Saturday, July 23, 2016

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 23

                                         ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 23

ಹತ್ತು ಘಂಟೆಯ ಸಮಯ. ಭಾಷಾ.. ಸನ್ನಿ ಚಡ್ಡಾನ ರೈಟ್ ಹ್ಯಾಂಡ್. ದೀನ್ ದಯಾಳು ಮಾನಸಿಕ ಆಸ್ಪತ್ರೆಯ ಎದುರು ನಾಲ್ಕು ಜನ ಸಹಚರರ ಜೊತೆ ನಿಂತಿದ್ದ. ಆಸ್ಪತ್ರೆಯ ಗೇಟಿನಲ್ಲಿ ಇಬ್ಬರು ಗಾರ್ಡ್ ಗಳು ನಿಂತಿದ್ದರು. ಕೊಲೆಯಾದಂದಿನಿಂದ ಆಸ್ಪತ್ರೆಯಲ್ಲೂ ಸೆಕ್ಯೂರಿಟಿ ಹೆಚ್ಚಾಗಿದೆ. ಇಬ್ಬರೂ ಗಾರ್ಡ್ ಗಳು ಯಾವುದೋ ಪೋಲಿ ಸಂಭಾಷಣೆಯಲ್ಲಿ ನಿರತವಾದಂತಿತ್ತು. ಒಬ್ಬನ ಕೈಯಲ್ಲಿ ಲೋಡೆಡ್ AK-47 ತೂಗಾಡುತ್ತಿತ್ತು. ಭಾಷಾ ಯೋಚಿಸುತ್ತಿದ್ದ. ಒಳಗೆ ಹೋಗಿ ವಿಚಾರಿಸುವುದಾ?? ಅಥವಾ ಡಾಕ್ಟರನ್ನು ಹೊರಗೆ ತಗಲು ಹಾಕಿಕೊಳ್ಳುವುದಾ?? ಆಸ್ಪತ್ರೆಯಲ್ಲಿ ಸ್ವಲ್ಪ ಗಲಾಟೆಯಾದರೂ ಕತ್ತು ಹಿಡಿದು ಹೊರಗೆ ಹಾಕಬಲ್ಲರು. ಈ ಸಮಯದಲ್ಲಿ ಪೊಲೀಸರಿಂದ ಆದಷ್ಟು ದೂರವಿರುವುದೇ ಒಳ್ಳೆಯದು ಎಂದುಕೊಂಡ. 
ಭಾಷಾ ಒಬ್ಬ ಹುಡುಗನನ್ನು ಕರೆದು ನೀನು ಒಬ್ಬನೇ ಒಳಹೋಗಿ ಡಾಕ್ಟರ್ ಬಗ್ಗೆ ವಿಚಾರಿಸು ಎಂದ. ಅವನು "ಅಣ್ಣಾ.." ಎಂದು ತಲೆ ಕೆರೆದುಕೊಂಡು ಅಲ್ಲಿಯೇ ನಿಂತುಕೊಂಡ. 
"ಯಾರನ್ನಾದರೂ ಹೊಡಿ ಅನ್ನು.. ಕೈ ಕಾಲು ತೆಗೆ ಅನ್ನು... ಮಾಡುತ್ತೇನೆ. ಈ ವಿಚಾರಿಸುವುದೆಲ್ಲ ನನಗೆ ಗೊತ್ತಾಗಲ್ಲ ಅಣ್ಣಾ..." ನಿಜವನ್ನೇ ಹೇಳಿದಂತಿತ್ತು ಆತ.
ಇವರನ್ನು ಕಳಿಸಿ ಒಂದಕ್ಕೆ ಇನ್ನೊಂದು ಮಾಡುವುದಕ್ಕಿಂತ ತಾನೇ ಹೋಗುವುದು ಒಳ್ಳೆಯದು ಎಂದು ಗೇಟಿನ ಕಡೆ ನಡೆದ ಭಾಷಾ. 
ತಮ್ಮ ಎದುರು ಪ್ರತ್ಯಕ್ಷವಾದ ಅಜಾನುಬಾಹು ವ್ಯಕ್ತಿಯನ್ನು ಕಾಲಿನಿಂದ ತಲೆಯವರೆಗೆ ನೋಡಿ ಏನು ಎನ್ನುವಂತೆ ಮುಖ ಮಾಡಿದರು ಗಾರ್ಡ್. 
"ಡಾಕ್ಟರ್ ನೋಡಬೇಕಾಗಿತ್ತು. ನನ್ನ ತಮ್ಮನಿಗೆ ಹುಚ್ಚು ಹೆಚ್ಚಾಗಿದೆ. ಇಲ್ಲಿ ಸೇರಿಸಬೇಕಾಗಿತ್ತು.." ಜಾಸ್ತಿಯೇ ತಲೆ ಓಡಿಸಿದ ಭಾಷಾ. 
"ದೊಡ್ಡ ಡಾಕ್ಟರ್ ಇಲ್ಲಾ. ರಜೆಯ ಮೇಲಿದ್ದಾರೆ. ರಿಸೆಪ್ಷನ್ ಗೆ ಹೋಗಿ ಅಲ್ಲಿ ವಿಚಾರಿಸು.." ಸೆಕ್ಯೂರಿಟಿ ಚೆಕ್ ಮಾಡಿ ಒಳ ಹೋಗುವಂತೆ ಸೂಚಿಸಿದ. ತನ್ನ ಜೊತೆಯಿರುವ ಸಲಕರಣೆಗಳನ್ನೆಲ್ಲ ಮುಂಜಾಗ್ರತಾ ಕ್ರಮವಾಗಿ ಜೀಪಿನಲ್ಲೇ ತೆಗೆದಿಟ್ಟು ಬಂದಿದ್ದ ಭಾಷಾ. ಒಬ್ಬಿಬ್ಬರನ್ನು ಕೊಲ್ಲಲು ಆಯುಧಗಳೇ ಬೇಕಿಲ್ಲ ಆತನಿಗೆ. ಕೈಯಲ್ಲೇ ಗುದ್ದಿ ಕೊಂದು ಬಿಡಬಲ್ಲ. ಅದೇ ಧೈರ್ಯದ ಮೇಲೆ ಒಳನಡೆದ ಭಾಷಾ. 
ಆಸ್ಪತ್ರೆಯ ವರಾಂಡದಲ್ಲಿ ಅಲ್ಲಲ್ಲಿ ರೋಗಿಗಳು, ಅವರ ಜೊತೆ ನರ್ಸ್ ಗಳು ಓಡಾಡಿಕೊಂಡಿದ್ದರು. ಪ್ರತಿಯೊಬ್ಬರದು ಒಂದೊಂದು ರೀತಿಯ ರಿವಾಜುಗಳು. ಅದರ ಬಗ್ಗೆ ಏನು ಗಮನ ಹರಿಸದೆ ರಿಸೆಪ್ಷನ್ ಗೆ ಬಂದು ನಿಂತು ದರ್ಪದಿಂದ "ಯಾರ್ರೀ, ಮ್ಯಾನೇಜರ್ ಇಲ್ಲಿ?? ಡ್ಯೂಟಿ ಮೇಲೆ ಯಾರು ಡಾಕ್ಟರ್ ಇರೋದು ಬನ್ರೀ ಇಲ್ಲಿ.."
ಯಾವುದೋ ಯೋಚನೆಯಲ್ಲಿ ಕುಳಿತಿದ್ದ ರಿಸೆಪ್ಷನ್ ಹುಡುಗಿ ಒಮ್ಮೆಲೇ ತಡಬಡಿಸಿ ಎದ್ದು ನಿಂತಳು. ಎದುರು ನಿಂತಿದ್ದ ಅಜಾನುಬಾಹುವನ್ನು ಕಂಡೇ ಅವಳ ಅರ್ಧ ಜಂಗಾಬಲ ಉಡುಗಿ ಹೋಯಿತು. 
"ಎಲ್ಲಿ ಡಾಕ್ಟರ್??" ಎದುರಿದ್ದ ಕಾಲಿಂಗ್ ಬೆಲ್ ಬಾರಿಸಿ ಮತ್ತೆ ಕೇಳಿದ. 
"ಸಾರ್, ದೊಡ್ಡ ಡಾಕ್ಟರ್ ರಜೆಯ ಮೇಲಿದ್ದಾರೆ. ಉಳಿದವರು ನರ್ಸ್ ಗಳು. ಇಲ್ಲಿ ಯಾವುದೇ ಎಮರ್ಜೆನ್ಸಿ ಕೇಸ್ ಗಳು ಬರದ ಕಾರಣ ಬೇರೆ ಡಾಕ್ಟರ್ ಇಲ್ಲ. ಅವರ Substitution ಒಬ್ಬರಿದ್ದಾರೆ. ಅವರಿನ್ನೂ ಬಂದಿಲ್ಲ. ನೀವು??" ಹೆದರುತ್ತಲೇ ಹೇಳಿದಳಾಕೆ.
"ಹೊಸದಾಗಿ ಬಂದ ಪೊಲೀಸ್. ಮೊನ್ನೆ ನಡೆಯಿತಲ್ಲ ಕೊಲೆ ಅದರ ಬಗ್ಗೆ ವಿಚಾರಿಸಬೇಕಿದೆ. ನಿಮ್ಮ ಬಳಿ ಏನೇನು ವಿವರಗಳಿವೆ??"
ತಲೆ ಅಡ್ಡಡ್ಡ ಆಡಿಸಿದಳವಳು. "ಸಾರ್, ಅದೆಲ್ಲ ದೊಡ್ಡ ಡಾಕ್ಟರ್ ಚೇಂಬರ್ ಲಾಕರ್ ನಲ್ಲಿದೆ. ಕೀ ಅವರೇ ಇಟ್ಟುಕೊಂಡಿದ್ದಾರೆ."
ಸಿಟ್ಟಿನಿಂದ ತಲೆ ಕೊಡವಿದ ಭಾಷಾ. "ಹಾಗೆಂದರೆ ಹೇಗ್ರಿ?? ವಿವರಗಳಿಲ್ಲ ಎಂದರೆ ನಾವು ಮುಂದೆ ಹೇಗೆ ಇನ್ವೆಸ್ಟಿಗೇಷನ್ ಮಾಡಬೇಕು?? ಹೋಗಲಿ ಯಾವಾಗ ಬರುತ್ತಾರೆ ಅವರು??" ಗಡುಸಾದ ಧ್ವನಿಯು ಮುಂದುವರೆದಿತ್ತು. 
"ಎರಡು ದಿನದಲ್ಲಿ ಬರುತ್ತಾರೆ. ಅವರಿಗೆ ಸ್ವಲ್ಪ ಆರೋಗ್ಯ ಸರಿ ಇಲ್ಲ. ಆ ಕಾರಣದಿಂದ ಬಂದಿಲ್ಲ." ಧ್ವನಿಯಲ್ಲಿ ನಮ್ರತೆ ತುಂಬಿಕೊಂಡು ನುಡಿದಳು. 
ಡಾಕ್ಟರ್ ಇಲ್ಲ ಎಂದ ಮೇಲೆ ತಾನು ಏನು ಮಾಡಿದರು ಬಗೆಹರಿಯದ ಸಮಸ್ಯೆ ಇದು. ಎರಡು ದಿನಗಳಲ್ಲಿ ನಡೆಯುವುದೇನು ಇಲ್ಲ. ಮತ್ತೆರಡು ದಿನ ಬಿಟ್ಟೆ ಬರೋಣ ಎಂದು ಹೊರನಡೆದ ಭಾಷಾ.
*.....................................................*.........................................................*
ಜುಹು ಬೀಚಿನಲ್ಲಿ ಜನರ ಸಂತೆಯೇ ನೆರೆದಿತ್ತು. ಕಡಲೆ, ಸೌತೆಕಾಯಿ, ಅನಾನಸ್ ಹಣ್ಣುಗಳ ಮಾರಾಟ ಭರದಿಂದ ಸಾಗಿತ್ತು. ಜನರ ಗಿಜಿಗಿಜಿ ಒಂದೆಡೆಯಾದರೆ ಸಮುದ್ರರಾಜ ಇನ್ನೊಂದು ಕಡೆಯಿಂದ ತನ್ನ ಉಧ್ಘೋಷ ಮುಂದುವರೆಸಿದ್ದ. ಒಂದರ ಹಿಂದೆ ಒಂದು ಅಲೆಗಳು ಬಂದು ಒಂದಷ್ಟು ಮರಳಿನ ಕಣಗಳನ್ನು ದಡದತ್ತ ದುಡಿ, ಇನ್ನೊಂದಷ್ಟನ್ನು ತನ್ನ ಜೊತೆ ಸೆಳೆದೊಯ್ಯುತ್ತಿತ್ತು. 
ಕ್ಷಾತ್ರ ಮಾತಿಲ್ಲದೆ ಸುಮ್ಮನೆ, ಮೊಳಕಾಲು ನೀರಿನಲ್ಲಿ ಉದ್ದಕ್ಕೆ ನಡೆಯುತ್ತ ಸಾಗಿದ್ದ. ಸ್ವಯಂವರಾ ಕೂಡ ಅವನ ಪಕ್ಕದಲ್ಲಿಯೇ ಸಮವಾಗಿ ನಡೆಯುತ್ತಿದ್ದಳು. ಏನು ಮಾತನಾಡಬೇಕು?? ಎಂಬ ಸ್ಪಷ್ಟ ಕಲ್ಪನೆ ಇಬ್ಬರ ಮನಸ್ಸಿನಲ್ಲೂ ಇರದ ಕಾರಣ ಮೌನದ ಮುಸುಕು ಹಾಗೆಯೇ ಮುಂದುವರೆದಿತ್ತು. 
ಸ್ವಯಂವರಾಳಂತೂ ಕ್ಷಾತ್ರನ ಬಗ್ಗೆ ಯೋಚಿಸುತ್ತಲೇ ಇರಲಿಲ್ಲ. ಆಕೆಯ ಮನದಲ್ಲಿ ಶಾಸ್ತ್ರಿ ಕೊಲೆ ಮಾಡಿದ್ದಾನೆ ಎಂಬ ಕಲ್ಪನೆಯೇ ಸುಳ್ಳು ಎಂಬ ಭಾವವೇ ಸುಳಿದಾಡುತ್ತಿತ್ತು. 
ಅದರ ಬಗ್ಗೆಯೇ ಯೋಚಿಸುತ್ತ ಮುಂದೆ ಸಾಗುತ್ತಿದ್ದಳು. ಕ್ಷಾತ್ರನು ಕೂಡ ಶಾಸ್ತ್ರಿಯ ಮಾತುಗಳನ್ನು ನಂಬಿದ್ದ. ಶಾಸ್ತ್ರಿಯ ಮಾತುಗಳಲ್ಲಿ ಸತ್ಯವಿದೆ ಎಂದು ಅನ್ನಿಸಿದರೂ ಪ್ರತಾಪನನ್ನು ಹೇಗೆ ನಂಬಿಸುವುದು? ಹಾಗಾಗಿಯೇ ಸುಮ್ಮನೆ ಎದ್ದು ಬಂದಿದ್ದ. ತನ್ನ ಸಮಸ್ಯೆಯಿಂದ ಹೊರಬರಲು ಶಾಸ್ತ್ರಿಗೆ ಗೊತ್ತು ಎಂದು ಕ್ಷಾತ್ರನ ಮನಸ್ಸು ಕೂಗಿ ಹೇಳುತ್ತಿತ್ತು. 
ಮುಸ್ಸಂಜೆಯ ಸೂರ್ಯ ಅದಾಗಲೇ ಆಕಾಶಕ್ಕೆ ಕೆಂಪಿನ ಓಕುಳಿ ಚೆಲ್ಲಿ ಅದರ ನಡುವೆ ನಾಟ್ಯವಾಡುತ್ತಿದ್ದ. ನಡೆಯುತ್ತ ನಡೆಯುತ್ತ ಅದೆಷ್ಟು ದೂರ ಬಂದರೋ ಜನರ ಗಲಾಟೆ ಕಡಿಮೆಯಾಗಿತ್ತು.
ದಡದುದ್ದಕ್ಕೂ ಗಾಳಿ ಮರಗಳು ಸಾಲಾಗಿ ನೆಡಲ್ಪಟ್ಟಿದ್ದವು. ಗಾಳಿಗೆ ಸದ್ದು ಮಾಡುತ್ತ ಕೊಳಲಿನ ನಾದದಂತಹ ಉನ್ಮಾದ ಹುಟ್ಟಿಸುವ ಸಿಳ್ಳು ಹಾಕುತ್ತ ತಲೆಹಾಕಿದ್ದವು ಗಾಳಿ ಮರಗಳು.
ನೀರನ್ನು ಬಿಟ್ಟು ತೀರದೆಡೆಗೆ ನಡೆದಳು ಸ್ವಯಂವರಾ. ನಡೆದು ನಡೆದು ಸುಸ್ತಾಗಿತ್ತವಳಿಗೆ. 
ಅವಳು ತೀರದ ಕಡೆ ಹೋಗಿದ್ದನ್ನು ನೋಡಿ ಕ್ಷಾತ್ರನೂ ಅವಳ ಹಿಂದೆಯೇ ನಡೆದ. 
"ಸ್ವಲ್ಪ ಹೊತ್ತು ಕುಳಿತು ವಾಪಸ್ ಹೊರಡೋಣ.. ಇನ್ನೇನು ಕತ್ತಲಾಗುತ್ತದೆ.." 
"ಕತ್ತಲಾದರೆ ಭಯವಾ?? ನೀನು ಪೊಲೀಸ್ ನೊಡನೆ ಇದ್ದಿಯಾ ಸ್ವಯಂವರಾ.." ನಕ್ಕ ಕ್ಷಾತ್ರ.
"ಮಾತು ಮಾತಿಗೆ ಪೊಲೀಸ್ ಎನ್ನುತ್ತೀಯಾ ಕ್ಷಾತ್ರ.. ಸ್ವಲ್ಪ ಹೊತ್ತು ನಿನ್ನ ಪೊಲೀಸ್ ಬಟ್ಟೆ, ಪೊಲೀಸ್ ಬುದ್ಧಿಯಿಂದ ಹೊರಗೆ ಬಂದು ಜಗತ್ತನ್ನು ನೋಡು. ಪೊಲೀಸರು ಕೂಡ ಸೀಮಿತವಾದ ಪರಿಧಿಯನ್ನು ಹೊಂದಿದ್ದಾರೆ ಕ್ಷಾತ್ರ. ನಾಲ್ಕು ಜನ ಬಂದು ನಮ್ಮಿಬ್ಬರನ್ನು ಮುತ್ತಿದರೆ ನೀನೇನು ಮಾಡುತ್ತೀಯಾ?? ಪೊಲೀಸ್ ಎಂದು ನಾಲ್ಕು ಜನರಿಗೂ ಗುಂಡು ಹಾರಿಸುತಿಯಾ? ಅಥವಾ ಹೊಡೆದಾಡಿ ಮೈ ಕೈ ನುಗ್ಗು ಮಾಡಿಕೊಳ್ಳುತ್ತೀಯಾ?? ಕೆಲವೊಂದು ಸಮಯ ಸಂದರ್ಭಗಳು ಪೊಲೀಸರನ್ನು ಕೂಡ ಘಾಸಿ ಮಾಡುತ್ತವೆ. ಗೊತ್ತು ಗುರಿ ಇರದ ಜಾಗದಲ್ಲಿ ನಾವು ಯಾರಾದರೇನು ಸರಿಯಾಗಿದ್ದರೆ ನಡೆಯುವ ಅವಘಡಗಳು ತಪ್ಪುತ್ತವೆ. ಅಲ್ಲವಾ!!?" ಮಾತನಾಡುತ್ತಲೇ ಹೋದಳು ಸ್ವಯಂವರಾ. ಅಯ್ಯೋ.. ತಾನೇನು ಜೋಕ್ ಗೆ ಹೇಳಿದರೆ ಇವಳೇಕೆ ಹೀಗೆ ಸಿಡಿಯುತ್ತಿದ್ದಾಳೆ ಎಂದು ಅರ್ಥವಾಗಲಿಲ್ಲ ಕ್ಷಾತ್ರನಿಗೆ. ತಾನು ಜಾಸ್ತಿಯೇ ಮಾತನಾಡಿದೆನೇನೋ ಎಂದು ಮತ್ತೆ ಸುಮ್ಮನೆ ಕುಳಿತಳು ಸ್ವಯಂವರಾ.
ಒಂದೆರಡು ನಿಮಿಷದ ನಂತರ ಕ್ಷಾತ್ರನೇ ಮಾತನಾಡಿದ. "ಸ್ವಯಂವರಾ ನೀನು ನನ್ನ ಮನೆಯಲ್ಲಿದ್ದಾಗ ನಾನು ನಿನ್ನ ಮನೆಗೆ ಹೋಗಿದ್ದೆ. ಕದ್ದು ಡೈರಿ ಓದುವುದು ಕೆಟ್ಟದ್ದು ಎಂದು ತಿಳಿದಿದ್ದರೂ ನಿನ್ನ ಡೈರಿ ಓದಿದೆ. ನಿನ್ನವರೆಂದು ನಿನಗೆ ಯಾರು ಇಲ್ಲ ಎಂದು ತಿಳಿಯಿತು."
"ಹಂ.." ಎನ್ನುತ್ತಾ ಒಂದು ನಿಡಿದಾದ ಉಸಿರು ಬಿಟ್ಟಳು ಕುಳಿತಲ್ಲಿಯೇ. 
ಮತ್ತೆ ಮೌನ. 
ಏನು ಮಾತನಾಡಬೇಕು?? ನಾನಿವಳನ್ನು ಹೀಗೆ ಇಲ್ಲಿಗೆ ಕರೆದುಕೊಂಡು ಬಂದಿದ್ದೆ ತಪ್ಪು ಎನ್ನಿಸಿತು ಕ್ಷಾತ್ರನಿಗೆ. 
ಸ್ವಯಂವರಾಳ ಮುಖ ನೋಡಿದ. ಮುಳುಗಲು ಸಿದ್ಧನಾದ ಕೆಂಪು ಸೂರ್ಯನನ್ನೇ ತದೇಕಚಿತ್ತಳಾಗಿ ನೋಡುತ್ತಾ ಕುಳಿತಿದ್ದಳು. ಮುಖ ಸ್ವಲ್ಪ ಕಂದಿದ್ದರೂ ಸೌಂದರ್ಯ ಕುಗ್ಗಿಲ್ಲ. ಕೆನ್ನೆಗೆ ತೆಳುವಾಗಿ ಹಚ್ಚಿದ ರೋಸ್, ಕಮಾನಿನಂತಹ ಅವಳ ಹುಬ್ಬುಗಳು, ಅದರ ಮಧ್ಯದಲ್ಲಿ ಪುಟ್ಟದಾದ ಬಿಂದಿ, ಅತ್ತ ಇತ್ತ ಸರಿಯದೆ ಅಚಲವಾಗಿ ಸೂರ್ಯನನ್ನೆ ನೋಡುತ್ತಿದ್ದ ಅವಳ ಕಪ್ಪು ಕಣ್ಣುಗಳು. ಶ್ವೇತ ವರ್ಣದ ಚೂಡಿದಾರಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಳು. 
ಕೆಲವೊಬ್ಬ ಹುಡುಗಿಯರು ಮಾತ್ರ ಹೀಗೆ ಮನಸ್ಸಿಗೆ ಹತ್ತಿರವಾಗುವಷ್ಟು ಸುಂದರವಾಗಿರಲು ಕಾರಣವೇನು?? ಎಂದುಕೊಂಡ ಕ್ಷಾತ್ರ. ಅವನ ಯೋಚನೆ ಆತನಿಗೆ ನಗು ತರಿಸಿತು. ಎಲ್ಲ ಹುಡುಗಿಯರು ಇಷ್ಟು ಹತ್ತಿರ ಕುಳಿತು ನೋಡಲು ಬಿಡುವುದಿಲ್ಲವೇನೋ!! ಅದಕ್ಕೆ. 
ಸ್ವಯಂವರಾಳ ಹತ್ತಿರ ಸರಿದು, ಮರಳಿನಲ್ಲಿ ರಂಗೋಲಿಯಾಡುತ್ತಿದ್ದ ಅವಳ ಕೈ ಬೆರಳುಗಳನ್ನು ಹಿಡಿದುಕೊಂಡು ಆಟವಾಡತೊಡಗಿದ ಕ್ಷಾತ್ರ. 
ತನ್ನ ಯೋಚನೆಯಿಂದ ಹೊರಬಂದು ಕ್ಷಾತ್ರನ ಮುಖ ನೋಡಿದಳು ಸ್ವಯಂವರಾ. ಆತನ ಭಾವ ಅರ್ಥವಾಗದೆ ಏನು ಇರಲಿಲ್ಲ ಆಕೆಗೆ. ಆದರೆ ಆತನ ಭಾವನೆಗಳಿಗೆ ಸ್ಪಂದಿಸಲು ಆಕೆಯ ಮನಸ್ಸು ಸಹಕರಿಸುತ್ತಿಲ್ಲ. 
"ಸ್ವಯಂವರಾ, ದಿಢೀರ್ ಹೀಗೆ ಹೇಳುತ್ತಿದ್ದೇನೆ ಎಂದುಕೊಳ್ಳಬೇಡ. ನನಗೀಗ ಮೂವತ್ತು. ಪ್ರೀತಿ ಪ್ರೇಮದಲ್ಲಿ ಬಿದ್ದು, ಪ್ರೇಮ ಪತ್ರ ಬರೆದು, ಪ್ರೀತಿ ನಿವೇದನೆ ಮಾಡಿ, ಕನಸಿನಲ್ಲಿ ಕನವರಿಸುವ ವರ್ಷಗಳು ಕಳೆದು ಹೋಗಿವೆ. ಹಾಗಾಗಿ ನಾನೀಗ ನಿನ್ನಲ್ಲಿ ಕೇಳುತ್ತಿರುವುದು ಪ್ರೇಮ ನಿವೇದನೆಯಂತೂ ಅಲ್ಲ. ನೀ ನನ್ನ ಜೀವನ ಸಂಗಾತಿಯಾಗಿ ಬಂದರೆ ಬಹಳ ಖುಷಿ ಪಡುತ್ತೇನೆ. ನನ್ನ ಬೆನ್ನಿಗೂ ಯಾರು ಇಲ್ಲ, ನಿನ್ನ ಬೆನ್ನಿಗೂ ಯಾರು ಇಲ್ಲ. ಒಮ್ಮತಿ, ಸಮ್ಮತಿಗಳು ಬೇಕಾಗಿರುವುದು ನಮ್ಮಿಬ್ಬರ ನಡುವಿನಲ್ಲಿ ಮಾತ್ರ. ನನ್ನ ಮನಸ್ಸನ್ನು ಈಗಾಗಲೇ ನಿನಗೆ ಕೊಟ್ಟಿದ್ದೇನೆ. ಅದು ನಿನಗೂ ಗೊತ್ತು. ಮನಸ್ಸುಗಳನ್ನು ಓದಬಲ್ಲ ಚತುರೆ ನೀನು. ನಾನು ಹಾಗಲ್ಲ. ನಿನ್ನ ಮನಸ್ಸನ್ನು ಭಾವಗಳನ್ನು ಓದಲಾರೆ. ನಿನ್ನ ನಿರ್ಧಾರ ತಿಳಿಸಿದರೆ..." ಎಂದು ಆಕೆಯ ಮುಖ ನೋಡುತ್ತಾ ಕುಳಿತ. 
ಸ್ವಯಂವರಾಳಿಗೆ ಇದೇನು ಹೊಸ ವಿಷಯದಂತೆ ಅನ್ನಿಸಲಿಲ್ಲ. ಕ್ಷಾತ್ರನ ಭಾವಗಳನ್ನು ಅರಿತು ಅದೆಷ್ಟೋ ಸಮಯವಾಗಿತ್ತು. ಈಗ ಕ್ಷಾತ್ರನೇ ಬಾಯಿ ಬಿಟ್ಟು ಕೇಳುತ್ತಿದ್ದಾನೆ. ಕ್ಷಾತ್ರನಂಥವನು ಜೊತೆಯಾಗಿ ನಿಂತರೆ ಅವಳ ಜೀವನದಲ್ಲಿ ಯಾವುದಕ್ಕೂ ಕೊರತೆ ಬಾರದು ಎಂಬುದಂತೂ ನಿಜ. ಹಾಗಿದ್ದೂ ಕ್ಷಾತ್ರ ಮದುವೆಯ ಪ್ರಪೋಸಲ್ ಮುಂದಿಟ್ಟರೂ ಆಕೆಯ ಮನ ಹಿಗ್ಗುತ್ತಿಲ್ಲ. ಹಾಗೆಂದು ಬೇಸರವೂ ಇಲ್ಲ. "ಕೊನೆಯವರೆಗೂ ನೀ ನನ್ನ ಗೆಳೆಯನಾಗಿರು. ನಾನಿನ್ನ ಒಬ್ಬ ಸ್ನೇಹಿತನಾಗಿ ಇಷ್ಟ ಪಡುತ್ತೇನೆಯೇ ಹೊರತು ಇನಿಯನಾಗಿ ಅಲ್ಲ" ಎಂಬ ಟಿಪಿಕಲ್ ಸೆಂಟಿಮೆಂಟ್ ಡೈಲಾಗ್ ಹೇಳಬೇಕು ಎಂದು ಅವಳಿಗೆ ಅನ್ನಿಸಲಿಲ್ಲ. 
"ಕ್ಷಾತ್ರ, ನನಗೆ ಸ್ವಲ್ಪ ಸಮಯ ಕೊಡು. ಕೆಲವು ದಿನಗಳಿಂದ ನನ್ನ ಮನಸ್ಸೇಕೋ ಸರಿ ಇಲ್ಲ. ಅದು ನಿನಗೂ ತಿಳಿದಿದೆ. ಹಾಗಾಗಿ ದಿಢೀರ್ ನಿರ್ಧಾರ ತೆಗೆದುಕೊಳ್ಳಲು ಮನಸ್ಸಿಗೆ ಕಷ್ಟ.. " ಎಂದಳು. 
ಇನ್ನೇನು ಬಯ್ಯುತ್ತಾಳೋ ಎಂದುಕೊಂಡಿದ್ದ ಕ್ಷಾತ್ರನಿಗೆ ಅವಳ ಉತ್ತರ ಸಮಂಜಸವಾಗೇ ಕಂಡಿತು. ಅಂದರೆ ತಾನು ಬೇಡವೆಂದೇನೂ ಇಲ್ಲ ಈಕೆಗೆ. ಸ್ವಲ್ಪ ದಿನ ವೇಟ್ ಮಾಡಿದರಾಯಿತು. ಪೊಲೀಸರು ಯಾರಿಗೆ ಹೆದರುತ್ತಾರೋ, ಬಿಡುತ್ತಾರೋ ಪ್ರೀತಿಸಿಕೊಂಡ ಹುಡುಗಿಯರೆದುರು ಮಾತ್ರ ಎಲ್ಲರೂ ಒಂದೇ. ಮುಗುಳ್ನಗು ಮೂಡಿತು ಕ್ಷಾತ್ರನ ಮನದಲ್ಲಿ. ಆತನ ಯೋಚನೆ ಓದಿದವಳಂತೆ ತಾನೂ ಮುಗುಳ್ನಕ್ಕು ಕ್ಷಾತ್ರನ ಭುಜಕ್ಕೆ ಒರಗಿದಳು ಸ್ವಯಂವರಾ. 
ಕತ್ತಲು ಅವರಿಬ್ಬರನ್ನು ತನ್ನ ಮಾಯೆಯಲ್ಲಿ ಮರೆ ಮಾಡಿತು. ಸಮುದ್ರದ ಉದ್ಘೋಷ ಮುಂದುವರೆದೇ ಇತ್ತು.
*.....................................................*.........................................................*
ತಾಜ್ ಪ್ಯಾಲೇಸ್ ಒಳಗೆ ಬರುತ್ತಲೇ ಗರುಡ ತನಗಾಗಿ ರೆಡಿಯಾಗಿದ್ದ ರೂಮ್ ಗೆ ಚೆಕ್ ಇನ್ ಮಾಡಿದ. ಎಂಥದೇ ಇಂಟಲಿಜೆನ್ಸ್ ವಿಂಗ್ ನವರು ಅವನ ಹಿಂದೆ ಬಿದ್ದಿದ್ದರೂ ಇನ್ನೆರಡು ಘಂಟೆಯಾದರೂ ಬೇಕು ಅವನ ಸುತ್ತ ಬಲೆ ನೇಯಲು. ಅದು ಅಲ್ಲದೆ ಈ ಹೋಟೆಲ್ ನ ಫೋನ್ ಲೈನ್ ಗಳೆಲ್ಲ ಸೆಕ್ಯೂರ್ ಲೈನ್ ಗಳು. ಅಷ್ಟು ಬೇಗ ಟ್ಯಾಪ್ ಕೂಡ ಮಾಡಲು ಸಾಧ್ಯವಿಲ್ಲ. ಎರಡು ಘಂಟೆಗಳಲ್ಲಿ ಮುಂದೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕು. ಅದಲ್ಲದೆ ತಾನು ಬಹಳ ಜಾಗರೂಕನಾಗಿಯೂ ಇರಬೇಕು. ಇನ್ನೆರಡು ಘಂಟೆಗಳಲ್ಲಿ ಇಲ್ಲಿಂದ ಹೊರಬಿದ್ದು ಬಿಟ್ಟರೆ?? ಯೋಚಿಸುತ್ತಲೇ ಇತ್ತು ಆತನ ಸುಪ್ತ ಮನಸ್ಸು.
ಈಗಾಗಲೇ ಹೊರಗೆ ಒಂದೆರಡು ಜನರಂತೂ ಅವನನ್ನು ವಾಚ್ ಮಾಡಲು ನಿಂತಿರುತ್ತಾರೆ. ಹೋಟೆಲ್ ಒಳಗೆ ಕೂಡ ವ್ಯವಸ್ಥೆ ಮಾಡಲು ಇನ್ನೆರಡು ತಾಸು ಬೇಕು. ಅಷ್ಟರಲ್ಲಿ ಇವರ ಕಣ್ಣಿಗೆ ಮಣ್ಣೆರಚಿ ಹೋಗಬೇಕು. ಯೋಚನೆ ಬಂದಿದ್ದೆ ಪಟಪಟನೆ ನಾಲ್ಕು ಫೋನ್ ಮಾಡಿದ. ಒಂದೊಂದು ಫೋನ್ ಬಹಳ ಮಹತ್ವವಾದದ್ದು. ಎರಡು ವಾಕ್ಯಗಳಿಗಿಂತ ಹೆಚ್ಚು ಮಾತನಾಡಲಿಲ್ಲ ಗರುಡ. ಆ ಕಡೆಯವರು ಕೇಳಲಿಲ್ಲ. ಮಾತನಾಡಿದ ಕೆಲಸಗಳು ಮಾತ್ರ ಚಾಚು ತಪ್ಪದೆ ಆಗಿ ಹೋಗುತ್ತವೆ. 
ಒಮ್ಮೆ ಸಮಾಧಾನದ ನಿಟ್ಟುಸಿರು ಬಿಟ್ಟು ಬಾತ್ ರೂಮ್ ಸೇರಿಕೊಂಡ. ಬೆಚ್ಚನೆಯ ಸ್ನಾನ ಮಾಡಬೇಕೆನ್ನಿಸಿತು ಗರುಡನಿಗೆ. ಹೊರಗಡೆ ಸೆಖೆಯಿದ್ದರೂ ಉರಿಯುತ್ತಿರುವ ಏ.ಸಿಗಳು ರೂಮಿನಲ್ಲಿ ತಣ್ಣನೆಯ ವಾತಾವರಣ ಮೂಡಿಸಿದ್ದವು. 
ಷವರ್ ಆನ್ ಮಾಡಿ, ಬಾತ್ ಟಬ್ ನಲ್ಲೂ ನೀರು ಬಿಟ್ಟು ನೀರಿನೊಳಗೆ ಸೇರಿಕೊಂಡ ಗರುಡ. ಮನಸ್ಸಿಗೆ ಅದೆಷ್ಟೋ ಹಿತ ಸಿಕ್ಕಂತಾಯಿತು. ಪ್ರಿಯಂವದಾ ರಾಜ್ ತನ್ನ ಗುರಿಯಿಂದ ತಪ್ಪಿಸಿಕೊಂಡ ದಿನದಿಂದ ಆತನಿಗೆ ಸಮಾಧಾನವಿರಲಿಲ್ಲ. ಹೀಗೆ ಬೇಟೆ ತಪ್ಪಿಸಿಕೊಂಡದ್ದು ಇದೆ ಮೊದಲು. ಬೇಟೆ ತಪ್ಪಿದ್ದಷ್ಟೇ ಅಲ್ಲದೆ ತನ್ನ ಹಿಂದೆ ಬಲೆ ಬೀಸಿದ್ದಾರೆ. ಸ್ವಲ್ಪ ಯಾಮಾರಿದರೂ ಫಿನಿಶ್.. ನೋ ಮೋರ್ ಎಸ್ಕೇಪ್... ಒಮ್ಮೆ ಸಿಕ್ಕಿ ಬಿದ್ದರೆ ಮುಗಿಯಿತು ಇಲ್ಲಸಲ್ಲದ ಅಸಾಸಿನ್ ಕೇಸ್ ಗಳು ಅವನನ್ನು ಹುಡುಕಿಕೊಂಡು ಬರುತ್ತವೆ. ಇಂಟರ್ ಪೋಲ್ ಬೆನ್ನು ಬಿದ್ದರೂ ಬಿದ್ದೀತು. ನೋ... ಹಾಗಾಗಕೂಡದು.. ಪಾರಾಗಬೇಕು... ಪ್ರಿಯಂವದಾ ರಾಜಳನ್ನು ಬಲಿ ಹಾಕಿ ಪಾರಾಗಬೇಕು. ಬಾತ್ ಟಬ್ ನಲ್ಲಿ ಹಬೆಯಾಡುತ್ತಿದ್ದ ನೀರಿನಲ್ಲಿ ಒಮ್ಮೆ ಪೂರ್ತಿಯಾಗಿ ಮುಳುಗಿ ಮೇಲೆದ್ದ ಗರುಡ. 
ಮೈ ಒರೆಸಿಕೊಳ್ಳುತ್ತ ತನ್ನ ಕೆಚ್ಚಾದ ದೇಹ ತಾನೇ ನೋಡಿಕೊಂಡ. ಎಡಭುಜದಲ್ಲೊಂದು ಹೊಲಿಗೆ. ಹೊಟ್ಟೆಯ ಮೇಲೊಂದು ಮಾಸದ ಗಾಯದ ಗುರುತು. ಗತಕಾಲದಲ್ಲಿ ಚೆಲ್ಲಿದ ರಕ್ತದ ನೆನಪಾಯಿತು. ಎರಡೇ ಕ್ಷಣ ತಲೆ ಕೊಡವಿ ವರ್ತಮಾನಕ್ಕೆ ಬಂದುಬಿಟ್ಟ. 
ಮುಂದಿನ ಅರ್ಧ ಘಂಟೆ ಕನ್ನಡಿಯ ಮುಂದೆ ತನ್ನ ಹಾವಭಾವಗಳನ್ನು ಬದಲಿಸುತ್ತಲೇ ಇದ್ದ. 
ಸ್ವಲ್ಪ ಸಮಯದ ಬಳಿಕ ಕನ್ನಡಿಯಲ್ಲಿ ಕಂಡದ್ದು ಪಂಜಾಬಿ ಸಿಖ್.. 
ಗರುಡನಿಗೂ ಅವನಿಗೂ ಎಳ್ಳಷ್ಟೂ ಹೋಲಿಕೆಯಿಲ್ಲ. ಗರುಡನೇ ಗುರುತಿಸದಂತಾದ ಸಿಖ್ ನನ್ನ ನೋಡಿ ಗರುಡನಿಗೆ ನಿರಾಳವಾಯಿತು. ಮತ್ತೊಮ್ಮೆ ನೋಡಿಕೊಂಡ. ತನ್ನ ವೇಷದಲ್ಲಿ ಯಾವುದೇ ಕೊರತೆ ಕಾಣದಿದ್ದಾಗ Lets play.. ಎಂದುಕೊಂಡು ಹೊರಬಿದ್ದ. ಹೋಟೆಲ್ ನಿಂದ ಹೊರಬಿದ್ದು ಎಡಗಣ್ಣಿನಿಂದಲೇ ಸುತ್ತಲೂ ಪರಿಶೀಲಿಸಿದ. 
ಅವನನ್ನು ಇಲ್ಲಿಗೆ ಕರೆದುಕೊಂಡು ಬಂದ ವ್ಯಕ್ತಿ ಕಾರನ್ನು ಅಲ್ಲಿಯೇ ನಿಲ್ಲಿಸಿಕೊಂಡು ಶತಪಥ ಹಾಕುತ್ತಿದ್ದ. ಯಾವ ಭಯವೂ ಇಲ್ಲದೆ ಆತನ ಬಳಿ ಹೋಗಿ "ಪಾಜಿ, ಇಂಡಿಯಾ ಗೇಟ್ ಜಾಣಾ ಹೇ.. "
ಅವನತ್ತಲೇ ದುರುಗುಟ್ಟಿ ನೋಡಿದ ಡ್ರೈವರ್ "I am waiting for somebody else.. ಕಿಸೀ ಔರ್ ಸೆ ಪೂಚೊ..." ಎಂದು ಮುಖ ತಿರುಗಿಸಿದ. 
"ಇಂಗ್ಲೀಷ್ ಮೇ ಬೋಲಾ.. ಹಾ.. ಹಾ.. " ಎನ್ನುತ್ತಾ ಮುಂದೆ ನಡೆದು ಮತ್ತೊಂದು ಟ್ಯಾಕ್ಸಿ ಕರೆದು ಇಂಡಿಯಾ ಗೇಟ್ ಎಂದು ಹತ್ತಿ ಕುಳಿತ. 
ಪಂಜಾಬಿ ಗಡ್ಡ, ಮೀಸೆಯಡಿಯಲ್ಲಿ ಆತ ನಕ್ಕ ನಗು ಯಾರಿಗೂ ಕಾಣಲೇ ಇಲ್ಲ. ಬಲೆಯಿಂದ ತಪ್ಪಿಸಿಕೊಂಡ ಗರುಡ ಈ ಬಾರಿ ತನ್ನೆಲ್ಲ ಶಕ್ತಿ ಯುಕ್ತಿಯೊಂದಿಗೆ ಬೇಟೆಯೆಡೆಗೆ ಅಪ್ಪಳಿಸುವ ಸಿದ್ಧತೆ ನಡೆಸಿತು...
ಇದು ಯಾವುದನ್ನು ಅರಿಯದೆ ಪ್ರಿಯಂವದಾ ರಾಜ್ ಹಾಸಿಗೆಯಲ್ಲಿ ಮಲಗೆ ಇದ್ದಳು. ಮತ್ತೊಮ್ಮೆ ಟಿಕ್.. ಟಿಕ್.. ಟಿಕ್...
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/

No comments:

Post a Comment