಗಿಯೇ ಇತ್ತು. ಕ್ಷಾತ್ರ ಹೋಗಿ ಸ್ವಯಂವರಾಳ ರೂಮಿನಲ್ಲಿ ಲೈಟ್ ಹಾಕಿ ಕೂಲಂಕುಷವಾಗಿ ಪರೀಕ್ಷಿಸಿದ. ಮೂಲೆಯಲ್ಲಿದ್ದ ಸ್ಟೂಲ್ ಮೇಲೆ ಮೊಬೈಲ್ ಇತ್ತು. ಆನ್ ಮಾಡಲು ನೋಡಿದರೆ ಸ್ವಿಚ್ ಆಫ್ ಆಗಿತ್ತು. ಬ್ಯಾಟರಿ ಲೋ ಆಗಿ ಸ್ವಿಚ್ ಆಫ್ ಆಗಿದೆ. ಚಾರ್ಜರ್ ಹುಡುಕುವ ಮನಸ್ಸಾಗಲಿಲ್ಲ. ಮನೆಗೆ ಹೋಗಿ ನೋಡೋಣ ಎಂದುಕೊಂಡು ತಿರುಗುವವನಿದ್ದ. ಅಷ್ಟರಲ್ಲಿ ಮನೆಯ ಕೀ ಕೂಡ ಹುಡುಕಬೇಕೆಂದು ನೆನಪಾಯಿತು. ಪೆನ್ ಸ್ಟಾಂಡ್ ಒಳಗೆ ತಡಕಾಡುವಾಗ ಅದರ ಕೆಳಗಿದ್ದ ಡೈರಿಯ ಕಡೆ ಹೋಯಿತು ಆತನ ಗಮನ.
ಸ್ವಯಂವರಾ ಡೈರಿ ಬರೆಯುತ್ತಾಳಾ?? ದಿನವೂ ಬರೆಯುವ ಹವ್ಯಾಸವಿರಬಹುದೇ? ಹಾಗಾದರೆ ತನ್ನ ಬಗ್ಗೆಯೂ ಏನಾದರೂ ಬರೆದಿರಬಹುದೇ?? ಕುತೂಹಲ ಮೂಡಿತು!! ಡೈರಿ ತೆಗೆದುಕೊಂಡು ಹಾಳೆಗಳನ್ನು ತಿರುವಿ ಹಾಕತೊಡಗಿದ. ಹೌದು.. ದಿನಾಲೂ ಬರೆಯುತ್ತಾಳೆ. ಬಹಳ ಮುದ್ದಾದ ಅಕ್ಷರಗಳು. ಬೇರೆಯವರ ಡೈರಿಯನ್ನು ಕದ್ದು ಓದುವುದು ತಪ್ಪೆಂದು ಮನಸ್ಸು ಹೇಳಿದರೂ ತನ್ನ ಬಗ್ಗೆ ಏನಾದರೂ ಬರೆದಿರಬಹುದೇ ಎಂಬ ಕುತೂಹಲ, ಮನಸ್ಸಿನ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲ. ಸುಮ್ಮನೆ ಪುಟ ತಿರುವಿದ ಕ್ಷಾತ್ರ. ಕೊನೆಯ ಹಾಳೆಯಲ್ಲಿ ಎರಡೇ ವಾಕ್ಯಗಳು..
ಕೊಲೆಗಳು ನಡೆಯುತ್ತಿವೆ. ಪೊಲೀಸರು ಹಿಂಬಾಲಿಸುತ್ತಿದ್ದಾರೆ. ಜನಗಳು ಎತ್ತ ಸಾಗುತ್ತಿದ್ದಾರೆ??
ತಾನವಳಿಗೆ ಸಿಕ್ಕ ದಿನ, ಕೊಲೆ ನಡೆದ ಸಂಜೆಗೆ ಬಂದು ಅಷ್ಟನ್ನು ಬರೆದಿದ್ದಾಳೆ. ಅವಳ ಬರಹದಲ್ಲಿ ನೋವಿದೆಯಾ? ಮರೆಯಾಗುತ್ತಿರುವ ಮಾನವೀಯತೆಯ ಬಗ್ಗೆ ಮರುಗುತ್ತಿದ್ದಾಳಾ?? ತನ್ನ ಬಗ್ಗೆ ಏನಾದರೂ ಬರೆದಿರುವಳಾ ಎಂದು ಆಸ್ಥೆಯಿಂದ ತೆಗೆದ ಅವನಿಗೆ ನಿರಾಸೆಯಾಗಿತ್ತು ಒಮ್ಮೆ. ಮತ್ತೆ ಅದರ ಹಿಂದಿನ ಪುಟ ತೆಗೆದ. ಸ್ವಯಂವರಾಳಿಗೆ ಆತ ಫೋನ್ ಮಾಡಿದ ದಿನ. 
ಮತ್ತದೇ ಮುದ್ದಾದ ಅಕ್ಷರಗಳು.
ಇಂದು ನನ್ನ ಜೀವನದಲ್ಲಿ ಎರಡು ವಿಶಿಷ್ಟ ವ್ಯಕ್ತಿತ್ವಗಳ ಎಂಟ್ರಿಯಾಗಿದೆ. ಜೀವನವೆಂದರೆ ಹೀಗೆ ಅಲ್ಲವಾ? ಅದೆಷ್ಟು ಜನ ಬರುತ್ತಾರೆ!! ಅದೆಷ್ಟು ಜನ ಹೋಗುತ್ತಾರೆ?? ಉಳಿಯುವವರು!!??
ಖಂಡಿತ ತನ್ನ ಬಗ್ಗೆ ಬರೆದಿರುತ್ತಾಳೆ ಎಂದು ಮುಂದೆ ಓದತೊಡಗಿದ.
ಅದೇ ಹೊತ್ತಿಗೆ ಹೊರಗಡೆ ಹೋದ ನರ್ಸ್ ಶಾಪಿಂಗ್ ಕಾಂಪ್ಲೆಕ್ಸ್ ಒಂದರಲ್ಲಿ ತನ್ನ ಇನಿಯನಿಗೆ ಬಟ್ಟೆ ಆರಿಸುವುದರಲ್ಲಿ ನಿರತಳಾಗಿದ್ದಳು. ಹತ್ತು ನಿಮಿಷ ಓಡಾಡಿಕೊಂಡು ಬರೋಣವೆಂದು ಹೊರನಡೆದಿದ್ದ ನರ್ಸ್ ನಾಳೆ ತನ್ನಿನಿಯನ ಹುಟ್ಟುಹಬ್ಬದ ನೆನಪಾಗಿ surprise gift ಕೊಡೋಣವೆಂದು ಶಾಪಿಂಗ್ ಕಾಂಪ್ಲೆಕ್ಸ್ ಹೊಕ್ಕಿದ್ದಳು. ಕ್ಷಾತ್ರ ಬರುವ ಮೊದಲು ಮನೆ ಸೇರಿದರೆ ಸಾಕು, ತನ್ನ ಬಳಿಯಿನ್ನೂ ಅರ್ಧ ಘಂಟೆ ಸಮಯವಿದೆ ಎಂದು ಯೋಚಿಸುತ್ತಲೇ ಬಟ್ಟೆ ತಿರುವಿ ಹಾಕಿಸುತ್ತಿದ್ದಳು.
ಇತ್ತ ಸ್ವಯಂವರಾಳ ಪಕ್ಕ ಕುಳಿತ ವ್ಯಕ್ತಿ ಮಾತನಾಡುತ್ತಲೇ ಇದ್ದ. ಆತನ ಭಾವದಲ್ಲಿ ಮಾತ್ರ ಯಾವುದೇ ಏರುಪೇರಿಲ್ಲ. "ಕ್ಷಾತ್ರ ಬೇಗ ಬಂದು ಬಿಡು, Save me" ಎಂದುಕೊಂಡಳು ಸ್ವಯಂವರಾ. 
"ಕ್ಷಾತ್ರ ಬೇಗ ಬಂದು ನನ್ನನ್ನು ಕಾಪಾಡು ಎಂದು ಕೊಳ್ಳುತ್ತಿರುವೆಯಾ? ಸ್ವಯಂವರಾ"
"ನೋಡು, ನಿನ್ನ ಮುಖ ನೋಡಿ ನಾನು ನಿನ್ನ ಮನಸ್ಸು ಓದಬಲ್ಲೆ. ನೀನು ನನ್ನ ಭಾವ ಓದಲಾರೆ" ನಕ್ಕು ಮತ್ತೆ ಮುಂದುವರೆಸಿದ .
"ನಿ ಯಾಕೆ ನನ್ನ ಮನಸ್ಸನ್ನು ಓದಲಾರೆ ಗೊತ್ತಾ ಸ್ವಯಂವರಾ??" ಮಾತು ನಿಲ್ಲಿಸಿ ಆಕೆಯ ಕಣ್ಣಲ್ಲಿ ಕಣ್ಣಿಟ್ಟ ಆತ.
"ಯಾಕೆ??" ಸ್ವಲ್ಪ ಧೈರ್ಯ ತಂದುಕೊಂಡು ಕೇಳಿದಳು ಸ್ವಯಂವರಾ.
ಕ್ಷಾತ್ರ ಡೈರಿಯನ್ನು ಓದುತ್ತಿದ್ದ. "ಇಂದು ಬೆಳಿಗ್ಗೆ ಒಬ್ಬ ಹುಚ್ಚನನ್ನು ನೋಡಿದೆನಲ್ಲಾ!! ಆತನಿಗೆ ಹೆಣ್ಣು ಗಂಡಾಗಿಯೂ, ಗಂಡು ಹೆಣ್ಣಾಗಿಯೂ ಕಾಣುತ್ತಾರಂತೆ..!? What a silly.. ಹ್ಹ ಹ್ಹಾ.." 
ಅಂದು ತನ್ನ ಬಳಿ ಹೇಳಿದ ಹುಚ್ಚನ ಬಗ್ಗೆ ಬರೆದಿದ್ದಾಳೆ, ಎಂಥ ವಿಚಿತ್ರ ರೋಗ ಎಂದುಕೊಂಡು ಮುಂದೆ ಓದತೊಡಗಿದ.
"ವಿಚಿತ್ರವೆಂದರೆ ಯಾರದೇ ಮುಖ ನೋಡಿದರೂ ಅವರ ಮನಸ್ಸನ್ನು ನಾ ಅರಿಯಬಲ್ಲೆ. ಹುಚ್ಚರದ್ದು ಕೂಡ! ಆ ಸಾಮರ್ಥ್ಯದಿಂದಲೇ ಅಲ್ಲವೇ ಇಷ್ಟು ಎತ್ತರಕ್ಕೆ ಏರಿರುವುದು. ಅದೊಂದು ವಿದ್ಯೆ ತನಗೆ ಒಲಿಯಲು ಕಾರಣವೇನು? ಮೊದಲಿನಿಂದಲೂ ಅನಾಥವಾಗಿ ಬೆಳೆದಿದ್ದಾ? ಚಿಕ್ಕವಳಿದ್ದಾಗಿಂದಲೂ ಇವರು ತನ್ನ ತಂದೆ ತಾಯಿಯಾಗಿದ್ದಾರೆ, ಅಕ್ಕ ತಮ್ಮನಾಗಿದ್ದರೆ ಹೇಗೆ ಬಿಹೇವ್ ಮಾಡುತ್ತಿದ್ದರು ಎಂದು ಊಹಿಸಿ, ಊಹಿಸಿ ನಂತರ ಹೇಗೋ ನಿಜವಾಗಿ ಅವರೇನು ಕಲ್ಪಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಅರಿಯಬಲ್ಲವನಾಗಿಬಿಟ್ಟೆನಲ್ಲ. ಮೊದಲೆಲ್ಲ ಈ ವಿದ್ಯೆ ಒಂದು ಆಟದಂತೆನ್ನಿಸಿದರೂ ದಿನ ಕಳೆದಂತೆ ಅದೆಷ್ಟು ರೋಸಿ ಹೋದೆ. ಚಂದದ ಹೆಣ್ಣಾಗಿ ಹುಟ್ಟುವುದೇ ತಪ್ಪು. ಪ್ರತಿಯೊಬ್ಬ ಗಂಡಿನ ಮನಸ್ಸಿನಲ್ಲೂ ಅದೆಂತ ಭಾವ.. ಅದೆಂಥ ನೋಟ.. ಅದರಿಂದಲೇ ಅಲ್ಲವೇ ಪ್ರೀತಿಯಿಲ್ಲದೆ ದೂರ ಉಳಿದು ಬಿಟ್ಟೆ. ಯಾವ ಹುಡುಗನನ್ನು ಪ್ರೀತಿಸಬೇಕೆಂದುಕೊಂಡರೂ ಅವನ ಮನದಲ್ಲಿ ನನ್ನ ನೋಡಿ ಮೊದಲು ಮೂಡುವ ಭಾವವಿದೆಯಲ್ಲ... ಛೀ.. ನನ್ನ ಶಕ್ತಿಯೇ ನನಗೆ ಶಾಪವಾಗಿದೆ." 
ಓದುತ್ತ ಹೋದಂತೆಲ್ಲ ಕ್ಷಾತ್ರನಿಗೆ ಅವಳ ಮನಸ್ಥಿತಿ ಅರ್ಥವಾಗತೊಡಗಿತು. ಅನಾಥವಾಗಿ ಬೆಳೆದ ಹುಡುಗಿ. ನಿಷ್ಕಲ್ಮಶ ಪ್ರೀತಿಗಾಗಿ ಹಂಬಲಿಸುತ್ತಿದ್ದಾಳೆ. ನಾನು ಆ ಜಾಗ ತುಂಬಬಲ್ಲೆನಾ? ನನಗೆ ಮೊದಲು ಈಕೆಯನ್ನು ನೋಡಿದಾಗ ಯಾವ ಭಾವ ಮೂಡಿತ್ತು? ನನ್ನ ಭಾವವನ್ನು ಗ್ರಹಿಸಿದ್ದಳಾ? "ಇವಳಿಗೆಷ್ಟು ಪೊಗರು.. ಎಂದಷ್ಟೆ ಯೋಚಿಸಿದ್ದೆ. 24-36-24 ಎಂದುಕೊಂಡಿದ್ದು? ಅವಳಿಗೆ ತಿಳಿದಿದೆ. ಒಮ್ಮೆ ನನ್ನಲ್ಲಿ ಆ ಭಾವ ಮೂಡಿದ್ದರೆ ಖಂಡಿತ ಇವಳು ನನ್ನನ್ನು ಹತ್ತಿರ ಬಿಡುವುದಿಲ್ಲ. ಪವಿತ್ರ ಪ್ರೀತಿ ಬೇಕವಳಿಗೆ."
ಮುಂದೆ ಓದತೊಡಗಿದ.
"ನನಗೆ Mind Reading ತಿಳಿದ ದಿನದಿಂದ ಇಂದು ಮೊದಲ ಬಾರಿಗೆ ಒಬ್ಬ ಕಂಡಿದ್ದಾನೆ. ನಾನವನ ಮುಖ ನೋಡಿ ಏನನ್ನೂ ಅರಿಯದಾದೆ. His face was blank. ನನ್ನ ನೋಡಿಯೂ ಆತನ ಮುಖದಲ್ಲಿ ಏನೂ ಬದಲಾವಣೆ ಇಲ್ಲ. ಬದಲಾವಣೆ ಇದ್ದರೂ ನನಗೆ ಅದನ್ನು ಓದಲಾಗಲಿಲ್ಲ. ಇಂಥವನೊಬ್ಬ ಜೀವನ ಸಂಗಾತಿಯಾಗಿಬಿಟ್ಟರೆ ಎಷ್ಟು ಸುಂದರ. ಆತನ ಒಂದು ಕ್ಷಣದ ಅಪ್ಪುಗೆ ಕೂಡ ಎಂಥ ಹಿತ ನೀಡಿತು. ಯಾವ ಭಾವದಿಂದ ಆತ ತಬ್ಬಿಕೊಂಡ? ನಾನು ಗಂಡೆಂಬ ಭಾವದಿಂದಲೋ? ಅಥವಾ ಆತನಿಗೆ ಆತರದ ಯಾವ ಹುಚ್ಚೂ ಇರದೇ ಕೇವಲ ನನ್ನನ್ನು ನೋಡಿ ಹಾಗೆ ತಬ್ಬಿಕೊಂಡನೋ? ಹಾಗಿದ್ದರೆ ಎಷ್ಟು ಚೆನ್ನಾಗಿತ್ತು. ಆತನ ಪ್ರೊಫೈಲ್ ತೆಗೆದು ನೋಡಿದೆ. ಮದುವೆಯಾಗಿಲ್ಲ. ಕೇವಲ ಇದೊಂದು ಹುಚ್ಚು ಬಿಡಿಸಿದರೆ ನಂತರ..!!"
ಹೆಣ್ಣು ಮನಸ್ಸು ಕೊಡಲು ನಿಮಿಷ ಸಾಕೇ? ಕಹಿಕಹಿಯಾಯಿತು ಓದುತ್ತಿದ್ದ ಕ್ಷಾತ್ರನಿಗೆ. ಆದರೂ ಆತ ಎಷ್ಟೆಂದರೂ ಹುಚ್ಚ. ಪರಿಸ್ಥಿತಿಯ ಒತ್ತಡದಲ್ಲಿ ಬರೆದಿದ್ದಾಳೆ ಎಂದು ಸಮಾಧಾನ ತಂದುಕೊಂಡ. 
"ಯಾಕೆ?" ಮತ್ತೊಮ್ಮೆ ಕೇಳಿದಳು ಸ್ವಯಂವರಾ 
"ಯಾಕೆ ಹೇಳಿದರೆ ನೀನು ಒಪ್ಪುತ್ತೀಯಾ??" ಕೇಳಿದ ಆ ವ್ಯಕ್ತಿ.
"ನಿಜ ಹೇಳಿದರೆ ಒಪ್ಪುತ್ತೇನೆ ಹೇಳು." ಸಮಯ ಸಾಗಿದರೆ ಸಾಕಿತ್ತು ಅವಳಿಗೆ. ಕ್ಷಾತ್ರ ಬರುವವರೆಗೆ ತಾನು ಸಮಯ ಸಾಗಿ ಹಾಕಬೇಕು. ಎದುರಿಗಿದ್ದವ ತನಗಿಂತಲೂ ಚೆನ್ನಾಗಿ ಮನಸ್ಸನ್ನು ಓದಬಲ್ಲ ಯೋಚಿಸಲೂ ಭಯವಾಯಿತು ಅವಳಿಗೆ. 
"ನಿನಗೆ ನನ್ನ ಮೇಲೆ ಪ್ರೀತಿಯಾಗಿದೆ ಸ್ವಯಂವರಾ ಅದಕ್ಕೆ ನನ್ನ ಮನಸ್ಸನ್ನು ಓದಲಾರೆ." ಹೇಳಿ ನಗತೊಡಗಿದ ಆ ವ್ಯಕ್ತಿ. 
"No.." ಎಂದಳು ದೊಡ್ಡದಾಗಿ. ಆತ ನಗುತ್ತಲೇ ಇದ್ದ. ನೀನು ಎಷ್ಟೇ ದೊಡ್ಡದಾಗಿ ಕೂಗಿದರೂ ಅಷ್ಟೇ. ಪ್ರೀತಿಯಾದರೆ ಹಾಗೇ. ನಿನ್ನ ಮನಸ್ಥಿತಿ ನನಗೆ ಗೊತ್ತು. ಪ್ರೀತಿಯಾಗಿದೆ ಎಂದ ಮೇಲೆ ಹೇಳು. ಅದಕ್ಕೇಕೆ ಭಯ? ಕೊಲೆಗಾರ ಎಂದು ಹೆದರುತ್ತಿದ್ದೀಯಾ?" ಅವಳ ಕಣ್ಣುಗಳಲ್ಲಿ ಕಣ್ಣಿಟ್ಟ ಆ ವ್ಯಕ್ತಿ. 
"ಇಲ್ಲ.. ಇಲ್ಲ.. ನಿನ್ನ ಮೇಲೆ ಪ್ರೀತಿಯೂ ಇಲ್ಲ, ಭಯವೂ ಇಲ್ಲ. ಈಗೇಕೆ ಬಂದೆ ಇಲ್ಲಿಗೆ? Go away.. ಕ್ಷಾತ್ರ ಬಂದರೆ ಸಿಕ್ಕಿಬೀಳುತ್ತೀಯಾ.."
ಮತ್ತದೇ ನಗು. "ಕೊಲೆ ಮಾಡಿದವನನ್ನು ಪೋಲಿಸ್ ಹಿಡಿಯಲೇ ಬೇಕಲ್ಲವೆ? ನೀನು ನನ್ನನ್ನು ಹಿಡಿದುಕೊಡು. ಅದು ಬಿಟ್ಟು ತಪ್ಪಿಸಿಕೋ ಎನ್ನುತ್ತಿದ್ದೀಯಲ್ಲಾ.. ಪ್ರೀತಿ ಸ್ವಯಂವರಾ... ಪ್ರೀತಿ.."
ಒಂದು ಕ್ಷಣ ಆಕೆ ಯೋಚನೆಗೆ ಬಿದ್ದಳು. ನಿಜವಾಗು ಪ್ರಿತಿಸಿದ್ದೆನಾ? ಆಥವಾ ಈತ ಹೋದರೆ ಸಾಕು ಎಂದು ಹೆದರಿಸಿ ಕಳುಹಿಸಲು ಹಾಗೆ ಹೇಳಿದೆನಾ ? ಕೊಲೆಗಾರನನ್ನು ಪ್ರೀತಿಸುವುದೆ?? Never.. ಸಾಯುತ್ತೇನೆ ಆದರೆ ಖಂಡಿತ ಕೊಲೆಗಾರನನ್ನು ಪ್ರೀತಿಸುವುದಿಲ್ಲ. ಅಲ್ಲದೇ ಆತನಿಗೆ ನಾನೀಗ ಹೆಣ್ಣಾಗಿಯೇ ಕಾಣುತ್ತಿದ್ದೇನೆ ಎಂದರೆ ಹುಚ್ಚನಲ್ಲ ಈತ. ಕ್ಷಾತ್ರ ಹೇಳಿದಂತೆ Psycho killer. ಮತ್ತೆ ಭಯ ಆವರಿಸಿತು ಅವಳಿಗೆ.
"ಹಾ, ನೀನು ಊಹಿಸಿದ್ದು ನಿಜ. ನನಗೆ ಹುಚ್ಚಿಲ್ಲ ಸ್ವಯಂವರಾ!! ಪ್ರೀತಿ ಸಿಗದೇ Psycho killer ಆದೆ. ನೀನು ಮೊದಲ ನೋಟದಲ್ಲೇ ನನ್ನನು ಇಷ್ಟಪಟ್ಟೆ. ಈಗ ನನ್ನ ಪ್ರೀತಿ ನನಗೆ ಸಿಕ್ಕಿದೆ. ಆದರೆ ಪೋಲಿಸ್ ನನ್ನನ್ನು ಹಿಡಿದು ನೇಣಿಗೇರಿಸುತ್ತಾರೆ. ನಿನಗೂ ಪ್ರೀತಿಯಾಗಿದೆ. ನನಗೂ ಪ್ರೀತಿ ಸಿಕ್ಕಿದೆ. ಬೇರೆ ಆಗಬಾರದು ನಾವಿನ್ನು ಅಲ್ಲವೇ ಡಾಕ್ಟರ್ ಸ್ವಯಂವರಾ??" 
ಈ ಬಾರಿ ಆತನ ನಗುವಿನಲ್ಲಾದ ಬದಲಾವಣೆ ಗಮನಿಸಿದಳು ಸ್ವಯಂವರಾ. ಕಿಲ್ಲರ್!! ಆತನ ಮನದೊಳಗಿರುವ ಕಿಲ್ಲರ ಏಳುತ್ತಿದ್ದಾನೆ. ಈ ಕ್ಷಣದಲ್ಲಿ ನನ್ನ ಒಂದು ತಪ್ಪು ಮಾತು ಆತನನ್ನು ಕೆರಳಿಸಬಹುದು. ತಪ್ಪು ಯೋಚನೆಯೂ ಸಾಕು. He can read my mind. ಕೂಲ್, ಸ್ವಯಂವರಾ.. ಕೂಲ್.." ಎಂದುಕೊಂಡಳು ಮನಸ್ಸಿನೊಳಗೆ.
"ನೀನು ಎಷ್ಟೇ ಯೋಚಿಸಿದರೂ ಅಷ್ಟೇ ಸ್ವಯಂವರಾ. ಈ ಜನ್ಮದಲ್ಲಿ ನಾವಿಬ್ಬರೂ ಒಂದಾಗುವುದು ಸಾಧ್ಯವಿಲ್ಲ. They will hang me. ನಿನ್ನ ಪ್ರೀತಿ ಸಾಯಬಾರದು ಸ್ವಯಂವರಾ."
ಅವಳು ಸ್ವಲ್ಪ ಧೈರ್ಯ ತಂದುಕೊಂಡು "ನೀನು ಹೇಳುವುದು ಸರಿ. ನಿನಗೆ ಹುಚ್ಚು ಎಂದು ಸರ್ಟಿಫಿಕೇಟ್ ಕೊಡುತ್ತೇನೆ. ಯಾವ ಪೊಲೀಸರು ಏನೂ ಮಾಡಲಾರರು. ನಂತರ ನಾನು ನೀನು ಜೊತೆಯಾಗಿರಬಹುದು." ಎಂದಳು.
ಇಷ್ಟೊತ್ತು ನಗುತ್ತಿದ್ದವ ಈಗ ಅಳತೊಡಗಿದ. "ಪ್ರೀತಿಗಾಗಿ ನೀನು ಇಷ್ಟು ಮಾಡುತ್ತೇನೆ ಎಂದೆಯಲ್ಲ ಸ್ವಯಂವರಾ, ಸಾಕು!! ನಾನೂ ಕೂಡ ಏನನ್ನೂ ಮಾಡಲು ಸಿದ್ಧ. ಆದರೆ ನಿನ್ನ ಕಾಗಕ್ಕ, ಗುಬ್ಬಕ್ಕ ಕಥೆಯನ್ನು ಯಾರೂ ನಂಬಲಾರರು. ಈಗ ಉಳಿದಿರುವುದು ಒಂದೆ ದಾರಿ ಎಂದ ನಡುನಡುವೆ ಬಿಕ್ಕುತ್ತಲೇ.
"ಏನದು?"
ಅವನು ಧರಿಸಿದ್ದ ಗೌನ್ ಜಾಕೆಟ್ ನಿಂದ ಉದ್ದನೆಯ ಸ್ಟೀಲ್ ಬ್ಲೇಡ್ ಹೊರತೆಗೆದ. ಅದರ ಹೊಳಪನ್ನು ನೋಡುತ್ತಲೇ ಅವಳ ಗಂಟಲ ಪಸೆ ಆರಿತು. "ಸಾಯಬೇಕು, ನಾವಿಬ್ಬರೂ ಸಾಯಬೇಕು. ಮುಂದಿನ ಜನ್ಮದಲ್ಲಿ ನಾವಿಬ್ಬರೂ ಪವಿತ್ರ ಪ್ರೇಮಿಗಳಾಗಿ ಹುಟ್ಟಬಹುದು. ಒಂದಿಷ್ಟೂ ನೋವಿಲ್ಲ. ನಿನಗೆ ತಿಳಿಯುವುದೇ ಇಲ್ಲ." ಹೇಳುತ್ತಲೇ ಇದ್ದ ಆತ.
ಸ್ವಯಂವರಾಳ ಕಣ್ಣುಗಳಿಂದ ಅಶ್ರು ಧಾರೆಯಾಗತೊಡಗಿತು. ಎಲ್ಲಿದ್ದೀಯಾ ಕ್ಷಾತ್ರ?? ಮಾತು ಮನದಲ್ಲೇ ಉಳಿಯಿತು.
ಕ್ಷಾತ್ರ ಪೂರ್ತಿ ಓದಿ ಮುಗಿಸಿ ಜೀಪ್ ಏರಿದ್ದ. ಪದೆ ಪದೆ ಆತನ ತಲೆಯಲ್ಲಿ ತನ್ನ ಬಗ್ಗೆ ಬರೆದ ಸಾಲುಗಳೇ ಓಡುತ್ತಿದ್ದವು.
ಇಂದು ಕ್ಷಾತ್ರ ಎಂಬ ಪೋಲಿಸ್ ಜೊತೆ ಫೋನಿನಲ್ಲಿ ಮಾತನಾಡಿದೆ. ಮಾತಿನ ಧಾಟಿಯಿಂದಲೇ ತಿಳಿಯುತ್ತಿದೆ ನಂಬಿಗಸ್ಥ, ಹಿಡಿದ ಕೆಲಸ ಮುಗಿದಂತೂ ಬಿಡದ ಹಟವಾದಿ ಎಂದು. ಸ್ವಲ್ಪ ಜಾಸ್ತಿಯೇ ಎನ್ನುವಷ್ಟು ದರ್ಪವಿದೆ. ಪೋಲಿಸರಿಗದು ಸಹಜವೇ. ನೋಡಲು ಹೇಗಿದ್ದಾನೋ ಅರಿಯೆ. ಪೋಲಿಸರನ್ನು ಮದುವೆಯಾಗುವುದೂ ಕಷ್ಟವೇ. ಯಾವಾಗಲೂ ಕಳ್ಳರ ಒಡನಾಟ. ನನಗೆ ಹುಚ್ಚರ ಸಹವಾಸ!! 
ಯಾವ ಹೊಸ ಗಂಡಸಿನ ಪ್ರವೇಶವಾದರೂ ನಾನೇಕೆ ಹೀಗೆ ಮದುವೆಯ ಬಗ್ಗೆ ಯೋಚಿಸುತ್ತೇನೆ!?
ಯೋಚನೆ ಮಾಡಿದರೆ ತಪ್ಪೇನು!?
ನನ್ನದೂ ಮದುವೆಯ ವಯಸ್ಸಲ್ಲವೇ? ಅಪ್ಪ ಅಮ್ಮ ಇದ್ದರೆ ಇಷ್ಟೊತ್ತಿಗೆ ಮದುವೆಯಾಗಿರುತ್ತಿತ್ತು... ಹಂ!!
ಬರಹದಲ್ಲೂ ನಿಡುಸುಯ್ದಳು. 
ನಾಳೆ ಬರುತ್ತಾನಲ್ಲಾ ಕ್ಷಾತ್ರ.. ನೋಡೋಣ.. ಒಂದು sorry ಕೂಡ ಹೇಳಬೇಕು. ಸುಮ್ಮನೆ ಗದರಿಬಿಟ್ಟೆ.
ತನ್ನ ಮೇಲೆ ಅವಳಿಗೆ ಯಾವ ಅಭಿಪ್ರಾಯ ಮೂಡಿತ್ತು ಗೊತ್ತಾಗಲಿಲ್ಲ ಕ್ಷಾತ್ರನಿಗೆ. ಸ್ವಲ್ಪ ಮನವೊಲಿಸಿದರೆ ದಾರಿಗೆ ಬರುತ್ತಾಳೆ ಎಂದುಕೊಂಡು ಆಕ್ಸಿಲೇಟರ್ ಒತ್ತಿದ. ತನ್ನ ಶಾಪಿಂಗ್ ಮುಗಿಸಿಕೊಂಡು ನರ್ಸ್ ಕೂಡ ಮನೆಯ ಕಡೆ ನಡೆಯತೊಡಗಿದಳು. 
ಎದುರು ನಿಂತಿರುವ ವ್ಯಕ್ತಿ ಮಾನಸಿಕ ಸ್ಥಿಮಿತ ಕಳೆದುಕೊಳ್ಳುವ ಕೊನೆಯ ಹಂತದಲ್ಲಿದ್ದಾನೆ, ಯಾವುದೇ ಕ್ಷಣದಲ್ಲಿಯೂ ಆತನ ಕೈಯಲ್ಲಿರುವ ಬ್ಲೇಡ್ ತನ್ನ ದೇಹದೊಳಗೆ ಇಳಿಯಬಹುದು. ಕೈಯನ್ನು ಆ ಕಡೆ ಈ ಕಡೆ ಸರಿಸಿ ಏನಾದರೂ ಸಿಗಬಹುದೇ ನೋಡಿದಳು ಸ್ವಯಂವರಾ.
"ಸ್ವಯಂವರಾ.. ನೀನು ಮೊದಲು.. ನಿನ್ನ ಹಿಂದೆ ನಾನೂ ಬಂದುಬಿಡುತ್ತೇನೆ. ನಮ್ಮಿಬ್ಬರನ್ನು ದೂರ ಮಾಡಲು ಯಾರಿಗೂ ಸಾಧ್ಯವಿಲ್ಲ." 
ಸ್ವಯಂವರಾ ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿಕೊಂಡು ತಲೆ ಹೊರಳಿಸಿದಳು. ಪಕ್ಕದ ಟೇಬಲ್ ಮೇಲೆ ಹಣ್ಣಿನ ಜೊತೆಗಿದ್ದ ಚಾಕು ಕಾಣಿಸಿತು. ಎದುರಿಗಿರುವ ವ್ಯಕ್ತಿ ತನಗಿಂತ ಬಲಶಾಲಿ, ಆತನ ಕೈಲಿರುವ ಆಯುಧವೂ ದೊಡ್ಡದು. ತಾನು ಚಾಕು ಸೆಳೆಯುವುದರೊಳಗೆ ಆತ ತನ್ನನು ಕೊಂದು ಬಿಡಬಲ್ಲ. ಆದರೆ ಹೋರಾಡದೆ ಸಾಯುವುದು ಹೇಡಿತನ. ಆತ್ಮಶಕ್ತಿಯನ್ನೆಲ್ಲಾ ಒಗ್ಗೂಡಿಸಿಕೊಂಡಳು ಆಕೆ.
ಅಷ್ಟರಲ್ಲಿ ಹೊರಗಡೆ ಜೀಪ್ ಬಂದು ನಿಂತ ಸದ್ದಾಯಿತು. ಸ್ವಯಂವರಾಳಿಗೆ ಆಸೆ ಚಿಗುರಿತು. ಎದುರಿಗಿದ್ದ ವ್ಯಕ್ತಿಗೂ ಆ ಸದ್ದು ಕೇಳಿಸಿತು. "ಇನ್ನು ಸಮಯವಿಲ್ಲ ಸ್ವಯಂವರಾ.. See you soon.." ಆತ ತನ್ನ ಮನೋಸ್ಥಿಮಿತ ಕಳೆದುಕೊಂಡು ಪೂರ್ತಿಯಾಗಿ ಕಿಲ್ಲರ್ ಆಗಿದ್ದ. 
ಕ್ಷಾತ್ರ ಬರುವುದಕ್ಕೂ, ನರ್ಸ್ ಬರುವುದಕ್ಕೂ ಸರಿ ಹೋಯಿತು. ಆಕೆ ಸಂಕೋಚದಿಂದ ತಲೆ ತಗ್ಗಿಸಿ "ಐದು ನಿಮಿಷ ಹೊರಹೋಗಿ ಬಂದೆ" ಎಂದಳು. ಏನು ಹೇಳಬೇಕೋ ತೋಚದೆ ಒಳನಡೆದ ಕ್ಷಾತ್ರ. ಬಾಗಿಲು ತೆಗೆದು ಸ್ವಯಂವರಾ ಇರುವ ರೂಮಿನ ಕಡೆ ಆತುರಾತುರವಾಗಿ ಹೆಜ್ಜೆ ಹಾಕಿದ. ಆತನನ್ನೇ ಹಿಂಬಾಲಿಸಿದಳು ನರ್ಸ್.
ಎದುರಿಗಿದ್ದ ವ್ಯಕ್ತಿ ಕೈಯಲ್ಲಿದ್ದ ಸ್ಟೀಲ್ ಬ್ಲೇಡ್ ಮೇಲೆತ್ತಿ ಕಣ್ಣು ಮುಚ್ಚಿ ಅವಳ ದೇಹದೊಳಗಿಳಿಸಬೇಕು, ಅಷ್ಟರಲ್ಲಿ ಸ್ವಯಂವರಾ ಎಲ್ಲಿಲ್ಲದ ಶಕ್ತಿಯನ್ನು ತಂದುಕೊಂಡು ಪಕ್ಕದಲ್ಲಿದ್ದ ಚಾಕು ತೆಗೆದು ಕೂಗುತ್ತ ಅವನತ್ತ ಚಾಕು ಬೀಸಿದಳು.
ಅದೇ ಸಮಯಕ್ಕೆ ಸರಿಯಾಗಿ ರೂಮ್ ಒಳಗೆ ಕಾಲಿಟ್ಟಿದ್ದ ಕ್ಷಾತ್ರ, ಹಿಂದೆಯೇ ನರ್ಸ್. ನರ್ಸ್ ಒಳಗಿನ ದೃಶ್ಯ ನೋಡಿ ಕಿಟಾರನೆ ಕಿರುಚಿಕೊಂಡಳು.
ಕ್ಷಾತ್ರನಿಗೆ ಚಾಕು ಮಾತ್ರ ಕಾಣಿಸಿತ್ತು. ಯೋಚಿಸಲು ಸಮಯವಿಲ್ಲ. "What the hell" ಎನ್ನುತ್ತಾ ಒಂದು ಸಮ್ಮರ್ ಸ್ಟಾಲ್ ಹೊಡೆದು ಮಂಚದ ಬಳಿ ಹೋಗಿ ಚಾಕು ಇರುವ ಕೈಯನ್ನು ಗಬಕ್ಕನೆ ಹಿಡಿದ. ಕ್ಷಾತ್ರನ ಧ್ವನಿ ಕೇಳುತ್ತಲೇ ಆ ಕಡೆ ನುಗ್ಗಿ ಬಂದಿತ್ತು ಚಾಕು.ತನ್ನೆಡೆಗೆ ನುಗ್ಗಿ ಬರುತ್ತಿರುವ ಕೈಗಳಲ್ಲಿ ಅಷ್ಟೊಂದು ಶಕ್ತಿಯಿದೆ ಎಂದು ಕ್ಷಾತ್ರ ಎಣಿಸಿರಲಿಲ್ಲ. ಅದೇ ಆತ ಮಾಡಿದ ತಪ್ಪು. ಕ್ಷಾತ್ರನ ಎಡಪಕ್ಕೆಯಲ್ಲಿ ಒಳಗಿಳಿಯಿತು ಚಾಕು.
                                         ...............................ಮುಂದುವರೆಯುತ್ತದೆ...............................................
                                       https://www.facebook.com/katarnakkadamabri

No comments:

Post a Comment